ಸಾಮಾನ್ಯವಾಗಿ ನಾನು ಮನೆಯಲ್ಲಿದ್ದರೆ ತೆಂಗಿನಕಾಯಿ ಒಡೆಯುವ ಘನಕಾರ್ಯ ನನ್ನದೇ!  ಇತ್ತೀಚೆಗೆ ತಿಂಡಿಗೆ ಕಾಯಿ ಒಡೆಯುವಾಗ ಇಡೀ ತೆಂಗಿನಕಾಯಿ ಗುಂಡಗೆ ಒಳ್ಳೇ ಕೊಬ್ಬರಿ ಗಿಟುಕಿನಂತೆ ಚಿಪ್ಪಿನಿಂದ ಬೇರೆಯಾಯ್ತು.  ಓಹ್, ಕಾಯಿ ಕೆಟ್ಟಹೋಗಿದೆಯೇನೋ ಎಳನೀರಿನ ರುಚಿ ನೋಡಿದರೆ ಗೊತ್ತಾಗುತ್ತೆ ಅಂತ ಎಂದುಕೊಂಡು ನಿಧಾನವಾಗಿ ಅದರ ಹೊಟ್ಟೆಗೆ ಚಾಕು ಹಾಕಿ ಸಣ್ಣ ಸೀಳು ಮಾಡಿ ಲೋಟಕ್ಕೆ ಎಳನೀರನ್ನು ಬಗ್ಗಿಸಿದೆ. ಆದರೆ ಆದದ್ದೇ ಬೇರೆ! ಎಳನೀರಂತೂ ಜೇನುತುಪ್ಪವನ್ನೇ ಮೀರಿಸುವಷ್ಟು ಸಿಹಿಯಾಗಿತ್ತು! ಹಾಗಾಗಿ

ತೆಂಗಿನಕಾಯಿ ಚೆನ್ನಾಗಿ ಇರುತ್ತೆ ಎಂದು ಚಾಕುವಿನಿಂದ ಪೂರ್ತಿ ಇರಿದು ಎರಡು ಹೋಳನ್ನಾಗಿ ಮಾಡಿದೆ; ಆದರೆ ವಿಷಯ ಅದಲ್ಲ, ಆ ತೆಂಗಿನ ಕಾಯಿಯ ಚೂರನ್ನು ನೋಡುತ್ತಿದ್ದ ಹಾಗೆ ನನ್ನ ನೆನಪು ಸುಮಾರು 45 ವರ್ಷಗಳಷ್ಟು ಹಿಂದಕ್ಕೆ ಹೋಯಿತು.

ಆಗ ನಾವು ಬಾಡಿಗೆಗೆ ಇದ್ದ ಒಂದು ಕೋಣೆಯ ಮನೆಯಲ್ಲಿ ನಮ್ಮ ಕೂಡು ಕುಟುಂಬದ ನಮ್ಮಪ್ಪ, ಅಮ್ಮ, ತಮ್ಮ ತಂಗಿಯರು, ಅಜ್ಜಿ, ಅಜ್ಜಿಯವರ ಅಕ್ಕ, ನನ್ನ ತಂದೆಯ ಇಬ್ಬರು ತಮ್ಮಂದಿರು (ನನ್ನ ಚಿಕ್ಕಪ್ಪಂದಿರು )ಹಾಗೂ  ಇಬ್ಬರು ತಂಗಿಯರು (ನನ್ನ ಸೋದರತ್ತೆಯರು) ಹೀಗೆ ಸುಮಾರು 10-12 ಜನ ಇರುತ್ತಿದ್ದೆವು. ಮೊದಲೇ ನಮ್ಮದು ಬಡ ಬ್ರಾಹ್ಮಣ ಕುಟುಂಬ! ಮನೆಯಲ್ಲಿ ದುಡಿಯುವ ಕೈಗಳು ಕೆಲವೇ ಕೆಲವು , ಆದರೆ ತಿನ್ನುವ ಬಾಯಿಗಳು ಹಲವಾರು! ನಮ್ಮ ಬೆಳಗಿನ ತಿಂಡಿಯಲ್ಲಿ, ಉದಾಹರಣೆಗೆ ಅವಲಕ್ಕಿ, ಉಪ್ಪಿಟ್ಟು, ದೋಸೆಗೆ ಚಟ್ನಿ ಹೀಗೆ  ಯಾವುದೇ ತಿಂಡಿಯಾದರೂ ತೆಂಗಿನಕಾಯಿ ಇರಲೇ ಬೇಕೆಂಬ ಅಲಿಖಿತ ನಿಯಮವಿದೆ! ಆದರೆ ತೆಂಗಿನಕಾಯಿಯ ಬೆಲೆ ಆಗ ನಮಗೆ ಗಗನ ಕುಸುಮವೇ.

ಒಂದು – ಒಂದೂ ಕಾಲು ರೂಪಾಯಿಗೆ ಒಂದು ತೆಂಗಿನಕಾಯಿ! ಆಗ ಕಾಲ ಅಷ್ಟು ಸುಭಿಕ್ಷವಲ್ಲದ್ದರಿಂದ ತೆಂಗಿನಕಾಯಿ ವ್ಯಾಪಾರಿಗಳು ತೆಂಗಿನಕಾಯಿಗಳನ್ನು ಒಡೆದು ಅದನ್ನು ಸಣ್ಣ ಸಣ್ಣ ಚೂರುಗಳನ್ನಾಗಿ  ಮಾಡಿಟ್ಟುಕೊಳ್ಳುತ್ತಿದ್ದರು.ಒಂದು ಇಡೀ ಕಾಯಿಯನ್ನು ಸುಮಾರು ಹತ್ತಿಪ್ಪತ್ತು ತುಂಡುಗಳನ್ನಾಗಿ ಮಾಡಿ, ಒಂದು ದೊಡ್ಡ ಬೇಸಿನ್ನಿನಂಥ ಬಟ್ಟಲಿನಲ್ಲಿ ನೀರು ಹಾಕಿ ಮಾರಲಿಕ್ಕೆ ಇಟ್ಟಿರುತ್ತಿದ್ದರು ಮತ್ತು ಅದರ ಬೆಲೆ 5 ಪೈಸೆ – 10 ಪೈಸೆ ಇರಬಹುದು ಅಷ್ಟೇ!

ಹಾಗಾಗಿ ಇದೇ ತೆಂಗಿಕಾಯಿಗಳನ್ನು ಕೊಳ್ಳಲಾಗದ ನಮ್ಮಂಥವರು ಈ ತೆಂಗಿನಚೂರನ್ನೇ ಕೊಳ್ಳುವುದು ಅನಿವಾರ್ಯ ಆಗಿತ್ತು!

ನಮ್ಮಜ್ಜಿ ತಿಂಡಿಗೆ  ಒಂದೆರಡು ತೆಂಗಿನಚೂರು ತೆಗೆದುಕೊಂಡು ಬಾ ಎಂದು ಹತ್ತು ಪೈಸೆಯೋ, ನಾಲ್ಕಾಣೆಯೋ ಕೈಗಿತ್ತರೆ ನಾನು ಓಡಿ ಹೋಗಿ ತೆಂಗಿನಕಾಯಿ ಅಂಗಡಿಯ ಮುಂದೆ ನಿಲ್ಲುತ್ತಿದ್ದುದು , ಬೇಸಿನ್ನಿನಲ್ಲಿ ತೇಲುತ್ತಿದ್ದ ತೆಂಗಿನಚೂರಿನ ನೆನಪು ಹೀಗೆ  ಹಲವಾರು ಚಿತ್ರಣಗಳು ಮೊನ್ನೆ ತೆಂಗಿನಕಾಯಿ ಒಡೆದಾಗ ಕಣ್ಣಮುಂದೆ ಸುಳಿದಾಡಿತು ! ಅದಕ್ಕೇ ಈ ಹಳೆಯ ಘಟನೆಯನ್ನು ನೆನಪಿನಬುತ್ತಿಯಿಂದ ಹೊರ ತೆಗೆದು ನಿಮ್ಮ ಮುಂದಿಟ್ಟಿದ್ದೇನೆ!

ಈಗಿನ ಜೆನ್ ಝೀ ಮಕ್ಕಳಿಗೆ ಇದರ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನವಿದು!

————————–

ಆರ್. ಕೃಷ್ಣಮೂರ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ