ಮಳೆಗಾಲಕ್ಕೆ ಖಾರ ಖಾರವಾಗಿ, ಗರಿ ಗರಿಯಾಗಿ ಏನಾದರೂ ಸವಿಯಬೇಕೆಂದು ಬಯಸಿದರೆ, ರೆಸಿಪೀಸ್ಟ್ರೈ ಮಾಡಿ ನೋಡಿ……! 

ಹಾಗಲ ಗೋಡಂಬಿ ಕರೀ

ಸಾಮಗ್ರಿ : 500 ಗ್ರಾಂ ಹಾಗಲಕಾಯಿ, ತುಪ್ಪದಲ್ಲಿ ಹುರಿದ 200 ಗ್ರಾಂ ಗೋಡಂಬಿ, 300 ಗ್ರಾಂ ಈರುಳ್ಳಿ, 200 ಗ್ರಾಂ ಹುಳಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅಮ್ಚೂರ್‌ ಪುಡಿ, ಅರಿಶಿನ, ಕುಕಿಂಗ್‌ ಕ್ರೀಂ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂಮಸಾಲಾ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು,  2-3 ಇಡಿ ಒಣ ಮೆಣಸು, 1-2 ಲವಂಗದೆಲೆ. ಮಾವಿನಕಾಯಿ ಉಪ್ಪಿನಕಾಯಿ,  ಓಮ, ವೈಟ್‌ ಪೆಪ್ಪರ್‌, 1 ಸೌಟು ಎಣ್ಣೆ, ಅಲಂಕರಿಸಲು ಪುದೀನಾ.

ವಿಧಾನ : ಹಾಗಲ ತೊಳೆದು ಒರೆಸಿ ಶುಚಿ ಮಾಡಿ. ಇನ್ನು ಉದ್ದಕ್ಕೆ ಸೀಳಿಕೊಂಡು, ಬೀಜ ಬೇರ್ಪಡಿಸಿ. ತುಸು ಎಣ್ಣೆಗೆ ಉಪ್ಪು, ಅರಿಶಿನ ಹಾಕಿ ಇದರ ಒಳಭಾಗಕ್ಕೆ ಸರಿ ಮ್ಯಾರಿನೇಟ್‌ ಆಗಲು ಬಿಡಿ. 1 ಗಂಟೆ ಕಾಲ ಬಿಟ್ಟು, ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ಸೋಂಪಿನ ಒಗ್ಗರಣೆ ಕೊಡಿ. ಜೊತೆಗೆ ತುಂಡರಿಸಿದ ಒಣ ಮೆಣಸು, ಲವಂಗದ ಎಲೆ, ಓಮ ಎಲ್ಲಾ ಸೇರಿಸಿ ಚಟಪಟಾಯಿಸಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಹಾಕಿ ಕೆದಕಬೇಕು. ನಂತರ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. ನಂತರ ತುಂಡರಿಸಿದ ಗೋಡಂಬಿ ಹಾಕಿ ಕೈಯಾಡಿಸಿ. ಜೊತೆಗೆ ಅಮ್ಚೂರ್‌ ಪುಡಿ, ಮಾವಿನ ಉಪ್ಪಿನಕಾಯಿ, ವೈಟ್‌ ಪೆಪ್ಪರ್‌ ಬೆರೆಸಿ ಕೆದಕಬೇಕು. ಕೊನೆಯಲ್ಲಿ ಉದ್ದುದ್ದಕ್ಕೆ, ತೆಳುವಾಗಿ ಹೆಚ್ಚಿ ಮ್ಯಾರಿನೇಟ್‌ ಗೊಳಿಸಿದ ಹಾಗಲ ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ ಕೊನೆಯಲ್ಲಿ  ಕ್ರೀಂ ತೇಲಿಬಿಟ್ಟು ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಚಿತ್ರದಲ್ಲಿರುವಂತೆ ಇದನ್ನು ಬಿಸಿ ಬಿಸಿ ಜೀರಾ ರೈಸ್‌ ಯಾ ಚಪಾತಿ ಜೊತೆ ಸವಿಯಲು ಕೊಡಿ.

AA-Mix-Pakora-(5)

ಮಿಕ್ಸ್ಡ್ ವೆಜ್ಬಜ್ಜಿ

ಸಾಮಗ್ರಿ : ಗುಂಡಗೆ ಕತ್ತರಿಸಿದ ಬದನೆ, ಆಲೂ, ಈರುಳ್ಳಿ, ಸೀಮೆಬದನೆ, ಸೌತೆ, ಕ್ಯಾಪ್ಸಿಕಂ, ಉದ್ದನೇ ಬಜ್ಜಿ ಮೆಣಸಿನ ಬಿಲ್ಲೆಗಳು, ಅಕ್ಕಿಹಿಟ್ಟು, ಕಡಲೆಹಿಟ್ಟು (ತಲಾ 100 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರಿಶಿನ, ಧನಿಯಾಪುಡಿ, ಗರಂಮಸಾಲ, ಓಮ, ಕರಿಯಲು ಎಣ್ಣೆ.

ವಿಧಾನ : ಗುಂಡಗೆ ಹೆಚ್ಚಿದ ಬಿಲ್ಲೆ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನು ಒಂದು ಬೇಸನ್ನಿಗೆ ಹಾಕಿ, ತುಸುವೇ ನೀರು ಬೆರೆಸಿ, ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿ. ಈ ಎಲ್ಲಾ ಬಿಲ್ಲೆಗಳನ್ನು ಒಂದೊಂದಾಗಿ ಅದರಲ್ಲಿ ಅದ್ದಿ, ಕಾದ ಎಣ್ಣೆಗೆ ಹಾಕಿ, ಹೊಂಬಣ್ಣ ಬರುವಂತೆ ಗರಿಗರಿಯಾಗಿ ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಬೇಕೆನಿಸಿದರೆ ಟೊಮೇಟೊ ಸಾಸ್‌, ಪುದೀನಾ ಚಟ್ನಿ ಜೊತೆ, ಬಿಸಿ ಬಿಸಿ ಕಾಫಿ/ಟೀ ಸಹಿತ ಸವಿಯಲು ಕೊಡಿ!

ಸಂಜೆ ಹೊತ್ತಿಗೆ ಮಳೆ ಬರುವಾಗ ಬಿಸಿ ಬಿಸಿಯಾಗಿ ಇಂಥ ಬಜ್ಜಿ, ಕಟ್ಲೆಟ್ಇದ್ದರೆ ಎಂಥ ಸೊಗಸಲ್ಲವೇ……?

AA-Arbi-cutlet-(3)

ಸೀಮೆಗೆಡ್ಡೆಯ ಕಟ್ಲೆಟ್

ಸಾಮಗ್ರಿ : 300 ಗ್ರಾಂ ಸೀಮೆಗೆಡ್ಡೆ, 100 ಗ್ರಾಂ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುರಿದು ಪುಡಿ ಮಾಡಿದ ಜೀರಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಇಂಗು, ಜೀರಿಗೆ, ಸೋಂಪು, ಬ್ರೆಡ್‌ ಕ್ರಂಬ್ಸ್, ಅರಿಶಿನ, ಓಮ, ತುಸು ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ.

ವಿಧಾನ : ಮೊದಲು ಸೀಮೆಗೆಡ್ಡೆ ಬೇಯಿಸಿ, ಸಿಪ್ಪೆ ಸುಲಿದು, ಚೆನ್ನಾಗಿ ಕಿವುಚಿಕೊಳ್ಳಿ. ಇದಕ್ಕೆ ಬ್ರೆಡ್‌ ಕ್ರಂಬ್ಸ್ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿ ಹಾಕಿ, ತುಪ್ಪ ಬೆರೆಸಿ ಪಕೋಡ ಮಿಶ್ರಣದಂತೆ ಕಲಸಿಡಿ. ನಂತರ ಇದರಿಂದ ಸಣ್ಣ ಸಣ್ಣ ಉಂಡೆಗಳಾಗಿಸಿ, ಚಪ್ಪಟೆಯಾಗಿ ತಟ್ಟಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ. ಅಳ್ಳಕವಾದ ತವಾ ಮೇಲೆ ಹಾಕಿ, ದ್ರವ ರೂಪದ ತುಪ್ಪ ಬಿಡುತ್ತಾ ಎರಡೂ ಬದಿ ಹದನಾಗಿ ಬೇಯಿಸಿ. ಬಿಸಿ ಬಿಸಿಯಾದ ಇದನ್ನು ಟೊಮೇಟೊ ಕೆಚಪ್‌ ನೊಂದಿಗೆ ಸವಿಯಲು ಕೊಡಿ. ಆಲೂ ಕಟ್ ಲೆಟ್‌ ಗಿಂತ ಇದು 100% ಆರೋಗ್ಯಕರ.

AA-achari-rajma-kichdi-with-wadi-(1)

ಸ್ಪೆಷಲ್ ರಾಜ್ಮಾ ಖಿಚಡಿ

ಸಾಮಗ್ರಿ : 250 ಗ್ರಾಂ ಅಕ್ಕಿ, 100 ಗ್ರಾಂ ಹೆಸರುಬೇಳೆ, 75 ಗ್ರಾಂ ಸೋಯಾ ಚಂಕ್ಸ್, 100 ಗ್ರಾಂ ರಾಜ್ಮಾ (ಒಣ ಹಣ್ಣುರುಳಿಕಾಯಿ ಬೀಜ, ಇದನ್ನು ದಿನವಿಡೀ ನೆನೆಸಿ, ಮಾರನೇ ದಿನ ಬೇರೆಯಾಗಿ ಬೇಯಿಸಿ), 150 ಗ್ರಾಂ ಬ್ರೋಕನ್‌ ವೀಟ್‌, ಹೆಚ್ಚಿದ 4-5 ಹಸಿಮೆಣಸು, ಈರುಳ್ಳಿ, ಟೊಮೇಟೊ, ಕರಿಬೇವು, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಅರಿಶಿನ, 1-2 ಲವಂಗದೆಲೆ, 1 ಸೌಟು ಎಣ್ಣೆ, ಇಂಗು, ಒಗ್ಗರಣೆಗೆ ಜೀರಿಗೆ, ಕಡಲೆಬೀಜ, ಸೋಂಪು, ಇಡಿಯಾದ 1-2 ಒಣ ಮೆಣಸು.

ವಿಧಾನ : ಮೊದಲು ಬಿಸಿ ನೀರಿನಲ್ಲಿ ಸೋಯಾ ಚಂಕ್ಸ್ ನೆನೆಹಾಕಿ, 15 ನಿಮಿಷ ಬಿಟ್ಟು ಅದನ್ನು ಹಿಂಡಿ ತೆಗೆದುಬಿಡಿ. ಕುಕ್ಕರ್‌ ನಲ್ಲಿ  ತುಸು ತುಪ್ಪ ಬಿಸಿ ಮಾಡಿ, ಹೆಸರು ಬೇಳೆ ಹಾಕಿ ಘಮ್ಮೆನ್ನುವಂತೆ ಹುರಿದು ಬೇರೆಯಾಗಿಡಿ. ಅದೇ ಕುಕ್ಕರ್‌ ನಲ್ಲಿ ಎಣ್ಣೆ ಬಿಸಿ ಮಾಡಿ ಒಣ ಮೆಣಸಿನ ಸಮೇತ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಉಪ್ಪು, ಇತರ ಮಸಾಲೆ, ಸೋಯಾ, ಬೆಂದ ರಾಜ್ಮಾ, ನೀಟಾಗಿ ತೊಳೆದ ಬ್ರೋಕನ್‌ ವೀಟ್‌, ಹೆಸರು ಬೇಳೆ, ಅಕ್ಕಿ ಎಲ್ಲಾ ಹಾಕಿ, ನೀರು ಬೆರೆಸಿ (ಉದುರಾಗಿ ಬರುವಷ್ಟು). ಕುಕ್ಕರ್‌ ಮುಚ್ಚಳ ಮುಚ್ಚಿರಿಸಿ 3 ಸೀಟಿ ಬರುವಂತೆ ಕೂಗಿಸಿ. ಮುಚ್ಚಳ ತೆರೆದ ನಂತರ ಬಿಸಿಯಾಗಿ ಸವಿಯಲು ಕೊಡಿ. ಜೊತೆಗೆ ಈರುಳ್ಳಿ, ಟೊಮೆಟೊ ರಾಯ್ತಾ, ಖಾರಾ ಬೂಂದಿ, ಆಲೂ ಚಿಪ್ಸ್ ಇರಲಿ.

ಮಳೆಗಾಲಕ್ಕೆ ರುಚಿ ಮಾತ್ರವಲ್ಲ, ಪೌಷ್ಟಿಕ ಆಹಾರ ಬೇಕು. ಹಾಗಾಗಿ ಇವನ್ನು ಟ್ರೈ ಮಾಡಿ ನೋಡಿ……!

AA-almodbutter-honey-banana-sandwich-(7)

ಬನಾನಾ ಸ್ಯಾಂಡ್ವಿಚ್

ಸಾಮಗ್ರಿ : 7-8 ಸ್ಯಾಂಡ್‌ ವಿಚ್‌ ಬ್ರೆಡ್‌ ಸ್ಲೈಸ್‌, ಅರ್ಧ ಕಪ್‌ ಬೆಣ್ಣೆ, 8-10 ಬಾದಾಮಿ, 2 ಮಾಗಿದ ಬಾಳೆಹಣ್ಣು, ರುಚಿಗೆ ತಕ್ಕಷ್ಟು ಜೇನುತುಪ್ಪ, ದಾಲ್ಚಿನ್ನಿ ಪುಡಿ, ವೈಟ್‌ ಪೆಪ್ಪರ್‌, 10-12 ಒಣದ್ರಾಕ್ಷಿ, ತುಪ್ಪದಲ್ಲಿ ಹುರಿದ ಒಂದಿಷ್ಟು ಬಾದಾಮಿ ತುಂಡು.

ವಿಧಾನ : ಮೊದಲು ಬಾದಾಮಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಬೆಣ್ಣೆ, ಜೇನುತುಪ್ಪ, ದಾಲ್ಚಿನ್ನಿ ಪುಡಿ, ವೈಟ್‌ ಪೆಪ್ಪರ್‌, ಚಿಟಕಿ ಉಪ್ಪು ಸೇರಿಸಿ, ಮತ್ತೆ ಮಿಕ್ಸಿಯಲ್ಲಿ 25 ಸೆಕೆಂಡ್‌ ಓಡಿಸಿ. ಬ್ರೆಡ್‌ ಸ್ಲೈಸ್‌ ನ್ನು ತ್ರಿಕೋನಾಕಾರವಾಗಿ ಕತ್ತರಿಸಿ, ಈ ಮಿಶ್ರಣವನ್ನು ಅದರ ಒಂದು ಬದಿಗೆ ನೀಟಾಗಿ ಸವರಿಡಿ. ಇದರ ಮೇಲೆ ಬಾಳೆ ಬಿಲ್ಲೆ, ದ್ರಾಕ್ಷಿ ಬರಲಿ. ಇದರ ಮೇಲೆ ಬೆಣ್ಣೆ ಮಿಶ್ರಣ ಸವರಿದ ಮತ್ತೊಂದು ಸ್ಲೈಸ್‌ ನ್ನು ಮುಚ್ಚಿರಿಸಿ. ಹೀಗೆ ಎಲ್ಲಾ ಸ್ಯಾಂಡ್‌ ವಿಚ್‌ ರೆಡಿ ಮಾಡಿ, ಹುರಿದ ಬಾದಾಮಿ ಚೂರುಗಳೊಂದಿಗೆ ಸವಿಯಲು ಕೊಡಿ.

AA-sabudana-bites-(14)

ಸಾಬೂದಾಣಿ ಕಟ್ಲೆಟ್

ಸಾಮಗ್ರಿ : 1 ಕಪ್‌ ಸಾಬೂದಾಣಿ (ಸಬ್ಬಕ್ಕಿ), 1 ದೊಡ್ಡ ಗಾತ್ರದ ಬೆಂದ ಆಲೂ, ಅರ್ಧ ಕಪ್‌ ಬ್ರೆಡ್‌ ಕ್ರಂಬ್ಸ್, 100 ಗ್ರಾಂ ತುರಿದ ಪನೀರ್‌, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಜೇನುತುಪ್ಪ, ಅಮ್ಚೂರ್‌ ಪುಡಿ, ಚಾಟ್‌ ಮಸಾಲ, ಕರಿಯಲು ಎಣ್ಣೆ.

ವಿಧಾನ : 2-3 ಗಂಟೆ ಕಾಲ ಸಾಬೂದಾಣಿ ನೆನೆಹಾಕಿ, ಅದನ್ನು ಹಿಂಡಿಕೊಳ್ಳಿ. ಇದರ ಅರ್ಧ ಭಾಗವನ್ನು ಮಿಕ್ಸಿಗೆ ಹಾಕಿ. ಜೊತೆಗೆ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಕೊ.ಸೊಪ್ಪು ಹಾಕಿ ನುಣ್ಣಗೆ ತಿರುವಿಕೊಳ್ಳಿ. ಉಳಿದ ಸಾಬೂದಾಣಿಗೆ ಪನೀರ್‌, ಮಸೆದ ಆಲೂ, ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಮಿಶ್ರಗೊಳಿಸಿ. ಈ ಮಿಶ್ರಣದಿಂದ ಉಂಡೆ ಮಾಡಿ, ಕಟ್‌ ಲೆಟ್‌ ಆಕಾರ ಕೊಡಿ. ಇದನ್ನು ಸಾಬೂದಾಣಿ ಪೇಸ್ಟ್ ನಲ್ಲಿ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಜೇನಿಗೆ ಚಾಟ್‌ ಮಸಲಾ, ನಿಂಬೆರಸ ಬೆರೆಸಿ, ಪ್ರತಿ ಕಟ್ ಲೆಟ್‌ ಮೇಲೂ ಸಿಂಪಡಿಸಿ.

ಮಾಮೂಲಿ ಅಡುಗೆಗಿಂತ ತುಸು ವಿಭಿನ್ನವಾದ ಇಂಥ ವಿಶಿಷ್ಟ ಕಟ್ಲೆಟ್‌, ಪನೀರ್ಡಿಶೆಸ್ತಯಾರಿಸಿ ಸವಿಯಿರಿ……!

AA-paneer-cubes-(4)

ಸ್ಪೆಷಲ್ ಪನೀರ್ಕ್ಯೂಬ್ಸ್

ಸಾಮಗ್ರಿ : 250 ಗ್ರಾಂ ಪನೀರ್‌ ಕ್ಯೂಬ್ಸ್, ರುಚಿಗೆ ತಕ್ಕಷ್ಟು ಬೆಣ್ಣೆ, ಅರಿಶಿನ, ಹುರಿದು ಪುಡಿ ಮಾಡಿದ ಎಳ್ಳು, ನಿಂಬೆರಸ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ರೀಫೈಂಡ್‌ ಆಯಿಲ್‌, ಜೇನುತುಪ್ಪ, ಉಪ್ಪು, ಮೆಣಸು, ಒಂದಿಷ್ಟು ಟೂತ್‌ ಪಿಕ್ಸ್.

ವಿಧಾನ : ಒಂದು ಬಟ್ಟಲಲ್ಲಿ ಅರಿಶಿನ, ಬೆಣ್ಣೆ, ಎಳ್ಳು ಪುಡಿ, ಉಪ್ಪು, ಮೆಣಸು ಹಾಕಿ ಮಿಶ್ರಣ ಮಾಡಿ, ಅದರಲ್ಲಿ ಪನೀರ್‌ ಕ್ಯೂಬ್ಸ್ ಹಾಕಿ ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ, 1 ಗಂಟೆ ಕಾಲ ಮ್ಯಾರಿನೇಟ್‌ ಆಗಲು ಬಿಡಿ. ಒಂದು ನಾನ್‌ ಸ್ಟಿಕ್‌ ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದರಲ್ಲಿ ಬೆಳ್ಳುಳ್ಳಿ ಬಾಡಿಸಿಕೊಂಡು, ಪನೀರ್‌ ಕ್ಯೂಬ್ಸ್ ಹಾಕಿ ಕೆದಕಬೇಕು. ಇದನ್ನು ಕೆಳಗಿಳಿಸಿ. ಜೇನಿಗೆ ತುಸು ಉಪ್ಪು, ಮೆಣಸು, ನಿಂಬೆರಸ ಬೆರೆಸಿಕೊಂಡು ಪನೀರ್‌ ಕ್ಯೂಬ್ಸ್ ಮೇಲೆ ಸಿಂಪಡಿಸಿ, ಟೂತ್‌ ಪಿಕ್ಸ್ ಸಿಗಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ