ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ಕುಮಾರ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಬಿಹಾರದ ನೂತನ ಸಿಎಂ ಆಗಿ ಬಿಜೆಪಿ ಅಭ್ಯರ್ಥಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ.
ನಿತೀಶ್‌ಕುಮಾರ್ ಅವರ ಸ್ಥಾನಕ್ಕೆ ಹಾಲಿ ಉಪ ಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿತ್ತು. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ್ ರಾಯ್ ಅವರ ಹೆಸರೂ ಚರ್ಚೆಯಲ್ಲಿತ್ತು. ಮಂಗಳವಾರ ಬಿಜೆಪಿ ಹಾಗೂ ಜೆಡಿಯು ಶಾಸಕಾಂಗ ಪಕ್ಷದ ಸಭೆ ನಡೆಸಿ ಅಂತಿಮವಾಗಿ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.
ಏಪ್ರಿಲ್ 15 ಕ್ಕೆ ಪ್ರಮಾಣ ವಚನ: ಬುಧವಾರ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
2017 ರಲ್ಲಿ ಬಿಜೆಪಿ ಸೇರಿದ್ದ ಚೌಧರಿ: 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಹೊಂದಿದ್ದರೆ, ಜೆಡಿಯು 85 ಸ್ಥಾನಗಳನ್ನು ಹೊಂದಿದೆ. ಸಾಮ್ರಾಟ್ ಚೌಧರಿ ಅವರು ನಿತೀಶ್‌ಕುಮಾರ್ ಅವರ ಮಾಜಿ ಆಪ್ತ ಶಕುನಿ ಚೌಧರಿ ಅವರ ಪುತ್ರ. 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಒಬಿಸಿಗೆ ಸೇರಿದ ಚೌಧರಿ ಅವರು ಪ್ರಸ್ತುತ ತಾರಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
2020 ರಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದಲ್ಲಿ ಪಂಚಾಯತ್ ರಾಜ್ ಖಾತೆ ಸಚಿವರಾಗಿದ್ದರು. ಮಾರ್ಚ್ 2023 ರಲ್ಲಿ, ಲೋಕಸಭೆ, ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಇವರನ್ನು ಬಿಹಾರ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿತ್ತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಸ್ಥಾನ ತಂದುಕೊಟ್ಟ ಹಿನ್ನೆಲೆಯಲ್ಲಿ ಸಾಮ್ರಾಟ್ ಚೌಧರಿ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿತ್ತು.
ನಿತೀಶ್ ಅಧಿಕಾರ ಅಂತ್ಯ: ಸುಮಾರು ಎರಡು ದಶಕಗಳ ಕಾಲ ಬಿಹಾರದ ಚುಕ್ಕಾಣಿ ಹಿಡಿದಿದ್ದ, ಬರೋಬ್ಬರಿ 10 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಜೆಡಿಯು ಹಿರಿಯ ನಾಯಕ ನಿತೀಶ್ ಕುಮಾರ್ ಅವರ ಅಧಿಕಾರ ಕೊನೆಯಾಗಿದೆ. ಮಂಗಳವಾರ ಮಧ್ಯಾಹ್ನ ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸಿದ ಬಳಿಕ, ಲೋಕಭವನದಲ್ಲಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೇನ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದದಾರೆ. ನಿತೀಶ್ ಕುಮಾರ್ ಕಳೆದ ವಾರವಷ್ಟೇ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.





