ನಟಿ ಸಮಂತಾ ರುತ್ ಪ್ರಭು ಬುಧವಾರ ಚೆನ್ನೈನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ.
ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರ ಕಾರ್ಯಗಳ ನಡುವೆ ದಳಪತಿ ವಿಜಯ್ ಅವರನ್ನು ಸಮಂತಾ ಭೇಟಿ ಮಾಡಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಹನಟನನ್ನು ನೋಡುವುದು ಬಹಳ ಸಂತೋಷ ತಂದಿದೆ ಎಂದಿರುವ ಸಮಂತಾ, “ನಾನು ಇಂದು ಚೆನ್ನೈಗೆ ಬಂದಾಗ, ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದೇನೆ ಎಂಬ ಖುಷಿ ಬೇರೆ. ವಿಜಯ್ ಸರ್ ಕೇವಲ ಬೆಳ್ಳಿತೆರೆಯ ನಾಯಕನಾಗಿ ಉಳಿಯುವ ವ್ಯಕ್ತಿಯಲ್ಲ ಎಂಬ ಭಾವನೆ ನನಗೆ ಯಾವಾಗಲೂ ಇತ್ತು. ಅವರ ವ್ಯಕ್ತಿತ್ವ, ಅವರಲ್ಲಿರುವ ಶಕ್ತಿ ಮತ್ತು ಜನರು ಅವರ ಮೇಲೆ ತೋರುವ ಪ್ರೀತಿ ನೋಡಿದಾಗ ಅವರು ಇನ್ನೂ ದೊಡ್ಡ ಸಾಧನೆಗಾಗಿ ಬಂದವರು ಎಂಬ ನಂಬಿಕೆ ಇತ್ತು” ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿಕೊಂಡಿದ್ದಾರೆ.
ಈಗಾಗಲೇ ಸಿನಿಮಾ ಕ್ಷೇತ್ರ ಬಿಟ್ಟು, ಹೊಸ ಸವಾಲುಗಳು ಮತ್ತು ಜವಾಬ್ದಾರಿಗಳಿಂದ ಕೂಡಿರುವ ರಾಜಕೀಯಕ್ಕೆ ಕಾಲಿಡುವುದು ದೊಡ್ಡ ಧೈರ್ಯದ ಕೆಲಸ. ವಿಜಯ್ ಸರ್ ಆ ಧೈರ್ಯ ತೋರಿಸಿದ್ದಾರೆ. ಅವರು ಕೇವಲ ಒಂದು ಹುದ್ದೆಯನ್ನು ಅಲಂಕರಿಸುತ್ತಿರುವುದಕ್ಕಿಂತಲೂ ಹೆಚ್ಚಿನ ಉದ್ದೇಶದೊಂದಿಗೆ ಈ ಕ್ಷೇತ್ರಕ್ಕೆ ಬಂದಿದ್ದಾರೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಸಾಧನೆ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ ಸಮಂತಾ.
ಸಮಂತಾ ಮತ್ತು ವಿಜಯ್ ಈ ಹಿಂದೆ ‘ಕತ್ತಿ’, ‘ಥೇರಿ’ ಹಾಗೂ ‘ಮೆರ್ಸಲ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಇವರಿಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.





