ಹಬ್ಬಕ್ಕೆ ನಿಮ್ಮ ಶೃಂಗಾರ ಹೇಗಿರಬೇಕು ಎಂಬುದನ್ನು ಬ್ಯೂಟಿ ಎಕ್ಸ್ ಪರ್ಟ್ ರಿಂದ ಸಲಹೆ ಪಡೆಯೋಣವೇ….?
ದೀಪಾವಳಿಯಂಥ ದೊಡ್ಡ ಹಬ್ಬ ಬಂದ ಮೇಲೆ ಉಟ್ಟು ತೊಟ್ಟು ಶೃಂಗಾರ ಮಾಡಿಕೊಂಡು ಪುಟ್ಟಕ್ಕ ತಯಾರಾಗದಿದ್ದರೆ ಹೇಗೆ? ಈ ಸಡಗರ ಸಂಭ್ರಮದ ಸಂದರ್ಭವೇ ಹಾಗೆ, ಎಲ್ಲರೂ ತಂತಮ್ಮ ಆಸೆ ಪೂರೈಸಿಕೊಳ್ಳುತ್ತಾರೆ. ಹೆಣ್ಣುಮಕ್ಕಳಂತೂ ಈ ಹಬ್ಬ ಬರಲಿ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಬ್ಯೂಟಿಫುಲ್ ಡ್ರೆಸೆಸ್, ಜ್ಯೂವೆಲರಿ, ಮೇಕಪ್ ನಿಂದ ತಮ್ಮ ಸೌಂದರ್ಯ ಇಮ್ಮಡಿಗೊಳ್ಳುವಂತೆ ಮಾಡಿಕೊಳ್ಳುತ್ತಾರೆ. ದೀಪಾವಳಿಯ ಹಬ್ಬ ಪ್ರಮುಖವಾಗಿ 3 ದಿನಗಳದ್ದು. ಅದರಲ್ಲಿ ಹಿಂದಿನ ಸಂಜೆ ನೀರು ತುಂಬೋ ಹಬ್ಬ, ಮನೆ ಮುಂದೆ ಸಗಣಿಯಿಂದ ನೆಲ ಸಾರಿಸಿ, ರಂಗೋಲಿ ಇಟ್ಟು, ತಳಿರು ತೋರಣಗಳಿಂದ ಮನೆ ಶೋಭಾಯಮಾನವಾಗುತ್ತದೆ. ಮೊದಲ ದಿನ ನರಕಚತುರ್ದಶಿ, ನಡುವಿನದು ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಕೊನೆಯದು ಬಲಿಪಾಡ್ಯಮಿ. ನವವಧು ಹೊಸ ಅಳಿಯನೊಂದಿಗೆ ತವರಿನಲ್ಲಿ ಮೊದಲ ದೀಪಾವಳಿ ಆಚರಿಸುವ ಭರ್ಜರಿ 3 ದಿನಗಳ ಹಬ್ಬ. ಪ್ರತಿದಿನ ನಳನಳಿಸುವ ಶೃಂಗಾರ ಕಡ್ಡಾಯ!
ಸೌಂದರ್ಯ ತಜ್ಞೆಯರ ಸಲಹೆಗಳಂತೆ ಈ ರೀತಿ ಶೃಂಗಾರ ಮಾಡಿಕೊಂಡು ಹಬ್ಬಕ್ಕೆ ಸಿದ್ಧರಾಗಿ :
ಹಬ್ಬಕ್ಕಾಗಿ ಸ್ಪೆಷಲ್ ಫೇಶಿಯಲ್, ಮೆನಿಕ್ಯೂರ್, ಪೆಡಿಕ್ಯೂರ್, ಬಾಡಿ ಪಾಲಿಶಿಂಗ್ ಟಿಪ್ಸ್ : ಹಬ್ಬದ ತಯಾರಿ ಬಲು ಜೋರಾಗಿ ನಡೆದಿರುತ್ತದೆ. ಶಾಪಿಂಗ್ ಭರಾಟೆಯಿಂದ ನಿಮ್ಮ ಚರ್ಮ ಸಹಜವಾಗಿಯೇ ಟ್ಯಾನಿಂಗ್ ಬಾಧೆಗೆ ಒಳಗಾಗುತ್ತದೆ. ಮುಖದಲ್ಲಿ ಸುಸ್ತು ಕುಂಡುಬಂದು ಲವಲವಿಕೆ ಹಿಂದೆ ಸರಿಯುತ್ತದೆ. ಹೀಗಾಗಿ ಹಬ್ಬಕ್ಕೆ ಮೊದಲೇ ನೀಟಾಗಿ ಸ್ಪೆಷಲ್ ಫೇಶಿಯಲ್ ಮಾಡಿಸಿಕೊಳ್ಳಿ. ಜೊತೆಗೆ ಬಾಡಿ ಮಸಾಜ್ ಇರಲಿ. ಫುಲ್ ಬಾಡಿ ಪಾಲಿಶಿಂಗ್, ವ್ಯಾಕ್ಸಿಂಗ್, ಐಬ್ರೋಸ್ ಇತ್ಯಾದಿ ಮಾಡಿಸಿ. ಇದರಿಂದ ನಿಮ್ಮ ಮುಖದಲ್ಲಿನ ಸುಸ್ತಿನ ಭಾವ ತಂತಾನೇ ಕಡಿಮೆ ಆಗುತ್ತದೆ. ಹಬ್ಬದ ದಿನ ನೀವು ಲವಲವಿಕೆಯಿಂದ ಮಿಂಚಬಹುದು.
ಫೇಶಿಯಲ್ ಗಾಗಿ C10 ಫೇಶಿಯಲ್, ಶಹನಾಜ್ ಫೇಶಿಯಲ್ ಕಿಟ್, ಹೈಡ್ರಾ ಫೇಶಿಯಲ್ ಇತ್ಯಾದಿ ಬಲು ಉತ್ತಮ ಮಟ್ಟದ್ದಾಗಿವೆ. ಇವು ಫೇಶಿಯಲ್ ಫೇಸ್ ನ ಟ್ಯಾನಿಂಗ್ ಪೂರ್ತಿ ತೆಗೆದುಬಿಡುತ್ತದೆ. ಆಗ ಮೇಕಪ್ ಇಲ್ಲದೆಯೂ ಮುಖ ಗ್ಲೋ ಆಗುತ್ತದೆ. ಇದರ ಪರಿಣಾಮ ಉತ್ತಮವಾಗಿರುತ್ತದೆ.
ಹಬ್ಬಕ್ಕೆ ಬೇಕಾದ ಶೃಂಗಾರಕ್ಕಾಗಿ ಟಿಪ್ಸ್ : ಮೊದಲ ದಿನ ಲೈಟ್ ಕಲರ್ ಡ್ರೆಸೆಸ್ ಇರಲಿ. ಆಫ್ ವೈಟ್, ಲೈಟ್ ಯೆಲ್ಲೋ, ಅರಿಶಿನ, ಲೈಟ್ ಪಿಂಕ್, ಆರೆಂಜ್ ಕಲರ್ ಡ್ರೆಸೆಸ್ ಕಣ್ಣಿಗೆ ತಂಪೆನಿಸುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೂ ಅತಿಯಾದ ಗಾಡಿ ಕಲರ್ ಡ್ರೆಸೆಸ್ ಬೇಡ. ಇದಕ್ಕೆ ತಕ್ಕಂತೆ ಸಾಫ್ಟ್ ಮೇಕಪ್ ಇರಲಿ. ಲೈಟ್ ಕಲರ್ ಡ್ರೆಸೆಸ್ ಗೆ ಇದೇ ಸರಿ. ಡ್ರೆಸ್ ಗೆ ತಕ್ಕಂತೆ ಲಿಪ್ ಸ್ಟಿಕ್ ಇರಲಿ. ಐ ಶ್ಯಾಡೋ ಲೈಟ್ ಇರಲಿ, ಕಂಗಳಿಗೂ ಲೈಟ್ ಮೇಕಪ್ ಇರಲಿ. ಹೇರ್ ಸ್ಟೈಲ್‌ಗಾಗಿ ಇತ್ತೀಚೆಗೆ ಎಲ್ಲರ ಆಯ್ಕೆ ಅರ್ಧ ಓಪನ್ ಹೇರ್, ಪೋನಿಟೇಲ್ ಬಯಸುತ್ತಾರೆ. ಇದಕ್ಕೆ ಬ್ಯೂಟಿಫುಲ್ ಬ್ರಾಂಚ್ ಸಿಗಿಸಿಡಿ. ಮನೆಯ ಕೆಲಸಗಳು ಸಲೀಸಾಗಿ ಜರುಗುವಂತೆ ಹೇರ್ ಸ್ಟೈಲಿಂಗ್ ಇರಲಿ.
ಅಮಾವಾಸ್ಯೆಯ ಲಕ್ಷ್ಮೀ ಪೂಜೆಯಂದು ಗ್ರಾಂಡಾಗಿ ಅಲಂಕರಿಸಿಕೊಳ್ಳಿ, ಬ್ರೈಟ್ ಮೇಕಪ್ ಇರಲಿ, ಡಾರ್ಕ್ ಬಣ್ಣಗಳನ್ನೇ ಆರಿಸಿಕೊಳ್ಳಿ : ಈ ದಿನ ಎಲ್ಲೆಲ್ಲೂ ಝಗಮಗಿಸುವ ಬೆಳಕು ತುಂಬಿರುತ್ತದೆ. ಎಲ್ಲೆಲ್ಲೂ ಸೀರಿಯಲ್ ಸೆಟ್ ವಿವಿಧ ಬಣ್ಣಗಳಲ್ಲಿ ವರ್ಣರಂಜಿತವಾಗಿ ಮಿನುಗುತ್ತಿರುತ್ತದೆ. ಹೀಗಾಗಿ ಈ ಸಂದರ್ಭಕ್ಕೆ ಡಾರ್ಕ್ ಕಲರ್ಸ್ ನ ಮೇಕಪ್ ಇರಲಿ. ಅಂದ್ರೆ ಮೆರೂನ್, ಡಾರ್ಕ್ ಬ್ರೌನ್, ಡಾರ್ಕ್ ಪಿಂಕ್, ರೆಡ್ ಲಿಪ್ ಸ್ಟಿಕ್. ಕಂಗಳಿಗೆ ಗೋಲ್ಡನ್ ಐ ಶ್ಯಾಡೋ, ಮಸ್ಕರಾ, ಪಿಂಕ್ ರೋಸ್, ಇದಕ್ಕೆ ಹೊಂದುವ ಬಿಂದಿ, ಕೈಗಳಿಗೆ ಬಣ್ಣದ ಬಳೆಗಳು, ಜ್ಯೂವೆಲರಿಯಲ್ಲಿ ಮುಖ್ಯವಾಗಿ ಎಲಿಗೆಂಟ್ ಸ್ಟೈಲಿನ ಡೈಮಂಡ್, ರೂಬಿ, ಮುತ್ತಿನ ಸೆಟ್, ಪರ್ಲ್ ಇತ್ಯಾದಿ ಇರಲಿ. ಇದರಿಂದ ನಿಮಗೆ ವಿಭಿನ್ನ ಲುಕ್ ಸಿಗುತ್ತದೆ.
ದೀಪಾವಳಿ ಪಾರ್ಟಿಗಳಿಗಾಗಿ ಹಲವು ಕಡೆ ಸುತ್ತಾಡುವುದಿರುತ್ತದೆ. ಹೀಗಾಗಿ ಸೀರೆ ಬೇಡ ಎನಿಸಿದರೆ, ಇಂಡೋವೆಸ್ಟರ್ನ್ ಉತ್ತಮ ಆಯ್ಕೆ. ಫಾರ್ಮಲ್ ಪ್ಯಾಂಟ್ ಶರ್ಟ್ ಜೊತೆ ಜ್ಯಾಕೆಟ್, ಶೇರ್ವಾನಿ ಸ್ಟೈಲ್ ಡ್ರೆಸ್, ಅನಾರ್ಕಲಿ ಡ್ರೆಸ್ ಯಾ ಇಂಡೋವೆಸ್ಟರ್ನ್ ಡಿಸೈನರ್ ಸಲ್ವಾರ್ ಕುರ್ತಿ. ಇತ್ತೀಚೆಗೆ ಫ್ಯಾಷನ್ ಟ್ರೆಂಡ್ ಆಗಿದೆ. ಏಕೆಂದರೆ ಇದು ಬ್ಯೂಟಿಫುಲ್ ಕಂಫರ್ಟೆಬಲ್ ಎರಡೂ ಕೂಡ!
ಬಲಿಪಾಡ್ಯಮಿ ದಿನದಂದು ನಿಮ್ಮ ಮೆಚ್ಚಿನ ಉಡುಗೆ, ಅಲಂಕಾರಕ್ಕೆ ಪ್ರಾಥಮಿಕತೆ ಕೊಡಿ : ನವ ವಧೂವರರಿಗೆ ಇದು ಮೊದಲ ದೀಪಾವಳಿಯಾಗಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಈ ದಿನ ನಿಮ್ಮ ಇಷ್ಟದಂತೆ ರೆಡಿ ಆಗಬಹುದು. ಸೀರೆ ಇಷ್ಟವಾದರೆ ಡಿಸೈನರ್ ರೆಡಿಮೇಡ್ ಸೀರೆ ಯಾ ನಾರ್ಮಲ್ ಸೀರೆ ಆರಿಸಿ. ಭಾರಿ ಲೆಹಂಗಾ ಆದರೂ ಸರಿ. ಇದೂ ಬೇಡ ಎನಿಸಿದರೆ ಅನಾರ್ಕಲಿ ಡ್ರೆಸ್ ಯಾ ಇಂಡೋವೆಸ್ಟರ್ನ್ ಭಾರಿ ಸೂಟ್ ಸಹ ಆರಿಸಬಹುದು.
ಡ್ರೆಸ್ ಗೆ ತಕ್ಕಂತೆ ಬ್ಯೂಟಿಫುಲ್ ಬಿಂದಿ ಇರಿಸಿಕೊಳ್ಳಿ. ಕುಟುಂಬದವರೆಲ್ಲರೂ ಕೂಡಿ ಆಚರಿಸುವ ಈ ಹಬ್ಬಕ್ಕೆ ಟ್ರೆಡಿಷನ್ ಟಚ್ ಇರಲಿ. ಫೋಟೋ ಶೂಟ್, ವಿಡಿಯೋಗಳಲ್ಲಿ ಧಾರಾಳ ಮಿಂಚಬಹುದು. ಹೀಗಾಗಿ ದೀಪಾವಳಿಯ ಈ ಸಂದರ್ಭವನ್ನು ಸ್ಮರಣೀಯವಾಗಿಸಲು ನಿಮ್ಮ ಅಲಂಕಾರ, ಶೃಂಗಾರಕ್ಕೆ ಹೆಚ್ಚಿನ ಮಹತ್ವ ಇರಲಿ.
– ಆರತಿ ಕುಮಾರ್





