ನೀಳ್ಗಥೆ - ಶುಭಾ ಶ್ರೀನಾಥ್
ಕಳೆದ ಸಂಚಿಕೆಯ ಕಥೆ.....
ಸಾನಿಧ್ಯಾ ಸೂರಜ್ ದಂಪತಿಗಳ ಅಪರೂಪದ ಒಬ್ಬನೇ ಮಗನಾದ ಸನತ್ ಎಂದರೆ ತಾಯಿಗೆ ಎಲ್ಲಿಲ್ಲದ ಅತೀ ಮುದ್ದು. ಇತರರಿಗಿಂತ 4 ಪಟ್ಟು ಹೆಚ್ಚಾಗಿಯೇ ಮಗನನ್ನು ಮುದ್ದಿಸಿ, ಗಂಡನಿಂದ ಅವನನ್ನು ಸೋಮಾರಿ ಆಗಿಸಬೇಡ ಎಂದು ಬೈಸಿಕೊಳ್ಳುತ್ತಿದ್ದಳು. ಚಿಕ್ಕಂದಿನಿಂದಲೂ ಮಗ ಬಯಸಿದ್ದನ್ನು ಕ್ಷಣ ಮಾತ್ರದಲ್ಲಿ ರೆಡಿ ಮಾಡುತ್ತಿದ್ದ ಸಾನಿಧ್ಯಾ, ಮುಂದೆ ಅವನು ಕಾಲೇಜು ಮುಗಿಸಿ, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಸ್ವತಂತ್ರನಾದರೂ, ಸ್ವಾವಲಂಬಿಯಾಗಲು ಬಿಡದೆ, ಸದಾ ಅವನ ಎಲ್ಲಾ ಕೆಲಸ ಮಾಡಿಡುತ್ತಿದ್ದಳು. ಇದರಿಂದ ಮಗ ಸನತ್ ಬಗ್ಗೆ ತಂದೆಗೆ ಅಸಮಾಧಾನವಿತ್ತು. ಮುಂದೆ ಆಫೀಸಿಗೆ ಹೊಸ ಬಾಸ್ ಬಂದ ನಂತರ, ಕ್ರಮೇಣ ಸನತ್ ನ ನಡವಳಿಕೆಯಲ್ಲಿ ಬಹಳ ಬೇಸರ ಕಾಣಿಸಿತು. ಇದ್ದಕ್ಕಿದ್ದಂತೆ ಅವನು ಬೇಸರದಿಂದ ಮುಖ ಬಾಡಿಸಿಕೊಂಡಿದ್ದೇಕೆ.....?
...... ಮುಂದೆ ಓದಿ
ಕಣ್ಣರಿಯದಿದ್ದರೂ ಕರುಳರಿಯದೇ ಎಂಬಂತೆ ಸನತ್ ಗೆ ತನ್ನ ಬಾಸ್ ಸೃಜನಾಳನ್ನು ಕಂಡಾಗಿಂದ ಮನಸ್ಸು ತಳಮಳಗೊಂಡಿತು. ಮುಂದೆ ತಾಯಿ ತಂದೆಯರನ್ನು ಆಫೀಸಿನ ಫಂಕ್ಷನ್ ಗೆ ಕರೆದುಕೊಂಡು ಹೋದಾಗ, ಅಲ್ಲಿ ಸೃಜನಾಳ ತಾಯಿ ಸೌಭಾಗ್ಯಾರನ್ನು ಕಂಡು, ಸನತ್ ನ ತಾಯಿತಂದೆ ಚಿಂತೆಗೊಳಗಾಗಿದ್ದು ಏಕೆ.....?
``ಯಾಕೋ ಕಂದ, ಇತ್ತೀಚೆಗೆ ನಿನಗೆ ಯಾವುದರಲ್ಲಿಯೂ ಆಸಕ್ತಿಯಿಲ್ಲ.....?'' ಮೃದುವಾಗಿ ಕೆನ್ನೆ ಸವರಿ, ಹಣೆಯ ಕೂದಲನ್ನು ಹಿಂದೆ ಸರಿಸಿ ಹಣೆಗೆ ಹೂಮುತ್ತನಿಟ್ಟು ಕೇಳಿದಳು.
``ಅಮ್ಮಾ..... ಹಾಗೇನೂ ಇಲ್ಲ. ಚೆನ್ನಾಗಿಯೇ ಇದ್ದೇನೆ.''
``ಆಫೀಸಿನಲ್ಲಿ ಏನಾದರೂ ತೊಂದರೆ ಇದೆಯೇ....?''
``ಹಾಗೇನೂ ಇಲ್ಲಮ್ಮ.....''
``ಮತ್ತೆ ಬೇರೆ ಏನು ಯೋಚನೆ? ಆಫೀಸ್ ಕೆಲಸ ಬಹಳ ಕಷ್ಟ ಅನಿಸಿದರೆ ಅಪ್ಪನ ಜೊತೆಗೆ ಅವರ ಆಫೀಸಿಗೆ ಹೋಗು. ಅಲ್ಲಿ ನೀನೇ ಬಾಸ್ ನಿನ್ನನ್ನು ಕೇಳುವವರು ಇರುವುದಿಲ್ಲ.''
``ಅಮ್ಮಾ...... ಹಾಗೇನೂ ಇಲ್ಲ. ನನಗೆ ಕೆಲಸದಲ್ಲಿ ಏನೂ ಕಷ್ಟವಿಲ್ಲ. ಇದೇ ಕೆಲಸ ಮಾಡಲು ನನಗೆ ಇಷ್ಟವಿದೆ.''
``ಮತ್ತೆ ಯಾಕೆ ಹೀಗೆ ಸಣ್ಣಗಾಗುತ್ತಿದ್ದೀಯಾ.....?''
``ಅಮ್ಮಾ..... ನಿನ್ನ ಕಣ್ಣಿಗೆ ಯಾವಾಗಲೂ ಹಾಗೆಯೇ ಸಣ್ಣಗೆ ಆದ ಹಾಗೆ ಕಾಣಿಸ್ತೀನಿ. ನಾನೇನೂ ಸಣ್ಣಗಾಗಿಲ್ಲ......'' ಎಂದು ತಾಯಿಗೆ ಸಮಾಧಾನ ಹೇಳಿದ.
``ಇಲ್ಲ ನೀನು ಮುಂಚಿನ ಹಾಗಿಲ್ಲ......''
``ಅಮ್ಮಾ.... ನಾನು ಆರಾಮವಾಗಿದ್ದೇನೆ. ನೀನು ಸುಮ್ಮನೆ ಏನೇನೋ ಯೋಚನೆ ಮಾಡಬೇಡ. ನನಗೇನೂ ಆಗಿಲ್ಲ.''
ಸನತ್ ಹಾಗೆ ಹೇಳಿದರೂ ಸಾನಿಧ್ಯಾಳಿಗೆ ಸಮಾಧಾನವೇನೂ ಆಗಲಿಲ್ಲ. ಆದರೂ ಮತ್ತೆ ಮತ್ತೆ ಮಗನನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ.
``ಅಮ್ಮಾ..... ನಮ್ಮ ಆಫೀಸಿನಿಲ್ಲಿ ಈ ಭಾನುವಾರ ಫ್ಯಾಮಿಲಿ ಗೆಟ್ ಟು ಗೆದರ್ ಇದೆ. ನೀನು, ಅಪ್ಪ ಇಬ್ಬರೂ ಬನ್ನಿ,'' ಎಂದು ಸನತ್ ಹೇಳಿದ.
``ಓ.... ಹೌದಾ, ವೆರಿ ನೈಸ್. ಅಂದರೆ ಎಲ್ಲರೂ ಫ್ಯಾಮಿಲಿ ಕರೆದುಕೊಂಡು ಬರಬೇಕಾ.....?''
``ಹ್ಞೂಂ.... ಅಮ್ಮ, ಅಪ್ಪ, ಹೆಂಡತಿ, ಮಕ್ಕಳು ಹೀಗೆ ಎಲ್ಲ ಫ್ಯಾಮಿಲಿಯಾಗಿ ಇರುತ್ತಾರೆ. ಅಮ್ಮಾ.... ನೀನು ಹೊಸ ಮಾಡರ್ನ್ ಡ್ರೆಸ್ ಹಾಕಿಕೊಂಡು ಬರಬೇಕು ಆಯ್ತಾ......?''
``ಮಾಡರ್ನ್ ಡ್ರೆಸ್....!? ಅಯ್ಯೋ ನಾನು ಅದನ್ನೆಲ್ಲಾ ಹಾಕಿಕೊಳ್ಳುವುದಿಲ್ಲವಲ್ಲಾ......''
``ಅಮ್ಮಾ..... ಹೋದ್ರೆ ಹೋಗ್ಲಿ ಸೀರೆ ಬೇಡ. ಅಟ್ಲೀಸ್ಟ್ ಚೂಡಿದಾರ್ ಹಾಕಿಕೊಂಡು ಬಾ.''





