ಹಾಡು ಎಂದರೆ ಜಾನಕಿ. ಭಾವನೆ ಎಂದರೆ ಜಾನಕಿ. ತಾಯಿಯ ಮಮತೆ ಎಂದರೆ ಜಾನಕಿ. ವಿರಹ ಎಂದರೆ ಜಾನಕಿ. ಭಕ್ತಿ ಎಂದರೆ ಜಾನಕಿ. ಹೀಗೆ ದಕ್ಷಿಣ ಭಾರತದ ಕೋಟ್ಯಂತರ ಸಂಗೀತಾಭಿಮಾನಿಗಳ ಮನಸ್ಸಿನಲ್ಲಿ ಈ ಮಾತುಗಳು ಸಹಜವಾಗಿ ಮೂಡುತ್ತವೆ.

ಏಕೆಂದರೆ ಕೆಲವರ ಧ್ವನಿ ಕೇವಲ ಹಾಡುವುದಿಲ್ಲ. ಅದು ನಮ್ಮ ಜೀವನದ ಭಾಗವಾಗುತ್ತದೆ. ನಮ್ಮ ಬಾಲ್ಯವನ್ನು ಜೋಗುಳವಾಗಿ ಕಾಪಾಡುತ್ತದೆ. ಯೌವನದಲ್ಲಿ ಪ್ರೇಮವಾಗಿ ಕಾಡುತ್ತದೆ. ಸಂಕಷ್ಟದ ಸಮಯದಲ್ಲಿ ಸಾಂತ್ವನ ನೀಡುತ್ತದೆ. ಭಕ್ತಿಯಲ್ಲಿ ದೇವರ ಮುಂದೆ ಕಣ್ಣೀರು ತರಿಸುತ್ತದೆ. ಅಂತಹ ಅಮರ ಕಂಠದ ಮಾಲಕಿ, ಭಾರತೀಯ ಚಿತ್ರಸಂಗೀತದ ಗಾನ ಕೋಗಿಲೆ, ಸ್ವರ ಮಾಂತ್ರಿಕಿ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ.
ಎಸ್. ಜಾನಕಿ ಇನ್ನಿಲ್ಲ…

ಈ ಒಂದು ಸಾಲಿನ ಸಂದೇಶವನ್ನು ಸ್ನೇಹಿತರೊಬ್ಬರಿಂದ ಪಡೆದ ಕ್ಷಣ, ಮನಸ್ಸು ಒಪ್ಪಲೇ ಇಲ್ಲ. ಏನು? ನಿಜವೇ? ಮತ್ತೊಮ್ಮೆ ಸುಳ್ಳು ಸುದ್ದಿಯೇ? ಎಂಬ ಅನುಮಾನದಿಂದ ತಕ್ಷಣವೇ ಅವರಿಗೆ ಮರುಸಂದೇಶ ಕಳುಹಿಸಿದ ನಂತರ ಸಾಮಾಜಿಕ ಜಾಲತಾಣಗಳು, ಸುದ್ದಿ ವಾಹಿನಿಗಳು ಮತ್ತು ವಿಶ್ವಾಸಾರ್ಹ ಮೂಲಗಳನ್ನು ಪರಿಶೀಲಿಸಿದಾಗಲೇ ಆ ಕಹಿ ಸತ್ಯವನ್ನು ಕೇಳಿ ಮನಸ್ಸು ಭಾರವಾಯಿತು. ಏಕೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಎಸ್. ಜಾನಕಿ ಅವರ ನಿಧನದ ಕುರಿತು ಅನೇಕ ಬಾರಿ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಪ್ರತಿಬಾರಿಯೂ ಜಾನಕಿಯವರೇ ಸ್ವತಃ ಮಾಧ್ಯಮಗಳ ಮುಂದೆ ಬಂದು, ನಾನು ಬದುಕಿದ್ದೇನೆ, ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಬೇಕಾದ ದುಃಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸುಳ್ಳು ಸುದ್ದಿಗಳಿಂದ ಬೇಸತ್ತ, ಮತ್ತೊಬ್ಬ ಮಹಾನ್ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕೂಡ ಒಮ್ಮೆ, ಬದುಕಿರುವವರ ಸಾವಿನ ಸುದ್ದಿಯನ್ನು ಹರಡಿಸುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅವರ ಮನಸ್ಥಿತಿಯನ್ನೇ ಪ್ರಶ್ನಿಸಿದ್ದ ಘಟನೆ ಇನ್ನೂ ನಮ್ಮೆಲ್ಲರ ನೆನಪಿನಲ್ಲಿ ಹಸಿರಾಗಿಯೇ ಇದೆ.
ಆದರೆ ಈ ಬಾರಿ ಮಾತ್ರ ಆ ಸುದ್ದಿ ಸುಳ್ಳಾಗಿರದೇ, ತಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಾನ ಕೋಗಿಲೆ ಎಸ್. ಜಾನಕಿ ಅವರು 2026ರ ಜುಲೈ 11ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸುದ್ದಿ ಅಧಿಕೃತವಾಗಿ ಹೊರ ಬೀಳುತ್ತಿದ್ದಂತೆಯೇ, ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ದಕ್ಷಿಣ ಭಾರತವೇ ದುಃಖದ ಮೌನದಲ್ಲಿ ಮುಳುಗಿತು. ಏಕೆಂದರೆ, ಅದು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ. ಒಂದು ಯುಗದ ಅಂತ್ಯವಾಗಿದೆ ಎಂದರೂ ತಪ್ಪಾಗದು.
ಆದರೆ ನಿಜವಾಗಿಯೂ ಜಾನಕಿಯಮ್ಮ ನಮ್ಮನ್ನು ಅಗಲಿದ್ದಾರೆಯೇ?
ಪ್ರತಿದಿನ ಬೆಳಿಗ್ಗೆ ದೇವರ ಮುಂದೆ ಕೇಳಿಬರುವ ಅವರ ಭಕ್ತಿಗೀತೆಗಳಲ್ಲಿ, ತಾಯಿಯ ಮಡಿಲಲ್ಲಿ ಮಗುವಿಗೆ ಹಾಡುವ ಜೋಗುಳಗಳಲ್ಲಿ, ಹಳೆಯ ರೇಡಿಯೋದಲ್ಲಿ ಮೊಳಗುವ ಮಧುರ ಗೀತೆಗಳಲ್ಲಿ, ಪ್ರೇಮಿಗಳ ನೆನಪಿನಲ್ಲಿ ಉಳಿದಿರುವ ಪ್ರೇಮಗಾನಗಳ ಮೂಲಕ ಅವರು ಎಂದೆಂದಿಗೂ ನಮ್ಮೊಂದಿಗೆ ಜೀವಂತವಾಗಿಯೇ ಇರುತ್ತಾರೆ.
ಪುತ್ರ ಶೋಕಂ ನಿರಂತರಂ, ಒಂದು ದುಃಖ ಇನ್ನೊಂದು ದುಃಖವನ್ನು ಕರೆತಂದಿತೇ?

ಈ ವರ್ಷದ ಆರಂಭದಲ್ಲಿ, ಜನವರಿ 22, 2026ರಂದು ಜಾನಕಿಯಮ್ಮನವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ನಿಧನರಾದರು. ಪುತ್ರ ಶೋಕಂ ನಿರಂತರಂ ಎನ್ನುವಂತೆ ಯಾವುದೇ ತಾಯಿಗೆ ತನ್ನ ಮಗನ ಅಗಲಿಕೆ ಜೀವನದ ಅತಿದೊಡ್ಡ ನೋವು. 88 ವರ್ಷದ ವಯಸ್ಸಿನಲ್ಲಿದ್ದ ಜಾನಕಿಯಮ್ಮನವರಿಗೆ ಈ ಆಘಾತವನ್ನು ಸಹಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಗಾಯನವೇ ಅವರ ಜೀವನವಾಗಿದ್ದರೂ, ಮಗನ ಅಗಲಿಕೆಯ ನಂತರ ಅವರು ನಿಧಾನವಾಗಿ ಸಾರ್ವಜನಿಕ ಜೀವನದಿಂದ ಸಂಪೂರ್ಣ ದೂರವಾದರು. ಆ ದುಃಖದಿಂದ ಅವರು ಹೊರಬರಲೇ ಇಲ್ಲ ಎನ್ನುವುದು ಅವರನ್ನು ಹತ್ತಿರದಿಂದ ಕಂಡವರ ಮಾತು. ಜೀವನದುದ್ದಕ್ಕೂ ಲಕ್ಷಾಂತರ ಜನರಿಗೆ ನೆಮ್ಮದಿ ನೀಡಿದ ಆ ಧ್ವನಿಗೆ, ತನ್ನ ಬದುಕಿನ ಕೊನೆಯ ದಿನಗಳಲ್ಲಿ ನೆಮ್ಮದಿ ಸಿಗಲಿಲ್ಲ. ಕೊನೆಗೆ ಮಗನ ಅಗಲಿಕೆಯ ನೋವಿನಲ್ಲೇ ತಾವೂ ಸಹ ಈ ಲೋಕಕ್ಕೆ ವಿದಾಯ ಹೇಳಿದರು. ಇದಕ್ಕೇ ಹೇಳುವುದು ವಿಧಿಯ ಆಟ ಎಷ್ಟು ವಿಚಿತ್ರ ಎಂದು.
ಶಾಸ್ತ್ರೀಯ ಸಂಗೀತ ಕಲಿಯದೇ ಸಂಗೀತದ ಶಿಖರಕ್ಕೇರಿದ ಅಪರೂಪದ ಪ್ರತಿಭೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲೆ ಸಮೀಪ ಜನಿಸಿದ ಸಿಸ್ತ್ಲಾ ಶ್ರೀರಾಮಮೂರ್ತಿ ಜಾನಕಿ, ಮುಂದೆ ಭಾರತೀಯ ಸಂಗೀತ ಲೋಕದ ಅದ್ಭುತ ಗಾಯಕಿಯಾಗಿ ಬೆಳೆದರು. ಆಶ್ಚರ್ಯದ ವಿಷಯವೆಂದರೆ, ಅವರಿಗೆ ದೀರ್ಘಕಾಲದ ಶಾಸ್ತ್ರೀಯ ಸಂಗೀತ ಶಿಕ್ಷಣ ಇರಲಿಲ್ಲ. ಆದರೆ ದೇವರು ಕೊಟ್ಟ ಅದ್ಭುತ ಕಂಠ, ನಿರಂತರ ಅಭ್ಯಾಸ, ಸಂಗೀತದ ಮೇಲಿನ ಅಪಾರ ಪ್ರೀತಿ ಮತ್ತು ಕಲಿಯುವ ಹಂಬಲವೇ ಅವರನ್ನು ವಿಶ್ವಪ್ರಸಿದ್ಧ ಗಾಯಕಿಯನ್ನಾಗಿ ರೂಪಿಸಿತು.
ಸಂಗೀತ ಪಯಣದ ಆರಂಭ
ಸೂಕ್ತ ರೀತಿಯಲ್ಲಿ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದೇ ಹೋದರೂ, ಜಾನಕಿಯವರಿಗೆ ಬಾಲ್ಯದಿಂದಲೂ ಸಂಗೀತದ ಮೇಲೆ ಅಪಾರ ಆಸಕ್ತಿ ಇದ್ದು, ರೇಡಿಯೋದಲ್ಲಿ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಕೇಳಿ ಅದನ್ನು ಅವರಷ್ಟೇ ಚೆನ್ನಾಗಿ ಹಾಡುವ ಅಭ್ಯಾಸ ಮಾಡಿಕೊಂಡಿದ್ದನ್ನು ಗಮನಿಸಿದ ನೆಲ್ಲೂರಿನ ಬಹುಮುಖ ಪ್ರತಿಭೆ ಮತ್ತು ಫನ್ ಡಾಕ್ಟರ್ ಎಂದೇ ಚಿರಪರಿಚಿತರಾಗಿದ್ದಂತಹ ಡಾ. ಚಂದ್ರಶೇಖರ್ ಅವರು ತಮ್ಮ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರ ವೇಷ ಧರಿಸಿ ಏಕವ್ಯಕ್ತಿ ಅಭಿನಯ (Mono Acting) ಪ್ರದರ್ಶನದ ಮಧ್ಯೆ (as time filler) ಜಾನಕಿ ಅವರಿಂದ ಲತಾ ಮಂಗೇಶ್ಕರ್ ಅವರ ಜನಪ್ರಿಯ ಹಾಡುಗಳನ್ನು ಹಾಡಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು.
ಹಾಡಿನಿಂದ ಆರಂಭವಾದ ಪ್ರೇಮಕಥೆ 
ಆ ಸಮಯದಲ್ಲಿ ಜಾನಕಿ ಅವರು ಚಂದ್ರಶೇಖರ್ ಅವರ ಮನೆಯಲ್ಲೇ ವಾಸವಾಗಿದ್ದರು. ಅದೊಂದು ದಿನ ಆಕಸ್ಮಿಕವಾಗಿ ಚಂದ್ರಶೇಖರ್ ಅವರ ಕೋಟಿನ ಜೇಬಿನಿಂದ ಬಿದ್ದ ಅವರ ಪುತ್ರ ರಾಮು ಅವರ ಛಾಯಾಚಿತ್ರವನ್ನು ನೋಡಿ ಅವರನ್ನು ಮೆಚ್ಚಿಕೊಂಡ ಜಾನಕಿ ಅವರು. ಮುಂದೆ ಒಂದು ಸಂದರ್ಶನವೊಂದರಲ್ಲಿ ರಾಮು ಅವರ ಆ ಫೋಟೋ ನೋಡಿದ ಕ್ಷಣದಿಂದಲೇ ಅವರನ್ನು ಮನಸ್ಸಿನಲ್ಲಿ ಪ್ರೀತಿಸಲು ಆರಂಭಿಸಿದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದರು. ಅದೇ ರೀತಿಯಾಗಿ ರಾಮು ಅವರೂ ಸಹಾ ಜಾನಕಿ ಅವರ ಸುಮಧುರ ಕಂಠಕ್ಕೆ ಮನಸೋತಿದ್ದರು. ಅದರಲ್ಲೂ ವಿಶೇಷವಾಗಿ ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಗೀತೆ ರಸಿಕ್ ಬಲ್ಮಾ ಹಾಡನ್ನು ಜಾನಕಿ ಅವರಿಂದ ಪದೇ ಪದೇ ಹಾಡಿಸಿಕೊಂಡು ಕೇಳುತ್ತಿದ್ದರು.
ಚಿತ್ರರಂಗಕ್ಕೆ ಹಿನ್ನಲೆ ಗಾಯಕಿಯಾಗಿ ಪ್ರವೇಶ
ಜಾನಕಿ ಅವರ ಪ್ರತಿಭೆಯನ್ನು ಗುರುತಿಸಿದ ರಾಮು ಅವರು, ಅವರು ಕೇವಲ ನಾಟಕ ತಂಡದಲ್ಲಿ ಪಾರ್ಟ್‌ಟೈಮ್ ಗಾಯಕಿಯಾಗಿ ಉಳಿಯುವುದು ಸರಿ ಎನಿಸದೇ, ತಮ್ಮ ತಂದೆ ಚಂದ್ರಶೇಖರ್ ಅವರ ಸಹಾಯದಿಂದಲೇ ಜಾನಕಿ ಅವರನ್ನು ಮದ್ರಾಸ್‌ನ ಚಲನಚಿತ್ರ ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದರು. ಕೇವಲ 19ನೇ ವಯಸ್ಸಿನಲ್ಲಿ, 1957ರಲ್ಲಿ ಅವರು ತಮಿಳಿನ “ವಿಧಿಯಿನ್ ವಿಲೈಯಟ್ಟು” ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ತೆಲುಗಿನಲ್ಲಿ ಲಂಬಾಡೋಳ್ಳ ರಾಮದಾಸು ಚಿತ್ರದಲ್ಲಿ ನೀ ಆಸಾ ಅಡಿಯಾಸಾ ಲಂಬಾಡೋಳ್ಳ ರಾಮದಾಸ ಎಂಬ ವಿಷಾದಭರಿತ ಹಾಡಿನಿಂದ ಆರಂಭವಾದ ಅವರ ಗಾಯನಯಾನ ಮುಂದೆ ಐದು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಸಂಗೀತ ಲೋಕವನ್ನು ಆಳಿದ್ದು ಈಗ ಇತಿಹಾಸವಷ್ಟೇ. ಆರಂಭವಾದ ಸಂಗೀತ ಪಯಣ, ಮುಂದೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಜರಾಮರವಾದ ಅಧ್ಯಾಯವಾಗಿ ರೂಪುಗೊಂಡಿತು.
ಮೊದಲ ವರ್ಷದಲ್ಲಿಯೇ ಆರು ಭಾಷೆಗಳಲ್ಲಿ ಹಾಡುವ ಮೂಲಕ ತಮ್ಮ ಅಪರೂಪದ ಪ್ರತಿಭೆಯನ್ನು ಸಾಬೀತುಪಡಿಸಿದರು. ಅಲ್ಲಿಂದ ಆರಂಭವಾದ ಸಂಗೀತಯಾನ, ಮುಂದಿನ ಆರು ದಶಕಗಳ ಕಾಲ ನಿರಂತರವಾಗಿ ಸಾಗಿತು. ಸಂಗೀತ ಕ್ಷೇತ್ರದಲ್ಲಿ ಸಂಖ್ಯೆಗಳು ಎಲ್ಲವನ್ನೂ ಹೇಳಲಾರವು. ಆದರೆ ಎಸ್. ಜಾನಕಿ ಅವರ ವಿಷಯಕ್ಕೆ ಬಂದಾಗ ಸಂಖ್ಯೆಗಳೇ ಬೆರಗುಗೊಳಿಸುತ್ತವೆ.
ವಿಶ್ವದಾಖಲೆಯ ಸಾಧನೆ ಸುಮಾರು 48,000ಕ್ಕೂ ಹೆಚ್ಚು ಹಾಡುಗಳು. 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳು.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು, ಸಂಸ್ಕೃತ, ಕೊಂಕಣಿ, ಉರ್ದು, ಬೆಂಗಾಲಿ, ಒಡಿಯಾ, ಮರಾಠಿ ಅಷ್ಟೇ ಅಲ್ಲದೆ ಇಂಗ್ಲಿಷ್, ಜರ್ಮನ್, ಜಪಾನೀಸ್ ಹಾಗೂ ಸಿಂಹಳ ಭಾಷೆಗಳಲ್ಲಿಯೂ ಹಾಡಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಇಷ್ಟೊಂದು ಭಾಷೆಗಳಲ್ಲಿ ಹಾಡಿದರೂ ಪ್ರತಿಯೊಂದು ಭಾಷೆಯ ಉಚ್ಚಾರಣೆಯಲ್ಲೂ ಸ್ಥಳೀಯರಂತೆ ಹಾಡುವುದು ಅವರ ದೊಡ್ಡ ವೈಶಿಷ್ಟ್ಯ. ಅದಕ್ಕಾಗಿಯೇ ಅವರನ್ನು ಕೇವಲ ಗಾಯಕಿ ಎಂದು ಕರೆಯಲಿಲ್ಲ. “ಧ್ವನಿಯ ಮೂಲಕ ಅಭಿನಯ ಮಾಡುವ ಕಲಾವಿದೆ” ಎಂದು ಸಂಗೀತ ನಿರ್ದೇಶಕರು ಕೊಂಡಾಡುತ್ತಿದ್ದರು.
ಧ್ವನಿಯಲ್ಲೇ ಅಭಿನಯ ಮಾಡುತ್ತಿದ್ದ ಗಾನ ಮಾಂತ್ರಿಕೆ ಸಾಮಾನ್ಯ ಗಾಯಕರು ಹಾಡನ್ನು ಹಾಡುತ್ತಾರೆ. ಆದರೆ ಜಾನಕಿಯಮ್ಮ ಹಾಡನ್ನು ಬದುಕುತ್ತಿದ್ದರು. ಒಬ್ಬ ಪುಟ್ಟ ಮಗುವಿನ ಧ್ವನಿಯಾಗಬೇಕಾದರೆ ಹಾಗೆಯೇ ಹಾಡುತ್ತಿದ್ದರು. ಹಳ್ಳಿಯ ಮುಗ್ಧ ಹುಡುಗಿಯ ಪಾತ್ರವಿದ್ದರೆ ಅದಕ್ಕೆ ತಕ್ಕ ನಿಷ್ಕಳಂಕ ಭಾವವನ್ನು ಮೂಡಿಸುತ್ತಿದ್ದರು. ವಯಸ್ಸಾದ ತಾಯಿಯ ನೋವನ್ನು ಹಾಡಬೇಕಾದರೆ ಕೇಳುಗರ ಕಣ್ಣಲ್ಲಿ ನೀರು ತರಿಸುತ್ತಿದ್ದರು. ಹಾಸ್ಯಗೀತೆ, ಭಕ್ತಿಗೀತೆ, ಜೋಗುಳ, ಪ್ರೇಮಗೀತೆ, ವಿರಹಗೀತೆ ಯಾವುದೇ ಪ್ರಕಾರದ ಹಾಡಾದರೂ ಅದರಲ್ಲಿ ಅವರು ಪಾತ್ರವಾಗಿ ಬದುಕುತ್ತಿದ್ದರು. ಆದ್ದರಿಂದಲೇ ಅನೇಕ ಸಂಗೀತ ನಿರ್ದೇಶಕರು, “ಒಂದು ಹಾಡಿಗೆ ಬೇರೆ ಯಾರಾದರೂ ಹಾಡಬಹುದು… ಆದರೆ ಆ ಹಾಡಿಗೆ ಜೀವ ತುಂಬಬೇಕಾದರೆ ಜಾನಕಿ ಬೇಕು” ಎಂದು ಹೇಳುತ್ತಿದ್ದರು.
ಒಂದೇ ದಿನದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡುಗಳನ್ನು ಧ್ವನಿಮುದ್ರಣ ಮಾಡುವ ಸಾಮರ್ಥ್ಯ ಅವರಿಗಿತ್ತು. ಅದಕ್ಕಾಗಿಯೇ ಅವರನ್ನು ಸಂಗೀತ ಲೋಕದ “ಗಾನ ಕೋಗಿಲೆ” ಎಂದು ಗೌರವದಿಂದ ಕರೆಯಲಾಗುತ್ತಿತ್ತು. ಅವರ ಗಾಯನದಲ್ಲಿ ಕೇವಲ ಸ್ವರಗಳಿರಲಿಲ್ಲ; ಪಾತ್ರದ ಭಾವನೆ, ನೋವು, ಸಂತೋಷ, ಮುಗ್ಧತೆ ಮತ್ತು ಜೀವನದ ಅನುಭವಗಳೇ ಅಡಗಿರುತ್ತಿದ್ದವು. ಆದ್ದರಿಂದಲೇ ಅವರು ಹಾಡಿದ ಪ್ರತಿಯೊಂದು ಹಾಡು ಶ್ರೋತೃಗಳ ಮನಸ್ಸಿನಲ್ಲಿ ನೇರವಾಗಿ ಸ್ಥಾನ ಪಡೆದಿದೆ.
ಕರ್ನಾಟಕದ ಜೊತೆಗಿನ ಅವಿನಾಭಾವ ನಂಟು
ಜಾನಕಿ ಅವರು ಮೂಲತಃ ಆಂಧ್ರ ಪ್ರದೇಶದವರಾದರೂ, ಕನ್ನಡದ ಮೇಲಿನ ಅವರ ಪ್ರೀತಿ ಅಪಾರವಾಗಿತ್ತು. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಪ್ರಮುಖ ಸಂಗೀತ ನಿರ್ದೇಶಕರಿಗೂ ಅವರು ಮೆಚ್ಚಿನ ಗಾಯಕಿಯಾಗಿದ್ದರು. ರಾಜನ್–ನಾಗೇಂದ್
ಸ್ವಾಭಿಮಾನದ ಸಾಕಾರ ಮೂರ್ತಿ

ಅನೇಕ ರಾಜ್ಯ ಸರ್ಕಾರಗಳ ಅತ್ಯುತ್ತಮ ಗಾಯಕಿ ಪ್ರಶಸ್ತಿಗಳು, ಜೀವಮಾನ ಸಾಧನೆ ಪ್ರಶಸ್ತಿಗಳು ಹಾಗೂ ಸಂಗೀತ ಕ್ಷೇತ್ರದ ಅನೇಕ ಗೌರವಗಳ ಜೊತೆ ಅತ್ಯುತ್ತಮ ಗಾಯಕಿಯಾಗಿ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಅವರ ಮುಡಿಗೇರಿದೆ. 2013 ರಲ್ಲಿ ಕೇಂದ್ರ ಸರ್ಕಾರ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಎಸ್. ಜಾನಕಿ ಅವರಿಗೆ ಘೋಷಿಸಿದಾಗ, ಅದನ್ನು ಅತ್ಯಂತ ವಿನಮ್ರತೆಯಿಂದ ನಯವಾಗಿ ತಿರಸ್ಕರಿಸಿದ್ದರ ಹಿಂದೆ ದೊಡ್ಡ ನೋವಿತ್ತು. ಕಲೆಯ ಮೌಲ್ಯ ಮತ್ತು ದಕ್ಷಿಣ ಭಾರತದ ಕಲಾವಿದರನ್ನು ಗುರುತಿಸುವಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನಿಸಿದ್ದ ಅವರು, ನಾನು ಸುಮಾರು ಐವತ್ತು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಇಷ್ಟು ವರ್ಷಗಳ ನಂತರ ಗೌರವ ನೀಡುವುದಕ್ಕಿಂತ, ಕಲಾವಿದರ ಸಾಧನೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಬೇಕಿತ್ತು. “ಆರು ದಶಕಗಳ ನನ್ನ ಸಂಗೀತ ಸೇವೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಸಿಗಬೇಕೇ ಹೊರತು ಪದ್ಮ ಪ್ರಶಸ್ತಿಗಳಲ್ಲ” ಎಂದು ಹೆಮ್ಮೆಯಿಂದ ಹೇಳಿದ್ದರು ಎಸ್ ಜಾನಕಿಯವರು. ಅವರ ಈ ನಿರ್ಧಾರ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದರೂ, ಅವರ ಸರಳತೆ ಮತ್ತು ಸ್ವಾಭಿಮಾನಕ್ಕೆ ಸಾಕ್ಷಿಯಾಯಿತು.
ಗಾಯನದಿಂದ ನಿವೃತ್ತಿ – ಆದರೆ ಹಾಡುಗಳು ಅಮರ
ಸುಮಾರು ಆರು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಜಾನಕಿ ಅವರು ಕೆಲವು ವರ್ಷಗಳ ಹಿಂದೆ ಗಾಯನದಿಂದ ನಿವೃತ್ತಿ ಘೋಷಿಸಿದ್ದರು. “ಇನ್ನು ಯುವ ಪ್ರತಿಭೆಗಳಿಗೆ ಅವಕಾಶ ಸಿಗಲಿ” ಎಂಬ ಆಶಯದಿಂದ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದರು. ಆದರೆ ಕಲಾವಿದರು ನಿವೃತ್ತರಾಗಬಹುದು. ಅವರ ಕಲೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂಬುದಕ್ಕೆ ಜಾನಕಿ ಅವರ ಹಾಡುಗಳೇ ಜೀವಂತ ಸಾಕ್ಷಿ.
ಒಂದು ಯುಗದ ಅಂತ್ಯ

ಇಂದು ಎಸ್. ಜಾನಕಿ ನಮ್ಮೊಂದಿಗಿಲ್ಲ ಎನ್ನುವುದು ಕೇವಲ ಸಂಗೀತ ಲೋಕಕ್ಕಷ್ಟೇ ಅಲ್ಲ, ಕೋಟ್ಯಾಂತರ ಸಂಗೀತಾಭಿಮಾನಿಗಳಿಗೆ ವೈಯಕ್ತಿಕ ನಷ್ಟವಾಗಿದೆ. ಅವರು ಹಾಡಿದ ಸಾವಿರಾರು ಹಾಡುಗಳು ಮುಂದಿನ ಹಲವು ತಲೆಮಾರುಗಳಿಗೂ ಸಂಗೀತದ ಪಾಠವಾಗಲಿವೆ. ಅವರ ಧ್ವನಿ ಕೇಳಿದಾಗಲೆಲ್ಲಾ ನಮ್ಮ ಬಾಲ್ಯ, ನಮ್ಮ ಯೌವನ, ನಮ್ಮ ನೆನಪುಗಳು ಮತ್ತೆ ಜೀವಂತವಾಗುತ್ತವೆ. ದೇಹ ನಮ್ಮನ್ನು ಅಗಲಬಹುದು. ಆದರೆ ಕಲೆ ಎಂದಿಗೂ ಅಳಿಯುವುದಿಲ್ಲ. ಜಾನಕಿ ಅವರ ಧ್ವನಿ ಇನ್ನು ಮುಂದೆ ರೇಡಿಯೋದಲ್ಲಿ ಕೇಳಿಬಂದಾಗ, ಅದು ಕೇವಲ ಒಂದು ಹಾಡಾಗಿರುವುದಿಲ್ಲ; ಕನ್ನಡ ಸೇರಿದಂತೆ ಭಾರತೀಯ ಸಂಗೀತದ ಸುವರ್ಣಯುಗದ ನೆನಪಾಗಿರುತ್ತದೆ.
ಗಾನ ಕೋಗಿಲೆ ಎಸ್. ಜಾನಕಿ ದೇಹತಃ ನಮ್ಮೊಂದಿಗಿಲ್ಲದಿದ್ದರೂ, ಅವರ ಧ್ವನಿ ಭಾರತೀಯ ಸಂಗೀತದ ಆಕಾಶದಲ್ಲಿ ಎಂದೆಂದಿಗೂ ಮೊಳಗುತ್ತಲೇ ಇರುತ್ತದೆ. ಹಾಗಾಗಿ ಎಸ್. ಜಾನಕಿಯವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ ಅಲ್ವೇ?.
ಏನಂತೀರೀ?
ನಿಮ್ಮವನೇ
ಉಮಾಸುತ





