– ರಾಘವೇಂದ್ರ ಅಡಿಗ ಎಚ್ಚೆನ್.

ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಕೆಡಿ: ದಿ ಡೆವಿಲ್ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ಸದ್ಯ 22 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ.

ಬೆಂಗಳೂರು ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ರೀಷ್ಮಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಇದುವರೆಗೆ 10,795ಕ್ಕೂ ಹೆಚ್ಚು ಶೋಗಳು ಸಿಕ್ಕಿದ್ದು, ಮೊದಲ ಮೂರು ದಿನಗಳಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಮೂರನೇ ಭಾನುವಾರವೂ ಸಿನಿಮಾ 39 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ್ದು, ಒಟ್ಟಾರೆ ಗಳಿಕೆ 22 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಟಿವಿ ಹಾಗೂ ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾಗೆ ಮತ್ತಷ್ಟು ಲಾಭ ಸಿಗುವ ನಿರೀಕ್ಷೆ ಇದೆ.

ಚಿತ್ರ ಬಿಡುಗಡೆಯ ಮುನ್ನ ‘ಸೆರಗ ಸರ್ಸೆ’ ಹಾಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನೋರಾ ಫತೇಹಿ ಕಾಣಿಸಿಕೊಂಡಿದ್ದ ಈ ಹಾಡಿನ ಸಾಹಿತ್ಯ ಅಶ್ಲೀಲ ಹಾಗೂ ದ್ವಂದ್ವಾರ್ಥದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗುತ್ತಿದ್ದಂತೆ ಚಿತ್ರತಂಡ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿ, ಸಿನಿಮಾದಲ್ಲಿಯೂ ಡಿಲೀಟ್ ಮಾಡಿತ್ತು.

ಇನ್ನೊಂದೆಡೆ, ಟ್ರೇಲರ್‌ನ ಕೆಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಅನುಮತಿ ಇಲ್ಲದ ದೃಶ್ಯಗಳ ಕಾರಣದಿಂದ ಟ್ರೇಲರ್ ಡಿಲೀಟ್ ಆಗಿ, ಬಳಿಕ ಪರಿಷ್ಕೃತ ಆವೃತ್ತಿ ಮರು-ಅಪ್‌ಲೋಡ್ ಮಾಡಲಾಯಿತು.

ಈ ಎಲ್ಲಾ ವಿವಾದಗಳ ನಡುವೆಯೂ ‘ಕೆಡಿ’ ಸಿನಿಮಾಗೆ ಧ್ರುವ ಸರ್ಜಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ವಿವಾದಗಳೇ ಚಿತ್ರದ ಪ್ರಚಾರಕ್ಕೆ ದೊಡ್ಡ ಮಟ್ಟದಲ್ಲಿ ನೆರವಾದವು ಎನ್ನಲಾಗುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ