ಸ್ವಾತಿ ಮುತ್ತಿನಂಥ ಅಮೂಲ್ಯಾ ಗೌಡ
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮುದ್ದು ಮುಖದ ನಟಿ ಅಮೂಲ್ಯಾ ಗೌಡ. ಮೈಸೂರಿನಲ್ಲಿ ಹುಟ್ಟಿದ ಈಕೆ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದರು. ಅಮೂಲ್ಯಾ 2014ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ `ಸ್ವಾತಿ ಮುತ್ತು’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ನಂತರ `ಪುನವಿರ್ವಾಹ, ಅರಮನೆ’ ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು. ಮುಂದೆ `ಕಮಲಿ’ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದರು. ನಂತರ ತೆಲುಗು ಧಾರಾವಾಹಿಗಳಲ್ಲಿ ಬಿಝಿಯಾದರು. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಶ್ರೀಗೌರಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್-9ಕ್ಕೆ ಸ್ಪರ್ಧಿಯಾಗಿಯೂ ಭಾಗಹಿಸಿದ್ದರು.

ಮನೆಗೆ ಬಂದ ಮಹಾಲಕ್ಷ್ಮಿ ರಶ್ಮಿ ಪ್ರಭಾಕರ್
ಕಿರುತೆರೆ ಹಾಗೂ ಹಿರಿತೆರೆ ನಟಿ ರಶ್ಮಿ ಪ್ರಭಾಕರ್. ಕನ್ನಡ, ತಮಿಳು ಮತ್ತು ತೆಲುಗು ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಮೂಲತಃ ಹೊಸಕೋಟೆ ತಾಲ್ಲೂಕಿನ ಕೋಡಿ ಎಂಬ ಪುಟ್ಟ ಹಳ್ಳಿಯಲ್ಲಿ ಬೆಳೆದ ರಶ್ಮಿ ಕೃಷಿ ಕುಟುಂಬದಿಂದ ಬಂದರು. ಕ್ರೀಡೆ, ನೃತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಮೂಲಕ ಜನಪ್ರಿಯರಾದರು. `ಶುಭ ವಿವಾಹ’ ಧಾರಾವಾಹಿಯಲ್ಲಿ ನಾಯಕನ ಸಹೋದರಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಪ್ರವೇಶಿಸಿದರು. ನಂತರ ಪೌರಾಣಿಕ ಧಾರಾವಾಹಿ `ಮಹಾಭಾರತ’ದಲ್ಲಿ ಅವಕಾಶ ಪಡೆದರು. ಕನ್ನಡದ `ಜೀವನ ಚೈತ್ರ, ಲಕ್ಷ್ಮಿ ಬಾರಮ್ಮ, ಮನಸೆಲ್ಲಾ ನೀನೇ’ ತಮಿಳಿನ `ಅರುಂಧತಿ, ಕಣ್ಣೇ ಕಲೈಮಾನೇ’ ಹಾಗೂ ತೆಲುಗಿನ `ಪೌರ್ಣಮಿ, ಕಾವ್ಯಾಂಜಲಿ, ಕೃಷ್ಣ ಮುಕುಂದ ಮುರಾರಿ’ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಪಕ್ಕದ ಮನೆ ಹುಡುಗಿಯಾದರು. ಇನ್ನು ಸ್ಯಾಂಡಲ್ ವುಡ್ ನ `ಬಿಬಿ5 ಹಾಗೂ ಮಹಾಕಾವ್ಯ’ ಚಲನಚಿತ್ರಗಳಲ್ಲೂ ರಶ್ಮಿ ನಟಿಸಿದ್ದಾರೆ.

ದಕ್ಷಿಣದ ಮೀನಾಕ್ಷಿ ರಚಿತಾ ಮಹಾಲಕ್ಷ್ಮಿ
ದಕ್ಷಿಣ ಭಾರತದ ನಟಿ ರಚಿತಾ ಮಹಾಲಕ್ಷ್ಮಿ. ಮುದ್ದು ಮುಖ, ಸಹಜ ಸೌಂದರ್ಯದಿಂದಲೇ ಎಲ್ಲರ ಕಣ್ಮನ ಸೆಳೆಯುವ ಈ ನಟಿ ಹುಟ್ಟಿದ್ದು ಬೆಂಗಳೂರಿನಲ್ಲಿ. ಕನ್ನಡ, ತಮಿಳು, ತೆಲುಗು ಹಾಗೂ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ರಚಿತಾ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಮೆಗಾ ಮಂಡಲ’ದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸ್ಟಾರ್ ವಿಜಯ್ ನಲ್ಲಿ ಪ್ರಸಾರವಾದ `ಸರವಣನ್ ಮೀನಾಕ್ಷಿ’ ಧಾರಾವಾಹಿಯಲ್ಲಿ ಮೀನಾಕ್ಷಿಯ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಜನಪ್ರಿಯರಾದರು. ರಿಯಾಲಿಟಿ ಶೋ ಬಿಗ್ ಬಾಸ್ ತಮಿಳು ಸೀಸನ್ ರ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಕನ್ನಡದ `ಗಣಿ, ಪಾರಿಜಾತ, ರಂಗನಾಯಕ, ಎದ್ದೇಳು ಮಂಜುನಾಥ-2′ ಚಲನಚಿತ್ರಗಳಲ್ಲಿ ನಟಿಸಿದ್ದು, ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವೆಬ್ ಸಿರೀಸ್ ನಲ್ಲೂ ಅಭಿನಯಿಸಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕನ್ನಡದ ಹೊಸ ಚಿಗುರು ಮೌನಾ ಗುಡ್ಡೆಮನೆ
ಮೌನಾ ಗುಡ್ಡೆಮನೆ ಕನ್ನಡ ಕಿರುತೆರೆ ನಟಿ. ಮೂಲತಃ ಮಂಗಳೂರಿನವರಾದ ಮೌನಾ ಗುಡ್ಡೆಮನೆ, ಮೊದಲ ಬಾರಿಗೆ ಮಡೆನೂರು ಮನುರೊಂದಿಗೆ `ಕುಲದಲ್ಲಿ ಕೀಳ್ಯಾವುದೋ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ.ಕೆ. ಮತ್ತು ವಿದ್ಯಾ ಜಂಟಿಯಾಗಿ ನಿರ್ಮಿಸಿದ್ದಾರೆ. ಡಿಗ್ರಿ ಓದುತ್ತಿರುವ ಮೌನಾಗೆ ಹಲವಾರು ಆಫರ್ ಗಳು ಬರಲಾರಂಭಿಸಿದ್ದು, ನಟನೆ ಹಾಗೂ ಶಿಕ್ಷಣ ಎರಡನ್ನೂ ಒಟ್ಟೊಟ್ಟಿಗೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಟಾಮ್ ಬಾಯ್ ಗೌತಮಿ ಜಾಧವ್
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ ಗೌತಮಿ ಜಾಧವ್, ಮೂಲತಃ ಬೆಂಗಳೂರಿನವರು. 2018ರಲ್ಲಿ ತೆರೆಕಂಡ `ಕಿನಾರೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ `ಆದ್ಯ’ ಚಿತ್ರದಲ್ಲಿ ಅಭಿನಯಿಸಿದರು. ಕೆಲವು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2020ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ `ಸತ್ಯ’ ಸೀರಿಯಲ್ ಮೂಲಕ ಗೌತಮಿ ಜಾಧವ್ ಕನ್ನಡ ಕಿರುತೆರೆಗೆ ಅಡಿಯಿಟ್ಟರು. ಈ ಧಾರಾವಾಹಿಯಲ್ಲಿ ಟಾಮ್ ಬಾಯ್ ಪಾತ್ರದ ಮೂಲಕ ವೀಕ್ಷಕರ ಮನಗೆದ್ದವರು. ಗೌತಮಿ ಜಾಧ್ ಬಿಗ್ ಬಾಸ್ ಕನ್ನಡ ಸೀಸನ್ -11ರಲ್ಲಿ 4ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಆಗಾಗ ತಮ್ಮ ಇನ್ ಸ್ಟಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.

ಕನ್ನಡದ ಕಣ್ಮಣಿ ಭವ್ಯಾ ಗೌಡ
ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ ಭವ್ಯಾ ಗೌಡ ಹುಟ್ಟಿದ್ದು ಬೆಂಗಳೂರಿನಲ್ಲಿ. ಬಿಕಾಂ ಮುಗಿಸಿದ ಇವರಿಗೆ ಗಗನಸಖಿ ಆಗಬೇಕೆಂಬ ಕನಸಿತ್ತಂತೆ. ಆದರೆ ಭವ್ಯಾ ಪೋಷಕರಿಗೆ ಮಗಳನ್ನು ನಟಿಯಾಗಿ ನೋಡಬೇಕೆಂಬ ಅಭಿಲಾಷೆಯಿತ್ತು. ಅದರಂತೆ ಭವ್ಯಾ ಗೌಡ ನಟಿಯಾಗಿದ್ದಾರೆ. ಟಿಕ್ ಟಾಕ್ ನಲ್ಲಿ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಭವ್ಯಾ, `ಗೀತಾ’ ಸೀರಿಯಲ್ ಗೆ ಆಡಿಷನ್ ಕೊಟ್ಟು ಆಯ್ಕೆಯಾಗಿದ್ದರು. 2020ರಲ್ಲಿ `ಗೀತಾ’ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಈಗಾಗಲೇ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ವಿಸ್ಮಯಾ ಗೌಡ ನಿರ್ದೇಶನದ `ಡಿಯರ್ ಕಣ್ಮಣಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್-11ರಲ್ಲಿ ಮೊದಲ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದ ಭವ್ಯಾ ಗೌಡ, 6 ಫೈನಲಿಸ್ಟ್ ಗಳ ಪೈಕಿ ಒಬ್ಬರಾಗಿ ಫಿನಾಲೆಗೂ ತಲುಪಿದ್ದರು. ಆದರೆ 6ನೇ ಸ್ಥಾನಕ್ಕೆ ತೃಪ್ತಿ ಪಡೆದು ಎಲಿಮಿನೇಟ್ ಆಗಿದ್ದರು.

ಜನ ಮೆಚ್ಚಿದ ಕನ್ನಡತಿ ಸಾರಾ ಅಣ್ಣಯ್ಯ
ಗ್ಲಾಮರಸ್ ಚೆಲುವೆ ಸಾರಾ ಅಣ್ಣಯ್ಯ ಯಾವ ಟಾಪ್ ನಟಿಗೂ ಕಡಿಮೆ ಇಲ್ಲ ಎಂಬಂತೆ ಅವರ ಡ್ರೆಸ್ಸಿಂಗ್, ಫ್ಯಾಷನ್ ಎದ್ದು ಕಾಣುತ್ತದೆ. `ಕನ್ನಡತಿ’ ಧಾರಾವಾಹಿಯಲ್ಲಿ ರೂಧಿನಿ ಆಗಿ ನಟಿಸಿದ್ದರು. ಆ ಪಾತ್ರ ಸಖತ್ ಫೇಮಸ್ ಆಗಿತ್ತು ಇದರಿಂದ ಈ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಇನ್ನು `ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಜೊತೆ ಮಹಿಮಾ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಸಾರಾ ಅಣ್ಣಯ್ಯ, ಮಾಡರ್ನ್ ಸೊಸೆ ಎಂದು ಹೆಸರು ಪಡೆದರು. ಯಾವ ಪಾತ್ರ ಕೊಟ್ಟರೂ ಅದಕ್ಕೆ ತಕ್ಕಂತೆ ಸಖತ್ತಾಗಿಯೇ ನಟಿಸೋ ಬ್ಯೂಟಿ ಸಾರಾ, ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರುತ್ತಾರೆ. ಈ ಬೋಲ್ಡ್ ಬ್ಯೂಟಿ ಹೆಚ್ಚಾಗಿ ಸಖತ್ ಹಾಟ್, ಬೋಲ್ಡ್ ಆಗಿ ಮಾಡರ್ನ್ ಡ್ರೆಸ್ ಗಳನ್ನು ಧರಿಸಿ ಹೆಚ್ಚಿನ ಫೋಟೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಲೇ ಇರುತ್ತಾರೆ. ಮಾತ್ರವಲ್ಲ, ಹೆಚ್ಚಾಗಿ ಏನಾದರೊಂದು ತಮಾಷೆಯ ವಿಡಿಯೋಗಳನ್ನು ತಮ್ಮ ಸ್ಟೋರಿಯಲ್ಲಿ ಶೇರ್ ಮಾಡುತ್ತಿರುತ್ತಾರೆ.

ಉದಯೋನ್ಮುಖ ನಟಿ ಕವಿತಾ ಗೌಡ
ಕನ್ನಡ ಕಿರುತೆರೆಯ `ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಿಂದ ಪ್ರಸಿದ್ಧರಾದ ಕವಿತಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಕನ್ನಡ ಮತ್ತು ತಮಿಳು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ಇವರು ತಮಿಳಿನ `ಮಹಾಭಾರತ’ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟರು. ಕನ್ನಡದ `ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ಚಿನ್ನು ಆಗಿ ಗುರುತಿಸಿಕೊಂಡು ಜನಪ್ರಿಯತೆ ಹೆಚ್ಚಿಸಿಕೊಂಡರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ಬಿಗ್ ಬಾಸ್ ಕನ್ನಡದಲ್ಲೂ ಪಾಲ್ಗೊಂಡಿದ್ದ ಇವರು `ಹುಚ್ಚ ವೆಂಕಟ್, ಶ್ರೀನಿವಾಸ ಕಲ್ಯಾಣ’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. `ಗೋವಿಂದ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು, ಬೀರ್ ಬಲ್ ಟ್ರಯಾಲಜಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರಗಳಲ್ಲೂ ನಟಿಸಿದ್ದಾರೆ.





