ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದ ಶ್ರೇಷ್ಠ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಭಾನುವಾರ ನೆರವೇರಿತು.
ಮೈಸೂರು ನೆಲದಲ್ಲೇ ಮಣ್ಣಾಗಬೇಕು ಎಂಬ ಎಸ್ ಜಾನಕಿ ಅವರ ಆಸೆಯಂತೆಯೇ ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಫಾರಂ ಹೌಸ್ನಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಎಸ್.ಜಾನಕಿ ಅವರ ಮೊಮ್ಮಗಳು ಅಪ್ಸರಾ ತಮ್ಮ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಮೈಸೂರು ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಗೌರವ ಸಲ್ಲಿಸುವ ಮೂಲಕ ಗಾನಕೋಗಿಲೆ ಜಾನಕಮ್ಮ ಅವರಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.
ಸರಕಾರದ ಪರವಾಗಿ ಮೈಸೂರು ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಂಗೀತ ನಿರ್ದೇಶಕ ಹಂಸಲೇಖ, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವಾರು ಮಂದಿ ಕಂಬನಿ ಮಿಡಿದರು.
ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಮೈದಾನಲದಲ್ಲಿ ಬೆಳಗ್ಗೆಯಿಂದ ಸಂಜೆಯವರಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.





