ರಂಗು ರಂಗಿನ ಶಬ್ಧ ಮತ್ತು ಬೆಳಕಿನ ಸಮ್ಮಿಳನದ ದೀಪಾವಳಿ ಹಬ್ಬ ಮುಗಿದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರನ್ನೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯಲ್ಲಿ ಪ್ರತೀವರ್ಷವೂ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನೆಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯೇನಲ್ಲ.

ಧನುರ್ಮಾಸದ ಇಬ್ಬನಿಯು ಅವರೇಕಾಯಿಯ ಮೇಲೆ ಬಿದ್ದು ಒಂದು ರೀತಿಯ ಅಪ್ಯಾಯಮಾನವಾದ ಅವರೇಕಾಯಿಯ ಸೊಗಡಿನ ಘಮಲನ್ನು ಹೇಳಿ ಕೇಳುವುದಕ್ಕಿಂತ ಅನುಭವಿಸಿದರೇ ಒಂದು ರೀತಿಯ ಮಹದಾನಂದ. ಮೊದಲೆಲ್ಲಾ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬಹುತೇಕ ಎಲ್ಲರ ಮನೆಗಳಲ್ಲಿಯ ಅಡುಗೆ ಮನೆಯಲ್ಲಿ ಬಳೆಸುವ ಒಂದು ಸಾಮಾನ್ಯ ಪದಾರ್ಥವೆಂದರೆ ಅವರೇಕಾಯಿ. ಅವರೇಕಾಯಿ ಉಪ್ಪಿಟ್ಟು, ಆವರೇಕಾಯಿ ಬಾತ್, ಅವರೇಕಾಯಿ ರೊಟ್ಟಿ, ಅವರೇ ಕಾಯಿ ಹುಳಿ, ಹಿತಕಿದ ಅವರೇಕಾಯಿ ಹುಳಿ, ಅವರೇಬೇಳೆ ಹುಗ್ಗಿ, ಅವರೇಕಾಯಿ ನುಚ್ಚಿನ ಉಂಡೆ, ಅವರೇಕಾಯಿ ಆಂಬೊಡೆ, ಖಾರದ ಅವರೆಕಾಳು ಹೀಗೆ ಅವರೇಕಾಯಿಂದ ಈ ರೀತಿಯಾದ ಕೆಲವೇ ಕೆಲವು ತಿಂಡಿಗಳು ತಯಾರಿಸಿ ಸವಿಯುತ್ತಿದ್ದದ್ದು ಸಹಜವಾಗಿರುತ್ತಿತ್ತು.

ಕಳೆದ ಎಂಟು ಹತ್ತು ವರ್ಷಗಳಲ್ಲಿ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯ ವಾಸವೀ ಕಾಂಡಿಮೆಂಟ್ಸ್ ಅವರು ನಿಜಕ್ಕೂ ಅವರೇಕಾಯಿಯಿಂದ ಊಹಿಸಲೂ ಅಸಾಧ್ಯವಾದ ಬಗೆ ಬಗೆಯಾದ ರುಚಿಕರವಾದ ತಿಂಡಿತಿನಿಸುಗಳನ್ನು ತಯಾರಿಸಿ ಅವರೇಕಾಯಿಯ ಮಹತ್ವವನ್ನು ಇನ್ನೂ ಹೆಚ್ಚಿಸಿದ್ದಾರೆ ಮತ್ತು ಅದನ್ನು ಪ್ರತೀ ವರ್ಷವೂ ಅದ್ದೂರಿಯಾಗಿ ಇನ್ನೂ ಬಗೆ ಬಗೆಯ ಹೊಸ ಹೊಸ ಅವರೇಕಾಯಿ ತಿನಿಸುಗಳನ್ನು ಆವಿಷ್ಕಾರ ಮಾಡುತ್ತಾ ಸಂಭ್ರಮದ ತಿನಿಸುಗಳ ಮೇಳ, ಜಾತ್ರೆಯನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ಅದರ ಪ್ರತೀಕವಾಗಿ ಪ್ರತೀ ತಿಂಗಳು 1ನೇ ತಾರೀಖಿನಿಂದ 8ನೇ ತಾರೀಖಿನವರೆಗೂ ವಿ.ವಿ.ಪುರಂ ಫುಡ್ ಸ್ತ್ರೀಟ್ನಲ್ಲಿ ಅವರೇಮೇಳ ನಡೆಯುತ್ತಿದೆ. ಕಳೆದ ವರ್ಷ ಸ್ಥಳೀಯ ನಗರಪಾಲಿಕೆಯ ಸದಸ್ಯರು ಶುಚಿತ್ವದ. ಆಕ್ಷೇಪ ತೆಗೆದು ಅವರೇಮೇಳವನ್ನು ತಡೆಯಲು ಸಮರ್ಥರಾದರೆ, ಈ ವರ್ಷ ಅವರ ಪಾಲನ್ನು ಕರೋನ ಮಹಾಮಾರಿ ನುಂಗಿಹಾಕಿದೆ.
ಎರಡು ವರ್ಷದ ಹಿಂದೆ ಮಡದಿಯೊಂದಿಗೆ ಈ ಅವರೇ ಮೇಳಕ್ಕೆ ಹೋಗಿ ಬಗೆ ಬಗೆಯ ಅವರೇ ಖಾದ್ಯಗಳನ್ನು ಸವಿದಿದ್ದ ರಸಾನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಆರಂಭದ ದಿನಗಳ ಜನಜಂಗುಳಿ ಕಡಿಮೆಯಾದ ಮೇಲೆ ಹೋಗೋಣ ಎಂದು ನಿರ್ಧರಿಸಿ ವಾರಾಂತ್ಯದ ಶನಿವಾರ ಮಧ್ಯಾಹ್ನ ಪತ್ನಿ ಸಮೇತನಾಗಿ ಅಲ್ಲಿಗೆ ಹೋದರೆ ಅಲ್ಲಿಯ ವಾತಾವರಣ ನಿಜಕ್ಕೂ ಅಚ್ಚರಿ ತರಿಸಿತು. ಬೆಂಗಳೂರಿನ ಜನರಿಗೆ ಶುಚಿರುಚಿಕರವಾದ ತಿಂಡಿತಿನಿಸುಗಳು ಎಲ್ಲಿಯೇ ಸಿಗಲಿ, ಅದು ಹೇಗೆಯೇ ಇರಲಿ, ಆರಂಭದ ದಿನದಿಂದ ಅಂತಿಮ ದಿನದ, ಅಂತಿಮ ಕ್ಷಣದವರೆಗೂ ಅದರ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿತ್ತು. ಇನ್ನೂ ಹಾಲು ಕುಡಿಯುತ್ತಿರುವ ಹಸುಗಲ್ಲದ ಮಗುವಿನಿಂದ ಹಿಡಿದು ವಯೋವೃಧ್ಧರವರೆಗೂ ಆಬಾಲವೃಧ್ಧರಾದಿಯಾಗಿ ಅಲ್ಲಿ ಸರತಿಯಲ್ಲಿ ನಿಂತು ಬಗೆ ಬಗೆ ತಿಂಡಿಯ ರುಚಿಯನ್ನು ಸವಿಯುವುದನ್ನು ನೋಡುವುದೇ ಒಂದು ಆನಂದ.





