ಕೇರಳದ ಜೀವಂತ ಹಬ್ಬ ಎನಿಸುವ ತಿರು ಓಣಂ ಯಾ ಓಣಂ, ಕೇವಲ ಬೆಳೆ ಕಟಾವಿನ ಯಾ ರಾಜ ಬಲೀಂದ್ರನ ಭೂಮಿಗೆ ವಾಪಸ್ಸು ಮರಳುವಿಕೆಯ ಸಂಕೇತ ಮಾತ್ರವಲ್ಲ, ಬದಲಿಗೆ ಇದು ಮಹಿಳೆಯರ ಸಶಕ್ತೀಕರಣದ ಒಂದು ಆಳವಾದ ಜೀವಂತ ಹಬ್ಬ ಎನಿಸಿದೆ. ಈ ಹಬ್ಬ ಮಹಿಳೆಯರ ನೇತೃತ್ವ, ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಸಮುದಾಯ ನಿರ್ಮಾಣದ ಒಂದು ಸಶಕ್ತ ವೇದಿಕೆಯಾಗಿದೆ!
ಕೇರಳದ ಪಂಚಾಂಗದ ಪ್ರಕಾರ ಚಿಂಗಂ ಭಾದ್ರಪದ ಮಾಸದ ಅಷ್ಟಮಿಯಿಂದ ಆರಂಭಿಸಿ ತಿರು ಓಣಂನ 10 ದಿನಗಳನ್ನು ಓಣಂನ ಹಬ್ಬದಾಚರಣೆ ಪ್ರತೀಕವಾಗಿ, ಉಲ್ಲಾಸ ಉತ್ಸಾಹಗಳಿಂದ ಆಚರಿಸಲಾಗುತ್ತದೆ. ಹೆಣ್ಣುಮಕ್ಕಳು ಮನೆ ಮುಂದೆ ಸಣ್ಣ ಕುಂಭದ ರಂಗೋಲಿ ಇಟ್ಟು, 10 ದಿನಗಳೂ ಅದನ್ನು ವೃತ್ತಾಕಾರವಾಗಿ ಹಿಗ್ಗಿಸುತ್ತಾ, ಹೂಗಳ ಅಲಂಕಾರದಿಂದ ರಂಗುಗೊಳಿಸುತ್ತಾರೆ. ತಲೆಗೆ ಮಲ್ಲಿಗೆಯ ಮಾಲೆ ಮುಡಿದು, ಸಾಂಪ್ರದಾಯಿಕ ಕೇರಳ ಶೈಲಿಯ ಸೀರೆಯುಟ್ಟು, ಅತಿ ಉತ್ಸಾಹದಿಂದ 10ನೇ ದಿನದವರೆಗೆ ಈ ಹಬ್ಬದ ತಯಾರಿ ನಡೆಸುತ್ತಾರೆ.
ಈ ಹಬ್ಬ ಜಾತಿ, ಧರ್ಮಗಳ ಗಡಿ ದಾಟಿ ಕೇರಳದಲ್ಲಿ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಓಣಂ ಕೇವಲ ಸಮೃದ್ಧಿ, ಪರಂಪರಗೆಳ ಸೀಸನ್ ಹಬ್ಬವಲ್ಲ, ಬದಲಿಗೆ ಇದು ಮಹಿಳೆಯರ ಸಾಂಸ್ಕೃತಿಕ ಅಭಿವ್ಯಕ್ತಿ, ನೇತೃತ್ವ ಹಾಗೂ ಸಾಮುದಾಯಿಕ ನಿರ್ಮಾಣದ ಒಂದು ಸಶಕ್ತ ವೇದಿಕೆಯೂ ಹೌದು. ಈ ಹಬ್ಬ ಇಂದು ನಿನ್ನೆಯದಲ್ಲ, ಐತಿಹಾಸಿಕ ರೂಪದಲ್ಲಿಯೂ, ಮಹಿಳೆಯರ ಕೇಂದ್ರೀಯ ಪಾತ್ರವನ್ನು ಎತ್ತಿಹಿಡಿಯುವ ಸಮಾರಂಭವೇ ಸರಿ. ಇದು ರಚನಾತ್ಮಕತೆ ಹಾಗೂ ಐಕ್ಯತೆಯ ಕುರಿತಾದ ಬಣ್ಣ ಬಣ್ಣಗಳ ಹಬ್ಬ. ಕೇರಳದಲ್ಲಿ ಮಾತ್ರವಲ್ಲದೆ, ಭಾರತದ ಇತರ ಅನೇಕ ಕಡೆಗಳಲ್ಲಿಯೂ ಮಹಿಳೆಯರ ಪ್ರಮುಖ ಪಾಲ್ಗೊಳ್ಳುವಿಕೆಯೇ ಈ ಹಬ್ಬದ ವೈಶಿಷ್ಟ್ಯ.
ಓಣಂ ಹಾಗೂ ಭಾರತೀಯ ಸ್ತ್ರೀ
ಕೇರಳದ ಪ್ರಮುಖ ಫಸಲು ಕಟಾವಿನ ಹಬ್ಬಾದ ಓಣಂ, ಕೇವಲ ಬಲಿ ಚಕ್ರವರ್ತಿ ಪ್ರತಿ ವರ್ಷ ತನ್ನ ಪ್ರಜೆಗಳನ್ನು ಕಾಣಲು ಬರುತ್ತಾನೆ ಎನ್ನುವ ಸಾಂಕೇತಿಕ ಹಬ್ಬವಾಗಿರದೆ, ಬದಲಿಗೆ ಇದು ಮಹಿಳೆಯರ ಸಶಕ್ತೀಕರಣದ ಒಂದು ಆಳವಾದ ಹಾಗೂ ಸಂಭ್ರಮಾಚರಣೆಯ ಹಬ್ಬ ಎನಿಸಿದೆ. ಮನೆಯ ಮುಂದಿನ, ಅತ್ಯಂತ ಆಕರ್ಷಕ ಬಣ್ಣಗಳ ಹೂಗಳ ರಂಗೋಲಿಯಾದ `ಪೂಕ್ಕೋಲಂ’ ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಜೊತೆಗೆ ಅಂದು ಹಬ್ಬದ ಅಡುಗೆ ಭಾರೀ ಔತಣವೇ ಆಗಿರುತ್ತದೆ, ಅದುವೇ ‘ಸಧ್ಯಾ.’ ಈ ಭಾರಿ ಬೊಂಬಾಟ್ ಭೋಜನಕ್ಕಾಗಿ 4 ಬಗೆಯ ಪಾಯಸದಿಂದ ಹಿಡಿದು, ಅಪ್ಪಟ ಸಸ್ಯಮೂಲದ ಹಲವು ತರಕಾರಿಗಳ ಮೇಲೋಗರದ ಪೌಷ್ಟಿಕ ಭೋಜನ ಇರುತ್ತದೆ. ಈ ಎಲ್ಲವನ್ನೂ ಸಿದ್ಧಪಡಿಸುವಲ್ಲಿ ಮಹಿಳೆಯರ ಪಾತ್ರ ಹಿರಿದು. ಅಷ್ಟು ಮಾತ್ರವಲ್ಲದೆ, ಸ್ವಯಂ ಸಹಾಯತಾ ಸಮೂಹ ಮಾಧ್ಯಮಗಳ ಉದ್ದಿಮೆಯಿಂದ ಹಿಡಿದು, ಟೆಕ್ನಿಕ್ಸ್ ಬಳಸಿಕೊಳ್ಳುತ್ತಾ ವಿಶ್ವದೆಲ್ಲೆಡೆ ತಮ್ಮ ಛಾಪು ಒತ್ತುವಲ್ಲಿ ಈ ಮಹಿಳೆಯರು `ಓಣಂ’ ಹಬ್ಬದ ಪ್ರತಿನಿಧಿಗಳಾಗಿದ್ದಾರೆ! ಇವರುಗಳ ಸಕ್ರಿಯ ಪಾಲ್ಗೊಳ್ಳುವಿಕೆ, ಅತ್ತ ಕೇವಲ ಸಂಪ್ರದಾಯಗಳನ್ನು ಮಾತ್ರ ಜೀವಂತವಾಗಿ ಇರಿಸುವುದಲ್ಲದೆ, ಮುಂದಿನ ಪೀಳಿಗೆಗಳು, ಮಹಾದ್ವೀಪಗಳಲ್ಲಿ ಐಕ್ಯತೆ, ಸಮೃದ್ಧಿ ಹಾಗೂ ಸಾಮಾಜಿಕ ಪ್ರಗತಿಗೂ ಹೆಚ್ಚಿನ ಒತ್ತು ನೀಡುತ್ತದೆ.
ಮಹಿಳೆಯರಿಗೆ ಒಂದು ರಚನಾತ್ಮಕ, ನೇತೃತ್ವ ಪೂರ್ವಕ, ಸಾಮಾಜಿಕ ಹೊಣೆಗಾರಿಕೆಯ ಸಾಂಸ್ಕೃತಿಕ ವೇದಿಕೆ ಆಗಿದೆ `ಓಣಂ’ ಹಬ್ಬ. ಕೇವಲ ಇಂದು ನಿನ್ನೆ ಅಲ್ಲ, ಐತಿಹಾಸಿಕ ರೂಪದಲ್ಲಿಯೂ ಮಹಿಳೆಯರು ಓಣಂ ಹಬ್ಬದ ಕೇಂದ್ರಬಿಂದು ಆಗಿದ್ದಾರೆ. ಈ ಹಬ್ಬ ಕೇವಲ ಕೇರಳಕ್ಕೆ ಮಾತ್ರ ಸೀಮಿತವಾಗಿರದೆ, ಭಾರತದ ನಾನು ಭಾಗಗಳು, ಪ್ರವಾಸಿ ಮಲೆಯಾಳಿ ಸಮುದಾಯ, ಯಾವುದೇ ಇರಲಿ, ಅದರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯೇ ಓಣಂ ಹಬ್ಬಕ್ಕೆ ಅತ್ಯಂತ ಹೆಚ್ಚಿನ ಮೆರುಗು ನೀಡುತ್ತದೆ.
ಮಹಿಳೆಯರ ನೇತೃತ್ವ
ಮನೆಯ ಮುಂದಿನ ಅಂಗಳವನ್ನು ಸಿಂಗರಿಸುವ ಕಲಾತ್ಮಕ ಪುಷ್ಪ ರಂಗೋಲಿ (ಪೂಕ್ಕೋಲಂ)ಯಿಂದ ಹಿಡಿದು, `ತಿರುವಾತ್ತಿರ’ ನೃತ್ಯದ ಕೋಮಲ ಅಭಿವ್ಯಕ್ತಿಯವರೆಗೂ ಓಣಂ ಹೆಂಗಸರನ್ನು ತಮ್ಮ ಕಲಾತ್ಮಕ ಪ್ರತಿಭೆ ಪ್ರದರ್ಶಿಸಲು ಒಂದು ಪ್ರಮುಖ ವೇದಿಕೆ ಒದಗಿಸಿಕೊಟ್ಟಿದೆ. ಮನೆಗಳು ಮಾತ್ರವಲ್ಲದೆ ಶಾಲಾ ಕಾಲೇಜು, ಆಫೀಸು, ಸಮುದಾಯ ಕೇಂದ್ರಗಳಲ್ಲಿಯೂ ಸಹ ಮಹಿಳೆಯರು ಹೂಗಳ ಅಲಂಕಾರದಿಂದ ರಂಗೋಲಿಗೆ ವಿಭಿನ್ನ ರಂಗು ತುಂಬುತ್ತಾರೆ. ಇವೆಲ್ಲ ಮಹಿಳೆಯರ ಪ್ರಮುಖ ಅಲಂಕಾರಿಕ ವಿಧಾನ, ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲದರಲ್ಲೂ ಅವರದೇ ಪ್ರಮುಖ ನೇತೃತ್ವ ಇರುತ್ತದೆ. ಅವರು ಸಾಂಪ್ರದಾಯಿಕ ನೃತ್ಯಗಳಾದ `ತಿರುವಾತ್ತಿರ’ `ಕೈಕೊಟ್ಟಿಕಳಿ’ ಶೈಲಿಗಳನ್ನು ಕಲಿತು, ಅತ್ಯುತ್ತಮವಾಗಿ ಪ್ರಸ್ತುತಪಡಿಸುತ್ತಾರೆ. ಇದು ಕೇರಳದಲ್ಲಿ ಎಲ್ಲಾ ವಯಸ್ಸಿನ ಹೆಂಗಸರಲ್ಲೂ ಅತಿ ಜನಪ್ರಿಯತೆ ಗಳಿಸಿದೆ.
ಸಂಪ್ರದಾಯಗಳನ್ನು ಸಂರಕ್ಷಿಸುತ್ತಾ ಮುಂದುವರಿಯುವ ಈ ಹೆಂಗಸರು, ಓಣಂ ಹಬ್ಬದ ಮೂಲಕ ತಮ್ಮ ಕುಟುಂಬ, ಸಂಸ್ಥೆ ಹಾಗೂ ಸಮಾಜದ ನೇತೃತ್ವ ವಹಿಸುವಲ್ಲಿ ಮೊದಲಿಗರಾಗಿದ್ದಾರೆ. ಅದು ಮನೆ ಯಾ ಕಾರ್ಯಸ್ಥಳವಾಗಿರಲಿ, ಹೆಂಗಸರು ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಾರೆ. `ಸಧ್ಯಾ’ ಔತಣದ ಹಬ್ಬದಡುಗೆ ಏರ್ಪಡಿಸುವುದರಲ್ಲಂತೂ ಎತ್ತಿದ ಕೈ! ವಿವಿಧ ಪೃಷ್ಠ ಭೂಮಿಕೆಗಳ ಮೂಲಕ ಜನರನ್ನು ಒಂದುಗೂಡಿಸುತ್ತಾರೆ. ಕೇರಳದ ಅಪಾರ್ಟ್ ಮೆಂಟ್ಸ್, ಶಿಕ್ಷಣ ಸಂಸ್ಥೆಗಳು, ಕ್ಲಬ್ಬು, ಪ್ರವಾಸಿ ಸಮುದಾಯಗಳಲ್ಲೂ ಮಹಿಳೆಯರೇ ಮುಂದೆ ನಿಂತು ಕಾರ್ಯಕ್ರಮದ ಸಂಚಾಲನೆ, ನೇತೃತ್ವ ವಹಿಸಿಕೊಳ್ಳುತ್ತಾರೆ.
ಓಣಂ ಹಬ್ಬದ ಆಯೋಜನೆ, ಸಂಚಾಲನೆ ಮಹಿಳೆಯರಲ್ಲಿ ಟೀಂವರ್ಕ್, ಕಾರ್ಯಕ್ರಮ ಪ್ರಬಂಧನೆ ಹಾಗೂ ಸಾರ್ವಜನಿಕ ಭಾಷಣ ಇತ್ಯಾದಿ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಪೂರಕವಾಗಿದೆ. ಈ ಕೌಶಲ ಹಬ್ಬಕ್ಕೆ ಮಾತ್ರ ಸೀಮಿತ ಆಗುವುದಿಲ್ಲ. ಬದಲಿಗೆ ಜೀವನದ ಅನ್ಯ ಕ್ಷೇತ್ರಗಳಾದ ವ್ಯಾಪಾರ, ಉದ್ದಿಮೆ, ರಾಜಕೀಯ, ಔದ್ಯೋಗಿಕರಂಗ ಎಲ್ಲದರಲ್ಲೂ ಉಪಯುಕ್ತ ಆಗುತ್ತಿವೆ. ಓಣಂ ಹಬ್ಬ ವಿಶ್ವದೆಲ್ಲೆಡೆ ಭಾರತೀಯ ಸಮುದಾಯವನ್ನು ಒಂದೆಡೆ ಜೋಡಿಸುವ ಮಾಧ್ಯಮವಾಗಿದೆ. ಇದು ಪೀಳಿಗೆಗಳ ಅಂತರ ತಗ್ಗಿಸಿ, ಸಾಮಾಜಿಕ ಭೇದಗಳಿಂದ ಮುಂದೆ ಬಂದು, ಭಾವೈಕ್ಯತೆಯ ಸೋಪಾನವಾಗಿದೆ. ಸಾಮೂಹಿಕ `ಸಧ್ಯಾ’ ಭೋಜನ ಕೇವಲ ಸಮೃದ್ಧಿ ಮಾತ್ರವಲ್ಲದೆ, ಒಗ್ಗಟ್ಟಿನ ಪ್ರತೀಕ ಆಗಿದೆ.
ಉದ್ಯಮ ಹಾಗೂ ಸಶಕ್ತೀಕರಣ
ಮಹಿಳೆಯರಿಂದ ಸಂಚಾಲಿತ ಸ್ವಯಂ ಸಹಾಯಕ ಸಮೂಹಗಳಾದ `ಕುಟುಂಬಶ್ರೀ’ ಹಾಗೂ ಇನ್ನಿತರ ಸಹಕಾರಿ ಸಂಸ್ಥೆಗಳು ಪ್ರತಿ ವರ್ಷ ಓಣಂ ಸ್ಟಾಲ್ ಏರ್ಪಡಿಸುವಲ್ಲಿ ಯಶಸ್ವೀಯಾಗಿವೆ. ಇವುಗಳಲ್ಲಿ ಹಸ್ತಕಲೆ, ಉಪ್ಪಿನಕಾಯಿ, ಹಪ್ಪಳ ಸಂಡಿಗೆ, ಸೀರೆಗಳು, ಬಗೆಬಗೆಯ ತಿಂಡಿ ತಿನಿಸು ಹಾಗೂ ಇನ್ನಿತರ ಅನೇಕ ಗೃಹೋದ್ಯಮ ಸಾಮಗ್ರಿ ಮಾರಾಟಕ್ಕೆ ಬರುತ್ತವೆ. ಇದು ಆರ್ಥಿಕ ಸಶಕ್ತೀಕರಣದ ಪ್ರಮುಖ ಸಾಧನವಾಗಿದೆ.
ಓಣಂ ಹಬ್ಬ ಸಾಮಾಜಿಕ ವಿಚಾರಗಳ ಕುರಿತು ಜಾಗರೂಕತೆ ಹರಡುವ, ಸಾಮುದಾಯಿಕ ಯೋಜನೆಗಳ ಸಮರ್ಥನೆ ಹಾಗೂ ಸ್ಥಳೀಯ ಹಸ್ತಕಲಾ ನಿಪುಣರಿಗೆ ಅಭಿವೃದ್ಧಿ ಒದಗಿಸುವ ವೇದಿಕೆಯೂ ಆಗಿದೆ. ಈ ರೀತಿ ಓಣಂ ಕೇವಲ ಹಬ್ಬವಾಗಿರದೆ, ಆಂದೋಲನವಾಗಿ ರೂಪಾಂತರಗೊಂಡಿದೆ.
ಇಂದು ಓಣಂ ಹಬ್ಬದ ವೈಭದ ಆಚರಣೆ ಕೇವಲ ಕೇರಳಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ವಿಶ್ವದ ಎಲ್ಲಾ ಮಲೆಯಾಳಿ ಸಮುದಾಯಗಳ ಮೂಲಕ ಉತ್ಸಾಹಪೂರ್ವಕವಾಗಿ ಆಚರಿಸಲ್ಪಡುತ್ತಿದೆ. ಮಹಿಳೆಯರು ಈ ಆಯೋಜನೆಯ ಪ್ರಮುಖ ಕೇಂದ್ರಬಿಂದುಗಳಾಗಿರುತ್ತಾರೆ.

ಟೆಕ್ನಿಕ್ಸ್ ಹಾಗೂ ಸಮಾವೇಶಗಳು
ಇಂದಿನ ಆಧುನಿಕ ಟೆಕ್ನಾಲಜಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕೋವಿಡ್ ಮಹಾಮಾರಿಯ ಕಾಟದಲ್ಲೂ ಸಹ ಹೆಂಗಸರೇ ಮುಂದೆ ನಿಂತು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆನ್ ಲೈನ್ ನೃತ್ಯ ಸ್ಪರ್ಧೆಗಳು, ರೆಸಿಪಿ ಅರೇಂಜ್ ಮೆಂಟ್ಸ್, ಕವಿತಾ ಗಾಯನ ಇತ್ಯಾದಿ ವರ್ಚುಯೆಲ್ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಹಭಾಗಿತ್ವ ಅವರ ಸಕ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಇಂದು ಓಣಂ ಹಬ್ಬದಾಚರಣೆ, ಕೇವಲ ಒಂದು ಸ್ವರ್ಣ ಯುಗದ ನೆನಪಾಗಿರದೆ, ನಾರಿ ಸಶಕ್ತೀಕರಣದ, ಭಾವೈಕ್ಯತೆಯ ಆಚರಣೆಯಾಗಿದೆ. ಇದರಲ್ಲಿ ಹೆಂಗಸರ ಪಾಲ್ಗೊಳ್ಳುವಿಕೆಯೇ ಜೀವಾಳ. ಅವರ ನೇತೃತ್ವ ಹಾಗೂ ಸಾಮೂಹಿಕ ಮಾರ್ಗದರ್ಶನಗಳು ಓಣಂ ಹಬ್ಬವನ್ನು ಒಂದು ಸಾಂಪ್ರದಾಯಿಕ ಚೌಕಟ್ಟಿಗೆ ಒಳಪಡಿಸದೆ, ಬಹಳ ಮುಂದೆ ಕೊಂಡೊಯ್ದು, ಮಾನವ ಕಲ್ಯಾಣದ ಕ್ರಾಂತಿಗೆ ನಾಂದಿ ಹಾಡಿದೆ.
`ಪೂಕ್ಕೊಲಂ’ನ ರಂಗೋಲಿ ಅಲಂಕಾರದ ಪ್ರತಿ ಹೂವಿನ ದಳದಿಂದ ಹಿಡಿದು, ಬಾಳೆಲೆ ಮೇಲೆ ಬಡಿಸಲಾಗುವ `ಸಧ್ಯಾ’ ಗ್ರಾಂಡ್‌ಫ್ಯಾಲೆಸ್ಟ್ ನ ಪ್ರತಿ ವ್ಯಂಜನದವರೆಗೂ, ಚೇಂಡಾ ನೃತ್ಯಕ್ಕೆ ಹಾಕು ಪ್ರತಿ ಹೆಜ್ಜೆಯಿಂದ, ಬೋಟ್ ರೇಸ್ ನ ಪ್ರತಿ ಹುಟ್ಟುಹಾಕುವಿಕೆಯವರೆಗೂ ಓಣಂ ಹಬ್ಬದ ಖುಷಿ ಪ್ರತಿಯೊಬ್ಬರ ಹೃದಯವನ್ನೂ ತಟ್ಟುತ್ತದೆ, ಅದು ಇಡೀ ವಿಶ್ವದಲ್ಲಿ ಎಲ್ಲೆಡೆ ರಿಂಗುಣಿಸುತ್ತದೆ!
ಮಹಾಬಲೀಂದ್ರನ ವಾಪಸಿ
ಓಣಂ ಹಬ್ಬದ ಹಿನ್ನೆಲೆ ನಿಂತಿರುವುದೇ, ಅಂದಿನ ಪುರಾಣ ಕಾಲದಲ್ಲಿ ಪ್ರಜೆಗಳ ಅತಿ ಪ್ರಿಯ ಪಾಲಕ ಎನಿಸಿದ್ದ ಮಹಾ ದಾನಶೂರ ಬಲಿಚಕ್ರವರ್ತಿಯ ಇತಿಹಾಸದಿಂದ. ವಾಮನವತಾರದ ಮೂಲಕ ಭಗತ್ಪಾದದಿಂದ ಆತ ಪಾತಾಳಕ್ಕೆ ತಳ್ಳಲ್ಪಟ್ಟ ನಂತರ, ಮತ್ತೆ ತನ್ನ ಪ್ರಜೆಗಳನ್ನು ಕಾಣಲು ಪ್ರತಿ ವರ್ಷ ಕೇರಳ ರಾಜ್ಯಕ್ಕೆ ಬರುತ್ತಾನೆ ಎನ್ನುವ ಪ್ರತೀತಿ ಇದೆ. ಅವನ ಈ ವಾಪಸಾತಿಯ ಸಂಕೇತವೇ ಓಣಂ ಹಬ್ಬದ ಆಚರಣೆ. ಆತನ ಆಡಳಿತ ಕಾಲದಲ್ಲಿ ಅತಿ ಶಾಂತಿ ಸಮೃದ್ಧಿಗಳಿದ್ದವು. ಆ ಸ್ವರ್ಣ ಯುಗದ ಸ್ಮರಣೆಗಾಗಿ ಇಂದಿಗೂ ಈ ಆಚರಣೆ ರೂಢಿಯಲ್ಲಿದೆ. ಚಿಂಗಂ ಮಾಸದಲ್ಲಿ (ಈ ಬಾರಿ ಆಗಸ್ಟ್ ಕೊನೆಯಿಂದ ಸೆಪ್ಟೆಂಬರ್ ಮೊದಲ ವಾರ) ನಡೆಸಲಾಗುವ ಓಣಂ ಹಬ್ಬ, ಕೇರಳದ ಸಾಂಸ್ಕೃತಿಕ ಸಂಭ್ರಮಾಚರಣೆಯ ಜೀವಂತ ಪ್ರದರ್ಶನವಾಗಿದೆ. ಇದರಲ್ಲಿ ಪ್ರಮುಖವಾಗಿ ಕಥಕ್ಕಳಿ, ವೆಳ್ಳಂಪಳಿ (ಬೋಟ್ ರೇಸ್), ಪುಲಿಕ್ಕಳಿ (ಹುಲಿ ವೇಷದ ನೃತ್ಯ) ಹಾಗೂ ಪೂಕ್ಕೋಲಂ ಕಂಡುಬರುತ್ತವೆ. ವಿಶೇಷವಾಗಿ ಬಾಳೆಲೆಯಲ್ಲಿ ಮಾತ್ರ ಬಡಿಸಲ್ಪಡುವ ಓಣಂಸಧ್ಯಾ, ಐಕ್ಯತೆ ಸಮೃದ್ಧಿಗಳ ಪ್ರತೀಕವೆನಿಸಿದೆ.
ಓಣಂ ಹಬ್ಬ ಕೇವಲ ಕೇರಳ ಪ್ರಾಂತ್ಯದ ಸ್ಥಳೀಯತೆನ್ನೂ ಮೀರಿ ಭಾವೈಕ್ಯತೆಯ ಭಾರಿ ಸಂದೇಶ ನೀಡುತ್ತದೆ. ಭಾರತದ `ವಿವಿಧತೆಯಲ್ಲಿ ಐಕ್ಯತೆ’ ಹಾಗೂ ಕೃಷಿ ಪರಂಪರೆಗೆ ಪ್ರಬಲ ಸಾಕ್ಷಿಯಾಗಿದೆ.
ಪೂಕ್ಕೋಲಂ : ಪುಷ್ಪಗಳ ರಂಗೋಲಿ ನಮ್ಮಲ್ಲಿ ನವರಾತ್ರಿ 9 ದಿನಗಳ ಆಚರಣೆ ನಂತರ, 10ನೇ ದಿನ `ವಿಜಯದಶಮಿ’ಯನ್ನು ಸಂಭ್ರಮಿಸುವಂತೆ, ದಸರಾ ಹಬ್ಬ ಆಚರಣೆಯಲ್ಲಿ ಇರುವಂತೆಯೇ, ಕೇರಳದಲ್ಲಿ ಈ ಚಿಂಗಂ ಮಾಸದ ಅಷ್ಟಮಿಯಿಂದ ಹಿಡಿದು 10 ದಿನಗಳ ನಂತರದ `ತಿರು ಓಣಂ’ವರೆಗೆ ಈ ಓಣಂ ಹಬ್ಬದ ಸಂಭ್ರಮಾಚರಣೆ ಜಾರಿಯಲ್ಲಿರುತ್ತದೆ. ಕೇರಳದ ಪ್ರತಿ ಗ್ರಾಮನಗರದ ಮನೆಗಳ ಮುಂದೂ ಅತಿ ಸುಂದರ ರಂಗೋಲಿಯ ಅಲಂಕಾರ ಎದ್ದುಕಾಣುತ್ತದೆ. ಇಡೀ ಮನೆ ಸ್ವಚ್ಛತೆ ಶುಭ್ರತೆಗಳಿಂದ ಲಕಲಕಿಸುತ್ತಾ, ಸುಣ್ಣಬಣ್ಣ ಕಂಡು, ಮನೆ ಮುಂದೆ ಈ ಪುಷ್ಪ ರಂಗೋಲಿ ಪ್ರಧಾನ ಅಕರ್ಷಣೆ ಎನಿಸುತ್ತದೆ.

ಪೂಕ್ಕೋಲಂ ಯಾ ‘ಅಥಾಕ್ಕಾಲಂ’ ಪ್ರಕಾರ, ಓಣಂ ಸಂದರ್ಭದಲ್ಲಿ, ಮನೆ ಮುಂಭಾಗದಲ್ಲಿ ಅಂದವಾಗಿ ಬಿಡಿಸಲಾದ ರಂಗೋಲಿ ಮೇಲೆ, ಬಣ್ಣ ಬಣ್ಣದ ಹೂಗಳನ್ನೇ ಚಿತ್ತಾರವಾಗಿ ಜೋಡಿಸಿ, ವಿಶಿಷ್ಟ ಅಲಂಕಾರ ಮಾಡುತ್ತಾರೆ. ಇದು ಬಲಿಚಕ್ರವರ್ತಿಯನ್ನು ಪ್ರತಿ ಮನೆಯವರೂ ಸ್ವಾಗತಿಸುವ ಸಾಂಪ್ರದಾಯಿಕ ಪ್ರತೀಕವಾಗಿದೆ.
ಪೂಕ್ಕೋಲಂನ ಡಿಸೈನ್ ಸಾಮಾನ್ಯಾಗಿ, ಅಕ್ಕಿಹಿಟ್ಟಿನಿಂದ ಬಿಡಿಸಲಾದ ಒಂದು ವೃತ್ತಾಕಾರದ ಪುಟ್ಟ ರಂಗೋಲಿಯನ್ನೇ, ಪ್ರತಿಯೊಂದು ದಿನ ವೃತ್ತಗಳನ್ನು ಹೆಚ್ಚಿಸುತ್ತಾ, ವಿಶಿಷ್ಟ ಡಿಸೈನ್ ನೀಡಲಾಗುತ್ತದೆ. 10ನೇ ದಿನವಾದ ತಿರುಓಣಂ ದಿನದಂದು ಇದು ಅತಿ ದೊಡ್ಡದಾಗಿ ಪೂರ್ಣ ರೂಪ ಪಡೆಯುತ್ತದೆ. ಇದರಲ್ಲಿ ಪ್ರತಿಮನೆಯ ಕುಟುಂಬದ ಸದಸ್ಯರು, ಮಕ್ಕಳು, ನೆರೆಹೊರೆಯವರು ಎಲ್ಲರೂ ಸೇರಿ ಕೈ ಜೋಡಿಸುವುದು ಭಾವೈಕ್ಯತೆಯ ಸಂಕೇತ.
ಈ ಪೂಕ್ಕೋಲಂಗಾಗಿ ವಿಶೇಷವಾಗಿ ಮಲ್ಲಿಗೆ, ಸಂಪಿಗೆ, ಗುಲಾಬಿ, ಚೆಂಡುಹೂ, ಕನಕಾಂಬರ, ಕಮಲ, ತುಳಸಿ, ಗುಲ್ ಮೊಹರ್ ಇತ್ಯಾದಿ ಅನೇಕ ಬಗೆಯ ಬಣ್ಣದ ಹೂವಿನ ದಳಗಳನ್ನು ಬಿಡಿಸಿ ಅಲಂಕರಿಸುತ್ತಾರೆ. ಇತ್ತೀಚೆಗೆ ಈ ಆಚರಣೆ ಮನೆಗಳಿಗೆ ಮಾತ್ರ ಸೀಮಿತವಾಗದೆ ಶಾಲಾ ಕಾಲೇಜು, ಆಫೀಸ್, ಸಾರ್ವಜನಿಕ ಸ್ಥಳಗಳಲ್ಲೂ ಸ್ಥಾನ ಪಡೆದಿದೆ. ಇದಕ್ಕಾಗಿ ವಿಶೇಷ ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರೆ.
ಓಣಂ ಸಧ್ಯಾ : ಬೊಂಬಾಟ್ ಭೋಜನ ಹಬ್ಬ ಎಂದ ಮೇಲೆ ಭಾರೀ ಬೊಂಬಾಟ್ ಭೋಜನ ಇರಲೇಬೇಕು, ಅದುವೇ ಓಣಂ ಸಧ್ಯಾ! ಇದರಲ್ಲಿ ಬಗೆಬಗೆಯ ವ್ಯಂಜನಗಳಿರುತ್ತವೆ. ತರಕಾರಿ ಬೆರೆತ ಬೇಳೆ ಸಾಂಬಾರ್, ರಸಂ, ಕೇವಲ ತರಕಾರಿ ಕೊಬ್ಬರಿ ಎಣ್ಣೆ ಒಗ್ಗರಣೆಯ ಅವಿಯಲ್, ಥೋರನ್, ಓಲಾನ್, ಪಚ್ಚಡಿ, ಪಾಯಸಂ, ಬಾಳೆ ಚಿಪ್ಸ್, ಅಡಪ್ರಥಮನ್, ಚಕ್ಕರಪ್ರಥಮನ್, ಶಂಕರಪೋಳಿ ಇತ್ಯಾದಿ ನಾನಾ ಬಗೆ ಇರುತ್ತವೆ.
ಈ ಭೋಜನವನ್ನು ಬಡಿಸುವ ಕ್ರಮ ಅತಿ ವಿಶಿಷ್ಟವಾದುದು ಎಲ್ಲಕ್ಕೂ ಮೊದಲು ಬಾಳೆಲೆ ತುದಿಗೆ ಉಪ್ಪು, ಉಪ್ಪಿನಕಾಯಿ, ಚಿಪ್ಸ್, ನಂತರ ಹಲವು ಬಗೆ ಪಲ್ಯ, ಕೋಸಂಬರಿ, ಹಪ್ಪಳ, ಸಂಡಿಗೆ, ಸಣ್ಣಕ್ಕಿ ಅನ್ನದ ಮೇಲೆ ತುಪ್ಪ, ಸಾಂಬಾರ್, ರಸಂ ಇತ್ಯಾದಿ ಬಡಿಸಲಾಗುತ್ತದೆ. ಪ್ರತಿಯೊಂದು ವ್ಯಂಜನವನ್ನೂ ಎಲ್ಲರ ಆರೋಗ್ಯ, ಪಚನಕ್ರಿಯೆ, ಅಚ್ಚುಕಟ್ಟಾದ ರುಚಿ ಗಮನಿಸಿಕೊಂಡು ಅತಿ ಶುಚಿಯಾಗಿ ತಯಾರಿಸಲಾಗುತ್ತದೆ. ಇದಾದ ನಂತರ ಅಡಪ್ರಥಮನ್, ಪಾಯಸಂ, ಕೂಟ್ಟುಕರಿ, ಥೋರನ್, ಅವಿಯಲ್, ಓಲನ್, ರಸಂ, ಕಿಚಡಿ, ಪಚ್ಚಡಿ, ಇಂಜಿ ತೈರ್, ಬಾಳೆ ಉಪ್ಪೇರಿ, ಶಂಕರಪೋಳಿ ಇತ್ಯಾದಿ ಜೊತೆಗೂಡುತ್ತವೆ. ಪ್ರತಿಯೊಂದು ವ್ಯಂಜನಕ್ಕೂ ತನ್ನದೇ ಆದ ಸಾಂಸ್ಕೃತಿಕ ಮಹತ್ವವಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಓಣಂ ಹಬ್ಬದ ಆರಂಭ `ಅಥಾಚಮಯಂ’ ಎಂಬ ಹೆಸರಿನ ಸಾಂಸ್ಕೃತಿಕ ಉತ್ಸವ, ಮೆರವಣಿಗೆಯಿಂದ ಶುರುವಾಗುತ್ತದೆ. ಇದು ಮುಖ್ಯವಾಗಿ ತ್ರಿಪುನಿತ್ರಾ (ಕೋಚ್ಚಿ) ನಗರದಿಂದ ಆರಂಭ. ಇದರಲ್ಲಿ ಅಲಂಕರಿಸಲಾದ ಆನೆ ಅಂಬಾರಿ, ಜಾನಪದ ಕಲೆ ಓಲಗ, ಎಲ್ಲೆಲ್ಲೂ ಹೂಮಾಲೆಗಳ ವೈಭವ, ಪುಲಿಕಳಿ (ಹುಲಿವೇಷ), ತಿರುವಾತ್ತಿರ, ಕೈಕೊಟ್ಟಿಕಳಿಯಂಥ ಸಮೂಹ ನೃತ್ಯಗಳಿರುತ್ತವೆ.
ಸರ್ಕಾರ ಹಾಗೂ ಪ್ರವಾಸೋದ್ಯಮ ವಿಭಾಗಗಳಿಂದ ಓಣಂ ಹಬ್ಬದ ಸಂದರ್ಭದಲ್ಲಿ, ಇಡೀ ಕೇರಳ ರಾಜ್ಯದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕಥಕ್ಕಳಿ, ಮೋಹಿನಿಯಾಟ್ಟಂ, ಶಾಸ್ತ್ರೀಯ ನೃತ್ಯಗಳು, ಜಾನಪದ ನೃತ್ಯ, ಗೀತ ಗಾಯನ, ದೋಣಿ ಸ್ಪರ್ಧೆ, ಸಾಂಪ್ರದಾಯಿಕ ಗ್ರಾಮೀಣ ಕ್ರೀಡಾಕೂಟಗಳು ಇತ್ಯಾದಿಗಳಿಂದ ರಂಗೇರಿಸಲಾಗುತ್ತದೆ.
ಓಣಂ ಹಬ್ಬದ ಮರುದಿನ ಆವಿಟ್ಟಂ ಹಾಗೂ ಚಥಾಯಂ ಉತ್ಸವಗಳೂ ಮಹತ್ವಪೂರ್ಣದ್ದಾಗಿವೆ. ಇದರಲ್ಲಿ ರಥೋತ್ಸವ, ಮೆರವಣಿಗೆ ಇತ್ಯಾದಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತವೆ.
ಭಾವೈಕ್ಯತೆಯ ಉತ್ಸವ
ಓಣಂ ಇದೀಗ ಜಾಗತಿಕ ಹಬ್ಬವಾಗಿ ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಮಲೆಯಾಳಿ ಸಮುದಾಯ ವಿಶ್ವವಿಡೀ ಸಾಂಸ್ಕೃತಿಕ ಕಾರ್ಯಕ್ರಮ, ಭೂರಿ ಭೋಜನ, ಆಟೋಗಳ ಹಲವು ಸ್ಪರ್ಧೆ ಏರ್ಪಡಿಸುತ್ತದೆ. ಪ್ರವಾಸಿಗಳಿಗಂತೂ ಇದು ತಮ್ಮವರನ್ನು ಕೂಡಿಕೊಳ್ಳುವ ರಸಮಯ ಕ್ಷಣಗಳು! ಇಂಥ ಹಬ್ಬ ಮಾನಸಿಕ ಆರೋಗ್ಯಕ್ಕೆ ಬಲು ಲಾಭಕಾರಿ. ಇದು ಹರ್ಷೋಲ್ಲಾಸದ, ಶಾಂತಿಮಂತ್ರದ ಕ್ಷಣಗಳು, ಹೀಗಾಗಿ ನಮ್ಮ ಮಾನಸಿಕ ಒತ್ತಡ ತಂತಾನೇ ತಗ್ಗುತ್ತದೆ, ಸಕಾರಾತ್ಮಕತೆ ಹೆಚ್ಚುತ್ತದೆ. ಇದು ನಮ್ಮ ಜೀವನದಲ್ಲಿ ಅವಿಸ್ಮರಣೀಯ ರಸಘಳಿಗೆಗಳು ಬುತ್ತಿ ಕಟ್ಟಿಕೊಳ್ಳಲು ಸುವರ್ಣಾವಕಾಶ!
ಬ್ಯೂಟಿ ಜೋಶ್
ಹಬ್ಬದ ಸಂದರ್ಭಗಳಲ್ಲಿ ಎಲ್ಲರೂ ಸುಂದರವಾಗಿ ಕಂಗೊಳಿಸಲು ಬಯಸುತ್ತಾರೆ. ಫೋಟೋ, ವಿಡಿಯೋಗಳಲ್ಲಿ ಮಿಂಚಲು ತುದಿಗಾಲಲ್ಲಿ ಕಾಯುತ್ತಾರೆ. ಹೀಗಾಗಿ ಹಬ್ಬದ ಕೆಲವು ದಿನಗಳಿಂದಲೇ ಬ್ಯೂಟಿ ಮೇಕ್ ಓವರ್ ಕಾರ್ಯಕ್ರಮ ಶುರುವಾಗುತ್ತದೆ. ವಿಶೇಷ ರೂಪದಲ್ಲಿ ಯುವಜನತೆ ಫೇಶಿಯಲ್, ಪೆಡಿಕ್ಯೂರ್, ಮೆನಿಕ್ಯೂರ್, ನೇಲ್ ಪಾಲಿಶ್, ಮೆಹಂದಿ ಹಚ್ಚಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಸ್ಕಿನ್ ಕೇರ್ ನ ದಿನಚರ್ಯೆ ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಇತ್ಯಾದಿಗಳು ತನುಮನಗಳಿಗೆ ಹೆಚ್ಚಿನ ಸುಖಶಾಂತಿ ನೀಡುತ್ತದೆ.
ಕಾಲೇಜುಗಳಲ್ಲಿ ಓಣಂ ಬಲು ಉತ್ಸಾಹದಿಂದ ಅತ್ಯಧಿಕ ಜೋಶ್ ತುಂಬಿಕೊಂಡು ಆಚರಿಸಲಾಗುತ್ತದೆ. ಅಲ್ಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಪ್ರದಾಯಿಕ, ಆಧುನಿಕ ಡ್ರೆಸೆಸ್ ಧರಿಸಿ ಬಂದು ಫ್ಯಾಷನ್ನಿಗೆ ಹೊಸ ರೂಪ ನೀಡುತ್ತಾರೆ. ಉದಾ : ಡಿಸೈನರ್ ದಾವಣಿ ಸೆಟ್‌ಆಧುನಿಕ ಕಸಾ (ಮಲೆಯಾಳಿ ಶೈಲಿಯ) ಸೀರೆಗಳು. ಹೀಗೆ ಓಣಂ ಹಬ್ಬ ಯುವಜನತೆಯ ತನುಮನಗಳಿಗೆ ಹೆಚ್ಚಿನ ಉಲ್ಲಾಸ, ಜೋಶ್ ತುಂಬುತ್ತದೆ.
ಖುಷಿಯ ಥೆರಪಿ ಈ ಹಬ್ಬದ ವಾತಾವರಣ ಒತ್ತಡದ ಹಾರ್ಮೋನ್ ನ್ನು ಎಷ್ಟೋ ತಗ್ಗಿಸುತ್ತದೆ. ಮನೆಯ ಶುಚಿತ್ವ, ಶುಭ್ರತೆ, ಅಲಂಕಾರ, ಹೇರ್ ಸ್ಟೈಲ್, ಹೊಸ ಹೊಸ ಶಾಪಿಂಗ್, ಹೊಸ ಡ್ರೆಸ್ ಧರಿಸುವಿಕೆ, ಮೆಹೆಂದಿ ಹಾಕಿಸಿಕೊಳ್ಳುವುದು….. ಇತ್ಯಾದಿ ಎಲ್ಲ ಆತ್ಮವಿಶ್ವಾಸ ಹೆಚ್ಚಿಸಿ, ಮಾನಸಿಕ ಸಮತೋಲನವನ್ನು ಬೆಟರ್ ಗೊಳಿಸುತ್ತದೆ.
ಇದಕ್ಕಾಗಿ ತಯಾರಿ ತುಸು ಸುಸ್ತುಗೊಳಿಸಿದರೂ, ಇದರಿಂದ ಸಿಗುವ ಸಕಾರಾತ್ಮಕತೆ ಹೆಚ್ಚಿನ ಆನಂದ ನೀಡುತ್ತದೆ. ಇಡೀ ಮನೆಯ ಗೃಹಾಲಂಕಾರ, ತುಂಬುಮನದಿಂದ ಹಬ್ಬದಲ್ಲಿ ಪಾಲ್ಗೊಳ್ಳುವಿಕೆ, ಒಂದು ವಿಧದಲ್ಲಿ ಥೆರಪಿಯೇ ಸರಿ ರಿಸರ್ಚ್ ನಿಂದ ಮತ್ತೂ ಒಂದು ವಿಷಯ ತಿಳಿದು ಬಂದದ್ದು ಎಂದರೆ, ಮೇಕಪ್ ಯಾ ಅಲಂಕಾರ (ತನುಮನೆ ಎರಡರದ್ದೂ) ಮಾಡುವುದರಿಂದ, ಟೆನ್ಶನ್ಸ್ ಎಷ್ಟೋ ಕಡಿಮೆ ಆಗುತ್ತದೆ ಹಾಗೂ ಮನಸ್ಸು ಶಾಂತ ಸಂತೃಪ್ತ ಭಾವ ಹೊಂದುತ್ತದೆ.

ಆಶಾಭಾವನೆ ಹಾಗೂ ಸಕಾರಾತ್ಮಕತೆ
ಈ ಹಬ್ಬ ಎಲ್ಲರ ಮನದಲ್ಲೂ ಆಶಾಭಾವನೆ ಹಾಗೂ ಸಕಾರಾತ್ಮಕತೆ ತುಂಬುತ್ತದೆ ಇದು ವ್ಯಸ್ತ ಯಾಂತ್ರಿಕ ಜೀವನಕ್ಕೊಂದು ತಾಜಾತನ ತುಂಬಿಸುವ ವಿರಾಮ ನೀಡುತ್ತದೆ. ಎಷ್ಟೋ ಜನ ಸಮಯದ ಅಭಾವದ ಕಾರಣ ಒಂಟಿತನ ಎದುರಿಸುತ್ತಿರುವಾಗ, ಅಂಥವರಿಗೂ ಸಹ ಈ ಹಬ್ಬ ಹೆಚ್ಚಿನ ಮಾನಸಿಕ ಶಾಂತಿ ನೆಮ್ಮದಿ ನೀಡುತ್ತದೆ. ಕೌಟುಂಬಿಕ, ಆತ್ಮೀಯರ ಭೇಟಿಯಿಂದ ಗೆಳೆತನದ ತಂತು ಬಿಗಿಯಾಗುತ್ತದೆ.
ಸಾಂಪ್ರದಾಯಿಕತೆಯಲ್ಲಿ ನವೀನತೆ
ಎಲ್ಲಾ ಹಬ್ಬಗಳನ್ನೂ ಪ್ರಾಚೀನ ಶೈಲಿಯಲ್ಲೇ ಆಚರಿಸಬೇಕು ಎಂದೇನೂ ನಿಯಮವಿಲ್ಲ. ಹೊಸ ಪೀಳಿಗೆಯವರು ಇದನ್ನು ಹೊಸ ಶೈಲಿಯಲ್ಲಿ ಆಚರಿಸಲು ತೊಡಗಿದ್ದಾರೆ. ಆಚರಣೆಯಲ್ಲಿ ಏನಾದರೂ ಹೊಸತನ ತರುತ್ತಾರೆ. ಮನೆಯಲ್ಲೇ ಹಬ್ಬದ ಆಚರಣೆ ಬದಲು ದೂರದ ನೆಂಟರಿಷ್ಟರನ್ನು ಭೇಟಿಯಾಗಿ ಬರುವುದು, ಅವರಿಗಾಗಿ ಸ್ಪೆಷಲ್ ಉಡುಗೊರೆಗಳನ್ನು ಕೊಳ್ಳುವುದು (ರಿಸ್ಟ್ ವಾಚ್, ಸಣ್ಣಪುಟ್ಟ ಹೊಸ ಉಪಕರಣ), ಹೊಸ ಮನೆಗೆ ಶಿಫ್ಟ್ ಆಗುವುದು/ಕೊಳ್ಳುವುದು, ಅಗತ್ಯವುಳ್ಳವರ ಜೊತೆ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಭೋಜನ ಕೂಟ ಏರ್ಪಡಿಸುವುದು, ಅವರೆಲ್ಲರಿಗೂ ಸಣ್ಣಪುಟ್ಟ ಗಿಫ್ಟ್ ನೀಡುವುದು ಇವೆಲ್ಲ ಓಣಂ ಹಬ್ಬದ ಸಡಗರ ಸಂಭ್ರಮವನ್ನು ದ್ವಿಗುಣಗೊಳಿಸುತ್ತವೆ.
ಕ್ಯಾಂಪಸ್ ಓಣಂ
ಹೈಸ್ಕೂಲು ಕಾಲೇಜುಗಳಲ್ಲಿಯೇ ಓಣಂ ಬಲು ಸಡಗರ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಅಲ್ಲಿನ ವಿದ್ಯಾರ್ಥಿಗಳೆಲ್ಲ ಶಿಸ್ತುಬದ್ಧವಾಗಿ ಸಾಂಪ್ರದಾಯಿಕ ಎಥ್ನಿಕ್ ಡ್ರೆಸೆಸ್ ಧರಿಸಿ ಬರುತ್ತಾರೆ. ಹುಡುಗರು ಪಂಚೆ ಜೊತೆ ಶರ್ಟ್ (ಲೈಟ್‌ವೈಟ್) ಯಾ ಕುರ್ತಾ, ಹುಡುಗಿಯರು ಕಸಾ ಸೀರೆ ಯಾ ಸೆಟ್ ಮುಂಡು ಉಡುತ್ತಾರೆ. ಇದೀಗ ಇಂಥ ಟೀನೇಜರ್ಸ್ ಪಾರಂಪರಿಕ, ಆಧುನಿಕ ಶೈಲಿಯ ಮಿಕ್ಸ್ಡ್ ಹೊಸ ಫ್ಯಾಷನ್ ಅನುಸರಿಸುತ್ತಾರೆ.
ಓಣಕ್ಕೋಡಿ : ಹೊಸ ವಸ್ತ್ರಗಳ ಪರಂಪರೆ ಓಣಕ್ಕೋಡಿ ಅಂದ್ರೆ ಓಣಂ ಹಬ್ಬಕ್ಕೆ ಹೊಸ ವಸ್ತ್ರ ತೊಡುವುದು. ಈ ಹಬ್ಬದ ನೆಪದಲ್ಲಿ ಮನೆಯಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಹೊಸ ಉಡುಗೆ ತೊಡುತ್ತಾರೆ. ಗಂಡಸರು ಬಿಳಿ ಮಲ್ಲು ಪಂಚೆ, ಫುಲ್ ಶರ್ಟ್, ಹೆಂಗಸರು ಕೇಸರಿ ಅಂಚಿನ ಕ್ರೀಂ ಬೆರೆತ ಬಿಳುಪಿನ ಕಸಾ ಸೀರೆ, ಸೆಟ್ ಮುಂಡು, ಹಾಗೂ ಮಕ್ಕಳು ಬಣ್ಣ ಬಣ್ಣದ ಪಾರಂಪರಿಕ ಯಾವ ಮಾಡಲ್ ಡ್ರೆಸೆಸ್ ಧರಿಸುತ್ತಾರೆ. ಕಸಾ ಸೀರೆಗಳು, ಮುಂಡು ವಸ್ತ್ರಗಳನ್ನು ಹನ್ ವೀಲ್, ಕಂಥುಮ್ ಪುಲ್ಲಿ, ಬೈಲಾರಾಮಪುರಂ ಮುಂತಾದ ಪ್ರಸಿದ್ಧ ಕೈಮಗ್ಗದ ವಸ್ತ್ರಾಲಯಗಳಿಂದ ತಯಾರಾಗುತ್ತವೆ.
ಓಣಂ ಹಬ್ಬದಲ್ಲಿ ಉಡುಗೊರೆಗಳನ್ನು ಕೊಟ್ಟು ತೆಗೆದುಕೊಳ್ಳುವುದು ಪರಸ್ಪರ ಸಂಬಂಧಗಳನ್ನು ಮಧುರಗೊಳಿಸುತ್ತದೆ. ಇದು ಭೌತಿಕವಾದಲ್ಲ, ಬದಲಿಗೆ ಪರಸ್ಪರರತ್ತ ಪ್ರೀತಿ, ವಾತ್ಸಲ್ಯ, ನೆನಪು, ಮೈತ್ರಿಗಳ ಪ್ರತೀಕ! ಆತ್ಮೀಯರು, ನೆಂಟರಿಷ್ಟರ ಮುಖದಲ್ಲಿ ಮಂದಹಾಸ ಚಿಮ್ಮಿಸಲು ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಅತಿ ಸ್ನೇಹದಿಂದ ನೀಡಲಾದ ಸಣ್ಣ ಗಿಫ್ಟ್ ಸಹ ಅಮೂಲ್ಯ ಕಾಣಿಕೆಯಾಗಿ ಸ್ವೀಕರಿಸಲ್ಪಡುತ್ತದೆ, ಅವಿಸ್ಮರಣೀಯವಾಗಿ ಉಳಿಯುತ್ತದೆ. ಅವರ ಅಭಿರುಚಿಗೆ ತಕ್ಕಂತೆ ನೀವು ಕೊಟ್ಟರೆ, ಈ ಆನಂದ ಮತ್ತಷ್ಟು ಹೆಚ್ಚುತ್ತದೆ.
ಒಟ್ಟಾರೆ ಹೇಳುವುದಾದರೆ, ಓಣಂ ಹಬ್ಬ ಭಾವೈಕ್ಯತೆ ಹೆಚ್ಚಿಸುವ, ಸಮೃದ್ಧಿಯ ಪ್ರತೀಕದ ಹಬ್ಬ. ಇದರಲ್ಲಿ ಎಲ್ಲಾ ವರ್ಗ, ಎಲ್ಲಾ ಧರ್ಮ, ಎಲ್ಲಾ ವಯಸ್ಸಿನ ಜನರೂ ಕೂಡಿ ಆಚರಿಸುವ ಹಬ್ಬವಾಗಿದೆ. ಇದು ಮನುಕುಲಕ್ಕೆ, `ಮಹಾಬಲೀಂದ್ರನ ಸುಭಿಕ್ಷ ರಾಜ್ಯದಲ್ಲಿ ಎಲ್ಲಾ ಪ್ರಜೆಗಳೂ ಸಮಾನ ಸುಖಿಗಳಾಗಿ ಸಂತಸದಿಂದ ಬಾಳುತ್ತಿದ್ದಾರೆ,’ ಎಂಬ ನಾಣ್ನುಡಿಗೆ ಕನ್ನಡಿಯಾಗಿದೆ.
ಓಣಂ ಸಧ್ಯಾ ಭೋಜನದ ಸ್ವಾದ, ಪೂಕ್ಕೋಲಂನ ಬಣ್ಣದ ಚಮತ್ಕಾರ, ಸಾಂಪ್ರದಾಯಿಕ ಆಟೋಟಗಳು, ಸಂಗೀತನೃತ್ಯಗಳ ಸಾಮೂಹಿಕ ಸಾಂಸ್ಕೃತಿಕ ಸಮಾರಂಭಗಳು, ಇವೆಲ್ಲ ಕೂಡಿ ಮಲೆಯಾಳಿ ಸಂಸ್ಕೃತಿಯನ್ನು ಭಾರತೀಯ ಪರಂಪರೆಯಾಗಿ ಗುರುತಿಸಲು ನೆರವಾಗುತ್ತದೆ. ಇದು ಸಂಬಂಧಗಳನ್ನು ಬೆಸೆದು ಸದೃಢಗೊಳಿಸುತ್ತದೆ, ಮೌಲ್ಯಗಳನ್ನು ವರ್ಧಿಸಿ ಆನಂದ ಹರಡಲು ನೆರವಾಗುತ್ತದೆ.
– ಎಂ.ಕೆ. ಗೀತಾ/ಕೆ.ಜಿ. ಪ್ರೀತಾ





