ಕಪ್ಪು ಕಲೆಯ ನಿವಾರಣೆಗಾಗಿ ಇಂಥ ಕೆಲವು ಪ್ರಾಕೃತಿಕ ಹಾಗೂ ಪ್ರಭಾವಿ ಉಪಾಯಗಳ ಕುರಿತು ತಿಳಿದುಕೊಳ್ಳಿ…….

ಕಪ್ಪುಕಲೆ ಅಥವಾ ಚರ್ಮದ ಅಸಮಾನ ಬಣ್ಣ ಒಂದು ದೊಡ್ಡ ಸೌಂದರ್ಯ ಸಮಸ್ಯೆ ಎನಿಸಿದೆ, ಇದರಿಂದ ಬಾಧೆಗೆ ಒಳಗಾಗದ ಹೆಂಗಸರಿಲ್ಲ. ತುಟಿ, ಗಲ್ಲ, ಮಂಡಿ, ಮೊಣಕೈ, ಕುತ್ತಿಗೆ, ಕಂಕುಳ, ನಿತಂಬಗಳವರೆಗೂ ಈ ಕಪ್ಪುಕಲೆ ತೆಳು ಪ್ಯಾಚೆಸ್‌ ತರಹ ಹರಡಿಕೊಂಡು ಕಿರಿಕಿರಿ ಎನಿಸುತ್ತದೆ.

ಇದಕ್ಕೆ ಕಾರಣ ಹಲವು. ಬಿಸಿಲಿನಲ್ಲಿ ಸದಾ ತಿರುಗಾಟ, ಪರಿಸರ ಮಾಲಿನ್ಯ, ಅನುಚಿತ ಸ್ಕಿನ್‌ ಕೇರ್‌ ರೊಟೀನ್‌, ಹಾರ್ಮೋನ್ ಬದಲಾವಣೆ ಇತ್ಯಾದಿ. ಇದರಿಂದ ಮುಕ್ತಿ ಪಡೆಯುವುದು ಅಸಾಧ್ಯವೇನಲ್ಲ.

ತುಟಿಗಳ ಕಪ್ಪಾಗುವಿಕೆ

ತುಟಿಗಳ ಕಪ್ಪಾಗುವಿಕೆ ಒಂದು ಸಾಧಾರಣ ಸಮಸ್ಯೆ. ಮುಖ್ಯವಾಗಿ ಧೂಮಪಾನ ಮಾಡುವವರಿಗೆ ಇದು ತಪ್ಪಿದ್ದಲ್ಲ. ಬಿಸಿಲಿನ ನೇರ ಪ್ರಕೋಪ ತುಟಿಗಳ ಮೇಲೆ ಹೆಚ್ಚಾದಷ್ಟೂ ಹೀಗಾಗುತ್ತದೆ. ಇದರ ಜೊತೆಗೆ, ತುಟಿಗಳನ್ನು ನಿಯಮಿತವಾಗಿ ಮಾಯಿಶ್ಚರೈಸ್ ಮಾಡದಿದ್ದರೆ, ತುಟಿಗಳು ಬೇಗ ಶುಷ್ಕಗೊಂಡು ಕಪ್ಪಾಗ ತೊಡಗುತ್ತವೆ.

ಪರಿಹಾರ

ನಿಂಬೆಜೇನಿನ ಮಿಶ್ರಣ : ನಿಂಬೆಯಲ್ಲಿನ ನೈಸರ್ಗಿಕ ಬ್ಲೀಚಿಂಗ್‌ ಗುಣ, ತುಟಿಗಳ ಕಪ್ಪಾಗುವಿಕೆಯನ್ನು ದೂರಗೊಳಿಸಲು ನೆರವಾಗುತ್ತದೆ. ಜೇನಿನ ಮಾಯಿಶ್ಚರೈಸಿಂಗ್‌, ಆ್ಯಂಟಿ ಬ್ಯಾಕ್ಟೀರಿಯ್‌ಆ್ಯಂಟಿ ಆಕ್ಸಿಡೆಂಟ್‌ ಗುಣಗಳು ತುಟಿಯ ಕಪ್ಪನ್ನು ತಗ್ಗಿಸಲು ನೆರವಾಗುತ್ತವೆ. ಒಂದು ಹೋಳು ನಿಂಬೆಯಿಂದ ರಸ ಹಿಂಡಿಕೊಂಡು, ಅದಕ್ಕೆ 1 ಚಮಚ ಜೇನುತುಪ್ಪ ಬೆರೆಸಿಕೊಂಡು ಚೆನ್ನಾಗಿ ಗೊಟಾಯಿಸಿ. ಇದನ್ನು ತುಟಿಗಳಿಗೆ ನೀಟಾಗಿ ಸರಿ, 15-20 ನಿಮಿಷ ಹಾಗೇ ಬಿಡಿ. ಹೀಗೆ 1 ತಿಂಗಳು ಮಾಡುವುದರಿಂದ ತುಟಿಗಳ ಬಣ್ಣ ಕ್ರಮೇಣ ತೇಲುತ್ತದೆ.

ಗುಲಾಬಿಜಲಗ್ಲಿಸರಿನ್‌ : ಗುಲಾಬಿಜಲ ತುಟಿಗಳಿಗೆ ಹೆಚ್ಚಿನ ತಾಜಾತನ, ಮೃದುತ್ವ ತುಂಬುತ್ತದೆ. ಗ್ಲಿಸರಿನ್‌ ತುಟಿಗಳನ್ನು ಮಾಯಿಶ್ಚರೈಸ್‌ ಗೊಳಿಸಿ, ಕೋಮಲ ಆಗಿಸುತ್ತದೆ. ರಾತ್ರಿ ಮಲಗುವ ಮುನ್ನ, ತುಸು ಗುಲಾಬಿಜಲಕ್ಕೆ ಗ್ಲಿಸರಿನ್‌ ಹನಿ ಬೆರೆಸಿಕೊಂಡು ತುಟಿಗಳಿಗೆ ಹಚ್ಚಿ ನಿದ್ದೆ ಮಾಡಿ.

ಸಕ್ಕರೆಯ ಸ್ಕ್ರಬ್‌ : ಸಕ್ಕರೆಯ ಸಣ್ಣ ಕಣಗಳು ಡೆಡ್‌ ಸ್ಕಿನ್‌ ತೊಲಗಿಸುಲ್ಲಿ ಸಹಕಾರಿ. ಸಕ್ಕರೆ ಕೊಬ್ಬರಿ ಎಣ್ಣೆಯ ಮಿಶ್ರಣ ಉತ್ತಮ ಸ್ಕ್ರಬ್‌ ಆಗಿ ತುಟಿಗಳ ಮೇಲೆ ಕೆಲಸ ಮಾಡುತ್ತದೆ. ಈ ಮಸಾಜ್‌ ನಿಂದ ತುಟಿ ಸ್ವಚ್ಛ, ಶುಭ್ರ, ಮೃದುವಾಗಿ, ಗುಲಾಬಿ ದಳಗಳಂತಾಗುತ್ತವೆ.

ಮೊಣಕೈ ಮಂಡಿಯ ಕಪ್ಪಾಗುವಿಕೆ

ಮೊಣಕೈ ಮಂಡಿ ಬಳಿ ಕಪ್ಪು ಕಲೆ, ಸಾಮಾನ್ಯವಾಗಿ ಅಲ್ಲಿನ ಒರಟು ಚರ್ಮದಿಂದಾಗಿ ಆಗುತ್ತದೆ. ಈ ಜಾಗ ಸದಾ ಘರ್ಷಣೆಗೆ ಒಳಗಾಗುತ್ತಿರುತ್ತದೆ, ಆ ಕಾರಣ ಆ ಭಾಗದ ಚರ್ಮ ಒರಟಾಗಿ, ಕಪ್ಪಾಗುತ್ತದೆ.

ಪರಿಹಾರ

ನಿಂಬೆ ಬೇಕಿಂಗ್ಸೋಡ : ಇದರ ಮಿಶ್ರಣದಿಂದ ಮೊಣಕೈ ಮಂಡಿ ಭಾಗಕ್ಕೆ ಹೆಚ್ಚಿನ ಲಾಭವಿದ್ದು, ಆ ಭಾಗದ ಕಪ್ಪು ಕಲೆ ತಾನಾಗಿ ದೂರಾಗುತ್ತದೆ. ಒಂದು ಹೋಳು ನಿಂಬೆಯ ಮೇಲೆ ಬೇಕಿಂಗ್‌ ಸೋಡ ಉದುರಿಸಿ. ಇದನ್ನು ಆ ಭಾಗಕ್ಕೆ ಸರಿ ನಿಧಾನವಾಗಿ ಮಸಾಜ್‌ ಮಾಡಿ. ಇದು ಅಲ್ಲಿನ ಡೆಡ್‌ ಸ್ಕಿನ್‌ ತೊಲಗಿಸಿ, ಕಪ್ಪು ಬಣ್ಣ ಹೋಗಿಸಿ, ಆ ಭಾಗದ ಚರ್ಮದ ಬಣ್ಣವನ್ನು ತೇಲಿಸುತ್ತದೆ. ಒಂದು ತಿಂಗಳವರೆಗೂ ದಿನಕ್ಕೆ 1-2 ಸಲ ಹೀಗೆ ಮಾಡಿ.

ಆ್ಯಲೋವೆರಾ ಜೆಲ್ ‌: ಆ್ಯಲೋವೆರಾ ಈ ಭಾಗದ ಚರ್ಮವನ್ನು ಸುಧಾರಿಸುವುದರ ಜೊತೆ, ಅದಕ್ಕೆ ಆರ್ದ್ರತೆ ಒದಗಿಸಿ, ಪೋಷಣೆ ನೀಡುತ್ತದೆ. ತಾಜಾ ಲೋಳೇಸರ ಗಿಡದಿಂದ, ಫ್ರೆಶ್‌ ಜೆಲ್ ತೆಗೆದು, ನೇರವಾಗಿ ಆ ಭಾಗಕ್ಕೆ ಹಚ್ಚಿ ಮಸಾಜ್‌ ಮಾಡಬೇಕು. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಹೀಗೆ 1 ತಿಂಗಳ ಕಾಲ ದಿನಕ್ಕೆ 1-2 ಸಲ ಮಾಡಿ.

IB187455_187455132317857_SM89587

ಕೊಬ್ಬರಿ ಎಣ್ಣೆಅರಿಶಿನ : ಕೊಬ್ಬರಿ ಎಣ್ಣೆ ಚರ್ಮದ ಆಳಕ್ಕಿಳಿದು ಉತ್ತಮ ರೀತಿಯಲ್ಲಿ ಮಾಯಿಶ್ಚರೈಸ್‌ ಮಾಡುತ್ತದೆ. ಅರಿಶಿನದಲ್ಲಿನ ನೈಸರ್ಗಿಕ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳಿಂದಾಗಿ, ಚರ್ಮದ ಕಪ್ಪನ್ನು ಓಡಿಸುತ್ತದೆ. ತುಸು ಕೊಬ್ಬರಿ ಎಣ್ಣೆಗೆ ಚಿಟಕಿ ಅರಿಶಿನ ಬೆರೆಸಿ, ಆ ಮಿಶ್ರಣವನ್ನು ಮೊಣಕೈ ಮಂಡಿ ಭಾಗಕ್ಕೆ ಸರಿ ನೀಟಾಗಿ ಮಸಾಜ್‌ ಮಾಡಿ. 15-20 ನಿಮಿಷ ಹಾಗೆ ಬಿಟ್ಟು, ನಂತರ ಬಿಸಿ ನೀರಿನಿಂದ ತೊಳೆಯಿರಿ.

ಕುತ್ತಿಗೆ ಬಳಿಯ ಕಪ್ಪು ಕಲೆ ಸಾಮಾನ್ಯವಾಗಿ ಅಶುದ್ಧಿ, ಧೂಳು ಮಣ್ಣಿನ ಕಣಗಳಿಂದ ಕುತ್ತಿಗೆ ಬಳಿಯ ಕಪ್ಪು ಕಲೆ ಉಂಟಾಗುತ್ತದೆ. ಆ ಭಾಗದ ಚರ್ಮವನ್ನು ಪ್ರತಿದಿನ ಶುಚಿಗೊಳಿಸದೆ ಇರುವುದರಿಂದ ಯಾ ನಿಯಮಿತ ಸಂರಕ್ಷಣೆ ಮಾಡದೆ ಇರುವುದರಿಂದಲೂ ಈ ಸಮಸ್ಯೆ ಕಾಡುತ್ತದೆ.

ಪರಿಹಾರ

ಹಾಲುಕಡಲೆಹಿಟ್ಟು : ಹಾಲು ಒಂದು ನೈಸರ್ಗಿಕ ಕ್ಲೆನ್ಸರ್‌ ಆಗಿದ್ದು, ಕಡಲೆಹಿಟ್ಟು ಕುತ್ತಿಗೆಯ ಆಳಕ್ಕಿಳಿದು ಕೊಳೆಯನ್ನು ಶುಚಿಗೊಳಿಸುತ್ತದೆ. ಹಾಲು ಕಡಲೆಹಿಟ್ಟಿನ ಮಿಶ್ರಣ ಮಾಡಿಕೊಂಡು, ಕುತ್ತಿಗೆಯ ಬಳಿ ಹಚ್ಚಿ, ಅರ್ಧ ಗಂಟೆ ಒಣಗಲು ಬಿಟ್ಟು ನಂತರ ತೊಳೆಯಿರಿ.

ನಿಂಬೆಗುಲಾಬಿಜಲ : ನಿಂಬೆರಸ, ಗುಲಾಬಿಜಲ ಬೆರೆಸಿಕೊಂಡು, ಮಲಗುವ ಮುನ್ನ ನೀಟಾಗಿ ಕುತ್ತಿಗೆಗೆ ಸವರಿಕೊಳ್ಳಿ. ಇದು ಕುತ್ತಿಗೆಯ ಚರ್ಮದ ಬಣ್ಣ ತೇಲಿಸುವಲ್ಲಿ ಸಹಕಾರಿ. ಇದರಿಂದ ಕಪ್ಪು ಕಲೆಯ ನಿವಾರಣೆ ಆಗುತ್ತದೆ.

ಸೌತೆಕಾಯಿಯ ರಸ : ಸೌತೆ ಕುತ್ತಿಗೆಯ ಕಪ್ಪಾದ ಭಾಗಕ್ಕೆ ತಂಪು ಒದಗಿಸಿ, ತಾಜಾತನ ನೀಡುತ್ತದೆ. ಸೌತೆಕಾಯಿ ರಸ ಸಿದ್ಧಪಡಿಸಿ ಅದನ್ನು ಕುತ್ತಿಗೆಗೆ ನೀಟಾಗಿ ಸವರಿಕೊಳ್ಳಿ. 1 ಗಂಟೆ ಕಾಲ ಬಿಟ್ಟು ತೊಳೆಯಿರಿ. ಹೀಗೆ 2-3 ವಾರ ಮಾಡಿ, ನಿಮ್ಮ ಕುತ್ತಿಗೆಯ ಚರ್ಮ ತಿಳಿಯಾಗಿ ಹೊಳೆಯುವುದನ್ನು ನೋಡಿ.

ಕಂಕುಳದ ಕಪ್ಪು

ಇದಕ್ಕೆ ಹಲವಾರು ಕಾರಣಗಳಿವೆ. ಹೆಚ್ಚಿನ ಬೆವರು, ಶೇವಿಂಗ್‌, ಗಡುಸಾದ ಡಿಯೋಡರೆಂಟ್ಸ್ ಇತ್ಯಾದಿ.

ಪರಿಹಾರ

ಆಲೂ ರಸ : ಆಲೂ ಒಂದು ನೈಸರ್ಗಿಕ ಬ್ಲೀಚಿಂಗ್‌ ಏಜೆಂಟ್‌. ಆಲೂ ರಸ ಸಿದ್ಧಪಡಿಸಿ. ಇದನ್ನು ನಿಮ್ಮ ಕಂಕುಳಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಒಣಗಲು ಬಿಟ್ಟು ನಂತರ ತೊಳೆಯಿರಿ. ಇದು ಆ ಭಾಗದ ಕಪ್ಪನ್ನು ನಿವಾರಿಸುವಲ್ಲಿ ಪೂರಕ.

ಆ್ಯಪಲ್ ಸೈಡರ್ವಿನಿಗರ್‌ : ಇದರಲ್ಲಿ ಅಸಿಡಿಕ್‌ ಅಂಶಗಳು ಅಡಗಿದ್ದು, ಅದು ಕಪ್ಪಾದ ಚರ್ಮದ ಭಾಗವನ್ನು ತಿಳಿಗೊಳಿಸಿ, ಅಲ್ಲಿನ ಮೃತಕೋಶಗಳನ್ನು ತೊಲಗಿಸಿ ಕಾಂತಿ ತರುತ್ತದೆ. ಹೀಗಾಗಿ ಈ ವಿನಿಗರ್‌ ನ್ನು ತುಸು ಬೆಚ್ಚಗಿನ ನೀರಲ್ಲಿ ಕದಡಿಕೊಂಡು, ಕಂಕುಳಕ್ಕೆ ಧಾರಾಳ ಸವರಬೇಕು. ಅರ್ಧ ಗಂಟೆ ಬಿಟ್ಟು ತೊಳೆಯಿರಿ.

ಟೀ ಟ್ರೀ ಆಯಿಲ್ ನೀರು : ಈ ಆಯಿಲ್ ‌ನಲ್ಲಿ ಆ್ಯಂಟಿಸೆಪ್ಟಿಕ್‌ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳಿದ್ದು, ಕಂಕುಳಕ್ಕೆ ತಾಜಾತನ ಒದಗಿಸುತ್ತದೆ. ಕೊನೆಗೆ ಆ ಭಾಗದ ಬಣ್ಣವನ್ನೂ ತೇಲಿಸುತ್ತದೆ. ಈ ಆಯಿಲ್ ‌ನ ಕೆಲವು ಹನಿಗಳನ್ನು ತುಸು ನೀರಲ್ಲಿ ಕದಡಿಕೊಂಡು, ಕಂಕುಳಕ್ಕೆ ಸರಿ ಅರ್ಧ ಗಂಟೆ ಬಿಡಿ. ನಂತರ ಬಿಸಿ ನೀರಿನಿಂದ ಆ ಭಾಗ ತೊಳೆಯಿರಿ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ