ಕಥೆ – ಅರವಿಂದ್ ಜೋಶಿ
ಗೆಳೆಯನ ಬಳಿ ಎಮರ್ಜೆನ್ಸಿಗೆ ಇರಲಿ ಎಂದು ಕೊಂಡಿದ್ದ ರಿವಾಲ್ವರ್, ತಾನು ಇರಿಸಿದ್ದ ಜಾಗದಿಂದ ಕಣ್ಮರೆಯಾದಾಗ, ರಂಗಣ್ಣ ಕಂಗಾಲಾದ. ಮುಂದೆ ನಡೆದ್ದೇನು……?
ಆಜಾನುಬಾಹು, ಗಂಭೀರ ಸ್ವಭಾವದ ಜಮೀನ್ದಾರ್ ರಂಗಣ್ಣ, ಅಂದು ತನ್ನ ಸ್ವಗ್ರಾಮದಿಂದ ಪಟ್ಟಣದಲ್ಲಿರುವ ಕಛೇರಿಗೆ ಕೆಲಸದ ನಿಮಿತ್ತ, ಬಲಗೈ ಬಂಟ ಧೀರುವಿನೊಂದಿಗೆ ಹೊರಟ, ಮನೆಯ ವಿಶಾಲವಾದ ಜಗುಲಿ ಮೇಲೆ ಕುಳಿತು, ಶೂ ಹಾಕಿಕೊಳ್ಳುತ್ತಾ, “ಏಯ್ ಧೀರೂ…. ಮಾಡಿ ಮ್ಯಾಲಿನ ನನ್ನ ರೂಮಿನ ಕಪಾಟನ್ಯಾಗ ಒಂದಿಷ್ಟು ಕಾಗದಾ ಪತ್ರ ಹಾಕಿಟ್ಟಿರೋ ಕರೀ ಬ್ಯಾಗ್ ಐತಿ….. ಬಿರ್ರನೆ ಹೋಗಿ ಅದ ತಕ್ಕೊಂಡು ಬಾ….” ಎಂದು ಹೇಳಿದ.
ಅದನ್ನು ಕೇಳಿದ್ದೇ ತಡ, ಅಲ್ಲಿಯೇ ಕುಳಿತಿದ್ದ ಧೀರ, “ಆಯ್ತು ಧಣಿ…..” ಎಂದು ಓಡುತ್ತಾ ಹೋಗಿ ಆ ಬ್ಯಾಗ್ ಹೊತ್ತುಕೊಂಡು ಬಂದ.
“ಸರಿ….. ನಾ ಹೋಗಿ ಬರ್ತೇನೆ,” ಎಂದು ಬಾಗಿಲಲ್ಲಿ ಬಂದು ನಿಂತಿದ್ದ ತನ್ನ ಮಡದಿಗೆ ಹೇಳಿ, ಆಕೆಯ ಯಾವ ಪ್ರತಿಕ್ರಿಯೆಗೂ ಕಾಯದೇ, ಬೈಕ್ ಏರಿ, ಹಿಂದಿನ ಸೀಟಿನಲ್ಲಿ ಧೀರೂನನ್ನು ಕೂರಿಸಿಕೊಂಡು ಪಟ್ಟಣದತ್ತ ಹೊರಟುಹೋದ.
ಸಾಯಂಕಾಲ ಐದರ ಸುಮಾರಿಗೆ ಶಿಷ್ಯನೊಂದಿಗೆ ಮನೆಗೆ ವಾಪಸ್ ಬಂದ ರಂಗಣ್ಣನ ಮೊಗದಲ್ಲಿ ಸಂತಸದ ಕಳೆ ಇತ್ತು. ಅಲ್ಲಿಗೆ ಆತ ಹೋಗಿದ್ದ ಕೆಲಸ ಆಗಿದೆ ಎಂದೇ ಊಹಿಸಬಹುದಾಗಿತ್ತು. ಕೆಲವು ನಿಮಿಷಗಳ ನಂತರ ಫ್ರೆಶಪ್ ಆಗಿ ಬಂದ, ರಿಲ್ಯಾಕ್ಸ್ ಮಾಡಿಕೊಳ್ಳಲು ಜಗುಲಿ ಮೇಲಿದ್ದ ಆರಾಮ ಕುರ್ಚಿ ಮೇಲೆ ಕೂತು ಹಾಗೇ ಕಣ್ಮುಚ್ಚಿದ.
ಒಂದು ಅರ್ಧ ಗಂಟೆ ಕೂಡ ಕಳೆದಿರಲಿಲ್ಲ, ಆತನಿಗೆ ಏನೋ ನೆನಪಾದಂತಾಗಿ ಮತ್ತೆ ಮಹಡಿ ಮೇಲಿದ್ದ ತನ್ನ ರೂಮಿಗೆ ಹೋಗಿ, ಸುಮಾರು ಒಂದು ಗಂಟೆಯ ನಂತರ ನಿಧಾನವಾಗಿ ಕೆಳಗಿಳಿದು ಬಂದವನ ಮೊಗದಲ್ಲಿ ಆ ತನಕ ಇದ್ದ ಸಂತಸದ ಕಳೆ ಮಾಯವಾಗಿ ಚಿಂತೆಯ ಕಾರ್ಮೋಡ ಕವಿದಂತೆ ಕಾಣುತ್ತಿತ್ತು. ಹುಬ್ಬು ಗಂಟಿಕ್ಕಿ ಆಗಾಗ ತಲೆ ಕೆರೆಯುತ್ತಾ, ಗಾಢ ಯೋಚನೆಯೊಳಗೆ ಮುಳುಗಿದ.
ಹೌದು….. ಈ ಎರಡು ತಿಂಗಳುಗಳ ಹಿಂದೆ, ಇದೇ ರಂಗಣ್ಣನ ಆತ್ಮೀಯ ಗೆಳೆಯ ಪರಶು ಒಂದು ದಿನ, “ಅಲ್ವೋ ರಂಗಾ…. ಇಷ್ಟೆಲ್ಲಾ ವ್ಯವಹಾರ ಮಾಡ್ತಿದ್ದೀಯಲ್ಲ ಒಂದು ರಿವಾಲ್ವರ್ ಇಟ್ಕೊಂಡಿಲ್ಲಾ ಅಂದ್ರೆ ನಾಚಿಗ್ಗೇಡಿನ ವಿಚಾರ,” ಎಂದು ಇವನ ಮನಕ್ಕೆ ನಾಟುವಂತೆ ಚುಡಾಯಿಸಿದ್ದ.
ಅದಕ್ಕೆ ರಂಗಣ್ಣ, “ಇಲ್ವೋ…. ಅದರ ಲೈಸೆನ್ಸ್ ಗಾಗಿ ಅರ್ಜಿ ಹಾಕಿ ಆಗಲೇ ಐದಾರು ತಿಂಗಳು ಆಗ್ತಾ ಬಂತು, ಇನ್ಯಾವಾಗ್ ಬರ್ತದೋ ಗೊತ್ತಿಲ್ಲ…” ಎಂದಿದ್ದ.
ಅದಕ್ಕೆ ಪರಶು, “ಸರಿಹೋಯ್ತು ಕಣಯ್ಯಾ…. ನೀನು ಅದನ್ನು ನೆಚ್ಚಿಕೊಂಡು ಕೂತ್ರೆ ಮುಗ್ದಾ ಹೋಯ್ತು,” ಎಂದ.
“ಮತ್ತಿನ್ನೇನು ಮಾಡ್ಲಿ ಹೇಳು….?” ಎಂದು ರಂಗಣ್ಣ ಪ್ರಶ್ನಿಸಿದ.
“ನೋಡು ರಂಗಾ….. ನನ್ನ ಹತ್ರ ಒಂದಲ್ಲಾ ಅಂತ ಎರಡು ಇಂಪೋರ್ಟೆಡ್ ರಿವಾಲ್ವರ್ ಇವೆ. ಸದ್ಯಕ್ಕೆ ನನಗೆ ಒಂದು ಸಾಕು, ನಿನಗೆ ಬೇಕಾದ್ರೆ ಹೇಳು ಒಂದು ಕೊಡ್ತೀನಿ,” ಎಂದು ಹೇಳುತ್ತಿದ್ದ ಪರುಶುನನ್ನು ಅರ್ಧಕ್ಕೆ ತಡೆದ ರಂಗಣ್ಣ, “ಅಲ್ವೋ….. ಅದಕ್ಕೆ ಲೈಸೆನ್ಸ್…..” ಎಂದು ರಾಗ ಎಳೆದ.
“ಅಯ್ಯೋ ದಡ್ಡಾ…. ನನ್ನ ಹತ್ರಾನೂ ಅದೆಲ್ಲಿದೆ…. ? ಸಮಸ್ಯೆ ಬಂದಾಗ ನೋಡ್ಕೊಂಡ್ರೆ ಆಯ್ತು…. ಅಲ್ಲಿ ತನಕಾ ಇಟ್ಕೊಂಡಿರು….” ಎಂದು ಗೆಳೆಯನಿಗೆ ಹೇಳಿದ್ದ.
ಮುಂದುವರಿದ ರಂಗಣ್ಣ, “ಎಷ್ಟು ಕೊಡಬೇಕು ಅದಕ್ಕೆ….?” ಎಂದು ಕೇಳಿದ.
“ನೋಡು ರಂಗಾ, ನೀವು ನನ್ನ ಜಿಗ್ರೀ ದೋಸ್ತ ಇದ್ದೀ….. ಹೆಚ್ಚೇನೂ ಬ್ಯಾಡಾ, ಒಂದಿಪ್ಪತ್ತೈದು ಸಾವಿರ ಕೊಟ್ರೆ ಸಾಕು….. ಹೊರಗಡೆ ಇದರ ಬೆಲೆ ಐವತ್ತು ಸಾವಿರ ಇದೆ, ನಿನಗೆ ಗೊತ್ತಾ…..?” ಎಂದು ಪರಶು ಆಸೆ ಹುಟ್ಟಿಸಿದ.
ನಂತರ ಸ್ವಲ್ಪ ಹೊತ್ತು ರಂಗಣ್ಣ ಅಳೆದೂ ಸುರಿದೂ ಯೋಚಿಸಿ, “ಆಯ್ತು ಕೊಡು,” ಎನ್ನುತ್ತಾ ಅಲ್ಲೇ ಇಪ್ಪತ್ತೈದು ಸಾವಿರ ನಗದು ಕೊಟ್ಟ.
ಪರಶು, ಆ ರಿವಾಲ್ವರ್ ನ್ನು ರಂಗಣ್ಣನಿಗೆ ಕೊಡುವ ಮುನ್ನ, “ನೋಡು ರಂಗಾ…. ಇದು ಲೈಸೆನ್ಸ್ ಇಲ್ಲದೇ ಇರೋ ಲೋಡೆಡ್ ರಿವಾಲ್ವರ್. ನೀವು ಇದನ್ನ ಎಷ್ಟು ಗುಟ್ಟಾಗಿ ಇಡ್ತಿವೋ ಅಷ್ಟು ಒಳ್ಳೆಯದು. ನನ್ನ ಹತ್ರ ಇದೆ ಅಂತ ಮರ್ತು ಯಾರೆದುರಿಗಾದರೂ ಬಾಯಿಬಿಟ್ಯೋ…. ನೀನು ಕೆಟ್ಟೆ ನಾನೂ ಕೆಟ್ಟೆ,” ಎಂದು ಒಂದಲ್ಲ…. ಎರಡಲ್ಲ… ಐದಾರು ಬಾರಿ ಎಚ್ಚರಿಕೆ ಕೊಟ್ಟೇ, ಅದನ್ನು ಗೆಳೆಯನಿಗೆ ಹಸ್ತಾಂತರಿಸಿದ್ದ.
“ಆಯ್ತಪ್ಪಾ… ಆಯ್ತು…” ಎಂದು ಪ್ರಮಾಣ ಮಾಡಿ ಹಣ ಕೊಟ್ಟು ಅದನ್ನು ಮನೆಗೆ ತಂದಿದ್ದನಾದರೂ ಮಡದಿಯ ಎದುರೂ ಸಹ ಆ ವಿಷಯ ಬಾಯಿಬಿಟ್ಟಿರಲಿಲ್ಲ.
ಪರಶು ಆ ರಿವಾಲ್ವರ್ ನ್ನು ಹೇಗೆ ಒಂದು ಬ್ರೌನ್ ಕಲರ್ ಕವರ್ ನಲ್ಲಿ ಸುತ್ತಿ ಕೊಟ್ಟಿದ್ದನೋ, ಹಾಗೆಯೇ ಯಾರಿಗೂ ಕಾಣದಂತೆ ಹಾಗೂ ಅನುಮಾನ ಬಾರದಿರುವಂತೆ ತನ್ನ ರೂಮಿನೊಳಗಿದ್ದ ಹಳೇಕಾಲದ ದೊಡ್ಡ ಬೀರುವಿನ ಕಡತಗಳ ಮಧ್ಯೆ ಅವಿತಿರಿಸಿದ್ದ.
ಇಂದು ಇದ್ದಕ್ಕಿದ್ದಂತೆ ಅದು ಜ್ಞಾಪಕಕ್ಕೆ ಬಂದಾಗ, ಅದರ ಇರುವಿಕೆ ಬಗ್ಗೆ ಕನ್ಛರ್ಮ್ ಮಾಡಿಕೊಳ್ಳಲು ಅಂದು ತಾನು ಅದನ್ನು ಅವಿತಿರಿಸಿದ್ದ ಜಾಗದಲ್ಲಿ ಹುಡುಕಿದಾಗ ಅದೆಲ್ಲೂ ಅವನ ಕಣ್ಣಿಗೆ ಬೀಳಲಿಲ್ಲ. ಅಷ್ಟಕ್ಕೇ ಆತನ ಹಣೆ ತುಂಬಾ ಬೆವರಿನ ಕಟ್ಟೆ ಒಡೆಯಿತು. ದೃಷ್ಟಿ ಬಾಗಿಲಿನತ್ತ ಹೋದಾಗ ಅದು ಅರೆಬರೆ ತೆರೆದಿರುವುದನ್ನು ಕಂಡ, ತಕ್ಷಣ ಓಡಿ ಹೋಗಿ ಬಾಗಿಲು ಭದ್ರಪಡಿಸಿ, ಮತ್ತೊಮ್ಮೆ ಅಲ್ಲಿಟ್ಟಿದ್ದ ಕಡತಗಳ ಗಂಟನ್ನು ಒಂದೊಂದಾಗಿಯೇ ಬಿಚ್ಚಿ ನೋಡತೊಡಗಿದ.
ಊಹ್ಞೂಂ…. ಎಲ್ಲೂ ಅದರ ಸುಳಿವು ಸಿಗದಿದ್ದಾಗ, ಒಂದು ಕ್ಷಣ ತಲೆ ಗಿರ್ ಎಂದಿತು. ಮತ್ತೆ ಏನೋ ಯೋಚನೆ ಬಂದಂತಾಗಿ ರೂಮಿನಿಂದ ಆಚೆ ಬಂದು ಅಲ್ಲಿಂದಲೇ ಜೋರಾಗಿ, “ಧೀರೂ… ಧೀರೂ….” ಎಂದು ಕೂಗಿದ.
ರಂಗಣ್ಣ ಕೂಗಿದ್ದು ಕೇಳಿಸಿಕೊಂಡ ಧೀರು ಅಲ್ಲೇ ಎಲ್ಲೋ ಇದ್ದವನು ದಡಬಡನೆ ಓಡಿಬಂದ. ಅಷ್ಟರಲ್ಲಿ ರಂಗಣ್ಣನ ಒಳಮನಸ್ಸು, `ಯಾಕೆ ಅವನನ್ನು ಕೂಗ್ತಿದ್ದಿ….? ರಿವಾಲ್ವರ್ ವಿಷಯ ಕೇಳೋಕಾ….? ಏ ಪೆದ್ದಾ, ಆ ಗುಟ್ಟಿನ ವಿಷಯ ನಿನ್ನ ಬಿಟ್ಟು ಯಾರಿಗೂ ಗೊತ್ತಿಲ್ಲ, ಇನ್ನು ಅವನಿಗೇನಾದರೂ ಕೇಳೋಕೆ ಹೊರಟರೆ ಇಷ್ಟು ದಿನದ ಗುಟ್ಟು ರಟ್ಟಾಗಲ್ವಾ….? ದುಡುಕಬೇಡ ನೋಡು…. ನಿಧಾನಕ್ಕೆ ಯೋಚಿಸಿ ಹೆಜ್ಜೆ ಇಡು,’ ಎಂದು ಎಚ್ಚರಿಸಿತು.
ರಂಗಣ್ಣ ತನ್ನಷ್ಟಕ್ಕೆ ತಾನೇ, `ಹೌದು… ಹೌದು…. ಅವನನ್ನು ಏನೂ ಕೇಳಬಾರದು,’ ಎಂದುಕೊಳ್ಳುವಷ್ಟರಲ್ಲಿ, ಧೀರು ಅವನೆದುರಿಗೆ ಬಂದು, “ಧಣಿ…. ಕೂಗಿದ್ರಲ್ಲ….. ಏನು ಹೇಳಿ,” ಎಂದು ಕೇಳಿದ.
“ಏನಿಲ್ಲಾ…. ನಾನು ಒಳಗೆ ಕರೆಯೋತನ ಇಲ್ಲೇ ಬಾಗಿಲಲ್ಲಿ ಕೂತಿರು…..” ಎಂದು ಅವನನ್ನು ಬಾಗಿಲ ಮುಂದೆ ಕೂರಿಸಿ, ಮತ್ತೆ ರೂಮಿನ ಬಾಗಿಲು ಭದ್ರಪಡಿಸಿಕೊಂಡ ರಂಗಣ್ಣ ಹುಡುಕಾಟದ ಕಾರ್ಯ ಮುಂದುವರಿಸಿದ.
ಸುಮಾರು ಮುಕ್ಕಾಲು ಗಂಟೆ ಕಾಲ ಬೀರು ಒಳಗಿದ್ದ ಎಲ್ಲಾ ಕಡತದ ಗಂಟುಗಳನ್ನು ಕೆಳಗಿಳಿಸಿ ಒಂದೊಂದಾಗಿ ನೋಡುವಷ್ಟರಲ್ಲಿ ರೂಮಿನ ಭರ್ತಿ ಬೇಡದ ಕಾಗದಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೈ ತುಂಬಾ ಬೆವರು, ತಲೆ ತುಂಬಾ ಯೋಚನೆಗಳು ಬಿಡುವಿಲ್ಲದೇ ಧುಮ್ಮಿಕ್ಕಿ ಬರುತ್ತಿದ್ದವು. ಈ ನಡುವೆ ಅವನ ಆತ್ಮೀಯ ಗೆಳೆಯ ಪರಶು ಕಡೆಯಿಂದ ಫೋನ್ ಬಂದಿತು. ಮೊದಲೇ ಗಾಬರಿಗೊಂಡ ರಂಗಣ್ಣನ ಕೈಕಾಲು ನಡುಗಿದಂತಾಗಿ ಮೆಲ್ಲಗೆ “ಹ್ಞಾಂ ಹೇಳು ಪರಶೂ,” ಎಂದ.
ಆದರೆ ಮನದಲ್ಲಿ ಮಾತ್ರ, `ಅವನು ರಿವಾಲ್ವರ್ ಬಗ್ಗೆ ಕೇಳಿದರೆ….. ಏನು ಉತ್ತರಿಸಲಿ…?’ ಎಂದು ಯೋಚಿಸುತ್ತಿದ್ದಾಗ ಪರುಶನೇ ಮುಂದುವರಿದು, “ಏನಿಲ್ಲಾ ರಂಗಾ…. ಸ್ವಲ್ಪ ಅರ್ಜೆಂಟ್ ಕೆಲಸದ ನಿಮಿತ್ತ ಒಂದು ಹತ್ತು ದಿನ ಬೇರೆ ಊರಿಗೆ ಹೋಗ್ತಾ ಇದ್ದೀನಿ. ನಿನಗೆ ಒಂದು ಮಾತು ಹೇಳೋಣಾ ಅಂತ ಕಾಲ್ ಮಾಡ್ದೆ ಕಣಯ್ಯಾ….” ಎಂದು ಹೇಳಿದ್ದೇ ತಡ ರಂಗಣ್ಣ, “ಆಯ್ತು… ಆಯ್ತು ಹೋಗಿ ಬಾ…..” ಎಂದು ಕಾಲ್ ಕಟ್ ಮಾಡಿ ಸುರಿಯುತ್ತಿದ್ದ ಬೆವರನ್ನು ಟವೆಲ್ ನಿಂದ ಒರೆಸಿಕೊಂಡು ಮತ್ತೆ ಹುಡುಕುವ ಕಾರ್ಯ ಮುಂದುವರಿಸಿದ.
ಹಾಗೆ ಮಾಡುತ್ತಿದ್ದಾಗ, ಎಂಟು ಅಡಿ ಎತ್ತರದ ಹಳೇ ಕಾಲದ ಬೀರುವಿನ ಮೇಲ್ಭಾಗದ ಗೋಡೆಗೆ ನೇತು ಹಾಕಿದ್ದ ಅವನ ತಂದೆಯ ದೊಡ್ಡದಾದ ಫೋಟೋವಿನ ಒಂದುಬದಿಗೆ ಕಟ್ಟಿದ್ದ ಸುತ್ತಲಿದಾರ ತುಂಡಾಗಿ ಆ ಬೀರುವಿನ ಮೇಲೆ `ಠಪ್’ ಎಂದು ಏನೋ ಬಿದ್ದ ಶಬ್ದ ಕೇಳಿಸಿತು. ಅದೇನೆಂದು ಕುತೂಹಲದಿಂದ ಅಲ್ಲಿದ್ದ ದೊಡ್ಡ ಸ್ಟೂಲ್ ಏರಿ ನೋಡಿದ.
ತಾನು ಇದುವರೆಗೂ ಭಯ ಆತಂಕದಿಂದ ಹುಡುಕುತ್ತಿದ್ದ ಆ ರಿವಾಲ್ವರ್ ಇದ್ದ ಬ್ರೌನ್ ಕಲರ್ ಕವರ್ ಕಾಣಿಸಿತು. ಅಲ್ಲಿದ್ದ ವಿಪರೀತ ಧೂಳನ್ನೂ ಲೆಕ್ಕಿಸದೆ ಗಬಕ್ ಎಂದು ಅದನ್ನು ಎತ್ತಿಕೊಂಡು ಕವರ್ ಓಪನ್ ಮಾಡಿ ರಿವಾಲ್ವರ್ ಇದೆ ಎನ್ನುವುದನ್ನು ಕನ್ಛರ್ಮ್ ಮಾಡಿಕೊಂಡ ಅದಕ್ಕೊಂದು ನಮಸ್ಕಾರ ಹಾಕಿ, `ಅದ್ಸರಿ ಇದು ಇಲ್ಲಿ ಹೇಗೆ ಬಂತು….?’ ಎಂದು ಯೋಚಿಸಿದ.
ಕೆಲವು ದಿನಗಳ ಹಿಂದೆ ಯಾರಿಗೂ ಅದು ಕಾಣಬಾರದೆಂದು ಆ ಎತ್ತರದ ಜಾಗದಲ್ಲಿ ತಾನೇ ಇಟ್ಟಿದ್ದೆ ಎನ್ನುವುದು ಆಗ ಅವನ ನೆನಪಿಗೆ ಬಂತು. `ಸಧ್ಯ ಸಿಕ್ಕಿತಲ್ಲಾ….’ ಎಂದುಕೊಳ್ಳುತ್ತಾ ಪುನಃ ಅದನ್ನು ಮತ್ತೆ ತನಗೊಬ್ಬನಿಗೇ ಗೊತ್ತಾಗುವ ಜಾಗದಲ್ಲಿ ಭದ್ರವಾಗಿಟ್ಟು ದೀರ್ಘ ನಿಟ್ಟುಸಿರು ಬಿಡುತ್ತಾ ರೂಮಿನ ಬಾಗಿಲು ತೆರೆದು ಹೊರಬಂದ.
ರೂಮಿನ ಹೊರಗೆ ಕಾವಲು ಕಾಯುತ್ತಾ ಕುಳಿತಿದ್ದ ಧೀರುವಿಗೆ, “ನೋಡು ರೂಮಿನಲ್ಲಿ ತುಂಬಾ ಕಸ ಬಿದ್ದಿದೆ, ಎಲ್ಲಾ ಕ್ಲೀನ್ ಮಾಡಿಕೊಂಡು ಬಾ,” ಎಂದು ಹೇಳಿ ಮಹಡಿಯಿಂದ ಕೆಳಗಿಳಿದು ಬಂದು, ಮಡದಿಗೆ, “ಒಂದು ಗ್ಲಾಸ್ ಬಿಸಿ ಬಾದಾಮಿ ಹಾಲು ಕೊಡು,” ಎಂದು ಕೇಳಿ ಪಡೆದು, ಅದನ್ನು ನಿಶ್ಚಿಂತೆಯಿಂದ ಕುಡಿದು ನಿಗೂಢವಾಗಿದ್ದ ವಿಷಯನ್ನು ತಾನು ನಿಗೂಢವಾಗಿಯೇ ಇಟ್ಟಿರುವುದಕ್ಕೆ ತನಗೆ ತಾನೇ ಸಮಾಧಾನಪಟ್ಟುಕೊಂಡು ಸುಖ ನಿದ್ರೆಗೆ ಜಾರಿದ.





