ರಾಜ್ಯ ರಾಜಕೀಯದಲ್ಲಿ ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯ ಕಾಂಗ್ರೆಸ್ನ ನಾಯಕತ್ವದ ಕಿತ್ತಾಟಕ್ಕೆ ಅಂತ್ಯ ಹಾಡಲಾಗಿದೆ. ದೆಹಲಿಯಲ್ಲಿ ಮೂರು ದಿನಗಳಿಂದ ನಡೆದ ಸುದೀರ್ಘ ಸರ್ಕಸ್ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಗುರುವಾರ ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿ ಪ್ರಭುಲಿಂಗ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸಿದ್ಧರಾಮಯ್ಯಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಸಚಿವರು ಸಾಥ್ ನೀಡಿದರು. ಬಳಿಕ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿ, ಅಧಿಕೃತವಾಗಿ ಘೋಷಣೆ ಮಾಡಿದರು.
ಬಲಭಾಗದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಎಡಭಾಗದಲ್ಲಿ ಜಿ.ಪರಮೇಶ್ವರ್ ಅವರನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ ಸಿದ್ಧರಾಮಯ್ಯ, ತಮ್ಮ ಸುಧೀರ್ಘ ಆಡಳಿತ ನಡೆಸಿದ ಸಾರ್ಥಕತೆಯನ್ನು ಬಿಚ್ಚಿಟ್ಟರು.
ಹೈಕಮಾಂಡ್ ರಾಹುಲ್ ಗಾಂಧಿ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮಂಗಳವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ರಾಜೀನಾಮೆಗೆ ಸೂಚಿಸಿದ್ದರು. ಆಗ ಎರಡು ದಿನಗಳ ಬಳಿಕ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಇಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.
2006ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬಂದು ಸೇರಿದ್ದೆ. ನನ್ನ ಜೊತೆ ಐದಾರು ಶಾಸಕರು ಕೂಡಾ ಆಗಮಿಸಿದ್ದರು. ಅವರಲ್ಲಿ ಕೆಲವರು ಮಹದೇವಪ್ರಸಾದ್, ಮಹದೇವು, ಹೆಚ್.ವೈ.ಮೇಟಿ ಸೇರಿದಂತೆ ಕೆಲವರು ಇಂದು ನಮ್ಮೊಂದಿಗಿಲ್ಲ. ಅಂದು ಕಾಂಗ್ರೆಸ್ ಸೇರಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. 2013ರಿಂದ 2018ರವರೆಗೆ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ. ಅದಾದ ಬಳಿಕ 2023ರಿಂದ ಇಂದಿನವರೆಗೆ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೇನೆ. ಜೊತೆಗೆ ಪ್ರತಿಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ಹೀಗೆ ನನ್ನ ಸುದೀರ್ಘ ರಾಜಕಾರಣಕ್ಕೆ ಸಹಕಾರ ಹಾಗೂ ಅವಕಾಶ ನೀಡಿದ ಪಕ್ಷದ ವರಿಷ್ಠರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಸ್ಥಾನವನ್ನು ಯಾವುದೇ ಷರತ್ತುಗಳಿಲ್ಲದೆ ಸ್ವ ಇಚ್ಛೆಯಿಂದ ತ್ಯಜಿಸುತ್ತಿದ್ದು, ಮುಂದಿನ ಮುಖ್ಯಮಂತ್ರಿಯನ್ನು ಸಿಎಲ್ಪಿ ಸಭೆಯಲ್ಲಿ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು.
ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಪತ್ರಿಕಾಗೋಷ್ಠಿ ನಡೆಸಿದ ಸಿದ್ಧರಾಮಯ್ಯ, ಕನ್ನಡದ ಮೇರು ನಟ ಡಾ.ರಾಜ್ಕುಮಾರ್ ಅವರನ್ನು ಸ್ಮರಿಸಿದರು. ರಾಜ್ಕುಮಾರ್ ಅವರು ತಮ್ಮ ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ಅದೇ ರೀತಿ ನನಗೆ ಜನರೇ ಅಭಿಮಾನಿ ದೇವರುಗಳು. ಬುದ್ಧ , ಬಸವ, ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂದವನು ನಾನು. ಬಡ ಕುಟುಂಬದಿಂದ ಬಂದು, ಇಷ್ಟು ವರ್ಷಗಳ ಸುದೀರ್ಘ ರಾಜಕಾರಣ ಮಾಡಿದ್ದೇನೆ. ಅದಕ್ಕೆ ಕಾರಣ ನನ್ನೆಲ್ಲಾ ಬೆಂಬಲಿಗರು, ನಾಯಕರು ಹಾಗೂ ಜನರು. ಹೀಗಾಗಿ ಇದರ ಜೊತೆಗೆ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ ಎಂಬ ಸಾರ್ಥಕತೆ ಇದೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ಕೊನೆ ಉಸಿರು ಇರುವವರೆಗೂ ನಾನು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲವೇ ಇಲ್ಲ ಎಂದು ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.





