ರಾಘವೇಂದ್ರ ಅಡಿಗ ಎಚ್ಚೆನ್.

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಖ್ಯಾತ ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಅವರ ಮಾನವೀಯತೆ ಸಾವಿನ ಬಳಿಕವೂ ಜೀವಂತವಾಗಿದೆ. ತೀವ್ರ ಹೃದಯಾಘಾತದಿಂದ ಶನಿವಾರ (ಜೂನ್ 27) ನಿಧನರಾದ ಅವರು, ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಇಬ್ಬರ ಬದುಕಿಗೆ ಬೆಳಕಾಗಿದ್ದಾರೆ.

‘ಚಿತ್ರಕಥೆಯ ರಾಜ’ ಎಂದೇ ಖ್ಯಾತರಾಗಿದ್ದ ಭಾಗ್ಯರಾಜ್ ಅವರು ಬದುಕಿದ್ದಾಗಲೇ ನೇತ್ರದಾನ ಮಾಡುವ ಪ್ರತಿಜ್ಞೆ ಮಾಡಿದ್ದರು. ಅವರ ನಿಧನದ ಬೆನ್ನಲ್ಲೇ ಕುಟುಂಬಸ್ಥರು ಆ ಇಚ್ಛೆಯನ್ನು ಗೌರವಿಸಿ ಕಣ್ಣಿನ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯರ ತಂಡ ನಿವಾಸಕ್ಕೆ ಭೇಟಿ ನೀಡಿ ಕಾರ್ನಿಯಾ ಸಂಗ್ರಹಿಸುವ ಮೂಲಕ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಭಾಗ್ಯರಾಜ್ ಅವರ ಈ ಮಾನವೀಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ನೇತ್ರದಾನ ಮಾಡಿದಾಗ ಸಮಾಜದಲ್ಲಿ ಜಾಗೃತಿ ಹೆಚ್ಚುತ್ತದೆ. ಮರಣದ ನಂತರವೂ ಮತ್ತೊಬ್ಬರ ಬದುಕಿಗೆ ಬೆಳಕಾಗಬೇಕು ಎಂಬ ಅವರ ಚಿಂತನೆ ಅತ್ಯಂತ ಶ್ಲಾಘನೀಯ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಪ್ರತಿವರ್ಷ 1ರಿಂದ 2 ಲಕ್ಷ ಜನರಿಗೆ ಕಾರ್ನಿಯಾ ಕಸಿ ಅಗತ್ಯವಿದ್ದರೂ, ಕೇವಲ 45ರಿಂದ 50 ಸಾವಿರ ಕಾರ್ನಿಯಾಗಳು ಮಾತ್ರ ಲಭ್ಯವಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದು, ಭಾಗ್ಯರಾಜ್ ಅವರ ನಿರ್ಧಾರ ಇತರರಿಗೆ ಮಾದರಿಯಾಗಲಿದೆ ಎಂದಿದ್ದಾರೆ.

ತೀವ್ರ ಹೃದಯಾಘಾತದಿಂದ ನಿಧನರಾದ ಭಾಗ್ಯರಾಜ್ ಅವರು ಪತ್ನಿ ಪೂರ್ಣಿಮಾ, ಪುತ್ರ ಶಾಂತನು, ಪುತ್ರಿ ಶರಣ್ಯಾ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕೆಲವೇ ದಿನಗಳ ಹಿಂದೆ ತಮ್ಮ ಗುರು ಹಾಗೂ ಆಪ್ತ ಸ್ನೇಹಿತರಾದ ನಿರ್ದೇಶಕ ಕೆ. ಭಾರತಿರಾಜ ಅವರನ್ನು ಕಳೆದುಕೊಂಡಿದ್ದ ತಮಿಳು ಚಿತ್ರರಂಗಕ್ಕೆ ಇದೀಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ