ನೀಳ್ಗಥೆ - ಶುಭಾ ಶ್ರೀನಾಥ್
ಸಾನಿಧ್ಯಾ ಸೂರಜ್ ದಂಪತಿಗಳ ಅಪರೂಪದ ಒಬ್ಬನೇ ಮಗನಾದ ಸನತ್ ಎಂದರೆ ತಾಯಿಗೆ ಎಲ್ಲಿಲ್ಲದ ಅತೀ ಮುದ್ದು. ಇತರರಿಗಿಂತ 4 ಪಟ್ಟು ಹೆಚ್ಚಾಗಿಯೇ ಮಗನನ್ನು ಮುದ್ದಿಸಿ, ಗಂಡನಿಂದ ಅವನನ್ನು ಸೋಮಾರಿ ಆಗಿಸಬೇಡ ಎಂದು ಬೈಸಿಕೊಳ್ಳುತ್ತಿದ್ದಳು. ಮುಂದೆ ಕೆಲಸಕ್ಕೆ ಸೇರಿದ ಮಗ ಇದ್ದಕ್ಕಿದ್ದಂತೆ ಬೇಸರದಿಂದ ಮುಖ ಬಾಡಿಸಿಕೊಂಡಿದ್ದೇಕೆ.....?
ಸ್ಟವ್ ಮೇಲೆ ಪಲ್ಯಕ್ಕಿಟ್ಟು ಮಗನನ್ನು ಎಬ್ಬಿಸಲು ಬಂದಳು ಸಾನಿಧ್ಯಾ.``ಚಿನ್ನು, ಪುಟ್ಟು, ಮರಿ ಜಾಣು ಎದ್ದೇಳು ಕಂದ.....'' ಹಣೆಯ ಮೇಲಿದ್ದ ಕೂದಲನ್ನು ಮೆಲ್ಲನೆ ಸರಿಸಿ ಮೃದುವಾಗಿ ಹೂಮುತ್ತನ್ನಿಟ್ಟಳು.
``ಅಮ್ಮಾ , ಪ್ಲೀಸ್...... ಇನ್ನೊಂದು ಐದು ನಿಮಿಷ ಹ್ಞೂಂ.....ಹ್ಞೂಂ.... ನಿದ್ದೆ ಬರ್ತಾ ಇದೆ,'' ಮುದ್ದು ಮಗನ ಮುದ್ದು ಮಾತು.
``ಲೇ..... ಪಲ್ಯ ಸೀದು ಹೋಗ್ತಾ ಇದೆ. ಬಾ, ಇಷ್ಟು ಬೆಳಗ್ಗೆ ಅವನನ್ನು ಯಾಕೆ ಏಳಿಸ್ತಾ ಇದ್ದೀಯ. ನನಗೆ ಆಫೀಸಿಗೆ ಟೈಮ್ ಆಗುತ್ತೆ,'' ಪತಿ ಸೂರಜ್ ಕರೆದ.
``ಸನತ್ ಇವತ್ತು ಆಫೀಸಿಗೆ ಹೋಗಬೇಕು ಅಂತ ಹೇಳಿದ್ದ. ಅದಕ್ಕೆ ಅವನನ್ನು ಎಬ್ಬಿಸ್ತಾ ಇದೀನಿ,'' ಎನ್ನುತ್ತಾ ಸಾನಿಧ್ಯಾ ಅಡುಗೆ ಮನೆಗೆ ಓಡಿ ಹೋಗಿ ಸೀದು ಹೋಗುತ್ತಿದ್ದ ಪಲ್ಯವನ್ನು ಇಳಿಸಿ, ಚಪಾತಿ ಲಟ್ಟಿಸತೊಡಗಿದಳು. ಮೂರು ಚಪಾತಿ ಮಾಡಿ ತಟ್ಟೆಯಲ್ಲಿಟ್ಟು, ಪಲ್ಯ ಬಡಿಸಿ ಪತಿಗೆ ಕೊಟ್ಟು ಮತ್ತೊಮ್ಮೆ ಮಗನ ಕೋಣೆಗೆ ಬಂದಳು.
``ಚಿನ್ನು, ಪುಟ್ಟು, ಮರಿ ಜಾಣು ಎದ್ದೇಳು ಕಂದ. ಇವತ್ತು ಆಫೀಸಿಗೆ ಹೋಗಬೇಕು ಅಲ್ವಾ..... ಟೈಮ್ ಆಗುತ್ತೆ,'' ಎಂದಳು.
ಸನತ್ ಎದ್ದು `ಕರಾಗ್ರೆ ವಸತೆ' ಎಂದು ಕೈ ನೋಡಿ ಹೇಳಿಕೊಂಡು, ``ಅಮ್ಮಾ ಎಂಟು ಗಂಟೆ ಆಗಿದೆ. ಸ್ವಲ್ಪ ಬೇಗ ಏಳಿಸಬಾರದಿತ್ತೆ....?'' ಎಂದು ಬಚ್ಚಲಿಗೆ ಓಡಿದ.
``ನಿಮ್ಮಮ್ಮ ನಿನ್ನ ಕೋಣೆಗೆ ಬಂದು ನಾಲ್ಕು ಬಾರಿ ಎಬ್ಬಿಸಿದ್ರೂ ನೀನು ಇನ್ನೂ ಐದು ನಿಮಿಷ.... ಅಂತ ಮಲಗಿಕೊಂಡೆ. ಈಗ ನೋಡಿದ್ರೆ ನಿಮ್ಮಮ್ಮ ಎಬ್ಬಿಸಲಿಲ್ಲ ಅಂತ ಹೇಳ್ತೀಯಲ್ಲಾ.....'' ಚಪಾತಿ ಪಲ್ಯ ತಿನ್ನುತ್ತಾ ಸೂರಜ್ ಹೇಳಿದರು.
``ಅಮ್ಮಾ...... ಟವೆಲ್ ಪ್ಲೀಸ್,'' ಸನತ್ ಬಚ್ಚಲಿನಿಂದ ಕೂಗಿದ.
ಸಾನಿಧ್ಯಾ ಅಡುಗೆ ಮನೆಯಿಂದ ಓಡಿ ಹೋಗಿ ಟವೆಲ್ ಕೊಟ್ಟು ಬಂದಳು.
``ಅಲ್ಲ.... ಸ್ನಾನಕ್ಕೆ ಹೋಗುವವನು ಟವೆಲ್ ತೆಗೆದುಕೊಂಡು ಹೋಗಬಾರದೇ.....? ಇಷ್ಟು ದೊಡ್ಡವನಾಗಿದ್ದೀಯ, ಮುಂದಿನ ವರ್ಷ ನಿನಗೆ ಮದುವೆ ಮಾಡಬೇಕು ಅಂದುಕೊಂಡಿದ್ದೀವಿ. ನಿಮ್ಮಮ್ಮ ಮಾಡೋ ಕೆಲಸ ಬಿಟ್ಟು ಓಡಿ ಬರಬೇಕು....'' ಸೂರಜ್‌ಮಗನನ್ನು ಆಕ್ಷೇಪಿಸಿದರು.
``ಸಾರಿ ಅಮ್ಮಾ.... ಥ್ಯಾಂಕ್ಸ್ ಅಮ್ಮ......'' ಎಂದು ಅಮ್ಮನಿಗೆ ಬಚ್ಚಲು ಮನೆಯಿಂದಲೇ ಕೂಗಿ ಹೇಳಿದ ಸನತ್.
``ಅಮ್ಮಾ..... ಎರಡು ಚಪಾತಿ ಸಾಕು.''
``ನಿನಗೆ ಇಷ್ಟ ಅಂತ ರಾಜ್ಮಾ, ಗೋಬಿ ಪಲ್ಯ ಎರಡೂ ಮಾಡಿದೀನಿ. ಮೂರು ಚಪಾತಿ ತಿನ್ನು,'' ಎನ್ನುತ್ತಾ ಚಪಾತಿ ಪಲ್ಯ, ತುಪ್ಪ ಬಡಿಸಿದ ಸಾನಿಧ್ಯಾ ಡೈನಿಂಗ್ ಟೇಬಲ್ ಮೇಲೆ ಇಟ್ಟಳು.
ಸನತ್ ಅವಸರದಿಂದ ತಿನ್ನುವಾಗ ಗಂಟಲಿಗೆ ಸಿಕ್ಕಿ ಹಾಕಿಕೊಂಡು ಬಿಕ್ಕಳಿಗೆ ಬಂದಿತು. ಸಾನಿಧ್ಯಾ ಕುಡಿಯಲು ನೀರು ಕೊಟ್ಟು, ``ಮೇಲೆ ನೋಡು,'' ಎಂದಳು.
``ತಿಂಡಿಗೆ ಕುಳಿತುಕೊಳ್ಳುವಾಗ ನೀರು ಇಟ್ಟುಕೊಳ್ಳಬೇಕು ಅಂತ ಗೊತ್ತಿಲ್ವಾ.....'' ಸೂರಜ್ ತುಸು ಕೋಪದಿಂದ ಹೇಳಿದರು.





