ಮಾಜಿ ಸಚಿವ ವೆಂಕಟರಮಣಪ್ಪ(85) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾ ಗಿದ್ದರು.
ವೆಂಕಟರಮಣಪ್ಪ ಅವರು 2008ರ ಅವಧಿಯಲ್ಲಿ ರೇಷ್ಮೆ ಮತ್ತು ಸಣ್ಣ ಕೈಗಾರಿಕಾ ಸಚಿವರಾಗಿ, 2018ರಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಒಟ್ಟು 4 ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು.
ಪಟ್ಟಟ್ಟಣದ ಗುರುಭವನದಲ್ಲಿ ಇಂದು ಮಧ್ಯಾಹ್ನ ಮೃತರ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಹನುಮಂತಹಳ್ಳಿ ತೋಟದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾವಗಡಕ್ಕೆ ಶಾಶ್ವತ ನೀರಾವರಿ, ಅಭಿವೃದ್ಧಿ ಯೋಜನೆಗಳನ್ನು ತಂದು ಜನ ಮಾನಸದಲ್ಲಿ ಬರನಾಡಿನ ಭಗೀರಥ ಎನ್ನಿಸಿಕೊಂಡಿದ್ದ ವೆಂಕಟರಮಣಪ್ಪ, 1945ರ ಮಾರ್ಚ್ 15ರಂದು ಜನಿಸಿದ್ದರು. ಗ್ರಾ.ಪಂ. ಸದಸ್ಯರಾಗಿ, ವಿಎಸ್ಎಸ್ಎನ್ ಅಧ್ಯಕ್ಷರಾಗಿ, ಪೊನ್ನಸಮುದ್ರ ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದರು. ಅವರಿಗೆ ಎಚ್.ವಿ. ವೆಂಕಟೇಶ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.
ವೆಂಕಟರಮಣ್ಣಪ್ಪ ಅವರು ಪಾವಗಡದಲ್ಲಿ ನೀರಿನ ಹಾಹಾಕಾರ ಹೋಗಲಾಡಿಸಿದ ಭಗೀರಥ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. ತುಮಕೂರು – ರಾಯದುರ್ಗ ರೈಲು ಯೋಜನೆ ಅನುಷ್ಠಾನದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ನಾಗಲಮಡಿಕೆಯಲ್ಲಿ ಡ್ಯಾಂ ನಿರ್ಮಿಸಿ, ಪಾವಗಡಕ್ಕೆ ನೀರೊದಗಿಸಿದ್ದರು.





