ವ್ಯಂಗ್ಯ – ಕೀರ್ತಿ ಕಿರಣ್ ಕುಮಾರ್
ಏನೋ ಮಾಡಲು ಹೋಗಿ ಇನ್ನೇನೋ ಅವಾಂತರ ಮಾಡಿಕೊಳ್ಳುವುದು ಮನೀಷಾಳ ದಿನಚರಿಯಾಗಿತ್ತು. ಕೊನೆಗಾದರೂ ಅವಳ ಹವ್ಯಾಸಗಳಿಗೆ ಉತ್ತಮ ಪ್ರತಿಫಲ ಸಿಕ್ಕಿತೇ…..?
`ಮನಿ…. ಮನಿ…. ಎಲ್ಲಿದ್ದೀಯಾ….?’ ಎಂದು ಕೂಗುತ್ತಲೇ ಹೊರಗಿನಿಂದ ಬರುವುದು ಸಂಪತ್ ನ ನಿತ್ಯ ದಿನಚರಿ. ಹಾಗೆ ಕೂಗುತ್ತಾ ಬಂದ.
ಆದರೆ ಟೆರೇಸ್ ಮೇಲೆ ಸಿಮೆಂಟ್ ಪಾಟ್ ಗಳನ್ನು ಇಟ್ಟುಕೊಂಡು ಪೇಂಟ್ ಮಾಡುತ್ತಿದ್ದ ಮನೀಷಾಳಿಗೆ ಅವನು ಕೂಗಿದ್ದು ಕೇಳಲೇ ಇಲ್ಲ. ಮಣ್ಣಿನ ಕುಂಡಗಳನ್ನು ತಂದು 10 ದಿನಗಳಾಗಿತ್ತು. ಬೆವರು ಸುರಿಯುತ್ತಾ ಇದ್ದರೂ ಸುಡುಬಿಸಿಲಿನಲ್ಲಿ ತಲೆಗೊಂದು ವೇಲು ಸುತ್ತಿಕೊಂಡು, ಪೇಂಟ್ ಮಾಡಿ ವಾರ್ಲಿ ಆರ್ಟ್ ಮಾಡುವುದರಲ್ಲಿ ಮಗ್ನಳಾಗಿದ್ದಳು. ಗಂಡ ಬರುವ ಹೊತ್ತಿಗೆ ಮಾಡಿಬಿಡಬೇಕು ಎಂಬ ತರಾತುರಿ ಅವಳಿಗೆ.
ಸಂಪತ್ ಗೆ ಹೆಂಡತಿ ಮನೀಷಾ ಮಾಡುವ ಪೇಂಟಿಂಗ್ ನ್ನು ಇಷ್ಟಪಡುತ್ತಿದ್ದ. ಅವಳ ಹೊಲಿಗೆ, ನಿಟ್ಟಿಂಗ್, ಕ್ರಾಫ್ಟ್ ಎಲ್ಲವೂ ಅವನಿಗೆ ಅಚ್ಚುಮೆಚ್ಚು. ಪ್ರತಿಯೊಂದಕ್ಕೂ ಪ್ರೋತ್ಸಾಹ ಕೂಡ ಕೊಡುತ್ತಿದ್ದ. ಅತಿಯಾದರೆ ಅಮೃತ ವಿಷವಾಗುವುದು ಅಲ್ಲವೇ? ಯಾವುದೇ ಹವ್ಯಾಸಗಳಾಗಲಿ… ಅವು ಬೇಸರ ಕಳೆಯಲು ಸಮಯವಿದ್ದಾಗ ಮಾಡಬಹುದು. ಅದು ಬಿಟ್ಟು ತನ್ನ ಇಡೀ ದಿನವನ್ನು ಅದಕ್ಕಾಗಿಯೇ ಮುಡುಪಾಗಿಟ್ಟರೆ ಮನೆ ಮಂದಿಗೆ ಇವಳೆಲ್ಲೋ ಕಳೆದು ಹೋಗುತ್ತಿದ್ದಾಳೇನೋ ಎನಿಸದಿರುವುದಿಲ್ಲ, ಅಲ್ಲವೇ….?
ಮನೀಷಾ ಎಲ್ಲವನ್ನೂ ಮಾಡುವಳು, ಆದರೆ ಯಾವುದರಲ್ಲೂ ಪಾರಂಗತಳಲ್ಲ. ಆರಂಭದ ವೇಗ ಕುದುರೆಯನ್ನೂ ಮೀರಿಸುತ್ತದೆ. ಸ್ವಲ್ಪ ದಿನವಾದ ಮೇಲೆ ತನ್ನ ಆಸಕ್ತಿಯ ಕ್ಷೇತ್ರವೇ ಬದಲಾಗಿರುತ್ತದೆ. ಇದು ಸಂಪತ್ ಗೆ ಸದಾ ಕಾಡುವ ಪ್ರಶ್ನೆಯಾಗಿತ್ತು.
ಹೊರಗಿನಿಂದ ಬಂದವನಿಗೆ ವಿಪರೀತ ತಲೆನೋವು, ಅವನಿಗೆ ಕಾಫಿ ಬೇಕಾಗಿತ್ತು. ಹೆಂಡತಿಯನ್ನು ಕೂಗುತ್ತಲೇ ಟೆರೇಸ್ ಗೆ ಹೋದವನು ಇವಳ ಮಡಕೆ ಕುಡಿಕೆ, ಪೇಂಟ್ ಬಾಕ್ಸ್ ಗಳ ರಾಶಿ ರಾಶಿ ಡಬ್ಬಗಳ ನೋಡಿ ಅಸಹನೆಯಿಂದ, ”ನಿನಗೆ ಯಾರು ಈ ಕೆಲಸ ಮಾಡು ಅಂತ ಹೇಳಿರುವುದು….? ನಿಂದು ಅತಿಯಾಯ್ತು. ಎಲ್ಲಾ ನಿಲ್ಲಿಸ್ತೀನಿ ಇರು,” ಎಂದು ಗದರಿದ.
ಮನೀಷಾ ಗಂಡ ಬೈಯುತ್ತಾರೆಂದೇ ಎಲ್ಲವನ್ನೂ ಟೆರೇಸ್ ಮೇಲೆ ಮಾಡುತ್ತಿದ್ದಳು. ಆದರೂ ಇಂದು ಸಿಕ್ಕಿಹಾಕಿಕೊಂಡುಬಿಟ್ಟಿದ್ದಳು. ದಡದಡನೆ ಕೆಳಗಿಳಿದು ಬಂದು ಪೇಂಟ್ ಆಗಿದ್ದ ಕೈಯನ್ನು ತೊಳೆದುಕೊಂಡು ಕಾಫಿ ಮಾಡಿಕೊಟ್ಟಳು.
ಸಂಪತ್ ಗೆ ತಲೆ ನೋವು ಕಡಿಮೆ ಆದಮೇಲೆ ಮನೀಷಾಳನ್ನು ಬಳಿಗೆ ಕರೆದು, “ಮನೀಷಾ, ಇದನ್ನೆಲ್ಲಾ ಮಾಡಬೇಡ ಅಂತ ನಿನಗೆ ಹೇಳಲ್ಲ. ಆದರೆ ಈ ರೀತಿ ಎಲ್ಲವನ್ನೂ ಮೈಮರೆತು ಮಾಡುತ್ತಾ ಆರೋಗ್ಯ ಹದಗೆಡಿಸಿಕೊಳ್ಳಬೇಡ,” ಎಂದು ಪ್ರೀತಿಯಿಂದ ಕಿವಿಮಾತು ಹೇಳಿದ.
ಈ ರೀತಿಯ ಸಂಭಾಷಣೆ ಮೂರು ತಿಂಗಳಿಗೊಮ್ಮೆ ನಡೆಯುತ್ತಲೇ ಇರುತ್ತಿತ್ತು. ಆದರೂ ಮನೀಷಾಳ ಆಸಕ್ತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದವೇ ವಿನಾ ಕಡಿಮೆಯಾಗುತ್ತಿರಲಿಲ್ಲ.
ಮೊದಮೊದಲು ಪತ್ರಿಕೆಯೊಂದರಲ್ಲಿ ಲೇಖನವೊಂದು ಪ್ರಕಟವಾದಾಗ ಹಿಗ್ಗಿ ಹೀರೇಕಾಯಿಯಾಗಿ `ರೀ, ಅವರು ಫೋನ್ ಮಾಡಿ ಲೇಖನ ಚೆನ್ನಾಗಿದೆ ಅಂದ್ರು, ಇವರು ಲೇಖನ ಚೆನ್ನಾಗಿದೆ ಅಂದ್ರು,’ ಎಂದು ಗಂಡನ ಕಿವಿ ತೂತುಗುಟ್ಟುವವರೆಗೂ ಹೇಳಿದ್ದೇ ಹೇಳಿ ಹೊಗಳಿಕೊಂಡಿದ್ದಳು.
ನಂತರ ಪ್ರತಿ ತಿಂಗಳೂ ಲೇಖನಗಳು ಪ್ರಕಟವಾಗುತ್ತಾ ಹೋದವು. ಸಾಕಷ್ಟು ಜನಮನ್ನಣೆ ಗಳಿಸಿದಳು. ಎರಡೇ ವರ್ಷಗಳಲ್ಲಿ ಕರ್ನಾಟಕದ ಹತ್ತಾರು ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತಾ ಹೋದವು. ಜನರ ಪ್ರಶಂಸೆ, ಸ್ನೇಹಿತರ ಹೊಗಳಿಕೆಯಿಂದ ಸಂಪತ್ ಗೆ ಹೆಂಡತಿಯ ಮೇಲೆ ಅಭಿಮಾನ ಪ್ರೀತಿ ದುಪಟ್ಟಾಗುವಂತೆ ಮಾಡಿತು.
ನಂತರ ಪೇಂಟಿಂಗ್ ಮಾಡಲು ಶುರು ಮಾಡಿದಳು. ಮೊದಮೊದಲು ಬಿಳಿ ಕರ್ಚೀಫ್ ಗಳ ಮೇಲೆ ಚಿಟ್ಟೆ, ಎಲೆ, ಹೂ, ಕಾಂಡ ಬಿಡಿಸಿ ಬಂದವರ ಮುಂದೆ ತೋರಿಸಿ, ಹ್ಯಾಂಗರಿಗೆ ಸಿಕ್ಕಿಸಿ ಕೊನೆಗೆ ಪರ್ಸ್ ನ್ನು ಅಲಂಕರಿಸಿದ. ಕರ್ಚೀಫ್ ಗಳು, ಥ್ರೆಡಿಂಗ್ ಮೆಟೀರಿಯಲ್ಸ್ ತರಬೇಕಾದರೆ ಸ್ಟಿಕ್ಕರ್ ಖಾಲಿಯಾಗಿದೆ ತಗೋಬೇಕು ಎಂದು ಹೇಳಿ ಅಂಗಡಿಗೆ ಹೋಗಿ ಸಾಮಗ್ರಿಗಳನ್ನು ತರುತ್ತಿದ್ದಳು, ಇವಳಿಗೆ ಇನ್ಯಾವ ಹುಚ್ಚು ಹತ್ತಿದೆಯೋ ಅನ್ನುವಷ್ಟರಲ್ಲಿ….. ತವರುಮನೆಗೆ ಹೋಗಿದ್ದಳು ಬರುತ್ತಲೇ ಹತ್ತಾರು ಖಾಲಿ ಬಾಟಲಿ, ಮಡಕೆಗಳನ್ನು ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟುಕೊಂಡು ಬಂದಿದ್ದಳು. ಇದೇನಪ್ಪ ಹೊಸ ತರಹ ಅಂತ ಯೋಚಿಸುತ್ತಿರುವಾಗಲೇ ಇನ್ನೊಂದು ಬ್ಯಾಗಿನಲ್ಲಿ ಪೇಂಟ್ ಬಾಕ್ಸ್ ಹೊರಗೆ ಬಂದಿಳಿಯಿತು. ಬಾಟಲಿಗಳ ಮೇಲೆ ಮದುಮಕ್ಕಳ ಚಿತ್ರ, ಹಾವು, ಮೀನು, ಚಿಟ್ಟೆ, ಹೂವು, ಗಿಡಮರ, ಬಳ್ಳಿ, ಕೆರೆತೊರೆ, ಹಳ್ಳಕೊಳ್ಳ ಎಲ್ಲಾ ಚಿತ್ರಣಗಳು ಮಡಕೆ, ಬಾಟಲಿಗಳ ಮೇಲೆ ಚಿತ್ತಾರ ಮೂಡಿಸಿದ್ದವು.
ನಂತರ ಅಡುಗೆಮನೆ, ಬೆಡ್ ರೂಮ್ ಕಾರ್ನರ್ ಸ್ಟಾಂಡ್, ಟಿವಿ ಬೋರ್ಡ್ ಎಲ್ಲಾ ಕಡೆ ಅಲಂಕಾರಗೊಂಡ ಬಾಟಲುಗಳದ್ದೇ ದರ್ಬಾರು. `ಅಬ್ಬಾ… ಮನೆಗೆ ದುಡ್ಡು ಕೊಟ್ಟು ಶೋಪೀಸ್ ತರುವುದು ತಪ್ಪಿತು,’ ಎಂದುಕೊಂಡ ಪತಿರಾಯ. ಆದರೆ ಅಲ್ಲಿಗೆ ನಿಲ್ಲಲಿಲ್ಲ ಅವಳ ಪೇಂಟಾಯಣ. ಕುಂಬಾರರಿಂದ ಮಡಕೆಯನ್ನು ಇವನ ಕೈಯಿಂದಲೇ ಹೊರಿಸಿಕೊಂಡು ತಂದಳು. ವಾರ್ಲಿ ಆರ್ಟ್‌ಸ್ಟಾಂಡ್, ಮಂಡಲ ಆರ್ಟ್ ಎಲ್ಲಾ ರೀತಿಯ ಆರ್ಟ್ ಗಳನ್ನು ಮಾಡಿ ಮನೆಯ ಮೂಲೆ ಮೂಲೆಯಲ್ಲೂ ಮಡಕೆ ಚಿತ್ತಾರನ್ನು ಬಿಡಿಸಿ ಅಲಂಕರಿಸಿದಳು.
`ಎಲ್ಲವನ್ನೂ ಮಾಡುವೆನು, ಮಾಡುವೆನು….’ ಎನ್ನುವವಳು ಯಾವುದರಲ್ಲೂ ಪಾರಂಗತಗಳಾಗಲಿಲ್ಲ. ಕೊನೆಗೆ ಮನೆಯ ಮುಂದೆ ಇಡುವ ಹೂವಿನ ಕುಂಡಗಳಿಗೆ ತರಾವರಿ ಬಣ್ಣ ಬಳಿದು, ಚಿತ್ತಾರ ಬಿಡಿಸಿ, ಕಿಟಕಿ ಸಂದು, ಬಾಗಿಲ ಹಿಂದೆ ಮುಂದೆ ಎಲ್ಲಾ ಕಡೆ ಬಂದು ಕುಳಿತುಕೊಂಡವು. ಹೂಗಳು ನಳನಳಿಸಿದವು.
ಹೂಗಳ ಅಂದ ಯಾರಿಗಿಷ್ಟ ಆಗುವುದಿಲ್ಲ ಹೇಳಿ…. ಮನೆಗೆ ಬಂದವರಿಗೆಲ್ಲಾ ತಾನು ಮಾಡಿಟ್ಟಿರುವ ಶೋ ಪೀಸ್ ಗಳನ್ನು ಉಡುಗೊರೆಯಾಗಿ ನೀಡಿದಳು. ಕೊನೆಗೆ ಮಾಡಿ ಮಾಡಿ ಮಾಡಿ ಸುಸ್ತಾಗಿ ಮಾಡಿದ ಅಲಂಕಾರಿಕ ವಸ್ತುಗಳನ್ನು ತೋರಿಸಲು ಹಿಂಜರಿದಳು. ಕಾರಣ ಅರ್ಧಕ್ಕರ್ಧ ಅಲಂಕಾರಿಕ ವಸ್ತುಗಳು ಪುಕ್ಕಟೆ ಗೆಳತಿಯರ, ನೆಂಟರಿಷ್ಟರ ಮನೆಯ ಶೋಕೇಸುಗಳನ್ನು ಅಲಂಕರಿಸಿದ್ದವು.
ಬೆಳಗ್ಗೆ ಬೆಳಗ್ಗೆ ಕೈಯಲ್ಲೊಂದು ಚೀಲ, ಸಣ್ಣ ಗುದ್ದಲಿ, ಅಲ್ಲಿಂದ ಬರುತ್ತಾ ಹೊರಲಾರದಂಗೆ ಹೊರುತ್ತಾ ಮಣ್ಣು ತರುವಳು. ಬೆವರು ಹನಿ ಸುರಿಸುತ್ತಾ ಪಾಟ್ ಗಳಿಗೆಲ್ಲಾ ಮಣ್ಣು ತುಂಬುತ್ತಾ ಪತಿಯ ಕಡೆ ಒಮ್ಮೆ ನೋಡುವಳು. ಇವರಿಂದ ಏನಾದರೂ ಸಹಾಯ ಸಿಗಬಹುದಾ ಅಂತ. ಅವನು ಅವಳು ಮಾಡುವ ಕೆಲಸವನ್ನು ನೋಡಿಯೂ ನೋಡದ ಹಾಗೆ ಪೇಪರ್ ಓದುತ್ತಾ ಕುಳಿತ. ಕೆನ್ನೆ ಕೆಂಪು ಮಾಡಿಕೊಳ್ಳುತ್ತಾ ಕೈ ನೋವಾದರೂ ನೋವಿಲ್ಲದಂತೆ ನಟಿಸುತ್ತಾ, ಕುಂಟುತ್ತಾ ಗಿಡಗಳನ್ನು ನೆಟ್ಟು, ಐ.ಪಿ.ಎಲ್ ಮ್ಯಾಚ್ ಕಪ್ ಹೊಡೆದಂತೆ ವಿಜಯದ ನಗೆಯ ಬೀರುವಳು ಎಲ್ಲವನ್ನು ನೋಡುವುದೇ ಅವನ ಭಾಗ್ಯವೋ…. ದುರ್ಭಾಗ್ಯವೋ ತಿಳಿಯದೇ ಅವಳೇ ಬುಟ್ಟಿಯಲ್ಲಿ ಬೆಳೆದ ಹಾಗಲಕಾಯಿ ಪಲ್ಯವನ್ನು ತಿನ್ನಿಸಿ ಮತ್ತೆ ಹೊರಟಳು. ರೋಡಂಚಿನಲ್ಲಿ ಬಿದ್ದಿರುವ ಸಗಣಿ ಎತ್ತಲು ಹೊರಟಳು. ಆನೆ ಲದ್ದಿಯೋ, ಕುರಿ ಹಿಕ್ಕೆಯೋ, ಹಸುವಿನ ಸಗಣಿಯೋ ಒಟ್ಟಾರೆ ಕೆಮಿಕಲ್ ರಹಿತ ಗೊಬ್ಬರವನ್ನು ಸಿಂಪಡಿಸಬೇಕೆಂಬುದು ಮನಿಷಾಳ ಇಂಗಿತ. ಆದರೆ ರೋಡಂಚಿನಲ್ಲಿ ಚೀಲ ಹಿಡಿದು ತಿರುಗುವ ಅವಳ ಕೆಲಸ ಇವನಿಗೆ ಕಣ್ಣಿಂದ ನೋಡಲು ಸಾಧ್ಯವಿಲ್ಲ. ಆದರೂ ಇವಳು ಹೀಗೇಕೆ ಎಂದು ಎಷ್ಟೋ ಬಾರಿ ಅನಿಸಿದೆ. ನಾನು ಇರೋದೇ ಹೀಗೆ ಎಂಬ ಅವಳ ಉತ್ತರ ಸದಾ ಸಿದ್ಧವಾಗಿರುತ್ತಿತ್ತು. ನೋಡ್ರಿ ಮುಂದೊಂದು ದಿನ ನನ್ನ ಈ ಎಲ್ಲಾ ಕೆಲಸಗಳಿಗೆ ಮನ್ನಣೆ ಸಿಕ್ಕೆ ಸಿಗುತ್ತೆ ಅಂತ ತಿರುಗೇಟು ನೀಡಿ ಅಡುಗೆಮನೆ ತಲುಪುವಷ್ಟರಲ್ಲಿ ಕಾಲಿಂಗ್ ಬೆಲ್ ಟ್ರಿಣ್ ಟ್ರಿಣ್ ಎಂದಿತು. ಅತ್ತಿಂದ ಪೋಸ್ಟ್ ಮೆನ್ ಒಂದು ಲಕೋಟೆ ಹಿಡಿದು ನಿಂತಿದ್ದ. ಅದರಲ್ಲಿ `ಸಮಾಜ ಸೇವಾರತ್ನ’ ಪ್ರಶಸ್ತಿ ಪುರಸ್ಕೃತಳಾಗಿ ಆಯ್ಕೆ ಪತ್ರ ಬಂದಿತ್ತು. ಲಕೋಟೆ ತೆಗೆದವಳೇ ಮೊದಲು ಓಡಿ ಹೋಗಿ ತನ್ನ ಗಿಡಗಳಿಗೆ ಮುತ್ತು ಕೊಟ್ಟಳು. ಅವನು ತನ್ನ ಕೆನ್ನೆಯನ್ನು ಸವರಿಕೊಂಡ ಮೆಲ್ಲಗೆ, ಅವಳು ಹಾಗೆ ಸರಿದಳು ಮೆಲ್ಲಗೆ…. ಅವನೆಡೆಗೆ ನೋಡಿ ಅಣಕಿಸುಂತೆ….!





