ವಿಪ್ರೋ ಕನ್ಸೂಮರ್ ಕೇರ್ ಅಂಡ್ ಲೈಟಿಂಗ್ ನ ಆಹಾರ ವ್ಯವಹಾರದ ಭಾಗವಾಗಿರುವ ವಿಪ್ರೋ ಬ್ರಾಹ್ಮಿನ್ಸ್, ತನ್ನ ಮಾರುಕಟ್ಟೆ ವಿಸ್ತರಣೆಯ ಅಂಗವಾಗಿ ಬ್ರಾಹ್ಮಿನ್ಸ್ ಸಿರಿಧಾನ್ಯ ಶ್ರೇಣಿ ಬಿಡುಗಡೆ ಮಾಡಿದೆ. ಆರೋಗ್ಯಕರ ಆಹಾರದ ಆಯ್ಕೆಗಳ ಬಗ್ಗೆ ಗ್ರಾಹಕರಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಸ್ಪಂದಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಸಿರಿಧಾನ್ಯಗಳು ತಮ್ಮ ಪೌಷ್ಠಿಕಾಂಶದ ಅನುಕೂಲಗಳಿಗೆ ಹೆಚ್ಚು ಹೆಚ್ಚು ಗುರುತಿಸಲ್ಪಡುತ್ತಿದ್ದರೂ, ಅವುಗಳ ರುಚಿಯೇ ಅವುಗಳನ್ನು ವ್ಯಾಪಕವಾಗಿ ಬಳಸಲು ಇಂದಿಗೂ ಪ್ರಮುಖ ಅಡೆತಡೆಯಾಗಿದೆ. ಸಿರಿಧಾನ್ಯಗಳ ವಿಶಿಷ್ಟವಾದ ಸ್ವಾದ ಮತ್ತು ಕಹಿ ಮಿಶ್ರಿತ ರುಚಿಯಿಂದಾಗಿ ಅನೇಕ ಗ್ರಾಹಕರು ಇವುಗಳನ್ನು ಅಕ್ಕಿ ಮತ್ತು ಗೋಧಿಯಂತಹ ಪರಿಚಿತ ದಿನಸಿ ಪದಾರ್ಥಗಳಿಗಿಂತ ಕಡಿಮೆ ಆಕರ್ಷಕವೆಂದು ಭಾವಿಸುತ್ತಾರೆ. ಬ್ರಾಹ್ಮಿನ್ಸ್ ಸಂಸ್ಥೆಯು ಒಂದು ವಿಶಿಷ್ಟವಾದ ಹುರಿಯುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ್ದು, . ಇದು ಧಾನ್ಯಗಳ ನೈಸರ್ಗಿಕ ಸುವಾಸನೆಯನ್ನು ಹೆಚ್ಚಿಸುವುದರ ಜೊತೆಗೆ ಕಹಿ ಗುಣವನ್ನು ದೂರ ಮಾಡುತ್ತದೆ. ಆ ಮೂಲಕ ಸಿರಿಧಾನ್ಯಗಳನ್ನು ದೈನಂದಿನ ಊಟಕ್ಕೆ ಹೆಚ್ಚು ರುಚಿಕರವಾದ ಮತ್ತು ಆನಂದಿಸಬಹುದಾದ ಆಯ್ಕೆಯನ್ನಾಗಿ ಮಾಡುತ್ತದೆ.
ಹೊಸದಾಗಿ ಬಿಡುಗಡೆ ಮಾಡಲಾಗಿರುವ ಈ ಉತ್ಪನ್ನಗಳ ಶ್ರೇಣಿಯು ಭಾರತದಾದ್ಯಂತ ಪ್ರಮುಖ ಸಿರಿಧಾನ್ಯ ಬೆಳೆಯುವ ಪ್ರದೇಶಗಳಿಂದ ಸಂಗ್ರಹಿಸಲಾದ ಆರು ವಿಧದ ಸಿರಿಧಾನ್ಯಗಳನ್ನು ಒಳಗೊಂಡಿದೆ - ನವಣೆ, ಸಾಮೆ, ಕೊರಲೆ, ಊದಲು, ಅರ್ಕ, ಮತ್ತು ಬರಗು. ನೈಸರ್ಗಿಕವಾಗಿಯೇ ಗ್ಲುಟನ್ ಮುಕ್ತ ನಾರು ಪದಾರ್ಥ ಮತ್ತು ಪ್ರೊಟೀನ್ ನಿಂದ ಸಮೃದ್ಧವಾಗಿರುವ ಹಾಗೂ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಈ ಉತ್ಪನ್ನಗಳನ್ನು, ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಿರಿಧಾನ್ಯಗಳ ಪೌಷ್ಟಿಕಾಂಶದ ಪ್ರಯೋಜನಗಳನ್ನು ದೈನಂದಿನ ಆಹಾರ ಪದ್ಧತಿಗೆ ತರಲು ವಿನ್ಯಾಸಗೊಳಿಸಲಾಗಿದೆ. ಈ ಸಿರಿಧಾನ್ಯಗಳನ್ನು ಬಿರಿಯಾನಿ, ಉಪ್ಪಿಟ್ಟು, ಮೊಸರನ್ನ, ಪಾಯಸ, ಗಂಜಿ ಮತ್ತು ಇತರ ಮನೆ ಶೈಲಿಯ ವೈವಿಧ್ಯಮಯ ಖಾದ್ಯಗಳ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು.
ಈ ಕುರಿತು ಮಾತನಾಡಿದ ವಿಪ್ರೋ ಫುಡ್ಸ್ ಅಧ್ಯಕ್ಷ ಅನಿಲ್ ಚುಗ್, "ವಿಪ್ರೋ ಫುಡ್ಸ್ ನಲ್ಲಿ, ನಾವು ರುಚಿ ಮತ್ತು ಗುಣಮಟ್ಟ ಎರಡನ್ನೂ ಸಂಯೋಜಿಸುವ ಉತ್ಪನ್ನಗಳನ್ನು ತಲುಪಿಸುವತ್ತ ಗಮನ ಹರಿಸುತ್ತೇವೆ. ಗ್ರಾಹಕರು ತಮ್ಮ ಆಹಾರದ ಆಯ್ಕೆಗಳು ಮತ್ತು ಪೌಷ್ಟಿಕಾಂಶದ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿರುವ ಈ ಸಮಯದಲ್ಲಿ, ಸಮತೋಲಿತ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಿವೆ. ಬ್ರಾಹ್ಮಿನ್ಸ್ ಮಿಲೆಟ್ಸ್ ಸರಣಿಯ ಮೂಲಕ, ಇಂದಿನ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಉಳಿಸಿಕೊಂಡು, ಈ ಉತ್ಪನ್ನಗಳು ಅವರ ಗಮನ ಸೆಳೆಯುವಂತೆ ಮಾಡುವುದು ನಮ್ಮ ಗುರಿ” ಎಂದಿದ್ದಾರೆ.
ವಿಪ್ರೋ ಫುಡ್ಸ್ ಬ್ರಾಹ್ಮಿನ್ಸ್ ಅಂಡ್ ನಿರಪರ ಬಿಸಿನೆಸ್ ಹೆಡ್ ಸನ್ನಿ ಥಾಮಸ್, “ಈ ಬಿಡುಗಡೆಯು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಭವಿಷ್ಯಕ್ಕೆ ಪೂರಕವಾದ ಆಹಾರ ಉತ್ಪನ್ನಗಳ ಪೋರ್ಟ್ ಫೋಲಿಯೊವನ್ನು ರೂಪಿಸುವಲ್ಲಿ ನಮ್ಮ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸಾಂಪ್ರದಾಯಿಕ ಆಹಾರದ ಆಯ್ಕೆಗಳಲ್ಲೇ ಬೇರೂರಿರುವ ಈ ಉತ್ಪನ್ನಗಳ ಸರಣಿಯನ್ನು, ದೈನಂದಿನ ಅಡುಗೆಗೆ ಅಗತ್ಯವಿರುವ ಸುಲಭ ಬಳಕೆಯ ಜೊತೆಗೆ ಸ್ಥಿರವಾದ ಗುಣಮಟ್ಟವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ” ಎಂದಿದ್ದಾರೆ.





