ನೀಳ್ಗಥೆ – ಶುಭಾ ಶ್ರೀನಾಥ್
ಕಳೆದ ಸಂಚಿಕೆಯ ಕಥೆ…..
ಸಾನಿಧ್ಯಾ ಸೂರಜ್ ದಂಪತಿಗಳ ಅಪರೂಪದ ಒಬ್ಬನೇ ಮಗನಾದ ಸನತ್ ಎಂದರೆ ತಾಯಿಗೆ ಎಲ್ಲಿಲ್ಲದ ಅತೀ ಮುದ್ದು. ಇತರರಿಗಿಂತ 4 ಪಟ್ಟು ಹೆಚ್ಚಾಗಿಯೇ ಮಗನನ್ನು ಮುದ್ದಿಸಿ, ಗಂಡನಿಂದ ಅವನನ್ನು ಸೋಮಾರಿ ಆಗಿಸಬೇಡ ಎಂದು ಬೈಸಿಕೊಳ್ಳುತ್ತಿದ್ದಳು. ಚಿಕ್ಕಂದಿನಿಂದಲೂ ಮಗ ಬಯಸಿದ್ದನ್ನು ಕ್ಷಣ ಮಾತ್ರದಲ್ಲಿ ರೆಡಿ ಮಾಡುತ್ತಿದ್ದ ಸಾನಿಧ್ಯಾ, ಮುಂದೆ ಅವನು ಕಾಲೇಜು ಮುಗಿಸಿ, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಸ್ವತಂತ್ರನಾದರೂ, ಸ್ವಾವಲಂಬಿಯಾಗಲು ಬಿಡದೆ, ಸದಾ ಅವನ ಎಲ್ಲಾ ಕೆಲಸ ಮಾಡಿಡುತ್ತಿದ್ದಳು. ಇದರಿಂದ ಮಗ ಸನತ್ ಬಗ್ಗೆ ತಂದೆಗೆ ಅಸಮಾಧಾನವಿತ್ತು. ಮುಂದೆ ಆಫೀಸಿಗೆ ಹೊಸ ಬಾಸ್ ಬಂದ ನಂತರ, ಕ್ರಮೇಣ ಸನತ್ ನ ನಡವಳಿಕೆಯಲ್ಲಿ ಬಹಳ ಬೇಸರ ಕಾಣಿಸಿತು. ಇದ್ದಕ್ಕಿದ್ದಂತೆ ಅವನು ಬೇಸರದಿಂದ ಮುಖ ಬಾಡಿಸಿಕೊಂಡಿದ್ದೇಕೆ…..?
…… ಮುಂದೆ ಓದಿ
ಕಣ್ಣರಿಯದಿದ್ದರೂ ಕರುಳರಿಯದೇ ಎಂಬಂತೆ ಸನತ್ ಗೆ ತನ್ನ ಬಾಸ್ ಸೃಜನಾಳನ್ನು ಕಂಡಾಗಿಂದ ಮನಸ್ಸು ತಳಮಳಗೊಂಡಿತು. ಮುಂದೆ ತಾಯಿ ತಂದೆಯರನ್ನು ಆಫೀಸಿನ ಫಂಕ್ಷನ್ ಗೆ ಕರೆದುಕೊಂಡು ಹೋದಾಗ, ಅಲ್ಲಿ ಸೃಜನಾಳ ತಾಯಿ ಸೌಭಾಗ್ಯಾರನ್ನು ಕಂಡು, ಸನತ್ ನ ತಾಯಿತಂದೆ ಚಿಂತೆಗೊಳಗಾಗಿದ್ದು ಏಕೆ…..?
“ಯಾಕೋ ಕಂದ, ಇತ್ತೀಚೆಗೆ ನಿನಗೆ ಯಾವುದರಲ್ಲಿಯೂ ಆಸಕ್ತಿಯಿಲ್ಲ…..?” ಮೃದುವಾಗಿ ಕೆನ್ನೆ ಸವರಿ, ಹಣೆಯ ಕೂದಲನ್ನು ಹಿಂದೆ ಸರಿಸಿ ಹಣೆಗೆ ಹೂಮುತ್ತನಿಟ್ಟು ಕೇಳಿದಳು.
“ಅಮ್ಮಾ….. ಹಾಗೇನೂ ಇಲ್ಲ. ಚೆನ್ನಾಗಿಯೇ ಇದ್ದೇನೆ.”
“ಆಫೀಸಿನಲ್ಲಿ ಏನಾದರೂ ತೊಂದರೆ ಇದೆಯೇ….?”
“ಹಾಗೇನೂ ಇಲ್ಲಮ್ಮ…..”
“ಮತ್ತೆ ಬೇರೆ ಏನು ಯೋಚನೆ? ಆಫೀಸ್ ಕೆಲಸ ಬಹಳ ಕಷ್ಟ ಅನಿಸಿದರೆ ಅಪ್ಪನ ಜೊತೆಗೆ ಅವರ ಆಫೀಸಿಗೆ ಹೋಗು. ಅಲ್ಲಿ ನೀನೇ ಬಾಸ್ ನಿನ್ನನ್ನು ಕೇಳುವವರು ಇರುವುದಿಲ್ಲ.”
“ಅಮ್ಮಾ…… ಹಾಗೇನೂ ಇಲ್ಲ. ನನಗೆ ಕೆಲಸದಲ್ಲಿ ಏನೂ ಕಷ್ಟವಿಲ್ಲ. ಇದೇ ಕೆಲಸ ಮಾಡಲು ನನಗೆ ಇಷ್ಟವಿದೆ.”
“ಮತ್ತೆ ಯಾಕೆ ಹೀಗೆ ಸಣ್ಣಗಾಗುತ್ತಿದ್ದೀಯಾ…..?”
“ಅಮ್ಮಾ….. ನಿನ್ನ ಕಣ್ಣಿಗೆ ಯಾವಾಗಲೂ ಹಾಗೆಯೇ ಸಣ್ಣಗೆ ಆದ ಹಾಗೆ ಕಾಣಿಸ್ತೀನಿ. ನಾನೇನೂ ಸಣ್ಣಗಾಗಿಲ್ಲ……” ಎಂದು ತಾಯಿಗೆ ಸಮಾಧಾನ ಹೇಳಿದ.
“ಇಲ್ಲ ನೀನು ಮುಂಚಿನ ಹಾಗಿಲ್ಲ……”
“ಅಮ್ಮಾ…. ನಾನು ಆರಾಮವಾಗಿದ್ದೇನೆ. ನೀನು ಸುಮ್ಮನೆ ಏನೇನೋ ಯೋಚನೆ ಮಾಡಬೇಡ. ನನಗೇನೂ ಆಗಿಲ್ಲ.”
ಸನತ್ ಹಾಗೆ ಹೇಳಿದರೂ ಸಾನಿಧ್ಯಾಳಿಗೆ ಸಮಾಧಾನವೇನೂ ಆಗಲಿಲ್ಲ. ಆದರೂ ಮತ್ತೆ ಮತ್ತೆ ಮಗನನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ.
“ಅಮ್ಮಾ….. ನಮ್ಮ ಆಫೀಸಿನಿಲ್ಲಿ ಈ ಭಾನುವಾರ ಫ್ಯಾಮಿಲಿ ಗೆಟ್ ಟು ಗೆದರ್ ಇದೆ. ನೀನು, ಅಪ್ಪ ಇಬ್ಬರೂ ಬನ್ನಿ,” ಎಂದು ಸನತ್ ಹೇಳಿದ.
“ಓ…. ಹೌದಾ, ವೆರಿ ನೈಸ್. ಅಂದರೆ ಎಲ್ಲರೂ ಫ್ಯಾಮಿಲಿ ಕರೆದುಕೊಂಡು ಬರಬೇಕಾ…..?”
“ಹ್ಞೂಂ…. ಅಮ್ಮ, ಅಪ್ಪ, ಹೆಂಡತಿ, ಮಕ್ಕಳು ಹೀಗೆ ಎಲ್ಲ ಫ್ಯಾಮಿಲಿಯಾಗಿ ಇರುತ್ತಾರೆ. ಅಮ್ಮಾ…. ನೀನು ಹೊಸ ಮಾಡರ್ನ್ ಡ್ರೆಸ್ ಹಾಕಿಕೊಂಡು ಬರಬೇಕು ಆಯ್ತಾ……?”
“ಮಾಡರ್ನ್ ಡ್ರೆಸ್….!? ಅಯ್ಯೋ ನಾನು ಅದನ್ನೆಲ್ಲಾ ಹಾಕಿಕೊಳ್ಳುವುದಿಲ್ಲವಲ್ಲಾ……”
“ಅಮ್ಮಾ….. ಹೋದ್ರೆ ಹೋಗ್ಲಿ ಸೀರೆ ಬೇಡ. ಅಟ್ಲೀಸ್ಟ್ ಚೂಡಿದಾರ್ ಹಾಕಿಕೊಂಡು ಬಾ.”
“ಓ.ಕೆ. ಚೂಡಿದಾರ್ ಹಾಕಿಕೊಂಡು ಬರುತ್ತೇನೆ.”
ಭಾನುವಾರ ಬಂದೇಬಿಟ್ಟಿತು. ಸಾನಿಧ್ಯಾ, ಸೂರಜ್ ಇಬ್ಬರಿಗೂ ಮಗನ ಆಫೀಸ್ ಸ್ಟಾಫ್ ಹೇಗಿರುತ್ತಾರೆ ನೋಡಬೇಕು ಎನ್ನುವ ಕಾತುರವಿತ್ತು. ಸಾನಿಧ್ಯಾ ಹಳದಿ ಮತ್ತು ಗುಲಾಬಿ ಮಿಶ್ರಿತ ಚೂಡಿದಾರ್ ಹಾಕಿಕೊಂಡು, ಕೂದಲನ್ನು ಜಡೆ ಹೆಣೆದು ಸಿದ್ಧಳಾಗಿ ಬಂದಳು. ಸೂರಜ್ ಕೂಡಾ ನೀಲಿ ಜೀನ್ಸ್, ಟೀ ಶರ್ಟ್ ಧರಿಸಿ ಯುವಕನಂತೆ ಸಿದ್ಧವಾಗಿದ್ದರು. ಸನತ್ ಕೂಡ ತಂದೆಗೆ ಮ್ಯಾಚಿಂಗ್ ಆಗುವ ಜೀನ್ಸ್, ಟೀಶರ್ಟ್ ಧರಿಸಿದ್ದ. ಯಾವಾಗಲೂ ಅಪ್ಪಮಗ ಹೆಚ್ಚುಕಮ್ಮಿ ಒಂದೇ ರೀತಿಯ ಡ್ರೆಸ್ ಧರಿಸುತ್ತಿದ್ದರು. ಮೂವರು ಜನರು ಫ್ಯಾಮಿಲಿ ಗೆಟ್ ಟು ಗೆದರ್ ಏರ್ಪಡಿಸಿದ್ದ ರೆಸಾರ್ಟ್ ಗೆ ಬಂದರು.
ಸುತ್ತಲೂ ತೆಂಗಿನ ಮರ, ವಿವಿಧ ಬಣ್ಣದ ಹೂಗಳಿಂದ ತುಂಬಿದ ತೋಟದ ನಡುವೆ ಸ್ವಿಮ್ಮಿಂಗ್ ಪೂಲ್, ಮಕ್ಕಳಿಗೆ ಆಟವಾಡುವ ಜೋಕಾಲಿ, ಸೀಸಾ, ಜಾರು ಬಂಡಿ ಮುಂತಾದ ಆಕರ್ಷಣೆಗಳಿಂದ ಕೂಡಿದ್ದ ರಮಣೀಯವಾದ ರೆಸಾರ್ಟ್ ಅದಾಗಿತ್ತು.
ರೆಸಾರ್ಟ್ ಒಳಗೆ ಬರುತ್ತಿದ್ದಂತೆ ಸನತ್ ನ ಗೆಳೆಯರಾದ ಅಭಿಷೇಕ್, ಅಭಿಲಾಷ್, ಅಚ್ಯುತ್ ತಮ್ಮ ತಾಯಿ ತಂದೆಯರನ್ನು ಸನತ್ ನಿಗೆ ಮತ್ತು ಅವನ ತಾಯಿ ತಂದೆಗೆ ಪರಿಚಯಿಸಿದರು. ಸನತ್ ಕೂಡ ಗೆಳೆಯರ ಫ್ಯಾಮಿಲಿಗೆ ತನ್ನ ಹೆತ್ತವರನ್ನು ಪರಿಚಯಿಸಿದ. ಎಲ್ಲರೂ ಮಾತನಾಡುತ್ತಾ ತಿಂಡಿ ತಿನ್ನಲು ಹೊರಟರು.
ಉಪ್ಪಿಟ್ಟು, ಕೇಸರಿಭಾತ್, ಇಡ್ಲಿ, ಚಟ್ನಿ, ವಡೆ, ದೋಸೆ, ಬ್ರೆಡ್, ಬಟರ್, ಜಾಮ್, ಕಟ್ ಫ್ರೂಟ್ಸ್ ನ ರಿಚ್ ಬ್ರೇಕ್ ಫಾಪ್ಟ್ ಸಿದ್ಧವಾಗಿತ್ತು. ರುಚಿಯಾದ ತಿಂಡಿಯನ್ನು ಎಲ್ಲರೂ ಸವಿದರು. ತಿಂಡಿ ಮುಗಿಸಿ ಕಾನ್ಛರೆನ್ಸ್ ಹಾಲ್ ಗೆ ಬಂದಾಗ ಸನತ್ ನ ಹೊಸ ಮ್ಯಾನೇಜರ್ ಸೃಜನಾ ಎದುರಾದರು.
“ಅಮ್ಮಾ, ಇವರು ನಮ್ಮ ಹೊಸ ಮ್ಯಾನೇಜರ್ ಸೃಜನಾ,” ಎಂದು ಸನತ್ ತನ್ನ ತಾಯಿ ತಂದೆಗೆ ಪರಿಚಯಿಸಿದ.
ಸಾನಿಧ್ಯಾ ಮತ್ತು ಸೂರಜ್ ಆಕೆಗೆ ನಮಸ್ಕರಿಸಿದರು. ಇಬ್ಬರ ದೃಷ್ಟಿ ಸೃಜನಾ ಮತ್ತು ಆಕೆಯ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಕಡೆಗೆ ಹರಿಯಿತು.
“ಇರು ನಮ್ಮ ತಾಯಿ,” ಎಂದು ಸೃಜನಾ ತನ್ನ ತಾಯಿಯನ್ನು ಸನತ್ ನ ಹೆತ್ತವರಿಗೆ ಪರಿಚಯಿಸಿದಾಗ, ಸೂರಜ್ ಸಾನಿಧ್ಯಾ ಇಬ್ಬರೂ ಬಹಳ ಅಚ್ಚರಿಯಿಂದ ಕೈ ಜೋಡಿಸಿದರು. ಸುಮಾರು 55-60ರ ಆಸುಪಾಸಿನ ಆ ಮಹಿಳೆ ಮುಗಿಲ ಬಣ್ಣದ ಚೂಡಿದಾರ್ ಧರಿಸಿ, ಒತ್ತಾದ ಕೂದಲನ್ನು ಎತ್ತಿ ಕಟ್ಟಿದ್ದರು. ದುಂಡು ಮುಖ, ತೀಕ್ಷ್ಣ ಕಂಗಳು, ಹಾಲು ಬಿಳುಪಿನ ಮೈ ಬಣ್ಣ, ಕೆಂಪು ತುಟಿಗಳು, ಸರಳ ಉಡುಗೆ ತೊಡುಗೆಯಲ್ಲಿದ್ದ ಆಕೆ ಬಹಳ ಲಕ್ಷಣವಾಗಿದ್ದ ಆಕೆಯನ್ನು ಸೌಭಾಗ್ಯಾ ಎಂದು ಸೂರಜ್ ಮತ್ತು ಸಾನಿಧ್ಯಾ ಗುರುತಿಸಿದರು. ಆಕೆ ಕೂಡಾ ಸೂರಜ್ ಮತ್ತು ಸಾನಿಧ್ಯಾರನ್ನು ಅಚ್ಚರಿಯಿಂದ ನೋಡಿ ಸನತ್ ಕಡೆಗೆ ಪ್ರಶ್ನಾರ್ಥಕಾಗಿ ನೋಡಿದಳು. ಸಾನಿಧ್ಯಾ `ಹೌದು,’ ಎನ್ನುವಂತೆ ತಲೆ ಆಡಿಸಿದಳು.
ಸನತ್ ಕೂಡ ಯಾವುದೋ ತಿಳಿಯದ ಅನುಭಾವದಂತಾಗಿ ಅವರ ಪಾದಕ್ಕೆ ನಮಸ್ಕಾರ ಮಾಡಿದ. ಸಾನಿಧ್ಯಾ ಸನತ್ ಗೆ ವಯಸ್ಸಾದ ಹಿರಿಯರನ್ನು ಕಂಡರೆ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಳ್ಳುವುದನ್ನು ಚಿಕ್ಕಂದಿನಿಂದಲೂ ಅಭ್ಯಾಸ ಮಾಡಿಸಿದ್ದಳು.
“ನಿನ್ನ ಇಷ್ಟಗಳೆಲ್ಲಾ ನೆರವೇರಲಿ ಮಗು,” ಎಂದು ಸನತ್ ನನ್ನು ತಬ್ಬಿ ಅವನ ಹಣೆಗೆ ಮುದ್ದಿಟ್ಟರು. ಒಂದೆರಡರು ನಿಮಿಷ ಅಲ್ಲಿ ಮೌನ ಏರ್ಪಟ್ಟಿತ್ತು.
ಸೃಜನಾ ಬೇರೆ ಸಿಬ್ಬಂದಿ ವರ್ಗದವರ ಜೊತೆ ಮಾತನಾಡುತ್ತಿದ್ದ ಕಾರಣ ಇವರ ಕಡೆಗೆ ಗಮನ ಹರಿಸಲಿಲ್ಲ.
“ಸನತ್ ಬಾರೋ, ಇವೆಂಟ್ಸ್ ಸ್ಟಾರ್ಟ್ ಆಗ್ತಾ ಇದೆ,” ಎಂದು ಅಭಿಷೇಕ್ ಕರೆದಾಗ ಸನತ್, ತಾಯಿ ತಂದೆಯೊಂದಿಗೆ ಸ್ಟೇಜ್ ನತ್ತ ನಡೆದ.
ತನ್ನಿಷ್ಟದ ವಸ್ತುವನ್ನು ತನ್ನಿಂದ ಕಸಿದುಕೊಂಡು ಹೋದಾಗ ಆಗುವ ವೇದನೆಯನ್ನು ಸೌಭಾಗ್ಯಾ ಅನುಭವಿಸಿದರು. ಇನ್ನೂ ಸ್ವಲ್ಪ ಹೊತ್ತು ಸನತ್ ತನ್ನ ಜೊತೆ ಇರಬಾರದಾಗಿತ್ತೇ ಅನಿಸಿತು.

ಸೃಜನಾ ಸ್ಟೇಜ್ ಮೇಲೆ ಕುಳಿತಿದ್ದರೆ, ಸೌಭಾಗ್ಯಾ ಮ್ಯಾನೇಜರ್ ಮತ್ತು ಇತರೆ ಟಾಪ್ ಲೆವೆಲ್ ಮ್ಯಾನೇಜ್ಮೆಂಟ್ ಫ್ಯಾಮಿಲಿಗೆಂದು ಸೀಮಿತವಾಗಿದ್ದ ಆಸನದಲ್ಲಿ ಕುಳಿತರು. ಸಾನಿಧ್ಯಾ ಮತ್ತು ಸೂರಜ್ ಇಬ್ಬರೂ ಸ್ವಲ್ಪ ದೂರದಲ್ಲಿ ಕುಳಿತರು. ಇಬ್ಬರಿಗೂ ಕೂಡಾ ಮುಂದೆ ನಡೆದ ಕಾರ್ಯಕ್ರಮಗಳನ್ನು ವೀಕ್ಷಿಸುವ ಯಾವುದೇ ಆಸಕ್ತಿಯಿರಲಿಲ್ಲ. ಅದೇ ರೀತಿ ಸನತ್ ಗೆ ಕೂಡಾ ಏನೋ ಒಂದು ರೀತಿಯ ಸಂತೋಷ, ಒಂದು ವಿಧವಾದ ದುಃಖವಾಗುತ್ತಿತ್ತು. `ಸೌಭಾಗ್ಯಾ ತನ್ನನ್ನು ತಬ್ಬಿಕೊಂಡಾಗ ತನಗೇಕೆ ಒಂದು ರೀತಿಯ ಮಧುರವಾದ ಅನುಭೂತಿ ಉಂಟಾಯಿತು. ಇದೇ ರೀತಿಯ ಅನುಭವ ಹಿಂದೊಮ್ಮೆ ಎಲ್ಲಿಯೋ ಸಿಕ್ಕಿತಲ್ಲ ಎಂದು ಯೋಚಿಸಿದ. ಹೌದು ಸೃಜನಾ ಮೇಡಂರನ್ನು ಮೊದಲ ಬಾರಿಗೆ ನೋಡಿದಾಗಲೇ ತನಗಿರುವ ಹತ್ತಿರದವರು ಎನ್ನುವ ತರ ಫೀಲಿಂಗ್ ಆಗಿತ್ತು. ಈಗ ಅವರ ತಾಯಿಯನ್ನು ಕಂಡಾಗಲೂ ಅದೇ ರೀತಿಯ ಮಧುರಾನುಭಾವವಾಗಿದ್ದು ಏಕೆ? ಅವರನ್ನು ತಬ್ಬಿಕೊಂಡಾಗ ಏನೋ ಒಂದು ವಿಧವಾದ ಪ್ರೀತಿ, ವಿಶ್ವಾಸ ತನಗಾದದ್ದು ಏಕೆ?’ ಎಂದು ಯೋಚಿಸುತ್ತಾ ಕುಳಿತ.
ಅಂದಿನ ಕಾರ್ಯಕ್ರಮಗಳು, ಊಟ, ಸ್ನ್ಯಾಕ್ಸ್ ಎಲ್ಲವೂ ಮುಗಿದಿತ್ತು. ಎಲ್ಲರೂ ಹೊರಡುವ ಸಮಯವಾಯಿತು. ಸನತ್ ಸೌಭಾಗ್ಯಾರಿಗೆ ಹೋಗಿ ಬರುತ್ತೇನೆ ಎಂದು ಹೇಳಿದಾಗ, ಅವನನ್ನು ತಬ್ಬಿ ಕಣ್ಣೀರು ಹಾಕಿ, ಮೈದಡವಿ ಕಳುಹಿಸಿದರು.
ಸಾನಿಧ್ಯಾ ಮತ್ತು ಸೂರಜ್ ಇಬ್ಬರೂ ಈಗಾಗಲೇ ಕಾರು ಹತ್ತಿ ಕುಳಿತಿದ್ದರು. ಸನತ್ ಬಂದು ತಂದೆಯ ಪಕ್ಕ ಕುಳಿತು, “ಅಪ್ಪಾ, ನೀವೇ ಡ್ರೈವ್ ಮಾಡ್ತೀರಾ….?” ಎಂದು ಕೇಳಿದ. ಸೂರಜ್ ಮೌನವಾಗಿ ಕಾರು ಚಲಾಯಿಸಿದರು. ಮೂವರು ಏನೊಂದು ಮಾತನಾಡದೆ ಮನೆಗೆ ಬಂದು ಸೇರಿದರು.
“ಸಾನಿಧ್ಯಾ….. ನನಗೆ ಹಸಿವಿಲ್ಲ. ಇವತ್ತು ಹೆವಿ ಊಟ, ಸಾಯಂಕಾಲ ಸ್ನ್ಯಾಕ್ಸ್ ಬೇರೆ ಜಾಸ್ತಿಯಾಯಿತು. ಮಲಗಿ ಕೊಳ್ತೀನಿ,” ಎಂದು ಕೋಣೆಗೆ ಹೋದರು.
“ಅಮ್ಮಾ…. ನನಗೂ ಸುಸ್ತಾಗಿದೆ. ಊಟ ಬೇಡ ನಾನು ಮಲಗ್ತೀನಿ,” ಎಂದು ಸನತ್ ಹೇಳಿದ.
ಸಾನಿಧ್ಯಾ ಇಬ್ಬರಿಗೂ ಹಾಲು ಬಿಸಿ ಮಾಡಿ ತಂದುಕೊಟ್ಟಳು. ಇಬ್ಬರೂ ಹಾಲು ಕುಡಿದು ಮಲಗಿದರು. ಸಾನಿಧ್ಯಾ ಕೂಡ ಯಾವ ಕೆಲಸ ಮಾಡಲು ಮನಸ್ಸಿಲ್ಲದ ಕಾರಣ ಮೌನವಾಗಿ ತೂಗುಯ್ಯಾಲೆಯಲ್ಲಿ ಕುಳಿತಳು. ಅವಳ ಮನಸ್ಸು ಕೂಡ ತೂಗುಯ್ಯಾಲೆಯ ರೀತಿಯಲ್ಲಿ ತೂಗುತ್ತಾ ಹಿಂದಕ್ಕೆ ಓಡಿತ್ತು.
ಸಾನಿಧ್ಯಾ ಮತ್ತು ಸೂರಜ್ ಚಿಕ್ಕ ವಯಸ್ಸಿಗೇ ಮದುವೆಯಾಗಿದ್ದರು. ಇಬ್ಬರದೂ ಅಪರೂಪದ ಮತ್ತು ಅನುರೂಪವಾದ ದಾಂಪತ್ಯವಾಗಿತ್ತು. ಸೂರಜ್ ಒಳ್ಳೆಯ ಕೆಲಸದಲ್ಲಿದ್ದರು. ಹಾಗಾಗಿ ಸುಖ ಸಂತೋಷಕ್ಕೆ ಏನೂ ಕಡಿಮೆ ಇರಲಿಲ್ಲ. ಮದುವೆಯಾಗಿ ಹತ್ತು ವರ್ಷ ಕಳೆದರೂ ಅವರಿಗೆ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಅವರಿದ್ದ ಪಟ್ಟಣದಲ್ಲಿ ಹಲವಾರು ವೈದ್ಯಕೀಯ ಪರೀಕ್ಷೆ ಜೊತೆಗೆ ಗುಡಿ ಗೋಪುರ, ಪೂಜೆ ಎಲ್ಲಾ ಮಾಡಿದರೂ ಫಲಿತಾಂಶ ಶೂನ್ಯವಾಗಿತ್ತು.
ಸೂರಜ್ ರ ತಂದೆ ತಾಯಿ ಅದೇ ಕೊರಗಿನಲ್ಲಿ ತೀರಿಕೊಂಡರು. ಸಾನಿಧ್ಯಾಳ ತಾಯಿ ತಂದೆ ಸಹ ವಯೋಸಹಜ ಕಾಯಿಲೆಯಿಂದ ತೀರಿಕೊಂಡರು. ಅದೇ ವೇಳೆಗೆ ಸೂರಜ್ ಗೆ ಬೆಂಗಳೂರಿಗೆ ವರ್ಗವಾಯಿತು. ಸೂರಜ್‌ತಾಯಿ ತಂದೆಗೆ ಒಬ್ಬನೇ ಮಗನಾಗಿದ್ದರಿಂದ ಊರಿನಲ್ಲಿದ್ದ ಮನೆ, ಜಮೀನು ಎಲ್ಲವನ್ನೂ ಮಾರಿ ಬೆಂಗಳೂರಿಗೇ ಬಂದು ನೆಲೆಸಿದರು. ಬೆಂಗಳೂರಿಗೆ ಬಂದ ಮೇಲೆ ಅಲ್ಲಿನ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೆಂದು ಹೋದಾಗ ಸಾನಿಧ್ಯಾಗೆ ಗರ್ಭಕೋಶದಲ್ಲಿ ತೊಂದರೆ ಇರುವುದರಿಂದ ಮಕ್ಕಳಾಗುವ ಸಾಧ್ಯತೆ ಇಲ್ಲ ಎಂದು ವೈದ್ಯರು ಹೇಳಿದರು.
ಆದರೆ ಸಾನಿಧ್ಯಾಳಿಗೆ ತಮ್ಮ ಮನೆಗೊಂದು ಮುದ್ದು ಮಗು ಬೇಕು. ಅದರ ಲಾಲನೆ, ಪಾಲನೆ ಮಾಡಿ, ಮುದ್ದು ಮಾಡಬೇಕು ಎಂದೆಲ್ಲಾ ಆಸೆ ಇತ್ತು. ಮಕ್ಕಳಿಲ್ಲದ ತನ್ನ ಒಡಲು ಬರಿದು, ತನ್ನ ಬಾಳು ಬರಡು, ತಾನು ಬಂಜೆ ಎಂದು ದುಃಖಿಸಿ ಅತ್ತಳು. ತನ್ನನ್ನು, `ಅಮ್ಮಾ….’ ಎಂದು ಕೂಗಲು, ಪತಿಯನ್ನು `ಅಪ್ಪಾ…” ಎಂದು ಕರೆಯಲು ಒಂದು ಮುದ್ದು ಮಗ ತಮ್ಮ ಬಾಳಿಗೆ ಬರುವುದಿಲ್ಲ ಎಂದು ತಿಳಿದು ಕಣ್ಣೀರು ಸುರಿಸಿದಳು.
ತಮ್ಮ ಮನೆ, ಮನವನ್ನು ಬೆಳಗಲು ಒಂದು ಮುದ್ದಾದ ಮಗು ಬೇಕು ಎನಿಸುತ್ತಿತ್ತು. ಮನೆಯಲ್ಲಿ ದಂಪತಿಗಳಿಬ್ಬರೇ ಬೇಸರವಾಗುತ್ತಿತ್ತು. ಎಲ್ಲಿಗಾದರೂ ಹೋದಾಗ ನಿಮಗೆ ಎಷ್ಟು ಮಕ್ಕಳು ಎಂದು ಯಾರಾದರೂ ಕೇಳಿದರೆ, ಕುತ್ತಿಗೆ ಹಿಸುಕಿಕೊಳ್ಳುವ ಹಾಗಾಗುತ್ತಿತ್ತು. ಸಂಬಂಧಿಕರು, ಗೆಳೆಯ, ಗೆಳತಿಯರೆಲ್ಲರೂ ಇನ್ನೂ ಮಕ್ಕಳಾಗಿಲ್ಲವೇ….? ಯಾಕೆ….? ಆಸ್ಪತ್ರೆಯಲ್ಲಿ ತೋರಿಸಿಕೊಳ್ಳಿ ಎಂದು ಪುಗಸಟ್ಟೆ ಸಲಹೆ ನೀಡುತ್ತಿದ್ದರು.
ತನಗೂ ಒಂದೇ ಒಂದು ಮಗು ಹುಟ್ಟಬಾರದಾ ಎಂದು ಸಾನಿಧ್ಯಾ ದುಃಖಪಡುತ್ತಿದ್ದರು. ಸೂರಜ್ ಅವಳಿಗೆ, “ನಿನಗೆ ನಾನು ಮಗು, ನನಗೆ ನೀನು ಮಗು. ಮತ್ತೇಕೆ ನಮಗೆ ಇನ್ನೊಂದು ಮಗು,” ಎಂದು ಸಾಕಷ್ಟು ಸಾಮಾಧಾನ ಮಾಡುತ್ತಿದ್ದರು. ಆದರೂ ಸಾನಿಧ್ಯಾ ತುಂಬಾ ಕೊರಗುತ್ತಿದ್ದಳು.
“ನಾವು ಒಂದು ಅನಾಥ ಮಗುವನ್ನು ಚಿಕ್ಕಂದಿನಿಂದಲೇ ದತ್ತು ತೆಗೆದುಕೊಳ್ಳೋಣ,” ಎಂದು ಹೇಳಿದರು. ಆದರೆ ಸಾನಿಧ್ಯಾ ಅದಕ್ಕೆ ಒಪ್ಪದೇ, “ನೀವು ಇನ್ನೊಂದು ಮದುವೆಯಾಗಿ,” ಎಂದು ಗಂಡನಿಗೆ ದುಂಬಾಲು ಬಿದ್ದಳು.
ಆದರೆ ಸೂರಜ್ ಗೆ ಮುತ್ತಿನಂತಹ ಹೆಂಡತಿ ಸಾನಿಧ್ಯಾ ಇರಬೇಕಾದರೆ ಅವಳಿಗೆ ಸವತಿಯನ್ನು ತಂದು ಮನೆಯಲ್ಲಿ ಜಗಳ, ಭಿನ್ನಾಭಿಪ್ರಾಯ ಉಂಟು ಮಾಡುವುದು ಬೇಡವಾಗಿತ್ತು. ಅಲ್ಲದೇ, ಸಾನಿಧ್ಯಾಳನ್ನು ಬಿಟ್ಟು ಬೇರೆಯವರನ್ನು ತನ್ನ ಬಾಳಿನಲ್ಲಿ ಕಲ್ಪಿಸಿಕೊಳ್ಳುವುದು ಕೂಡಾ ಅವರಿಗೆ ಕಷ್ಟವಾಗಿತ್ತು.
“ನಾನು ನಿನಗೆ ಮಗು, ನೀನು ನನಗೆ ಮಗು ಸುಮ್ಮನಿರು,” ಎಂದು ಸಮಾಧಾನ ಮಾಡುತ್ತಿದ್ದರು.
ಆದರೆ ಸಾನಿಧ್ಯಾ ಅದಕ್ಕೆ ಒಪ್ಪಲಿಲ್ಲ. ಕಡೆಗೆ ವೈದ್ಯರು ಇತ್ತೀಚೆಗೆ ಮಕ್ಕಳಿಲ್ಲದ ದಂಪತಿಗಳಿಗೆ ಆಶಾಕಿರಣವಾಗಿ ಬಾಡಿಗೆ ತಾಯಿಯರು ಸಿಗುತ್ತಾರೆ ಎಂದು ಸಲಹೆ ಇತ್ತರು.
ಸಾನಿಧ್ಯಾ ಬಹಳ ಬಲವಂತ ಮಾಡಿ ಸೂರಜ್ ರನ್ನು ಒಪ್ಪಿಸಿದಳು. ಇಬ್ಬರೂ ಕಾನೂನು ರೀತಿಯಲ್ಲಿ ಬಾಡಿಗೆ ತಾಯಿಯಾಗಲು ಸೂಕ್ತ ಹೆಣ್ಣು ಬೇಕೆಂಬ ಹುಡುಕಾಟದಲ್ಲಿ ತೊಡಗಿದಾಗ, ವೈದ್ಯರು ಸೌಭಾಗ್ಯಾರ ಪರಿಚಯ ಮಾಡಿಸಿದರು.
ಅಷ್ಟು ಹೊತ್ತಿಗಾಗಲೇ ಸೌಭಾಗ್ಯಾರಿಗೆ ಮದುವೆಯಾಗಿ ಒಂದು ಹೆಣ್ಣು ಮಗುವಿತ್ತು. ಅವರಿಗೆ ಚಿಕ್ಕ ವಯಸ್ಸಿಗೇ ಮದುವೆಯಾಗಿತ್ತು. ಆದ್ದರಿಂದ ಮಗಳು ಪಿಯುಸಿ 2ನೇ ವರ್ಷದಲ್ಲಿದ್ದರು. ಪತಿ ಅಪಘಾತದಲ್ಲಿ ತೀರಿಕೊಂಡಿದ್ದರು. ಈಗ ಮಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣದ ಅವಶ್ಯಕತೆ ಇತ್ತು. ಹಾಗಾಗಿ ಆಕೆ ಬಾಡಿಗೆ ತಾಯಿಯಾಗಲು ಸಿದ್ಧರಿದ್ದರು.
ಇದರಿಂದ ಸೂರಜ್ ದಂಪತಿಗಳು ಕಾನೂನು ರೀತಿಯಲ್ಲಿ ಪರಸ್ಪರ ಒಪ್ಪಿಗೆ ಪತ್ರಕ್ಕೆ ವೈದ್ಯರು ಮತ್ತು ಲಾಯರ್ ಸಮ್ಮುಖದಲ್ಲಿ ಸಹಿ ಹಾಕಿದರು. ಸೌಭಾಗ್ಯಾ ಎಲ್ಲಾ ರೀತಿಯಲ್ಲಿ ಕೂಡಾ ಬಾಡಿಗೆ ತಾಯಿಯಾಗಲು ಸಮರ್ಥರಾಗಿದ್ದಾರೆ ಎಂದು ವೈದ್ಯರು ಪರೀಕ್ಷೆ ಮಾಡಿ ದೃಢಪಡಿಸಿದರು.
ಒಂದು ಶುಭ ಮುಹೂರ್ತದಲ್ಲಿ ಬಾಡಿಗೆ ತಾಯಿಯಾಗಲು ಸೂಕ್ತ ವ್ಯವಸ್ಥೆ ನಡೆಯಿತು. ಮುಂದೆ ಒಂದೆರಡು ತಿಂಗಳು ಕಳೆದಾಗ ಸೌಭಾಗ್ಯರ ಒಡಲಿನಲ್ಲಿ ಸೂರಜ್ ರ ಕುಡಿ ಒಡಮೂಡಿತು ಎನ್ನುವ ಶುಭವಾರ್ತೆ ತಿಳಿಯಿತು. ಅಂದಿನಿಂದ ಆಕೆಯ ಆಸ್ಪತ್ರೆ ಖರ್ಚು, ಜೊತೆಗೆ ಪೌಷ್ಟಿಕ ಆಹಾರ ಎಲ್ಲವನ್ನೂ ಸೂರಜ್ ದಂಪತಿಗಳು ನೋಡಿಕೊಂಡರು.
ಸಾನಿಧ್ಯಾಳಂತೂ ದಿನ ಸೌಭಾಗ್ಯರ ಮನೆಗೆ ಹೋಗಿ ಆಕೆಯ ಯೋಗಕ್ಷೇಮ ವಿಚಾರಿಸಿಕೊಂಡು, ತಿನ್ನಲು ಏನಾದರೂ ವಿಶೇಷವಾದ ತಿಂಡಿ ತಿನಿಸುಗಳನ್ನು ಕೊಡುತ್ತಿದ್ದಳು. ಜೊತೆಗೆ ಗರ್ಭಿಣಿಯಾದ ಸಮಯದಲ್ಲಿ ಓದಲೆಂದು ಒಳ್ಳೊಳ್ಳೆಯ ಪುಸ್ತಕಗಳನ್ನು ಸಹ ಕೊಡುತ್ತಿದ್ದಳು.
ಸೌಭಾಗ್ಯಾರ ದೊಡ್ಡ ಮಗಳು ಸೃಜನಾ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಕಾರಣ ತಾಯಿಯ ಯಾವ ವಿಚಾರ ಅವಳಿಗೆ ತಿಳಿದಿರಲಿಲ್ಲ. ತನ್ನ ತಾಯಿ ತನ್ನ ಓದಿಗಾಗಿ ಹೇಗೆ ಹಣ ಕಳುಹಿಸುತ್ತಿದ್ದಾರೆ ಎಂದು ಯೋಚನೆ ಕೂಡ ಅವಳಿಗಿರಲಿಲ್ಲ. ಸೌಭಾಗ್ಯರಿಗೆ ಕೂಡಾ ಮಗಳಿಗೆ ಈ ವಿಷಯ ತಿಳಿಯುವುದು ಬೇಡವಾಗಿತ್ತು. ಆದ್ದರಿಂದ ಆಕೆ ತಾವು ಮೊದಲು ವಾಸಿಸುತ್ತಿದ್ದ ಮನೆಯನ್ನು ಖಾಲಿ ಮಾಡಿ, ಪರಿಚಯವಿಲ್ಲದ ಕಡೆ ಮನೆಯನ್ನು ಬಾಡಿಗೆ ಪಡೆದು, ಅಕ್ಕಪಕ್ಕದ ಯಾರ ಜೊತೆಗೂ ಸಂಪರ್ಕ ಇಟ್ಟುಕೊಳ್ಳದೆ ವಾಸಿಸುತ್ತಿದ್ದರು.
ಸೌಭಾಗ್ಯಾರಿಗೆ ಏಳು ತಿಂಗಳು ತುಂಬಿದಾಗ, ಸಾನಿಧ್ಯಾ ರೇಷ್ಮೆ ಸೀರೆ, ಹಣ್ಣು ತಿಂಡಿಗಳನ್ನು ತಂದು ಸೀಮಂತ ಕಾರ್ಯವನ್ನು ಮಾಡಿದಳು. ತಮ್ಮ ಮನೆಯ ನಂದಾದೀಪವನ್ನು ತನ್ನ ಜೀವ, ಜೀವನವನ್ನೇ ಒತ್ತೇ ಇಟ್ಟು ಒಡಲಲ್ಲಿ ಹೊತ್ತಿರುವ ಸೌಭಾಗ್ಯಾ ಎಂದರೆ ಸಾನಿಧ್ಯಾಳಿಗೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ, ಗೌರವವಿತ್ತು.
ನವ ಮಾಸ ತುಂಬಿದ ಒಂದು ಶುಭ ಘಳಿಗೆಯಲ್ಲಿ ಸೌಭಾಗ್ಯಾ ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತರು. ಸೌಭಾಗ್ಯಾರಂತೆಯೇ ಹಾಲು ಬಿಳಿ ಮೈಬಣ್ಣ, ಒತ್ತಾದ ಕೂದಲು, ಹವಳದ ತುಟಿ. ಮಗುವನ್ನು ಯಾರೇ ನೋಡಿದರೂ ಎತ್ತಿಕೊಂಡು ಮುದ್ದಿಸಬೇಕು ಎನ್ನುವಷ್ಟರ ಮಟ್ಟಿಗೆ ಮುದ್ದು ಮುದ್ದಾಗಿ ಬಹಳ ಚೂಟಿಯಾಗಿತ್ತು.
ಮಗುವಿಗೆ ಸನತ್ ಎಂದು ಹೆಸರಿಟ್ಟರು. ಮೂರು ತಿಂಗಳವರೆಗೆ ಬಾಣಂತಿ ಮಗುವಿಗೆ ಸಾನಿಧ್ಯಾ ಚೆನ್ನಾಗಿ ಆರೈಕೆ ಮಾಡಿದಳು. ಸೌಭಾಗ್ಯರಿಗೆ ಬೇಕಾದ ಒಳ್ಳೊಳ್ಳೆ ಹಾಲು, ಹಣ್ಣು ಹಂಪಲು, ತರಕಾರಿ ಎಂದು ಅನುದಿನ ಕೊಡುತ್ತಿದ್ದರು. ತಾಯಿ ತನ್ನ ಮಗಳಿಗೆ ಬಾಣಂತನ ಮಾಡುವ ಹಾಗೆ ಸಾನಿಧ್ಯಾ ಸೌಭಾಗ್ಯಾರನ್ನು ಸುಖದ ಸುಪ್ಪತ್ತಿಗೆಯಲ್ಲಿ ನೋಡಿಕೊಂಡಳು.
ಆದರೆ ಸೂರಜ್ ಮಾತ್ರ ಸೌಭಾಗ್ಯಾರ ವಿಚಾರದಲ್ಲಿ ನಿರ್ಲಿಪ್ತರಾಗಿದ್ದರು. ಮಗು ಬಾಣಂತಿಗೆ ಏನಾದರೂ ಬೇಕೆಂದು ಸಾನಿಧ್ಯಾ ಕೇಳಿದರೆ ಅದನ್ನು ತಂದುಕೊಡುತ್ತಿದರೇ ಹೊರತು ಆಕೆಯ ವಿಚಾರದಲ್ಲಿ ಸೆಂಟಿಮೆಂಟ್ ಬೆಳೆಸಿಕೊಳ್ಳುವುದು ಸೂರಜ್ ರಿಗೆ ಇಷ್ಟವಿರಲಿಲ್ಲ. ಮುಂದೆ ತಮ್ಮ ದಾಂಪತ್ಯ ಜೀವನಕ್ಕೆ ಅದು ಮುಳ್ಳಾಗಬಾರದು ಎಂದು ಅವರು ಆದಷ್ಟೂ ಇವೆಲ್ಲದರಿಂದ ದೂರವೇ ಉಳಿದಿದ್ದರು. ಬದಲಿಗೆ ತಮ್ಮ ಬರಡಾದ ಜೀವನಕ್ಕೆ ಸೌಭಾಗ್ಯಾ ಒಂದು ಬೆಳಕನ್ನು ತಂದುಕೊಟ್ಟಾಕೆ ಎಂಬ ಗೌರವವಿತ್ತು. ದಿನಕ್ಕೊಮ್ಮೆ ಸನತ್ ನನ್ನು ಎತ್ತಿ ಮುದ್ದಾಡುತ್ತಿದ್ದರು.
ಹೀಗೆಯೇ ದಿನಗಳು ಕಳೆದು ಸೌಭಾಗ್ಯಾರ ಬಾಣಂತನ ಮುಗಿಯಿತು. ಸೌಭಾಗ್ಯಾ ಈಗ ಸಾಕಷ್ಟು ಚೇತರಿಸಿಕೊಂಡಿದ್ದರು. ಆರೋಗ್ಯ ಸುಧಾರಿಸಿತು, ಎದ್ದು ಓಡಾಡುತ್ತಿದ್ದರು. ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳುತ್ತಿದ್ದರು. ಸಾನಿಧ್ಯಾ ಸನತ್ ಗೆ ನಿಧಾನವಾಗಿ ಹಸುವಿನ ಹಾಲನ್ನು ಕುಡಿಸಿ ಅಭ್ಯಾಸ ಮಾಡಿದ್ದರು. ಸಾನಿಧ್ಯಾ ಮಗು ಸನತ್ ನನ್ನು ಯಾವಾಗಲೂ ಎತ್ತಿಕೊಂಡು ತನ್ನ ಹತ್ತಿರವೇ ಇರುವಂತೆ ಅಭ್ಯಾಸ ಮಾಡಿಕೊಂಡಿದ್ದಳು. ರಾತ್ರಿ ಕೂಡಾ ಸನತ್ ನನ್ನು ತನ್ನ ಪಕ್ಕವೇ ಮಲಗಿಸಿಕೊಳ್ಳುತ್ತಿದ್ದಳು. ಇನ್ನೂ ಹೆಚ್ಚು ದಿನಗಳು ಸೌಭಾಗ್ಯಾ ಇವರ ಜೊತೆ ಇರುವ ಹಾಗಿರಲಿಲ್ಲ. ಕಾರಣ ಮಗಳು ಸೃಜನಾ ರಜೆಗೆಂದು ಹಾಸ್ಟೆಲ್ ನಿಂದ ಮನೆಗೆ ಬರುವವಳಿದ್ದಳು.
ಸೌಭಾಗ್ಯಾ ಬೇರೆ ಕಡೆ ಮನೆ ಮಾಡಿಕೊಂಡು ಹೊರಡುವ ದಿನ ಸಮೀಪಿಸುತ್ತಿದ್ದ ಹಾಗೆ ಮನದಲ್ಲಿಯೇ ನೋವು ಅನುಭವಿಸತೊಡಗಿದರು. ತಾನೇ ಹೆತ್ತ ಮಗುವನ್ನು ಬೇರೆಯವರ ಒಡಲಿಗೆ ಹಾಕಿ ಹೋಗುವುದು ಯಾವ ತಾಯಿಗೂ ಬೇಡ. ಆದರೆ ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುವ ಹಾಗಿರಲಿಲ್ಲ. ಕಾನೂನಿನ ಪ್ರಕಾರ ಮಗು ಸನತ್ ನನ್ನು ಸೂರಜ್‌ದಂಪತಿಗೆ ಒಪ್ಪಿಸಬೇಕಿತ್ತು. ಅಲ್ಲದೆ ಕಾಲೇಜು ಕಲಿಯುತ್ತಿರುವ ಮಗಳಿಗೆ ಅವಳ ಓದಿಗಾಗಿ ತಾನು ಇಂಥ ಕೆಲಸ ಮಾಡಿದ್ದೇನೆ ಎಂದು ತಿಳಿದರೆ ಅವಳು ತನ್ನನ್ನು ಹೇಗೆ ತಿಳಿದುಕೊಳ್ಳುತ್ತಾಳೋ ಎನ್ನುವ ಭಯ ಕೂಡಾ ಇತ್ತು. ಮುದ್ದಾದ ಪುಟ್ಟ ಸನತ್ ನನ್ನು ಬಿಟ್ಟು ಹೋಗಲು ಹೆತ್ತ ಕರಳು ಒಪ್ಪುತ್ತಿರಲಿಲ್ಲ. ಆದರೆ ದೊಡ್ಡ ಮಗಳ ಭವಿಷ್ಯಕ್ಕಾಗಿ ಮಗುವನ್ನು ಬಿಟ್ಟು ಹೋಗಲೇಬೇಕಿತ್ತು. ಒಂದು ಕಡೆ ಹಣಕ್ಕಾಗಿ ತಾನು ಕೆಟ್ಟ ಕೆಲಸ ಮಾಡಿದೆ ಎನಿಸಿದರೆ, ಮತ್ತೊಂದು ಕಡೆ ಸಾನಿಧ್ಯಾಳನ್ನು ನೋಡಿದಾಗ ಅವಳ ಒಡಲು ತುಂಬುವ ಒಂದೊಳ್ಳೆ ಕೆಲಸ ಮಾಡಿದ್ದೇನೆ ಎಂದುಕೊಳ್ಳುತ್ತಿದ್ದರು.
ಸಾನಿಧ್ಯಾ ಮತ್ತು ಸೂರಜ್ ಇಬ್ಬರೂ ನಿಮಗೆ ಮಗುವನ್ನು ನೋಡಬೇಕು ಎನಿಸಿದರೆ ಧಾರಾಳವಾಗಿ ಬಂದು ನೋಡಿಕೊಂಡು ಹೋಗಿ ಎಂದು ಹೇಳಿದರು. ಒಂದು ವೇಳೆ ತಾನೇನಾದರೂ ಹಾಗೆ ಬಂದು ಹೋಗುವುದಾದರೆ, ಹೆತ್ತ ಮಗು ಎಂಬ ಮಮತೆ ವಾಂಛೆ ಬೆಳೆಯುತ್ತದೆ ಎಂದುಕೊಂಡ ಸೌಭಾಗ್ಯಾ “ಇಲ್ಲ….. ಇನ್ನು ಮುಂದೆ ನಾನು ನಿಮ್ಮ ಬಾಳಿನಲ್ಲಿ ಬರುವುದಿಲ್ಲ. ಕಾನೂನಿನ ಪ್ರಕಾರ ಕೂಡಾ ಅದು ತಪ್ಪು,” ಎಂದು ತಿಳಿಸಿದರು.
ಮೊದಲೇ ಒಪ್ಪಂದ ಮಾಡಿಕೊಂಡಂತೆ ಸೌಭಾಗ್ಯಾ ಹೊರಡುವ ಮೊದಲು ಅವರಿಗೆ ಕೊಡಬೇಕಾದ ಹಣವನ್ನು ಸೂರಜ್ ಆಕೆಯ ಹೆಸರಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದರು. ಜೊತೆಗೆ ಸೌಭಾಗ್ಯಾರಿಗೆ ಬೇಕಾದ ಸೀರೆ, ಬಟ್ಟೆಗಳನ್ನು ಕೊಡಿಸಿದರು. ಅಂದು ಮನೆಯಲ್ಲಿ ಹಬ್ಬದ ಅಡುಗೆಯನ್ನು ಮಾಡಿ ಬಡಿಸಿದರು.

“ನಿಮ್ಮಿಂದ ತುಂಬಾ ಉಪಕಾರವಾಯಿತು. ನಿಮ್ಮ ಜೀವ, ಜೀವನ ಎಲ್ಲವನ್ನೂ ಒತ್ತೆ ಇಟ್ಟು ನಮ್ಮ ಬಾಳನ್ನು ಬೆಳಗಿದಿರಿ. ನಿಮ್ಮಿಂದ ನಮ್ಮ ಮನೆ, ಮನಸ್ಸು ಎಲ್ಲವೂ ಬೆಳಕಾಯಿತು,” ಎಂದು ಸೂರಜ್ ದಂಪತಿ ಕೈ ಮುಗಿದರು.
“ಇದರಲ್ಲಿ ನನ್ನ ಸ್ವಾರ್ಥ ಸಹ ಇದೆ. ಅದಕ್ಕೆ ತಕ್ಕಂತೆ ನೀವು ನನಗೂ ಸಹಾಯ ಮಾಡಿದ್ದೀರಿ. ನನ್ನ ಮಗಳ ಬಾಳು ಇದರಿಂದ ಹಸನಾಗುತ್ತದೆ,” ಎಂದು ಹೇಳಿದ ಸೌಭಾಗ್ಯಾ, ಕೊನೆಯ ಬಾರಿಗೆ ಮಗು ಸನತ್ ಗೆ ಹಾಲುಣಿಸಿ, ಸಾಕಷ್ಟು ಮುದ್ದು ಮಾಡಿದರು. ಮಗು ಸನತ್ ತನ್ನ ಪುಟ್ಟ ಕೈಗಳಿಂದ ಅಮ್ಮನನ್ನು ಹಿಡಿದುಕೊಂಡು ತನ್ನ ಬೊಚ್ಚು ಬಾಯಿ ಅಗಲಿಸಿ ಮುಗ್ಧ ನಗು ಬೀರಿತು. ಅದನ್ನು ನೋಡಿ ಸೌಭಾಗ್ಯಾರ ಕಣ್ಣಿಂದ ನೀರು ಜಾರಿತು.
ಅಮ್ಮ ತನ್ನನ್ನು ಬಿಟ್ಟು ಹೋಗುತ್ತಾಳೆ ಎನ್ನುವ ಅರಿವು ಆ ಪುಟ್ಟ ಪೋರನಿಗೇನು ಗೊತ್ತು? ಸೌಭಾಗ್ಯಾ ಮಗುವಿಗೆ ಮತ್ತೊಮ್ಮೆ ಲೊಚಲೊಚನೆ ಮುತ್ತಿಟ್ಟು, ಜಾರುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರೆಸಿಕೊಂಡು ಮಗುವನ್ನು ಸಾನಿಧ್ಯಾಳ ಕೈಗಿತ್ತು ಆಟೋ ಹತ್ತಿ ಹೊರಟಳು. ಸೂರಜ್ ಮತ್ತು ಸಾನಿಧ್ಯಾ ಇಬ್ಬರೂ ಸೌಭಾಗ್ಯಾ ಹೋದ ದಿಕ್ಕನ್ನೇ ನೋಡುತ್ತಾ ಕುಳಿತಿದ್ದರು. ಚಾಪೆಯ ಮೇಲೆ ಆಡುತ್ತಿದ್ದ ಮಗು ಹಸಿವಿನಿಂದ ಅತ್ತಾಗ ಸಾನಿಧ್ಯಾ ಬಾಟಲ್ ಹಾಲು ಕುಡಿಸಿದಳು. ಅಂದಿನಿಂದ ಸನತ್, ಸೂರಜ್ ಮತ್ತು ಸಾನಿಧ್ಯಾರ ಜೀವಕ್ಕೆ ಜೀವವಾಗಿ ಬೆಳೆಯತೊಡಗಿದ. ಸನತ್ ಗೆ ಎರಡು ವರ್ಷ ತುಂಬಿದಾಗ ಸೂರಜ್ ಸ್ವಂತ ಮನೆ ಕಟ್ಟಿಸಿಕೊಂಡು ಬೇರೆ ಏರಿಯಾಗೆ ಹೋದರು. ಹಾಗಾಗಿ ಸನತ್ ಗೆ ತಾನು ಬಾಡಿಗೆ ತಾಯಿಯ ಮಗ ಎಂದು ತಿಳಿಯಲು ಅವಕಾಶವೇ ಇಲ್ಲದಾಯಿತು. ಜೊತೆಗೆ ಸಾನಿಧ್ಯಾಳ ಪ್ರೀತಿ ಸ್ವಂತ ತಾಯಿಯ ಪ್ರೀತಿಯ ಹಾಗೆಯೇ ಅಪಾರವಾಗಿತ್ತು. ಸನತ್ ಅವರ ಬಾಳಿಗೆ ಬಂದ ಮೇಲೆ ಅದೃಷ್ಟ ಖುಲಾಯಿಸಿತು. ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಹಾಗಾಯಿತು.
ಸಾನಿಧ್ಯಾಳಿಗಂತೂ ಕುಳಿತರೂ ನಿಂತರೂ ಸನತ್…. ಸನತ್…. ಅವಳ ಪ್ರತಿ ಮಾತಿನಲ್ಲಿಯೂ ಸನತ್ ತುಂಬಿದ್ದ. ಸನತ್ ನ ಲಾಲನೆ, ಪಾಲನೆ, ಪೋಷಣೆಯಲ್ಲಿ ಸೂರಜ್ ಮತ್ತು ಸಾನಿಧ್ಯಾರಿಗೆ ಸೌಭಾಗ್ಯಾರ ನೆನಪು ಕಡಿಮೆಯಾಗುತ್ತಾ ಹೋಯಿತು. ಯಾವಾಗಲಾದರೊಮ್ಮೆ ಇಬ್ಬರೇ ಇದ್ದಾಗ ಎಲ್ಲಿದ್ದಾರೋ, ಹೇಗಿದ್ದಾರೋ ಎಂದು ನೆನಪಿಸಿಕೊಳ್ಳುತ್ತಿದ್ದರು.
ಸನತ್ ನನ್ನು ಯಾವ ರಾಜಕುಮಾರನಿಗೂ ಕಡಿಮೆಯಿಲ್ಲದ ಹಾಗೆ ಒಳ್ಳೊಳ್ಳೆ ಬಟ್ಟೆ, ಆಟದ ಸಾಮಾನು, ಊಟ, ತಿಂಡಿ, ಹಾಲು ಹಣ್ಣು ಹೀಗೆ ಎಲ್ಲವನ್ನೂ ಕೊಟ್ಟು ಸಾಕಿದರು. ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಓದಿಸಿದರು. ಸನತ್ ಎಷ್ಟೇ ತುಂಟನಾಗಿದ್ದರೂ, ಓದುಬರಹದಲ್ಲಿ ಮಾತ್ರ ಬಹಳ ಬುದ್ಧಿವಂತ. ಜೊತೆಗೆ ತಾನು ಶ್ರೀಮಂತ ಎನ್ನುವ ಅಹಂ ಆಗಲಿ, ಜಂಬವಾಗಲಿ ಅವನಿಗಿರಲಿಲ್ಲ. ಶಾಲಾ ಕಾಲೇಜುಗಳಲ್ಲಿ ಎಲ್ಲರಿಗೂ ಬೇಕಾದ ವಿದ್ಯಾರ್ಥಿಯಾಗಿದ್ದ. ಮುಂದೆ ಕೆಲಸಕ್ಕೆ ಸೇರಿದ ಮೇಲೆ ಅಲ್ಲಿಯೂ ಕೂಡಾ ತುಂಬಾ ಬುದ್ಧಿವಂತ. ಚೆನ್ನಾಗಿ ಕೆಲಸ ಮಾಡುತ್ತಾನೆ, ಒಳ್ಳೆಯ ಹುಡುಗ ಎಂದು ಹೆಸರು ಪಡೆದಿದ್ದ.
ಇಂದು ಸೌಭಾಗ್ಯಾರನ್ನು ಇವೆಂಟ್ ನಲ್ಲಿ ನೋಡಿದಾಗ ಸೂರಜ್ ದಂಪತಿಗೆ ಅಚ್ಚರಿಯಾಗಿತ್ತು. ಹಿಂದಿನ ಘಟನೆಗಳ ನೆನಪಿನಲ್ಲಿ ಸಾನಿಧ್ಯಾ ರಾತ್ರಿ ಪೂರ್ತಿ ನಿದ್ದೆ ಮಾಡದೆ ತೂಗುಯ್ಯಾಲೆಯಲ್ಲಿ ಕುಳಿತೇ ಇದ್ದಳು. ಬೆಳಗಿನ ಜಾವ ಐದು ಗಂಟೆಯಾದಾಗ, ನಿದ್ದೆಯಿಲ್ಲದೆ ಕಣ್ಣು ಉರಿಯುತ್ತಿತ್ತು. ಮೆಲ್ಲನೆ ಎದ್ದು ಹೋಗಿ ಒಳಗೆ ರೂಮಿನಲ್ಲಿ ಮಲಗಿಕೊಂಡಳು.
ಮರುದಿನ ಸನತ್ ತನ್ನ ಗೆಳೆಯ ಅಭಿಷೇಕ್ ಜೊತೆಗೆ ಸಿನಿಮಾಗೆ ಹೋಗಿದ್ದ. ವಾಪಸ್ ಮನೆಗೆ ಬಂದಾಗ ಮುಂಬಾಗಿಲು ಅರೆ ತೆರೆದಿತ್ತು. ಒಳ ಬಂದವನಿಗೆ ಅಪ್ಪ ಅಮ್ಮ ಮಾತಾಡುತ್ತಿದ್ದುದು ಕೇಳಿಸಿತು. ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅಪ್ಪ ಸಮಾಧಾನ ಮಾಡುತ್ತಿದ್ದರು. `ಅರೆ ಅಮ್ಮ ಏಕೆ ಅಳುತ್ತಿದ್ದಾರೆ,’ ಎಂದು ಮನಸ್ಸಿಗೆ ಖೇದವಾಯಿತು.
ತನ್ನ ರೂಮಿಗೆ ಹೋಗುತ್ತಿದ್ದವನು ಹಾಗೇ ನಿಂತ. ಕದ್ದು ಮಾತು ಕೇಳುವುದು ತಪ್ಪು ಎಂದು ಗೊತ್ತಿದ್ದರೂ ಅದೇಕೋ ಇಂದು ಅಮ್ಮ ಅಪ್ಪನ ಮಾತನ್ನು ಕೇಳಿಸಿಕೊಳ್ಳಬೇಕು ಎನಿಸಿತು. ಏಕೆಂದರೆ ಅವರ ಮಾತಿನ ನಡುವೆ ತನ್ನ ಹೆಸರು ಬರುತ್ತಿತ್ತು. ಆದ್ದರಿಂದ ಅದು ತನಗೆ ಸಂಬಂಧಿಸಿದ ವಿಷಯವೆಂದು ಅಲ್ಲಿಯೇ ನಿಂತು ಅವರ ಮಾತು ಕೇಳಿಸಿಕೊಂಡ. ತನ್ನ ರೂಮಿಗೆ ಹೋಗುವಾಗ ತುಸು ಶಬ್ದವಾಯಿತು. ಸಾನಿಧ್ಯಾ ಕಣ್ಣೊರೆಸಿಕೊಂಡು ಆಚೆ ಬಂದಳು. ಸನತ್ ಏನೂ ತಿಳಿಯದವನಂತೆ, “ಅಮ್ಮಾ, ನನಗೆ ನಿದ್ದೆ ಬರುತ್ತಿದೆ,” ಎಂದು ಹೇಳಿ ರೂಮಿಗೆ ಹೋದ. ಸಾನಿಧ್ಯಾ ತನ್ನ ಹೆತ್ತ ತಾಯಿಯಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಅವನಿಂದ ಆಗಲಿಲ್ಲ. ಹೋಗಿ ಹಾಸಿಗೆಯಲ್ಲಿ ಉರುಳಿದ. ಆದರೆ ನಿದ್ದೆ ಎಲ್ಲಿಂದ ಬರಬೇಕು?
`ನಾನು ಸಾನಿಧ್ಯಾ ಅಮ್ಮನ ಮಗನಲ್ಲ. ನನ್ನ ಹೆತ್ತಮ್ಮ ಸೌಭಾಗ್ಯ. ಅದರಿಂದಲೇ ಅಂದು ಸೃಜನಾರನ್ನು ಮೊದಲ ಸಲ ನೋಡಿದಾಗ ಇವರನ್ನು ನಾನೆಲ್ಲೋ ನೋಡಿದ್ದೆ ಎನಿಸಿದ್ದು,’ ಎಂದು ಎದ್ದು ಹೋಗಿ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡ. ಮೀಸೆ, ಗಡ್ಡ ತೆಗೆದರೆ ನಾನು ಥೇಟ್ ಸೃಜನಾ ತರಾನೇ ಎನ್ನುವುದನ್ನು ಕಣ್ಣು ಅರಿಯದಿದ್ದರೂ ಕರುಳು ಅರಿತಿತ್ತು. `ಸೃಜನಾರಿಗೂ ಹೀಗೆಯೇ ಆಗುತ್ತೋ ಏನೋ ಗೊತ್ತಿಲ್ಲ. ನನ್ನನ್ನು ನೋಡಿ ಅವರಿಗೆ ಏನೂ ಅನಿಸುತ್ತಿಲ್ಲವೇ….? ಆದರೂ ಬೇರೆಲ್ಲರಿಗಿಂತ ಹೆಚ್ಚು ವಿಶ್ವಾಸದಿಂದ ಮಾತನಾಡಿಸುತ್ತಾರೆ,’ ಎಂದು ಯೋಚಿಸಿದ.
ಒಮ್ಮೆ ಸಾನಿಧ್ಯಾ ಬಳಿ, `ಅಮ್ಮಾ , ನಾನು ಅಪ್ಪನ ಹಾಗೂ ಇಲ್ಲ, ನಿನ್ನ ಹಾಗೂ ಇಲ್ಲ. ಹಾಗಾದರೆ ನಾನು ಯಾರ ಹಾಗಿದ್ದೇನೆ,’ ಎಂದು ಕೇಳಿದ್ದು ನೆನಪಾಯಿತು.
ಅದಕ್ಕೆ ಅಮ್ಮ , `ನೀನು ನನ್ನ ಅಪ್ಪನ ಹಾಗಿದ್ದೀಯಾ,’ ಎಂದು ಹೇಳಿ ಸುಮ್ಮನಾಗಿಸಿದ್ದರು. `ಅಮ್ಮನ ಅಪ್ಪನನ್ನು ನಾನು ನೋಡಿಯೇ ಇಲ್ಲ. ಹಾಗಾಗಿ ಮುಂದೆ ಆ ಪ್ರಶ್ನೆಯೇ ಬರಲಿಲ್ಲ. ನನಗೂ ಸೃಜನಾರಿಗೂ ಒಬ್ಬರೇ ತಾಯಿ. ಅವರು ಸೌಭಾಗ್ಯಾ. ಆದರೆ ಇಬ್ಬರಿಗೂ ತಂದೆ ಬೇರೆಯವರು. ಅಮ್ಮ ಆಗಿನ ಕಾಲದಲ್ಲಿಯೇ ಬಾಡಿಗೆ ತಾಯಿಯಾಗಿ ಮಗುವನ್ನು ಹೆರಲು ಒಪ್ಪಿದ್ದಾರೆ. ಎಷ್ಟು ವಿಶಾಲ ಹೃದಯ ಅವರದು. ನನ್ನಪ್ಪ ಕೂಡಾ ಬೇರೆ ಮದುವೆಯಾಗಲು ಒಪ್ಪದೆ ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯಲು ಒಪ್ಪಿದ್ದಾರೆ. ಇನ್ನೂ ಸಾನಿಧ್ಯಾ ಅಮ್ಮ ಎಂದೆಂದೂ ನನ್ನನ್ನು ಬೇರೆಯವರ ಮಗು ಎಂದು ಭಾವಿಸಿಯೇ ಇಲ್ಲ. ತನ್ನ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಅವರ ಪ್ರೀತಿಯನ್ನೆಲ್ಲಾ ನನಗೆ ಧಾರೆ ಎರೆದು ಸಾಕಿದ್ದಾರೆ.
`ಇಂತಹ ಅಮ್ಮನನ್ನು ಬಿಟ್ಟು ನಾನೆಲ್ಲಿ ಸೌಭಾಗ್ಯಾ ಅಮ್ಮನ ಜೊತೆ ಹೋಗಿಬಿಡುತ್ತೇನೋ ಅಥವಾ ನನಗೆ ನಿಜ ತಿಳಿದರೆ ನಾನು ಏನಂದುಕೊಳ್ಳುತ್ತೇನೋ ಎಂದು ಅಮ್ಮನಿಗೆ ಭಯವಾಗಿದೆ. ಆದರೆ ಸೌಭಾಗ್ಯಾ ಅಮ್ಮಾ….. ಸೃಜನಾ ಅಕ್ಕಾ…. ಎಷ್ಟೋ ಬಾರಿ ಅಮ್ಮನ ಹತ್ತಿರ ನನಗೊಬ್ಬ ಅಕ್ಕ ಇರಬೇಕಿತ್ತು ಎಂದು ಹೇಳುತ್ತಿದ್ದೆ. ಆಗೆಲ್ಲಾ ಅಮ್ಮ `ನೀನೇ ನಮಗೆ ಮೊದಲ ಮಗು. ಅಕ್ಕ ಹೇಗೆ ಇರಲು ಸಾಧ್ಯ?’ ಎಂದು ನಗುತ್ತಿದ್ದರು.
`ಈಗ ನನ್ನ ಅಕ್ಕ ಸಿಕ್ಕಿದ್ದಾರೆ. ಅದೂ ಅವರೇ ನನ್ನ ಬಾಸ್ ಆಗಿ! ಎಲ್ಲರಂತೆ ನನಗೂ ಸಿಬ್ಲಿಂಗ್ ಇದ್ದಾರೆ! ಸೌಭಾಗ್ಯಾ ಅಮ್ಮಾ….. ಸಾನಿಧ್ಯಾ ಅಮ್ಮಾ….. ನಾನು ಯಾರ ಹತ್ತಿರ ಹೋಗುವುದು…? ನನ್ನ ಹೆತ್ತ ತಾಯಿ ಈಗ ಹತ್ತಿರದಲ್ಲಿಯೇ ಇದ್ದಾರೆ. ಒಂಬತ್ತು ತಿಂಗಳು ನನ್ನನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಸಾವು ಬದುಕಿನ ನಡುವೆ ಹೋರಾಡಿ, ಹೆರಿಗೆ ನೋವನ್ನು ಅನುಭವಿಸಿ ನನ್ನನ್ನು ತಂದವರು ಸೌಭಾಗ್ಯಾಮ್ಮ,’ ಹೀಗೆಲ್ಲಾ ಯೋಚಿಸುತ್ತಾ, `ಅಮ್ಮಾ…. ಅಮ್ಮಾ….. ಅಮ್ಮಾ….’ ಎಂದು ಕನವರಿಸುತ್ತಾ ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ತೊಳಲಾಡಿ, ಬೆಳಗಿನ ಜಾವ ನಿದ್ದೆಗೆ ಜಾರಿದ.
ಅತ್ತ ಸೂರಜ್ ಮತ್ತು ಸಾನಿಧ್ಯಾ ನಿದ್ದೆಯಿಲ್ಲದೆ ತೊಳಲಾಡುತ್ತಿದ್ದರು. `ಸನತ್ ಗೆ ಇಂದಲ್ಲ ನಾಳೆ ನಾನು ಅವನನ್ನು ಹೆತ್ತ ತಾಯಿಯಲ್ಲ ಎಂದು ತಿಳಿಯುತ್ತದೆ. ಆಗವನು ಸೌಭಾಗ್ಯಾರ ಜೊತೆ ಹೊರಟು ಹೋದರೆ ಅಥವಾ ನನ್ನ ಮೇಲೆ ಅವನಿಗಿರುವ ಪ್ರೀತಿ ಕಡಿಮೆಯಾದರೆ…. ನಾನು ಸನತ್ ನನ್ನು ಬಿಟ್ಟು ಜೀವಿಸಬಲ್ಲೆನೆ….? ಅವನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾದರೆ….. ಅಯ್ಯೋ…. ಅದನ್ನು ಯೋಚಿಸಲೂ ಕೂಡ ಸಾಧ್ಯವಿಲ್ಲ.
`ಯಶೋದೆಯು ಕೃಷ್ಣನನ್ನು ಬೆಳೆಸಿದರೇನು ದೇವಕಿಗೂ ಅವನು ಕಂದನಲ್ಲವೇ…? ಸೌಭಾಗ್ಯರಿಗೂ ಕೂಡ ತಾನು ಹೆತ್ತ ಮಗ ಸನತ್ ನ ಮೇಲೆ ಪ್ರೀತಿ, ವಾತ್ಸಲ್ಯ ಇರಬಹುದು. ಅದು ಸಹಜ. ಆದರೆ ನನಗೆ ಸನತ್ ನನ್ನು ಬಿಟ್ಟಿರಲು ಸಾಧ್ಯವಿಲ್ಲ. ಅಂತಹ ದಿನ ನನ್ನ ಬಾಳಿನಲ್ಲಿ ಬಾರದೇ ಇರಲಿ ಕೃಷ್ಣ, ನಾನೆಷ್ಟು ಸ್ವಾರ್ಥಿ ಎಂದು ನೀನು ನೆನೆಸಿಕೊಂಡರೂ ಪರವಾಗಿಲ್ಲ,’ ಎಂದು ಯೋಚಿಸುತ್ತಾ ದಿಂಬನ್ನು ಕಣ್ಣೀರಿನಿಂದ ತೋಯಿಸಿದಳು.
ಸೂರಜ್ ರಿಗೆ ಬೆಳೆದು ನಿಂತ ಮಗನ ಮುಂದೆ, `ನೀನು ಬಾಡಿಗೆ ತಾಯಿಯ ಮಗ. ನಿನ್ನ ತಾಯಿ ನನ್ನ ಕೈಹಿಡಿದ ಧರ್ಮಪತ್ನಿಯಲ್ಲ ಎಂದು ತಿಳಿದರೆ ಸನತ್ ನನ್ನ ಬಗ್ಗೆ ಏನೆಂದುಕೊಳ್ಳಬಹುದು,’ ಎಂದು ಮುಜುಗರವಾಯಿತು. ತನ್ನ ಬಗ್ಗೆ ಅವನಿಗೆ ಗೌರವ ಕಡಿಮೆ ಆಗಬಹುದು ಎಂದು ಯೋಚಿಸುತ್ತಾ ಅತ್ತಿತ್ತ ಹೊರಳಾಡುತ್ತಾ ಬೆಳಕು ಮಾಡಿದರು.
ಅಂದು ಬೆಳಗ್ಗೆ ಸನತ್ ಗೆ ಎಚ್ಚರವಾಗಿದ್ದು ಸಾನಿಧ್ಯಾಳ ಇಂಪಾದ ಹಾಡನ್ನು ಕೇಳಿ. `ಕಂಗಳ ಮುಂದೆ ಕಂಗೊಳಿಸುತಿದೆ, ಮಂಗಳ ಉಡುಪಿ ಕೃಷ್ಣನ ಮೂರುತಿ…. ಅಂಗಳದಿ ಜನನಿ ಮೊಸರನು ಕಡೆದರೆ ಛಂಗನೆ ಬಂದು ಅಪ್ಪಿದ ಮೂರುತಿ… ದ್ವಾರಕ ಪುರಿಯಲಿ ದೇಕಿ ದೇವಿಗೆ ಬಾಲಕ ರೂಪದಿ ತೋರಿದ ಮೂರುತಿ,’ ಹಾಡು ಹಾಡುತ್ತಾ, ಸನತ್ ಇಡ್ಲಿ. ದೋಸೆ ಎಲ್ಲದಕ್ಕೂ ಬೆಣ್ಣೆಯೇ ಬೇಕು ಎನ್ನುತ್ತಿದ್ದುದು, ಬೆಣ್ಣೆ ಕಡೆಯುವಾಗ ಹಿಂದಿನಿಂದ ಬಂದು ತೆಗೆದಿಟ್ಟಿದ್ದ ಬೆಣ್ಣೆಯನ್ನು ಕಳ್ಳನ ಹಾಗೆ ಬಾಯಲ್ಲಿ ಹಾಕಿಕೊಂಡು ತುಂಟ ನಗು ನಗುತ್ತಿದ್ದುದು ಎಲ್ಲಾ ನೆನಪಿಗೆ ಬಂದಿತು. ಅದಕ್ಕಾಗಿಯೇ ಸಾನಿಧ್ಯಾ ಯಾವಾಗಲೂ ಫ್ರಿಜ್ ನಲ್ಲಿ ಸದಾ ಬೆಣ್ಣೆ ಇಟ್ಟಿರುತ್ತಿದ್ದಳು. ಕಣ್ಣಿಂದ ಎರಡು ಹನಿ ಜಾರಿ ಕೆನ್ನೆಯ ಮೇಲೆ ಇಳಿಯಿತು. ದ್ವಾರಕ ಪುರಿಯಲಿ ದೇವಕಿ ದೇವಿಗೆ ಬಾಲಕ ರೂಪದಿ ತೋರಿದ ಮೂರುತಿ ಎಂದು ಹಾಡಿದಾಗ ಬೇಡವೆಂದರೂ ಸೌಭಾಗ್ಯಾರ ನೆನಪು ಬಂದಿತು. ಸನತ್ ಎದ್ದು ಹೊರಗೆ ಬಂದ. ಅಮ್ಮ ಕೃಷ್ಣನ ವಿಗ್ರಹದ ಹತ್ತಿರ ನಿಂತಿದ್ದರು. ತಲೆಗೆ ಸ್ನಾನ ಮಾಡಿದ್ದರಿಂದ ಇನ್ನೂ ನೀರು ತೊಟ್ಟಿಕ್ಕುತ್ತಿತ್ತು. ಹಣೆಯಲ್ಲಿ ಅಗಲವಾದ ಕೆಂಪು ಕುಂಕುಮ. ಅಚ್ಚ ಶ್ವೇತ ವರ್ಣದ ಕಾಟನ್ ಸೀರೆಯಲ್ಲಿ ಹಸಿರು ಅಂಚು, ಸೆರಗು ಬಂದಿದ್ದವು. ಕಣ್ಣಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಮೊಗದಲ್ಲಿ ಸಾತ್ವಿಕ ಕಳೆ ತುಂಬಿತ್ತು. `ಬಾಲ್ಯದಿಂದಲೂ ಇದೇ ಮುಖವನ್ನು ಅಮ್ಮ ಎಂದು ಒಪ್ಪಿಕೊಂಡು ಈಗ ಬೇರೆಯವರನ್ನು ಅಮ್ಮ ಎನ್ನಲು ಆಗುತ್ತದೆಯೇ? ಇಲ್ಲ ಇವರೇ ನನ್ನಮ್ಮ…. ಇವರೇ ನನ್ನಮ್ಮ……’ ಸನತ್ ನ ಮನಸ್ಸು ಗಟ್ಟಿಯಾದ ನಿರ್ಧಾರ ಮಾಡಿತು.
ಶ್ರೀಕೃಷ್ಣನ ವಿಗ್ರಹಕ್ಕೆ ಪೂಜೆ ಮಾಡಿ ದುಂಡು ಮಲ್ಲಿಗೆಯ ಹಾರ ಹಾಕಿ, ಒಂದು ಶ್ವೇತ ಗುಲಾಬಿಯನ್ನು ಮುಡಿಸಿದ್ದಳು. ಅಗರಬತ್ತಿಯ ಸುವಾಸನೆ ಜೊತೆಗೆ ಪ್ರಸಾದಕ್ಕೆ ಬೆಣ್ಣೆ ಕಾಯಿಸಿದ ತುಪ್ಪದಿಂದ ಮಾಡಿ, ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿದ ಘಮಘಮಿಸುವ ಸಜ್ಜಿಗೆ ಸಿದ್ಧವಾಗಿತ್ತು. ಕರ್ಪೂರದ ಆರತಿಯ ಪರಿಮಳ ಮನೆಯಲ್ಲಿ ಇದೆಲ್ಲದರ ಜೊತೆಗೆ ಸೇರಿತ್ತು. ಹಾಡು ಮುಗಿಸಿ ಸಾನಿಧ್ಯಾ ಕಣ್ಣೀರು ಒರೆಸಿಕೊಂಡಳು.
“ಅಮ್ಮಾ….. ಯಾಕಮ್ಮ ಅಳುತ್ತಾ ಇದ್ದೀಯಾ……? ಅಳಬೇಡ ನೀನು ಅತ್ತರೆ ನನಗೆ ಅಳು ಬರುತ್ತೆ…..” ಸನತ್ ನ ಗಂಟಲು ತುಂಬಿ ಬಂದಿತು.
ಅವನನ್ನು ತಬ್ಬಿ ಹಣೆಗೆ ಮುತ್ತಿಟ್ಟು, “ಅಳುತ್ತಿಲ್ಲ ಚಿನ್ನ…. ಈ ಹಾಡು ಹೇಳಿದರೆ ಏನೋ ಫೀಲಿಂಗ್ಸ್ ಬರುತ್ತವೆ. ದೇವಕಿ ಅಂತಹ ಮುದ್ದಾದ ಮಗುವನ್ನು ಹೆತ್ತರೂ, ಮಗುವನ್ನು ಎತ್ತಿ ಕೊಳ್ಳುವ, ಆಟ ಆಡಿಸುವ, ಅವನ ಬಾಲ್ಯದ ತುಂಟಾಟ ನೋಡುವ ಭಾಗ್ಯ ದೊರೆಯಲಿಲ್ಲ. ದೇವಕಿಯ ಮನಸ್ಸು ಎಷ್ಟು ದೊಡ್ಡದು. ತಾನು ಹೆತ್ತ ಮಗುವಿನ ಕ್ಷೇಮಕ್ಕಾಗಿ ಮಗುವನ್ನು ದೂರ ಮಾಡಿಕೊಂಡಳು.
“ಪಾಪ ಯಶೋದಾ ಕೃಷ್ಣನನ್ನು ಅಷ್ಟು ಪ್ರೀತಿಯಿಂದ ಸಾಕಿ ಸಲಹಿದರೂ ಅವಳನ್ನು ಸಾಕು ತಾಯಿ ಎಂತಲೇ ಕರೆಯುತ್ತಾರೆ ಅಲ್ವಾ….? ಈ ಹಾಡು ಹೇಳಿದರೆ ನನ್ನ ಮನಸ್ಸಿಗೆ ಏನೋ ಒಂಥರಾ ಆಗುತ್ತದೆ,” ಎನ್ನುತ್ತಾ ಕಣ್ಣೀರನ್ನು ತಡೆದರೂ ಅವಳ ಕೆನ್ನೆ ಮೇಲೆ ಕಣ್ಣೀರು ಹರಿಯಿತು.
“ನಿಜ ಅಮ್ಮಾ…. ಆದರೂ ಇದೆಲ್ಲಾ ವಿಧಿ ನಿಯಾಮಕ ಅಲ್ವಾ ಅಮ್ಮಾ…..” ಎಂದ ಸನತ್.
ಸಾನಿಧ್ಯಾ ತಕ್ಷಣ ಅವನ ಕಡೆಗೆ ನೋಡಿದಳು. ಸನತ್ ಅರ್ಥಗರ್ಭಿತವಾಗಿ ತಲೆ ಆಡಿಸಿ, “ನನಗೆಲ್ಲಾ ಗೊತ್ತಮ್ಮಾ….. ನಾನು ನಿನ್ನನ್ನು, ಅಪ್ಪನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಒಂದು ವೇಳೆ ನಾನೇನಾದರೂ ಹಾಗೆ ಹೋದರೆ ಸೃಜನಾ ಅಕ್ಕನಿಗೆ ನಿಜ ತಿಳಿಯುತ್ತದೆ. ಅದರಿಂದ ಸೌಭಾಗ್ಯಾ ಅಮ್ಮನನ್ನು ಆಕೆ ಕೀಳಾಗಿ ಕಾಣಬಹುದು. ತನ್ನಮ್ಮ ದುಡ್ಡಿಗಾಗಿ ಹೀಗೆ ಮಾಡಿದ್ದಾರೆ ಎಂದುಕೊಳ್ಳಬಹುದು. ಇಷ್ಟು ವರ್ಷಗಳು ಕಳೆದ ಮೇಲೆ ಈ ವಯಸ್ಸಿನಲ್ಲಿ ನಾನು ಅವರ ಹತ್ತಿರ ಹೋಗಿ ಮತ್ತೆ ಎರಡೂ ಸಂಸಾರದಲ್ಲಿ ಏನೇನೋ ಆಗುವುದು ಬೇಡ.
“ಸೃಜನಾ ಅಕ್ಕ ಅಮೆರಿಕಾದಲ್ಲಿ ಇದ್ದಾಗ ಕೂಡಾ ಸೌಭಾಗ್ಯಾ ಅಮ್ಮ ನನ್ನನ್ನು ನೋಡಲು ಬರಲಿಲ್ಲ. ಮನಸ್ಸು ಗಟ್ಟಿ ಮಾಡಿಕೊಂಡು, ತಾವು ಕೊಟ್ಟಿರುವ ಮಾತಿಗೆ ಬದ್ಧರಾಗಿ ನಿಂತರು. ಒಂಟಿಯಾಗಿ ಅವರ ಜೀವನ ಕಳೆದಿದ್ದಾರೆ. ಈಗ ಮಗಳ ಜೊತೆ ಆರಾಮವಾಗಿ ಇರುವ ಸಂದರ್ಭದಲ್ಲಿ ನಾನು ಹೋಗಿ ಅಲ್ಲಿ ಬಿರುಗಾಳಿ ಎಬ್ಬಿಸುವುದು ಸರಿಯಲ್ಲ.
“ಸೃಜನಾ ಅಕ್ಕಾ, ಅಮೆರಿಕಾದಲ್ಲಿ ಇದ್ದು ಬಂದಿದ್ದರೂ ಕೂಡ ಅವರಿಗೆ ಇದೆಲ್ಲ ಇಷ್ಟವಾಗುದಿಲ್ಲವೋ ಏನೋ, ಆಫೀಸಿನಲ್ಲಿ ಉನ್ನತ ಹುದ್ದೆಯಲ್ಲಿರುವ ಅವರಿಗೆ ಮುಜುಗರ ಉಂಟು ಮಾಡುವುದು ಸರಿಯಲ್ಲ. ಅವರು ಬಾಸ್ ನಾನು ಅವರ ಸಬಾರ್ಡಿನೆಟ್ ಅಷ್ಟೆಕ್ಕೇ ನಮ್ಮ ಸಂಬಂಧ ಸೀಮಿತವಾಗಿರಲಿ ಅಲ್ವಾ ಅಮ್ಮಾ….. ಅದೆಲ್ಲಾ ಮುಗಿದು ಹೋದ ಕಥೆ.
“ಅಮ್ಮಾ….. ನೀವು ನನ್ನನ್ನು, ಅಪ್ಪನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದೀರಿ. ನಾನೂ ನಿಮ್ಮನ್ನು ಹಾಗೆಯೇ ನೋಡಿಕೊಳ್ತೀನಿ. ನಾನು ಯಾವತ್ತಿದ್ದರೂ ನಿಮ್ಮ ಮಗ, ನಿಮ್ಮ ಮುದ್ದಿನ ಮಗ ಸನತ್. ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲಿಯೇ ಇದೇ ಮನೆಯಲ್ಲಿ, ನಿಮ್ಮ ಜೊತೆಗೇ ಇರುತ್ತೇನೆ. ಅದೇ ನಿಮ್ಮ ತುಂಟ, ಮುದ್ದು ಸನತ್ ಆಗಿ. ಅಮ್ಮಾ…. ಪ್ಲೀಸ್ ನಗು….” ಎಂದಾಗ ಸಾನಿಧ್ಯಾ ಸಂತಸದಿಂದ ಮಗನನ್ನು ತಬ್ಬಿಕೊಂಡು ಮುದ್ದಾಡಿದಳು.
ಇಬ್ಬರೂ ಅದೆಷ್ಟೋ ಹೊತ್ತು ಹಾಗೆಯೇ ಇದ್ದರು. ಸೂರಜ್ ಸಹ ಸನತ್ ಬಳಿ ಬಂದು ಅವನ ಬೆನ್ನು ನೇವರಿಸಿದರು.
“ಅಮ್ಮಾ….. ಹೀಗೆ ಬರೀ ಮುದ್ದು ಮಾಡ್ತೀಯೋ ಅಥವಾ ಸಜ್ಜಿಗೆ ಪ್ರಸಾದ ಕೊಡ್ತೀಯೋ. ಹೊಟ್ಟೆ ಹಸಿಯುತ್ತಿದೆ,” ಎಂದು ನಾಟಕೀಯವಾಗಿ ಹೊಟ್ಟೆಯ ಮೇಲೆ ಕೈಯಾಡಿಸಿದ.
“ಅಯ್ಯೋ….. ಬಂಗಾರ ಹೋಗಿ ಬೇಗ ಸ್ನಾನ ಮಾಡಿಕೊಂಡು ಬಾ. ನಿನಗಿಷ್ಟವಾದ ಅವರೆಕಾಳು ಉಪ್ಪಿಟ್ಟು ಕೂಡ ಮಾಡಿದ್ದೇನೆ.”
ಸನತ್ ಮತ್ತು ಸೂರಜ್ ಸ್ನಾನ ಮುಗಿಸಿ ದೇವರಿಗೆ ಕೈ ಮುಗಿದು ಬರುವ ಹೊತ್ತಿಗೆ ಘಮಘಮಿಸುವ ಬೆಳಗಿನ ತಿಂಡಿ ಟೇಬಲ್ ಮೇಲೆ ಅವರಿಗಾಗಿ ಕಾದಿತ್ತು.
“ಅಮ್ಮಾ….. ಇವತ್ತು ನೀನೇ ತಿನ್ನಿಸಬೇಕು,” ಸನತ್ ಕೇಳಿದಾಗ ಸಾನಿಧ್ಯಾ ಸಂತೋಷದಿಂದ ಉಪ್ಪಿಟ್ಟು, ಸಜ್ಜಿಗೆಯನ್ನು ತುತ್ತು ಮಾಡಿ ತಿನ್ನಿಸಿದಳು.
“ಅಮ್ಮಾ…. ನೀನೂ ತಿನ್ನು,” ಎಂದು ಸನತ್ ಅಮ್ಮನಿಗೆ ತುತ್ತಿಟ್ಟ.
“ನೀವಿಬ್ಬರೇ ಇದ್ದೀರಾ….? ನನ್ನನ್ನೇಕೆ ಸೇರಿಸಿಕೊಳ್ಳುತ್ತಿಲ್ಲ,” ಸೂರಜ್ ಹುಸಿ ಕೋಪ ತೋರಿಸುತ್ತಾ, ಮಡದಿ ಮತ್ತು ಮಗನಿಗೆ ಬಾಯಿ ತುತ್ತಿಟ್ಟರು.
ಸನತ್ ಮತ್ತು ಸಾನಿಧ್ಯಾ ಸಹ ಸೂರಜ್ ರ ಬಾಯಿಗೆ ತುತ್ತು ಇಟ್ಟರು. ಅಂದಿನ ತಿಂಡಿ ಬಹಳ ರುಚಿಯಾಗಿದೆ ಎಂದು ಎಲ್ಲರಿಗೂ ಅನಿಸಿತು.





