ನಿಮ್ಮ ಮುಖಾರವಿಂದ ನಳನಳಿಸುತ್ತಿದ್ದು, ಕೈ ಕಾಲುಗಳು ಮಾತ್ರ ಕಳಾಹೀನವಾಗಿದ್ದರೆ, ಸರಿ ಎನಿಸದು. ಇದಕ್ಕೆ ಪರಿಹಾರವೇನು…?
ಎಷ್ಟೋ ಯುವತಿಯರ ಮುಖ ಚಂದ್ರಮನಂತೆ ಹೊಳೆಯುತ್ತಿದ್ದು, ಕೈಕಾಲುಗಳು ಮಾತ್ರ ಅಂದಗೆಟ್ಟಿದ್ದರೆ ಗುಡ್ ಪರ್ಸನಾಲಿಟಿ ಇಂಪ್ರೆಶನ್ ಹಾಳಾಗುತ್ತದೆ. ಮುಖ ಮತ್ತು ಕೈಕಾಲುಗಳ ಬಣ್ಣದಲ್ಲಿ ಅಂತರ ಉಂಟಾಗುವುದು ಒಂದು ಮಾಮೂಲಿ ಸಮಸ್ಯೆ ಆಗಿದೆ. ನಿಮ್ಮ ಮುಖಭಾವ ಗೌರವರ್ಣದಿಂದ ನಳನಳಿಸುತ್ತಿದ್ದು, ಕೈಕಾಲು ಮಾತ್ರ ಡಾರ್ಕ್ ಆಗಿದ್ದರೆ, ಇದಕ್ಕೆ ಕಾರಣ ನಿವಾರಣೆ ಎರಡೂ ಅರಿಯಬೇಕಾದ್ದು ಮುಖ್ಯ.
ಅಂತರ ಉಂಟಾಗಲು ಕಾರಣ
ದೇಹದ ಇತರ ಭಾಗಗಳಿಗಿಂತ ಮುಖದ ಬಣ್ಣ ತೇಲಿದಂತಿರುವುದಕ್ಕೆ ಪ್ರಮುಖ ಕಾರಣ ಎಂದರೆ, ಜನ ಕೇವಲ ಫೇಸ್ ಸ್ಕಿನ್ ಕೇರ್
ಕಡೆ ಮಾತ್ರ ಗಮನಹರಿಸುತ್ತಾ, ಇತರ ಭಾಗ ನಿರ್ಲಕ್ಷಿಸುವುದೇ ಆಗಿದೆ. ದಿನವಿಡೀ ಮುಖವನ್ನು 4-5 ಸಲ ತೊಳೆಯುವ ಕೆಲಸ ನಡೆದೇ ಇರುತ್ತದೆ. ಅದರ ಮೇಲೆ ಕ್ರೀಂ, ಲೋಶನ್ ಹಚ್ಚುತ್ತಲೇ ಇರುತ್ತಾರೆ. ಜೊತೆಗೆ ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಿಸಿಕೊಳ್ಳಲು, ಸನ್ ಸ್ಕ್ರೀನ್ ಲೋಶನ್ ಸಹ ಬಳಸುತ್ತಾರೆ. ಹೀಗಾಗಿ ಮುಖ ಸೇಫ್ ಆಯಿತು, ಕೈಕಾಲು ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಬಿಸಿಲು, ಕೊಳಕು, ಮಾಲಿನ್ಯಗಳ ಕಾರಣ ಕೈಕಾಲುಗಳ ಸ್ಕಿನ್ ನಲ್ಲಿ ಮೆಲನಿನ್ ಅಂಶ ಕ್ರಮೇಣ ಹೆಚ್ಚುತ್ತದೆ. ಇದರಿಂದಾಗಿ ಅದು ಕಪ್ಪಾಗ ತೊಡಗುತ್ತದೆ. ಇಂಥ ಕೊಳಕಿನ ವಾತಾವರಣಕ್ಕೆ ಕೈಕಾಲು ಬೇಗ ಒಡ್ಡಿಕೊಳ್ಳುತ್ತದೆ. ಅನೇಕ ಸಲ ಪೋಷಕಾಂಶಗಳ ಕೊರತೆಯೂ, ಶುಭ್ರತೆ ಸ್ವಚತೆಯ ಅಭಾವದ ಜೊತೆಗೂಡಿ, ಕೈಕಾಲು ಕಪ್ಪಾಗಲು ಕಾರಣವಾಗುತ್ತದೆ.
ಪಾಲಿಸಬೇಕಾದ 3 ಸ್ಟೆಪ್ಸ್
ಸ್ಟೆಪ್ 1 : ಎಲ್ಲಕ್ಕೂ ಮೊದಲು ನೀವು ಮುಖಕ್ಕೆ ಮಾಡುತ್ತಿರುವಂತೆಯೇ, ನಿಮ್ಮ ಕೈಕಾಲುಗಳಿಗೂ ಸಹ ಕಾಳಜಿವಹಿಸಿ ನೈಟ್ ಸ್ಕಿನ್ ಕೇರ್ ರೊಟೀನ್ ನಲ್ಲಿ ಶಾಮೀಲುಗೊಳಿಸಿ. ರಾತ್ರಿ ಮಲಗುವ ಮುನ್ನ ಕೋಝಿಕ್ ಆ್ಯಸಿಡ್, ಗ್ಲೈಕೋಲಿಕ್ ಆ್ಯಸಿಡ್ ತುಂಬಿದ ಕ್ರೀಮನ್ನು ಕೈಕಾಲುಗಳಿಗೆ ಧಾರಾಳ ಹಚ್ಚಿರಿ. ಇದರಿಂದ ಆ ಭಾಗದ ಸ್ಕಿನ್ನಿನ ಕೋಲೋಜೆನ್ ಹೆಚ್ಚುತ್ತದೆ, ಬಣ್ಣ ತೇಲುತ್ತದೆ.
ಸ್ಟೆಪ್: ಮುಖಕ್ಕೆ ಸನ್ ಸ್ಕ್ರೀನ್ ಹಚ್ಚಿಕೊಂಡ ತಕ್ಷಣವೇ ನಿಮ್ಮ ಕೈಕಾಲುಗಳಿಗೂ ಮರೆಯದೆ ಅದನ್ನು ಹಚ್ಚಿಕೊಳ್ಳಿ. ಮನೆಯಿಂದ ಹೊರಗೆ ಹೊರಡುವ ಮೊದಲು ಅಗತ್ಯವೋಗಿ SPF 50 ನ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ನ್ನು ಮುಖಕ್ಕೆ ಮಾತ್ರವಲ್ಲದೆ, ಕೈ ಕಾಲಿಗೂ ಹಚ್ಚಿಕೊಳ್ಳಿ. ಇದರಿಂದ ಸೂರ್ಯನ UVA, UVB ಕಿರಣಗಳ ಬಾಧೆ ತಪ್ಪುತ್ತದೆ, ನಿಮ್ಮ ಕೈಕಾಲು ಕಪ್ಪಾಗದೆ ತಿಳಿಯಾಗುತ್ತವೆ.
ಸ್ಟೆಪ್: ನಿಮ್ಮ ದೈನಂದಿನ ಆಹಾರದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ರಿಚ್ ಫುಡ್ಸ್ ಹೇರಳವಾಗಿರಲಿ. ವಿಟಮಿನ್ ಸಿ ಧಾರಾಳ ತುಂಬಿರುವ ಕಿತ್ತಳೆಹಣ್ಣು, ಮೂಸಂಬಿ, ಚಕ್ಕೋತಾ, ನಿಂಬೆಹಣ್ಣು, ದಾಳಿಂಬೆ, ಕಿವೀ ಫ್ರೂಟ್, ಕಮಾಕ್ಷಿ ಹಣ್ಣು ಇತ್ಯಾದಿಗಳನ್ನು ಸೇವಿಸಿ. ಪಾಲಕ್ ಸೊಪ್ಪು, ಬಾದಾಮಿ, ನೆಲ್ಲಿಕಾಯಿ ಸಹ ಇರಲಿ. ಇದರಿಂದ ಕೈಕಾಲುಗಳ ಚರ್ಮ ಆಂತರಿಕವಾಗಿ ಸದೃಢಗೊಳ್ಳುತ್ತದೆ.
– ಮೋನಿಕಾ





