ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭರತನಾಟ್ಯ ನೃತ್ಯ ಕಲೆಯಲ್ಲಿ ಪಾರಂಗತೆ ಎನಿಸಿರುವ ಪೂಜಿತಾ ಭಾಸ್ಕರ್ ದೇಶ ವಿದೇಶಗಳಲ್ಲಿ ತಮ್ಮ ನೃತ್ಯ ಪ್ರದರ್ಶನಗಳಿಂದಾಗಿ ಉನ್ನತ ಹೆಸರು ಗಳಿಸಿದ್ದಾರೆ. ಇವರ ಪ್ರತಿಭೆಯ ಸಂಪೂರ್ಣ ಪರಿಚಯ ಪಡೆಯೋಣವೇ……?
ವಿನುತಾ ಹಾಗೂ ಎಸ್. ಭಾಸ್ಕರ್ ರವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನನ. ತಂದೆ ಸಿದ್ಧೇಶ್ವರ ಆರ್ಟ್ಸ್ ಫ್ರೇಮ್ಸ್ ನ ಮಾಲೀಕರು. ಭರತನಾಟ್ಯ ಕಲಾವಿದೆಯಲ್ಲೊಬ್ಬ ನಿರೂಪಕಿ, ಕೊರಿಯೋಗ್ರಾಫರ್, ಶಿಕ್ಷಕಿಯರು ಇದ್ದಾರೆ. ಸತತ 20 ವರ್ಷಗಳಿಂದ ತರಬೇತಿ ಪಡೆದಿರುವ ಇವರು, ಉಪಾಧ್ಯೆ ಸ್ಕೂಲ್ ಆಫ್ ಡ್ಯಾನ್ಸ್ ನ ಶಿಷ್ಯೆ. ಗುರುಗಳಾದ ಪಾರ್ಶ್ವನಾಥ್ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ.ರವರ ಪರಮಶಿಷ್ಯೆಯಾಗಿ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿರುವವರು. ನಿಪುಣತೆ ಮತ್ತು ವಿಶಿಷ್ಟವಾದ ಮಾರ್ಗದರ್ಶನ ಪಡೆದಿರುವ ಇವರೇ ಈ ಲೇಖನದ ಹೀರೋಯಿನ್ ಪೂಜಿತಾ ಭಾಸ್ಕರ್.
ನೃತ್ಯ ಪಯಣ
5 ವರ್ಷದ ಮಗುವಿನಿಂದಲೂ ನೃತ್ಯ ಎಂದರೆ ಎಲ್ಲಿಲ್ಲದ ಆಸೆ. ಅಂದಿನಿಂದಲೇ ಅಭ್ಯಾಸ ಪ್ರಾರಂಭ. ಶಕುಂತಲಾ ಆರ್. ಪ್ರಭಾತ್ ಇವರ ಪ್ರಥಮ ಗುರವರ್ಯರು. ಸುಮಾರು 15 ವರ್ಷಗಳ ಕಾಲ, ಶಕುಂತಲಾರ `ಸಮುದ್ಯತ ನೃತ್ಯ ಶಾಲೆ’ಯಲ್ಲಿ ಅಭ್ಯಸಿಸಿ, 2017ರಲ್ಲಿ ರಂಗ ಪ್ರವೇಶ ಮಾಡಿದರು. ನಂತರ ಉಪಾಧ್ಯೆ ಸ್ಕೂಲ್ ಆಫ್ ಡ್ಯಾನ್ಸ್ ನಲ್ಲಿ ತರಬೇತು ಪಡೆಯುತ್ತಾ ಬಂದಿದ್ದಾರೆ. ಅಲ್ಲದೆ, ಈಗ್ಗೆ 2 ವರ್ಷಗಳಿಂದ ಕಥಕ್ ನೃತ್ಯವನ್ನು ಆರ್. ಪ್ರಭಾತ್ ರಿಂದ ಅಭ್ಯಾಸ ಮಾಡುತ್ತಿರುವರು.
ಮುಂದುವರಿದ ನೃತ್ಯ ಪಯಣದಲ್ಲಿ ಇನ್ನೂ ಹೆಚ್ಚಿನ ಶಿಕ್ಷಣ ಪಡೆಯುವ ಸಲುವಾಗಿ, ಪ್ರಖ್ಯಾತ ಕಲಾವಿದರಾದ ರಾಜಶ್ರೀ ವಾರಿಯರ್, ಶೀಲಾ ಉನ್ನಿಕೃಷ್ಣನ್, ಪಾರ್ಶ್ವನಾಥ್ ಉಪಾಧ್ಯೆ, ವೈಭವ್ ಅರೇಕರ್, ಮೀರಾ ನಾರಾಯಣ್ ನಡೆಸುವ ಹಲವಾರು ನೃತ್ಯ ತರಬೇತು ಶಿಬಿರಗಳಲ್ಲಿ ಭಾಗಿಯಾಗಿದ್ದಾರೆ.
ಶೈಕ್ಷಣಿಕ ಸಾಧನೆಗಳು
ಬೆಂಗಳೂರಿನ ಮೌಂಟ್ ಕಾರ್ಮೆಲ್ಸ್ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದು, ನಂತರ ನೃತ್ಯಕಲೆಯಲ್ಲಿನ ಸೆಳೆತದಿಂದಾಗಿ ಹೆಚ್ಚುವರಿ ವಿದ್ಯಾಭ್ಯಾಸವನ್ನು, ಜೈನ್ ಯೂನಿವರ್ಸಿಟಿಯಿಂದ ಮಾಸ್ಟರ್ ಇನ್ ಪರ್ಫಾರ್ಮಿಂಗ್ ಆರ್ಟ್ಸ್ ಪದವಿಯನ್ನು (ಎಂ.ಪಿ.ಎ. ಭರತನಾಟ್ಯ) ಉನ್ನತ ಅಂಕಗಳೊಟ್ಟಿಗೆ ಪಡೆದರು. ಗುರುಗಳಾದ ಡಾ. ಸೌಂದರ್ಯಾ ಶ್ರೀವತ್ಸ, ಶೀಲಾ ಚಂದ್ರಶೇಖರ್, ಡಾ. ಶೋಭಾ ಶಶಿಕುಮಾರ್ ರಿಂದ ಮಾರ್ಗದರ್ಶನವನ್ನು ಪಡೆದರು.
ಕರ್ನಾಟಕ ಸೆಕೆಂಡರಿ ಎಜುಕೇಶನ್ ಬೋರ್ಡ್ ನಿಂದ ಪ್ರೀ ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು, 2022ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಸರ್ಕಾರದಿಂದ ಭರತನಾಟ್ಯಂಗವಾಗಿ ಸ್ಕಾಲರ್ ಶಿಪ್ ಕೂಡ ದೊರೆತಿದೆ.
ನೀತಾ ಅಂಬಾನಿಯವರ ನೇತೃತ್ವ
ನೀತಾ ಮುಖೇಶ್ ಅಂಬಾನಿ ಕಲ್ಚರ್ ಸೆಂಟರ್ ನ ಉದ್ಘಾಟನಾ ಸಮಾರಂಭದಲ್ಲಿ, ಮಯೂರಿ ಉಪಾಧ್ಯಾಯರ ನೇತೃತ್ವದಲ್ಲಿ ಜರುಗಿದ ನೃತ್ಯಋತ್ಯದ ಸಂಯೋಜನೆಯಲ್ಲಿನ ಒಂದು ಭಾಗವಾಗಿದ್ದು, ನನ್ನ ಹೆಗ್ಗಳಿಕೆಯೇ ಹೌದು ಎನ್ನುತ್ತಾರೆ ಪೂಜಿತಾ.
ಈ ತಂಡದೊಟ್ಟಿಗೆ ಪ್ರದರ್ಶನ ನೀಡಿದ್ದು, ಬಹಳ ಹೆಮ್ಮೆಯ ಹಾಗೂ ಸಂತಸದ ಸಂಗತಿ. ಬೃಹತ್ ವೇದಿಕೆ, ಸಾವಿರಾರು ಜನರ ಸಮಕ್ಷಮತೆ, ವಿಶ್ವ ಪ್ರಸಿದ್ಧವಾದ ಹೆಸರು, ಇಂತಹ ಸಮಾರಂಭದಲ್ಲಿ ಭಾಗಿಯಾಗಿದ್ದೇ ಒಂದು ಹಿರಿಮೆ. ಅವರ ಜೀವನದ ಮರೆಯಲಾಗದ ಸಂತಸದ ಘಳಿಗೆ. ನೀತಾ ಅಂಬಾನಿಯವರ ನಿರ್ಮಾಣದ ಹಲವಾರು ಸೀಸನ್ ಗಳಲ್ಲಿ ಇಂಥ ಬೃಹತ್ ಕಾರ್ಯಕ್ರಮಗಳು ಜರುಗುತ್ತಿರುತ್ತವೆ.
ಅಂತಹ ವೇದಿಕೆಗಳಲ್ಲಿ ಸುಮಾರು 55ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿರುವ ಹೆಗ್ಗಳಿಕೆಯಿದೆ. ಹಲವಾರು ಶೋಗಳಲ್ಲಿ ಸ್ಟಾಂಡಿಂಗ್ ಓವಿಯೇಶನ್ ಸಿಕ್ಕಿದ್ದು ಸಂತಸ ತಂದಿದೆ.
ಹೊರದೇಶಗಳಲ್ಲಿ ನಡೆಯುವ ಬ್ರಾಡ್ ವೇ ಶೋ ಮಾದರಿಯ ಬೃಹತ್ ಮ್ಯೂಸಿಕ್ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ಭಾರತದಲ್ಲಿ ಪರಿಚಯಿಸಿದ ಹಿರಿಮೆ ನೀತಾ ಅಂಬಾನಿಯವರಿಗೆ ಸಲ್ಲುತ್ತದೆ. ಇದನ್ನು ಗ್ರೇಟೆಸ್ಟ್ ಇಂಡಿಯನ್ ಮ್ಯೂಸಿಕ್, ಸಿವಿಲೈಸೇಷನ್ ಟು ನೇಷನ್ ಎಂದು ಕರೆಯಲು ನೀತಾ ಅಂಬಾನಿ ಇಚ್ಛಿಸುತ್ತಾರೆ.
ಪುಣ್ಯಾ : ಡ್ಯಾನ್ಸ್ ಕಂಪನಿ
ಹರ ಡ್ಯಾನ್ಸ್ ನ್ನು ಹೈದರಬಾದ್ ಗುಡಿಯಾ ಸಂಬರಾಲು ಹಾಗೂ ಮಂಜಕುಡಿಯಲ್ಲಿನ ಸ್ವಾಮಿ ದಯಾನಂದ ಸರಸ್ವತಿ ಕಾಲೇಜ್ ನಲ್ಲಿ ಪ್ರಸ್ತುತಪಡಿಸಿದರು. ಕುಂಭಸಿಯಲ್ಲಿ ನಡೆದ, ಸದ್ಗತಿ ಕಾರ್ಯಕ್ರಮದಲ್ಲಿ ತಮ್ಮ ವಿಶಿಷ್ಟ ನೃತ್ಯರೂಪಕ ನೀಡಿರುವರು. ಅಲ್ಲದೇ ಕುವೆಂಪುರವರ ಚಿತ್ರಾಂಗದಾ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯರು ಆಯೋಜಿಸಿದ್ದ ನೃತ್ಯ `ನೀದಯ’ದಲ್ಲಿ ಪ್ರದರ್ಶನ ನೀಡಿ ಜನ ಮೆಚ್ಚುಗೆ ಪಡೆದಿರುವರು.
ಪ್ರಭಾತ್ ಆರ್ಟ್ಸ್ ನಲ್ಲಿ, ಬ್ಯಾಲೆನ್ಸ್ ಡ್ಯಾನ್ಸ್, ಡ್ರಾಮಾ, ಮೋಹಿನಿ ಭಸ್ಮಾಸುರ, ಪಿಬತ ಭಗತಂ ರಸಮಲಯಂ, ಶಿಲ್ಪಾ ಕಲಾ ವೈಭವ, ಶ್ರೀನಿವಾಸ ಕಲ್ಯಾಣ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಲ್ಲದೇ, ವಿಶೇಷ ಪ್ರದರ್ಶನ ಕಂಡ, ಕಥಾವಸ್ತ್ರ ಡಸ್ಕ್ ಆಫ್ ದಿ ಎವರ್ ಸತತವಾಗಿ, 18 ದಿನಗಳ ಕಾಲ ಪ್ರದರ್ಶನಗೊಂಡಿದ್ದು ಬಹಳ ವಿಶೇಷ.
ಅಯೆನಾ ಡ್ಯಾನ್ಸ್ ಕಂಪನಿಯವರೊಟ್ಟಿಗೆ, 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಧಾನಸೌಧದಲ್ಲಿ ಕಾರ್ಯಕ್ರಮ ನೀಡಿರುವರು. ಭಾರತವಲ್ಲದೆ, ಯೂರೋಪಿನ ರೋಮ್, ಇಟಲಿ, ಸ್ಪೇನ್ ಹಾಗೂ ಸ್ವಿಡ್ಜರ್ಲೆಂಡ್ ಗಳಲ್ಲಿ ಪ್ರದರ್ಶನ ನೀಡಿರುವರು. ಅಲ್ಲದೇ, ತರಬೇತು ಶಿಬಿರಗಳನ್ನೂ ನಡೆಸಿ ಯಶಸ್ವಿಯಾಗಿರುವರು. ಎಟ್ರಂ ಡ್ಯಾನ್ಸ್ ಕಂಪನಿ ವತಿಯಿಂದ ನವರಸಗಳ ವಿಶೇಷ ನಟನಾ ವೈಖರಿಯ ರಸದೃಷ್ಟ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿರುರು. ಮೌಂಟ್ ಕಾರ್ಮೆಲ್ಸ್ ಕಾಲೇಜಿನ ಇಂಡಿಯನ್
ಡ್ಯಾನ್ಸ್ ಅಸೋಸಿಯೇಶನ್ ನ ಭಾಗವಾಗಿ ಹತ್ತು ಹಲವಾರು ಕೆಲಸಗಳನ್ನು ನಿರ್ವಹಿಸಿರುವರು.
ಏಕವ್ಯಕ್ತಿ ಪ್ರದರ್ಶನಗಳು
2017ರಲ್ಲಿ ದಕ್ಷಿಣ ಏಷ್ಯಾದ ಬಹುದೊಡ್ಡ ಫೆಸ್ಟ್, ಐಐಟಿ ಮುಂಬೈನಲ್ಲಿ ನಡೆಯುವ ಮೂಡ್ ಇಂಡಿಗೋದಲ್ಲಿ ಭಾಗವಹಿಸಿ 3ನೇ ಸ್ಥಾನ ಗಳಿಸಿರುವರು.
ಸಾಯಿ ಆರ್ಟ್ಸ್ ಅಂತಾರಾಷ್ಟ್ರೀಯ ಸಂಸ್ಥೆಯವರು ನಡೆಸುವ ಮಾಸಿಕ ಕಾರ್ಯಕ್ರಮದಲ್ಲಿಯೂ ಪ್ರದರ್ಶನ ನೀಡಿರುವರು.
ಮುಂಬೈನ ನಾಟ್ಯಾಂಜಲಿಯವರು ನಡೆಸುವ ವಿಶೇಷ ಶಿವರಾತ್ರಿ ಕಾರ್ಯಕ್ರಮದಲ್ಲಿ ಉತ್ತಮ ನೃತ್ಯ ಪ್ರದರ್ಶನ ನೀಡಿ ಶಿವನ ಕೃಪೆಗೆ ಪಾತ್ರರಾಗಿರುವರು.

ವೈವಿಧ್ಯಮಯ ಪ್ರದರ್ಶನಗಳು
2019ರ ಆರ್ಯಂಗರ ನೃತ್ಯಾರಂಪನಮ್, ಕಬ್ಬನ್ ಪಾರ್ಕ್ ನಲ್ಲಿ ನಡೆಯುವ ಉದಯರಾಗ ಸೀರೀಸ್, ಪ್ರತಿ ಶುಕ್ರವಾರ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರ್ ರಿಲೇಶನ್, ಹೈದರಾಬಾದಿನ ಶಿಲ್ಪಾ ರಾಮಂ, ಸುತ್ತೂರು ಶ್ರೀಕೃಷ್ಣ ಜಾತ್ರಾ ಮಹೋತ್ಸವ, ಸಿದ್ಧಗಂಗಾ ಮಠ, ಚಿದಂಬರಂ ನಾಟ್ಯಾಂಜಲಿ ಕಾರ್ಯಕ್ರಮಗಳು ಪ್ರಮುಖವಾದವು.
ಹಾಗೆಯೇ ಶ್ರೀ ವಜ್ರ ಕಿರೀಟ ವಿನಾಯಕ ಸ್ವಾಮಿ ದೇವಸ್ಥಾನ, ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿ ದೇವಸ್ಥಾನ, ಮೈಸೂರು ಆರ್ಟಿಕ್ಯುಲೇಟ್ ಫೆಸ್ಟಿವ್, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 14ನೇ ನ್ಯಾಷನಲ್ ಕನ್ನಡ ಕಲ್ಚರ್ ಕನ್ವೆನ್ಶನ್, ಇನ್ ಸ್ಟಾಗ್ರಾಂನ ಪೇಜ್ ನಲ್ಲಿ ಲೈವ್ ಬಂದು, ಅಲಾಪ್ ಕಾನ್ಸೆಪ್ಟರ್ ಗಾಗಿ ವಿಶ್ವ ನೃತ್ಯ ದಿನದ ಸಲುವಾಗಿ ಪ್ರದರ್ಶನ ನೀಡಿರುವರು. ಪ್ರತೀತದಲ್ಲಿ ಊರ್ಮಿಳಾ ಪಾತ್ರಧಾರಿಯಾಗಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ವೈವಿಧ್ಯಮಯ ನೃತ್ಯ ರೂಪಕಗಳು
ಹಲವಾರು ನೃತ್ಯ ರೂಪಕಗಳನ್ನು ನಾಡಿನಾದ್ಯಂತ ನೀಡಿದ್ದಾರೆ. ಅದರಲ್ಲಿ ಕೆಲವು ಕಾರ್ಪೊರೇಟ್ ಶೋಗಳು, ದೇವಸ್ಥಾನಗಳು, ಸಂಸ್ಕೃತಿಯರು ನಡೆಸಿದ ದ ಟೆಂಪಲ್ ಆಫ್ ಆರ್ಟ್, ವಿಶ್ವ ನೃತ್ಯ ದಿನದ ಸಲುವಾಗಿ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್, ಉಷಾ ಆರ್.ಕೆ.ಯವರ ನೇತೃತ್ವದಲ್ಲಿ ನಡೆದ ಭದ್ರಾಚಲ ರಾಮದಾಸ ಚರಿತಮು, ಸದ್ಗುರು ಶ್ರೀ ತ್ಯಾಗಬ್ರಹ್ಮ ಆರಾಧನಾ ಕೈಂಕರ್ಯ ಟ್ರಸ್ಟ್ ರವರ ತ್ಯಾಗರಾಜ ವೈಭವಂ, ರವೀಂದ್ರ ಕ್ಷೇತ್ರದ ಸ್ವರ್ಣ ಸಂಭ್ರಮ ಇತ್ಯಾದಿಗಳುಂಟು.
ನೃತ್ಯಾದಿತ್ಯ, ಕಲಾ ಸಿಂಧು ಅಕಾಡೆಮಿಯವರು ನಡೆಸಿದ ನಿರಂತರ ನರ್ಮದಾ ಫೆಸ್ಟಿವ್, ಇಸ್ಕಾನ್ ರವರ ಐಕ್ಯ ಫೆಸ್ಟಿವ್, ಉಪಾಧ್ಯೆ ನೃತ್ಯ ಶಾಲೆಯ ಕರೂರು ನಾಟ್ಯಾಂಜಲಿ, ಕಲಾಶ್ರೀ ಉತ್ಸವ್, ದೃಷ್ಟಿ ಡ್ಯಾನ್ಸ್ ಫೆಸ್ಟಿವ್, ಕ್ಯಾನ್ವಾಸ್ ಡ್ಯಾನ್ಸ್ ಫೆಸ್ಟಿವ್, ಮೇಡೈ ಬೆಂಗಳೂರಿನ ಮಾರ್ಗಳಿ ಫೆಸ್ಟಿವ್.
ಕರ್ನಾಟಕ ಸರ್ಕಾರ ಆಯೋಜಿಸಿದ್ದ ಮೈಸೂರು ದಸರೆಯಲ್ಲಿ ಕಥಕ್ ನೃತ್ಯಗಳ ಪ್ರದರ್ಶನಗಳನ್ನು ನೀಡಿ ತಮ್ಮ ತೇಜಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ, ದ್ರೌಪದಿ ಮುರ್ಮು, ಬಸರಾಜ ಬೊಮ್ಮಾಯಿಯವರ ಮುಂದೆಯೂ ಪ್ರದರ್ಶನ ನೀಡಿ ಅವರುಗಳಿಂದ ಮೆಚ್ಚುಗೆ ಪಡೆದಿದ್ದಾರೆ. ದ ಲಾಸ್ಯಾರವರಿಂದ `ಬಿ ಲೌಡ್ ಕ್ಲಾಸಿಕ್ ಡ್ಯಾನ್ಸರ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾಗಿರುವರು.
ಕೊರಿಯೊಗ್ರಾಫರ್ ಅನಿತಾ ಆರ್ ರತ್ನಂ ಮತ್ತು ನರ್ತಕಿಯರುಗಳು ನಡೆಸಿದ ನವರಾತ್ರಿ ವಿಶೇಷ ಕಾರ್ಯಕ್ರಮವಾದ ದೇವಿ ಡೈರೀಸ್ ಸೀಸನ್ ರಲ್ಲಿ ಕೊರಿಯೋಗ್ರಾಫರ್ ಆಗಿ ಯಶಸ್ವಿಯಾಗಿರುವರು. ಸೆಂಟ್ ಜೋಸೆಫ್ ಕಾಲೇಜಿನಲ್ಲಿ 2 ವರ್ಷ ಕ್ಲಾಸಿಕ್ ಡ್ಯಾನ್ಸ್ ಟೀಂಗೆ ಕೊರಿಯೋಗ್ರಾಫರ್ ಆಗಿ ತರಬೇತು ನೀಡಿದಾಗ, ಆ ಟೀಂಗಳು ಹಲವಾರು ವೇದಿಕೆ ಕಾರ್ಯಕ್ರಮಗಳಲ್ಲಿ ಗೆದ್ದು ಬಹುಮಾನ ಪಡೆದಿರುವುದು ನನಗೆ ಹೆಮ್ಮೆ ಎನ್ನುತ್ತಾರೆ.
ನಾನಿರ್ವಾಲ್ ಸೀರೀಸ್ ನಲ್ಲಿ 3 ವಿಡಿಯೋಗಳು ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಚಿಕ್ಕಂದಿನಿಂದಲೂ, ಟೀಚರ್ ಆಟ ಎಂದರೆ ಬಹಳ ಇಷ್ಟ. ಅದೇ ಬುನಾದಿ, ಚಿಗುರಿದ ಆಸೆಯಿಂದ ಶಿಕ್ಷಕಿಯಾಗುವ ಪ್ರಾರಂಭಿಕ ಹಂತದಲ್ಲಿದ್ದಾರೆ. ಅವರ ಕನಸಾಗಿ `ಆಯತಿ’ ಎಂಬ ನೃತ್ಯ ಶಾಲೆಯನ್ನು ಪ್ರಾರಂಭಿಸಿ ಹತ್ತಾರು ಮಕ್ಕಳು ವಿದ್ಯೆ ಕಲಿತು ಉತ್ತಮ ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ನೀಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ. ಅದು ಇವರಿಗೆ ಬಹಳ ಸಂತಸ ತಂದಿದೆ.
ಆಯತಿ ಎಂದರೆ ಭರವಸೆ ಹಾಗೂ ಪಯಣ ಎಂಬುದಾಗಿ ಇರುವುದರಿಂದ, ಭರವಸೆಯ ಪಯಣ ಸಾಗಲಿ ಎಂಬ ಆಶಯ. ಆಯತಿಯಲ್ಲಿ, ಕರ್ನಾಟಕ ಸಂಗೀತ ಹಾಗೂ ಕಥಕ್ ನೃತ್ಯವನ್ನೂ ಹೇಳಿಕೊಡಲಾಗುತ್ತಿದೆ. ಇದರೊಟ್ಟಿಗೆ ಹಲವಾರು ನೃತ್ಯ ಸಂಗೀತ ಶಿಬಿರಗಳನ್ನೂ ನಡೆಸುತ್ತಿದ್ದಾರೆ. ಇಷ್ಟರಲ್ಲಿ ನೂತನ ಯೂನಿಟ್ ನ್ನು ಕೆಂಗೇರಿಯಲ್ಲೂ ಪ್ರಾರಂಭಿಸುವ ಎಲ್ಲಾ ತಯಾರಿಯೂ ನಡೆದಿದೆ.
ನ್ಯಾಷನಲ್ ವೆಲ್ತ್‌ನಲ್ಲಿ ಲೈಟ್ ತರಬೇತು, ಪವರ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ವಿಜೇತೆ ಆಗಿರುವ ಇವರು, ನ್ಯೂಯಾರ್ಕ್‌ಮೂಲದ, ಲ್ಯಾವೆಲ್ ರಸ್ತೆಯ, ಫಿಸಿಕಲ್ ರಲ್ಲಿ, ಫಿಟ್ ನೆಸ್ ಟ್ರೇನರ್ ಆಗಿದ್ದಾರೆ.
ಇದಕ್ಕೆಲ್ಲಾ, ಎಡಿಟರ್ ಹಾಗೂ ಫಿಲಂ ಮೇಕರ್ ಆಗಿರುವ ಪತಿ ಆಶಿಶ್ ಹುಲಕುಂದ್ ಹಾಗೂ ಅತ್ತೆ ಮಾವನವರ ಪರಿಪೂರ್ಣ ಸಹಕಾರವಿರುವುದು.
ಒಟ್ಟಿನಲ್ಲಿ ತನ್ನ ಹಾವಭಾವಗಳಿಂದ ಜನರನ್ನು ರಂಜಿಸುತ್ತಾ ತನ್ನ ಇಷ್ಟದ ಕಲೆಯನ್ನು ಆರಾಧಿಸುತ್ತಾ ದೈವಾನುಗ್ರಹದೊಟ್ಟಿಗೆ ಬೆಳೆಯುತ್ತಿರುವ ಈ ಕಲಾವಿದೆಗೆ ಸರಸ್ವತಿಯ ಪೂರ್ಣಾನುಗ್ರಹ ಇರಲೆಂದು ಆಶಿಸೋಣವೇ….!
– ಸವಿತಾ ನಾಗೇಶ್





