– ರಾಘವೇಂದ್ರ ಅಡಿಗ ಎಚ್ಚೆನ್.
ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಮೆಗಾ 158’ ಚಿತ್ರದ ಕುರಿತು ಹೊಸ ಸುದ್ದಿ ಟಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
‘ವಾಲ್ಟೇರ್ ವೀರಯ್ಯ’ ಚಿತ್ರದ ಯಶಸ್ಸಿನ ಬಳಿಕ ಮತ್ತೊಮ್ಮೆ ಒಂದಾಗಿರುವ ಚಿರಂಜೀವಿ-ಬಾಬಿ ಜೋಡಿ, ಸದ್ಯ ತಮಿಳುನಾಡಿನ ಪೊಳ್ಳಾಚಿಯಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈ ಬಿಗ್ ಬಜೆಟ್ ಆ್ಯಕ್ಷನ್ ಎಂಟರ್‌ಟೈನರ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಮೊದಲಿಗೆ ನಟಿ ಹನಿ ರೋಸ್ ಅವರನ್ನು ಸಂಪರ್ಕಿಸಲಾಗಿತ್ತು ಎನ್ನಲಾಗಿದೆ. ಆದರೆ ಡೇಟ್ಸ್ ಸಮಸ್ಯೆಯಿಂದ ಅವರು ಚಿತ್ರದಿಂದ ಹಿಂದೆ ಸರಿದ ಹಿನ್ನೆಲೆ, ಆ ಪಾತ್ರಕ್ಕೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಈಗಾಗಲೇ ಚಿತ್ರದಲ್ಲಿ ಪ್ರಿಯಾಮಣಿ, ಅನಸ್ವರ ರಾಜನ್ ಹಾಗೂ ನಿವೇತಾ ಪೆತುರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಸ್ವರ ರಾಜನ್ ಅವರು ಚಿರಂಜೀವಿ ಪುತ್ರಿಯ ಪಾತ್ರದಲ್ಲಿ ನಟಿಸುತ್ತಿರುವುದು ಖಚಿತವಾಗಿದೆ.
ಕನ್ನಡದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ತಮನ್ ಎಸ್ ಸಂಗೀತ ನೀಡುತ್ತಿದ್ದು, ‘ಜೈಲರ್’ ಖ್ಯಾತಿಯ ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಚಿತಾ ರಾಮ್ ಹೆಸರು ಚಿತ್ರದೊಂದಿಗೆ ತಳುಕಿಕೊಂಡಿರುವುದು ಕನ್ನಡ ಅಭಿಮಾನಿಗಳಲ್ಲೂ ಹೊಸ ನಿರೀಕ್ಷೆ ಮೂಡಿಸಿದೆ.





