ಸಾಮಾನ್ಯವಾಗಿ ಅಡುಗೆ ಮಾಡುವ ಕೆಲಸ ಮಹಿಳೆಯರದ್ದೇ ಆಗಿರುತ್ತದೆ. ಶತಮಾನಗಳಿಂದ ಮಹಿಳೆಯರು ಅಡುಗೆ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಒಂದು ರೀತಿಯ ಸಂಪ್ರದಾಯದಂತಾಗಿದೆ. ನಿಜವಾಗಿಯೂ ಕುಟುಂಬ ಗಂಡ ಹೆಂಡತಿ ಇಬ್ಬರಿಗೂ ಸೇರಿದ್ದು ಎಂಬುದಾದರೆ, ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡುವುದರಲ್ಲಿ ತಪ್ಪೇನಿದೆ….?

ನಾವು ಯಾವಾಗಲಾದರೂ ಕಣ್ಣು ಮುಚ್ಚಿಕೊಂಡು ಅಡುಗೆಮನೆಯಲ್ಲಿ ಯಾರಿದ್ದಾರೆ ಎಂದು ಕಲ್ಪಿಸಿಕೊಂಡರೆ, ಅಲ್ಲಿ ನಮ್ಮ ಕಣ್ಣೆದುರು ಯಾರು ಕಾಣುತ್ತಾರೆ ಹೇಳಿ? ಹೌದು. ಖಂಡಿತವಾಗಿಯೂ, ನಮ್ಮ ತಾಯಿ, ಸಹೋದರಿ, ಹೆಂಡತಿ ಅಥವಾ ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅಲ್ಲಿ ಒಬ್ಬ ಮಹಿಳೆಯ ಚಿತ್ರಣ ನಮ್ಮ ಕಣ್ಮುಂದೆ ಬರುತ್ತದೆ. ಅದು ಏಕೆ ಅಂತ ನಾವು ಎಂದಾದರೂ ಯೋಚನೆ ಮಾಡಿದ್ದೇವೆಯೇ? ಅಡುಗೆಮನೆಯಲ್ಲಿ ಅಡುಗೆ ಮಾಡುವ ತಂದೆ, ಸಹೋದರ ಅಥವಾ ಬೇರೆ ಯಾವುದೇ ಪುರುಷನ ಚಿತ್ರ ನಮ್ಮ ಕಣ್ಮುಂದೆ ಏಕೆ ಬರುವುದಿಲ್ಲ? ಮತ್ತೊಂದೆಡೆ, ನೀವು ಹೋಟೆಲ್‌, ರೆಸ್ಟೋರೆಂಟ್‌ ಅಥವಾ ಡಾಬಾಗಳಂತಹ ಸ್ಥಳಗಳ ಬಗ್ಗೆ ಮಾತನಾಡುವುದಾದರೆ, ನಾವು ಎಂದಿಗೂ ಅಲ್ಲಿ ಮಹಿಳೆಯರನ್ನು ನೋಡುವುದಿಲ್ಲ. ಅಲ್ಲಿ ಮಹಿಳೆ ಕಂಡುಬರುವುದು ಬಹಳ ವಿರಳ.

ವಾಸ್ತವವಾಗಿ, ಈ ಕೆಲಸಕ್ಕೆ ಯಾವುದೇ ಹಣವನ್ನೂ ಪಾವತಿಸಲು ಆಗುವುದಿಲ್ಲ. ಸಾಮಾನ್ಯವಾಗಿ ಪುರುಷ ಪ್ರಾಬಲ್ಯ ಇಲ್ಲಿ ಹೆಚ್ಚಾಗಿರುತ್ತದೆ. ಸಮಾಜದ ಈ ಪಿತೃಪ್ರಧಾನ ನಿಯಮಗಳು ಜನರಲ್ಲಿ ಆರಿಸಿಕೊಂಡಿವೆ. ಕುಟುಂಬದ ಎಲ್ಲಾ ನಿಯಮ ಮತ್ತು ನಿಬಂಧನೆಗಳು ಅದಕ್ಕೆ ಅನುಗುಣವಾಗಿಯೇ ರಚಿಸಲಾಗಿದೆ.

ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅಡುಗೆ ಮಾಡುವುದು ಮಹಿಳೆಯರ ಕೆಲಸವಾಗಿದೆ. ಶತಮಾನಗಳಿಂದ ಮಹಿಳೆಯರು ಮನೆಯ ಕೆಲಸಗಳಾದ ಶುಚಿಗೊಳಿಸುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದೂ ಸೇರಿದಂತೆ ಮನೆಯ ಎಲ್ಲಾ ಜವಾಬ್ದಾರಿಗಳನ್ನೂ ನಿಭಾಯಿಸುತ್ತಾ ಬಂದಿದ್ದಾರೆ.

ಪುರುಷರು ಮನೆಯ ಹೊರಗೆ ಹೋಗಿ ಕೆಲಸ ಮಾಡುತ್ತಾರೆ ಎಂಬುದು ಸಂಪ್ರದಾಯವಾಗಿತ್ತು. ಮೊದಲೆಲ್ಲಾ, ಮನೆಗೆ ಆದಾಯ, ಖರ್ಚು ವೆಚ್ಚಕ್ಕಾಗಿ ದುಡಿಯುವುದು ಪುರುಷರ ಜವಾಬ್ದಾರಿಯಾಗಿತ್ತು. ಆದರೆ ಇಂದು ಬಹುತೇಕ ಮಹಿಳೆಯರು ಹೊರಗೆ ಹೋಗಿ ದುಡಿಯಲು ಆರಂಭಿಸಿದ್ದಾರೆ.

ಆಕೆ ಇಡೀ ದಿನ ಕಛೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ಇದರ ಜೊತೆ ಮನೆಯ ಕೆಲಸವನ್ನೂ ಮಾಡಬೇಕಾಗುತ್ತದೆ. ಅವಳು ಎಷ್ಟೇ ಕಾರ್ಯನಿರತಳಾಗಿದ್ದರೂ, ಕೆಲಸಕ್ಕೆ ಹೊರಡುವುದು ಎಷ್ಟೇ ತಡವಾದರೂ, ಹೊರಡುವ ಮೊದಲು ಆಕೆ ತನ್ನ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಬೇಕು. ಆಕೆಗೆ ಆ ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದರೆ, ಆಕೆ ತನ್ನ ಕಛೇರಿಯ ಕೆಲಸವನ್ನು ಬಿಡುವಂತೆ ಸಲಹೆ ನೀಡಲಾಗುತ್ತದೆ.

ಮಗು ಚಿಕ್ಕದಾಗಿದ್ದರೂ, ಅದು ಆಕೆಯ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕುಟುಂಬ ಗಂಡ ಮತ್ತು ಹೆಂಡತಿ ಇಬ್ಬರಿಗೂ ಸೇರಿದ್ದು ಎಂದಾದರೆ, ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡಬಾರದೇಕೆ?

ಕೆಲಸ ಹಂಚಿಕೊಳ್ಳುವುದು

ನಾವು ಆಗಾಗ ಲಿಂಗ ಸಮಾನತೆಯ ಬಗ್ಗೆ ಮಾತನಾಡುತ್ತಿರುತ್ತೇವೆ. ಇದು ಇಂದು ಮಹಿಳೆಯರಿಗೆ ಬಹಳ ಅಗತ್ಯದ ಹಕ್ಕೂ ಹೌದು. ಇಲ್ಲಿ ಸಮಾನತೆ ಎಂದರೆ ಸಮಾನ ಅವಕಾಶ, ಸಮಾನ ಗೌರವ, ಸಮಾನ ಜವಾಬ್ದಾರಿ ಮತ್ತು ಸಮಾನ ಪ್ರಾಮುಖ್ಯತೆ. ಇಂದು ಪರಿಸ್ಥಿತಿಗಳು ಬಹಳಷ್ಟು ಬದಲಾಗಿವೆ. ಪುರುಷರು ಹಾಗೂ ಮಹಿಳೆಯರು ಇಬ್ಬರೂ ಅನೇಕ ಕೆಲಸಗಳನ್ನು ಮಾಡಬಲ್ಲರು. ಇದು ಹಿಂದಿನ ಕಾಲದಲ್ಲಿ ಸಾಧ್ಯವಾಗುತ್ತಿರಲಿಲ್ಲ.

ಸಾವಿರಾರು ವರ್ಷಗಳ ಹಿಂದೆ ಹೆಚ್ಚಿನ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಹಳ್ಳಿಯ ಸುತ್ತಲೂ ಕಾಡು ಇರುತ್ತಿತ್ತು. ಎಲ್ಲೆಡೆ ಕಾಡು ಪ್ರಾಣಿಗಳೂ ಇರುತ್ತಿದ್ದವು. ಆ ಸಮಯದಲ್ಲಿ ಏನನ್ನಾದರೂ ಖರೀದಿಸಲು ಅಂಗಡಿಗಳು ಸಹ ಇರುತ್ತಿರಲಿಲ್ಲ. ಜನ ಪ್ರತಿದಿನ ಬೇಟೆಯಾಡಬೇಕಾಗಿತ್ತು ಅಥವಾ ತಿನ್ನಲು ಏನನ್ನಾದರೂ ಹುಡುಕಿಕೊಂಡು ತರಬೇಕಾಗುತ್ತಿತ್ತು.

ಇಂತಹ ಪರಿಸ್ಥಿತಿಯಲ್ಲಿ ಪುರುಷರಿಗೆ ಇದು ಸೂಕ್ತ ಕೆಲಸವಾಗಿತ್ತು. ಮಕ್ಕಳನ್ನು ಹೆರುವುದು ಮಹಿಳೆಯ ಸ್ವಾಭಾವಿಕ ಜವಾಬ್ದಾರಿಯಾಗಿತ್ತು. ಆಕೆ ಚಿಕ್ಕ ಮಗುವನ್ನು ಹೊತ್ತು ಕಾಡಿಗೆ ಹೋದರೆ, ಬರಿಗೈಯಲ್ಲಿ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಈ ಕಾರಣದಿಂದಾಗಿ ಮಹಿಳೆಯನ್ನು ಮನೆಯಲ್ಲೇ ಇರಿಸಲಾಯಿತು ಹಾಗೂ ಪುರುಷರು ಆಹಾರವನ್ನು ಹುಡುಕುತ್ತಾ ಹೊರಗೆ ಹೋಗುತ್ತಿದ್ದರು. ಮಕ್ಕಳ ಸುರಕ್ಷತೆಗಾಗಿ ಆ ಸಮಯದಲ್ಲಿ ಇದು ಕೆಲಸದ ಆದರ್ಶ ವಿಭಜನೆಯಾಗಿತ್ತು.

IB137231-137231141754293-SM232079

ಸಮಾನ ಅವಕಾಶ ಒದಗಿಸಿದ ತಂತ್ರಜ್ಞಾನ

ಇಂದು ಕಾಲ ಬದಲಾಗಿದೆ. ಇಂದು ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಅವರಿಗೆ ಮುಂದುವರಿಯಲು ಅನೇಕ ಅವಕಾಶಗಳಿವೆ. ಆದ್ದರಿಂದ, ಇಂದು ನಾವು ಸಮಾಜ ಮತ್ತು ಜಗತ್ತನ್ನು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಪಾತ್ರ ನಿರ್ವಹಿಸುವ ರೀತಿಯಲ್ಲಿ ರಚಿಸಬೇಕು. ಈಗ ತಂತ್ರಜ್ಞಾನ ಸಮಾನ ಅವಕಾಶಗಳನ್ನು ನೀಡಿದೆ. ಈಗ ಆಹಾರವನ್ನು ತರಲು ಕಾಡಿಗೆ ಹೋಗುವ ಬದಲು ಸೂಪರ್‌ ಮಾರ್ಕೆಟ್‌ ಅಥವಾ ಮಾಲ್ ‌ಗೆ ಹೋಗಬಹುದು. ಮಹಿಳೆ ಈ ಕೆಲಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಲ್ಲಳು.

ಜೀವನೋಪಾಯವನ್ನು ಕಂಡುಕೊಳ್ಳುವುದು ಎಂದರೆ ಈಟಿಯನ್ನು ಎಸೆದು ಪ್ರಾಣಿಗಳನ್ನು ಬೇಟೆಯಾಡುವುದು ಎಂದಲ್ಲ. ಈಗ ಇದಕ್ಕಾಗಿ ನೀವು ಕೀಬೋರ್ಡ್‌ ನಲ್ಲಿ ಟೈಪ್‌ ಮಾಡಬೇಕು. ಕಂಪ್ಯೂಟರ್‌ ನಲ್ಲಿ ಕೆಲಸ ಮಾಡಬೇಕು. ಕಾಗದವನ್ನು ಉಪಯೋಗಿಸಬೇಕು ಅಥವಾ ನಿಮ್ಮ ವಾಕ್ಚಾತುರ್ಯವನ್ನು ಬಳಸಿಕೊಂಡು ಕೆಲಸ ಪೂರ್ಣಗೊಳಿಸಬೇಕು.

ಒಬ್ಬ ಮಹಿಳೆ ಈ ರೀತಿಯ ಕೆಲಸವನ್ನು ಅತ್ಯುತ್ತಮವಾಗಿ ಮಾಡಬಲ್ಲಳು. ಏಕೆಂದರೆ, ಅವಳು ಪ್ರತಿ ಗಂಟೆಗೊಮ್ಮೆ ಎದ್ದು ಹೊರಗೆ ನೋಡುವ, ಸಿಗರೇಟ್‌ ಸೇದುವ ಅಥವಾ ಪಾನ್‌ ಆಗಿಯುವ ಅಭ್ಯಾಸವನ್ನು ಹೊಂದಿಲ್ಲ. ಅವಳು ಕೆಲಸಕ್ಕೆ ಕುಳಿತರೆ, ಕೆಲಸ ಮಾಡುತ್ತಾಳೆ. ಮಹಿಳೆಯರು ಪುರುಷರಿಗಿಂತ ಉತ್ತಮವಾಗಿ ಈ ಕೆಲಸಗಳನ್ನು ಮಾಡುತ್ತಾರೆ. ಇದೆಲ್ಲ ಮಾನವ ಮೆದುಳಿನ ಬೆಳವಣಿಗೆಯಿಂದಾಗಲಿ ಅಥವಾ ಮಹಿಳೆಯರ ಸ್ವಾತಂತ್ರ್ಯದಿಂದಾಗಲಿ ಅಥವಾ ಪುರುಷರ ಔದಾರ್ಯದಿಂದಾಗಲಿ ಸಂಭವಿಸಿಲ್ಲ. ಇದು ಕೇವಲ ತಂತ್ರಜ್ಞಾನದ ಪರಿಣಾಮದಿಂದ ಮಾತ್ರ ಸಾಧ್ಯವಾಗಿದೆ. ಇದು ಸಮಾನ ಅವಕಾಶಗಳನ್ನು ಸೃಷ್ಟಿಸಿದೆ.

ಪುರುಷ ಯಾ ಮಹಿಳೆ : ವ್ಯತ್ಯಾಸ ಎಲ್ಲಿದೆ?

ನೀವು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ, ನಿಮ್ಮ ಮುಂದೆ ಇರುವ ವ್ಯಕ್ತಿ ಪುರುಷನೋ ಅಥವಾ ಮಹಿಳೆಯೋ ಎಂದು ನೀವು ಏಕೆ ಚಿಂತಿಸಬೇಕು? ಈ ವಿಷಯ ಸ್ನಾನಗೃಹ ಅಥವಾ ಮಲಗುವ ಕೋಣೆಯಲ್ಲಿ ಮಾತ್ರ ಮುಖ್ಯವಾಗಿರುತ್ತದೆ. ಬೇರೆಲ್ಲಿಯೂ ಇದಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ. ರಸ್ತೆಯಲ್ಲಿ, ಕೆಲಸದ ಸ್ಥಳದಲ್ಲಿ ಅಥವಾ ಬೇರೆ ಕಡೆ ನಾವು ಎಲ್ಲೇ ಇದ್ದರೂ, ಒಬ್ಬ ವ್ಯಕ್ತಿ ಪುರುಷನೋ ಅಥವಾ ಮಹಿಳೆಯೋ ಎಂಬುದು ಏಕೆ ಮುಖ್ಯ? ನಾವು ಅವರನ್ನು ಕೇವಲ ಮನುಷ್ಯರಂತೆ ಏಕೆ ನೋಡಬಾರದು?

ಇನ್ನು ಸಾಮಾನ್ಯ ಮನುಷ್ಯನ ವಿಷಯಕ್ಕೆ ಬಂದಾಗ, ಆತ ಮನೆಯ ಕೆಲಸವನ್ನೂ ಹಾಗೂ ಹೊರಗಿನ ಕೆಲಸಗಳನ್ನೂ ಸಹ ಮಾಡಬೇಕಾಗುತ್ತದೆ.

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಥವಾ ಅಡುಗೆ ಕೆಲಸ ಮಹಿಳೆಯ ಜವಾಬ್ದಾರಿ ಹಾಗೂ ಪುರುಷರು ಹೊರಗಿನ ಕೆಲಸ ನಿಭಾಯಿಸಬೇಕು ಎಂದು ಹೇಳಲು ಯಾವುದೇ ಸಮರ್ಥನೆ ಇಲ್ಲ. ಮಹಿಳೆ ಹಣ ಸಂಪಾದನೆಗಾಗಿ ಹೊರಗೆ ಹೋಗಿ ದುಡಿಯುವುದಾದರೆ, ಪುರುಷ ಮನೆಯಲ್ಲಿಯೇ ಇದ್ದು ಅಡುಗೆಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಹಾಗೂ ಇತರೆ ಮನೆಗೆಲಸಗಳ್ನು ನಿಭಾಯಿಸಲು ಏಕೆ ಸಾಧ್ಯವಿಲ್ಲ?

ವಾಸ್ತವವಾಗಿ, ನಾವು ಜನರನ್ನು ಅವರ ಲಿಂಗದಿಂದ ಗುರುತಿಸುತ್ತೇವೆ. ಅವಳು ಮಹಿಳೆಯಾಗಿದ್ದರೆ, ಆಕೆ ಸ್ತ್ರೀಲಿಂಗದ ಗುಣಗಳನ್ನು ಹೊಂದಿರಬೇಕು. ಅವಳು ಮನೆಯ ರಾಣಿಗಿಂತ ಕಡಿಮೆ ಹಾಗೂ ಸೇವಕಿಗಿಂತ ಹೆಚ್ಚಾಗಿರಬೇಕು. ಅವಳು ಈ ಸಂಗತಿಯನ್ನು ನಿರಾಕರಿಸಲೂ ಸಾಧ್ಯವಿಲ್ಲ. ಆದರೆ, ಅವನು ಪುರುಷನಾಗಿದ್ದರೆ, ಆತ ಮನೆಯ ಮಾಲೀಕ. ಹೀಗಿದ್ದಾಗ, ಮಹಿಳೆಯು ಪುರುಷನಿಗೆ ಹೇಗೆ ತಾನೇ ಸಮಾನಳಾಗಬಹುದು? ಒಬ್ಬ ಮಹಿಳೆ ಹೊರಗೆ ಹೋಗಿ ವೃತ್ತಿ ಜೀವನ ಮಾಡಲು ಬಯಸಿದರೆ, ಆಕೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದ ನಂತರವೇ ಮಾಡಬಹುದು. ನೀವು ಜನರನ್ನು ಬುದ್ಧಿವಂತಿಕೆಯಿಂದಲ್ಲ, ಅವರ ಸಾಮರ್ಥ್ಯದಿಂದಲ್ಲ, ಅವರ ಕ್ಷಮತೆಯಿಂದಲ್ಲ, ಆದರೆ, ಅವರ ಲಿಂಗದಿಂದ ಗುರುತಿಸುತ್ತಿದೀರಿ ಎಂದರ್ಥ.

ಜಗತ್ತನ್ನು ನೋಡಲು ಇದು ಸರಿಯಾದ ಮಾರ್ಗವಲ್ಲ. ನಮ್ಮ ಜೀವನದ ಕೆಲವು ಅಂಶಗಳಿಗೆ ಲಿಂಗ ಗುರುತಿಸುವಿಕೆ ಮುಖ್ಯವಾಗಿದೆ. ಆದರೆ ಜೀವನದುದ್ದಕ್ಕೂ, ನೀವು ಎಷ್ಟು ಬುದ್ಧಿವಂತರು, ಎಷ್ಟು ಯೋಗ್ಯರು, ನೀವು ಯಾವ ಕೆಲಸದಲ್ಲಿ ಹೆಚ್ಚು ಕೌಶಲ್ಯತೆ ಹೊಂದಿದ್ದೀರಿ ಎಂಬುದಕ್ಕಿಂತ ಇಲ್ಲಿ ಅಹಂ ಹೆಚ್ಚಾಗಿ ಕಂಡುಬರುತ್ತದೆ. ಜೀವನದಲ್ಲಿ ಕೆಲವು ವಿಶೇಷ ಸಂಬಂಧಗಳಿಗೆ ಲಿಂಗ ಗುರುತಿಸುವಿಕೆ ಮುಖ್ಯವಾಗಿದೆ. ಆದರೆ ಇತರ ಸಂಬಂಧಗಳಲ್ಲಿ ಲಿಂಗ ಗುರುತಿಸುವಿಕೆ ಅಡ್ಡಿಯಾಗಬಾರದು. ಆಗ ಮಾತ್ರ ಇಬ್ಬರ ನಡುವೆ ಸಮಾನತೆ ಇರುತ್ತದೆ.

ಮನೆಗೆಲಸವನ್ನು ಸಹಾಯ ಎನ್ನುವುದೇಕೆ?

ಸಮಾಜದ ನಿಯಮಗಳ ಪ್ರಕಾರ, ಅಡುಗೆ ಮಾಡುವುದು ಮಹಿಳೆಯ ಕೆಲಸ ಮಾತ್ರ. ಇದು ಸಾಮಾಜಿಕ ಕಲ್ಪನೆ, ಪುರುಷರು ಬಯಸಿದರೆ ಅಡುಗೆ ಮಾಡಲು ಮುಂದಾಗಬಹುದು. ಪುರುಷರು ಆಹಾರ ಸೇವಿಸುತ್ತಿದ್ದರೆ, ಅಡುಗೆ ಮಾಡುವ ಜವಾಬ್ದಾರಿ ಮನೆಯ ಮಹಿಳೆಯರ ಮೇಲೆ ಮಾತ್ರ ಏಕೆ ಎಂದು ಕೇಳುವ ಹಕ್ಕನ್ನು ಸಮಾಜ ಎಂದಿಗೂ ಮಹಿಳೆಯರಿಗೆ ನೀಡಿಲ್ಲ. ಪುರುಷರ ಜವಾಬ್ದಾರಿ ತಿನ್ನುವುದು ಮಾತ್ರವೇ? ಅನೇಕ ಜನರನ್ನು ನೀವು ಮನೆಗೆಲಸ ಮಾಡುತ್ತೀರಾ ಅಥವಾ ಅಡುಗೆ ಮಾಡುತ್ತೀರಾ ಎಂದು ಕೇಳಿದರೆ, ಅವರ ಉತ್ತರವೆಂದರೆ, ಅವರು ತಮ್ಮ ಹೆಂಡತಿ ಅಥವಾ ತಾಯಿಗೆ ಸಹಾಯ ಮಾಡುತ್ತೇವೆ ಎನ್ನುತ್ತಾರೆ. ಅಂದರೆ ಆ ಕೆಲಸ ಮಹಿಳೆಯರದ್ದು ಮಾತ್ರ. ಅವರು ಮನೆಗೆಲಸವನ್ನು ಸಹಾಯ ಎಂದು ಕರೆಯುತ್ತಾರೆ ಹಾಗೂ ಸಹಾಯ ಮಾಡುವ ಮೂಲಕ ಕೃತಜ್ಞತೆಯನ್ನು ತೋರಿಸುತ್ತಾರೆ. ಒಬ್ಬ ವ್ಯಕ್ತಿ ತಮ್ಮದೇ ಮನೆಯಲ್ಲಿ ಯಾವುದೇ ಕೆಲಸ ಮಾಡುವುದನ್ನು ಸಹಾಯ ಎಂದು ಹೇಗೆ ಕರೆಯಬಹುದು?

ಇಬ್ಬರಿಗೂ ಕುಟುಂಬ ಮತ್ತು ಮಕ್ಕಳು ಇರುವಾಗ, ಗಂಡಹೆಂಡತಿ ಏಕೆ ಒಟ್ಟಿಗೆ ಕೆಲಸ ಮಾಡಬಾರದು? ಎಂಬುದು ಚಿಂತನೆಯ ವಿಷಯ. ಅಡುಗೆಯನ್ನೂ ಇಬ್ಬರೂ ಸೇರಿ ಮಾಡಬೇಕು. ಮಕ್ಕಳನ್ನೂ ಒಟ್ಟಿಗೆ ನೋಡಿಕೊಳ್ಳಬೇಕು. ನಮ್ಮ ಮನೆಗಳಲ್ಲಿ  ಮಹಿಳೆಯರು ಅನಾರೋಗ್ಯಕ್ಕೆ ಒಳಗಾದರೆ, ಮನೆಗೆಲಸವನ್ನು ತಾವೇ ಮಾಡಬೇಕು ಎಂದು ಹೇಳಲಾಗುತ್ತದೆ. ಮದುವೆಯ ನಂತರ, ಹೆಚ್ಚಾಗಿ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಪ್ರತಿದಿನ ಅಡುಗೆ ಮಾಡುತ್ತಾರೆ. ಅವರಿಗೆ ಈ ಕೆಲಸದಿಂದ ಎಂದಿಗೂ ವಿರಾಮ ಸಿಗುವುದಿಲ್ಲ.

ಮನೆಗೆಲಸದಿಂದ ಕಡಿಮೆಯಾಗುವ ಹೊರೆ

ಒಟ್ಟಿಗೆ ಕೆಲಸ ಮಾಡುವುದು ಬೇರೆ ರೀತಿಯ ಮಜಾ ಅಂತ ನಿಮಗೆ ಅನ್ನಿಸುವುದಿಲ್ಲವೇ? ಗಂಡಹೆಂಡತಿ ಒಟ್ಟಿಗೆ ಕೆಲಸ ಮಾಡಿದಾಗ, ಅವರು ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶ ಸಿಗುತ್ತದೆ. ಅವರಿಗೆ ತಮ್ಮ ದಿನದ ಘಟನೆಗಳನ್ನು ಮೆಲುಕುಹಾಕಲು, ಪರಸ್ಪರ ಹಂಚಿಕೊಳ್ಳಲು ಸಮಯ ಸಿಗುತ್ತದೆ. ಕಛೇರಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ಚರ್ಚಿಸಬಹುದು.

ಅಡುಗೆಮನೆ ನಿಮ್ಮ ಸಂಗಾತಿಯೊಂದಿಗೆ ಹತ್ತಿರವಾಗಬಹುದಾದ ಸ್ಥಳವೇ ಹೊರತು ನಿಮ್ಮ ಫೋನ್‌ ನೊಂದಿಗೆ ಅಲ್ಲ. ನೀವು ಪರಸ್ಪರ ಕೀಟಲೆ ಮಾಡುವುದನ್ನು ಮತ್ತು ಮುದ್ದಿಸುವುದನ್ನು ಸಹ ಆನಂದಿಸಬಹುದು. ಅಲ್ಲಿ ನಿಮ್ಮನ್ನು ತೊಂದರೆಗೊಳಿಸಲು ಬೇರೆ ಯಾರೂ ಬರಲಾರರು.

ಅಡುಗೆಮನೆಯಲ್ಲಿ ನೀವಿಬ್ಬರೂ ಖುಷಿ ಖುಷಿಯಾಗಿ ಸಂಭಾಷಣೆಗಳನ್ನು ನಡೆಸುತ್ತಾ, ರುಚಿಕರವಾದ ಭಕ್ಷ್ಯಗಳನ್ನು ಸಹ ತಯಾರಿಸಬಹುದು. ಇದು ನಿಮಗೆ ಒಂದು ರೀತಿಯ ಮನರಂಜನೆ ಒದಗಿಸುವುದಲ್ಲದೆ, ನಿಮ್ಮ ಹೆಂಡತಿಯ ಮೇಲಿನ ಹೊರೆಯನ್ನು ಸಹ ಕಡಿಮೆ ಮಾಡುತ್ತದೆ. ಗಂಡನಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದಾದರೆ, ಕನಿಷ್ಠ ತನ್ನ ಹೆಂಡತಿಗಾಗಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಇತರೆ ತರಕಾರಿಗಳನ್ನಾದರೂ ಕತ್ತರಿಸಿ ಕೊಡಬಹುದು. ಅವನು ಅವಳಿಗೆ ರೊಟ್ಟಿ ತಯಾರಿಸುವಲ್ಲಿ ಅಥವಾ ಆಹಾರ ಬಡಿಸುವಲ್ಲಿ ಸಹಾಯ ಮಾಡಬಹುದು. ಕಾಲಾನಂತರದಲ್ಲಿ ಅವನೇ ಸ್ವತಃ ಅಡುಗೆ ಮಾಡುವುದನ್ನು ಕಲಿತುಬಿಡುತ್ತಾನೆ.

ಬಾಲ್ಯದಿಂದಲೇ ಹುಡುಗರಿಗೆ ಅಡುಗೆ ಮಾಡುವುದನ್ನು ಕಲಿಸಿದರೆ, ಮುಂದೆ ದೊಡ್ಡವರಾದ ನಂತರ ಬೇರೆ ನಗರದಲ್ಲಿ ಒಂಟಿಯಾಗಿ ವಾಸಿಸುವುದು ಸುಲಭವಾಗುತ್ತದೆ. ಪುರುಷರು ಅಡುಗೆ ಕೆಲಸದಲ್ಲಿ ಭಾಗವಹಿಸುವುದು ಸಹ ಅವರಿಗೇ ಒಳ್ಳೆಯದು. ಮನೆಯ ಹುಡುಗನನ್ನು ಬಾಲ್ಯದಿಂದಲೇ ಅಡುಗೆ ಮನೆಗೆ ಕರೆಸಿ ಮನೆಗೆಲಸ ಮಾಡಲು ಹೇಳಿಕೊಟ್ಟರೆ, ಅವರು ಹಾಸ್ಟೆಲ್ ‌ನಲ್ಲಿ ಒಂಟಿಯಾಗಿ ವಾಸಿಸುವಾಗ ಅಥವಾ ಅಧ್ಯಯನ/ಕೆಲಸಕ್ಕಾಗಿ ದೂರದಲ್ಲೋ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದಾಗ, ಎಲ್ಲವೂ ತುಂಬಾ ಸುಲಭವಾಗುತ್ತದೆ. ಇದು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ.

ಅಲ್ಲದೆ, ಅವರು ತಮ್ಮ ಆಹಾರವನ್ನು ತಾವೇ ಮಾಡಿಕೊಳ್ಳುವ ಮೂಲಕ ಶಾಂತಿಯುತವಾಗಿ ಬದುಕುತ್ತಾರೆ. ಹೊಟ್ಟೆ ತುಂಬಿಸಿಕೊಳ್ಳಲು ಅವರು ಆಹಾರಕ್ಕಾಗಿ ಯಾರನ್ನಾದರೂ ಅವಲಂಬಿಸಬೇಕಾಗಿಲ್ಲ. ಇಲ್ಲದಿದ್ದರೆ ಹೋಟೆಲ್ ಗಳಲ್ಲಿ ಅಥವಾ ಇನ್ನೆಲ್ಲೋ ಹೊರಗೆ ತಿನ್ನಬೇಕಾಗುತ್ತದೆ.

IB128411-128411103323647-SM339668

ಅಡುಗೆ ಮಾಡುವುದು ಸ್ವಾವಲಂಬನೆಯ ಗುಣ. ಅದನ್ನು ಜೀವನದುದ್ದಕ್ಕೂ ಉಪಯುಕ್ತವಾದ ಕೌಶಲ್ಯವಾಗಿ ನೋಡಬೇಕು. ಮನೆಯ ಹಿರಿಯರು ಅಂದರೆ ತಂದೆ, ಚಿಕ್ಕಪ್ಪ ಮುಂತಾದವರು ಮನೆಗೆಲಸ ಅಥವಾ ಅಡುಗೆ ಮಾಡುವುದನ್ನು ನೋಡಿದಾಗ ಮಾತ್ರ ಮಕ್ಕಳು ಬಾಲ್ಯದಿಂದಲೇ ಅಡುಗೆ ಕೆಲಸಕ್ಕೆ ಒಗ್ಗಿಕೊಳ್ಳುತ್ತಾರೆ. ಪುರುಷರು ಅಡುಗೆ ಮಾಡುವುದು ತಮ್ಮ ಸಂಗಾತಿಗೆ ಸಹಾಯ ಮಾಡುವುದಲ್ಲದೆ, ಇದು ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಮನೆಗೆಲಸಗಳಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರ ನಿರ್ವಹಿಸಬೇಕು ಎಂಬ ಭಾವನೆಯನ್ನು ಬೆಳೆಸುತ್ತದೆ. ಹಾಗಾಗಿ ಪುರುಷರು ಮನೆಗೆಲಸ ಅಥವಾ ಅಡುಗೆ ಜವಾಬ್ದಾರಿಯನ್ನು ಇದೇ ಕಾರಣಕ್ಕಾದರೂ ತೆಗೆದುಕೊಳ್ಳುವುದು ಒಳ್ಳೆಯದು.

ಕುಟುಂಬದ ಅಡಿಪಾಯ ಭದ್ರವಾಗಲಿ

ಅಡುಗೆ ಮಾಡುವ ಕಲೆ ಕಷ್ಟಕರವಾದ ಕೆಲಸವಲ್ಲ. ಇದು ಸೃಜನಶೀಲ ಮತ್ತು ಮೋಜಿನ ಪ್ರಕ್ರಿಯೆಯಾಗಬಹುದು. ಇದರಲ್ಲಿ ಪುರುಷರು ಸಹ ಭಾಗವಹಿಸಬೇಕು. ಅಡುಗೆಯಲ್ಲಿ ಪುರುಷರ ಭಾಗವಹಿಸುವಿಕೆಯು ಕುಟುಂಬ ಸದಸ್ಯರಿಗೆ ಪರಸ್ಪರ ಹತ್ತಿರವಾಗಲು ಅವಕಾಶ ನೀಡುತ್ತದೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡಿದಾಗ, ಪರಸ್ಪರ ತಿಳಿವಳಿಕೆ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.

ಊಟದ ಮೇಜಿನ ಬಳಿ ಒಟ್ಟಿಗೆ ಊಟ ಮಾಡುವುದು ಮತ್ತು ಅಡುಗೆಮನೆಯಲ್ಲಿ ಒಟ್ಟಿಗೆ ಅಡುಗೆ ಮಾಡುವುದು ಕುಟುಂಬದ ಬಂಧವನ್ನು ಬಲಪಡಿಸುತ್ತದೆ. ಅಡುಗೆ ಕೆಲಸ ಎಂದಿಗೂ ತಟಸ್ಥವಲ್ಲ, ಅದು ನಿರಂತರವಾಗಿ ನಿತ್ಯ ನಡೆಯುವ ಕೆಲಸ. ಇದರಲ್ಲಿ ಪುರುಷರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ನಮ್ಮ ಸಮಾಜದಲ್ಲಿ ಪುರುಷರನ್ನು ಅಡುಗೆಮನೆಯಿಂದ ದೂರವಿಡಲಾಗುತ್ತದೆ. ಅದು ತಪ್ಪು. ಪುರುಷರು ಈ ತಡೆಗೋಡೆಯನ್ನು ಮುರಿಯುವ ಅಗತ್ಯವಿದೆ.

ಇತರ ವಿಷಯಗಳಲ್ಲಿ ಸಮಾನತೆ

ಮಹಿಳೆಯರು ಅಡುಗೆಮನೆಯಲ್ಲಿ ಮಾತ್ರ ಸಮಾನತೆಯ ಬಗ್ಗೆ ಯೋಚಿಸಬಾರದು. ಈ ಸಮಾನತೆಯನ್ನು ಜೀವನದ ಇತರ ಅಂಶಗಳಲ್ಲಿಯೂ ನೋಡಬೇಕು. ಉದಾಹರಣೆಗೆ, ಪುರುಷರು ಮನೆಗೆಲಸ ಮಾಡಲು ಸಾಧ್ಯವಾದರೆ, ಮಹಿಳೆಯರು ಹೊರಗಿನ ಕೆಲಸವನ್ನೂ ನಿಭಾಯಿಸಬಹುದು. ಅದು ಬ್ಯಾಂಕ್‌ ಗೆ ಸಂಬಂಧಿಸಿದ ಕೆಲಸವಾಗಲಿ, ಬಿಲ್ ‌ಪಾತಿಸುವುದಾಗಲಿ, ಅಗತ್ಯ ವಸ್ತುಗಳನ್ನು ಖರೀದಿಸುವುದಾಗಲಿ, ಸ್ವಿಚ್‌ ಬದಲಾಯಿಸುವುದು, ನಲ್ಲಿ ಸರಿಪಡಿಸುವುದು, ಮೊಳೆ ಹೊಡೆಯುವುದು, ವಿದ್ಯುತ್‌ಸಂಪರ್ಕಿಸುವುದಾಗಲಿ ಅಥವಾ ಟ್ಯಾಂಕ್‌ ಪರಿಶೀಲಿಸಲು ಛಾವಣಿ ಏರುವುದಾಗಲಿ ಇಂತಹ ಕೆಲಸಗಳಿಗೆ ಮಹಿಳೆಯರು ಹೆಚ್ಚಾಗಿ ಪುರುಷರನ್ನು ಎದುರು ನೋಡುತ್ತಾರೆ. ಇದು ಸರಿಯಲ್ಲ.

ಇಂದಿನ ಮಹಿಳೆ ಎಷ್ಟು ವಿದ್ಯಾವಂತಳು, ಬುದ್ಧಿವಂತಳು ಮತ್ತು ಶಕ್ತಿಶಾಲಿಯಾಗಿದ್ದಾಳೆ ಎಂದರೆ, ಅವಳು ಎಲ್ಲಾ ರೀತಿಯ ಕೆಲಸಗಳನ್ನೂ ಮಾಡಬಲ್ಲಳು. ನೀವು ಎಲ್ಲೋ ಹೊರಗೆ ಹೋಗಬೇಕಾದರೆ ನೀವೇ ಕಾರು ಅಥವಾ ಸ್ಕೂಟರ್‌ ಚಲಾಯಿಸಿಕೊಂಡು ಹೋಗಬಹುದು. ನಿಮ್ಮ ಗಂಡನ ಹಿಂದೆ ಕುಳಿತುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಅದೇ ರೀತಿ, ಯಾವುದೇ ಕೆಲಸವಾಗಿದ್ದರೂ ನಿಮ್ಮನ್ನು ಹಿಂದೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ಮಹಿಳೆ ಅಥವಾ ಪುರುಷನಾಗಲಿ, ಇಬ್ಬರೂ ಸಮಾನರು. ಒಬ್ಬ ಪುರುಷ ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಲು ಯೋಚಿಸಿದರೆ, ನೀವೂ ಸಹ ನಿಮ್ಮ ಸ್ನೇಹಿತೆಯರೊಂದಿಗೆ ಹೊರಗೆ ಹೋಗಬಹುದು.

ಮಗುವಿನ ಜನನದ ಸಮಯದಲ್ಲಿ ಹೆಚ್ಚಾಗಿ ಮಹಿಳೆಯರು ತಮ್ಮ ಮಗುವನ್ನು ನೋಡಿಕೊಳ್ಳಲು ಕಛೇರಿಗೆ ರಜೆ ಹಾಕಬೇಕಾಗುತ್ತದೆ. ಇದರಿಂದಾಗಿ ಅನೇಕ ಸಲ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಮಕ್ಕಳು ಮಹಿಳೆಗೆ ಮಾತ್ರ ಸೇರಿದ್ದಾರೆಯೇ? ಮಗುವನ್ನು ನೋಡಿಕೊಳ್ಳುವುದು ಗಂಡನ ಜವಾಬ್ದಾರಿಯೂ ಅಲ್ಲವೇ? ಸ್ವಲ್ಪ ಸಮಯ ಮಹಿಳೆ ಮನೆಯಲ್ಲಿಯೇ ಇರಬೇಕು ಮತ್ತು ಸ್ವಲ್ಪ ಸಮಯ ಪುರುಷನ ಬಳಿಯೇ ಇರಬೇಕು. ಇದು ಮಗುವಿನೊಂದಿಗೆ ಸಮಯ ಕಳೆಯುವ ಸಂತೋಷವನ್ನು ನೀಡುವುದಲ್ಲದೆ, ಮಹಿಳೆಯ ವೃತ್ತಿ ಜೀವನವನ್ನೂ ಹಾಳು ಮಾಡುವುದಿಲ್ಲ.

ಗಿರಿಜಾ ಭಟ್

ಆರ್ಥಿಕ ಸಮಾನತೆ

ಒಬ್ಬ ಮಹಿಳೆ ಸಂಪಾದಿಸುತ್ತಿದ್ದರೆ, ಅವಳು ತನ್ನದೇ ಆದ ಬ್ಯಾಂಕ್‌ ಖಾತೆಯನ್ನು ಹೊಂದಿರಬೇಕು. ಅವಳು ತನ್ನದೇ ಆದ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಆಕೆ ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ಆಕೆ ಇಷ್ಟಪಡುವುದನ್ನು ಖರೀದಿಸಬಹುದು. ಅವಳು ಸಂಪಾದಿಸದಿದ್ದರೂ ಸಹ, ತನ್ನ ಗಂಡನೊಂದಿಗೆ ಜಂಟಿ ಖಾತೆಯನ್ನು ಹೊಂದಿರಬೇಕು. ತಾವು ಕೊಂಡ ಮನೆಯು ಗಂಡ ಹೆಂಡತಿ ಇಬ್ಬರ ಹೆಸರಿನಲ್ಲಿರಬೇಕು. ಅಂದರೆ ಪುರುಷನು ಮನೆಯ ಮಾಲೀಕರಾಗಿರುವುದು ಏಕೆ? ಹೆಂಡತಿಯ ಹೆಸರಿನಲ್ಲಿಯೂ ಮನೆಯನ್ನು ಖರೀದಿಸಬೇಕು.

ಯಾವುದೇ ಸಾಲವನ್ನು ಮರುಪಾವತಿ ಮಾಡಬೇಕಾದರೆ ಇಬ್ಬರೂ ಒಟ್ಟಿಗೆ ಮರುಪಾವತಿಸಬೇಕು. ಕಾನೂನು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ನೀಡಿದೆ. ಇದನ್ನು ಪ್ರಾಯೋಗಿಕವಾಗಿಯೂ ಸ್ವೀಕರಿಸಬೇಕು. ಹಕ್ಕುಗಳ ಜೊತೆಗೆ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸಹ ಪೂರೈಸಬೇಕು. ಪೋಷಕರು ಮಹಿಳೆಯಾಗಲಿ ಅಥವಾ ಪುರುಷನಾಗಲಿ, ಅಗತ್ಯವಿದ್ದರೆ, ಇಬ್ಬರೂ ಒಟ್ಟಾಗಿ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು ಮತ್ತು ಅವರನ್ನು ನೋಡಿಕೊಳ್ಳಬೇಕು.

IB136041-136041174412270-SM409974

ಭಾರತೀಯ ಮನೆಗಳಲ್ಲಿ ಪುರುಷರು ಸಂಪ್ರದಾಯವಾದಿ ರೂಢಿಗಳನ್ನು ಬಿಟ್ಟು ಅಡುಗೆ ಮತ್ತು ಮನೆಗೆಲಸಗಳನ್ನು ಮಹಿಳೆಯರೊಂದಿಗೆ ಹಂಚಿಕೊಳ್ಳಬೇಕು. ಇದು ಸಮಾನತೆ ಮತ್ತು ಪಾಲದಾರಿಕೆಯನ್ನು ಉತ್ತೇಜಿಸುವುದಲ್ಲದೆ, ಮಹಿಳೆಯರ ಮೇಲಿನ ವೇತನರಹಿತ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಅಡುಗೆ ಜವಾಬ್ದಾರಿಯ ಜೊತೆಗೆ ಇತರ ವಿಷಯಗಳಲ್ಲಿಯೂ ಸಮಾನತೆಯನ್ನು ಉತ್ತೇಜಿಸಬೇಕು. ಮಹಿಳೆಯರನ್ನು ಕೀಳಾಗಿ ಕಾಣುವ ಇಂತಹ ಪದ್ಧತಿಗಳನ್ನು ನಾವು ಕೊನೆಗಾಣಿಸಬೇಕು.

ಇದು ನಮ್ಮ ಬಾಲ್ಯದಿಂದಲೇ ಆರಂಭವಾಗಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾಗಬೇಕಾದ ಅಗತ್ಯವಿದೆ. ಭಾರತೀಯ ಸಮಾಜದಲ್ಲಿ ಮನೆಗೆಲಸ ಮತ್ತು ಅಡುಗೆಯ ಜವಾಬ್ದಾರಿಯನ್ನು ಮಹಿಳೆಯ ಮೇಲೆಯೇ ಹೇರವಾಗಿದೆ. ಮಹಿಳೆಯರು ಸ್ವಾಭಾವಿಕವಾಗಿಯೇ ಅಂತಹ ಕೆಲಸಗಳಲ್ಲಿ ನಿಪುಣರು ಎಂದು ನಂಬಲಾಗಿದೆ. ನಾವು ಒಟ್ಟಾಗಿ ಈ ಹಳೆಯ ಚಿಂತನೆಯನ್ನು ಬದಲಾಯಿಸಬೇಕು ಮತ್ತು ನಮ್ಮ ಮನೆಯಲ್ಲಿ ಸಮಾನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇಂದು ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಅವರಿಗೆ ಮುಂದುವರಿಯಲು ಅವಕಾಶಗಳೂ ಇವೆ. ಆದ್ದರಿಂದ, ಇಂದು ನಾವು ಸಮಾಜ ಮತ್ತು ಜಗತ್ತನ್ನು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಪಾತ್ರ ನಿರ್ವಹಿಸುವ ರೀತಿಯಲ್ಲಿ ರಚಿಸಬೇಕು. ಈಗ ತಂತ್ರಜ್ಞಾನ ಸಮಾನ ಅವಕಾಶಗಳನ್ನು ನೀಡಿದೆ. ಈಗ ಆಹಾರವನ್ನು ತರಲು ಕಾಡಿಗೆ ಹೋಗುವ ಬದಲು ಸೂಪರ್‌ ಮಾರ್ಕೆಟ್‌ ಅಥವಾ ಮಾಲ್ ‌ಗೆ ಹೋಗಬಹುದು. ಮಹಿಳೆ ಈ ಕೆಲಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಲ್ಲಳು! ಒಟ್ಟಿಗೆ ಕೆಲಸ ಮಾಡುವುದು ಬೇರೆ ರೀತಿಯ ಮಜಾ ಅಂತ ನಿಮಗೆ ಅನ್ನಿಸುವುದಿಲ್ಲವೇ? ಗಂಡಹೆಂಡತಿ ಒಟ್ಟಿಗೆ ಕೆಲಸ ಮಾಡಿದಾಗ, ಅವರು ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶ ಸಿಗುತ್ತದೆ. ಅವರಿಗೆ ತಮ್ಮ ದಿನದ ಘಟನೆಗಳನ್ನು ಮೆಲುಕು ಹಾಕುವ, ಪರಸ್ಪರ ಹಂಚಿಕೊಳ್ಳಲು ಸಮಯ ಸಿಗುತ್ತದೆ. ಕಛೇರಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ಚರ್ಚಿಸಬಹುದು. ಅಡುಗೆಮನೆ ನಿಮ್ಮ ಸಂಗಾತಿಯೊಂದಿಗೆ ಹತ್ತಿರವಾಗಬಹುದಾದ ಸ್ಥಳವೇ ಹೊರತು ನಿಮ್ಮ ಫೋನ್‌ ನೊಂದಿಗೆ ಅಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ