ಬೆಂಗಳೂರು ನಗರದಲ್ಲಿ ಇಂದು ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ನಾಗರಿಕ ಮೂಲಸೌಕರ್ಯಗಳ ಸಮನ್ವಯದ ಪ್ರತೀಕವಾಗಿ ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಶೇಷಾದ್ರಿಪುರ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರದೇಶದ ಇತಿಹಾಸವನ್ನು ಹತ್ತಿರದಿಂದ ಗಮನಿಸಿದರೆ, ಇದು ಕೇವಲ ಒಂದು ಬಡಾವಣೆಯಲ್ಲ; ಮಹಾಮಾರಿಯನ್ನು ಎದುರಿಸಲು ರೂಪುಗೊಂಡ ದೂರದೃಷ್ಟಿಯ ನಗರ ಯೋಜನೆಯ ಜೀವಂತ ಸಾಕ್ಷಿಯಾಗಿದ್ದು ಶೇಷಾದ್ರಿಪುದರ ಸಂಪೂರ್ಣ ವಿವರಗಳನ್ನು ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

1898ರಲ್ಲಿ ಬೆಂಗಳೂರಿನಲ್ಲಿ ಬ್ಯೂಬೋನಿಕ್ ಪ್ಲೇಗ್ ಮಹಾಮಾರಿ ಭೀಕರವಾಗಿ ಹರಡಿತು. ಜನಸಂದಣಿಯಿಂದ ಕೂಡಿದ್ದ ಪೇಟೆ ಪ್ರದೇಶಗಳು ಹಾಗೂ ಕಂಟೋನ್ಮೆಂಟ್ ಭಾಗಗಳಲ್ಲಿ ರೋಗ ವೇಗವಾಗಿ ವ್ಯಾಪಿಸುತ್ತಿದ್ದ ಕಾರಣ, ಅಂದಿನ ಮೈಸೂರು ಸರ್ಕಾರವು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಹೊಸ ವಸತಿ ಪ್ರದೇಶಗಳನ್ನು ನಿರ್ಮಿಸುವ ಅಗತ್ಯವನ್ನು ಮನಗಂಡಿತು.ಈ ಹಿನ್ನೆಲೆಯಲ್ಲಿ ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಹೊಸ ಬಡಾವಣೆಗಳನ್ನು ಯೋಜಿತವಾಗಿ ಅಭಿವೃದ್ಧಿಪಡಿಸಿ ಅಲ್ಲಿ ವಿಶಾಲ ರಸ್ತೆಗಳು, ಉತ್ತಮ ಗಾಳಿ–ಬೆಳಕು ಮತ್ತು ಆರೋಗ್ಯಕರ ವಾಸಸ್ಥಳಗಳೊಂದಿಗೆ ನಿರ್ಮಿಸಲಾದ ಪ್ರದೇಶವೇ ಇಂದಿನ ಶೇಷಾದ್ರಿಪುರ. ಇದು ಅಂದಿನ ಕಾಲಕ್ಕೆ ಅತ್ಯಾಧುನಿಕ ನಗರ ಯೋಜನೆಗಳ ಮಾದರಿಯಾಗಿತ್ತು ಎನ್ನುವುದು ಗಮನಾರ್ಹವಾಗಿದೆ.

1890ರ ದಶಕದ ಆರಂಭದಲ್ಲಿ ಈ ಪ್ರದೇಶವು ಪೇಟೆ ಮತ್ತು ಕಂಟೋನ್ಮೆಂಟ್ ನಡುವಿನ ಕೃಷಿಭೂಮಿಯಾಗಿತ್ತು. ನಂತರ ಮೈಸೂರು ಸರ್ಕಾರ ಅದನ್ನು ಯೋಜಿತ ವಸತಿ ಬಡಾವಣೆಯಾಗಿ ಅಭಿವೃದ್ಧಿಪಡಿಸಿದ ನಂತರ ಶೇಷಾದ್ರಿಪುರವು ಹಲವು ಆಧುನಿಕ ಸೌಲಭ್ಯಗಳನ್ನು ಮೊದಲಿಗರಾಗಿ ಕಂಡ ಪ್ರದೇಶಗಳಲ್ಲಿ ಒಂದಾಗಿದೆ.

* ಹೆಸರುಘಟ್ಟದಿಂದ ಕೊಳವೆ ಮಾರ್ಗದ ಮೂಲಕ ಕುಡಿಯುವ ನೀರು ಪೂರೈಕೆ.
* ಶಿವನಸಮುದ್ರ ಜಲವಿದ್ಯುತ್ ಯೋಜನೆಯಿಂದ ವಿದ್ಯುತ್ ಪಡೆದ ಬೆಂಗಳೂರಿನ ಆರಂಭಿಕ ಬಡಾವಣೆಗಳಲ್ಲಿ ಒಂದು.
* ಅಗಲವಾದ ರಸ್ತೆಗಳು, ಸಾರ್ವಜನಿಕ ಕಟ್ಟಡಗಳು ಮತ್ತು ಯೋಜಿತ ನಾಗರಿಕ ವಿನ್ಯಾಸ.

ಮೈಸೂರು ಸಂಸ್ಥಾನದ 15ನೇ ಮತ್ತು ಅತಿ ಹೆಚ್ಚು ಕಾಲ ದಿವಾನರಾಗಿದ್ದ(1883–1901) ಹೆಗ್ಗಳಿಯನ್ನು ಪಡೆದಿರುವಂತಹ ಕೆ. ಶೇಷಾದ್ರಿ ಅಯ್ಯರ್ ಅವರ ಸಾರಥ್ಯದಲ್ಲಿಯೇ ಬೆಂಗಳೂರಿನಲ್ಲಿ ಹತ್ತು ಹಲವಾರು ಯೋಜನೆಗಳು ರೂಪುಗೊಂಡ ಪರಿಣಾಮ ಶೇಷಾದ್ರಿ ಐಯ್ಯರ್ ಅವರನ್ನು ಆಧುನಿಕ ಬೆಂಗಳೂರಿನ ನಿರ್ಮಾಪಕ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಅದೇ ರೀತಿಯಾಗಿ ಈ ಹೊಸಾ ವಸತಿ ಪ್ರದೇಶದ ನೀಲ ನಕ್ಷೆ ತಯಾರಿಸುವ ಆರಂಭದಿಂದಲೂ ಹಿಡಿದು ಅ ಬಡಾವಣೆಯನ್ನು ಅರ್ಹ ನಾಗರೀಕರಿಗೆ ಹಂಚಿಕೆ ಮಾಡುವವರೆಗೂ ಜವಾಬ್ಧಾರಿಯನ್ನು ನಿಭಾಯಿಸಿದ್ದ ಕೆ. ಶೇಷಾದ್ರಿ ಅಯ್ಯರ್ ಅವರ ಸೇವೆಯನ್ನು ಸ್ಮರಿಸಲು ಮತ್ತು ಗೌರವಿಸಲು ಅಂದಿನ ಮಹಾರಾಜರಾಗಿದ್ದಂತಹ ಶ್ರೀ ಚಾಮರಾಜೇಂದ್ರ ಒಡೆಯರ್ ಅವರು ಆ ಪ್ರದೇಶಕ್ಕೆ ಶೇಷಾದ್ರಿಪುರ ಎಂದೇ ಹೆಸರಿಸಿದ ಜನರ ಆಡು ಭಾಷೆಯಲ್ಲಿ ಅದು ಶೇಷಾದ್ರಿಪುರಂ ಆಗಿ ಹೋಗಿರುವುದು ವಿಶೇಷವಾಗಿದೆ.

ಶೇಷಾದ್ರಿಪುರ ಆಧುನಿಕ ಬೆಂಗಳೂರಿನ ಅತ್ಯಂತ ಹಳೆಯ ಯೋಜಿತ ವಿಸ್ತರಣಾ ಬಡಾವಣೆಗಳಲ್ಲಿ ಒಂದಾಗಿದ್ದು, ಆಡಳಿತ ಭವನ ವಿಧಾನಸೌಧದಿಂದ ಕೂಗಳತೆ ದೂರದಲ್ಲಿದ್ದರೂ, ಯಾವುದೇ ರಾಜಕೀಯ ಗಂಧಗಾಳಿಯನ್ನೂ ಸೋಕಿಸಿಕೊಳ್ಳದೇ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಮುಂದುವರೆದ ಪ್ರದೇಶವಾಗಿದ್ದು ಅಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳಿಂದಾಗಿ ಶಿಕ್ಷಣದ ರಾಜಧಾನಿ ಎಂದೇ ಪ್ರಖ್ಯಾತಿಯನುಪಡೆದಿರುವುದು ಗಮನಾರ್ಹವಾಗಿದೆ.

1930ರಲ್ಲಿ ಇಬ್ಬರು ಶಿಕ್ಷಣ ಉತ್ಸಾಹಿ ಮಹಿಳೆಯರಾದ ಶ್ರೀಮತಿ.ಆನಂದಮ್ಮ ಮತ್ತು ಶ್ರೀಮತಿ. ಸೀತಮ್ಮ ಎನ್ನುವವರು ಕೇವಲ 20 ವಿದ್ಯಾರ್ಥಿಗಳೊಂದಿಗೆ ಮಂಗಳೂರು ಹೆಂಚಿರುವ ಸಣ್ಣ ಕಟ್ಟಡದಲ್ಲಿ ಪ್ರಾರಂಭಿಸಿದ ಶೇಷಾದ್ರಿಪುರಂ ಶೈಕ್ಷಣಿಕ ಟ್ರಸ್ಟ್ (SET) ಇಂದು ಕರ್ನಾಟಕದ ಅತಿದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಶಿಶುವಿಹಾರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಕಾಲೇಜುಗಳು, ವಾಣಿಜ್ಯ ಶಿಕ್ಷಣ ಸಂಸ್ಥೆಗಳು, ಸ್ನಾತಕೋತ್ತರ ಕಾಲೇಜುಗಳು MBA ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳು ಸೇರಿದಂತೆ ರಾಜ್ಯಾದ್ಯಂತ ಸುಮಾರು 30ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿದೆ ಅದರ ಮೂಲಕ ಸಾವಿರಾರು ವಿದ್ಯಾರ್ಥಿಗಳ ಕನಸಿನ ಶಿಕ್ಷಣ ಕೇಂದ್ರವಾಗಿ ಬೆಳೆದಿದೆ. ಅದರಲ್ಲೂ ವಿಶೇಷವಾಗಿ ಅವರ ಸಂಜೆ ಕಾಲೇಜಿನ ಮೂಲಕ ಸಾವಿರಾರು ಉದ್ಯೋಗಿಗಳು ಪದವಿ ಮತ್ತು ಉನ್ನದ ಪದವಿ ಪಡೆದು ದೊಡ್ಡ ಹುದ್ದೆಗಳಲ್ಲಿರುವುದು ನಿಜಕ್ಕೂ ಅದ್ಭುತವೇ ಸರಿ.

1950-60ರ ದಶಕದ ಆರಂಭದಲ್ಲಿ, ಬೆಂಗಳೂರಿನ ಚಿತ್ರ ಕಲಾವಿದರುಗಳಿಗೆ ಉತ್ತಮ ಕಲಾ ಶಿಕ್ಷಣ ಮತ್ತು ತಮ್ಮ ಕಲಾವಂತಿಕೆಯನ್ನು ಪ್ರದರ್ಶಿಸಲು ಬಹಳ ಸೀಮಿತವಾದ ಮೂಲ ಸೌಕರ್ಯವಿತ್ತು. ಹಾಗಾಗಿ ಕಲಾವಿದರುಗಳಿಗಾಗಿಯೇ ಮೀಸಲಾದ ಒಂದು ಸುಂದರ ವೇದಿಕೆಯನ್ನು ರಚಿಸಿ, ಅದರ ಮೂಲಕ ವೃತ್ತಿಪರ ಕಲಾ ಶಿಕ್ಷಣವನ್ನು ನೀಡುತ್ತಾ, ಕರ್ನಾಟಕದ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಮತ್ತು ಜಾನಪದ ಕಲೆಗಳನ್ನು ಉತ್ತೇಜಿಸುವುದರ ಜೊತೆಗೆ ಅವರ ಕಲೆಯನ್ನು ಸಾರ್ವಜನಿಕರುಗಳಿಗೆ ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಕಲಾವಿದರುಗಳಿಗೆ ಪ್ರೇರೇಪಣೆ ನೀಡುವಂತಹ ಉದ್ದೇಶದಿಂದ ಕರ್ನಾಟಕ ಚಿತ್ರಕಲಾ ಪರಿಷತ್ತು ಎಂಬ ಹೆಸರಿನಲ್ಲಿ ಶಾಂತಿನಗರದ ಸಣ್ಣ ಕ್ಯಾಂಪಸ್‌ನಲ್ಲಿ ಪ್ರಾರಂಭವಾಗಿ, ನಂತರ ವಿವಿಧ ಸ್ಥಳಗಳಿಗೆ ಸ್ಥಳಾಂತರಗೊಂಡು ಅಂತಿಮವಾಗಿ 1960ರಲ್ಲಿ ಇದೇ ಶೇಷಾದ್ರಿಪುರದ ಕುಮಾರ ಕೃಪಾ ರಸ್ತೆಯಲ್ಲಿ ಸ್ಥಾಪನೆಯಾಯಿತು. ಚಿತ್ರಕಲಾ ಶಾಲೆಯ ಅಭಿವೃದ್ಧಿಗಾಗಿ ಕೈಗಾರಿಕೋದ್ಯಮಿ ಎಚ್. ಕೆ. ಕೇಜ್ರಿವಾಲ್ ಪ್ರಮುಖ ಆರ್ಥಿಕ ಬೆಂಬಲವನ್ನು ನೀಡಿದರೆ, ಅಂತರರಾಷ್ಟ್ರೀಯ ಪ್ರಸಿದ್ಧ ವರ್ಣಚಿತ್ರಕಾರ ಸ್ವೆಟೋಸ್ಲಾವ್ ರೋರಿಚ್ ಅವರು ಮತ್ತವರ ತಂದೆ ನಿಕೋಲಸ್ ರೋರಿಚ್ ಅವರುಗಳು ದಾನ ಮಾಡಿದ ಹಲವಾರು ವರ್ಣಚಿತ್ರಗಳನ್ನು ಹರಾಜು/ಮಾರುವ ಮೂಲಕ ದೇಣಿಗೆಗಳು ವಸ್ತುಸಂಗ್ರಹಾಲಯ ಗ್ಯಾಲರಿಗಳ ಅಡಿಪಾಯವಾಯಿತು.

ಚಿತ್ರಕಲಾ ಪರಿಷತ್ ನಂತರದ ದಿನಗಳಲ್ಲಿ ಕಲಾ ವಸ್ತುಸಂಗ್ರಹಾಲಯಗಳು, ಪ್ರದರ್ಶನ ಗ್ಯಾಲರಿಗಳು, ಶಿಲ್ಪ ಗ್ಯಾಲರಿಗಳು,ಸಂಶೋಧನಾ ಸೌಲಭ್ಯಗಳು, ಕಲಾ ಸಂರಕ್ಷಣಾ ಕೇಂದ್ರಗಳು ಪ್ರಾರಂಭವಾಗಿ 1964ರಲ್ಲಿ, ಚಿತ್ರಕಲಾ ವಿದ್ಯಾಲಯವನ್ನು ಆರಂಭಿಸುವ ಮೂಲಕ ಲಲಿತಕಲೆಯನ್ನು ಕಲಿಸಿಕೊಡಲಾರಂಭಿಸಿತು. ಪ್ರಸ್ತುತ ಇದು ದೇಶದ ಅತ್ಯಂತ ಪ್ರಮುಖ ಕಲಾ ಸಂಸ್ಥೆಗಳಲ್ಲಿ ಒಂದಾಗಿದೆ.

ಕೆ. ಶೇಷಾದ್ರಿ ಅಯ್ಯರ್ ಆವರು ತಮ್ಮ ಅಧಿಕಾರದಿಂದ ನಿವೃತ್ತರಾಗುವ ಮುನ್ನ ತಮ್ಮ ವಾಸಕ್ಕೆಂದು ಸುಮಾರು 100 ಎಕರೆಗಳಿಗೂ ಹೆಚ್ಚು ವಿಸ್ತಾರವಾದ ಕುಮಾರಾ ಪಾರ್ಕ್ ಮೈದಾನದ ಒಂದು ಮೂಲೆಯಲ್ಲಿ ಭಾರತೀಯ ವಾಸ್ತುಶಾಸ್ತ್ರದ ಅನುಗುಣವಾಗಿ ಚಂದನೆಯ ಅರಮನೆಯಂತಹ ಕಟ್ಟಡ ಕುಮಾರ ಕೃಪಾವನ್ನು 1897ರಲ್ಲಿ ನಿರ್ಮಿಸಿ, 1901ರಲ್ಲಿ ಶೇಷಾದ್ರಿಗಳು ನಿಧನರಾದ ನಂತರ ಅವರ ಕುಟುಂಬದವರು ಹೊರ ರಾಜ್ಯಗಳು ಮತ್ತು ಹೊರದೇಶಗಳಲ್ಲಿ ವಾಸ್ತವ್ಯ ಹೂಡಿದ್ದನ್ನು ಗಮನಿಸಿದ ಅಂದಿನ ಮೈಸೂರು ಸರ್ಕಾರವು 1918ರಲ್ಲಿ ಶೇಷಾದ್ರಿ ಅಯ್ಯರ್ ಅವರ ಪುತ್ರರಿಂದ ಆ ವಿಸ್ತಾರವಾದ ಮನೆಯನ್ನು ಖರೀದಿಸಿ, ಅದನ್ನು ಗಣ್ಯರಿಗಾಗಿ ಅಧಿಕೃತ ರಾಜ್ಯ ಅತಿಥಿ ಗೃಹವಾಗಿ ಇಂದಿಗೂ ಬೆಂಗಳೂರಿನ ಐತಿಹಾಸಿಕ ಪರಂಪರೆಯ ಸಂಕೇತವಾಗಿದೆ. ಅಲ್ಲಿ ಮಹಾತ್ಮಾಗಾಂಧಿ, ದಲೈಲಾಮ ಅಲ್ಲದೇ ದೇಶ ವಿದೇಶದ ಗಣ್ಯರು ತಂಗಿದ್ದಾರೆ.

1927 ರಲ್ಲಿ ಆನಾರೋಗ್ಯದಿಂದ ಚೇತರಿಸಿಕೊಳ್ಳುವ ಸಲುವಾಗಿ ಹಲವಾರು ತಿಂಗಳುಗಳ ಕಾಲದ ಕುಮಾರ ಕೃಪಾ ಅತಿಥಿಗೃಹದಲ್ಲಿ ತಂಗಿದ್ದಂತಹ ಮಹಾತ್ಮ ಗಾಂಧಿಯವರು ಅದೇ ಪಕ್ಕದ ಕುಮಾರ ಪಾರ್ಕ್ ಮೈದಾನದಲ್ಲಿ ವಾಯುವಿಹಾರ ಮಾಡಿದ್ದರ ನೆನಪಿನಾರ್ಥವಾಗಿ ಕುಮಾರ ಪಾರ್ಕ್ ಪೂರ್ವದಲ್ಲಿ ಮಹಾತ್ಮಾ ಗಾಂಧಿಯವರ ತತ್ವಶಾಸ್ತ್ರಗಳು, ಬೋಧನೆಗಳು ಮತ್ತು ಆದರ್ಶಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಗಾಂಧಿ ಭವನವನ್ನು ಅಂದಿನ ಕರ್ನಾಟಕ ನಿರ್ಮಿಸಿ ಅದನ್ನು 1965 ರಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರು ಅಧಿಕೃತವಾಗಿ ಉದ್ಘಾಟಿಸಿದರು, ಇದನ್ನು ಆರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಎಂದು ಕರೆಯಲಾಗುತ್ತಿತ್ತು. ಈ ಭವನದಲ್ಲಿ ಗಾಂಧಿಯವರ ಬಾಲ್ಯದಿಂದ ಅವರ ಕೊನೆಯ ದಿನಗಳವರೆಗಿನ ಅಪರೂಪದ ಛಾಯಾಚಿತ್ರಗಳು, ವಿವಿಧ ಜನರಿಗೆ ಅವರು ನಡೆಸಿದ ಪತ್ರಗಳ ಮೂಲ ಪ್ರತಿಗಳು,ಮತ್ತು ಅವರ ಪ್ರಸಿದ್ಧ ಉಲ್ಲೇಖಗಳನ್ನು ಒಳಗೊಂಡ ಸಮಗ್ರ ಚಿತ್ರ ಗ್ಯಾಲರಿಯನ್ನು ಇರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಗಾಂಧಿಗೆ ಸಂಬಂಧಿಸಿದ ರಚನಾತ್ಮಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಲು ಮತ್ತು ಯುವಕರು ಮತ್ತು ಸಾರ್ವಜನಿಕರನ್ನು ಅವರ ಆದರ್ಶಗಳೊಂದಿಗೆ ಪ್ರೇರೇಪಿಸುವ ಸಲುವಾಗಿ ಗಾಂಧಿ ಭವನದಲ್ಲಿ ವಸ್ತುಸಂಗ್ರಹಾಲಯ, ಗ್ರಂಥಾಲಯ ಮತ್ತು ಗಾಂಧಿ ಮೌಲ್ಯಗಳ ಮೇಲೆ ಕೇಂದ್ರೀಕರಿಸಿದ ಸಭೆಗಳು, ವಿಚಾರ ಸಂಕಿರಣಗಳಲ್ಲದೇ ವಿವಿಧ ಸಾಂಸ್ಕೃತಿಕ ಚಟುವಟಿಗಳು ಮತ್ತು ಅಧಿವೇಶನ್ನು ನಡೆಸಲು ಸೂಕ್ತವಾದಂತಹ ಎರಡು ಸಭಾಮಂಟಪಗಳಿವೆ.

ಆಧುನಿಕ ಜಗತ್ತಿಗೆ ಕಂಪ್ಯೂಟರ್ ಪರಿಚಯ ಆಗುವ ಮುನ್ನಾ ಟೈಪ್ ರೈಟಿಂಗ್ ಮತ್ತು ಶಾರ್ಟ್ ಹ್ಯಾಂಡ್ ತರಗತಿಗಳು ಹೆಚ್ಚು ಪ್ರಸಿದ್ಧವಾಗಿದ್ದು, ಶೇಷಾದ್ರಿಪುರದ ರ್ಪೆಂಟೈಲ್ ರಸ್ತೆಯಲ್ಲಿದ್ದ ಉದಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಜ್ಯೋತಿ ಇನ್ಸ್ಟಿಟ್ಯೂಟ್ ಬಹಳ ಪ್ರಸಿದ್ಧಿಯನ್ನು ಪಡೆದಿದ್ದವು. ಪ್ರತೀ ವರ್ಷ ರಾಜ್ಯ ಮಟ್ಟದ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಪರೀಕ್ಷೆಗಳಲ್ಲಿ ಇದೇ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಗಳೇ ನಿರಂತರವಾಗಿ ಮೊದಲ ಹತ್ತು ರ್ಯಾಂಕ್ ಪಡೆಯುವ ಮೂಲಕ ಉನ್ನತ ಶ್ರೇಣಿಗಳು ಮತ್ತು ಪ್ರಾವೀಣ್ಯತೆ ಪ್ರಶಸ್ತಿಗಳನ್ನು ಗಳಿಸಿತ್ತಿದ್ದನ್ನು ಇಂದಿಗೂ ಈ ಪ್ರದೇಶದ ಅನೇಕ ಅನುಭವಿ ವಿದ್ಯಾರ್ಥಿಗಳು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ಇದೇ ಉದಯ ಇನ್ಸ್ಟಿಟ್ಯೂಟ್ ಸಮೀಪವೇ ಜೂನ್ 1994ರಲ್ಲಿ ಜೀ ಟೆಲಿಫಿಲ್ಮ್ಸ್. ಒಡೆತನದ ಸಿಟಿ ಕೇಬಲ್ (SITI) ಕೇಬಲ್ ಆರಂಭವಾಗಿ ಅದರ ಮೂಲಕ ಬೆಂಗಳೂರಿನಾದ್ಯಂತ ಆರಂಭದಲ್ಲಿ ಡಿಜಿಟಲ್ ಕೇಬಲ್ ಟೆಲಿವಿಷನ್ ಆರಂಭಿಸಿ ಪ್ರಸ್ತುತ ಅದರ ಜೊತೆಯಲ್ಲೇ ಸೆಟ್-ಟಾಪ್ ಬಾಕ್ಸ್, ಬ್ರಾಡ್‌ಬ್ಯಾಂಡ್ ಮತ್ತು OTT ಸೇವೆಗಳನ್ನು ಒದಗಿಸುತ್ತಿದೆ. ಜೀಕನ್ನಡ ಸಹಾ ಇಲ್ಲೇ ಮೊದಲು ಆರಂಭವಾಗಿ ನಂತರ ಎಂ.ಜಿ.ರಸ್ತೆಗೆ ಸ್ಥಳಾಂತರ ಗೊಂಡಿತು.

ಬೆಂಗಳೂರಿನ ಅತ್ಯಂತ ಹಳೆಯ ದಿನಸಿ ಅಂಗಡಿಗಳಲ್ಲಿ ಒಂದಾದ 1937 ರಲ್ಲಿ ಬಿ.ಎನ್. ಅಣ್ಣಯ್ಯಪ್ಪನವರ ಶ್ರೀ ಶಿವಾನಂದ ಜನರಲ್ ಸ್ಟೋರ್ಸ್ ಸಹಾ ಇದೇ ಶೇಷಾದ್ರಿಪುರದಲ್ಲಿಯೇ ಇದ್ದು, ಯಾವುದೇ ಕಲಬೆರಕೆಯಿಲ್ಲದ ತಾಜಾವಾಗಿ ತಯಾರಿಸಿದ ವಿವಿಧ ಬಗೆಯ ಹಿಟ್ಟುಗಳು ಮತ್ತು ಮಸಾಲೆಗಳಿಗೆ ಹೆಸರುವಾಸಿಯಾಗಿದ್ದಂತಹ ಈ ಅಂಗಡಿ ಮತ್ತು ಹಿಟ್ಟಿನ ಗಿರಣಿ ಬೆಂಗಳೂರು ನಗರದ ಪರಂಪರೆಯಲ್ಲಿ ಎಷ್ಟು ಆಳವಾಗಿ ಬೇರೂರಿದೆಯಂದರೆ,ಆ ಪ್ರದೇಶವು ಶಿವಾನಂದ ವೃತ್ತ ಎಂದೇ ಪಸಿದ್ಧಿಯಾಗಿದೆ.

ಶಿವಾನಂದ ವೃತ್ತದ ಬಳಿಯೇ ದೇಣಿಗೆ ಇಲ್ಲದೆ ಗುಣಮಟ್ಟದ ಶಿಕ್ಷಣ ನೀಡುವ ಆಶಯದಿಂದ 1982 ರಲ್ಲಿ ಸಿಂಧಿ ಸೇವಾ ಸಮಿತಿಯು ಸಿಂಧಿ ಪ್ರೌಢಶಾಲೆಯನ್ನು ನರ್ಸರಿಯಿಂದ ಎರಡನೇ ತರಗತಿಯವರೆಗೆ ಕೇವಲ 120 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿದ್ದು, ಇಂದು 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ ಪ್ರಮುಖ ಸಂಸ್ಥೆಯಾಗಿ ಬೆಳೆದಿರುವುದಲ್ಲದೇ ಇದರ ಮತ್ತೊಂದು ಕ್ಯಾಂಪಸ್ ಬೆಂಗಳೂರಿನ ಹೆಬ್ಬಾಳದಲ್ಲಿ ಜೂನ್ 2003 ರಲ್ಲಿ ಮಾಜಿ ಉಪಪ್ರಧಾನಿ ಶ್ರೀ ಎಲ್.ಕೆ. ಅಡ್ವಾಣಿ ಅವರಿಂದ ಉದ್ಘಾಟಿಸಲ್ಪಟ್ಟಿದೆ. CBSE ಶಿಕ್ಷಣ ಪದ್ದತಿಯಲ್ಲಿ ನಿರಂತರವಾಗಿ 100% ಪ್ರಥಮ ದರ್ಜೆ ಫಲಿತಾಂಶಗಳಿಗೆ ಹೆಸರುವಾಸಿಯಾಗಿದೆ.

ಬೆಂಗಳೂರಿನ ಆರಂಭಿಕ  ಪಂಚತಾರಾ ಹೋಟೆಲ್ಲುಗಳಾದ 1971 ರಲ್ಲಿ ಸ್ಥಾಪಿಸಲಾದ ಆಶೋಕ ಹೋಟೆಲ್ (ಈಗ ದಿ ಲಲಿತ್ ಅಶೋಕ್) ಮತ್ತು 1982 ರಲ್ಲಿ ನಿರ್ಮಿಸಲಾದ ವಿಂಡ್ಸರ್ ಮ್ಯಾನರ್ (ಈಗ ಐಟಿಸಿ ವಿಂಡ್ಸರ್) ಇರುವುದು ಸಹಾ ಶೇಷಾದ್ರಿಪುರದಲ್ಲಿ ಎನ್ನುವುದು ವಿಶೇಷವಾಗಿದೆ. ಇವಿಷ್ಟೇ ಅಲ್ಲದೇ, ಶೇಷಾದ್ರಿಪುರಂ ಕೈಗೆಟುಕುವ ಬೆಲೆಯ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಮತ್ತು ಬಹು-ಪಾಕವಿಧಾನದ ರೆಸ್ಟೋರೆಂಟ್‌ಗಳಿಗೆ ಹೆಸರುವಾಸಿಯಾಗಿದ್ದು, ದಕ್ಷಿಣ ಭಾರತೀಯ ತಿಂಡಿ ಊಟಗಳಿಗೆ ಹೆಸರುವಾಸಿಯಾದ ಹೋಟೆಲ್ ಜನಾರ್ಧನ, 1990ರಲ್ಲಿ ಆರಂಭವಾದ ಜೋಡಿ ಬೆಣ್ಣೆ ಮಸಾಲೆ ದೋಸೆಗೆ ಹೆಸರುವಾಸಿಯಾಗಿರುವ HVR ವೆಜ್ ರೆಸ್ಟೋರೆಂಟ್ಉಮೇಶ್ ದೋಸಾ ಪಾಯಿಂಟ್ ಎಂಬ ಹೆಸರಿನಲ್ಲಿ ಆರಂಭವಾಗಿ ಈಗ ಉಮೇಶ್ ರಿಫ್ರೆಶ್‌ಮೆಂಟ್ ಎಂದು ಕರೆಯಲ್ಪಡುವ ಈ ಉಪಾಹಾರ ಗೃಹವು ಪ್ರಸಿದ್ಧವಾದ ತಟ್ಟೆ ಇಡ್ಲಿ ಗರಿಗರಿಯಾದ ವಡೆ, ರುಚಿಕರವಾದ ಮಂಗಳೂರು ಬಜ್ಜಿಯಲ್ಲದೇ ತುಪ್ಪದ ಪುಡಿ ಮಸಾಲ ದೋಸೆ ಮತ್ತು ಚಿತ್ರಾನ್ನದ ಜೊತೆಯಲ್ಲಿ ಮಾಡುವ ವಿಶಿಷ್ಟವಾದ ಮುಲ್ಬಾಗಲ್ ಮಸಾಲಾ ದೋಸೆಯಿಂದ ಪ್ರಖ್ಯಾತವಾಗಿದೆ. ಇನ್ನು ಕಾಫೀ ಟೀ ಮತ್ತು ಬಿಸಿ ಬೇಳೆ ಬಾತ್‌ಗೆ ಹೆಸರುವಾಸಿಯಾಗಿರುವ ಕೆಫೆ ಸನ್ಮಾನ್ ಕಾಲೇಜು ವಿದ್ಯಾರ್ಥಿಗಳ ಜನಪ್ರಿಯ ಆಡ್ಡ ಆಗಿದೆ.

ಶೇಷಾದ್ರಿಪುರಂ ಕಾಲೇಜು ಎದುರು ರಸ್ತೆಯ ಮೇಲೆ ಗಾಡಿಯಲ್ಲಿ ಪ್ರತೀ ದಿನ ಸಂಜೆ ಬಿಳಿ ಬಟಾಣಿಯೊಂದಿಗೆ ಮಾರುತ್ತಿದ್ದ ಪಾನೀಪುರಿ ಮಸಾಲಾಪುರಿ, ಬೇಲ್ ಪುರಿ, ರಗಡಾ ಪೆಟಿಸ್ ತಿನ್ನಲು ಉದ್ದುದ್ದ ಸಾಲು ಇರುತ್ತಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವ ಮಾದರಿಯಲ್ಲಿ ಅಂದಿನ ಕಾಲದಲ್ಲೇ ಟೋಕನ್ ಪದ್ದತಿಯಲ್ಲಿ ಜಾರಿಗೆ ಇದ್ದು, ಅಲ್ಲಿ ಚಾಟ್ ತಿಂದಿರುವವರಿಗೆ ಖಂಡಿತವಾಗಿಯೂ ಇಂದಿಗೂ ಅದರ ರುಚಿ ಮರೆತಿರಲಾರರು. ಅದೇ ರೀತಿಯಲ್ಲಿ ಸರ್ಪೆಂಟೈನ್ ರಸ್ತೆಯಲ್ಲಿರುವ Gullu’s Chat ಶೇಷಾದ್ರಿಪುರದ ಮತ್ತೊಂದು ಅತ್ಯಂತ ಜನಪ್ರಿಯ ಚಾಟ್ ಕೇಂದ್ರಗಳಲ್ಲಿ ಒಂದಾಗಿದ್ದು, ಹಲವು ವರ್ಷಗಳಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಚಾಟ್ ಪ್ರಿಯರ ನೆಚ್ಚಿನ ತಾಣವಾಗಿದೆ. ಇಲ್ಲಿನ ಮಸಾಲಾ ಪುರಿ, ಪಾನಿಪುರಿ, ಫ್ಲೋಟಿಂಗ್ ಪಾನಿಪುರಿ, ಬನ್ ನಿಪ್ಪಟ್ ಚೀಸ್, ಭೇಲ್ ಪುರಿ, ಪಾವ್ ಭಾಜಿ, ವಡಾ ಪಾವ್ ಹಾಗೂ ವಿವಿಧ ಸ್ಯಾಂಡ್ವಿಚ್ ಮತ್ತು ಮಿಲ್ಕ್‌ಶೇಕ್‌ಗಳು ಇಲ್ಲಿನ ಅತ್ಯಂತ ಜನಪ್ರಿಯ ತಿಂಡಿಗಳಾಗಿವೆ. ಶೇಷಾದ್ರಿಪುರಕ್ಕೆ ಭೇಟಿ ನೀಡುವವರು ಒಮ್ಮೆ ಗುಲ್ಲೂಸ್ ಚಾಟ್‌ನ ಮಸಾಲಾ ಪುರಿ ಮತ್ತು ಫ್ಲೋಟಿಂಗ್ ಪಾನಿಪುರಿಯನ್ನು ಸವಿಯದೆ ಹಿಂತಿರುಗುವುದಿಲ್ಲ ಎನ್ನುವುದು ಅಲ್ಲಿನ ಆಹಾರಪ್ರಿಯರ ಅಭಿಪ್ರಾಯವಾಗಿದ್ದು, ಹಲವು ವರ್ಷಗಳಿಂದ ಇವೆಲ್ಲವೂ ಶೇಷಾದ್ರಿಪುರದ ಆಹಾರ ಸಂಸ್ಕೃತಿಯ ಒಂದು ಭಾಗವಾಗಿಯೇ ಉಳಿದಿದೆ.

ಇವಿಷ್ಟೇ ಅಲ್ಲದೇ ಶೇಷಾದ್ರಿಪುರ ನಾಟಕ ಮತ್ತು ಸಿನಿಮಾಗಳಿಗೂ ಹೆಸರುವಾಸಿಯಾಗಿದ್ದು ಎ.ವಿ. ವರದಚಾರ್ ರಸ್ತೆಯಲ್ಲಿರುವ ನಟರಾಜ ಟಾಕೀಸ್ ಹಿಂಭಾಗದಲ್ಲೇ ಇರುವ ಎ.ವಿ. ವರದಚಾರ್ ಕಲಾಕ್ಷೇತ್ರ ಮತ್ತು ಸ್ಮಾರಕ ಭವನ ಒಂದು ಕಾಲದಲ್ಲಿ ಘಟಾನುಘಟಿ ಕಲಾವಿದರುಗಳ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವುದಕ್ಕೆ ಹೆಸರುವಾಸಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ನಾಟಕ ನೋಡುವವರ ಸಂಖ್ಯೆ ಕಡಿಮೆ ಎನ್ನುವುದಕ್ಕಿಂತಲೂ ಇಲ್ಲವೇ ಇಲ್ಲಾ ಎನ್ನುವಂತಾಗಿರುವುದರಿಂದ ಈ ಸಭಾಂಗಣವು, ನೆರೆಹೊರೆಯ ಸಂಘಗಳ ಸಾಮಾನ್ಯ ಸಭೆಗಳು ಬೀಗರ ಊಟ ಕಾರ್ಯಕ್ರಮಗ ಸಮುದಾಯ ಭವನವಾಗಿ ಮಾರ್ಪಟ್ಟಿರುವುದು ಬೇಸರದ ಸಂಗತಿಯಾಗಿದೆ.

ಶೇಷಾದ್ರಿಪುರಂನ ಅತ್ಯಂತ ಪ್ರಸಿದ್ಧ ಮತ್ತು ಹಳೆಯ ಸಿನಿಮಾ ಮಂದಿರಗಳಲ್ಲಿ ನಟರಾಜ್ ಥಿಯೇಟರ್, ಸೆಂಟ್ರಲ್ ಥಿಯೇಟರ್ ಮತ್ತು ಸ್ವಸ್ತಿಕ್ ಥಿಯೇಟರ್ ಗಳಿದ್ದವು. ಇದರಲ್ಲಿ ನಟರಾಜ್ ಥಿಯೇಟರ್ ಆಗಿನ ಕಾಲಕ್ಕೇ 1,100 ಜನರು ಕುಳಿತು ಕೊಂಡು ನೋಡುವಂತಹ ಸಿಂಗಲ್ ಸ್ಕ್ರೀನ್ ಟಾಕೀಸ್ ಎಂದು ಹೆಸರುವಾಸಿಯಾಗಿದ್ದು ಅಲ್ಲಿ ಹೆಚ್ಚಾಗಿ ತಮಿಳು ಚಿತ್ರಕ್ಕೇ ಮೀಸಲಾಗಿದ್ದರೂ ಡಾ. ರಾಜ್‌ಕುಮಾರ್ ಚಿತ್ರವನ್ನು ಮಾತ್ರಾ ಈ ಟಾಕೀಸ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದದ್ದು ವಿಶೇಷ. ಇದರ ಎದುರಿಗೇ ಇದ್ದ ಮತ್ತೊಂದು ಸಿನಿಮಾ ಮಂದಿರವೇ ಸೆಂಟ್ರಲ್ ಬಸ್ ಇಲ್ಲಿಯೂ ಸಹಾ ತಮಿಳು ತೆಲುಗು ಸಿನಿಮಾಗಳಿಗೆ ಮೀಸಲಾಗಿತ್ತು. ಇದಲ್ಲದೇ, ಶೇಷಾದ್ರಿಪುರಂ ಪೋಲಿಸ್ ಠಾಣೆಯ ಎರುರಿಗೆ ಸ್ವಸ್ತಿಕ್ ಥಿಯೇಟರ್ ಇತ್ತು. ದುರಾದೃಷ್ಟವಷಾತ್ ಇಂದು ಈ ಎಲ್ಲಾ ಸಿನಿಮಾ ಮಂದಿರಗಳನ್ನು ಕೆಡವಿ ಆ ಜಾಗವೆಲ್ಲವೂ ವಾಣಿಜ್ಯ ಸಂಕೀರ್ಣವಾಗಿರುವುದು ಚಿತ್ರಕಲಾ ರಸಿಕರಿಗೆ ಬೇಸರದ ಸಂಗತಿಯಾಗಿದೆ.

ಸೆಂಟ್ರಲ್ ಟಾಕೀಸ್ ಇದ್ದ ಸ್ಥಳದ ಎದುರಿನಲ್ಲೇ ಶೇಷಾದ್ರಿಪುರಂ ಮತ್ತು ಮಲ್ಲೇಶ್ವರಂ ಜಂಕ್ಷನ್‌ನಲ್ಲಿ 2024 ರಲ್ಲಿ 15 ಅಡಿ ಎತ್ತರದ 2.65 ಕೋಟಿ ವೆಚ್ಚದಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಶ್ರೀ ರಾಜೀವ್ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಐಟಿ ಮತ್ತು ಟೆಲಿಕಾಂ ಕ್ರಾಂತಿಗಳಂತಹ ರಾಷ್ಟ್ರಕ್ಕೆ ನೀಡಿದ ಕೊಡುಗೆಗಾಗಿ ಅನಾವರಣಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದಾಗ, ಶೇಷಾದ್ರಿಪುರಕ್ಕೂ ರಾಜೀವ್ ಗಾಂಧಿಗೂ ಎತ್ತಲಿಂದೆತ್ತ ಸಂಬಂಧ ಎಂದು ಜನರು ಅಚ್ಚರಿ ಪಟ್ಟಿದ್ದಂತೂ ಸುಳ್ಳಲ್ಲಾ

ಆಸ್ತಿಕ ಬಂಧುಗಳಿಗೂ ಶೇಷಾದ್ರಿಪುರ ನೆಚ್ಚಿನ ತಾಣವಾಗಿದ್ದು. ಕುಮಾರ ಪಾರ್ಕ್ ಪಶ್ಚಿಮದಲ್ಲಿ 1962 ರಲ್ಲಿ ಸ್ಥಾಪನೆಯಾದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯವು ಅತ್ಯಂತ ಪೂಜ್ಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸಂಕೀರ್ಣದಲ್ಲಿ ಸತ್ಯನಾರಾಯಣ ಸ್ವಾಮಿ, ಗಣೇಶ, ವಾಸುಕಿ, ನವಗ್ರಹ ಮತ್ತು ಆಂಜನೇಯ ದೇವರುಗಳಿದ್ದು ಸುಬ್ರಹ್ಮಣ್ಯ ಷಷ್ಠಿ ಮತ್ತು ಕಾವಡಿ ಹಬ್ಬಗಳು ಬಹಳ ಅದ್ದೂರಿಯಾಗಿ ಆಚರಿಸಲ್ಪಡುತ್ತದೆ. ಇದರ ಹತ್ತಿರದಲ್ಲೇ ಶ್ರೀ ಮಹಾಲಕ್ಷ್ಮಿ ದೇವಸ್ಥಾನವು ಸಂಪತ್ತು ಮತ್ತು ಸಮೃದ್ಧಿಯ ದೇವತೆಗೆ ಸಮರ್ಪಿತವಾದ ಪೂಜ್ಯ ಆಧ್ಯಾತ್ಮಿಕ ಸ್ವರ್ಗವಾಗಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ 1998ರ ಜನವರಿ 31ರಂದು ಅಧಿಕೃತವಾಗಿ ಸ್ಥಾಪಿಸಲಾದ ಇಸ್ಕಾನ್ ಶೇಷಾದ್ರಿಪುರ ಮಂದಿರವಿದ್ದು, ಇದು ಮೂಲತಃ ಶ್ರೀಲ ಪ್ರಭುಪಾದರ ಬೋಧನೆಗಳನ್ನು ಪಸರಿಸುವ ಉದ್ದೇಶದಿಂದ ಆರಂಭವಾದ ಕೇಂದ್ರವಾಗಿದ್ದು, 2000ನೇ ಇಸವಿಯಲ್ಲಿ ಭಗವಾನ್ ಜಗನ್ನಾಥ, ಬಲದೇವ ಮತ್ತು ದೇವಿ ಸುಭದ್ರೆಯರ ಆರಾಧನಾ ಕೇಂದ್ರವಾಗಿ ಇಸ್ಕಾನ್ ಶ್ರೀ ಜಗನ್ನಾಥ ಮಂದಿರ ಎಂದುಪ್ರಸಿದ್ದಿ ಪಡೆದಿದೆ.

ಶೇಷಾದ್ರಿಪುರದಲ್ಲಿರುವ ಬಬ್ಬುರುಕಮ್ಮೆ ಸಂಘ ಮತ್ತು ಬಡಗನಾಡು ಸಂಘವು ಕೇವಲ ಒಂದು ಸಮುದಾಯ ಸಂಘಟನೆಯಾಗಿಲ್ಲದೇ, ಇದು ಸಾಮಾಜಿಕ ಸಾಮರಸ್ಯ, ಶೈಕ್ಷಣಿಕ ಸಬಲೀಕರಣ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಸಮುದಾಯ ಸೇವೆಯ ಸಂಕೇತವಾಗಿದ್ದು ಇಲ್ಲಿ ಅಯಾಯಾ ಪಂಗಡದ ವಿದ್ಯಾರ್ಥಿಗಳಿಗೆ ವಸತಿನಿಲಯಗಳಿದ್ದು ಪರ ಊರಿನಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುವ ಮೂಲಕ ಆಯಾಯಾ ಸಮುದಾಯದವರಿಗೆ ಈ ಸಂಘಗಳು ಗುರುತು, ಬೆಂಬಲ ಮತ್ತು ಸಾಮೂಹಿಕ ಪ್ರಗತಿಯ ಭದ್ರ ಬುನಾದಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಎರಡೂ ಸಂಘಗಳ ಪ್ರಾಂಗಣದಲ್ಲಿ ಮದುವೆ ಮುಂಜಿಗಳಲ್ಲದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತಹ ಸಮುದಾಯ ಭವನವಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಚಿಂತಕರು, ಲೇಖಕರು ಮತ್ತು ಸಂಘಟಕರಲ್ಲಿ ಒಬ್ಬರಾಗಿದ್ದಂತಹ ಹೊ.ವೆ ಶೇಷಾದ್ರಿಗಳು ಹುಟ್ಟಿದ್ದೂ ಇದೇ ಶೇಷಾದ್ರಿಪುರದಲ್ಲೇ ಎನ್ನುವುದು ಗಮನಾರ್ಹವಾಗಿದೆ. ತಮ್ಮ ಚಿಕ್ಕ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ಗೆ ಸೇರಿ, ನಂತರ ಪೂರ್ಣಕಾಲಿಕ ಪ್ರಚಾರಕರಾದರು. ತಮ್ಮ ಅಸಾಧಾರಣ ಸಂಘಟನಾ ಸಾಮರ್ಥ್ಯ ಮತ್ತು ವಿಚಾರಶಕ್ತಿಯಿಂದ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ತಮ್ಮ ಇಡೀ ಜೀವನವನ್ನೇ ರಾಷ್ಟ್ರಸೇವೆಗೆ ಸಮರ್ಪಿಸಿ, ಸಂಘದ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಭಾರತೀಯ ಇತಿಹಾಸ, ಸಂಸ್ಕೃತಿ, ರಾಷ್ಟ್ರೀಯತೆ ಮತ್ತು ಸಂಘದ ತತ್ವಗಳ ಬಗ್ಗೆ ಆಳವಾದ ಚಿಂತನೆಗಳನ್ನು ಒಳಗೊಂಡ ಅನೇಕ ಪುಸ್ತಕಗಳನ್ನು ಬರೆದಿರುವುದಲ್ಲದೇ ಉತ್ತಮ ವಾಗ್ಮಿಗಳಾಗಿದ್ದಂತಹ ಶೇಷಾದ್ರಿಗಳ, ಶೇಷಾದ್ರಿಪುರದ ಲಿಂಕ್ ರಸ್ತೆಯ ಮನೆಯೇ ಈಗ ಯಾದವ ಸ್ಮೃತಿ ಕಟ್ಟಡವಾಗಿದ್ದು ಅಲ್ಲಿ ಸಂಘ ಮತ್ತು ಸಂಘ ಪರಿವಾರದ ವಿವಿಧ ಕಛೇರಿಗಳಾಗಿದೆ.

ಶೇಷಾದ್ರಿಪುರದಲ್ಲಿ ಮಲ್ಲಿಗೆ ಆಸ್ಪತ್ರೆಯಂತಹ ಆಧುನಿಕ ಬಹು-ವಿಶೇಷತೆ ಆಸ್ಪತ್ರೆ ಮತ್ತು ದೇಸಾಯಿ ನರ್ಸಿಂಗ್ ಹೋಮ್‌ನಂತಹ ಕುಟುಂಬ ವೈದ್ಯಕೀಯ ಆಸ್ಪತ್ರೆಗಳು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಶೇಷಾದ್ರಿಪುರವನ್ನು ಶಿಕ್ಷಣ ಮತ್ತು ಸಂಸ್ಕೃತಿಯ ಕೇಂದ್ರವಾಗಿರುವುದರ ಜೊತೆಗೆ ಆರೋಗ್ಯ ಸೇವೆಯಲ್ಲಿಯೂ ಬೆಂಗಳೂರಿನ ಪ್ರಮುಖ ಕೇಂದ್ರವನ್ನಾಗಿ ರೂಪಿಸಿದೆ

ಪ್ಲೇಗ್ ಮಹಾಮಾರಿಯನ್ನು ಎದುರಿಸಲು ನಿರ್ಮಿಸಲಾದ ಕ್ವಾರಂಟೈನ್ ವಸತಿ ಪ್ರದೇಶ ಇಂದು ಲಕ್ಷಾಂತರ ಜನರಿಗೆ ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ನಾಗರಿಕ ಜೀವನದ ಕೇಂದ್ರವಾಗಿ ರೂಪುಗೊಂಡಿರುವುದು ಶೇಷಾದ್ರಿಪುರದ ಅಸಾಧಾರಣ ಸಾಧನೆಯಾಗಿದ್ದು, ನಗರ ಯೋಜನೆಗೆ ದೂರದೃಷ್ಟಿ, ಉತ್ತಮ ಆಡಳಿತ ಮತ್ತು ಶಿಕ್ಷಣ–ಸಂಸ್ಕೃತಿಗೆ ನೀಡಿದ ಆದ್ಯತೆ ಒಂದು ಪ್ರದೇಶದ ಭವಿಷ್ಯವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಶೇಷಾದ್ರಿಪುರವೇ ಜೀವಂತ ಉದಾಹರಣೆಯಾಗಿದೆ. ಬೆಂಗಳೂರಿನ ಇತಿಹಾಸದಲ್ಲಿ ಶೇಷಾದ್ರಿಪುರ ಕೇವಲ ಒಂದು ಬಡಾವಣೆಯಷ್ಟೇ ಆಗಿರದೇ ಅದು ದೂರದೃಷ್ಟಿಯ ಆಡಳಿತ, ಶಿಕ್ಷಣದ ಶಕ್ತಿ ಮತ್ತು ಸಾಂಸ್ಕೃತಿಕ ಸಮೃದ್ಧಿಯ ಪ್ರತೀಕವಾಗಿದೆ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ