ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶುಕ್ರವಾರ ರಾತ್ರಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮಹಿಳೆ ಹಾಗೂ ಅವರ ಇಬ್ಬರು ಪುತ್ರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸತ್ಯವೇಣಿ (38), ಪುತ್ರರಾದ ಹರಿವೆಂಕಟರಾಮ್ (20) ಮತ್ತು ಜಶ್ವಂತ(18) ಮೃತಪಟ್ಟಿದ್ದಾರೆ. ತಂದೆ ರಾಘವೇಂದ್ರ (41) ಅವರಿಗೆ ಗಂಭೀರ ಗಾಯಗಳಾಗಿವೆ.

ಈ ಕುಟುಂಬವು ಕೊಪ್ಪಳ ಜಿಲ್ಲೆಯ ಕಾರಟಗಿಯಿಂದ ಶಿರಡಿಗೆ ಹೊರಟಿದ್ದರು. 20 ವರ್ಷದ ಮಗ ಹರಿವೆಂಕಟರಾಮ್​​ ಕಾರು ಚಲಾಯಿಸುತ್ತಿದ್ದ. ಈ ವೇಳೆ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಿದ್ದೆ ಮಂಪರಿನಲ್ಲಿ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.

ಮನಗೂಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ