– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ನಟ ಯುವ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಬೈರಪ್ಪ ನಡುವಿನ ವೈಯಕ್ತಿಕ ವಿವಾದ ಮತ್ತೆ ಚರ್ಚೆಗೆ ಬಂದಿದೆ. ವಿಚ್ಛೇದನ ವಿಚಾರ ನ್ಯಾಯಾಲಯದಲ್ಲಿರುವ ನಡುವೆ, ಶ್ರೀದೇವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಗಮನ ಸೆಳೆದಿದೆ.
ವಿಶೇಷವಾಗಿ, ಯುವ ರಾಜ್‌ಕುಮಾರ್ ಅವರ ಜನ್ಮದಿನದಂದೇ (ಏಪ್ರಿಲ್ 23) ಈ ಪೋಸ್ಟ್ ಹಂಚಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಯುವ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದನೆಯ ಸಂದೇಶವನ್ನು ಅವರು ಬರೆದಿದ್ದಾರೆ.
“ತಡವಾಗುವುದಕ್ಕೂ ಮೊದಲು ಮಹಿಳೆಯರೇ ನಿಮ್ಮ ಹಕ್ಕುಗಳ ಬಗ್ಗೆ ತಿಳಿಯಿರಿ” ಎಂದು ಆರಂಭಿಸಿರುವ ಶ್ರೀದೇವಿ, ಮಹಿಳೆಯರು ಕೇವಲ ಮದುವೆಗಾಗಿ ಮಾತ್ರ ಸಿದ್ಧಗೊಳ್ಳದೆ, ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೂಡ ಸಿದ್ಧರಾಗಬೇಕು ಎಂದು ಹೇಳಿದ್ದಾರೆ.
ಇನ್ನೂ, ದಾಂಪತ್ಯ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಕುರಿತು ಎರಡು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಸುಳ್ಳು ಆರೋಪಗಳು ಎದುರಾದಾಗ ತಾಳ್ಮೆಯಿಂದ ಇರಬೇಕು ಹಾಗೂ ಸತ್ಯಕ್ಕೆ ಪುರಾವೆಗಳೇ ಮುಖ್ಯ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಜೊತೆಗೆ, ಸೋಶಿಯಲ್ ಮೀಡಿಯಾ ವಿಷಯದಲ್ಲೂ ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
“ಪ್ರತಿಯೊಂದು ಗಾಯ ಗೋಚರಿಸುವುದಿಲ್ಲ, ಆದರೆ ಪ್ರತಿಯೊಂದು ಮೌನಕ್ಕೂ ಬೆಲೆ ಇದೆ” ಎಂದು ಅವರು ಹೇಳಿದ್ದು, ಮಹಿಳೆಯರ ಸುರಕ್ಷತೆ ಹಾಗೂ ಗೌರವದ ಕುರಿತು ಸಮಾಜದಲ್ಲಿ ಬದಲಾವಣೆ ಅಗತ್ಯವಿದೆ ಎಂಬ ಸಂದೇಶ ನೀಡಿದ್ದಾರೆ.
2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಕೆಲವೇ ವರ್ಷಗಳಲ್ಲಿ ದೂರವಾಗಲು ನಿರ್ಧರಿಸಿದ್ದು, ಇದೀಗ ಅವರ ನಡುವಿನ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.





