ಕಥೆ ಸವಿತಾ ರಮೇಶ್

ಬಾಲ್ಯದ ಆಟಗಳು ಬಲು ಚಂದ! ಏನೂ ಅರಿಯದ ಮುಗ್ಧ ವಯಸ್ಸಿನಲ್ಲಿ ಮನಸ್ವಿನಿಸುಧನ್ವ ಪತಿ ಪತ್ನಿಯರಾಗಿ ಎಲ್ಲ ಮಕ್ಕಳ ಜೊತೆ ಮದುವೆ ಆಟ ಆಡುತ್ತಿದ್ದರು. ಅದು ಅವರಿಬ್ಬರ ಮನದಲ್ಲಿ ಶಾಶ್ವತವಾಗಿ ಉಳಿದಾಗ, ಮುಂದೆ ಅವರು ಭೇಟಿಯಾಗಲು ಸಾಧ್ಯವಾಯಿತೇ….?

ನೀನಿತ್ತ ನವಿಲುಗರಿ ಪುಟ್ಟ ಪೆಟ್ಟಿಗೆಯ ತಳದಿ ಕುಳಿತ ನವಿಲುಗರಿ

ಬಣ್ಣಗೆಡದೆ ಮಿಂಚಿತ್ತು ಇನ್ನಷ್ಟು ಮಿರಿ ಮಿರಿ

ನಿನ್ನ ನೆನಪ ಹೃದಯದಲ್ಲಿಟ್ಟು ನೀನಿತ್ತ ಗರಿ

ಕಣ್ಣಗಲಿಸಿ ನೋಡುತಿರುವೆ ನೀ ಬರುವ ದಾರಿ

ಬಾಲ್ಯದ ತುಂಟಾಟ ಮನದಲಿ ನೆಲೆ ನಿಂತಿದೆ

ಆಟದಿ ಗಂಡನಾದ ನೀನು ಮನ ತುಂಬಿದೆ

ಹೃದಯದ ತುಂಬಾ ನೀನೇ ಪಡಿಸಿರುವಾಗ

ಬೇರೆಯರನ್ನು ನಾ ಹೇಗೆ ವರಿಸಲಿ ಹೇಳೀಗ

ನೀನೇಕೆ ದೂರ ಸರಿದೆ ವಿಳಾಸ ಇರದ ಹಾಗೆ

ಇನ್ನೆಷ್ಟು ದಿನ ನಿನ್ನ ದಾರಿಯ ಕಾಯಲಿ ಹೀಗೆ

ಆಟದಿ ನೀನಿತ್ತ ಮುತ್ತು ನೆನಪಿದೆಯೇ ನಿನಗೆ

ಕದಪಿನಲಿ ಸವಿ…. ಇನ್ನೂ ಉಳಿದಿದೆ ಹಾಗೆ

ನೀನು ನನ್ನ ಮರೆತು ದೂರ ಹೋದರೇನಂತೆ

ನನ್ನುಸಿರಲ್ಲಿ ಉಸಿರಾಗಿ ಬೆರೆತಿರುವೆ ಆವತ್ತೆ

ಗರಿಯೇ ನನ್ನ ಸಂಗಾತಿ ನೀ ಬರುವ ತನಕ

ಕಾಯುತಿರುವೆ ಕುಟುಕು ಜೀವ ಇರುವ ತನಕ

ದೀಪಾವಳಿ ವಿಶೇಷಾಂಕಕ್ಕೆ ನವಿಲುಗರಿಯ ಬಗ್ಗೆ ಪುಟ್ಟ ಕವನ ಕಳುಹಿಸಿ ಮೇಡಂ ಎಂದು ಪತ್ರಿಕೆಯ ಸಂಪಾದಕರು ಹೇಳಿದ್ದು ನೆನಪಾಗಿ ಮೇಲಿನ ಸಾಲುಗಳನ್ನು ಬರೆದಳು ಮನಸ್ವಿನಿ.

ಅದು ಅವಳ ಹೃದಯದಲ್ಲಿ ಬಚ್ಚಿಟ್ಟ ಭಾವನೆಯಾಗಿತ್ತು. ಇಂದು ಕವನದ ರೂಪದಲ್ಲಿ ಕಾಗದದ ಮೇಲೆ ಇಳಿಯಿತು. ಅದನ್ನು ಸಂಪಾದಕರಿಗೆ ಕಳುಹಿಸಿ ರೂಮಿಗೆ ಬಂದಳು.

ಕಪಾಟಿನ ಬಾಗಿಲು ತೆಗೆದು ಮೂಲೆಯಲ್ಲಿ ಜೋಪಾನವಾಗಿ ಇಟ್ಟಿದ್ದ ಪುಟ್ಟ ಪೆಟ್ಟಿಗೆಯನ್ನು ತೆಗೆದಳು. ಇನ್ನೊಂದು ಕೈ ಬೆರಳಿನಿಂದ ಆ ಪೆಟ್ಟಿಗೆಯನ್ನು ನೇವರಿಸುತ್ತಾ ಮುಚ್ಚಳ ತೆಗೆದಳು. ಅಲ್ಲಿದ್ದ ನವಿಲುಗರಿಯಲ್ಲಿ ಪುಟ್ಟ ಸುಧನ್ವನ ಮುಖ ಕಾಣಿಸಿತು. ಅದನ್ನು ಕೈಯಲ್ಲಿ ಹಿಡಿದು ಕೆನ್ನೆಗೆ ಒತ್ತಿಕೊಂಡಳು.

`ಎಲ್ಲಿದ್ದೀಯೋ ಮಾರಾಯ…. ನಿನಗೆ ನನ್ನ ನೆನಪೇ ಇಲ್ಲವೇ…’ ಎನ್ನುತ್ತಾ ಹಳೆಯ ನೆನಪಿನೊಳಗೆ ಜಾರಿದಳು.

ಮನಸ್ವಿನಿಯ ತಂದೆ ಪೋಸ್ಟ್ ಆಫೀಸ್‌ ನಲ್ಲಿ  ಪೋಸ್ಟ್ ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ 45 ವರ್ಷಗಳಿಗೊಮ್ಮೆ ಬೇರೆ ಬೇರೆ ಊರಿಗೆ ಟ್ರಾನ್ಸ್ ಫರ್‌ ಆಗುತ್ತಿತ್ತು. ಮನಸ್ವಿನಿ ಆರೇಳು ವರ್ಷದವಳಿದ್ದಾಗ ಅವರ ತಂದೆ ಮಲೆನಾಡಿನ ಪುಟ್ಟ ನಗರದಲ್ಲಿದ್ದರು. ಅಲ್ಲಿನ ಬ್ಯಾಂಕಿನಲ್ಲಿ ಸುಧನ್ವನ ತಂದೆ ಮ್ಯಾನೇಜರ್‌ ಆಗಿದ್ದರು.

ಇವರ ಮನೆಯ ಪಕ್ಕದಲ್ಲಿಯೇ ಸುಧನ್ವನ ಮನೆಯೂ ಇತ್ತು. ಮನಸ್ವಿನಿಯ ಅಕ್ಕ, ತಮ್ಮ, ತಂಗಿ ಜೊತೆಗೆ ಸುಧನ್ವನ ಅಕ್ಕ, ತಮ್ಮಂದಿರು ಎಲ್ಲರೂ ಒಟ್ಟಿಗೆ ಆಡುತ್ತಿದ್ದರು.

ಇವರ ಜೊತೆಗೆ ಅಕ್ಕಪಕ್ಕದ 3-4 ಮನೆಯ ಮಕ್ಕಳು ಸೇರುತ್ತಿದ್ದರು. ಶಾಲೆಗೆ ರಜೆ ಬಂದಾಗ ಎಲ್ಲರೂ ಸೇರಿ ದಿನಕ್ಕೊಂದು ಆಟ ಆಡುತ್ತಿದ್ದರು. ಈಗಿನಂತೆ ಆಗ ಸಮ್ಮರ್‌ ಕ್ಯಾಂಪ್‌ ಗಳಿರಲಿಲ್ಲ.

ಮಕ್ಕಳೆಲ್ಲಾ ಸೇರಿ ಬಗೆಬಗೆಯ ಆಟ ಆಡುವರು. ಆ ಎಲ್ಲಾ ಮಕ್ಕಳಲ್ಲಿ ಮನಸ್ವಿನಿಗೆ ಸುಧನ್ವನನ್ನು ಕಂಡರೆ ಜಾಸ್ತಿ ಇಷ್ಟ ಇತ್ತು. ಅವನಿಗೂ ಹಾಗೆಯೇ ಇತ್ತು. ಆಟ ಆಡುವಾಗ ಯಾವಾಗಲೂ ಮನಸ್ವಿನಿಯನ್ನು ತನ್ನ ಪಾರ್ಟಿಗೆ ಸೇರಿಸಿಕೊಳ್ಳುತ್ತಿದ್ದ. ಮನೆಯ ಆಟ ಆಡುವಾಗ ಇವರಿಬ್ಬರೇ ಗಂಡಹೆಂಡತಿಯರಾಗಿ ಆಟ ಆಡುತ್ತಿದ್ದರು.

ಒಮ್ಮೆ ಪಕ್ಕದ ಮನೆಯ ಹುಡುಗ ತಾನು ಮನಸ್ವಿನಿಯ ಗಂಡನಾಗುತ್ತೇನೆ ಎಂದಾಗ ಸುಧನ್ವ ಸಹಿಸಿರಲಿಲ್ಲ. ಕೋಪದಿಂದ ಅವನಿಗೆ ಹೊಡೆದು ನೀನು ಆಟಕ್ಕೆ ಬೇಡ ಎಂದಿದ್ದ. ಅಂದಿನಿಂದ ಮನಸ್ವಿನಿಗೂ ಸುಧನ್ವನೇ ತನ್ನ ಗಂಡನಾಗಬೇಕು ಎಂದು ಅನಿಸುತ್ತಿತ್ತು.

ಪಕ್ಕದ ಮನೆಯ ಆ ಹುಡುಗ ಸುಧ್ವನ ಬಳಿ, “ಮನಸ್ವಿನಿಗೆ ಯಾವಾಗಲೂ ನೀನೇ ಯಾಕೆ ಗಂಡನಾಗಬೇಕು?” ಎಂದು ಕೇಳಿದ್ದ.

ಆಗ ಸುಧನ್ವ ದೊಡ್ಡವರಂತೆ, “ಹೇ ಮಂಕೆ, ಯಾರಿಗಾದರೂ ದಿನಕ್ಕೊಬ್ಬರು ಬೇರೆ ಬೇರೆ ಗಂಡಂದಿರುತ್ತಾರಾ….? ನಿಮ್ಮ ಅಮ್ಮನಿಗೂ ನಿಮ್ಮ ಅಪ್ಪ ಮಾತ್ರ ಗಂಡ ತಾನೇ….? ಹಾಗೆಯೇ ಇದುನೂ. ನೀನು ಬೇಕಿದ್ದರೆ ಬೇರೆ ಹುಡುಗಿಗೆ ಗಂಡನಾಗು,” ಎಂದಿದ್ದ.

ಅಲ್ಲಿದ್ದ ನಾಲ್ಕು ವರ್ಷದಲ್ಲಿ ಸುಧನ್ವ ಯಾವಾಗಲೂ ಅವಳು ತನ್ನ ಹೆಂಡತಿ ಎನ್ನುವಂತೆ ಅವಳನ್ನು ರಕ್ಷಣೆ ಮಾಡುತ್ತಿದ್ದ. ಯಾವ ಮಕ್ಕಳೂ ಅವಳಿಗೆ ಕಾಟ ಕೊಡದಂತೆ ಆಟದಲ್ಲಿ ಯಾವಾಗಲೂ ಅವಳೇ ಗೆಲ್ಲುವಂತೆ ನೋಡಿಕೊಳ್ಳುತ್ತಿದ್ದ. ಆಗಲೇ ಮನಸ್ವಿನಿಯ ಮನಸ್ಸಿನಲ್ಲಿ ಸುಧನ್ವ ಗಂಡನ ಸ್ಥಾನ ಪಡೆದುಬಿಟ್ಟಿದ್ದ. ಒಮ್ಮೆ ಮನೆಯ ಆಟ ಆಡುವಾಗ ಇನ್ನೊಬ್ಬ ಹುಡುಗಿ ಸಂಧ್ಯಾ, “ಹೇ…. ಸುಧನ್ವ ನಿನ್ನ ಹೆಂಡತಿಗೆ ಗಿಪ್ಟ್ ತಂದುಕೊಡುವುದಿಲ್ಲವೇ….? ನಮ್ಮ ಅಪ್ಪ ಸಂಬಳ ಬಂದಾಗೆಲ್ಲಾ ಅಮ್ಮನಿಗೆ ಗಿಫ್ಟ್ ತಂದುಕೊಡುತ್ತಾರೆ,” ಎಂದಿದ್ದಳು.

ಆಟದಲ್ಲಿ ಗಿಫ್ಟ್ ಎಂದರೆ ಮಕ್ಕಳು ಸಂಗ್ರಹ ಮಾಡಿ ಜೋಪಾನವಾಗಿ ಇಟ್ಟುಕೊಂಡಿದ್ದ ಪೆನ್ಸಿಲ್‌, ರಬ್ಬರ್‌, ಅಲ್ಲೇ ಇವರು ಚೆಂದದ ಹೂ, ಬಣ್ಣ ಬಣ್ಣದ ಎಲೆಗಳು, ನವಿಲುಗರಿ, ಅವರುಗಳೇ ಕಾಗದದಲ್ಲಿ ಬರೆದ ಬಣ್ಣ ತುಂಬಿದ ಚಿತ್ರಗಳು ಇಂಥವುಗಳೇ ಆಗಿತ್ತು.

ಗಿಫ್ಟ್ ಎಂದ ತಕ್ಷಣ ಸುಧನ್ವ, “ನಾನು ಕೊಡುತ್ತೇನೆ….” ಎಂದು ಸುಮ್ಮನೆ, “ಪೇಟೆಗೆ ಹೋಗಿ ಬರುತ್ತೇನೆ,” ಎಂದು ಮತ್ತೊಬ್ಬ ಹುಡುಗನನ್ನು ಕರೆದುಕೊಂಡು ತಮ್ಮ ಮನೆಗೆ ಹೋಗಿ, ಅಮ್ಮನ ಬಳಿ ಕೇಳಿ ಒಂದು ಬಿಸ್ಕೆಟ್‌ ಪ್ಯಾಕೆಟ್‌ ತಂದು ಎಲ್ಲಾ ಮಕ್ಕಳಿಗೂ ಹಂಚಿದ್ದ. ಮನಸ್ವಿನಿಗೆ ಮಾತ್ರ ಬಿಸ್ಕತ್‌ ಜೊತೆ ನವಿಲು ಗರಿ ಕೊಟ್ಟಿದ್ದ.

“ಗಂಡ ಮಾತ್ರ ಅಲ್ಲ ಹೆಂಡತಿಯೂ ಏನಾದರೂ ಉಡುಗೊರೆ ಕೊಡಬೇಕು. ಮನಸ್ವಿನಿ, ನೀನೂ ಸುಧನ್ವನಿಗೆ ಏನಾದರೂ ಕೊಡು,” ಇನ್ನೊಬ್ಬಳು ಹೇಳಿದಳು.

ಮನಸ್ವಿನಿ ತಾನು ಬರೆದ ಚಿತ್ರವನ್ನು ತಂದು ಸುಧನ್ವನಿಗೆ ಕೊಟ್ಟಿದ್ದಳು.

45 ವರ್ಷ ಹೀಗೆ ಎಲ್ಲರೂ ಸೇರಿ ಸಂತೋಷದಿಂದ ಆಟವಾಡಿದ್ದರು ಅಷ್ಟೇ… ನಂತರ ಸುಧನ್ವನ ತಂದೆಗೆ ಬೇರೆ ಊರಿಗೆ ವರ್ಗಾಯಿತು. ಅವರನ್ನು ಬೀಳ್ಕೊಡುವಾಗ ಎಲ್ಲಾ ಮಕ್ಕಳೂ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಅದಾದ ಆರು ತಿಂಗಳ ನಂತರ ಮನಸ್ವಿನಿಯ ತಂದೆಗೂ ಬೇರೊಂದು ಊರಿಗೆ ವರ್ಗವಾಯಿತು. ಹೀಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗವಾಗಿ ಬೇರೆ ಊರಿಗೆ ಹೋದಾಗ ಅಲ್ಲಿ ಮತ್ತೆ ಹೊಸ ಹೊಸ ಫ್ರೆಂಡ್ಸ್ ಸಿಗುತ್ತಿದ್ದರು. ಆದರೆ ಮನಸ್ವಿನಿಯ ಮನದಲ್ಲಿ ಸುಧನ್ವ ಹಾಗೆ ನೆಲೆ ನಿಂತುಬಿಟ್ಟಿದ್ದ.

ಆಗ ಎಲ್ಲರ ಮನೆಗಳಲ್ಲಿ ಫೋನ್‌ ಇರಲಿಲ್ಲ. ಅದರಿಂದ ಸರ್ಕಾರಿ ಕೆಲಸದಲ್ಲಿ ಇದ್ದ ಇವರುಗಳು ಬೇರೆ ಬೇರೆ ಊರಿಗೆ ವರ್ಗವಾದಾಗೆಲ್ಲ ಹೆಳೆಯ ಸ್ನೇಹಿತರ ಸಂಪರ್ಕ ಮುಂದುವರಿಯುತ್ತಿರಲಿಲ್ಲ.

ಮನಸ್ವಿನಿಯ ಡಿಗ್ರಿ ಮುಗಿಯಿತು. ಮದುವೆ ಮಾಡೋಣ ಎಂದು ಮನೆಯಲ್ಲಿ ಹೇಳಿದಾಗ, ಮಾಸ್ಟರ್‌ ಡಿಗ್ರಿ ಮಾಡುತ್ತೇನೆ ಎಂದಳು ಮನಸ್ವಿನಿ. ಮನೆಯಲ್ಲಿ ದೊಡ್ಡ ಮಗಳ ಮದುವೆ ಮಾಡಿ ವರ್ಷ ಆಗಿರಲಿಲ್ಲ. ಆದ್ದರಿಂದ ಮನಸ್ವಿನಿ ಮಾಸ್ಟರ್‌ ಡಿಗ್ರಿ ಮಾಡಲಿ, ಅಷ್ಟರಲ್ಲಿ ಸುಧಾರಿಸಿಕೊಳ್ಳಬಹುದು ಎಂದು ಮನೆಯವರು ಒಪ್ಪಿಕೊಂಡರು.

ಮನಸ್ವಿನಿ ಮಾಸ್ಟರ್‌ ಡಿಗ್ರಿ ಮಾಡುತ್ತಿರುವಾಗಲೇ ಅವಳಿಗೆ ಬ್ಯಾಂಕ್‌ ನಲ್ಲಿ ಕೆಲಸ ಸಿಕ್ಕಿತು. ಮತ್ತೆ ಅಮ್ಮ ಮದುವೆಯ ಬಗ್ಗೆ ಕೇಳಿದಾಗ, ಇನ್ನೂ ಎರಡು ವರ್ಷ ಕೆಲಸ ಮಾಡುತ್ತೇನೆ, ನಂತರ ಮದುವೆ ಎಂದು ಮುಂದೆ ಹಾಕಿದಳು.

ಮನೆಯಲ್ಲಿ ಮದುವೆ ಎಂದಾಗೆಲ್ಲಾ ಮನಸ್ವಿನಿಗೆ ಸುಧನ್ವನ ನೆನಪಾಗುತ್ತಿತ್ತು. `ನನ್ನ ಗಂಡ ಸುಧನ್ವನೇ! ಅವನನ್ನು ಬಿಟ್ಟು ಇನ್ನಾರನ್ನೂ ಮದುವೆಯಾಗಲಾರೆ…. ಅವನು ಎಲ್ಲಿರುವನು….? ಅವನಿಗೆ ನನ್ನ ನೆನಪಿದೆಯಾ….?’ ಎಂಬ ಯೋಚನೆಯಲ್ಲಿ ಮದುವೆ ಮುಂದೂಡುತ್ತಿದ್ದಳು. ಇನ್ನೂ ಎರಡು ವರ್ಷ ಎನ್ನುವಷ್ಟರಲ್ಲಿ ಅವನು ಸಿಕ್ಕಬಹುದು ಎನ್ನುವ ಕಾರಣದಿಂದ.

ಒಂದು ವರ್ಷ, ಎರಡು ವರ್ಷ ಎಂದು ತಳ್ಳುತ್ತಾ ಕೊನೆಗೆ ನನಗೆ ಮದುವೆಯಾಗಲು ಮನಸ್ಸಿಲ್ಲ. ನನಗೆ ಮದುವೆ ಬೇಕೆಂದಾಗ ತಿಳಿಸುತ್ತೇನೆ. ನನ್ನಿಂದ ತಂಗಿ, ತಮ್ಮನಿಗೆ ತೊಂದರೆಯಾಗುವುದು ಬೇಡ ಎಂದು ಅವರಿಬ್ಬರಿಗೂ ಬಲವಂತದಿಂದ ಮದುವೆ ಮಾಡಿಸಿದಳು.

riste-ki-dhool-story2

ಮನಸ್ವಿನಿಯ ತಂದೆ ತಾಯಿ ಮಕ್ಕಳ ಮನಸ್ಸಿನ ವಿರುದ್ಧವಾಗಿ ಹೋಗುತ್ತಿರಲಿಲ್ಲ. ಪ್ರತಿಯೊಂದು ವಿಷಯದಲ್ಲೂ ಮಕ್ಕಳ ಸಲಹೆ ಕೇಳುತ್ತಿದ್ದರು. ಜೊತೆಗೆ ಮಕ್ಕಳ ಭಾವನೆಗಳಿಗೂ ಬೆಲೆ ಕೊಡುತ್ತಿದ್ದರು.

ಮನಸ್ವಿನಿಗೆ ಅವಳಮ್ಮ ಗೆಳತಿಯ ಹಾಗೇ ಇದ್ದಳು. ಒಂದು ದಿನ ತಾಯಿ ಅವಳನ್ನು ಕೂರಿಸಿಕೊಂಡು, “ಮನು…. ನೀನು ಯಾರನ್ನಾದರೂ ಪ್ರೀತಿಸಿದ್ದೀಯ…. ಪ್ರೀತಿಸಿದ್ದರೆ ಹೇಳು ಅವನ ಜೊತೆಗೆ ಮದುವೆ ಮಾಡಿಸುತ್ತೇವೆ…. ಬೇರೆ ಮತದವರಾದರೂ ಪರವಾಗಿಲ್ಲ….. ನನ್ನ ಮಗಳು ಪ್ರಬುದ್ಧಳು ಎಂದು ಗೊತ್ತು,” ಎಂದು ಕೇಳಿದರು.

“ಅಮ್ಮಾ…. ಆ ತರಹ ಏನೂ ಇಲ್ಲ. ನನಗೆ ಮದುವೆಯಾಗಬೇಕು ಎಂದಾಗ ಹೇಳುತ್ತೇನೆ. ಸದ್ಯಕ್ಕೆ ಮದುವೆಯಾಗುವ ಮನಸ್ಸಿಲ್ಲ ಅಷ್ಟೇ…..” ಎಂದಳು.

ಮತ್ತೆ ಅಮ್ಮ ಬಲವಂತ ಮಾಡಲಿಲ್ಲ. ಆದರೆ ಮನಸ್ವಿನಿ ತನ್ನ ಮನದಲ್ಲಿ, `ಒಮ್ಮೆ ಅಮ್ಮನಿಗೆ ತಿಳಿಸಲಾ…’ ಎಂದುಕೊಂಡಳು. ತಕ್ಷಣವೇ, `ಬೇಡ ಬೇಡ… ವಿಷಯ ಗೊತ್ತಾದರೆ ಅಪ್ಪ ಅವರ ಫ್ಯಾಮಿಲಿಯನ್ನು ಹುಡುಕಿಸುತ್ತಾರೆ. ಬಹುಶಃ ಸುಧನ್ವನಿಗೆ ಈಗಾಗಲೇ ಮದುವೆಯಾಗಿರಬಹುದು. ಹಾಗೆ ಮದುವೆಯಾಗಿದ್ದರೆ ಅವನಿಗೆ ಮದುವೆಯಾಗಿದೆ ನೀನು ಬೇರೆ ಹುಡುಗನನ್ನು ಮದುವೆಯಾಗು ಎಂದು ನನ್ನನ್ನು ಬಲವಂತ ಮಾಡುತ್ತಾರೆ. ಈ ಗುಟ್ಟು ನನ್ನಲ್ಲೇ ಇರಲಿ,’ ಎಂದು ಸುಮ್ಮನಾದಳು.

ಇನ್ನೊಂದು ಮನಸ್ಸು ಅವನೂ ತನ್ನಂತೆ ಕಾಯುತ್ತಿದ್ದರೆ ಎಂದಿತು. `ಇಲ್ಲ… ಇಲ್ಲ…. ಅವನಿಗೆ ನನ್ನ ನೆನಪಿದ್ದಿದ್ದರೆ ಇನ್ನೂ ಮೊದಲೇ ಹೇಗಾದರೂ ನನ್ನನ್ನು ಹುಡುಕಿ ಬರುತ್ತಿದ್ದ. ಹುಡುಗರಿಗೆ ಹುಡುಕುವುದು ಸುಲಭ. ಈಗ ನನಗೆ ಮೂವತ್ತೆರಡು ವರ್ಷ, ಅವನಿಗೆ ಮೂವತ್ತೈದು ಆಗಿರಬೇಕು. ಇಲ್ಲಿವರೆಗೂ ಮದುವೆಯಾಗದೆ ಇರುತ್ತಾನಾ…..? ಖಂಡಿತಾ ಸಾಧ್ಯವಿಲ್ಲ. ಇನ್ನೂ ಹೇಗಿದ್ದರೂ ಅವನು ನನಗೆ ಸಿಗುವುದಿಲ್ಲ. ನಾನು ಮನದಲ್ಲಿಯೇ ಅವನನ್ನು ಆರಾಧಿಸುತ್ತಾ ಜೀವನ ಪರ್ಯಂತ ಹೀಗೇ ಇದ್ದುಬಿಡುತ್ತೇನೆ,’ ಎಂದುಕೊಂಡಳು.

ಮನಸ್ವಿನಿ ಬರೆಯುತ್ತಿದ್ದ ಕವನಗಳು ಪತ್ರಿಕೆಯಲ್ಲಿ ಪ್ರಕಟವಾಗಿ ಬಹಳ ಮೆಚ್ಚುಗೆ ಗಳಿಸಿತ್ತು. ಒಂದಿಬ್ಬರು ಫೋನ್‌ ನಂಬರ್ ತೆಗೆದುಕೊಂಡಿದ್ದಾರೆ ಎಂದು ಸಂಪಾದಕರು ಫೋನ್‌ ಮಾಡಿ ಅವಳಿಗೆ ತಿಳಿಸಿದರು.

ಇವಳಿಗೆ ಇದೇನು ಹೊಸದಲ್ಲ. ಯಾವಾಗಲೂ ಇವಳ ಬರಹವನ್ನು ಮೆಚ್ಚಿ ತುಂಬಾ ಜನ ಫೋನ್‌ ಮಾಡುತ್ತಿದ್ದರು. ವಿಳಾಸ ಕೇಳಿ ತಿಳಿದುಕೊಂಡು ಮನೆಗೂ ಬರುತ್ತಿದ್ದರು. ಹೀಗಿರುವಾಗ ಒಮ್ಮೆ ಅವಳ ಕವನ ಪ್ರಕಟವಾಗಿ ಎರಡು ದಿನವಾಗಿತ್ತು. ಆ ಭಾನುವಾರ ಯಾವುದೋ ಫಂಕ್ಷನ್‌ ಇದೆ ಎಂದು ಅವಳ ಅಮ್ಮ ಅಪ್ಪ ಹೊರಗೆ ಹೋಗಿದ್ದರು. ಈಗೀಗ ಮನಸ್ವಿನಿ ಯಾವ ಫಂಕ್ಷನ್‌ ಗಳಿಗೂ ಹೋಗುತ್ತಿರಲಿಲ್ಲ. ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು.

ಅಂದು ಅವಳು ಯಾವುದೋ ಪುಸ್ತಕ ಹಿಡಿದು ಓದುತ್ತಾ ಕುಳಿತಿದ್ದಳು. ಕಾಲಿಂಗ್‌ ಬೆಲ್ ‌ಸದ್ದಾಯಿತು. `ಇಷ್ಟು ಬೇಗ ಅಮ್ಮ ಅಪ್ಪ ಬಂದ್ರಾ….’ ಎಂದುಕೊಳ್ಳುತ್ತಾ ಬಾಗಿಲು ತೆಗೆದಳು. ಎದುರು ನಿಂತವರು ಅವಳನ್ನೇ ನೋಡುತ್ತಾ, “ಲೇಖಕಿ ಮನು ಅವರ ಮನೆ ಇದೇನಾ….” ಎಂದು ಕೇಳಿದರು.

“ಹೌದು ನಾನೇ ಮನು. ನೀವು….” ಎಂದಳು ಬಂದಾತನನ್ನು ನೋಡುತ್ತಾ, `ಇವರನ್ನು ಎಲ್ಲೋ ನೋಡಿದ ಹಾಗಿದೆ….. ಯಾರಿರಬಹುದು….’ ಎಂದು ಯೋಚಿಸುತ್ತಾ ಹಾಗೇ ನಿಂತಳು.

“ಒಳಗಡೆ ಬರಬಹುದಾ ಮೇಡಂ,” ಎಂದು ಬಂದಾತ ನಗುತ್ತಾ ಕೇಳಿದ.

“ಓಹ್‌… ಸಾರಿ ಬನ್ನಿ,” ಎನ್ನುತ್ತಾ ಬಾಗಿಲಿನಿಂದ ಸರಿದಳು.

ಅವನು ಸೋಫಾ ಮೇಲೆ ಕುಳಿತುಕೊಳ್ಳುತ್ತಾ, “ಮೇಡಂ, ನಾನು ನಿಮ್ಮ ಬಾಲ್ಯದ ಗೆಳೆಯ ಸುಧನ್ವ. ಪತ್ರಿಕೆಯಲ್ಲಿ ನಿಮ್ಮ ಕವನ ಓದಿ ನಿಮ್ಮನ್ನು ಹುಡುಕಿಕೊಂಡು ಬಂದೆ. ನೀವು ಮನು ಅಂದರೆ ಮನಸ್ವಿನಿ ಅಲ್ವಾ…..” ಎಂದು ಕೇಳಿದ.

“ಸುಧನ್ವ…. ಅಂದರೆ….” ಎನ್ನುತ್ತಾ ಸಂಭ್ರಮದಿಂದ ಅವನನ್ನೇ ಎಲೆಯಿಕ್ಕದೆ ನೋಡಿದಳು.

“ಕಣ್ಣಲ್ಲಿಯೇ ತಿಂದುಬಿಡಬೇಡಿ ಮೇಡಂ….. ಹೌದು ನಾನು ನಿಮ್ಮ ಬಾಲ್ಯದ ಗೆಳೆಯ ಸುಧನ್ವನೇ…..” ಎಂದ.

“ಅರೇ….. ಸುಧನ್ವನಾ….. ನನಗೆ ನಂಬಲು ಆಗುತ್ತಿಲ್ಲ. ಹೇಗೆ ಹೇಗೆ ಗೊತ್ತಾಯಿತು ನಿಮಗೆ ನಮ್ಮ ಮನೆ,” ಎಂದು ಆಶ್ಚರ್ಯದಿಂದ ಕೇಳಿದಳು.

“ಹೇಗೆ ಅಂದರೆ…. ಆಗಲೇ ಹೇಳಿದೆನಲ್ಲಾ…. ನೀವು ಬರೆದ ವಿರಹಗೀತೆಯಿಂದ ನಿಮ್ಮನ್ನು ಹುಡುಕಿಕೊಂಡು ಬಂದೆ…..”

`ಯಾರಾದರೂ ಬೇಕಂತಲೇ ಸುಧನ್ವ ಎಂದು ಮೋಸ ಮಾಡಲು ಬಂದಿದ್ದರೆ….’ ಎಂದು ಈಗವಳಿಗೆ ಸಂಶಯ ಶುರುವಾಯಿತು.

ಅವಳ ಮನದ ಭಾವನೆ ಅವನಿಗೆ ಅರ್ಥವಾಯಿತು.

“ಯಾಕೆ ಸಂಶಯನಾ…. ಇದು ನೋಡಿ ನಿಮ್ಮಂತೆ ನಾನು ಸಹ ನೀವು ಕೊಟ್ಟ ಉಡುಗೊರೆಯನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ,” ಎನ್ನುತ್ತಾ ಅವಳು ಕೊಟ್ಟಿದ್ದ ಚಿತ್ರ ತೋರಿಸಿದ.

“ಹಾಗಿದ್ದರೆ ನಿಮಗೆ ನಾನು ಇನ್ನೂ ನಿಮ್ಮ ನೆನಪಲ್ಲಿ ಇದ್ದೀನಾ…..?”

“ಮರೆತರೇ ತಾನೇ…. ನಮ್ಮ ತಂದೆಗೆ ವರ್ಗವಾಗಿ ಹೋದ ನಂತರ ನೀನು ಇಲ್ಲೇ ಇದ್ದೀಯಾ ಮನು,” ಎಂದು ತನ್ನ ಎದೆಯನ್ನು ಮುಟ್ಟಿ ಹೇಳಿದ.

“ಮತ್ತೆ ಮದುವೆ…..” ಎಂದು ತಡವರಿಸುತ್ತಾ ಕೇಳಿದಳು.

“ನೀನು ಇಲ್ಲಿ ನೆಲೆಸಿರುವಾಗ ಅಲ್ಲಿ ಮತ್ತಾರಿಗೆ ಸ್ಥಳವಿದೆ? ನಾನೂ ನಿನ್ನಂತೆ ನಿನಗಾಗಿ ಕಾಯುತ್ತಿದ್ದೆ,” ಎಂದ.

ಮನಸ್ವಿನಿ ಓಡಿ ಬಂದು ಅವನನ್ನು ತಬ್ಬಿಕೊಂಡು, “ಸುಧನ್ವ….. ನೀನು ನನಗೆ ಸಿಗುವುದಿಲ್ಲ ಎಂದುಕೊಂಡಿದ್ದೆ,” ಎನ್ನುತ್ತಾ ಸಂತೋಷದಿಂದ ಬಿಕ್ಕಿ ಬಿಕ್ಕಿ ಅತ್ತಳು.

ಅವಳ ಬೆನ್ನು ನೇವರಿಸುತ್ತಾ, “ನಾನು ಅಷ್ಟೇ ಮನು….. ಓದು ಮುಗಿದ ಕೂಡಲೇ ಕೆಲಸ ಸಿಕ್ಕಿತು. ಮನೆಯಲ್ಲಿ ಮದುವೆಯ ವಿಷಯ ಹೇಳಿದಾಗ, ನಿಮ್ಮ ತಂದೆ ಎಲ್ಲಿದ್ದಾರೆ ಎಂದು ತುಂಬಾ ಹುಡುಕಿದೆ. ಅವರಿಗೆ ರಿಟೈರ್ಡ್‌ ಆಗುವ ಮೊದಲು ಇದ್ದ ಊರಿನ ವಿಷಯ ಹೇಳಿದರು, ಅವರ ಎಲ್ಲಾ ಮಕ್ಕಳೂ ಮದುವೆ ಆಗಿ ಸೆಟ್‌ ಆಗಿದ್ದಾರೆ ಎಂದರು. ನಂತರ ಮತ್ತೆ ನಿನ್ನನ್ನು ಹುಡುಕುವ ವಿಷಯ ಬಿಟ್ಟು ಮದುವೆಯ ಯೋಚನೆ ಎರಡನ್ನೂ ಬಿಟ್ಟು ಒಂಟಿಯಾಗಿ ಇರಲು ತೀರ್ಮಾನಿಸಿದ್ದೆ…..”

“ಈಗ ನಾನು ಮದುವೆಯಾಗಿಲ್ಲ ಎಂದು ಹೇಗೆ ತಿಳಿಯಿತು….?”

“ಕವನದಲ್ಲಿ ನಿನ್ನ ಮನದ ಭಾವನೆಯನ್ನು ಓಪನ್‌ ಆಗಿ ಹೇಳಿದ್ದೀಯಲ್ಲಾ…..  ನಾನು ನಿನ್ನ ಬರಹಗಳನ್ನು ಓದಿ ಮೆಚ್ಚುತ್ತಿದ್ದೆ. ಆದರೆ ನೀನೇ ಮನಸ್ವಿನಿ ಎಂದು ತಿಳಿಯಲಿಲ್ಲ. ನಿನ್ನ ಕಾವ್ಯನಾಮ ಮನು ಎಂದು ಮಾತ್ರ ಇದ್ದುದರಿಂದ ಲೇಖಕರು ಹೆಣ್ಣೊ, ಗಂಡೋ ಎಂದು ಕನ್‌ ಫ್ಯೂಷನ್‌ ನಲ್ಲಿದ್ದೆ,” ಎಂದ ಸುಧನ್ವ.

“ನೀನು ಕರೆಯುತ್ತಿದ್ದ ಹೆಸರು ತಾನೇ ಮನು…. ಅದನ್ನೇ ಕಾವ್ಯನಾಮವಾಗಿ ಬರೆಯುತ್ತಿದ್ದೆ.”

“ನೀನಿತ್ತ ನವಿಲುಗರಿ ಕವನ ಓದಿದಾಗ ಎಷ್ಟು ಖುಷಿಯಾಯಿತು ಗೊತ್ತಾ….? ನೀನು ನನಗೋಸ್ಕರ ಕಾಯುತ್ತಿರುವೆ ಎಂದು ತಿಳಿಯಿತು. ಸಂಪಾದಕರಿಗೆ ಫೋನ್‌ ಮಾಡಿ ನಿನ್ನ ಫೋನ್‌ ನಂಬರ್‌ ಹಾಗೂ ವಿಳಾಸ ತೆಗೆದುಕೊಂಡಿ. ಫೋನ್‌ ಮಾಡುವುದಕ್ಕಿಂತ ಡೈರೆಕ್ಟಾಗಿ ಬಂದು ಸರ್‌ ಪ್ರೈಸ್‌ ಮಾಡೋಣ ಎಂದು ಬಂದೆ. ಅಂತೂ ನಿನ್ನ ಕವನ ನಮ್ಮಿಬ್ಬರನ್ನೂ ಒಂದು ಮಾಡಿತು,” ಎಂದು ಸುಧನ್ವ ಸಂತಸದಿಂದ ಹೇಳಿದ.

“ಊಹ್ಞೂಂ…. ನೀನಿತ್ತ ನವಿಲುಗರಿ ನಮ್ಮಿಬ್ಬರನ್ನು ಒಂದು ಮಾಡಿತು. ನಿಜವಾಗಿಯೂ ನನಗೆ ನೀನು ಸಿಕ್ಕಿದ್ದು ಕನಸೋ…. ನನಸೋ ಎನ್ನುವ ಭ್ರಮೆಯಲ್ಲಿದ್ದೇನೆ,” ಎಂದು ಮನಸ್ವಿನಿ ಅತಿಯಾದ ಸಂತೋಷದಿಂದ, ಬಿಟ್ಟರೆ ಅವನು ಮತ್ತೆ ದೂರ ಹೋಗಿಬಿಡುತ್ತಾನೇನೋ ಎನ್ನುವಂತೆ ಅವನನ್ನು ತಬ್ಬಿಕೊಂಡೇ ಹೇಳಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ