ಕಥೆ – ಬಿ.ಟಿ. ನಾಯಕ್
ಪರಸ್ಪರ ಪ್ರೀತಿ ಅನುರಾಗದಿಂದ ಒಂದಾದ ಕಾವ್ಯಾ ಮತ್ತು ಮಲ್ಲೇಶ್ ಮುಂದೆ ಅನಿವಾರ್ಯವಾಗಿ ಅಗಲಿದ್ದೇಕೆ…..? ನಂತರ ನಡೆದಿದ್ದಾದರೂ ಏನು……?
ಕಾವ್ಯಾ ಮತ್ತು ಮಲ್ಲೇಶ್ ಸುಪ್ರಸಿದ್ಧ ಐಟಿ ಕಂಪನಿಯ ಒಂದೇ ತಂಡದಲ್ಲಿ ಇದ್ದರು. ಅವರು ಜೊತೆಗೆ ಕೆಲಸ ಮಾಡುತ್ತಿರುವಾಗ ಕಛೇರಿಯ ವಿಷಯಗಳ ಚರ್ಚೆ ಮಾತ್ರ ಮಾಡುತ್ತಿದ್ದರು. ಕಾಲ ಕ್ರಮೇಣ ಅವರ ಚರ್ಚೆಗಳು ಕೊಂಚ ಬದಲಾದ. ಈಗ ತಮ್ಮ ಕುಟುಂಬದ ಆಗುಹೋಗುಗಳನ್ನು ಚರ್ಚಿಸತೊಡಗಿದರು.
ಹೀಗಾಗಿ, ಅವರಿಬ್ಬರೂ ಪರಸ್ಪರ ಹತ್ತಿರವಾದರು ಮತ್ತು ಸಂಕೋಚವಿಲ್ಲದೆಯೇ ಮಾತಾಡುತ್ತಿದ್ದರು. ಅವರ ನಡೆ ಹಾಗೆ ನಿರಂತರವಾಗಿ ಸಾಗಿದಾಗ, ತಮ್ಮ ವೈಯಕ್ತಿಕ ವಿಚಾರಗಳ ಪ್ರಾಧಾನ್ಯತೆ ಮೂಡಿದಾಗ ಮತ್ತು ತಮ್ಮ ಆಸೆ ಆಕಾಂಕ್ಷೆಗಳನ್ನು ವಿನಿಮಯ ಮಾಡಿಕೊಳ್ಳುತ್ತಲಿದ್ದರು. ಅನಂತರ, ಅವರಿಬ್ಬರಲ್ಲಿ ಪ್ರೇಮಾನುರಾಗ ಅಂಕುರವಾಯಿತು.
ಈಗ ಅವರು ಒಬ್ಬರನ್ನೊಬ್ಬರು ಬಿಟ್ಟು ಒಂದು ಕ್ಷಣ ಕೂಡಾ ಇರುತ್ತಿರಲಿಲ್ಲ. ಯಾವಾಗಲಾದರೂ ಒಬ್ಬರು ರಜೆಯ ಮೇಲೆ ಹೋಗುವ ಪ್ರಸಂಗ ಬಂದಾಗ, ಅಥವಾ ಕಂಪನಿಯೇ ರಜೆ ಘೋಷಿಸಿದಾಗ, ಒಟ್ಟಿಗೆ ಸೇರಲಾಗದೇ ಪರಿತಪಿಸುತ್ತಿದ್ದರು. ಅವರ ರಜೆ ಮುಗಿದು ಉದ್ಯೋಗಕ್ಕೆ ಹಾಜರು ಆದಾಗ, ತಕ್ಷಣವೇ ಇಬ್ಬರೂ ಸೇರಿ ನಗು ಮೊಗದಿಂದ ಶುಭಾಶಯಗಳನ್ನು ಕೋರುತ್ತಾ ಅವರವರ ಕುಟುಂಬದ ಕ್ಷೇಮ ಸಮಾಚಾರ ಕೇಳುತ್ತಿದ್ದರು.
ಕೆಲವು ದಿನಗಳಾದ ಮೇಲೆ, ಅವರಿಬ್ಬರೂ ಒಂದು ನಿರ್ಧಾರಕ್ಕೆ ಬಂದು, ತಮ್ಮ ಮನಸ್ಸಿನಾಳದ ಪ್ರೇಮ ಪ್ರಸ್ತಾವನೆ ಪರಸ್ಪರ ವಿನಿಮಯ ಮಾಡಿಕೊಂಡರು. ಆಮೇಲೆ ಅದು ಹೊಂದಾಣಿಕೆಯಾದ ಮೇಲೆ ತಮ್ಮ ತಮ್ಮ ಕುಟುಂಬದವರಿಗೆ ತಮ್ಮೊಲವಿನ ಬಗ್ಗೆ ಹೇಳಿಕೊಂಡು, ಮದುವೆಯ ಪ್ರಸ್ತಾಪದವರೆಗೆ ತಂದರು. ಇವರು ಅರಿಕೆ ಮತ್ತು ಅನ್ಯೋನ್ಯತೆಯ ತಾಳಮೇಳ ನೋಡಿ ಮನೆಯವರು ಫಿದಾ ಆಗಿ ಒಪ್ಪಿಯೇಬಿಟ್ಟರು. ಆಗ ಇವರಿಗೆ ಸಿಹಿ ಮುಹೂರ್ತ ಹತ್ತಿರವಾಯಿತು. ಅದರ ಫಲಶೃತಿ ದೊರಕಿ ನಿಶ್ಚಿತಾರ್ಥ ನಡೆದುಹೋಯಿತು. ಮುಂದೆ ಕೆಲವು ದಿನಗಳಲ್ಲಿ ಹಸೆಮಣೆಯ ಭಾಗ್ಯ ಕೂಡಾ ಒದಗಿ ಬಂದಾಗ, ಅವರ ಗುರುಹಿರಿಯರು ಮತ್ತು ಆಪ್ತರು ಆಶೀರ್ದಿಸಿ, ಅವರ ಮದುವೆ ಕಾರ್ಯದಲ್ಲಿ ಭಾಗಿಯಾದರು.
ಈಗ ಯುವ ಪ್ರೇಮಿಗಳು ಆಕಾಶದಲ್ಲಿ ಹಾರಾಡುವ ಸ್ವಚಂದ ಬಾನಾಡಿಗಳಂತೆ ಸಂಪೂರ್ಣ ಸ್ವೇಚ್ಛೆಯಾಗಿ ಮಧುಚಂದ್ರ ಇತ್ಯಾದಿ ಮುಗಿಸಿಕೊಂಡು ಬಂದು, ತಮ್ಮ ಉದ್ಯೋಗಗಳಿಗೆ ಹಾಜರಾದರು. ಆದರೂ ಕಛೇರಿಯಲ್ಲಿ ಏನಾದರೂ ನೆಪ ಮಾಡಿಕೊಂಡು ಅವರು ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಊಟದ ಸಮಯದಲ್ಲಿ ಹೆಚ್ಚಿನ ಅವಧಿ ಪಡೆದು, ಮುಸು ಮುಸು ನಗುತ್ತಾ, ಕಣ್ಸನ್ನೆ ಮಾಡುತ್ತಾ ನಲಿಯುತ್ತಾ ಇರುತ್ತಿದ್ದರು.
ಅವರು ಪ್ರಣಯ ರಾಗಗಳ ಜೊತೆಗೆ, ಉದ್ಯೋಗವನ್ನು ಶ್ರದ್ಧೆಯಿಂದ ಮತ್ತು ಅಚ್ಚುಕಟ್ಟಾಗಿ ತಮ್ಮ ಮೇಲಧಿಕಾರಿಗಳಿಗೆ ಒಪ್ಪಿಗೆಯಾಗುವಂತೆ ಮಾಡುತ್ತಿದ್ದರಿಂದ, ಅವರಿಗೆ ಯಾವ ಅಡೆತಡೆಗಳಿರಲಿಲ್ಲ.
ಮುಂದೆ ಸಮಯ ಕಳೆದಂತೆ, ಕಾವ್ಯಾಗೆ ಏಕೋ ತನ್ನ ಆರೋಗ್ಯದಲ್ಲಿ ಋಣಾತ್ಮಕ ಬದಲಾವಣೆಯನ್ನು ಗಮನಿಸಿಕೊಂಡಳು. ಆದರೆ, ಆಕೆ ಕಿಂಚಿತ್ತೂ ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಅಷ್ಟೇ ಏಕೆ ಮಲ್ಲೇಶನಿಗೂ ಕೂಡ ಹೇಳಲಿಲ್ಲ. ಈಗ ಸದ್ಯಕ್ಕೆ ಅದನ್ನು ಹೇಳುವುದು ಬೇಡ ಎಂಬುದನ್ನು ತನ್ನ ಮನಸ್ಸಿನಾಳಕ್ಕೆ ಇಟ್ಟುಕೊಂಡಳು. ಆಮೇಲೆ ಒಂದು ದಿನ ನೆಪ ಹೂಡಿಕೊಂಡು ಮಲ್ಲೇಶನಿಗೆ, “ನನ್ನಮ್ಮ ತವರಿಗೆ ಬರಲು ಹೇಳಿದ್ದಾಳೆ, ಹಾಗಾಗಿ ನಾನು ಕೆಲವು ದಿನಗಳ ಮಟ್ಟಿಗೆ ಅಲ್ಲಿಗೆ ಹೋಗಿ ಬರುತ್ತೇನೆ,” ಎಂದು ಹೇಳಿದಳು.
“ಅದೇನು ವಿಷಯ….?” ಎಂದು ಅವನು ನೊಂದ ಮನಸ್ಸಿನಿಂದ ಕೇಳಿದ.
“ನನಗೆ ತಿಳಿದಿಲ್ಲ. ಆದರೆ ನಾಲ್ಕೈದು ದಿನಗಳಲ್ಲಿ ಮರಳಿ ಬರುತ್ತೇನೆ,” ಎಂದಳು.
“ನಾನೂ ರಜೆ ಹಾಕಿ ಬರಲೇ…..?” ಎಂದು ಕೇಳಿದ.
“ಈಗ ಬೇಡ, ಮುಂದಿನ ದಿನಗಳಲ್ಲಿ ಇಬ್ಬರೂ ಸೇರಿ ಒಂದು ವಾರ ಅಥವಾ ಹತ್ತು ದಿನ ರಜೆ ಹಾಕಿ ಅಲ್ಲಿಯೇ ಕಾಲ ಕಳೆಯೋಣ,” ಎಂದಳು.
“ಸರಿ ಹೋಗಿ ಬಾ….” ಎಂದರೂ, “ಆದಷ್ಟು ಬೇಗ ಬಂದುಬಿಡು,” ಎಂದು ಹೇಳಲು ಅವನು ಮರೆಯಲಿಲ್ಲ.
ಈ ಪ್ರಕಾರ ಕಾವ್ಯಾ ತನ್ನ ತವರಿಗೆ ಹೋದಳು. ಇತ್ತ ಮಲ್ಲೇಶ್ ಕಛೇರಿ ಕೆಲಸದ ಹೊರತಾಗಿ ಕಾವ್ಯಾಳ ನೆನಪು ಮಾಡಿಕೊಂಡು ವಿಚಲಿತಗೊಳ್ಳತೊಡಗಿದ. ಹಾಗೂ ಹೀಗೂ ಕಾಲ ಕಳೆಯುವುದರಲ್ಲಿ ಮುಂದೊಂದು ದಿನ ಕಾವ್ಯಾ ವಾಪಸ್ಸಾಗಿ, ಉದ್ಯೋಗಕ್ಕೆ ಹಾಜರಾದಳು.
ಅವಳನ್ನು ಕೂಲಂಕಷವಾಗಿ ಗಮನಿಸಿದ ಮಲ್ಲೇಶ್, “ನೀನೇಕೆ ನರಪೇತಲದಂತೆ ಆಗಿದ್ದೀಯಾ…? ಆರೋಗ್ಯದಲ್ಲಿ ಏನಾದರೂ ತೊಂದರೆ ಇದೆಯಾ…..?” ಎಂದು ಕಕ್ಕುಲತೆಯಿಂದ ಕೇಳಿದ.
“ಹಾಗೇನೂ ಇಲ್ಲ. ಸಾಮಾನ್ಯವಾಗಿ ಹೆಂಗಸರಿಗೆ ಏನಾದರೂ ಒಂದು ಇದ್ದೇ ಇರುತ್ತೆ ಅಷ್ಟೇ,” ಎಂದು ಹಾರಿಕೆಯ ಉತ್ತರ ನೀಡಿದಳು.
“ಹಾಗೇನಾದರೂ ನಿನಗೆ ಕಷ್ಟವಾಗಿದ್ದರೆ, ಕೆಲವು ದಿನ ವಿಶ್ರಾಂತಿ ತಗೋ,” ಎಂದ.
“ಬೇಡ, ಅದರ ಅವಶ್ಯಕತೆ ಇಲ್ಲ…..” ಎಂದು ಅದರ ಬಗ್ಗೆ ಚರ್ಚಿಸದೆ ವಿಷಯಾಂತರ ಮಾಡಿದಳು. ಮಲ್ಲೇಶನೂ ಮುಂದೆ ಏನೂ ಹೇಳದೆ, ಕೇಳದೆ ಸುಮ್ಮನಾದ.
ಆದರೆ ಅವಳ ಈ ಸ್ವಭಾವದಿಂದ ಅವನಿಗೆ ಏಕೋ ಅನುಮಾನ ಕಾಡಿತು. ಆದರೆ ಮತ್ತೇ ಮತ್ತೇ ಅದೇ ವಿಷಯ ಕೆದುಕಲು ಹೋಗಲಿಲ್ಲ. ಆದರೂ ಆಕೆಯ ಸ್ವಭಾವ ಮಿತಿಮೀರಿದ ವರ್ತನೆ ಎಂದು ಸಾರುತ್ತಿತ್ತು. ಮಲ್ಲೇಶ್ ಹತ್ತಿರ ಬಂದರೆ ಅವಳು ದೂರ ಸರಿಯುತ್ತಿದ್ದಳು. ಈ ರೀತಿಯ ವರ್ತನೆ ಅವನಿಗೆ ಅರ್ಥವಾಗಲಿಲ್ಲ. ಆದರೂ ಅವಳಿಗೆ ತೊಂದರೆ ಕೊಡದೆ, ದೂರವೇ ಇದ್ದು ಪ್ರೀತಿ ತೋರಿಸುತ್ತಿದ್ದ.
ಒಂದು ದಿನ ಮಲ್ಲೇಶ್ ತಮ್ಮ ಮದುವೆಯ ಪ್ರಮಾಣ ಪತ್ರಗಳನ್ನು ತರಲು ನೋಂದಣಿ ಕಾರ್ಯಾಲಯಕ್ಕೆ ಹೋಗಿ, ಅವುಗಳನ್ನು ಪಡೆದು ಮರಳುತ್ತಿದ್ದಾಗ ದಾರಿಯಲ್ಲಿ ಅವನ ಭಾಮೈದ ಪರಮೇಶಿ ಭೇಟಿಯಾಗಿ ಮಾತನಾಡಿಸಿದ.
“ಏನು ಭಾವಾ…. ಇವತ್ತು ಕಛೇರಿಗೆ ಹೋಗಿಲ್ವಾ…..?”
“ನಾನು ಕಛೇರಿಯಿಂದ ಅನುಮತಿ ಪಡೆದುಕೊಂಡು ಬಂದಿದ್ದೇನೆ. ಹಾಗಾಗಿ, ಇಲ್ಲಿಂದ ನೇರವಾಗಿ ಕಛೇರಿಗೆ ಹೋಗುವೆ,” ಎಂದ.
“ಅಕ್ಕಾ ಹೇಗಿದ್ದಾಳೆ…..?”
“ನಿನ್ನಕ್ಕ ಚೆನ್ನಾಗಿಯೇ ಇದ್ದಾಳೆ. ಆದರೆ ಮೊದಲಿನಂತೆ ಚುರುಕಾಗಿಲ್ಲ. ಅದು ಸರಿ ಅವಳು ನಿಮ್ಮಲ್ಲಿಗೆ ಬಂದಿದ್ದಾಗ ಹುಷಾರಾಗಿದ್ದಳು ತಾನೇ?” ಎಂದು ವಿಚಾರಿಸಿದ.
“ಭಾವಾ ನಿಮಗೆ ವಿಷಯ ತಿಳಿದಿಲ್ವಾ….?” ಎಂದು ಆಶ್ಚರ್ಯ ವ್ಯಕ್ತಪಡಿಸಿದ ಪರಮೇಶಿ.
“ಏನು ವಿಷಯ….?” ಎಂದ ಮಲ್ಲೇಶ್.
“ಅಕ್ಕಾ ಹೇಳಿಲ್ವಾ…..?” ಮತ್ತೆ ಅಚ್ಚರಿಯಿಂದ ಕೇಳಿದ.
“ಅದೇನು ವಿಷಯ ಹೇಳಬಾರದಾ….?” ಎಂದು ಮಲ್ಲೇಶ್ ಭಾಮೈದುನನ ಮೇಲೆ ರೇಗಿದ.
ಅವನು ನಿಧಾನವಾಗಿ, “ಅಕ್ಕನಿಗೆ ಗರ್ಭಪಾತವಾಯಿತು,” ಎಂದ.
“ಹೌದಾ…. ನನಗೆ ಗೊತ್ತೇ ಇಲ್ಲ! ಅವಳು ಈ ಬಗ್ಗೆ ನನಗೆ ಏನೂ ಹೇಳಲೇ ಇಲ್ವಲ್ಲ….” ಎಂದು ತುಸು ಜೋರಾಗಿ ಹೇಳಿದ.
“ಇದರ ಬಗ್ಗೆ ನನಗೇನು ಗೊತ್ತಿಲ್ಲ ಭಾವ…… ಆದರೆ ಒಂದಂತೂ ಸತ್ಯ. ಗರ್ಭಪಾತ ಮಾಡಿಕೊಳ್ಳುವ ನಿರ್ಧಾರದ ಸಂಪೂರ್ಣ ಹೊಣೆ ಅಕ್ಕನದೇ,” ಎಂದು ಪರಮೇಶಿ ಹೇಳಿದ.
ಈಗ ಮಲ್ಲೇಶ್ ನ ಕೋಪ ಮುಗಿಲಿಗೆ ಮುಟ್ಟಿತು. “ಏನು ಗರ್ಭಪಾತ ಮಾಡಿಸಿಕೊಂಡಳಾ….? ಅದನ್ನು ನೀವೇ ನೀವೇ ನಿರ್ಧರಿಸಿದಿರಾ….? ಈ ವಿಷಯಕ್ಕೂ ನನಗೂ ಸಂಬಂಧವೇ ಇಲ್ವಾ……?” ಎಂದು ಸಿಡುಕಿದ.
“ಅಯ್ಯೋ ಭಾವ ಕೋಪಗೊಳ್ಳಬೇಡಿ. ಇದರಲ್ಲಿ ನಮ್ಮ ಮನೆಯವರದೇನೂ ತಪ್ಪೋ, ಕೈವಾಡವೇ ಇಲ್ಲ. ಎಲ್ಲಾ ಅಕ್ಕನದೇ ನಿರ್ಧಾರ. ದಯಮಾಡಿ ಬೇರೇನೂ ಕೇಳಬೇಡಿ. ಅಕ್ಕ ಒತ್ತಡದಲ್ಲಿ ನಿರ್ಧಾರ ತೆಗೆದುಕೊಂಡಳು. ಅದರ ಬಗ್ಗೆ ವಿಶೇಷವಾಗಿ ನಮಗೇನೂ ತಿಳಿದಿಲ್ಲ,” ಎಂದು ಹೇಳಿದ ಪರಮೇಶಿ ಅಲ್ಲಿಂದ ಹೊರಟುಹೋದ.
ಕಾವ್ಯಾ ತನ್ನಿಂದ ದೂರ ಇರುವ ಕಾರಣ ಈಗವನಿಗೆ ತಿಳಿಯಿತು. ಆದರೆ ಅವನು ಗಂಭೀರನಾದ. ಆದರೆ ಒಳಗೊಳಗೇ ಕೋಪದಿಂದ ಕುದಿಯುತ್ತಿದ್ದ. ಅವನ ಮನಸ್ಸು ಆತಂಕದಿಂದ ಹೊಯ್ದಾಡುತ್ತಲೇ ಇತ್ತು. ಹೆಂಡತಿಯನ್ನು ಪ್ರಶ್ನಿಸಬೇಕೆಂದು ಎಷ್ಟೋ ಸಲ ಪ್ರಯತ್ನಿಸಿದ. ಆದರೆ ಅವನಿಗೆ ಕೇಳುವ ಧೈರ್ಯವಾಗಲೇ ಇಲ್ಲ. ಕಾವ್ಯಾ ಅವನಿಂದ ಯಾವಾಗಲೂ ದೂರ ಸರಿಯುತ್ತಿದ್ದಳು. ಹೀಗೆಯೇ ಇದ್ದರೆ ವಿಷಯ ಏನೆಂದು ತಿಳಿಯುವುದಿಲ್ಲ ಎಂದುಕೊಂಡ ಮಲ್ಲೇಶ್, ಅವಳಿಂದಲೇ ವಿಷಯ ಭೇದಿಸಬೇಕೆಂದು ನಿರ್ಧರಿಸಿದ.
ಅಂದು ರಾತ್ರಿ ಇಬ್ಬರೂ ಊಟ ಮುಗಿಸಿ, ಮಲಗಲು ಅಣಿಯಾದರು. ಕಾವ್ಯಾ ಯಾವುದೋ ಒಂದು ಆಂಗ್ಲ ಕಾದಂಬರಿಯನ್ನು ಮುಖಕ್ಕೆ ಅಡ್ಡ ಇಟ್ಟುಕೊಂಡು ಮಂಚದ ಒಂದು ಮೂಲೆಯಲ್ಲಿ ಕುಳಿತಿದ್ದಳು. ಮಲ್ಲೇಶ್ ಮಲಗಲು ಬೆಡ್ ಬಳಿ ಬಂದ. ಅದನ್ನು ಗಮನಿಸಿದ ಕಾವ್ಯಾ, ಅವನಿಗೆ ನಿದ್ದೆ ಬರುವ ತನಕ ಹಾಗೆಯೇ ಕುಳಿತುಕೊಂಡಿದ್ದಳು. ಸ್ವಲ್ಪ ಹೊತ್ತಾದ ಮೇಲೆ ಅವನು ನಿದ್ದೆ ಮಾಡಿದ್ದಾನೆಂದು ಖಾತ್ರಿ ಪಡಿಸಿಕೊಂಡು ಅವನ ಪಕ್ಕದಲ್ಲಿ ಮುಖ ತಿರುಗಿಸಿಕೊಂಡು ಮಲಗಿದಳು. ಅದೇ ಕ್ಷಣದಲ್ಲಿ ಮಲ್ಲೇಶ್ ಮೆಲ್ಲಗೆ ಅವಳನ್ನು ತಬ್ಬಿಕೊಂಡ. ಒಮ್ಮಿಂದೊಮ್ಮೆಲೆ ಕೋಪಗೊಂಡ ಕಾವ್ಯಾ,“ಏನು ಇದಕ್ಕೆಂದೇ ಕಾಯುತ್ತಿದ್ದೀರಾ…..? ನನಗೆ ಮೈಗೆ ಹುಷಾರಿಲ್ಲ ಎಂದು ನಿಮಗೆ ತಿಳಿದಿಲ್ಲವೇ….? ಅದೇಕೆ ಈ ರಾಕ್ಷಸೀ ಕೃತ್ಯ…..?” ಎಂದು ಜೋರಾಗಿ ಕಿರುಚಿದಳು.
ಮಲ್ಲೇಶ್ ದಿಗ್ಭ್ರಾಂತನಾದ. ಅವನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಮರುಕ್ಷಣವೇ ಅವನು ಅವಳಿಗೆ ವಿರುದ್ಧ ದಿಕ್ಕಿಗೆ ಮಲಗಿಕೊಂಡ. ಅವಳು ಹಾಗೆಯೇ ಮಾಡಿದಳು. ಆದರೆ ಇಬ್ಬರೂ ಆ ರಾತ್ರಿ ನಿದ್ದೆ ಮಾಡಲಿಲ್ಲ. ಅವರಿಬ್ಬರೂ ಕಣ್ಮುಚ್ಚಿ ಮಲಗಿದ್ದರೂ, ಇಬ್ಬರ ಮನಸ್ಸು ಮಾತ್ರ ಎಚ್ಚೆತ್ತುಕೊಂಡು ಚಿಂತಿಸುತ್ತಲೇ ಇತ್ತು.
ಮಾರನೇ ದಿನ ಮಲ್ಲೇಶ್ ಬೆಳಗ್ಗೆ ಎದ್ದು ಮುಖ ತೊಳೆದುಕೊಳ್ಳಲು ಬಾತ್ ರೂಮಿಗೆ ಹೋಗಬೇಕು ಎನ್ನುವಷ್ಟರಲ್ಲಿ ಅವನ ಗಮನ ಕಾವ್ಯಾಳ ಕಡೆಗೆ ಹೋಯಿತು.
ಅವಳು ಲಗೇಜಿನೊಂದಿಗೆ ತಯಾರಾಗಿದ್ದಳು. ಆ ಬಗ್ಗೆ ಅವನು ಏನೂ ಕೇಳಲೇ ಇಲ್ಲ. ತನ್ನ ಪಾಡಿಗೆ ತಾನು ಮುಖ ತೊಳೆದುಕೊಂಡು ಕೋಣೆಯೊಳಗೆ ಹೋದ. ಅಷ್ಟರಲ್ಲಿ ಕಾವ್ಯಾ ಬ್ಯಾಗ್ ಸಹಿತ ಮನೆಯ ಹೊರಗಡೆ ಆಟೋಗಾಗಿ ಕಾಯುತ್ತಿದ್ದಳು. ಮಲ್ಲೇಶನಿಗೆ ವಿಚಿತ್ರ ಎನಿಸಿದರೂ, ಅವನು ಅವಳ ಗೋಜಿಗೆ ಹೋಗಲೇ ಇಲ್ಲ.
ಆ ಸಮಯದಲ್ಲಿ ಅವನಿಗೊಂದು ಫೋನ್ ಕರೆ ಬಂತು. ವಿಚಿತ್ರ ಎಂದರೆ, ಆ ಕರೆ ಕಾವ್ಯಾಳಿಂದಲೇ ಬಂದಿತ್ತು! ಅವಳು ಮನೆಗೆ ಹೊರಗಿನಿಂದಲೇ ಅವನೊಂದಿಗೆ ಮಾತಾಡ ಬಯಸಿ ಕರೆ ಮಾಡಿದ್ದಳು. ಆಗ ಮಲ್ಲೇಶ್ ಕರೆ ಸ್ವೀಕರಿಸಿ, “ಏನು ವಿಷಯ…..?” ಎಂದು ಕೇಳಿದ.
“ನನ್ನ ಆರೋಗ್ಯ ಸರಿ ಇಲ್ಲ. ನನಗೆ ಇಲ್ಲಿ ವಿಶ್ರಾಂತಿ ಸಿಗುತ್ತಿಲ್ಲ. ಹಾಗಾಗಿ ನಾನು ಅಮ್ಮನ ಮನೆಗೆ ಹೋಗುತ್ತಿದ್ದೇನೆ,” ಎಂದು ಹೇಳಿದಳು.
“ಸರಿ ನಿನ್ನ ಇಷ್ಟ,” ಎಂದು ಅವನು ಹೇಳುತ್ತಿದ್ದಂತೆ, ಮರು ಮಾತನಾಡದೇ ಕರೆಯನ್ನು ಸ್ಥಗಿತಗೊಳಿಸಿದಳು. ನಂತರ ಮಲ್ಲೇಶ್ ಗೆ ಹೊರಗಿದ್ದ ಆಟೋ ಶಬ್ದ ಕೇಳಿಸಿತು. ಬಹುಶಃ ಕಾವ್ಯಾ ಆಟೋದಲ್ಲಿ ಹೋಗಿರಬೇಕು ಎಂದೆನಿಸಿ, ಹೊರಗೆ ಹೋಗಿ ನೋಡಿದ. ಅವನ ಊಹೆ ಸರಿಯಾಗೇ ಇತ್ತು. ಅವಳು ಆಟೋದಲ್ಲಿ ಅದಾಗಲೇ ಹೊರಟು ಹೋಗಿದ್ದಳು.
ಆ ದಿನ ಮಲ್ಲೇಶ್ ಗೆ ನೆಮ್ಮದಿಯೇ ಇರಲಿಲ್ಲ. ಅದಕ್ಕೆ ಕಾರಣ, ಕಾವ್ಯಾಳ ಲಂಗು ಲಗಾಮಿಲ್ಲದ ನಿರ್ಧಾರಗಳು ಅವನನ್ನು ಧೃತಿಗೆಡಿಸಿದ್ದವು. ಹಾಗಾಗಿ ಅಂದು ಅವನು ಕಛೇರಿಗೆ ರಜೆ ಹಾಕಿ ಮನೆಯಲ್ಲಿಯೇ ಉಳಿದುಕೊಂಡ. ಅವನಿಗೆ ಒಂಟಿತನ ಕಾಡತೊಡಗಿತು. ಕಾವ್ಯಾ ಅವನ ಬಳಿ ಮಾತನಾಡದೇ ಇದ್ದರೂ, ಕಛೇರಿಯಲ್ಲಿದ್ದಾಗ ಸಹೋದ್ಯೋಗಿಗಳ ಜೊತೆ ಸಮಯ ಕಳೆದದ್ದು ಗೊತ್ತಾಗುತ್ತಿರಲಿಲ್ಲ. ಈಗ ಮನೆಯಲ್ಲಿ ಹೇಳುವವರು, ಕೇಳುವವರು ಯಾರೂ ಇರಲಿಲ್ಲ. ಕಾವ್ಯಾಳ ವಿಷಯ ತಲೆಯಲ್ಲಿ ಸುತ್ತುತ್ತಲೇ ಇತ್ತು. ಇಂದವಳು ಕಾದ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ್ದಳು. ಅವನು ಮಾನಸಿಕವಾಗಿ ಒಳಗೊಳಗೆ ಕುದಿಯತೊಡಗಿದ. ಹಾಗೂ ಹೀಗೂ ಅವನು ಆ ದಿನ ಕಳೆದ.
ಮರುದಿನ ಮಲ್ಲೇಶ್ ಮಾಮೂಲಿನಂತೆ ಕಛೇರಿಗೆ ಹೋದ. ಅಲ್ಲಿ ಅವನಿಗೊಂದು ಆಶ್ಚರ್ಯದ ಸುದ್ದಿ ಕಾದಿತ್ತು. ಅವರ ಮ್ಯಾನೇಜರ್ ಕೌಶಿಕ್, “ಮಿ. ಮಲ್ಲೇಶ್, ಅದೇಕೆ ನಿಮ್ಮ ಹೆಂಡತಿ ರಾಜೀನಾಮೆ ಕೊಟ್ಟರು?” ಎಂದು ಕೇಳಿದರು.
“ಹೌದಾ…. ನನಗೆ ಗೊತ್ತಿಲ್ಲ ಸಾರ್. ಆ ಬಗ್ಗೆ ಅವಳು ನನ್ನ ಬಳಿ ಚರ್ಚಿಸಿಲ್ಲ,” ಎಂದ.
“ಇದೇನಿದು….? ಪತಿ ಪತ್ನಿಯರಲ್ಲಿ ಇಂಥ ವಿಷಯಗಳು ಚರ್ಚೆಯಾಗದೆ ಇರುತ್ತಾ….?”
“ಇಲ್ಲ ಸಾರ್, ನಿಜವಾಗಿಯೂ ನನಗೆ ತಿಳಿದಿಲ್ಲ. ಕಾವ್ಯಾ ನಿಮಗೆ ರಾಜೀನಾಮೆಗೆ ಕಾರಣ ತಿಳಿಸಿರಬೇಕಲ್ಲಾ…. ದಯಮಾಡಿ ಅದನ್ನು ನೋಡಿ ಹೇಳಿ,” ಎಂದ.
“ಬಹುಶಃ ಬೇರೆ ಕಂಪನಿಗೆ ವರ್ಗಾವಣೆ ಬಯಸಿದ್ದಾರೋ ಏನೋ…? ಅವರು ನೋಟೀಸ್ ಪೀರಿಯಡ್ ಕೊಟ್ಟಿದ್ದಾರೆ,” ಎಂದು ಹೇಳಿ ಮ್ಯಾನೇಜರ್ ಸುಮ್ಮನಾದರು.
ಮಲ್ಲೇಶ್ ಈ ವಿಷಯವಾಗಿ ಕಾವ್ಯಾಳಿಗೆ ಕರೆ ಮಾಡಬೇಕು ಎಂದುಕೊಂಡವನು ಹಿಂದೇಟು ಹಾಕಿದ. ಇನ್ನೂ ಸ್ವಲ್ಪ ಹೊತ್ತು ಕಾಯ್ದು ಮಾಡಿದರಾಯಿತು ಎಂದುಕೊಂಡು ಸುಮ್ಮನಾದ.
ನಂತರ ಎರಡು ದಿನಗಳಾದರೂ ಕಾವ್ಯಾಳಿಂದ ಯಾವ ಕರೆಯೂ ಬರಲಿಲ್ಲ. ಅವಳ ಮನಸ್ಸಿನಲ್ಲಿ ಅದೇನು ಇದೆಯೋ ಅವನಿಗೆ ತಿಳಿಯದಾಯಿತು. ಈಗ ಅವನು ಒಂದು ನಿರ್ಧಾರಕ್ಕೆ ಬಂದು, ಮಾರನೇ ದಿನ ಅವಳ ತವರಿಗೆ ಹೋಗಲು ಅಣಿಯಾದ. ಹೇಗೋ ತಡವರಿಸುತ್ತಾ ಮಾನಸಿಕ ಗೊಂದಲ ಅನುಭವಿಸುತ್ತಾ ತನ್ನ ಕಛೇರಿಗೆ ಹೋದ. ಅಲ್ಲಿ ಮತ್ತೆ ಇನ್ನೊಂದು ಆಶ್ಚರ್ಯ ಅವನಿಗಾಗಿ ಕಾದಿತ್ತು. ಅವನ ಹೆಸರಿಗೊಂದು ಪೋಸ್ಟ್ ಬಂದಿತ್ತು. ಅದನ್ನು ತೆಗೆದು ನೋಡಿದಾಗ, ಅದು ದಾಂಪತ್ಯ ವಿಚ್ಛೇದನ ಕೋರಿದ ಪತ್ರ! ಅದು ಕಾವ್ಯಾಳಿಂದ ಬಂದಿತ್ತು. ಅವನಿಗೆ ದಿಗಿಲಾಯಿತು, ಏನು ಮಾಡೋದು ಎಂದು ತಿಳಿಯದಾಯಿತು. ತನ್ನ ಅಧಿಕಾರಿಯ ಬಳಿ ಹೋಗಿ, ತನಗೆ ಆರೋಗ್ಯ ಸರಿಯಿಲ್ಲ, ಒಂದು ವಾರ ರಜೆ ಕೊಡಿ ಎಂದು ಕೇಳಿಕೊಂಡ. ಆದರೆ ಅವರು ಒಪ್ಪಲಿಲ್ಲ.
“ಹೇಗೂ ನಿಮ್ಮ ಹೆಂಡತಿ ನೋಟೀಸ್ ಪೀರಿಯಡ್ ನಲ್ಲಿ ಇರುವುದರಿಂದ, ಅವರು ಕೆಲಸಕ್ಕೆ ಬಂದೇ ಬರುತ್ತಾರೆ. ಆಗ ನೀವು ಹೋಗುವಿರಂತೆ,” ಎಂದು ಹೇಳಿದರು.
ಮಲ್ಲೇಶನಿಗೆ ಈಗ ಆತಂಕ ಹೆಚ್ಚಾಯಿತು. `ತಾನು ಏನೂ ತಪ್ಪೇ ಮಾಡಿಲ್ಲ, ಅವಳು ತನಗೇಕೆ ವಿಚ್ಛೇದನದ ಶಿಕ್ಷೆ ಕೊಟ್ಟಳು? ಆಕೆ ತನಗೆ ತಾನೇ ಶಿಕ್ಷೆ ಕೊಟ್ಟುಕೊಳ್ಳುತ್ತಿದ್ದಾಳೋ ಹೇಗೆ….?’ ಅವನಿಗೆ ಒಂದೂ ತಿಳಿಯದಾಯಿತು. ಅವನು ಮಾನಸಿಕವಾಗಿ ಕುಗ್ಗತೊಡಗಿದ. ಅವನ ಆರೋಗ್ಯ ಹದಗೆಟ್ಟಿತು. ಅವನ ಕಷ್ಟ ಕೇಳಲು ಯಾರೂ ಇರಲಿಲ್ಲ.
ಸ್ವಲ್ಪ ದಿನಗಳಾದ ಮೇಲೆ ಕುಟುಂಬ ನ್ಯಾಯಾಲಯದಿಂದ ಅವನಿಗೆ ಸಮನ್ಸ್ ಬಂತು. ಆಗ ಮಲ್ಲೇಶ್ ನಿಸ್ತೇಜನಾದ!
`ಕಾವ್ಯಾ ಕಂಪನಿ ಕೆಲಸಕ್ಕೆ ರಾಜೀನಾಮೆ ಕೊಟ್ಟದ್ದೇಕೆ? ಜೊತೆಗೆ ವಿಚ್ಛೇದನಕ್ಕೆ ನೋಟೀಸ್ ಕಳಿಸಲು ನನ್ನ ಬಳಿ ಏಕೆ ಕೇಳಲಿಲ್ಲ? ಅಂತಹ ತಪ್ಪು ನಾನು ಏನು ಮಾಡಿದ್ದೇನೆ? ನನಗರಿಯದೆ ಏನಾದರೂ ತಪ್ಪು ಆಗಿದೆಯೇ?’ ಹೀಗೆ ಅವನ ತಲೆಯಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡವು. ಆದರೆ ಅವುಗಳಿಗೆ ಉತ್ತರವೇ ಸಿಗಲಿಲ್ಲ. ಸರಿ ದೇವರ ಇಚ್ಛೆಯಂತೆ ಆಗಲಿ ಎಂದು ತನ್ನ ಮನಸ್ಸನ್ನು ಗಟ್ಟಿಯಾಗಿರಿಸಿಕೊಂಡ.
ಮುಂದೊಂದು ದಿನ ನ್ಯಾಯಾಲಯದಿಂದ ಕರೆ ಬಂದಾಗ, ಮಲ್ಲೇಶ್ ಮತ್ತು ಕಾವ್ಯಾ ಇಬ್ಬರೂ ಅಲ್ಲಿ ಕಟೆಕಟೆಯಲ್ಲಿ ನಿಂತರು. ಆಗ ಪ್ರಶ್ನೆಗಳ ಸುರಿಮಳೆಯೇ ಆಯಿತು. ಆದರೆ ಕಾವ್ಯಾಳ ನಿರ್ಧಾರ ಬದಲಾಗಲಿಲ್ಲ. ಅವಳಾದರೂ ಸುಖಾಗಿರಲಿ ಎಂದುಕೊಂಡು ವಿಚ್ಛೇದನಕ್ಕೆ ಒಪ್ಪಿಕೊಂಡ. ಹೀಗೆ ಪರಸ್ಪರ ಒಪ್ಪಿದ ಮೇಲೆ ನ್ಯಾಯಾಲಯ ಅವರಿಗೆ ವಿಚ್ಛೇದನ ನೀಡಿತು. ಈಗ ಅರು ಕಾನೂನಾತ್ಮಕಾಗಿ ಬೇರೆ ಬೇರೆಯಾದರು.
ಇಷ್ಟೆಲ್ಲಾ ಘಟಿಸಿದ ಮೇಲೂ ಮಲ್ಲೇಶನಿಗೆ ವಿಚ್ಛೇದನಕ್ಕೆ ಕಾರಣ ತಿಳಿಯಲಿಲ್ಲ. ನ್ಯಾಯಾಲಯದ ವಾದ ವಿವಾದಗಳಲ್ಲಿ `ಸಾರ್ವಜನಿಕವಾಗಿ ಹೇಳೋದಿಕ್ಕೆ ಸಾಧ್ಯವಿಲ್ಲದ ಕಾರಣಗಳಿವೆ,’ ಎಂದು ಮಾತ್ರ ಹೇಳಲಾಗಿತ್ತು. ಆದ್ದರಿಂದ ಮಲ್ಲೇಶ್ ಅದನ್ನು ಪ್ರಶ್ನಿಸಲಿಕ್ಕೆ ಹೋಗಿರಲಿಲ್ಲ ಮತ್ತು ತೇಪೆ ಹಾಕಲು ಕೂಡ ಬಯಸಲಿಲ್ಲ. ಅವಳ ಇಚ್ಛೆಯಂತೆಯೇ ಆಗಲಿ ಎಂದು ನ್ಯಾಯಾಲಯದಲ್ಲಿ ಹೇಳಿದ್ದ. ಇದನ್ನು ಕೇಳಿದ ಕಾವ್ಯಾ ಸತತವಾಗಿ ಕಣ್ಣೀರು ಹರಿಸಿದಳು. ಅದನ್ನು ನ್ಯಾಯಾಲಯದಲ್ಲಿ ಗಮನಿಸಿದ್ದ. ಆಮೇಲೆ ಅವರು ತಮ್ಮ ತಮ್ಮ ಮನೆಗಳಿಗೆ ಹೋದರು.
ಮುಂದೊಂದು ದಿನ ಕಾವ್ಯಾಳ ಸೋದರ ಪರಮೇಶಿ ಮಾರಕಟ್ಟೆಯಲ್ಲಿ ಮಲ್ಲೇಶ್ ನನ್ನು ಭೇಟಿಯಾದ. ಆಗ ಅನಿವಾರ್ಯವಾಗಿ ಇಬ್ಬರೂ ಮಾತನಾಡಿದರು. ಆಗ ಮಲ್ಲೇಶ್, “ಪರಮೇಶಿ ನಿನ್ನ ಅಕ್ಕ ಹೇಗಿದ್ದಾಳೆ….?” ಎಂದು ವಿಚಾರಿಸಿದಾಗ, ಪರಮೇಶಿ ಅಳತೊಡಗಿದ.
“ಯಾಕೆ ಏನಾಯಿತು…? ನಿನ್ನಕ್ಕ ಚೆನ್ನಾಗಿದ್ದಾಳೆ ತಾನೇ….?” ಎಂದು ಕೇಳಿದ.
“ಇಲ್ಲ ಭಾವ ಅವಳ ಆರೋಗ್ಯ ಸರಿಯಾಗಿಲ್ಲ…..” ಎಂದ.
“ಹಾಗೆಂದರೆ ಏನು…..? ಸರಿಯಾಗಿ ಬಿಡಿಸಿ ಹೇಳು….” ಎಂದು ಒತ್ತಾಯ ಮಾಡಿದ.
“ಅಕ್ಕನಿಗೆ ಬ್ಲಡ್ ಕ್ಯಾನ್ಸರ್ ಆಗಿದೆ. ಅವಳು ಈಗ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆ ಕಾರಣದಿಂದಲೇ ಅಕ್ಕ ನಿಮ್ಮಿಂದ ವಿಚ್ಛೇದನ ಪಡೆದಳು,” ಎಂದು ಪರಮೇಶಿ ಹೇಳಿದ.
ಮಲ್ಲೇಶ್ ಗೆ ಒಮ್ಮೆಲೆ ಆಘಾತವಾಯಿತು. ತಕ್ಷಣವೇ ಹೋಗಿ ಕಾವ್ಯಾಳನ್ನು ನೋಡಬೇಕೆನಿಸಿತು. ಪರಮೇಶಿಯ ಬಳಿ ಹೇಳಿ ತನ್ನನ್ನು ಕಾವ್ಯಾಳ ಬಳಿ ಕರೆದುಕೊಂಡು ಹೋಗುವಂತೆ ಕೇಳಿಕೊಂಡ.
ಮುಂದಿನ ಒಂದೆರಡು ಗಂಟೆಗಳಲ್ಲಿ ಅವರಿಬ್ಬರೂ ಆಸ್ಪತ್ರೆಗೆ ಹೋದರು. ಅಲ್ಲಿ ಕಾವ್ಯಾಳನ್ನು ನೋಡಿದ ಮಲ್ಲೇಶನಿಗೆ ದಿಕ್ಕು ತೋಚದಂತಾಯಿತು. ಅವಳ ತಲೆಗೂದಲನ್ನು ಬೋಳಿಸಿದ್ದರು. ಅವಳ ಕಣ್ಣು ಗುಡ್ಡೆಗಳು ಆಳಕ್ಕೆ ಇಳಿದಿದ್ದವು. ಅವಳ ದೇಹ ಸವಕಲಾಗಿತ್ತು. ಅವನಿಗೆ ದುಃಖ ಉಕ್ಕಿ ಬಂದಿತ್ತು. ಅವನು ಅಳತೊಡಗಿದ.
ಇದನ್ನು ಕಂಡ ಕಾವ್ಯಾಳಿಗೂ ದುಃಖ ತಡೆಯಲಾಗಲಿಲ್ಲ. ಆದರೆ ಅವಳಿಗೆ ಅಳಲು ಶಕ್ತಿಯೇ ಇರಲಿಲ್ಲ. ಆದರೆ ಅವಳ ದೃಷ್ಟಿ ಅವನ ಮೇಲೆಯೇ ಕೇಂದ್ರೀಕೃತವಾಗಿತ್ತು.
ಕಾವ್ಯಾ ಮೆಲುವಾಗಿ ಮಲ್ಲೇಶನ ಕೈ ಹಿಡಿದುಕೊಂಡು, ಕ್ಷೀಣವಾದ ದನಿಯಲ್ಲಿ, “ನನಗೆ ಆಯುಷ್ಯ ಕಡಿಮೆ ಎಂದು ತಿಳಿದು, ಗರ್ಭಪಾತದ ಸುಳ್ಳು ಸುದ್ದಿಯನ್ನು ಪರಮೇಶಿ ಮೂಲಕ ನಿಮಗೆ ತಿಳಿಸಿದೆ. ಇಲ್ಲದಿದ್ದರೆ, ನಿಮ್ಮ ಪ್ರೀತಿ ನನ್ನ ಸುತ್ತಲೇ ಗಿರಿಗಿಟ್ಟಲೆಯ ಹಾಗೆ ಸುತ್ತುತ್ತಿತ್ತು. ನೀವು ಮರು ಮದುವೆ ಮಾಡಿಕೊಳ್ಳಲೆಂದೇ ನಾನು ವಿಚ್ಛೇದನ ಕೊಟ್ಟೆ. ಇದೆಲ್ಲವನ್ನೂ ನಿಮಗಾಗಿ ಮಾಡಿದೆ. ಈಗ ನಾನು ನಿಮ್ಮ ಹೆಂಡತಿಯಲ್ಲ. ನೀವು ನಿಮ್ಮ ದಾರಿಯನ್ನು ಕಂಡುಕೊಳ್ಳಿ,” ಎಂದು ಕೈ ಜೋಡಿಸಿ ಕೇಳಿಕೊಂಡಳು.
“ಕಾವ್ಯಾ ನಿನ್ನ ಪರಿಸ್ಥಿತಿಯ ಬಗ್ಗೆ ಮೊದಲೇ ನನಗೆ ಏಕೆ ತಿಳಿಸಲಿಲ್ಲ….? ನಿನ್ನ ತ್ಯಾಗ ನನಗೆ ಬೇಕಿಲ್ಲ. ನಾನು ನೀನು ಅದೆಷ್ಟು ದಿವಸ ಜೊತೆಯಾಗಿ ಇರಬೇಕೋ ಅಷ್ಟು ದಿವಸ ಇರುತ್ತಿದ್ದೆವಲ್ಲಾ…. ನೀನು ಸಂಪೂರ್ಣವಾಗಿ ನನ್ನ ಮನಸ್ಸಿನಲ್ಲಿ ತುಂಬಿದ್ದೀಯಾ….. ಹೀಗಿರುವಾಗ ನಾನು ಮರು ಮದುವೆ ಯೋಚನೆ ಮಾಡಲಾರೆ. ಏನೇ ಆಗಲಿ ನಿನ್ನ ನೆನಪಿನಲ್ಲೇ ಇರುವೆ. ನೀನು ವಿಚ್ಛೇದನ ನೀಡಿದರೂ ನೀನು ನನ್ನ ಮನಸ್ಸಿನಿಂದ ದೂರವಾಗಿಲ್ಲ,” ಎನ್ನುತ್ತಾ ಕಣ್ಣೀರು ಸುರಿಸಿದ.
ಕಾವ್ಯಾ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವಳ ಕಣ್ಣೀರು ಅವಳ ಮನದಾಳದ ನೋವನ್ನು ಸೂಚಿಸುತ್ತಿತ್ತು. ಅದನ್ನು ನೋಡಿ ಅವನಿಗೆ ಅಲ್ಲಿ ನಿಲ್ಲಲಾಗಲಿಲ್ಲ. ಆಸ್ಪತ್ರೆಯ ಕಾರಿಡಾರ್ ಗೆ ಬಂದು ಮತ್ತೆ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವನನ್ನು ಪರಮೇಶಿ ಸಮಾಧಾನಿಸತೊಡಗಿದ. ಅಷ್ಟರಲ್ಲಿ ಆಸ್ಪತ್ರೆಯ ಸಿಬ್ಬಂದಿ ಓಡಿ ಬಂದು ಇವರನ್ನು ವಾರ್ಡ್ ಗೆ ಬರುವಂತೆ ಕರೆದ.
“ಯಾಕೆ ಏನಾಯ್ತು…..?” ಎಂದು ಗಾಬರಿಯಿಂದ ಕೇಳಿದ ಪರಮೇಶಿ.
“ಕಾವ್ಯಾ….. ಕೊನೆ ಉಸಿರೆಳೆದರು,” ಎಂದು ಸಿಬ್ಬಂದಿ ಹೇಳಿದ.
ಮಲ್ಲೇಶ್ ಆಘಾತದಿಂದ ಮೂರ್ಛೆ ಹೋದ. ಅವನಿಗೆ ಎಚ್ಚರಾದಾಗ, ಕಾವ್ಯಾಳ ಮೃತದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯಲು ತಯಾರಿ ನಡೆದಿತ್ತು. ದಿಕ್ಕು ತೋಚದಂತಾಗಿ ಅವಳ ಶವ ಯಾತ್ರೆಯಲ್ಲಿ ಪಾಲ್ಗೊಂಡು, ಮಸಣದವರೆಗೂ ಹೋದ. ಅಲ್ಲಿ ಅವಳನ್ನು ಹೂಣಿಡಲಾಯಿತು. ಅವಳ ಸಮಾಧಿಯ ಬಳಿ ಕುಳಿತು ತಾನು ಸಾಯಬೇಕೆಂದು ಮನಸೋ ಇಚ್ಛೆ ಬೇಡಿಕೊಂಡ. `ಕಾವ್ಯಾ ಸತ್ತು ಮಣ್ಣು ಪಾಲಾದಳು. ನಾನೂ ಮಣ್ಣಲ್ಲಿ ಸೇರಿಕೊಂಡರೆ, ಅವಳ ನೆನಪುಗಳೂ ಮಣ್ಣು ಪಾಲಾಗುತ್ತವೆ, ಅವುಗಳನ್ನು ನೆನಪು ಮಾಡಿಕೊಳ್ಳುವವರು ಯಾರು? ಈ ಕಾರಣದಿಂದಲಾದರೂ ತಾನು ಉಳಿಯಬೇಕು,’ ಎಂದುಕೊಂಡ.
ಮುಂದಿನ ದಿನಗಳಲ್ಲಿ ಅವನು ಅವಳ ನೆನಪಿನಲ್ಲಿಯೇ ಕಾಲ ಕಳೆಯುತ್ತಾ ಕೃಶನಾಗತೊಡಗಿದ. ಹೀಗೆ ಸುಮಾರು ಕಾಲ ಅವಳ ನೆನಪಿನಲ್ಲಿಯೇ ಕಳೆದು ಮುಂದೊಂದು ದಿನ ಅವನೂ ಅವಳ ಬಳಿಗೆ ಹೋಗಿಬಿಟ್ಟ. ಅವರಿಬ್ಬರೂ ಸಾಮಾಜಿಕ ಜೀವನದಿಂದ ವಿಚ್ಛೇದನ ಪಡೆದಿದ್ದರೂ, ಬಹುಶಃ ಮೇಲಿನ ಲೋಕದಲ್ಲಿ ಇಬ್ಬರೂ ಸಮ್ಮಿಲನಗೊಂಡಿರಬಹುದೇನೋ…..?





