ರಾಘವೇಂದ್ರ ಅಡಿಗ ಎಚ್ಚೆನ್.

ಖ್ಯಾತ ನಟ ದಿಲೀಪ್ ರಾಜ್ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ಭಾರೀ ಆಘಾತ ತಂದಿದೆ. ಹಲವು ಕಲಾವಿದರು ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸುತ್ತಿರುವ ನಡುವೆ, ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಸ್ನೇಹಿತನ ಜೊತೆಗಿನ ಹಳೆಯ ನೆನಪುಗಳನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ.
‘ಏನು ಮಾತನಾಡಬೇಕು ಅಂತಲೇ ಗೊತ್ತಾಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತಿದೆ. ದಿಲೀಪ್ ರಾಜ್ ಒಳ್ಳೆಯ ವ್ಯಕ್ತಿ ಮಾತ್ರವಲ್ಲ, ಅದ್ಭುತ ನಟ ಕೂಡ ಆಗಿದ್ದರು. ಕಾಲೇಜು ಮುಗಿಸಿ ನಾವು ಎಲ್ಲರೂ ಒಂದೇ ತಂಡವಾಗಿ ರಂಗಭೂಮಿಯಲ್ಲಿ ನಾಟಕ ಮಾಡುತ್ತಿದ್ದೆವು. ನಮ್ಮ ತಂಡದಲ್ಲಿ ಮೊದಲು ಜನಪ್ರಿಯತೆ ಪಡೆದಿದ್ದೇ ದಿಲೀಪ್’ ಎಂದು ಗಣೇಶ್ ಹೇಳಿದ್ದಾರೆ.
‘ಅವರು ಅದ್ಭುತ ಡ್ಯಾನ್ಸರ್. ಅವರನ್ನು ನೋಡಿ ನಾವು ಎಲ್ಲರೂ ಖುಷಿಪಡುತ್ತಿದ್ದೆವು. “ಪ್ರೀತಿಗಾಗಿ” ಸೀರಿಯಲ್ ಸಮಯದಲ್ಲಿ ಕಿಟ್ಟಿ ಮತ್ತು ದಿಲೀಪ್ ಜೊತೆಯಾಗಿ ನಟಿಸುತ್ತಿದ್ದರು. ಆಗ ನಾವು ಆಗಾಗ ಸೆಟ್‌ಗೆ ಹೋಗುತ್ತಿದ್ದೆವು. ಆರಂಭದ ದಿನಗಳಿಂದಲೇ ಅವರ ಶ್ರಮ ಮತ್ತು ಪ್ರತಿಭೆ ನೋಡಿದ್ದೇನೆ. ತುಂಬಾ ಕಷ್ಟಪಟ್ಟು ಬೆಳೆದ ಕಲಾವಿದ ಅವರು’ ಎಂದು ಗಣೇಶ್ ನೆನಪಿಸಿಕೊಂಡರು.
ದಿಲೀಪ್ ರಾಜ್ ಅವರ ಅಕಾಲಿಕ ನಿಧನದ ಬಗ್ಗೆ ಮಾತನಾಡಿದ ಅವರು, ‘48 ವರ್ಷ ಅನ್ನೋದು ಹೋಗುವ ವಯಸ್ಸೇ ಅಲ್ಲ. ಬೆಳಗ್ಗೆ ಸುದ್ದಿ ಕೇಳಿದಾಗ ನಿಜವೇ ಅನಿಸಲೇ ಇಲ್ಲ. ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಕಂಬನಿ ಮಿಡಿದರು.
ನಟ ಸುಂದರ್ ಕೂಡ ದಿಲೀಪ್ ರಾಜ್ ಅವರನ್ನು ನೆನೆದು ಭಾವುಕರಾದರು. ‘ಕಾಲೇಜು ದಿನಗಳಿಂದಲೇ ಅವನನ್ನು ನೋಡುತ್ತಿದ್ದೇನೆ. ಒಂದು ವರ್ಷ ಅವನಿಗೆ ನಾನು ಅಕೌಂಟ್ಸ್ ಪಾಠ ಮಾಡಿದ್ದೆ. ಆಗ ಇನ್ನೂ ಅವನು ಸೀರಿಯಲ್ ಕ್ಷೇತ್ರಕ್ಕೆ ಬಂದಿರಲಿಲ್ಲ. ತುಂಬಾ ಪ್ರತಿಭಾವಂತ ಹುಡುಗ. ಹೀರೋ ಆಗಿ ದೊಡ್ಡ ಮಟ್ಟದಲ್ಲಿ ಮಿಂಚಬೇಕು ಅನ್ನೋ ಆಸೆ ಅವನಿಗಿತ್ತು. ಆದರೆ ಅದು ಪೂರ್ಣವಾಗಲಿಲ್ಲ’ ಎಂದರು.
‘6-7 ತಿಂಗಳ ಹಿಂದೆ ಅವನ ಜೊತೆ ಮಾತನಾಡಿದ್ದೆ. ಆಗ ತುಂಬಾ ಫಿಟ್ ಆಗಿದ್ದ. ಒಳ್ಳೆಯ ಪಾತ್ರಗಳು ಸಿಗುತ್ತಿವೆ ಅನ್ನೋ ಖುಷಿ ಇತ್ತು. ಸ್ಟುಡಿಯೋ ನಿರ್ಮಿಸಿದ್ದ, ಸೀರಿಯಲ್ ಪ್ರೊಡಕ್ಷನ್ ಮಾಡುತ್ತಿದ್ದ. ಈಗ ಅವರ ಕುಟುಂಬಕ್ಕೆ ಇದು ಭಾರೀ ಆಘಾತ’ ಎಂದು ಸುಂದರ್ ಸಂತಾಪ ಸೂಚಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ