ನೀಳ್ಗಥೆ – ಶುಭಾ ಶ್ರೀನಾಥ್
ಸಾನಿಧ್ಯಾ ಸೂರಜ್ ದಂಪತಿಗಳ ಅಪರೂಪದ ಒಬ್ಬನೇ ಮಗನಾದ ಸನತ್ ಎಂದರೆ ತಾಯಿಗೆ ಎಲ್ಲಿಲ್ಲದ ಅತೀ ಮುದ್ದು. ಇತರರಿಗಿಂತ 4 ಪಟ್ಟು ಹೆಚ್ಚಾಗಿಯೇ ಮಗನನ್ನು ಮುದ್ದಿಸಿ, ಗಂಡನಿಂದ ಅವನನ್ನು ಸೋಮಾರಿ ಆಗಿಸಬೇಡ ಎಂದು ಬೈಸಿಕೊಳ್ಳುತ್ತಿದ್ದಳು. ಮುಂದೆ ಕೆಲಸಕ್ಕೆ ಸೇರಿದ ಮಗ ಇದ್ದಕ್ಕಿದ್ದಂತೆ ಬೇಸರದಿಂದ ಮುಖ ಬಾಡಿಸಿಕೊಂಡಿದ್ದೇಕೆ…..?
ಸ್ಟವ್ ಮೇಲೆ ಪಲ್ಯಕ್ಕಿಟ್ಟು ಮಗನನ್ನು ಎಬ್ಬಿಸಲು ಬಂದಳು ಸಾನಿಧ್ಯಾ.“ಚಿನ್ನು, ಪುಟ್ಟು, ಮರಿ ಜಾಣು ಎದ್ದೇಳು ಕಂದ…..” ಹಣೆಯ ಮೇಲಿದ್ದ ಕೂದಲನ್ನು ಮೆಲ್ಲನೆ ಸರಿಸಿ ಮೃದುವಾಗಿ ಹೂಮುತ್ತನ್ನಿಟ್ಟಳು.
“ಅಮ್ಮಾ , ಪ್ಲೀಸ್…… ಇನ್ನೊಂದು ಐದು ನಿಮಿಷ ಹ್ಞೂಂ…..ಹ್ಞೂಂ…. ನಿದ್ದೆ ಬರ್ತಾ ಇದೆ,” ಮುದ್ದು ಮಗನ ಮುದ್ದು ಮಾತು.
“ಲೇ….. ಪಲ್ಯ ಸೀದು ಹೋಗ್ತಾ ಇದೆ. ಬಾ, ಇಷ್ಟು ಬೆಳಗ್ಗೆ ಅವನನ್ನು ಯಾಕೆ ಏಳಿಸ್ತಾ ಇದ್ದೀಯ. ನನಗೆ ಆಫೀಸಿಗೆ ಟೈಮ್ ಆಗುತ್ತೆ,” ಪತಿ ಸೂರಜ್ ಕರೆದ.
“ಸನತ್ ಇವತ್ತು ಆಫೀಸಿಗೆ ಹೋಗಬೇಕು ಅಂತ ಹೇಳಿದ್ದ. ಅದಕ್ಕೆ ಅವನನ್ನು ಎಬ್ಬಿಸ್ತಾ ಇದೀನಿ,” ಎನ್ನುತ್ತಾ ಸಾನಿಧ್ಯಾ ಅಡುಗೆ ಮನೆಗೆ ಓಡಿ ಹೋಗಿ ಸೀದು ಹೋಗುತ್ತಿದ್ದ ಪಲ್ಯವನ್ನು ಇಳಿಸಿ, ಚಪಾತಿ ಲಟ್ಟಿಸತೊಡಗಿದಳು. ಮೂರು ಚಪಾತಿ ಮಾಡಿ ತಟ್ಟೆಯಲ್ಲಿಟ್ಟು, ಪಲ್ಯ ಬಡಿಸಿ ಪತಿಗೆ ಕೊಟ್ಟು ಮತ್ತೊಮ್ಮೆ ಮಗನ ಕೋಣೆಗೆ ಬಂದಳು.
“ಚಿನ್ನು, ಪುಟ್ಟು, ಮರಿ ಜಾಣು ಎದ್ದೇಳು ಕಂದ. ಇವತ್ತು ಆಫೀಸಿಗೆ ಹೋಗಬೇಕು ಅಲ್ವಾ….. ಟೈಮ್ ಆಗುತ್ತೆ,” ಎಂದಳು.
ಸನತ್ ಎದ್ದು `ಕರಾಗ್ರೆ ವಸತೆ’ ಎಂದು ಕೈ ನೋಡಿ ಹೇಳಿಕೊಂಡು, “ಅಮ್ಮಾ ಎಂಟು ಗಂಟೆ ಆಗಿದೆ. ಸ್ವಲ್ಪ ಬೇಗ ಏಳಿಸಬಾರದಿತ್ತೆ….?” ಎಂದು ಬಚ್ಚಲಿಗೆ ಓಡಿದ.
“ನಿಮ್ಮಮ್ಮ ನಿನ್ನ ಕೋಣೆಗೆ ಬಂದು ನಾಲ್ಕು ಬಾರಿ ಎಬ್ಬಿಸಿದ್ರೂ ನೀನು ಇನ್ನೂ ಐದು ನಿಮಿಷ…. ಅಂತ ಮಲಗಿಕೊಂಡೆ. ಈಗ ನೋಡಿದ್ರೆ ನಿಮ್ಮಮ್ಮ ಎಬ್ಬಿಸಲಿಲ್ಲ ಅಂತ ಹೇಳ್ತೀಯಲ್ಲಾ…..” ಚಪಾತಿ ಪಲ್ಯ ತಿನ್ನುತ್ತಾ ಸೂರಜ್ ಹೇಳಿದರು.
“ಅಮ್ಮಾ…… ಟವೆಲ್ ಪ್ಲೀಸ್,” ಸನತ್ ಬಚ್ಚಲಿನಿಂದ ಕೂಗಿದ.
ಸಾನಿಧ್ಯಾ ಅಡುಗೆ ಮನೆಯಿಂದ ಓಡಿ ಹೋಗಿ ಟವೆಲ್ ಕೊಟ್ಟು ಬಂದಳು.
“ಅಲ್ಲ…. ಸ್ನಾನಕ್ಕೆ ಹೋಗುವವನು ಟವೆಲ್ ತೆಗೆದುಕೊಂಡು ಹೋಗಬಾರದೇ…..? ಇಷ್ಟು ದೊಡ್ಡವನಾಗಿದ್ದೀಯ, ಮುಂದಿನ ವರ್ಷ ನಿನಗೆ ಮದುವೆ ಮಾಡಬೇಕು ಅಂದುಕೊಂಡಿದ್ದೀವಿ. ನಿಮ್ಮಮ್ಮ ಮಾಡೋ ಕೆಲಸ ಬಿಟ್ಟು ಓಡಿ ಬರಬೇಕು….” ಸೂರಜ್‌ಮಗನನ್ನು ಆಕ್ಷೇಪಿಸಿದರು.
“ಸಾರಿ ಅಮ್ಮಾ…. ಥ್ಯಾಂಕ್ಸ್ ಅಮ್ಮ……” ಎಂದು ಅಮ್ಮನಿಗೆ ಬಚ್ಚಲು ಮನೆಯಿಂದಲೇ ಕೂಗಿ ಹೇಳಿದ ಸನತ್.
“ಅಮ್ಮಾ….. ಎರಡು ಚಪಾತಿ ಸಾಕು.”
“ನಿನಗೆ ಇಷ್ಟ ಅಂತ ರಾಜ್ಮಾ, ಗೋಬಿ ಪಲ್ಯ ಎರಡೂ ಮಾಡಿದೀನಿ. ಮೂರು ಚಪಾತಿ ತಿನ್ನು,” ಎನ್ನುತ್ತಾ ಚಪಾತಿ ಪಲ್ಯ, ತುಪ್ಪ ಬಡಿಸಿದ ಸಾನಿಧ್ಯಾ ಡೈನಿಂಗ್ ಟೇಬಲ್ ಮೇಲೆ ಇಟ್ಟಳು.
ಸನತ್ ಅವಸರದಿಂದ ತಿನ್ನುವಾಗ ಗಂಟಲಿಗೆ ಸಿಕ್ಕಿ ಹಾಕಿಕೊಂಡು ಬಿಕ್ಕಳಿಗೆ ಬಂದಿತು. ಸಾನಿಧ್ಯಾ ಕುಡಿಯಲು ನೀರು ಕೊಟ್ಟು, “ಮೇಲೆ ನೋಡು,” ಎಂದಳು.
“ತಿಂಡಿಗೆ ಕುಳಿತುಕೊಳ್ಳುವಾಗ ನೀರು ಇಟ್ಟುಕೊಳ್ಳಬೇಕು ಅಂತ ಗೊತ್ತಿಲ್ವಾ…..” ಸೂರಜ್ ತುಸು ಕೋಪದಿಂದ ಹೇಳಿದರು.
ಸನತ್ ತಂದೆ ಮಾತಿಗೆ ಏನೂ ಹೇಳದೆ ಸುಮ್ಮನೆ ಬೇಗ ಬೇಗ ತಿಂಡಿ ಮುಗಿಸಿದ. ದಿನ ಹಾಗೆಯೇ, ಅಪ್ಪ ಏನು ಹೇಳಿದರೂ ಒಂದಕ್ಕೂ ಪ್ರತಿ ಉತ್ತರ ಕೊಡುವ ಜಾಯಮಾನವೇ ಇಲ್ಲದ ಒಳ್ಳೆಯ ಹುಡುಗ.
“ಅಮ್ಮಾ…. ಪ್ಲೀಸ್, ನನ್ನ ಬ್ರೌನ್ ಶರ್ಟ್ ಐರನ್ ಮಾಡಿಕೊಡ್ತೀಯಾ, ಟೈಮ್ ಆಗಿದೆ….” ಎಂದು ತಿಂಡಿ ತಿನ್ನುತ್ತಾ ತಾಯಿಗೆ ಹೇಳಿದ.
ಸಾನಿಧ್ಯಾ ಬೇಗನೆ ಸನತ್ ಗೆ ಅವನು ಹೇಳಿದ ಬ್ರೌನ್ ಶರ್ಟ್ ಐರನ್ ಮಾಡಿಕೊಟ್ಟಳು.
“ಅಲ್ವೋ ಸನತ್, ಒಂದ ಶರ್ಟ್ ಹಾಕಿಕೊಳ್ಳಲು ಇಡೀ ವಾರ್ಡ್ ರೋಬ್ ಕಿತ್ತು ಹಾಕಿದ್ದೀಯಾ, ನಿಮ್ಮಮ್ಮ ಈಗ ಅದೆಲ್ಲಾ ಜೋಡಿಸಬೇಕು, ರಾತ್ರಿಯೇ ಯಾವ ಬಟ್ಟೆ ಹಾಕಿಕೊಳ್ಳಬೇಕೋ ಅದನ್ನು ಎತ್ತಿಟ್ಟುಕೊಳ್ಳಲು ಏನಾಗಿದೆ ನಿನಗೆ…..” ಕೋಣೆಯ ಒಳಗೆ ಬಗ್ಗಿ ನೋಡಿ ಸೂರಜ್ ಮಗನನ್ನು ಗದರಿದರು.
“ಅಪ್ಪಾ….. ಇವತ್ತು ನಾನು, ಅಭಿಷೇಕ್, ಅಭಿಲಾಷ್ ಮೂವರೂ ಒಂದೇ ಕಲರ್ ಶರ್ಟ್ ಹಾಕಿಕೊಂಡು ಹೋಗೋಣ ಅಂತ ರಾತ್ರಿ ಡಿಸೈಡ್ ಮಾಡಿದೆ. ಆದರೆ ಬ್ರೌನ್ ಶರ್ಟ್ ಬೇಗ ಸಿಗಲಿಲ್ಲ. ಎಲ್ಲಾ ತೆಗೆದು ಹಾಕಿದೆ. ಸಾಯಂಕಾಲ ಬಂದ ಮೇಲೆ ನಾನೇ ಎಲ್ಲಾ ಎತ್ತಿಟ್ಟುಕೊಳ್ತೀನಿ,” ಎಂದ ಸನತ್.
“ಹ್ಞೂಂ…. ಹ್ಞೂಂ…. ನೋಡಿದ್ದೀನಲ್ಲಾ….. ನೀನು ಪ್ರತಿಬಾರಿ ಎತ್ತಿಟ್ಟುಕೊಳ್ಳೋ ಲಕ್ಷಣನಾ….?” ವ್ಯಂಗ್ಯವಾಡಿದರು.
“ಸನತ್, ಬೂಸ್ಟ್ ಮಾಡಿದ್ದೀನಿ ಕುಡಿದು ಹೋಗು. ಆ್ಯಪಲ್ ಹೆಚ್ಚಿ ಇಟ್ಟಿದ್ದೇ ತಿಂದೇ ಇಲ್ಲ…..”
“ಅಮ್ಮಾ…. ನೀನೇ ಆ್ಯಪಲ್ ತಿಂದು, ಬೂಸ್ಟ್ ಕುಡಿ. ನಿನಗೂ ಎನರ್ಜಿ ಬೇಕು. ಎಲ್ಲಾ ನಮಗೇ ತಿನ್ನಿಸ್ತೀಯಾ. ನನಗೆ ಟೈಮ್ ಆಯಿತು,” ಎನ್ನುತ್ತಾ ಓಡೋಡಿ ಹಾಲಿಗೆ ಬಂದವನು ಚಕ್ಕನೆ ನಿಂತು ಅಲ್ಲಿಯೇ ದೊಡ್ಡ ಸ್ಟಾಂಡ್ ಮೇಲಿಟ್ಟಿದ್ದ ಕೊಳಲನ್ನು ಊದುತ್ತಾ ನಿಂತಿದ್ದ ತಾಮ್ರದ ಶ್ರೀಕೃಷ್ಣನ ವಿಗ್ರಹಕ್ಕೆ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಿದ.
ಸಾನಿಧ್ಯಾ ಪ್ರತಿ ದಿನ ಬೆಳಗ್ಗೆ ಸ್ನಾನ ಮಾಡಿ ಮನೆ ದೇವರ ಪೂಜೆ ಮುಗಿಸಿ ಹಾಲಿನಲ್ಲಿ ಇಟ್ಟಿದ್ದ ಶ್ರೀಕೃಷ್ಣನ ವಿಗ್ರಹಕ್ಕೆ ಹೂ ಮುಡಿಸಿ, ದೀಪ ಬೆಳಗಿಸುತ್ತಿದ್ದಳು. ಮಗ ಎಲ್ಲಿಗೆ ಹೋಗಬೇಕಾದರೂ ಶ್ರೀಕೃಷ್ಣನಿಗೆ ಕೈ ಮುಗಿದು ಹೋಗುವ ಅಭ್ಯಾಸವನ್ನು ಚಿಕ್ಕಂದಿನಿಂದಲೇ ರೂಢಿ ಮಾಡಿಸಿದ್ದಳು. ಇಂದು ಮಲ್ಲಿಗೆ ಹಾರದಿಂದ ಅಲಂಕೃತನಾದ ಶ್ರೀಕೃಷ್ಣನನ್ನು ಕಣ್ತುಂಬಾ ನೋಡಿ ಭಕ್ತಿಯಿಂದ ಕೈ ಮುಗಿದ. ಹಾಲಿನ ತುಂಬಾ ಮಲ್ಲಿಗೆಯ ಘಮದ ಜೊತೆಗೆ ನವಿರಾದ ಊದಿನ ಕಡ್ಡಿಯ ಘಮ ಸೇರಿತ್ತು.
“ಅಮ್ಮಾ…. ಒಂದು ಜೊತೆ ಸಾಕ್ಸ್ ಕೊಡ್ತಿಯಾ, ಹಾಗೆ ವಾಟರ್ ಬಾಟಲ್ ಗೆ ಸ್ವಲ್ಪ ನೀರು ತುಂಬಿಸಿ ಕೊಟ್ಬಿಡು ಪ್ಲೀಸ್.” ಸಾನಿಧ್ಯಾ ವಾಟರ್ ಬಾಟಲ್ ಗೆ ನೀರು ತುಂಬಿಸಿ, ಹಾಗೆಯೇ ಒಗೆದ ಸಾಕ್ಸ್ ತಂದು ಕೊಟ್ಟಳು.
“ರಾತ್ರಿ ಬೇಗ ಮಲಗು ಎಂದರೆ ಮಲಗಲ್ಲ…. ಈಗ ಟೈಮ್ ಆಯ್ತು ಅಂತ ಹೀಗೆ ಅಮ್ಮಂಗೆ ಗಡಿಬಿಡಿ ಮಾಡಿ ಕಾಡ್ತೀಯಾ….” ಮಗನ ಮೇಲೆ ಸೂರಜ್ ಅಸಮಾಧಾನಗೊಂಡರು.
“ಪಾಪ ಕಣ್ರೀ….. ಮಗು ರಾತ್ರಿ ಬಹಳ ಹೊತ್ತು ವರ್ಕ್ ಮಾಡಿಕೊಳ್ತಾ ಇದ್ದ,” ಎಂದು ಮಗನನ್ನು ವಹಿಸಿಕೊಂಡಳು ಸಾನಿಧ್ಯಾ.
“ವರ್ಕ್ ಎಲ್ಲಿ ಮಾಡ್ತಿದ್ದ….. ರಾತ್ರಿ ಎರಡು ಗಂಟೆವರೆಗೆ ವೆಬ್ ಸೀರೀಸ್ ನೋಡ್ತಾ ಇದ್ದ. ನಾನು ಬಚ್ಚಲಿಗೆ ಹೋಗಲು ಎದ್ದಾಗ, ಗದರಿಸಿದ್ದಕ್ಕೆ ಹೋಗಿ ಮಲಗಿಕೊಂಡ. ನೀನು ಅವನನ್ನು ಮುದ್ದು ಮಾಡಿ ಹಾಳು ಮಾಡಿದ್ದೀ. ನಾಳೆ ಅವನಿಗೆ ಮದುವೆ ಮಾಡಿದರೆ ನಿನ್ನ ಸೊಸೆ, ನಿಮ್ಮ ಮಗನಿಗೆ ಏನೂ ಕೆಲಸ ಕಲಿಸಿಲ್ಲ ಅಂತ ನಿನ್ನನ್ನೇ ಬೈತಾಳೆ…..” ಎಂದು ಕೋಪದಿಂದ ಹೇಳಿದರು.
“ಏನಿಲ್ಲ…. ನಾನು ಒಳ್ಳೆಯ ಸೊಸೆಯನ್ನೇ ತರ್ತೀನಿ. ಅವಳು ನನ್ನ ಮಗನಿಗೆ ಬೈಯಬಾರದು ಅಂತ ಮದುವೆಗೆ ಮೊದಲೇ ಹೇಳ್ತೀನಿ,” ಎಂದು ಗಂಡನಿಗೆ ಸಮಾಧಾನ ಹೇಳಿದಳು.
“ಅಯ್ಯೋ, ನಿನ್ನ ಸುಪುತ್ರ ಹೆಲ್ಮೆಟ್ ಬಿಟ್ಟು ಹೋಗಿದ್ದಾನೆ. ಹೋಗಿ ಕೊಡು, ಇಲ್ಲದಿದ್ದರೆ ಕೆಳಗಿನಿಂದ `ಅಮ್ಮಾ…… ಹೆಲ್ಮೆಟ್’ ಅಂತಾನೇ ಇಲ್ಲಾಂದರೆ ಹಾಗೆಯೇ ಹೋಗಿ ಬಿಡ್ತಾನೆ,” ಎಂದು ಸೂರಜ್ ಹೆಂಡತಿಯನ್ನು ಕಿಚಾಯಿಸಿದರು.
ಸಾನಿಧ್ಯಾ ಮೊದಲ ಮಹಡಿಯಿಂದ ತನ್ನ 65 ಕೆಜಿ ತೂಕದ ದೇಹವನ್ನು ಹೊತ್ತುಕೊಂಡು, ಹೆಲ್ಮೆಟ್ ಹಿಡಿದು ಹೆಚ್ಚೂಕಮ್ಮಿ ಓಡಿಕೊಂಡು ಕೆಳಗಿಳಿದು ಹೋಗಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದ ಮಗನಿಗೆ ಹೆಲ್ಮೆಟ್ ಮತ್ತು ಕರ್ಚೀಫ್ ಎರಡನ್ನೂ ಕೊಟ್ಟಳು.
“ಥ್ಯಾಂಕ್ಸ್ ಅಮ್ಮಾ….. ನಾನೇ ಕೇಳೋಣ ಅಂದ್ಕೊಂಡೆ. ಆದರೆ ಅಪ್ಪ ಬೈತಾರೆ ಅಂತ ಕೇಳಲಿಲ್ಲ. ಅಮ್ಮಾ….. ರಾತ್ರಿ ಊಟಕ್ಕೆ ನನ್ನ ಕಾಯಬೇಡಿ, ಇವತ್ತು ಹೊಸ ಮ್ಯಾನೇಜರ್ ಬರುತ್ತಿದ್ದಾರೆ. ಎಲ್ಲರೂ ಸೇರಿ ನೈಟ್ ಡಿನ್ನರ್ ಗೆ ಹೋಟೆಲ್ ಗೆ ಹೋಗ್ತಾ ಇದೀವಿ. ತಡವಾಗುತ್ತೆ ಗಾಬರಿಯಾಗಬೇಡಾ…. ಓಕೆನಾ ಬೈ,” ಎಂದ.
“ಆಯ್ತು ಕಂದಾ, ಆದರೆ ಹುಷಾರು. ಆದಷ್ಟೂ ಬೇಗ ಬಾ,” ಎಂದು ಹೇಳುತ್ತಾ ಮಗನಿಗೆ ಒಂದು ಮುತ್ತು ಕೊಟ್ಟು ಬೈ ಹೇಳಿ ಮಗನ ಬೈಕ್ ಕಣ್ಮರೆಯಾಗುವವರೆಗೂ ನಿಂತಿದ್ದು ಒಳಗೆ ಬಂದಳು.
ಸನತ್ ಬಹಳ ಬುದ್ಧಿವಂತ ಹುಡುಗ. ಎಂಜಿನಿಯರಿಂಗ್ ನಲ್ಲಿ ಇದ್ದಾಗಲೇ ಕ್ಯಾಂಪಸ್ ಸೆಲೆಕ್ಷನ್ ಆಗಿ ಕೆಲಸ ಸಿಕ್ಕಿತ್ತು. ಬೆಂಗಳೂರಿನ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಅವನಿಗೆ ಯಾವಾಗಲೂ ವರ್ಕ್ ಫ್ರಮ್ ಹೋಮ್ ಇರುತ್ತಿತ್ತು. ಆದರೆ ಒಮ್ಮೊಮ್ಮೆ ಏನಾದ್ರೂ ವಿಶೇಷವಿದ್ದರೆ ಮಾತ್ರ ಆಫೀಸಿಗೆ ಹೋಗಬೇಕಾಗಿತ್ತು. ಅಂದು ಮನೆಯಲ್ಲಾ ಗಡಿಬಿಡಿ ಇರುತ್ತಿತ್ತು.
“ಆಯಿತಾ ನಿನ್ನ ಮಗನ ಸೇವೆ…..? ಮಗನಿರುವ ಸಂಭ್ರಮದಿ ಇನಿಯನ ಮರೆಯಬೇಡ ಚೆಲುವೆ,” ಎಂದು ಸೂರಜ್ ರಾಗವಾಗಿ ಹಾಡಿದರು.
“ತಗೊಳ್ಳಿ ನಿಮ್ಮ ಲಂಚ್ ಬ್ಯಾಗ್ ರೆಡಿ ಇದೆ,” ಎನ್ನುತ್ತಾ ಗಂಡನ ಕೈಗೆ ಊಟದ ಬ್ಯಾಗ್ ಕೊಟ್ಟಳು.
“ಸೂಪರ್ ಫಾಸ್ಟ್ ಕಣೇ ನೀನು. ಅಪ್ಪಮಗ ಇಬ್ಬರನ್ನೂ ನೋಡಿಕೊಂಡು, ಎಲ್ಲಾ ಮ್ಯಾನೇಜ್ ಮಾಡ್ತೀಯ,” ಎಂದು ಮೆಚ್ಚುಗೆಯಿಂದ ಹೇಳಿ, ಒಲವಿನ ಕಾಣಿಕೆಯನ್ನು ನೀಡಿ, ಊಟದ ಬ್ಯಾಗ್ ಹಿಡಿದು ಹೊರಬಂದು ಕಾರ್ ಸ್ಟಾರ್ಟ್ ಮಾಡಿ ಆಫೀಸಿಗೆ ಹೊರಟರು ಸೂರಜ್. ಕೆಂಪಾದ ಕೆನ್ನೆಯನ್ನು ಒರೆಸಿಕೊಳ್ಳುತ್ತಾ, ಪತಿಗೆ ಬೈ ಹೇಳಿ ಒಳಗೆ ಬಂದ ಸಾನಿಧ್ಯಾ, ತಿಂಡಿ ತಿಂದು ಮಗನ ರೂಮಿಗೆ ಹೋದಳು.
ಮಗನ ರೂಮಿನಲ್ಲಿ ಫ್ಯಾನ್ ಓಡುತ್ತಿತ್ತು, ಲೈಟ್ ಉರಿಯುತ್ತಿತ್ತು, ಸೆಂಟ್ ಬಾಟಲ್ ಮುಚ್ಚಳ ಕೆಳಗೆ ಬಿದ್ದಿತ್ತು, ಬಾಚಣಿಗೆ ಮಂಚದ ಮೇಲಿದ್ದರೆ, ಸ್ನಾನ ಮಾಡಿ ಮೈ ಒರೆಸಿಕೊಂಡ ಒದ್ದೆ ಟವೆಲ್ ನೆಲದ ಮೇಲೆ ಬಿದ್ದಿತ್ತು, ಒಂದಷ್ಟು ಕ್ರೀಮ್, ಪೌಡರ್ ನೆಲದ ಮೇಲೆ ಚೆಲ್ಲಿತ್ತು. ರಾತ್ರಿ ವೆಬ್ ಸೀರೀಸ್ ನೋಡುತ್ತಾ ತಿಂದಿದ್ದ ಕುರುಕರೆ, ಲೇಸ್ ಪ್ಯಾಕೆಟ್ ಗಳಲ್ಲಿ ನಾಲ್ಕು ಉಳಿದಿದ್ದ ಕವರ್ ಸಮೇತ ಕೆಳಗೆ ಬಿದ್ದಿತ್ತು. ಕುಡಿದಿದ್ದ ಸಾಫ್ಟ್ ಡ್ರಿಂಕ್ಸ್ ಬಾಟಲ್ ನ ತಳದಲ್ಲಿ ಕಾಲು ಭಾಗದಷ್ಟು ಉಳಿದಿತ್ತು, ಅದರ ಮುಚ್ಚಳ ಎಲ್ಲೋ ಕಾಣೆಯಾಗಿತ್ತು, ಅದರ ಬಾಯಿಗೆ ಇರುವೆ ಮುತ್ತಿಕೊಂಡಿದ್ದವು.
ರೂಮಿನ ಇನ್ನೊಂದು ಕಡೆ ರಾಶಿ ಬಟ್ಟೆಗಳು, ಒಂದಿಷ್ಟು ಪೇಪರ್ ಗಳು, ಕ್ಯಾಪ್ ಹಾಕದೆ ಅನಾಥವಾಗಿ ಬಿದ್ದಿದ್ದ ಪೆನ್ ಗಳು, ಮಂಚ, ಕಂಪ್ಯೂಟರ್ ಟೇಬಲ್ ಮತ್ತು ಚೇರ್ ಮೇಲೆಲ್ಲಾ ಬಿದ್ದಿದ್ದವು.
`ಮುದ್ದು ಮಗು, ವಯಸ್ಸು ಇಪ್ಪತ್ತೈದು ಆದರೂ ಇನ್ನೂ ಹೀಗೆಯೆ…..’ ಎಂದುಕೊಳುತ್ತಾ, ಅಕ್ಕರೆಯಿಂದ ಬೈದುಕೊಳುತ್ತಾ ಎಲ್ಲವನ್ನೂ ಒಂದೊಂದೆ ತೆಗೆದು ಅವುಗಳ ಜಾಗಕ್ಕೆ ಇಡತೊಡಗಿದಳು. ಸನತ್ ಆಫೀಸ್ ತಲುಪಿದಾಗ ಅವನ ಗೆಳೆಯರಾದ ಅಭಿಷೇಕ್, ಅಭಿಲಾಷ್, ಅಚ್ಚುತ್ `ಹಾಯ್….’ ಎಂದು ಅವನಿಗೆ ಕೈ ಬೀಸಿದರು.
“ಅಬ್ಬಾ…. ಮೆಟ್ರೋ ಸ್ಟೇಷನ್ ನಲ್ಲಿ ಬೈಕ್ ಪಾರ್ಕ್ ಮಾಡಿ, ಮೆಟ್ರೋ ಹತ್ತಿ, ಮತ್ತೆ ಇಲ್ಲಿನ ಸಿಟಿ ಬಸ್ ಹತ್ತಿ ಬರಲು ಸಾಕು ಸಾಕಾಯಿತು,” ಎನ್ನುತ್ತಾ ಸನತ್ ತನ್ನ ಹಣೆಯ ಮೇಲೆ ಬಂದಿದ್ದ ಬೆವರು ಒರೆಸಿಕೊಂಡ.
ಹಾಲು ಬಿಳಿ ಮೈ ಬಣ್ಣದ ಸನತ್ ನ ಹಣೆಯ ಮೇಲಿನ ಕಡು ಕಪ್ಪು ಕೇಶರಾಶಿಯ ಕೂದಲು ಗಾಳಿಗೆ ಹಾರಾಡುತ್ತಿತ್ತು. ಚಿಕ್ಕದಾದ ಗಡ್ಡ, ಮೀಸೆ, ಕೆಂಪು ತುಟಿಗಳು, ಚೆನ್ನಾಗಿ ತಿಂದುಂಡು ತುಂಬಿಕೊಂಡ ಕೆನ್ನೆಗಳು, ತೀಕ್ಷ್ಣವಾದ ಕಣ್ಣುಗಳು, ಆದರೆ ಮುಖದ ಮೇಲಿನ ಎಳಸು ಹಾಗೆಯೇ ಇತ್ತು. ಎತ್ತರಕ್ಕೆ ತಕ್ಕ ದಪ್ಪ, ಚಾಕ್ಲೇಟ್ ಹಿರೋ ತರಹ ಇದ್ದ. ಜೊತೆಗೆ ಎಲ್ಲರ ಜೊತೆಯೂ ನಗುನಗುತ್ತಾ ಮಾತಾಡುತ್ತಾ, ತನ್ನ ಸುತ್ತಲಿನ ಪರಿಸರವನ್ನು ಸದಾ ಲವಲವಿಕೆಯಿಂದ, ಸಂತಸದಿಂದ ಇಟ್ಟಿರುತ್ತಿದ್ದ. ಅವನಿದ್ದ ಕಡೆ ಮಾತು, ಹರಟೆ, ನಗು, ತಮಾಷೆ ತುಂಬಿರುತ್ತಿತ್ತು.
ಸರಿಯಾಗಿ ಹತ್ತು ಗಂಟೆಗೆ ಅವರ ಮ್ಯಾನೇಜರ್ ಬಂದರು. ನೀಲಿ ಬಣ್ಣದ ಟಾಪ್, ಕಪ್ಪು ಪ್ಯಾಂಟ್ ಧರಿಸಿ, ಕೂದಲನ್ನು ಫ್ರೀ ಬಿಟ್ಟು, ಮುಖಕ್ಕೆ ತೆಳುವಾಗಿ ಮೇಕಪ್ ಮಾಡಿಕೊಂಡಿದ್ದ ಆ ಮ್ಯಾನೇಜರನ್ನು ಸೃಜನಾ ಎಂದು ಹಳೆಯ ಮ್ಯಾನೇಜರ್‌ಪರಿಚಯಿಸಿದರು.
ಹಾಲು ಬಿಳಿ ಮೈಕಟ್ಟಿನ, ತೀಕ್ಷ್ಣ ಕಣ್ಣುಗಳ, ಕೆಂಪು ತುಟಿಗಳ ಸರಳ ಸುಂದರಿ ಆಕೆ. ಮೂಲತಃ ಕರ್ನಾಟಕದವಳೇ ಆದರೂ ಬಹಳ ಹಿಂದೆಯೇ ಹೆಚ್ಚಿನ ಓದಿಗಾಗಿ ಅಮೆರಿಕಾಕ್ಕೆ ಹೋಗಿ ಅಲ್ಲಿಯೇ ಕೆಲಸ ಸಿಕ್ಕಿ, ಇಷ್ಟು ವರ್ಷ ಅಲ್ಲಿಯೇ ಇದ್ದು, ಮದುವೆ, ಡೈವೋರ್ಸ್ ಎಲ್ಲವೂ ಮುಗಿದು ಸಾಕಾಗಿ ಇಲ್ಲಿಗೇ ನೆಲೆಸಲು ಬಂದಿದ್ದ ಅಪ್ರತಿಮ ಬುದ್ಧಿವಂತೆ.
ಎಲ್ಲರಿಗೂ ಪರಿಚಯ ಮಾಡಿಸಿ ಕೈ ಕುಲುಕಿದಾಗ ಸನತ್ ಕೂಡಾ ಸೃಜನಾರ ಕೈ ಶೇಕ್ ಹ್ಯಾಂಡ್ ಮಾಡಿದಾಗ ಯಾಕೋ ಆ ಒಂದು ಸ್ಪರ್ಶ ತುಂಬಾ ತುಂಬಾ ಹಿತವಾಗಿದೆ ಎನಿಸಿತು. ಸೃಜನಾ ಕೂಡ ನಗುತ್ತಾ ಕೈ ಕುಲುಕಿ ತುಂಬಾ ಆಸಕ್ತಿಯಿಂದ ಸನತ್ ಕಡೆಯೇ ನೋಡಿದಳು.
ಯಾಕೋ ಸನತ್ ಗೆ ಸೃಜನಾರನ್ನು ನೋಡಿದಾಗ ಈಕೆಯನ್ನು ಎಲ್ಲಿಯೋ ನೋಡಿದ್ದೇನೆ ಎನಿಸಿತು. ಅಂದೆಲ್ಲಾ ಕೆಲಸ ಮಾಡಲು ಅವನಿಗೆ ಆಸಕ್ತಿಯೇ ಇರಲಿಲ್ಲ. ಎಂದಿನಂತೆ ಗೆಳೆಯರ ಜೊತೆಗೆ ಮಾತನಾಡಲು, ತಮಾಷೆ ಮಾಡಲು ಆಗಲಿಲ್ಲ.
“ಯಾಕೋ ಸನತ್, ಇವತ್ತು ಹೀಗಿದ್ದೀಯಾ…. ಏನಾಯ್ತು…..?” ಎಂದು ಗೆಳೆಯರು ಕೇಳಿದಾಗ ಸನತ್, “ಏನೋ ಗೊತ್ತಿಲ್ಲ, ಸ್ವಲ್ಪ ತಲೆನೋವು….” ಎಂದು ಹೇಳಿ ಸುಮ್ಮನಾದ.
ಟೀಮ್ ಡಿನ್ನರ್ ಗೆ ಹೋದಾಗ ಪ್ರತಿಬಾರಿಯೂ ಅದೂ ಇದೂ ಮಾತಾಡ್ತಾ ರೋಟಿ, ದಾಲ್, ಕರಿ, ಸಿಹಿ, ಫ್ರೂಟ್ ಸಲಾಡ್, ಐಸ್‌ಕ್ರೀಂ ಮುಂತಾದವುಗಳನ್ನು ತಿನ್ನುತ್ತಿದ್ದವನು ಇಂದು ಮಾತ್ರ ಊಟ ಮಾಡಲು ಮನಸ್ಸು ಬಾರದೇ ಬರೀ ಮೊಸರನ್ನ ತಿಂದ.
“ಸನತ್ ನೀನು ಇವತ್ತು ಎಂದಿನಂತಿಲ್ಲ, ಏನಾಯ್ತು…..?” ಅಭಿಷೇಕ್ ಕೇಳಿದ.
“ಹೌದು…. ನಾನು ಮನೆಗೆ ಹೋಗ್ತೀನಿ. ಏಕೋ ಹುಷಾರಿಲ್ಲ….”
“ಹೇಗೆ ಹೋಗ್ತೀರಾ…..? ಮೊದಲೇ ಹುಷಾರಿಲ್ಲ ಅನ್ನುತ್ತೀರಿ…..” ಸೃಜನಾ ಕಳಕಳಿಯಿಂದ ಕೇಳಿದಾಗ, “ಮೆಟ್ರೋ ಸಿಗುತ್ತೆ,” ಎಂದ ಚುಟುಕಾಗಿ.
“ಬೇಡ, ಅಭಿಷೇಕ್…… ಇಫ್ ಯೂ ಡೋಂಟ್ ಮೈಂಡ್. ಸನತ್ ರನ್ನು ಡ್ರಾಪ್ ಮಾಡ್ತೀರಾ….” ಎಂದಾಗ ಅಭಿಷೇಕ್ ತನ್ನ ಕಾರಿನಲ್ಲಿ ಡ್ರಾಪ್ ಮಾಡಿದ.
ಸನತ್ ಮನೆಯ ಹತ್ತಿರ ಕಾರಿನಿಂದ ಇಳಿದು ಅಭಿಷೇಕ್ ಗೆ ಥ್ಯಾಂಕ್ಸ್ ಹೇಳಿದ.
“ಟೇಕ್ ಕೇರ್ ಸನತ್, ಯಾಕೋ ಇವತ್ತು ನೀನು ಬಹಳ ಸುಸ್ತಾಗಿದ್ದೀಯಾ. ಗುಡ್ ನೈಟ್,” ಎಂದು ಹೇಳಿ ಹೊರಟ.
ಸನತ್ ಬಹಳ ನೀರಸವಾಗಿ ಗುಡ್ ನೈಟ್ ಹೇಳಿ ಗೇಟ್ ತೆರೆದು ಒಳಬಂದು ಕಾಲಿಂಗ್ ಬೆಲ್ ಒತ್ತಿದಾಗ ಸಾನಿಧ್ಯಾ ಬಾಗಿಲು ತೆರೆದಳು.
“ಸನತ್….. ಯಾಕೋ ಸಪ್ಪಗೆ ಇದ್ದೀಯಾ…. ಏನಾಯ್ತು….?” ಮಗನ ಮುಖ ನೋಡುತ್ತಿದ್ದ ಹಾಗೆಯೇ ಕೇಳಿದಳು. ಒಂದು ಕ್ಷಣ ಮಗನ ಮುಖ ಸಪ್ಪಗಾದರೆ ಅವಳಿಗೆ ತಿಳಿದುಬಿಡುತ್ತಿತ್ತು.
“ಏನಿಲ್ಲಮ್ಮಾ….. ತುಂಬಾ ತಲೆನೋವು,” ಎಂದವನ ಹೆಗಲ ಮೇಲಿದ್ದ ಲ್ಯಾಪ್ ಟ್ಯಾಪ್ ಬ್ಯಾಗ್ ನ್ನು ತೆಗೆದುಕೊಂಡ ಸಾನಿಧ್ಯಾ, “ಹೋಗಿ ಕೈ ಕಾಲು ಮುಖ ತೊಳೆದುಕೊಂಡು ಬಾ. ಸ್ವಲ್ಪ ತೈಲ ಹಚ್ತೀನಿ, ವಾಸಿಯಾಗುತ್ತೆ,” ಎಂದಳು ಅಕ್ಕರೆಯಿಂದ.

“ಆಯ್ತಮ್ಮಾ…..” ಎಂದು ನೀರಸವಾಗಿ ಹೇಳಿ ಒಳ ನಡೆದ.
“ಊಟ ಮಾಡಿದೆಯೇನೋ….?”
“ಹ್ಞೂಂ ಅಪ್ಪಾ…. ಆಯ್ತು.”
“ಒಂದು ಲೋಟ ಬಿಸಿ ಕಾಫಿ ಮಾಡಿಕೊಡು, ತಲೆನೋವು ಕಡಿಮೆಯಾಗುತ್ತೆ,” ಸೂರಜ್ ಮಡದಿಗೆ ಹೇಳಿದರು.
ಶೂ ಸಾಕ್ಸ್ ತೆಗೆದು ಬಹಳ ಸುಸ್ತಾದವನ ಹಾಗೆ ನಿಧಾನವಾಗಿ ನಡೆದುಕೊಂಡು ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಬಂದು ಮಂಚದ ಮೇಲೆ ಉರುಳಿಕೊಂಡ.
ಸಾನಿಧ್ಯಾ ಕಾಫಿ ಮಾಡಿಕೊಂಡು ಬರುವಷ್ಟರಲ್ಲಿ ಸನತ್ ಮಂಚದ ಮೇಲೆ ಮಲಗಿದ್ದ.
“ಸನತ್, ಡ್ರೆಸ್ ಚೇಂಜ್ ಮಾಡಲ್ವಾ….”
“ಹ್ಞೂಂ…. ಹ್ಞೂಂ…..” ಎನ್ನುತ್ತಾ ಸನತ್ ಹಾಗೆಯೇ ಮಲಗಿ ನಿದ್ದೆ ಹೋದ.
ಸಾನಿಧ್ಯಾ ಅವನಿಗೆ ಹೊದಿಕೆ ಹೊದಿಸಿ, ಟವೆಲ್ ತೆಗೆದುಕೊಂಡು ಮುಖವನ್ನು ಒರೆಸಿ, ಹಣೆಯ ಮೇಲಿನ ಕೂದಲನ್ನು ಹಿಂದೆ ಸರಿಸಿ, ಅವನ ಹಣೆಗೆ ಹೂಮುತ್ತಿಟ್ಟು, ತೈಲ ಹಚ್ಚಿ, ಮೃದುವಾಗಿ ನೀವಿ ಕೊಣೆಯ ಬಾಗಿಲ ಮುಚ್ಚಿ ಹೊರಬಂದಳು.
“ಮಲಗಿಕೊಂಡನಾ…..?”
“ಹ್ಞೂಂ….. ನಿದ್ದೆ ಹೋದ. ಊಟ ಕೂಡಾ ಮಾಡಲಿಲ್ಲ……”
“ಇವತ್ತು ಆಫೀಸ್ ನಲ್ಲಿ ಡಿನ್ನರ್ ಇದೆ ಅಂತ ಹೇಳ್ನಿದಲ್ಲಾ…. ಅಲ್ಲಿ ಊಟ ಆಯ್ತು ಅಂತ ಕೂಡಾ ಹೇಳಿದ. ಮತ್ತೇಕೆ ಆತಂಕ? ಬಾ ನಾವು ಊಟ ಮಾಡೋಣ. ಬಿಸಿಲು, ಸೆಖೆ, ಮೆಟ್ರೋ, ಸಿಟಿ ಬಸ್ ಅಂತೆಲ್ಲಾ ಓಡಾಡಿ ಆಯಾಸವಾಗಿರುತ್ತೆ, ಜೊತೆಗೆ ದಿನ ಪೂರ್ತಿ ಲ್ಯಾಪ್ ಟಾಪ್ ನಲ್ಲಿ ಕೆಲಸ ಅದಕ್ಕೆ ತಲೆನೋವು ಬಂದಿರಬೇಕು,” ಎಂದು ಸೂರಜ್ ಹೇಳಿದಾಗ ಸಾನಿಧ್ಯಾ ಊಟಕ್ಕೆ ಸಿದ್ಧತೆ ಮಾಡತೊಡಗಿದಳು.
ಯಾಕೋ ಸನತ್ ಇತ್ತೀಚೆಗೆ ಮೊದಲಿನ ಹಾಗಿಲ್ಲ, ಸ್ವಲ್ಪ ಮಂಕಾಗಿ ಇರುತ್ತಾನೆ ಎನ್ನುವುದು ಸಾನಿಧ್ಯಾಳ ಅರಿವಿಗೆ ಬೇಗನೆ ಬಂದಿತು. ಮಗನಲ್ಲಿ ಒಂದು ಚೂರು ಬದಲಾವಣೆಯಾದರೂ ಅವಳ ಹೃದಯ ಅದನ್ನು ಗುರುತಿಸಿ ಬಿಡುತ್ತಿತ್ತು. `ಅದೇಕೋ ಇತ್ತೀಚೆಗೆ ಆಫೀಸಿಗೆ ಹೋಗಿ ಬಂದರೆ ಬಹಳ ಸುಸ್ತು, ತಲೆನೋವು ಎಂದು ಮಲಗಿಬಿಡುತ್ತಾನೆ. ಯಾಕೆ ಹೀಗೆ ಏನಾಗುತ್ತಿದೆ,’ ಎಂದು ಚಿಂತೆ ಕಾಡತೊಡಗಿತು.
ಸನತ್ ಅದೊಂದು ದಿನ ಆನ್ ಲೈನ್ ಮೀಟಿಂಗ್ ಮುಗಿಸಿ ಸುಮ್ಮನೆ ಕುಳಿತ್ತಿದ್ದ. ಅವನಿಗೆ ಟೀ ಕೊಡಲು ಸಾನಿಧ್ಯಾ ಒಳ ಬಂದಾಗ, ಅವನು ಏನೋ ಯೋಚನೆ ಮಾಡುತ್ತಾ ಕುಳಿತಿದ್ದ. ಬೆಳಗ್ಗೆ ಕೊಟ್ಟಿದ್ದ ಪೂರಿ, ಸಾಗು ಟೇಬಲ್ ಮೇಲೆ ಹಾಗೆಯೇ ಇತ್ತು. ಎಷ್ಟೋ ಬಾರಿ ಸನತ್ ಗೆ ಊಟ, ತಿಂಡಿ ಮಾಡಲು ಪುರಸತ್ತು ಸಿಗುತ್ತಿರಲಿಲ್ಲ. ಹಾಗಾಗಿ ಸಾನಿಧ್ಯಾ ಮಗನಿಗೆ, `ನಿನ್ನ ಮೀಟಿಂಗ್ ವಿಡಿಯೋ ಆಫ್ ಮಾಡಿ, ಬರೀ ಆಡಿಯೋ ಇಟ್ಟುಕೋ, ನಾನು ತಿನ್ನಿಸ್ತೀನಿ,’ ಎಂದು ತುತ್ತು ಕೊಟ್ಟು ಹೊರಗೆ ಬರುತ್ತಿದ್ದಳು.
“ಸನತ್, ಯಾಕೆ ತಿಂಡಿ ತಿಂದಿಲ್ಲ…..? ನಿನಗೆ ಇಷ್ಟ ಅಂತ ಪೂರಿ ಸಾಗು ಮಾಡಿದ್ದೆ. ನೀನು ನೋಡಿದರೆ ತಿಂದೇ ಇಲ್ಲ. ಪೂರಿ ಆರಿ ಹೋಗಿದೆ,” ಎಂದು ಅಕ್ಕರೆಯಿಂದ ಕೇಳಿದಳು.
“ಅಮ್ಮಾ…. ಯಾಕೋ ಬೇಜಾರು,” ಎನ್ನುತ್ತಾ ತಾಯಿ ತೊಡೆಯ ಮೇಲೆ ಮಲಗಿದ.
“ಯಾಕೋ ಅಪ್ಪು, ಏನಾಯ್ತು? ಆಫೀಸಿನಲ್ಲಿ ಏನಾದರೂ ತೊಂದರೆಯೇ?” ಎಂದು ವಿಚಾರಿಸಿದಳು.
“ಹಾಗೇನೂ ಇಲ್ಲಮ್ಮ……”
“ಹಾಗಾದ್ರೆ ಬಾ, ನಾನು ಬೇರೆ ಬಿಸಿ ಪೂರಿ ಸಾಗು ಹಾಕಿ ಕೊಡ್ತೀನಿ. ಇದನ್ನು ಆಮೇಲೆ ನಾನೇ ತಿಂತೀನಿ.”
“ಇರಲಿ ಬಿಡಮ್ಮಾ…… ಇದನ್ನೇ ತಿಂತೀನಿ.”
“ಬೇಡ ಸನತ್, ಬೇಗ ಬೇರೆ ಮಾಡಿಕೊಡ್ತೀನಿ ಹತ್ತೇ ನಿಮಿಷ,” ಎಂದು ಕೆಳಗೆ ಹೋಗಿ ಪೂರಿ ಸಾಗು ಮಾಡಿಕೊಂಡು ಬಂದಳು. ಸನತ್ ಗೆ ಮುಂದಿನ ಮೀಟಿಂಗ್ ಶುರುವಾಗಿತ್ತು. “ಸ್ವಲ್ಪ ವಿಡಿಯೋ ಆಫ್ ಮಾಡಿಕೊಂಡಿರು, ನಾನೇ ತಿಂಡಿ ತಿನ್ನಿಸಿ ಬಿಡ್ತೀನಿ,” ಎಂದು ವಿಡಿಯೋ ಆಫ್ ಮಾಡಿಸಿ ತಿಂಡಿ ತಿನ್ನಿಸಿದಳು.
ಅಂದು ರಾತ್ರಿ ಮಲಗುವಾಗ, “ರೀ, ಇತ್ತೀಚೆಗೆ ಸನತ್ ಯಾಕೋ ಮಂಕಾಗಿರುತ್ತಾನೆ. ಸರಿಯಾಗಿ ಊಟ ತಿಂಡಿ ಮಾಡುತ್ತಿಲ್ಲ,” ಎಂದು ಆತಂಕದಿಂದ ಗಂಡನ ಬಳಿ ಹೇಳಿದಳು.
“ಹೌದಾ, ಮಕ್ಕಳ ಮನಸ್ಸು ಹಾಗೆ, ಅದೂ ಈಗ ಆಫೀಸಿಗೆ ಹೋಗುತ್ತಿದ್ದಾನೆ. ಇಷ್ಟು ದಿನ ಸ್ಟೂಡೆಂಟ್ ಆಗಿದ್ದ, ಈಗ ಜಾಸ್ತಿ ಕೆಲಸ ಇರುತ್ತೆ. ಜವಾಬ್ದಾರಿ ಕೆಲಸ, ಮತ್ತೆ ಸಾಫ್ಟ್ ವೇರ್ ಕಂಪನಿಗಳಲ್ಲಿ ಸಂಬಳ ಸುಮ್ಮನೆ ಪುಗಸಟ್ಟೆ ಕೊಡುತ್ತಾರೆಯೇ? ಅದಕ್ಕೆ ತಕ್ಕಂತೆ ಕೆಲಸ ಕೊಡುತ್ತಾರೆ. ಎಲ್ಲಾ ಸರಿಹೋಗುತ್ತೆ ಬಿಡು,” ಎಂದು ಸೂರಜ್ ಹೆಂಡತಿಯನ್ನು ಸಮಾಧಾನಿಸಿದ.
“ಆದರೂ ಅಷ್ಟೊಂದು ಒತ್ತಡ ಇರುತ್ತಾ….?”
“ಹ್ಞೂಂ…. ಕೆಲಸ ಎಂದರೆ ಕಷ್ಟವೇ. ನೂರು ಜನರ ಹತ್ತಿರ ಏಗಬೇಕು, ನಿನಗೇನು ಗೊತ್ತು?”
“ಹೌದು ಬಿಡಿ. ನನಗೇನೂ ಗೊತ್ತಿಲ್ಲ,” ಎಂದು ಹುಸಿ ಮುನಿಸು ತೋರಿಸಿ ಪಕ್ಕಕ್ಕೆ ತಿರುಗಿ ಮಲಗಿದಳು.
“ಹಾಗಲ್ಲ ….. ನೋಡು ನೀನು ಹೀಗೆ ಕೋಪ ಮಾಡಿಕೊಂಡರೆ ಹೇಗೆ….. ? ನಾಳೆ ಅವನನ್ನು ಯಾಕೆ ಏನು ಅಂತ ಸ್ವಲ್ಪ ಚೆನ್ನಾಗಿ ವಿಚಾರಿಸು. ಜಾಸ್ತಿ ತೊಂದರೆ ಎನಿಸಿದರೆ ಕಂಪನಿ ಬದಲಾಯಿಸಲು ಹೇಳು,” ಎಂದು ಸಮಾಧಾನಿಸಿದರು.
“ಆಯ್ತು……”
“ಗುಡ್ ನೈಟ್. ಮಲಕ್ಕೊ…. ನನಗೆ ನಿದ್ದೆ ಬರ್ತಿದೆ. ನಾಳೆ ಆಫೀಸಿಗೆ ಹೋಗಬೇಕು,” ಎಂದು ಆಕಳಿಸುತ್ತಾ ಮಲಗಿದರು.
ಸೂರಜ್ ಈಗಾಗಲೇ ರಿಟೈರ್ಡ್ ಆಗಿದ್ದರೂ ಖಾಸಗಿಯಾಗಿ ಅವರದೇ ಆದ ಮ್ಯಾನ್ ಪವರ್ ಸಪ್ಲೈ ಮಾಡುವ ಆಫೀಸ್ ಇಟ್ಟುಕೊಂಡಿದ್ದರು. ಬೇರೆ ಬೇರೆ ಕಂಪನಿಗಳಿಗೆ ಲೇಬರ್ಸ್ ಸಪ್ಲೈ ಮಾಡುವ ಕಾಂಟ್ರಾಕ್ಟ್ ಮಾಡುತ್ತಿದ್ದರು. ಅವರ ಆಫೀಸ್ ಒಳ್ಳೆಯ ಲಾಭದಿಂದ ನಡೆಯುತ್ತಿತ್ತು.
ಸ್ವಲ್ಪ ಹೊತ್ತಿನಲ್ಲಿಯೇ ಗಂಡನ ಜೋರು ಗೊರಕೆಯ ಸದ್ದು ಕೇಳಿಸಿತು. `ಅಬ್ಬಾ….. ಮಲಗಿದ ಕೂಡಲೇ ಎರಡೇ ನಿಮಿಷದಲ್ಲಿ ನಿದ್ದೆ ಹೋಗಿ ಬಿಡುತ್ತಾರೆ. ನನಗಂತೂ ಇತ್ತೀಚೆಗೆ ನಿದ್ದೆಯೇ ಬರುವುದಿಲ್ಲ. ಇವರು ಯಾವುದನ್ನೂ ಸೀರಿಯಸ್ ಆಗಿ ತಲೆಗೆ ಹಾಕಿಕೊಳ್ಳುವುದೇ ಇಲ್ಲ…..’ ಎಂದುಕೊಳ್ಳುತ್ತಾ ಸಾನಿಧ್ಯಾ ಪಕ್ಕಕ್ಕೆ ಹೊರಳಿದಳು. ನಿದ್ದೆ ಅವಳಿಂದ ದೂರವಾಗಿತ್ತು. ಏಕೋ ಏನೋ ಸನತ್ ಚಿಕ್ಕವನಿದ್ದಾಗ ನಡೆದ ಒಂದೊಂದು ಘಟನೆಗಳು ಕಣ್ಮುಂದೆ ಬರತೊಡಗಿದವು.
ಪುಟ್ಟ ಸನತ್ ಬಹಳ ಚೂಟಿಯಾಗಿದ್ದ. ಅವನಿಗೆ ಪ್ರತಿಯೊಂದರಲ್ಲೂ ಆಸಕ್ತಿ ಇತ್ತು. ಎಲ್ಲವನ್ನೂ ಕಿತ್ತು ನೋಡಬೇಕು, ತೆಗೆದು ನೋಡಬೇಕು ಎನ್ನುವ ಕುತೂಹಲ. ಅಷ್ಟೇ ಅಲ್ಲದೆ, ಛಲವಾದಿ ಕೂಡ ಆಗಿದ್ದ.
ಬಹುಶಃ ಆಗ ಅವನು ಒಂಬತ್ತು ತಿಂಗಳ ಮಗುವಾಗಿದ್ದ. ಅಂದು ಸ್ನಾನ ಮಾಡಿಸಿ, ಪೌಡರ್ ಹಚ್ಚಿ, ಹಣೆಗೆ ಕಾಡಿಗೆ ಇಟ್ಟು ಮಲಗಿಸಲು ಹೋದಾಗ ಅವನ ದೃಷ್ಟಿ ಕೆಳಗೆ ಬಿದ್ದಿದ್ದ ಪೌಡರ್ ಡಬ್ಬಿ ಮೇಲೆ ಬಿದ್ದಿತ್ತು. ಅದನ್ನು ನೆಟ್ಟಗೆ ನಿಲ್ಲಿಸಬೇಕು ಎನ್ನುವ ಹಠ ಅವನಿಗೆ. ನಿದ್ದೆ ತೂಗುತ್ತಾ ಕಡೆಗಣ್ಣಿನಲ್ಲಿದ್ದರೂ ಛಲ ಬಿಡದೆ ಅದನ್ನು ನೆಟ್ಟಗೆ ನಿಲ್ಲಿಸಿಯೇ ನಿದ್ದೆಗೆ ಜಾರಿದ್ದ.
ಒಂದು ಚಿಕ್ಕ ಶಬ್ದವಾದರೂ ಎದ್ದು ಕುಳಿತುಕೊಂಡು ಬಿಡುತ್ತಿದ್ದ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು ಕುಳಿತು ಚೇಷ್ಟೆ ಶುರು ಮಾಡುತ್ತಿದ್ದ. ಒಂಬತ್ತು ತಿಂಗಳಿಗೇ ದೋಸೆ, ಇಡ್ಲಿ, ಉಪ್ಪಿಟ್ಟು, ಕೇಸರಿಭಾತ್ ಮುಂತಾದ ತಿಂಡಿ ತಿನ್ನಿಸಲು ಶುರು ಮಾಡಿದ್ದರಿಂದ ರಾತ್ರಿ ಹೊತ್ತು ಎದ್ದು ಕುಳಿತು ನನಗೆ ಈಗ ದೋಸೆ ಮಾಡಿಕೊಡು, ಇಡ್ಲಿ ಮಾಡಿಕೊಂಡು ಎಂದು ಹಠ ಹಿಡಿಯುತ್ತಿದ್ದ. ಆದ್ದರಿಂದ ಸಾನಿಧ್ಯಾ ಅವನಿಗಾಗಿ ಫ್ರಿಜ್ ನಲ್ಲಿ ಯಾವಾಗಲೂ ದೋಸೆ, ಇಡ್ಲಿ ಹಿಟ್ಟು ಇಟ್ಟಿರುತ್ತಿದ್ದಳು. ಅಷ್ಟು ಹೊತ್ತಿನಲ್ಲಿ ದೋಸೆ, ಇಡ್ಲಿ ಮಾಡಿ ತಿನ್ನಿಸಿ ಮಲಗಿಸುತ್ತಿದ್ದಳು.
ಅವನನ್ನು ಶಾಲೆಗೆ ಸೇರಿಸಿದ ಮೊದಲ ದಿನ ಸಾನಿಧ್ಯಾ, `ಮೊದಲ ದಿನ ಶಾಲೆಗೆ ಹೋಗಿರುವ ತನ್ನ ಪುಟ್ಟ ಮಗು ಅಲ್ಲಿ ನನ್ನನ್ನು ಬಿಟ್ಟು ಹೇಗಿರುತ್ತದೆ,’ ಎಂದು ಅತ್ತಿದ್ದಳು.
ಅದಕ್ಕೆ ಸೂರಜ್, `ಮಕ್ಕಳು ಶಾಲೆಗೆ ಹೋಗಿ ಓದಿ ಬರೆದು ಮಾಡಿದರೆ ಅಲ್ವಾ ಅವರ ಭವಿಷ್ಯ ಚೆನ್ನಾಗಿರುವುದು. ನಿನ್ನದು ವಿಚಿತ್ರವಾಯಿತು. ನೀನು ಹೀಗೆ ಅತ್ತರೆ ಹೇಗೆ? ಅವನು ಖುಷಿ ಖುಷಿಯಾಗಿ ಸ್ಕೂಲಿಗೆ ಹೋದ. ಅಲ್ಲಿ ಅವನಿಗೆ ಫ್ರೆಂಡ್ಸ್ ಸಿಗುತ್ತಾರೆ. ಆಟ ಆಡಿಸುತ್ತಾರೆ. ಕಥೆ, ರೈಮ್ಸ್ ಎಲ್ಲಾ ಹೇಳಿ ಕೊಡುತ್ತಾರೆ. ಏನು ಯೋಚನೆ ಮಾಡಬೇಡ,” ಎಂದು ತಿಳಿ ಹೇಳಿದ್ದರು.
ಸನತ್ ಶಾಲೆಯಿಂದ ಹಿಂದಿರುಗಿ ಬರವವರೆಗೆ ಅವನಿಗೆ ಇಷ್ಟವಾದ ಅಡುಗೆ ಮಾಡಿಕೊಂಡು ಅವನಿಗಾಗಿ ಕಾಯುತ್ತಿರುತ್ತಿದ್ದಳು.
ಶಾಲೆಗೆ ಸೇರಿದ ಮೇಲಂತೂ ಅವನಿಗೆ ಬಹಳ ಹುಡುಗರು ಆಟವಾಡಲು ಸಿಕ್ಕರು ಎಂದು ಖುಷಿಯಾಗುತ್ತಿತ್ತು. ಟೀಚರ್ ಹತ್ತಿರ ಅರ್ಜೆಂಟ್ ವಾಶ್ ರೂಮ್ ಎಂದು ಹೊಟ್ಟೆ ಹಿಡಿದುಕೊಂಡು ನಾಟಕವಾಡಿ ವಾಶ್ ರೂಮ್ ಗೆ ಹೋಗಿ ಎಲ್ಲಾ ನಲ್ಲಿ ಆನ್ ಮಾಡಿ, ಬಟ್ಟೆ ಒದ್ದೆ ಮಾಡಿಕೊಂಡು ಬರುತ್ತಿದ್ದ. ಅದಕ್ಕಾಗಿ ಸಾನಿಧ್ಯಾ ದಿನ ಅವನ ಸ್ಕೂಲ್ ಬ್ಯಾಗಿನಲ್ಲಿ ಇನ್ನೊಂದು ಡ್ರೆಸ್ ಇಟ್ಟು ಕಳುಹಿಸಿದ್ದಳು. ಇಡೀ ಶಾಲೆಯಲ್ಲಿ ತುಂಟ ಮಗು ಎಂದೇ ಫೇಮಸ್ ಆಗಿದ್ದ.
ಆದರೆ ಎಷ್ಟೇ ತುಂಟನಾಗಿದ್ದರೂ, ಓದಿನಲ್ಲಿ ಮಾತ್ರ ಅಪ್ರತಿಮ ಬುದ್ಧಿವಂತನಾಗಿದ್ದ. ಪ್ರತಿ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಜೊತೆಗೆ ಡ್ಯಾನ್ಸ್, ನಾಟಕ ಮುಂತಾದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದ. ಶಾಲಾ ಕಾಲೇಜುಗಳಲ್ಲಿ ಎಲ್ಲಾ ಸಿಬ್ಬಂದಿಗೆ ಮೆಚ್ಚಿನ ವಿದ್ಯಾರ್ಥಿ, ಉತ್ತಮ ಗೆಳೆಯನಾಗಿದ್ದ.
ಮನೆಯಲ್ಲಿ ದಿನ ಅವನಿಗಿಷ್ಟವಾದ ಊಟ, ತಿಂಡಿಯೇ ಮಾಡುತ್ತಿದ್ದಳು. ಅವನ ಬೇಕು, ಬೇಡ, ಅವನ ಓದು, ವಿದ್ಯಾಭ್ಯಾಸ, ಆಟಪಾಠ ಇವುಗಳಲ್ಲಿಯೇ ಸಾನಿಧ್ಯಾಳ ದಿನಚರಿ ಕಳೆದುಹೋಗುತ್ತಿತ್ತು. ಮಗನಿಗೆ ಕಷ್ಟವೆಂದರೆ ಏನು ಎಂದು ತಿಳಿಯದ ಹಾಗೆ ಮುದ್ದಾಗಿ ರಾಜಕುಮಾರನ ಹಾಗೆ ಬೆಳೆಸಿದಳು. ಸಾನಿಧ್ಯಾಳ ಪ್ರತಿ ಉಸಿರಿನಲ್ಲೂ ಸನತನೇ ತುಂಬಿದ್ದನು.
ಅವಳ ಪ್ರತಿ ರಾತ್ರಿ ಬೆಳಗ್ಗೆಗಳು ಸನತ್ ಎನ್ನುವ ಹೆಸರಿಂದಲೇ ಆಗುತ್ತಿದ್ದವು. ದಿನಕ್ಕೆ ನೂರು ಬಾರಿಯಾದರೂ ಸನತ್ ಗೆ ಅದು ಇಷ್ಟ, ಇದು ಇಷ್ಟ ಹೀಗೆಯೇ ಹೇಳುತ್ತಿದ್ದಳು.
ಸೂರಜ್ ಕೂಡ ಮಗುವನ್ನು ಮುದ್ದು ಮಾಡುತ್ತಿದ್ದರು. ಆದರೆ ಸಾನಿಧ್ಯಾ ಮುದ್ದು ಮಾಡುವಷ್ಟು ಅಲ್ಲ, ಅವರು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತಿದ್ದರು. ಸಾನಿಧ್ಯಾ ಪಾಲಿಗೆ ಸನತ್ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದರೂ ಇನ್ನೂ ಅವಳಿಗೆ ಮುದ್ದು ಮಗು. ಅವಳ ಪ್ರತಿ ಉಸಿರಿನಲ್ಲಿ ತುಂಬಿದ್ದ ಹೆಸರು ಸನತ್. ಮಗನಿಗೆ ಚಿಕ್ಕ ಪೆಟ್ಟಾದರೂ ಸಹಿಸಳು. ಸ್ವಲ್ಪ ನೆಗಡಿ, ಕೆಮ್ಮು, ಶೀತ ಆದರೂ ವೈದ್ಯರ ಬಳಿಗೆ ಓಡುತ್ತಿದ್ದಳು. ಸನತ್ ಗೆ ಜ್ವರ ಬಂತು. ಹುಷಾರಿಲ್ಲ ಅಂದರೆ ಅವಳಿಗೆ ಕೈಕಾಲು ಆಡುತ್ತಿರಲಿಲ್ಲ. ಮಗನನ್ನು ಬಿಟ್ಟು ಎದ್ದು ಬರುತ್ತಿರಲಿಲ್ಲ.
“ಮಕ್ಕಳಿಗೆ ಶೀತ, ನೆಗಡಿ ಆಗುವುದು ಸಾಮಾನ್ಯ. ನೀನು ಸುಮ್ಮನೆ ಆತಂಕಪಟ್ಟುಕೊಳ್ತೀಯಾ,” ಎಂದು ಸೂರಜ್ ಸಮಾಧಾನ ಮಾಡುತ್ತಿದ್ದರು.
ಸಾನಿಧ್ಯಾ ಮಗನನ್ನು ತನ್ನ ಜೀವದಂತೆ ನೋಡಿಕೊಳ್ಳುತ್ತಿದ್ದಳು. ಆದರೆ ಸೂರಜ್, ಸನತ್ ಬೆಳೆಯುತ್ತಾ ಬಂದ ಹಾಗೆ, ವಯಸ್ಸಿಗೆ ತಕ್ಕಂತೆ ಅವನನ್ನು ನೋಡುತ್ತಿದ್ದರು. ಅಪ್ಪ, ಮಗನ ನಡುವೆ ಗೆಳೆತನ ಇತ್ತು. ವಯಸ್ಸಿಗೆ ಬಂದ ಮಕ್ಕಳನ್ನು ಗೆಳೆಯರಂತೆ ಕಾಣಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಸನತ್ ಆದರೂ ಅಷ್ಟೆ, ಶಾಲೆ, ಕಾಲೇಜ್, ಆಫೀಸಿನ ಪ್ರತಿ ವಿಷಯವನ್ನು ತಾಯಿ ತಂದೆಗೆ ಹೇಳುತ್ತಿದ್ದ. ಒಂದು ನಿಮಿಷ ಅಮ್ಮ ಕಣ್ಣಿಗೆ ಕಂಡಿಲ್ಲವೆಂದರೆ, `ಅಮ್ಮಾ…. ಅಮ್ಮಾ…..’ ಎಂದು ಹುಡುಕುತ್ತಿದ್ದ.
ಬೆಳಗ್ಗೆ ಅಮ್ಮ ಮುದ್ದು ಮಾಡಿ ಏಳಿಸಬೇಕು. ರಾತ್ರಿ ಹೂಮುತ್ತನ್ನಿಟ್ಟು ಮಲಗಿಸಬೇಕು. ಅವನ ಪ್ರತಿ ಚಿಕ್ಕ ಪುಟ್ಟ ಕೆಲಸಕ್ಕೂ ಅಮ್ಮನೇ ಬೇಕು. ಹೀಗೆ ಪ್ರತಿ ವಿಷಯದಲ್ಲಿಯೂ ಅಮ್ಮ ಎಂದು ಕೂಗಾತ್ತು ಎಲ್ಲಾ ವಿಷಯವನ್ನು ತನ್ನ ಹತ್ತಿರ ಹೇಳಿಕೊಳ್ಳುವ ಮುದ್ದು ಮಗ. ಆದರೆ ಈಗ ಕೆಲವು ದಿನಗಳಿಂದ ಯಾಕೋ ಏನೋ ಮಂಕಾಗಿರುತ್ತಾನೆ. ಏನನ್ನೂ ತನ್ನ ಹತ್ತಿರ ಹೇಳಿಕೊಳ್ಳುತ್ತಿಲ್ಲ. ಏನಿರಬಹುದು….? ಯಾರಾದರೂ ಹುಡುಗಿ…..? ಛೇ ನನ್ನ ಮಗ ಯಾರನ್ನೂ ಪ್ರೀತಿಸಲ್ಲ ಎಂದು ನನಗೆ ಚೆನ್ನಾಗಿ ಗೊತ್ತು. ಹಾಗಿದ್ದರೆ ಹೇಳಿಬಿಡುತ್ತಿದ್ದ.
ಒಂದು ವೇಳೆ ಸನತ್ ಯಾರನ್ನಾದರೂ ಲವ್ ಮಾಡುತ್ತಿದ್ದೇನೆ, ಅವಳನ್ನೇ ಮದುವೇಯಾಗುತ್ತೇನೆ ಅಂದರೆ ಸಾನಿಧ್ಯಾ ಅದಕ್ಕೂ ಸಂತೋಷದಿಂದ ಒಪ್ಪುತ್ತಿದ್ದಳು. ಆದರೆ ಸನತ್ ಏಕೆ ಹೀಗೆ ಏನನ್ನೂ ಹೇಳುತ್ತಿಲ್ಲ ಎಂದು ಅವಳಿಗೆ ಆತಂಕವಾಗಿತ್ತು.
ಬಾಗಿಲ ಸಂದಿಯಲ್ಲಿ ಬಚ್ಚಿಟ್ಟುಕೊಳ್ಳುವ ಆಟವಾಡುತ್ತಿದ್ದ ಮಗು, ತನ್ನ ಚೂಡಿದಾರ್ ದುಪ್ಪಟ್ಟ ಹಿಡಿದು ಹಠ ಮಾಡುತ್ತಿದ್ದ ಮಗು, ಮನೆಯ ತುಂಬಾ ಆಟದ ಸಾಮಾನುಗಳನ್ನು ಕಿತ್ತು ಹರಡುತ್ತಿದ್ದ ಮಗು, ನೀರು ಕುಡಿಸಿದರೆ ಬಾಯಿ ತುಂಬಾ ತುಂಬಿಕೊಂಡು ಪುರ್ ಎಂದು ಸದ್ದು ಮಾಡಿ, ಮೈಮೇಲೆ ಚೆಲ್ಲಿಕೊಂಡು ಆಟವಾಡುತ್ತಿದ್ದ ಮಗು, ಊಟ ಮಾಡಿಸುವಾಗ ಬಾಯಿಗೆ, ಕೆನ್ನೆಗೆ ಅನ್ನ ಮೆತ್ತಿಕೊಂಡು ಅಪ್ಪ ಅಮ್ಮನಿಗೆ ಮುತ್ತು ಕೊಡ್ತೀನಿ ಎಂದು ತಮ್ಮ ಮುಖಕ್ಕೆಲ್ಲಾ ಊಟ ಮೆತ್ತುತ್ತಿದ್ದ ತುಂಟ ಕೃಷ್ಣ.
ಆದರೂ ಸನತ್ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದ ಹೊಸದರಲ್ಲಿ ನಡೆದ ಒಂದೆರಡು ಘಟನೆಗಳು ಸಾನಿಧ್ಯಾಳಿಗೆ ತನ್ನ ಮಗ ಯಾವಾಗ ಇಷ್ಟೊಂದು ದೊಡ್ಡವನಾದ ಎಂದು ಸೋಜಿಗವನ್ನು ಕೊಟ್ಟಿದ್ದ.
ಆಗ ಎಂಜಿನಿಯರಿಂಗ್ ಮೊದಲನೆಯ ವರ್ಷಕ್ಕೆ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಸಿಕ್ಕಿ ಸೇರಿಕೊಂಡಿದ್ದ. ಇತ್ತೀಚಿನ ದಿನಗಳಲ್ಲಿ ಕಾಲೇಜಿನಲ್ಲಿ ರಾಗಿಂಗ್ ಮಾಡುವುದು ಅಪರಾಧವೆಂದೂ, ಅಂತಹ ಘಟನೆ ಕಂಡುಬಂದರೆ, ರಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದಿದ್ದರೂ ಒಂದಷ್ಟು ಪುಢಾರಿ ಹುಡುಗರು ಲೆಕ್ಚರರ್ ಗಳ ಕಣ್ಣು ತಪ್ಪಿಸಿ ಜೂನಿಯರ್ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡುತ್ತಿದ್ದರು.
ಅಂದು ಕೂಡ ಹಾಗೆಯೇ ಸನತ್ ಲೈಬ್ರೆರಿಗೆ ಹೋಗಿ ಯಾವುದೋ ವಿಷಯದ ಪುಸ್ತಕವನ್ನು ಹುಡುಕಿ ತರುತ್ತಿದ್ದಾಗ, ಆಗಲೇ ಸಾಯಂಕಾಲವಾಗಿತ್ತು. ಅಲ್ಲಿದ್ದ ಕಲ್ಲು ಬೆಂಚಿನ ಕುಳಿತಿದ್ದ ಪುಢಾರಿ ಹುಡುಗರು ಸನತ್ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಅವಳು ಪ್ಯಾಂಟ್ ಮೇಲೆ ಹಾಕಿದ್ದ ಟಾಪ್ ಚೆನ್ನಾಗಿದೆ ಎಂದು ಹಿಡಿದೆಳೆಯಲು ಬಂದಿದ್ದರು. ಆ ಹುಡುಗಿ ಭಯದಿಂದ ಬಿಗಿಯಾಗಿ ಟಾಪ್ ಹಿಡಿದುಕೊಂಡಳು. ಈ ಎಳೆದಾಟದಲ್ಲಿ ಟಾಪ್ ಹರಿದು ಹೋಗಿತ್ತು.
ಅದನ್ನು ನೋಡಿದ ಸನತ್ ಕೂಡಲೇ ಅಲ್ಲಿಗೆ ಧಾವಿಸಿ ತನ್ನ ಶರ್ಟ್ ತೆಗೆದು ಆ ಹುಡುಗಿಗೆ ಕೊಟ್ಟು ಹಾಕಿಕೊಳ್ಳಲು ಹೇಳಿ, ಅವಳಿಗೆ ತೊಂದರೆ ಕೊಟ್ಟ ಹುಡುಗರಿಗೆ ನಾಲ್ಕು ಬಾರಿಸಿ ಪ್ರಾಂಶುಪಾಲರ ಹತ್ತಿರ ಕರೆದುಕೊಂಡು ಹೋಗಿ ಶಿಕ್ಷೆ ಕೊಡಿಸಿದ್ದನು. ಅಂದಿನಿಂದ ಆ ಹುಡುಗಿ ಸನತ್ ಗೆ ತಂಗಿಯಂತೆಯೇ ಆಗಿದ್ದಳು.
ಕಾಲೇಜ್ ವಿದ್ಯಾರ್ಥಿಗಳ ಸೆಕ್ರೆಟರಿ, ಪ್ರೆಸಿಡೆಂಟ್ ಮುಂತಾದ ಹುದ್ದೆಗಳಿಗೆ ನಡೆದ ಎಲೆಕ್ಷನ್ ನಲ್ಲಿ ಸೋತವರ ಮತ್ತು ಗೆದ್ದವರ ನಡುವೆ ತೀವ್ರವಾದ ವೈರತ್ವ ಉಂಟಾಗಿತ್ತು. ಆದರೆ ಸತನ್ ತನ್ನ ಒಳ್ಳೆಯ ಮಾತುಗಳಿಂದ ಎರಡೂ ಬಣಗಳ ಮಡುವೆ ಇದ್ದ ವೈರತ್ವವನ್ನು ಹೋಗಲಾಡಿಸಿ ಇಬ್ಬರ ನಡುವೆ ಸ್ನೇಹ ಸೌಧವನ್ನು ಕಟ್ಟಿದ್ದನು.
ಇದೆಲ್ಲಾ ಸನತ್ ಗೆಳೆಯರು ಮನೆಗೆ ಬಂದು ಹೇಳಿದಾಗ, ನಾನಿನ್ನೂ ಮುದ್ದು ಮಗು ಅಂದುಕೊಂಡಿದ್ದವನು ಇಷ್ಟು ಬೇಗ ಅಷ್ಟು ದೊಡ್ಡವನಾದನೆ ಎಂದು ಆಶ್ಚರ್ಯ ಮತ್ತು ಸಂತೋಷವಾಗಿತ್ತು. ಜೊತೆಗೆ ಅವಳ ಹೃದಯ `ನನ್ನ ಮಗ ಹೀರೊ’ ಎಂದು ಹೆಮ್ಮೆಯಿಂದ ಬೀಗಿತ್ತು.
ಎಲ್ಲರ ಬಳಿಯೂ ಮಗನ ಪ್ರತಾಪಗಳನ್ನು ಹೇಳಿಕೊಂಡು ಬಂದಿದ್ದಳು. `ಅಮ್ಮಾ…. ನೀನೇನು ತಮ್ಮಟೆ ತೆಗೆದುಕೊಂಡು ಊರಿಗೆಲ್ಲಾ ನನ್ನ ಬಗ್ಗೆ ಪ್ರಚಾರ ಮಾಡಬೇಕು ಅಂದುಕೊಂಡಿದ್ದೀಯಾ ಹೇಗೆ…? ನಾನೇನು ಅಂತಹ ದೊಡ್ಡ ಕೆಲಸ ಮಾಡಿಲ್ಲ,’ ಎಂದು ತಮಾಷೆ ಮಾಡಿದ್ದ. ಸುಮ್ಮನಿರು ನೀನು ಏನೇ ಮಾಡಿದರೂ ನನಗದು ಚೆಂದ ಎಂದು ಹೇಳಿ ಅವನಿಗೆ ಇಷ್ಟವಾದ ಮೈಸೂರ್ ಪಾಕ್ ಬಾಯಲ್ಲಿಟ್ಟು ಮುದ್ದು ಮಾಡಿದ್ದಳು. ಹೀಗೆ ಸದಾ ಉತ್ಸಾಹ, ಸಂತೋಷದಿಂದ ಇರುತ್ತಿದ್ದವನು ಇತ್ತೀಚೆಗೆ ಯಾಕೆ ಸಪ್ಪಗೆ ಇರುತ್ತಾನೆ? ಊಟ ತಿಂಡಿ, ಡ್ರೆಸ್ ಯಾವುದರಲ್ಲಿಯೂ ಆಸಕ್ತಿ ಇಲ್ಲದವನಾಗಿದ್ದಾನೆ.
ಒಂದೆರಡು ತಿಂಗಳಿಂದ ತಲೆಗೂದಲನ್ನು ಕಟಿಂಗ್ ಮಾಡಿಸದೆ ಕೂದಲು ಉದ್ದವಾಗಿ ಬೆಳೆದಿತ್ತು, ಗಡ್ಡ ಬಿಟ್ಟುಕೊಂಡಿದ್ದ, ಕಣ್ಣುಗಳು ಆಳಕ್ಕೆ ಇಳಿದಿದ್ದವು. ಅವನ ಕಣ್ಣುಗಳನ್ನು ನೋಡಿದರೆ ಸರಿಯಾಗಿ ನಿದ್ದೆ ಕೂಡಾ ಮಾಡುತ್ತಿಲ್ಲ ಎಂದು ಗೊತ್ತಾಗುತ್ತಿತ್ತು. ಮಗನಿಗೆ ಒಂದು ಚಿಕ್ಕ ಪೆಟ್ಟಾದರೂ ಸಹಿಸದ ತಾಯಿ ಕರುಳು ಸಾನಿಧ್ಯಾಳದು. ಮಗನ ಮೇಲೆ ಅತಿ ಎನಿಸುವಷ್ಟು ಪ್ರೀತಿ, ವ್ಯಾಮೋಹ. ಅವಳು ಬಿಡುವ, ತೆಗೆದುಕೊಳ್ಳುವ ಪ್ರತಿ ಉಸಿರಿನಲ್ಲೂ ಇದ್ದ ಒಂದೇ ಹೆಸರು ಸನತ್!
ಮಗನೇ ಅವಳ ಜೀವ, ಪ್ರಾಣ. ಅವನಿಗಾಗಿಯೇ ತಾನು ಜೀವಿಸಿರುವುದು ಎನ್ನುವಷ್ಟರ ಮಟ್ಟಿಗೆ ಅವನ ಮೇಲೆ ಪ್ರೀತಿ. ಆದರೆ ಈಗ ಮಗ ಹೀಗಾಗಿದ್ದರಿಂದ ಹೇಗೆ ತಾನೇ ಸಹಿಸಿಯಾಳು? ಕಣ್ಣಿಂದ ಜಾರಿದ ನೀರು ದಿಂಬನ್ನು ತೋಯಿಸಿತು.
ಎದ್ದು ಹೋಗಿ ಮಗ ಸನತ್ ನ ಕೋಣೆಯಲ್ಲಿ ಬಗ್ಗಿ ನೋಡಿದಳು. ಸನತ್ ನಿದ್ದೆ ಹೋಗಿದ್ದ. ಬೆಡ್ ಲ್ಯಾಂಪ್ ಬೆಳಕಿನಲ್ಲಿ ಅವನ ಸೊರಗಿದ ಮುಖದ ಮೇಲೆ ಅಸ್ಪಷ್ಟ ಚಿಂತೆಯ ಗೆರೆಗಳು ಕಾಣಿಸುತ್ತಿದ್ದವು. ಅದನ್ನು ನೋಡಿ ತಾಯಿಯ ಕರುಳು ಕಿತ್ತು ಬಂದಂತಾಯಿತು. ಹಾಗೆಯೇ ಸೋಫಾ ಮೇಲೆ ಕುಳಿತುಕೊಂಡಳು. ಯೋಚಿಸುತ್ತಾ ಯೋಚಿಸುತ್ತಾ ಯಾವಾಗಲೋ ಹಾಗೆ ಸೋಫಾದ ಮೇಲೆಯೇ ನಿದ್ದೆಗೆ ಜಾರಿದಳು.
ಸೂರಜ್ ಬೆಳಗ್ಗೆ ಎದ್ದಾಗ ಗೋಡೆಯ ಗಡಿಯಾರ ಎಂಟು ಗಂಟೆಯನ್ನು ತೋರಿಸುತ್ತಿತ್ತು. ಅರೆ ಸಾನಿಧ್ಯಾ ಎಲ್ಲಿ ಹೋದಳು? ಇಷ್ಟು ಹೊತ್ತಾದರೂ ನನ್ನನ್ನು ಎಬ್ಬಿಸಿಲ್ಲ ಎಂದು ಅಡುಗೆ ಮನೆಗೆ ಹೋಗಿ ನೋಡಿದರೆ ಸಾನಿಧ್ಯಾ ಅಲ್ಲಿರಲಿಲ್ಲ. ದಿನ ಇಷ್ಟು ಹೊತ್ತಿಗೆ ಎರಡು ಬಗೆಯ ತಿಂಡಿ, ಅಡುಗೆ ಎಲ್ಲ ಸಿದ್ಧವಾಗಿರುತ್ತಿತ್ತು. ಇಂದು ನೋಡಿದರೆ ಇನ್ನೂ ಸ್ಟವ್ ಕೂಡ ಹಚ್ಚಿಲ್ಲ. ಏನಾಯಿತು ಎಲ್ಲಿಗೆ ಹೋದಳು ಎಂದು ಸನತ್ ಕೋಣೆಯ ಒಳಗೆ ಇಣುಕಿದರು, ಅವನಿನ್ನೂ ನಿದ್ದೆಯಲ್ಲಿದ್ದ.
ಹಾಲ್ ಗೆ ಬಂದು ನೋಡಿದಾಗ ಸಾನಿಧ್ಯಾ ಸೋಫಾ ಮೇಲೆ ಮಲಗಿದ್ದಳು. `ಅರೆ, ಇವಳ್ಯಾಕೆ ಇಲ್ಲಿ ಮಲಗಿದ್ದಾಳೆ…?’ ಎಂದು ಹತ್ತಿರ ಬಂದು ಮೆಲ್ಲನೆ ಅವಳ ಭುಜ ತಟ್ಟಿದಾಗ ಸಾನಿಧ್ಯಾ ಕಣ್ಣುಬಿಟ್ಟಳು.
“ಸಾನಿಧ್ಯಾ…. ಯಾಕೆ ಇಲ್ಲಿ ಮಲಗಿದ್ದೀಯಾ….? ಹುಷಾರಾಗಿದ್ದೀಯಾ ತಾನೇ….?” ಎಂದು ಹಣೆಯನ್ನು ಮುಟ್ಟಿ ನೋಡಿದರು.
“ಹ್ಞೂಂ…… ಹುಷಾರಾಗಿದ್ದೇನೆ. ರಾತ್ರಿ ಬಹಳ ಹೊತ್ತು ನಿದ್ದೆಯೇ ಬರಲಿಲ್ಲ. ಅದಕ್ಕೆ ಇಲ್ಲಿ ಬಂದು ಕುಳಿತುಕೊಂಡೆ, ಮತ್ತೆ ಯಾವಾಗಲೋ ನಿದ್ದೆ ಬಂದು ಇಲ್ಲಿಯೇ ಮಲಗಿ ಬಿಟ್ಟಿದ್ದೇನೆ. ಅಬ್ಬಾ ಎಷ್ಟು ಹೊತ್ತಾಗಿದೆ, ಬೇಗ ಎಬ್ಬಿಸಬಾರದಿತ್ತೆ….?” ಎಂದು ಗಡಿಬಿಡಿ ಮಾಡಿದಳು.
“ಇರಲಿ ಬಿಡು, ನೀನು ಯಾವತ್ತೂ ಹೀಗೆ ಮಲಗುವವಳಲ್ಲ, ಹುಷಾರಾಗಿದ್ದರೆ ಸಾಕು. ಒಂದು ದಿನ ಮಲಗಿಕೊಂಡರೆ ನಿನ್ನ ಅಡುಗೆಮನೆ, ಮನೆಯ ಕೆಲಸ, ಅದೇ ಕುಕ್ಕರ್, ಅದೇ ಸ್ಟವ್, ಅದೇ ಪಾತ್ರೆಗಳು ಎಲ್ಲಿಯೂ ಓಡಿ ಹೋಗುವುದಿಲ್ಲ. ಅಲ್ಲಿಯೇ ಇರುತ್ತವೆ,” ಎಂದು ಸಮಾಧಾನಿಸಿದ.
“ಅಯ್ಯೋ….. ನಿಮಗೆ ತಡವಾಗುತ್ತದೆ.”
“ನಾನು ಒಂದು ದಿನ ತಡವಾಗಿ ಹೋದರೆ ಏನೂ ತೊಂದರೆಯಿಲ್ಲ. ನನ್ನನ್ನು ಕೇಳಲು ನನಗ್ಯಾವ ಬಾಸ್ ಇದ್ದಾರೆ….? ನೀನೇ ನನ್ನ ಬಾಸ್,” ಎಂದು ಸೂರಜ್ ನಕ್ಕರು.
ಸಾನಿಧ್ಯಾ ಕೂಡ ನಗುತ್ತಾ, “ಏನಿದು ಬೆಳಗ್ಗೆ ಎದ್ದ ಕೂಡಲೇ ನಿಮ್ಮ ತಮಾಷೆ…..?” ಎಂದಳು.
“ಜೀವನದಲ್ಲಿ ನಗು, ಅಳು ಎಲ್ಲಾ ಇರಬೇಕು ಅದೇ ಜೀವನ. ಇವತ್ತೇನೂ ತಿಂಡಿ ಮಾಡಬೇಡ, ಸ್ವಿಗ್ಗಿಯಿಂದ ತಿಂಡಿ ತರಿಸ್ತೀನಿ, ಆರಾಮವಾಗಿ ರೆಸ್ಟ್ ತಗೋ…..”
“ಅಪ್ಪಾ ಹೋಟೆಲ್ ನಿಂದ ತಿಂಡಿ ತರಿಸ್ತೀರಾ….. ಯಾಕೆ, ಏನಾಯ್ತು….” ಕಣ್ಣು ಉಜ್ಜುತ್ತಾ ಅಲ್ಲಿಗೆ ಬಂದ ಸನತ್ ಕೇಳಿದ.
“ಸುಮ್ಮನೆ ನಿಮ್ಮಮ್ಮನಿಗೆ ರೆಸ್ಟ್ ಕೊಡೋಣ ಅಂತ. ಸರಿ ನಿನಗೇನು ತಿಂಡಿ ಬೇಕು…..?” ಎಂದು ಮಗನನ್ನು ಕೇಳಿದರು.
ಸನತ್ ಅಮ್ಮನ ಪಕ್ಕ ಕುಳಿತು ಅವಳ ಕೈ ಹಿಡಿದುಕೊಂಡು, “ಹೌದು ಅಮ್ಮಾ ಯಾವಾಗಲೂ ಕೆಲಸ ಕೆಲಸ ಎನ್ನುತ್ತಿರುತ್ತಾರೆ. ರೆಸ್ಟ್ ಮಾಡುವುದಿಲ್ಲ. ಅಮ್ಮ ಇವತ್ತು ಆರಾಮವಾಗಿ ರೆಸ್ಟ್ ಮಾಡು. ನನಗೆ ಮಸಾಲೆ ದೋಸೆ, ಉದ್ದಿನ ವಡೆ,” ಎಂದ.
“ಸಾನಿಧ್ಯಾ ನಿನಗೇನು ಬೇಕು?”
“ನನಗೆ ಸೆಟ್ ದೋಸೆ ಇರಲಿ.”
“ನನಗೂ ಒಂದು ಪ್ಲೇಟ್ ಇಡ್ಲಿ, ಒಂದು ಮಸಾಲೆ ದೋಸೆ ತರಿಸುತ್ತೇನೆ. ಜೊತೆಗೆ ಜಾಮೂನ್ ತಿಂದು ಬಹಳ ದಿನವಾಯಿತು ಅಲ್ವಾ, ಜಾಮೂನ್ ತರಿಸುತ್ತೇನೆ.”
“ಓ.ಕೆ. ಅಪ್ಪಾ…. ಡನ್,” ಎನ್ನುತ್ತಾ ಸನತ್ ಮುಖ ತೊಳೆಯಲು ಹೋದ.
“ನೋಡು ಅವನು ಆರಾಮವಾಗಿಯೇ ಇದ್ದಾನೆ. ನೀನೇ ಸುಮ್ಮನೆ ಆತಂಕ ಪಟ್ಟುಕೊಂಡು ರಾತ್ರಿಯೆಲ್ಲಾ ನಿದ್ದೆ ಮಾಡಿಲ್ಲ. ಹೋಗಿ ಫ್ರೆಶ್ ಆಗಿ ಬಾ, ಇವತ್ತೊಂದು ದಿನ ಸ್ನಾನ, ಪೂಜೆ ಇಲ್ಲದೆ, ತಿಂಡಿ ತಿಂದರೆ ಏನೂ ಆಗುವುದಿಲ್ಲ,” ಎಂದು ಬುದ್ಧಿ ಹೇಳಿದಳು ಸೂರಜ್.
`ಇಷ್ಟೊಂದು ಪ್ರೀತಿಸುವ ಪತಿ, ಮಗ ಇದ್ದಾರೆ ನನಗೇನು ಕಡಿಮೆಯಾಗಿದೆ. ನಾನ್ಯಾಕೆ ಸುಮ್ಮನೆ ಏನೇನೋ ಯೋಚನೆ ಮಾಡಿ ತಲೆಕೆಡಿಸಿ ಕೊಳ್ಳುತ್ತಿದ್ದೇನೆ,’ ಎಂದುಕೊಳ್ಳುತ್ತಾ ಸಾನಿಧ್ಯಾ ಬಚ್ಚಲಿಗೆ ಹೋದಳು.
“ಸನತ್ ರಾತ್ರಿಗೆ ಪಲಾವ್ ಮಾಡ್ಲಾ…..?”
“ಏನಾದರೂ ಮಾಡಮ್ಮ ಪರವಾಗಿಲ್ಲ…..”
ಯಾವಾಗಲೂ ಹೀಗೆ ಅಡುಗೆ ತಿಂಡಿ ಬಗ್ಗೆ ಕೇಳಿದರೆ, ಸನತ್ ಅಮ್ಮ ಪಲಾವ್ ಜೊತೆ ಮೊಸರು ಬಜ್ಜಿ ಮಾಡು. ಇಡ್ಲಿ ಮಾಡಿದರೆ ವಡೆ ಮಾಡು, ದೋಸೆ ಮಾಡಿದರೆ ಆಲೂಗಡ್ಡೆ ಪಲ್ಯ ಮಾಡು…. ಹೀಗೆ ತನ್ನ ಬೇಡಿಕೆಯ ಪಟ್ಟಿ ಮುಂದೆ ಇಡುತ್ತಿದ್ದ. ಆದರೆ ಇತ್ತೀಚೆಗೆ ಏನು ಕೇಳಿದರೂ ನಿರಾಸಕ್ತಿಯಿಂದ ಏನಾದರೂ ಮಾಡು ಪರವಾಗಿಲ್ಲ ಎನ್ನುತ್ತಿದ್ದ. ಊಟ, ತಿಂಡಿ ತುಂಬಾ ಕಡಿಮೆ ತಿನ್ನುತ್ತಿದ್ದ. ಅವನ ಕುತ್ತಿಗೆಯ ಮೂಳೆಗಳು ಜೋತು ಬಿದ್ದಿದ್ದವು. ತುಂಬಿದ್ದ ದುಂಡು ಕೆನ್ನೆಗಳು ಒಳಗೆ ಹೋಗಿದ್ದವು. ಕಣ್ಣುಗಳು ಆಳಕ್ಕಿಳಿದು, ಕಣ್ಣಿನ ಸುತ್ತ ಕಪ್ಪು ಮೂಡಿತ್ತು.
(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)





