ಎಸ್‌. ಆರತಿ

ಕನ್ನಡದ ಖ್ಯಾತ ನಟಿ ರುಕ್ಮಿಣಿ, ಇಡೀ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಾ, ತಮ್ಮ ಬ್ಯೂಟಿ, ಗ್ಲಾಮರ್ನಿಂದ `ನ್ಯಾಶನಲ್ ಕ್ರಶ್‌’ ಎನಿಸಿದ್ದಾರೆ. `ಕಾಂತಾರ ಚ್ಯಾಪ್ಟರ್‌-1′ ಪ್ಯಾನ್ಇಂಡಿಯಾ ಚಿತ್ರದ ಅಪಾರ ಯಶಸ್ಸಿನಿಂದ ದಕ್ಷಿಣದ ಸ್ಟಾರ್ಯುವಜನತೆಯ ಹೃದಯ ಗೆದ್ದದ್ದು ಹೇಗೆ….?

ಕಳೆದ ತಿಂಗಳು ರಿಲೀಸ್‌ ಆದ ಕನ್ನಡದ `ಕಾಂತಾರ ಚ್ಯಾಪ್ಟರ್‌-1′ ಚಿತ್ರದಲ್ಲಿ ರಾಜಕುಮಾರಿ ಕನಕವತಿಯಾಗಿ ನಟಿಸಿದ ಅಪ್ಪಟ ಕನ್ನಡತಿ ರುಕ್ಮಿಣಿ ವಸಂತ್‌, ಕನ್ನಡದ ಸ್ಯಾಂಡಲ್ ವುಡ್‌ ಮಾತ್ರವಲ್ಲದೆ, ಈ ಪ್ಯಾನ್‌ ಇಂಡಿಯಾ ಚಿತ್ರ ದಕ್ಷಿಣದ ಎಲ್ಲಾ ಭಾಷೆ, ಹಿಂದಿ, ಬಂಗಾಳಿಯಲ್ಲೂ ಧೂಳೆಬ್ಬಿಸಿದ್ದು, ಈಕೆ ಇಡೀ ದೇಶದ ಯುವಜತೆಯ ಅಚ್ಚುಮೆಚ್ಚಿನ ನಾಯಕಿಯಾಗಿ ಗುರುತಿಸಲ್ಪಟ್ಟು, ಇಂದಿನ `ನ್ಯಾಶನಲ್ ಕ್ರಶ್‌’ ಎನಿಸಿದ್ದಾರೆ. ರುಕ್ಮಿಣಿ ಪ್ರಸ್ತುತ ಭಾರತೀಯ ಸಿನಿರಂಗದ ಎಲ್ಲರಿಗಿಂತಲೂ ಅತಿ ಪ್ರತಿಭಾವಂತ ನಟಿ ಎಂಬ ಪಟ್ಟಕ್ಕೆ ಸೈ ಎನಿಸಿದ್ದಾರೆ. ಈಕೆ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಚಿತ್ರರಂಗದಲ್ಲೂ ಈಗಾಗಲೇ ಭರವಸೆಯ ಛಾಪು ಮೂಡಿಸಿದ್ದಾರೆ!

ಲಂಡನ್‌ ಮೂಲದ `ರಾಯ್‌ ಅಕ್ಯಾಡೆಮಿ ಆಫ್‌ ಡ್ರಮಾಟಿಕ್‌ ಆರ್ಟ್‌’ ನಿಂದ ಅಭಿನಯದ ತರಬೇತಿ ಪಡೆದ ಈಕೆ, ಮೊದಲು ಕನ್ನಡದಲ್ಲಿ 2019ರಲ್ಲಿ `ಬೀರಬಲ್ ಟ್ರೈಲಾಜಿ’ ಚಿತ್ರದಿಂದ ಬೆಳ್ಳಿತೆರೆಗೆ ಕಾಲಿಟ್ಟರು. ಈಕೆಯ ಕೆರಿಯರ್‌ ಗ್ರಾಫ್‌ ಮೇಲೇರಿದ್ದು 2023ರಲ್ಲಿ ಈಕೆ ನಟಿಸಿದ `ಸಪ್ತಸಾಗರದಾಚೆ ಎಲ್ಲೋ’ ಸೈಡ್‌‌ಆಗಿ ರಕ್ಷಿತ್‌ ಶೆಟ್ಟಿ ಜೊತೆ, ಪ್ರಿಯಾ ಪಾತ್ರದಲ್ಲಿ ಯುವಜನತೆಯ ಮನಗೆದ್ದರು, ನಂತರ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ! ತನ್ನ ಸಶಕ್ತ ನಟನೆಯಿಂದ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರರಾದ ರುಕ್ಮಿಣಿ, ಈ ಚಿತ್ರಕ್ಕಾಗಿ ಸರ್ವಶ್ರೇಷ್ಠ ಕನ್ನಡ ಫಿಲ್ಮ್ ಫೇರ್‌ ಕ್ರಿಟಿಕ್ಸ್ ಅವಾರ್ಡ್‌ ಗಿಟ್ಟಿಸಿದರು.

ರುಕ್ಮಿಣಿಯ ಮುಂದಿನ ಕನ್ನಡ ಚಿತ್ರಗಳು ಒಂದರ ಮೇಲೊಂದು ಹಿಟ್‌ ಎನಿಸಿತು. ರಕ್ಷಿತ್‌ ಶೆಟ್ಟಿ ಜೊತೆ `ಸಪ್ತಸಾಗರದಾಚೆ ಎಲ್ಲೋ,’ ಗಣೇಶ್‌ ಜೊತೆ `ಬಾನ ದಾರಿಯಲ್ಲಿ,’ ಶ್ರೀಮುರಳಿ ಜೊತೆ `ಬಫೀರಾ,’ ಶಿವಣ್ಣ ಜೊತೆ `ಭೈರತಿ ರಣಗಲ್’ ಮುಂತಾದ ಉತ್ತಮ ಹೆಸರು ತಂದುಕೊಟ್ಟವು.

ಕನ್ನಡದಲ್ಲಿ ಮಿಂಚುತ್ತಲೇ ನೆರೆ ಭಾಷೆಯ ತಮಿಳಿನಲ್ಲಿ ರುಕ್ಕು ಪಾತ್ರದಲ್ಲಿ `ಏಸ್‌’ ಚಿತ್ರದಲ್ಲಿ ವಿಜಯ್‌ ಸೇತುಪತಿ ಹಾಗೂ .. ಮುರುಗದಾಸ್‌ ರಂಥ ದಕ್ಷ ನಿರ್ದೇಶಕರ ಗರಡಿಯಲ್ಲಿ ಶಿವ ಕಾರ್ತಿಕೇಯನ್‌ ಜೊತೆ `ಮದರಾಸಿ’ ಚಿತ್ರಗಳಲ್ಲಿ ಸೈ ಎನಿಸಿಕೊಂಡರು. ಇದರ ಮುಂದಿನ ಹೆಜ್ಜೆಯಾಗಿ ನಿಖಿಲ್ ಸಿದ್ಧಾರ್ಥ್‌ ಜೊತೆ `ಅಪ್ಪುಡೋ ಇಪ್ಪುಡೋ ಎಪ್ಪುಡೋ’ ತೆಲುಗು ಚಿತ್ರರಂಗದಲ್ಲೂ ದಾಂಗುಡಿ ಇಟ್ಟಾಯಿತು. ಸೊಗಸುಗಾತಿ ರುಕ್ಮಿಣಿ ಕೇವಲ ತನ್ನ ಸಿನಿಮಾಗಳಿಂದಾಗಿ ಮಾತ್ರ ಖ್ಯಾತರಲ್ಲ, ಬದಲಿಗೆ ತಮ್ಮ ಸೊಬಗಿನ ಸೌಂದರ್ಯದಿಂದ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ `ನ್ಯಾಶನಲ್ ಕ್ರಶ್‌’ ಆಗಿಯೇ ಗುರುತಿಸಿಕೊಂಡಿದ್ದಾರೆ!

ಇತ್ತೀಚೆಗೆ ಗೃಹಶೋಭಾಳೊಂದಿಗೆ ಮನಬಿಚ್ಚಿ ಮಾತನಾಡಿದ ರುಕ್ಮಿಣಿ ವಸಂತ್‌, ತಮ್ಮ ಇದುವರೆಗಿನ ನಟನೆಯ ಕೆರಿಯರ್‌, `ಕಾಂತಾರ ಚ್ಯಾಪ್ಟರ್‌-1′ ಚಿತ್ರದಲ್ಲಿನ ರಾಣಿ ಕನಕವತಿಯ ವಿಶಿಷ್ಟ ಪಾತ್ರ ಮತ್ತು ಆ ಚಿತ್ರದ ಶೂಟಿಂಗ್‌ ಅನುಭವ, 15ರ ಹರೆಯದಲ್ಲೇ ಅಭಿನಯದ ಅಭಿರುಚಿ ಬೆಳೆಸಿಕೊಂಡಿದ್ದು, ತಮ್ಮ ನಟನೆಯ ಜರ್ನಿ, ಮನೆಯವರು ನೀಡಿದ ಸಹಕಾರ, ತಾನು ಯಾವ ಪರಿವಾರಕ್ಕೆ ಸೇರಿದರು, ಮುಂದೆ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಬೇಕೆಂದಿರುವ ಆಸಕ್ತಿ…. ಇತ್ಯಾದಿ ಎಲ್ಲದರ ಬಗ್ಗೆ ಹೇಳಿಕೊಂಡಿದ್ದಾರೆ. ಅವರೊಂದಿಗಿನ ಮಾತುಕಥೆಯ ಸಂಕ್ಷಿಪ್ತ ರೂಪ :

ನನಗಂತೂ ಈ ಚಿತ್ರದ ತರಬೇತಿ ಒಂದು ಯಾತ್ರೆಯೇ ಸರಿ! `ಕಾಂತಾರ ಚ್ಯಾಪ್ಟರ್‌-1′ ನನ್ನ ಪಾಲಿಗೆ ವೆರಿ ವೆರಿ ಸ್ಪೆಷಲ್! ಏಕೆಂದರೆ ಈ ಚಿತ್ರ ನನಗಂತೂ ಯಾವುದೇ ಆಧ್ಯಾತ್ಮಿಕ ತರಬೇತಿಗಿಂತಲೂ ಖಂಡಿತಾ ಕಡಿಮೆಯಲ್ಲ. ಈ ಚಿತ್ರ ನನ್ನ ಮಟ್ಟಿಗೆ ಟ್ರೇನಿಂಗ್‌ ಯಾತ್ರೆಯೇ ನಿಜ, ಏಕೆಂದರೆ ಈ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ನಾನು ಬಹಳ ಬಹಳ ವಿಷಯಗಳನ್ನು ಕಲಿತಿದ್ದೇನೆ. ಕತ್ತಿವರಸೆ, ಕುದುರೆ ಸವಾರಿ, ವೈವಿಧ್ಯಮಯ ನೃತ್ಯಗಳು ಇತ್ಯಾದಿ. ಈ ಚಿತ್ರದ ಹಲವಾರು ಸನ್ನಿವೇಶಗಳು ನಿಜಕ್ಕೂ ಬಹಳ ಕಷ್ಟಕರ ಆಗಿದ್ದವು, ಅಷ್ಟೇ ಸ್ಮರಣೀಯ ಕೂಡ! ಈ ಚಿತ್ರದಲ್ಲಿ ಕೆಲಸ ಮಾಡುವಾಗ ಪ್ರತಿ ದಿನ ಏನಾದರೊಂದು ಹೊಸತನ್ನು ಕಲಿಯುತ್ತಿದ್ದೆ. ಈ ಚಿತ್ರದ ಲೇಖಕ, ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ ಮಹಾ ಮಲ್ಟಿ ಟ್ಯಾಲೆಂಟೆಡ್‌! ಅವರಂತೂ ನನ್ನ ಪಾಲಿಗೆ ಅತಿ ಅದ್ಭುತ! ಏಕೆಂದರೆ ಶೂಟಿಂಗ್‌ ಸಮಯದಲ್ಲಿ ಕೇವಲ ಲೇಖಕ, ನಿರ್ದೇಶಕನಾಗಿರದೆ, ನಾಯಕ ನಟನಾಗಿ ಎಲ್ಲರನ್ನೂ ಸರಿದೂಗಿಸಿಕೊಳ್ಳುತ್ತಾ, ಇಡೀ ಚಿತ್ರದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗುವುದು ಖಂಡಿತಾ ಸುಲಭದ ಮಾತಲ್ಲ.

ಇವೆಲ್ಲದಕ್ಕೂ ಮೀರಿದ್ದು ರಿಷಬ್ ಒಬ್ಬ ಮಾನವೀಯ ಕಳಕಳಿಯುಳ್ಳ ವ್ಯಕ್ತಿ. ಬಲು ಹೆಚ್ಚೇ ಡೌನ್‌ ಟು ಅರ್ಥ್‌ ಎನ್ನಬಹುದು. ಹೀಗಾಗಿ ನಟಿಸುವಾಗ ಇವರ ಬಳಿ ನಾನು ಬಹಳಷ್ಟು ವಿಷಯ ಕಲಿತೆ. ನಾನು ಈ ಚಿತ್ರದಲ್ಲಿ ರಾಜಕುಮಾರಿ ಕನಕವತಿಯ ಪಾತ್ರ ನಿಭಾಯಿಸಿದ್ದೇನಿ, ಅವಳಂತೂ ಮಹಾ ಸಾಹಸಿ, ದೊಡ್ಡ ಕಲಾಪ್ರೇಮಿ. ಇದು ನಿಜಕ್ಕೂ ನನಗೆ ಥ್ರಿಲ್ಲಿಂಗ್‌, ಚಾಲೆಂಜಿಂಗ್‌ ಪಾತ್ರವಾಗಿತ್ತು. ಅಷ್ಟೇ ಇಂಟರೆಸ್ಟಿಂಗ್‌ ಸಹ. ಈ ಎಲ್ಲಾ ಕಾರಣಗಳಿಂದ ಈ ಚಿತ್ರ ನನ್ನ ಪಾಲಿಗೆ ವೆರಿ ವೆರಿ ಸ್ಪೆಷಲ್!

ನನ್ನ ಕುಟುಂಬವೇ ನನ್ನ ಧೀಶಕ್ತಿ. ನಟನೆಯ ಜೊತೆ ಜೊತೆಯಲ್ಲೇ ಕಲೆ ಮತ್ತು ಸೇವಾ ಮನೋಭಾವ ನನಗೆ ಕೌಟಂಬಿಕ ಬಳುವಳಿ ಎನ್ನಬಹುದು. ನನ್ನ ತಂದೆ ಕರ್ನಲ್ ವಸಂತ್‌ ವೇಣುಗೋಪಾಲ್‌, ಭಾರತೀಯ ಸೇನೆಯಲ್ಲಿ ಸಾಹಸ, ಧೈರ್ಯ, ಬಲಿದಾನಗಳಿಗಾಗಿ ಅಶೋಕಚಕ್ರ ಪಡೆದರು. ನನ್ನ ತಾಯಿ ಸುಭಾಷಿಣಿ ವಸಂತ್‌ ಒಬ್ಬ ನುರಿತ ಭರತನಾಟ್ಯ ಕಲಾವಿದೆ. ಅಮ್ಮ ಕಲೆಯ ಕುರಿತಾಗಿ ತೋರುತ್ತಿದ್ದ ಉಪಾಸನೆಯೇ ನನ್ನನ್ನು ನಟನಾವೃತ್ತಿಗೆ ಕರೆತಂದಿತು. ನನ್ನ ತಾಯಿ ಮೊದಲಿನಿಂದಲೂ ಬಹಳ ಸ್ಟ್ರಿಕ್ಟ್, ಕಲೆನಾಟ್ಯ ಅಂದ್ರೆ ಅದರಲ್ಲಿ ಜೀವವಿಟ್ಟವರು. ಅವರ ಈ ಅಚಲ ಶ್ರದ್ಧೆಯೇ ನನ್ನನ್ನು ಕಲೆಯತ್ತ ಆಕರ್ಷಿಸಿತು, ಹೀಗಾಗಿ 15ರ ಹರೆಯದಿಂದಲೇ ನಾನು ನಟನೆ, ಕಲೆಯತ್ತ ಮಾರುಹೋದೆ!

ನಟನೆಯ ಆರಂಭ ಬಲು ಮಜಾ!

ನಟನೆಗೆ ಅಂತ ನಾನು ಯಾವುದೇ ಕೋರ್ಸ್‌ ಸೇರಿ ಕಲಿತವಳಲ್ಲ. ಆದರೆ 15ರ ಹರೆಯದಲ್ಲೇ ನಟನೆಯತ್ತ ಸಂಪೂರ್ಣ ಸಮರ್ಪಿತೆ. ಅಮ್ಮನ ದೆಸೆಯಿಂದ ನಾನೂ ನಟನೆಯಲ್ಲಿ ಏನಾದರೊಂದು ಅದ್ಭುತ ಸಾಧಿಸಲೇಬೇಕು ಎಂದು ನಿರ್ಧರಿಸಿದ್ದೆ. ಅದರಲ್ಲಿ ತರಬೇತಿ ಅಂತ ಏನೂ ಪಡೆಯದ ಕಾರಣ, ಮುಂದೆ ಹೇಗೆ ನನ್ನ ನಟನಾ ಕೆರಿಯರ್‌ ರೂಪಿಸಿಕೊಳ್ಳುವುದೋ ತಿಳಿಯಲಿಲ್ಲ.

ಆಗ ನಾನು ಅಮ್ಮನ ಬಳಿ, ಮನೆಯಲ್ಲೇ ಇದ್ದೂ ಇದ್ದು ನನಗೆ ಬಹಳ ಬೋರ್‌ ಆಗಿದೆ. ಏನಾದರೂ ಹೊಸತನ್ನು ಮಾಡಬೇಕೆನಿಸುತ್ತಿದೆ. ನಾಟಕ, ನಟನೆಯಲ್ಲಿ ಅಭಿರುಚಿ ಇರುವುದರಿಂದ ನನ್ನನ್ನು ಯಾವುದಾದರೂ ಥಿಯೇಟರ್‌ ಕ್ಲಾಸಿಗೆ ಸೇರಿಸು, ಎಂದೆ. ಅಮ್ಮನಿಗೆ ನನ್ನ ಮಾತು ಇಷ್ಟವಾಯ್ತು. ಹೀಗಾಗಿ ಅವರು ನನ್ನನ್ನು ಥಿಯೇಟರ್‌ ಕ್ಲಾಸಿಗೆ ಅಡ್ಮಿಷನ್‌ ಮಾಡಿಸಿದರು.

ನಾನು ಮೊದಲಿನಿಂದಲೂ ಶಾಸ್ತ್ರೀಯ ಬ್ಯಾಲೆ ಡ್ಯಾನ್ಸ್ ಹಾಗೂ ಭರತನಾಟ್ಯದಲ್ಲಿ ಪರಿಣತಿ ಹೊಂದಿದ್ದೆ. ಹೀಗಾಗಿ ನಟನೆಯ ಕಲೆಯಲ್ಲಿ ಬೆರೆತು ಹೋಗುವುದು ನನಗೆ ಸುಲಭವಾಯ್ತು. ನೃತ್ಯ ಮಾಡಬೇಕಾದ ಮುದ್ರೆಗಳು, ಹಾವಭಾವಗಳಿಂದ ನಾನು ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯಲ್ಲಿ ನುರಿತವಳಾಗಿದ್ದೆ. ಆದರೆ ವೇದಿಕೆ ಏರಿದಾಗ, ನಟನೆಗೆ ಶಬ್ದಗಳ ಜೋಡಣೆ ಆಗುತ್ತದೆ. ಡ್ರಾಮಾ ಥಿಯೇಟರ್‌ ನಲ್ಲಿ ನಟನೆ ಕಲಿತ ನಂತರ ಭಾವನೆಗಳನ್ನು ಶಬ್ದಗಳ ಮುಖಾಂತರ ಮುಖದಲ್ಲಿ ಅಭಿವ್ಯಕ್ತಪಡಿಸುತ್ತಾ ನಟಿಸಬೇಕಾದ ಕಲೆ, ಈ ರೀತಿ ಕರಗತವಾಯಿತು. ಮನದಾಳದ ಮಾತನ್ನು ಬಾಯಿ ಮುಖಾಂತರ ಹೊರಗೆಡವಿ, ಮುಖದ ಚಲನೆಯ ಕಾರಣ ಹಾವಭಾವಗಳಿಂದ ಶಬ್ದಗಳನ್ನು ಮೇಳೈಸುವ ಈ ಕಲೆ, ಅಭಿನಯಕ್ಕೆ ಹೊಸ ಆಯಾಮವನ್ನೇ ಕೊಟ್ಟಿತು, ಇದನ್ನು ರಂಗಸಜ್ಜಿಕೆ ಏರಿ ಕಲಿತೆ.

“ಥಿಯೇಟರ್‌ ಕ್ಲಾಸಿನಲ್ಲಿ ಅಭಿನಯದ ಆರಂಭಿಕ ಶಿಕ್ಷಣದ ನಂತರ, ನಾನು ಲಂಡನ್ನಿನ ಅಭಿನಯ ಇನ್‌ ಸ್ಟಿಟ್ಯೂಟ್‌ ನಲ್ಲಿ ದಾಖಲಾತಿ ಪಡೆದೆ. ಅಲ್ಲಿ ನಾನು ಥಿಯೇಟರ್‌, ಮ್ಯೂಸಿಕ್‌ ಥಿಯೇಟರ್‌ ಹಾಗೂ ಫಿಲ್ಮ್ ಅಧ್ಯಯನವನ್ನೂ ನಡೆಸಿದೆ. ಅಲ್ಲಿ ಪೂರ್ತಿ ತರಬೇತಿ ನಡೆದ ನಂತರ, ನಾನು ಬೆಂಗಳೂರಿಗೆ ವಾಪಸ್ಸು ಹೊರಟು ಬಂದೆ. ಒಬ್ಬ ಉತ್ತಮ ನಟಿ ಎನಿಸಿಕೊಳ್ಳಬೇಕು ಎಂಬುದೇ ನನ್ನ ಹಿರಿಯಾಸೆ, ಕನಸು! ಏನೇ ಆಗಲಿ, ಪ್ರೇಕ್ಷಕರು ತುಂಬುಮನದಿಂದ ಸೈ ಎನ್ನಬೇಕು ಅಂಥ ಪರಿಪಕ್ವ ನಟನೆ ನೀಡಬೇಕೆಂಬುದೇ ನನ್ನ ಹೆಬ್ಬಯಕೆ.

Rukmini-2

ಮೊದಲ ಚಿತ್ರ `ಬೀರಬಲ್ ಟ್ರೈಲಾಜಿ

“ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಸೆಟಲ್ ಆಗುತ್ತಿದ್ದಂತೆ ನನ್ನ ಏಕೈಕ ಗುರಿ ಎಂದರೆ ಕನ್ನಡ ಚಿತ್ರಗಳಲ್ಲಿ ಪಾತ್ರದ ಅನ್ವೇಷಣೆ. ಇದಕ್ಕಾಗಿ ನಾನು 1-2 ಕಡೆ ಆಡಿಶನ್‌ ಸಹ ಕೊಟ್ಟಿದ್ದೆ. ಅದೇ ಸಮಯದಲ್ಲಿ ನಾನು ಮಾಡೆಲಿಂಗ್‌ ಸಹ ಮಾಡುತ್ತಿದ್ದೆ. ಆಗ ನಾನು ಒಬ್ಬ ಫಿಲ್ಮ್ ಕೋ ಆರ್ಡಿನೇಟರ್‌ ರನ್ನು ಭೇಟಿಯಾದೆ. ಅವರ ಚಿತ್ರದಲ್ಲಿ ನಟಿಸಲು ಆಸಕ್ತಿ ಇದೆ ಎಂದು ಹೇಳಿದೆ. ಹೀಗಾಗಿ ನನಗೆ `ಬೀರಬ್‌ ಟ್ರೈಲಾಜಿ’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು. ಇದ ನನ್ನ ಮೊಟ್ಟ ಮೊದಲ ಚಿತ್ರವಾದ್ದರಿಂದ, ಅಭಿನಯಕ್ಕೆ ನನಗೆ ಸಿಕ್ಕ ಪ್ರಪ್ರಥಮ ಅವಕಾಶವಾದ್ದರಿಂದ, ಖುಷಿ ಜೊತೆ ತುಂಬ ಟೆನ್ಶನ್‌ ಗಾಬರಿಗಳಿದ್ದವು.

“ಆದರೆ ನನಗೆ ಅಸಲಿ ಐಡೆಂಟಿಟಿ ಸಿಕ್ಕಿದ್ದು 2023ರ `ಸಪ್ತಸಾಗರದಾಚೆ ಎಲ್ಲೋ’ ಚಿತ್ರದಿಂದ ಎನ್ನಬಹುದು. ಈ ಚಿತ್ರಕ್ಕಾಗಿ ನನಗೆ ಸರ್ವಶ್ರೇಷ್ಠ ನಟಿ (ಕ್ರಿಟಿಕ್ಸ್) ಎಂದು ಕನ್ನಡ ಚಿತ್ರಗಳ ಸರಣಿಯ ಫಿಲ್ಮ್ ಫೇರ್‌ ಅವಾರ್ಡ್‌ ಸಹ ಸಿಕ್ಕಿತು. ಈ ಚಿತ್ರದ ಕಾರಣದಿಂದಲೇ ನನಗೆ `ಕಾಂತಾರ ಚ್ಯಾಪ್ಟರ್‌-1′ ಚಿತ್ರದ ಅಮೂಲ್ಯ ಅವಕಾಶ ದೊರಕಿದ್ದು! ಅಸಲಿಗೆ ನಾನೆಂದೂ ಅತಿ ಯಶಸ್ವಿ ಚಿತ್ರ `ಕಾಂತಾರ`ದ ಪ್ರೀಕ್ವೆಲ್ ‌ಗೆ ನಾಯಕಿಯಾಗಿ ಆಯ್ಕೆಯಾಗುವೆ ಎಂದು ಎಣಿಸಿದವಳೇ ಅಲ್ಲ! ಆದರೆ ಆ ಕನಸು ನನಸಾದಾಗ ನಿಜಕ್ಕೂ ನಾನು ಸಪ್ತಸಾಗರದಾಚೆ ಎಲ್ಲೋ ತೇಲಿಹೋಗಿದ್ದೆ!

“ಅಸಲಿಗೆ `ಸಪ್ತಸಾಗರದಾಚೆ’ ಚಿತ್ರದ ನಿರ್ಮಾಪಕರಾದ ರಕ್ಷಿತ್‌ ಶೆಟ್ಟಿ, `ಕಾಂತಾರ’ದ ರಿಷಬ್‌ ಶೆಟ್ಟಿ ಇಬ್ಬರೂ ಪ್ರಾಣಸ್ನೇಹಿತರು. ಅವರಿಬ್ಬರೂ ಒಟ್ಟಿಗೆ ಆ ಚಿತ್ರದ ಪ್ರೀಮಿಯರ್‌ ಗೆ ಬಂದಿದ್ದರು. ಅಲ್ಲಿ ನನ್ನ ನಟನೆ ಕುರಿತು ಎಲ್ಲೆಡೆ ಉತ್ತಮ ವಿಮರ್ಶೆ ವ್ಯಕ್ತವಾಗಿತ್ತು. ಹೀಗಾಗಿ ರಿಷಬ್ ಶೆಟ್ಟಿ ನನ್ನನ್ನು `ಕಾಂತಾರ ಚ್ಯಾಪ್ಟರ್‌-1′ ಚಿತ್ರಕ್ಕೆ ಆರಿಸಿಕೊಂಡರು.

“ಈ ಚಿತ್ರದಲ್ಲಿ ನನ್ನ ನಟನೆ ದೊಡ್ಡ ಸವಾಲೇ ಸರಿ, ಇದರಿಂದ ನನ್ನ ಕೆರಿಯರ್‌ ಗೆ ದೊಡ್ಡ ಟರ್ನಿಂಗ್‌ ಪಾಯಿಂಟ್‌ ಎಂದರೂ ಆಶ್ಚರ್ಯವಿಲ್ಲ. ಹೀಗಾಗಿ ಈ ಚಿತ್ರದ ಯಶಸ್ಸಿನ ಮೇಲೆ ನನ್ನ ಭವಿಷ್ಯ ನಿಂತಿದೆ ಎಂದರೆ ಉತ್ಪ್ರೇಕ್ಷೆಯಲ್ಲ!

ಫಿಲ್ಮ್ ಇಂಡಸ್ಟ್ರಿಯಲ್ಲಿ ನನಗೆ ಯಾರೂ ಗಾಡ್ಫಾದರ್ಇಲ್ಲ!

“ಇಂದು ನಾನು ಏನೇ ಪ್ರತಿಭಾವಶಾಲಿ ಎನಿಸಿದ್ದರೂ ಅದು ನನ್ನ ತಾಯಿ ಹಾಗೂ ನನ್ನ ಕುಟುಂಬದ ಕೊಡುಗೆ ಎಂದೇ ಹೇಳಬಯಸುತ್ತೇನೆ. ನನ್ನ ತಾಯಿಯ ಕಾರಣದಿಂದಲೇ ಇಂದು ನಾನು ಇಷ್ಟು ಸಾಮರ್ಥ್ಯದಿಂದ ನನ್ನ ಟ್ಯಾಲೆಂಟ್‌ ಪ್ರದರ್ಶಿಸಲು, ನಟನೆಯನ್ನು ಕೆರಿಯರ್‌ ಆಗಿಸಿಕೊಳ್ಳಲು ಅಮ್ಮ ಸಹಕರಿಸಿದ್ದಾರೆ. ಚಿತ್ರರಂಗಕ್ಕೆ ನಾನು ಹೊಸಬಳಾದ್ದರಿಂದ ಇಲ್ಲಿ ನನಗೆ ಯಾರೂ ಗಾಡ್‌ ಫಾದರ್‌ ಇಲ್ಲ! ಇಂದು ನಾನು ಏನೇ ಸಾಧಿಸಿದ್ದರೂ, ಅದು ನನ್ನ ಸ್ವಂತ ಪ್ರತಿಭೆಯಿಂದ ಮಾತ್ರ! ನನ್ನ ಪ್ರಪ್ರಥಮ ಶುಭಚಿಂತಕರು, ಫ್ರೆಂಡ್‌, ಫಿಲಾಸಫರ್‌, ಗೈಡ್‌ ಎಂದರೆ ಅದು ನನ್ನ ಅಮ್ಮ! ನಟನೆಯ ಕ್ಷೇತ್ರದಲ್ಲಿ ನಾನೇನೂ ರಾತ್ರೋರಾತ್ರಿ ಸ್ಟಾರ್‌ ಆಗಿ ಬೆಳಗಲಿಲ್ಲ, ಇಲ್ಲಿ ನನ್ನ ಪ್ರಗತಿಪಥ ಸ್ಪೀಡ್‌ ಅಲ್ಲ, ತುಸು ಸ್ಲೋ ಎಂದರೂ ಅಡ್ಡಿ ಇಲ್ಲ. ಆದರೆ ಪ್ರತಿ ಚಿತ್ರದಿಂದಲೂ ನಾನು ಒಂದಲ್ಲ ಒಂದು ಹೊಸ ವಿಷಯ ಕಲಿಯುತ್ತಲೇ ಇದ್ದೇನೆ. ಈ ರೀತಿ ಸ್ಲೋ ಸ್ಟಡಿಯಾಗಿ ನಾನು ಯಶಸ್ಸಿನ ಮೆಟ್ಟಿಲೇರುತ್ತಿದ್ದೇನೆ, `ಕಾಂತಾರ ಚ್ಯಾಪ್ಟರ್‌-1′ ಚಿತ್ರದ ಅಖಂಡ ಯಶಸ್ಸೇ ಇದಕ್ಕೆ ಸಾಕ್ಷಿ.

ದಕ್ಷಿಣ ಚಿತ್ರರಂಗದಲ್ಲಿ ನಾಯಕಿಯ ಕೆಲಸದ ಕುರಿತಾಗಿ ಸಂಬಂಧಿಸಿದ ಹಲವು ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆ….

ದಕ್ಷಿಣದಲ್ಲಿ ಅಂದ್ರೆ ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ದುಡಿಯುತ್ತಿದ್ದೇನೆ. ಇದರ ಹೊರತಾಗಿ ತಮಿಳು, ತೆಲುಗಿನ ಚಿತ್ರಗಳಲ್ಲೂ ನಟಿಸಿದ್ದೇನೆ. ಬೇರೆಯವರ ಅನುಭವ ಹೇಗೋ ಏನೋ, ನನಗಂತೂ ಈ 3 ಚಿತ್ರರಂಗಗಳಲ್ಲೂ ಯಾವುದೇ `ಕಹಿ ಅನುಭವ’ ಆಗಿಲ್ಲ! ಆ ಕಾರಣದಿಂದ ಅಭಿನಯದ ಕೆರಿಯರ್‌ ಬೇಡ ಎನ್ನುವಂಥ ಸೀರಿಯಸ್‌ ಆಲೋಚನೆಗಳು ನನಗೆ ಎಂದೂ ಬಂದದ್ದೇ ಇಲ್ಲ.

ನನ್ನ ಅಭಿಪ್ರಾಯದಲ್ಲಿ, ನಾವು ಯಾವುದೇ ಚಿತ್ರರಂಗದಲ್ಲಿರಲಿ, ನೀವು ಯಾವ ಷರತ್ತುಗಳ ಮೇಲೆ ಆ ಚಿತ್ರಗಳಲ್ಲಿ ತೊಡಗಿಸಿಕೊಳ್ಳಲು ಒಪ್ಪಿಕೊಂಡಿದ್ದೀರಿ ಎನ್ನುವುದನ್ನು ಅವಲಂಬಿಸಿದೆ. ಏನ್ನನ್ನು ಸ್ವೀಕರಿಸಿದಿರಿ, ಏನನ್ನು ಬಿಟ್ಟಿರಿ ಎಂಬುದು ನಿಮ್ಮನ್ನೇ ಅವಲಂಬಿಸಿದೆ. ಒಳ್ಳೆಯ ಕೆಟ್ಟ ಜನ ಅಂಬೋರು ಸಮಾಜದ ಎಲ್ಲಾ ಕಡೆ ಇದ್ದೇ ಇರುತ್ತಾರೆ. ನೀವು ಅವರ ಜೊತೆ ಹೇಗೆ ವ್ಯವಹರಿಸುತ್ತಿದ್ದೀರಿ ಅನ್ನೋದು ನಿಮ್ಮನ್ನೇ ಅವಲಂಬಿಸಿದೆ. ನಾನು ಯಾವುದೇ ಹೊಸ ಕೆಲಸ ಒಪ್ಪಿಕೊಳ್ಳುವ ಮುನ್ನ ಅಲ್ಲಿನ ವಾತಾವರಣ ನೋಡುತ್ತೇನೆ, ಯಾವ ಜನರ ಜೊತೆ ನಾನು ಕೆಲಸ ಮಾಡಬಲ್ಲೇ ಎಂಬ ಆತ್ಮವಿಶ್ವಾಸ ಮೂಡುತ್ತದೋ ಅಂಥದ್ದನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಎಲ್ಲವೂ ಸರಿ ಅನ್ನಿಸಿದಾಗ ಮಾತ್ರ ಮುಂದುವರಿಯುತ್ತೇನೆ. ದಕ್ಷಿಣ ಚಿತ್ರರಂಗ ನನಗೆ ಬಹಳಷ್ಟು ಕಟ್ಟಿಕೊಟ್ಟಿದೆ….. ಹೆಸರು, ಹಣ, ಕೀರ್ತಿ, ಯಶಸ್ಸು…. ಎಲ್ಲ! ನನಗಂತೂ ದಕ್ಷಿಣ ಚಿತ್ರರಂಗ ವರದಾನವೇ ಸರಿ.

ಬಾಲಿವುಡ್ ಕಲಾವಿದರು ಹಾಗೂ ದಕ್ಷಿಣದ ಕಲಾವಿದರು ಒಂದೇ ಚಿತ್ರದಲ್ಲಿ ನಟಿಸುವುದು, ಭಾರತೀಯ ಚಿತ್ರರಂಗಕ್ಕೆ ಹೊಸ ಕ್ರಾಂತಿಯೇ ಸರಿ. ಕುರಿತಾಗಿ ಹೇಳಿ….

“ವೈಯಕ್ತಿಕವಾಗಿ ನನ್ನನ್ನು ಕೇಳಿದರೆ, ನಾನು ಸ್ವತಃ ಬಾಲಿವುಡ್‌ ಚಿತ್ರಗಳ ಪ್ರೇಮಿ. ಮುಂದೆ ನಾನು ಹಿಂದಿ ಚಿತ್ರಗಳಲ್ಲಿ ದುಡಿದು ಭಾರತದಾದ್ಯಂತ ಫೇಮಸ್‌ ಆಗಬೇಕು ಎಂಬ ಆಸೆ ಇದ್ದೇ ಇದೆ. ನನ್ನ ಹಾಗೆಯೇ ದಕ್ಷಿಣದ ಅನೇಕ ನಾಯಕಿಯರು ಬಾಲಿವುಡ್‌ ನಲ್ಲಿ ನಟಿಸಲು ಬಯಸುತ್ತಾರೆ. ಹಿಂದಿ ಚಿತ್ರರಂಗದ ಅನೇಕ ಕಲಾವಿದರು ಇತ್ತೀಚೆಗೆ ದಕ್ಷಿಣದೊಂದಿಗೆ ಬಲು ನಿಕಟ ಸಂಪರ್ಕದಲ್ಲಿದ್ದಾರೆ. ಹಾಗೆ ನೋಡಿದರೆ ಬಾಲಿವುಡ್‌ ಹಾಗೂ ದಕ್ಷಿಣದ ಕಲಾವಿದರು ಒಂದೇ ಚಿತ್ರದಲ್ಲಿ ನಟಿಸುವುದು ಖಂಡಿತಾ ಭಾರತೀಯ ಚಿತ್ರರಂಗಕ್ಕೆ ಹೊಸ ಕ್ರಾಂತಿಕಾರಿ ಕೊಡುಗೆ ಆದೀತು. ನಮ್ಮ ದಕ್ಷಿಣದಲ್ಲಿ ಯಾರಿಗೂ ಯಾರಿಂದಲೂ ಅಸುರಕ್ಷತೆಯ ಭಾವನೆ ಇಲ್ಲವೇ ಇಲ್ಲ! ಬದಲಿಗೆ ಪರಸ್ಪರ ಗೌರವಾದರಗಳಿವೆ. ಹೀಗಾಗಿಯೇ ದಕ್ಷಿಣದವರು ಬಾಲಿವುಡ್‌ ನಲ್ಲಿ ಹಾಗೂ ಬಾಲಿವುಡ್ ನವರು ದಕ್ಷಿಣದಲ್ಲಿ ದುಡಿಯುತ್ತಿದ್ದಾರೆ. ಚಿತ್ರೋದ್ಯಮಕ್ಕೆ ಇದು ಖಂಡಿತಾ ಉತ್ತಮ ತಿರುವು ಎಂದೇ ಭಾವಿಸುತ್ತೇನೆ.

1000720463

ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಲು ಬಯಸುತ್ತೀರಾ?

ಹೌದು, ಖಂಡಿತಾ ಅದು ನನ್ನ ಹಿರಿಯಾಸೆ! ನನಗೆ ಮೊದಲಿನಿಂದಲೂ ಹಿಂದಿ ಸಿನಿಮಾ ನೋಡೋದು ದೊಡ್ಡ ಕ್ರೇಜ್‌. ಮುಂದೆ ನಾನು ಹಿಂದಿ ಚಿತ್ರರಂಗದಲ್ಲಿ ನಟಿಸಬೇಕೆಂಬ ಹೆಬ್ಬಯಕೆ ಇದೆ. ಸದ್ಯಕ್ಕಂತೂ ನನಗೆ ಯಾವುದೇ ಹಿಂದಿ ಚಿತ್ರದ ಆಫರ್‌ ಬಂದಿಲ್ಲ. ಆದರೆ ಭವಿಷ್ಯದಲ್ಲಿ ಅದು ಖಂಡಿತಾ ನಿಜ ಆಗಲಿದೆ. ಒಂದು ಸಲ ನಿರ್ದೇಶಕ ಕರಣ್‌ ಜೋಹರ್‌ ನನ್ನ `ಸಪ್ತಸಾಗರದಾಚೆ’ ಚಿತ್ರ ನೋಡಿ ಬಹಳ ಹೊಗಳಿದ್ದರು. ಅವರ ಚಿತ್ರಗಳಿಂದ ನಾನು ಬಹಳ ಪ್ರಭಾವಿತೆ. ಅದರಲ್ಲೂ ಅವರ ರೊಮ್ಯಾಂಟಿಕ್‌ ಚಿತ್ರಗಳೆಂದರೆ ನನಗೆ ಅತಿ ಹುಚ್ಚು. ಅವರ ಮುಂದಿನ ರೊಮ್ಯಾಂಟಿಕ್‌ ಚಿತ್ರಗಳ ನಾಯಕಿ ನಾನಾಗಬೇಕೆಂಬುದೇ ನನ್ನ ಮುಂದಿನ ಕನಸು!

`ಕಾಂತಾರ ಚ್ಯಾಪ್ಟರ್‌-1′ ನಂತರ ನಿಮ್ಮ ಮುಂದಿನ ಚಿತ್ರಗಳ ಬಗ್ಗೆ ಹೇಳಿ.

ಈ ಚಿತ್ರ ಮುಗಿದು ಅಖಂಡ ಯಶಸ್ಸು ಕಂಡಿದ್ದು ಈಗ ಎಲ್ಲರೂ ಬಲ್ಲ ವಿಷಯ. ಇದರ ನಂತರ ನನ್ನ ಬಳಿ ಹಲವು ಪ್ರಾಜೆಕ್ಟ್ಸ್ ಇವೆ.  ಕೆ.ಜಿ.ಎಫ್ ಖ್ಯಾತಿವೆತ್ತ ಯಶ್‌ ರ ಜೊತೆ `ಟಾಕ್ಸಿಕ್‌’ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ ಹಾಗೂ ತೆಲುಗಿನ  ಜೂನಿಯರ್‌ ಜೊತೆ ನಟಿಸುತ್ತಿದ್ದೇನೆ. ಇದನ್ನು ಬಿಟ್ಟು ಇನ್ನೂ ಕೆಲವು ಚಿತ್ರಗಳ ಮಾತುಕಥೆ ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ `ಯೂಥ್ಕ್ರಶ್‌’ ಆಗಿದ್ದೀರಿ. ಬಗ್ಗೆ ನಿಮ್ಮ ಅನಿಸಿಕೆ…..?

ಸೋಶಿಯಲ್ ಮೀಡಿಯಾದಲ್ಲಿ ನನಗೆ `ಯೂಥ್‌ ಕ್ರಶ್‌’ ಎಂಬ ಟ್ಯಾಗ್‌ ಸಿಕ್ಕಿರುವುದು ನಿಜಕ್ಕೂ ಬಲು ದೊಡ್ಡ ಖುಷಿಯ ವಿಚಾರ! ಸೋಶಿಯಲ್ ಮೀಡಿಯಾದಲ್ಲಿ ನನಗೆ ಧಾರಾಳ ಪ್ರೀತಿವಾತ್ಸಲ್ಯ ಸಿಗುತ್ತಿದೆ. ಜನ ತೆರೆದ ಮನಸ್ಸಿನಿಂದ ನನ್ನ ಚಿತ್ರಗಳನ್ನು ಒಪ್ಪುತ್ತಿದ್ದಾರೆ, ಅದಕ್ಕಾಗಿ ನಾನು ಅವರಿಗೆ ಚಿರಋಣಿ. ನನ್ನ ಕೆರಿಯರ್‌ ಗ್ರಾಫ್‌ ಮೇಲೇರುವುದರಲ್ಲಿ ಸೋಶಿಯಲ್ ಮೀಡಿಯಾದ ಪಾತ್ರ ದೊಡ್ಡದು. ಅವರೆಲ್ಲರ ಪ್ರೀತಿವಾತ್ಸಲ್ಯದ ಕಾರಣವೇ ನಾನಿಂದು ಈ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಗಿದೆ. ಇದಕ್ಕಿಂತಲೂ ಮಿಗಿಲಾದುದು, ನಾನು ಭಾರತದ ದೊಡ್ಡ ಸ್ಟಾರ್‌ ಆದಾಗ ಮಾತ್ರ, ಅತಿ ಶ್ರೇಷ್ಠ ನಟಿ ಎಂಬ ಕಾರಣಕ್ಕೆ ಎಲ್ಲರೂ ತಲೆದೂಗಿದಾಗ! ವೀಕ್ಷಕರ ನಿರಂತರ ಪ್ರೀತಿವಾತ್ಸಲ್ಯ ಹೀಗೇ ಇದ್ದಾಗ ಮಾತ್ರ ಅದು ಸಾಧ್ಯ ಎಂದು ಭಾವಿಸುತ್ತೇನೆ.

ಹಬ್ಬಗಳ ಕುರಿತಾಗಿ ನಿಮ್ಮ ಅಭಿಪ್ರಾಯ……

ಭಾರತದಲ್ಲಿ ಎಷ್ಟೊಂದು ವೈವಿಧ್ಯಮಯ ಹಬ್ಬಗಳಿವೆ ಎಂದರೆ, ಒಂದೊಂದಾಗಿ ಎಲ್ಲದರ ಆಚರಣೆಯಲ್ಲಿ ಇಡೀ ವರ್ಷ ಉರುಳುವುದೇ ಗೊತ್ತಾಗೋಲ್ಲ. ಪ್ರತಿ ಹಬ್ಬ ನನಗೆ ಹೆಚ್ಚಿನ ಪಾಸಿಟಿವ್ ‌ಎನರ್ಜಿ ನೀಡುತ್ತದೆ. ಅದು ಯುಗಾದಿ, ಗೌರಿಗಣೇಶ, ದಸರಾ, ದೀಪಾವಳಿ ಯಾವುದಾದರೂ ಆಗಬಹುದು. ಹಬ್ಬಗಳು ಹತ್ತಿರ ಬಂದಾಗ ಯಾರಿಗೆ ತಾನೇ ಸಂತೋಷ ಆಗುವುದಿಲ್ಲ? ಇದೀಗ ತಾನೇ ದೀಪಾವಳಿಯ ಸಡಗರ ಸಂಭ್ರಮ ಮುಗಿದಿದೆ, ಈಗ ಎಲ್ಲೆಡೆ ಕನ್ನಡ ರಾಜ್ಯೋತ್ಸದ ಸಂಭ್ರಮಾಚರಣೆ ಹರಡಿಹೋಗಿದೆ. `ಕಾಂತಾರ ಚ್ಯಾಪ್ಟರ್‌-1′ ಮೂಲಕ ನಮ್ಮ ಅಖಂಡ ಕರ್ನಾಟಕದ ಕಂಪು ಇಡೀ ದೇಶ ಮಾತ್ರವಲ್ಲದೆ, ವಿಶ್ವದೆಲ್ಲೆಡೆ ಪಸರಿಸಿದೆ ಎಂದರೆ ಅದು ಖಂಡಿತಾ ಸರಿಯಾದೀತು. ಮುಂದೆ ನಾನು ಬಾಲಿವುಡ್‌, ಹಾಲಿವುಡ್‌ ಗೆ ಏರಿದರೂ, ನಾನೆಂದೂ ಸದಾ ಕನ್ನಡದವಳಾಗಿಯೇ ಉಳಿಯುತ್ತೇನೆ, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ