ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಉಗಾಂಡಾ ಮೂಲದ ಮಹಿಳೆಯ ಎಬೋಲಾ ವೈರಸ್​ ಸೋಂಕಿನ ತಪಾಸಣಾ ವರದಿ ನೆಗೆಟಿವ್​ ಬಂದಿದ್ದು, ಇದರೊಂದಿಗೆ ರಾಜ್ಯ ಆರೋಗ್ಯ ಇಲಾಖೆ ನಿಟ್ಟುಸಿರುಬಿಟ್ಟಿದೆ. ಉಗಾಂಡಾದ ಕ್ಯಾಂಪಾಲಾ ಮೂಲದ ಮಹಿಳೆ ನಾಗಿರೆ ಲತಿಫಾ ಅವರಿಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಆರೋಗ್ಯ ಇಲಾಖೆಯ ತಜ್ಞ ವೈದ್ಯರು ಖಚಿತಪಡಿಸಿದ್ದಾರೆ.

ಮೇ23ರಂದು ಬೆಂಗಳೂರಿಗೆ ಬಂದಿದ್ದ ನಾಗಿರಿ ಲತಿಫಾ ಅವರಲ್ಲಿ ಎಬೋಲಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಖಾಸಗಿ ಹೋಟೆಲ್​ನಲ್ಲಿ ತಂಗಿದ್ದ ಅವರಿಗೆ ಎಬೋಲಾ ಮಾದರಿಯ ಆರೋಗ್ಯ ಸಮಸ್ಯೆ ಇರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ ಅವರನ್ನು ಐಸೋಲೇಷನ್​ಗಾಗಿ ಮಂಗಳವಾರ ಬೆಂಗಳೂರಿನ ಸರಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸ್ಥಳಾಂತರಿಸಿತ್ತು. ನಾಗಿರೆ ಲತಿಫಾ ಮತ್ತು ಅವರ ಸಂಪರ್ಕಕ್ಕೆ ಬಂದಿದ್ದ ಮಹಿಳೆಯರ ರಕ್ತ ಹಾಗೂ ಇತರೆ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಲ್ಯಾಬ್​ಗೆ ಕಳುಹಿಸಿತ್ತು.

ಇದರೊಂದಿಗೆ ನಾಗಿರೆ ಲತಿಫಾ ಮೂಲಕ ರಾಜ್ಯಕ್ಕೂ ಎಬೋಲಾ ಮಾರಿ ಬೆಂಗಳೂರಿಗೆ ಬಂದಿತೇ ಎಂಬ ಆತಂಕ ಶುರುವಾಗಿತ್ತು. ನಾಗಿರೆ ಲತಿಫಾ ಅವರ ರಕ್ತ ಮಾದರಿ ಹಾಗೂ ಎಬೋಲಾ ಪರೀಕ್ಷೆಯ ವೈದ್ಯಕೀಯ ವರದಿಯು ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೈಸೇರಿದ್ದು, ಅವರಿಗೆ ಎಬೋಲಾ ಸೋಂಕು ತಗುಲಿಲ್ಲ ಎಂಬುದು ವರದಿಯಲ್ಲಿ ದೃಢಪಟ್ಟಿದೆ.

ನಾಗಿರೆ ಲತಿಫಾ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಆಸ್ಪತ್ರೆಯಿಂದ ಹೋಟೆಲ್​ಗೆ ಸ್ಥಳಾಂತರಿಸಲಾಗಿದೆ. ಆದರೂ, ಅವರು 21 ದಿನಗಳ ಕಾಲ ಕ್ವಾರಂಟೈನ್​ ಆಗಬೇಕಿದ್ದು, ಈ ಅವಧಿಯಲ್ಲಿ ಆರೋಗ್ಯ ಇಲಾಖೆಯು ಅವರ ಆರೋಗ್ಯದ ಮೇಲೆ ನಿರಂತರವಾಗಿ ನಿಗಾ ವಹಿಸಲಿದೆ. ಮತ್ತೆ ರೋಗ ಲಕ್ಷಣಗಳು ಕಂಡುಬರದಿದ್ದರೆ ಅವರನ್ನು ಕ್ವಾರಂಟೈನ್​ನಿಂದ ಬಿಡುಗಡೆ ಮಾಡಲಾಗುತ್ತದೆ. ಒಂದು ವೇಳೆ ರೋಗ ಲಕ್ಷಣ ಕಾಣಿಸಿಕೊಂಡರೆ 2ನೇ ಹಂತದಲ್ಲಿ ಪುಣೆಯ ಲ್ಯಾಬ್​ನಲ್ಲಿ ರಕ್ತ ಮಾದರಿಯ ಪರಿಶೀಲನೆ ನಡೆಯಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ನಾಗಿರೆ ಲತಿಫಾ ಅವರಿಗೆ ಎಬೋಲಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾದ ತಕ್ಷಣವೇ ಇಲಾಖೆಯು ಸಾರ್ವಜನಿಕೆ ಆರೋಗ್ಯ ಮಾರ್ಗಸೂಚಿಗಳ ಅನ್ವಯ ಅತ್ಯಂತ ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯೇ ಸರಕಾರದ ಮೊದಲ ಆದ್ಯತೆ. ಆರೋಗ್ಯ ಇಲಾಖೆಯು ಪ್ರತಿ ಪರಿಸ್ಥಿತಿಯನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ರೀತಿಯ ಸವಾಲು ಎದುರಿಸಲು ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ನಾಗಿರೆ ಲತಿಫಾ ಅವರಿಗೆ ಎಬೋಲಾ ಸೋಂಕು ತಗುಲಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದಿದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕಪಡುವುದು ಬೇಡ. ವದಂತಿಗಳಿಗೆ ಕಿವಿಗೊಡದೆ, ನಿಗದಿಪಡಿಸಿದ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ವಿನಂತಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ