ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಪ್ಯಾರಾ ಅಥ್ಲೀಟ್, ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾ ಅವರನ್ನು ಗೌರವಪೂರ್ವಕವಾಗಿ ಮನೆಗೆ ಬರಮಾಡಿಕೊಂಡು ಸತ್ಕರಿಸುವ ಸೌಭಾಗ್ಯ ನನ್ನದಾಯಿತು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರತಿಷ್ಠಿತ ಈ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಶಿಲ್ಪಾ ಅವರದ್ದು ಪ್ರೇರಣಾದಾಯಕ, ಐತಿಹಾಸಿಕ ಸಾಧನೆ. ಇವರು ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆ.ಆರ್. ನಗರ ತಾಲೂಕಿನವರು. ಯುವ ತಲೆಮಾರಿಗೆ ಇವರು ಮಾದರಿ ಎನ್ನುವುದು ನನ್ನ ಭಾವನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಶಿಲ್ಪಾ ಅವರ ತರಬೇತುದಾರರಾದ ಶ್ರೀ ಸತ್ಯನಾರಾಯಣ ಅವರು ಹಾಗೂ ಶ್ರೀಮತಿ ಪುಷ್ಪಾ ನಿರಂಜನ್ ಪ್ರಸಾದ್ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಸಾಮಾನ್ಯ ರೈತ ಕುಟುಂಬದ ಕುಡಿಯಾದ ಶಿಲ್ಪಾ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ಭೀಕರ ಅಪಘಾತದಲ್ಲಿ ಎಡಗಾಲು ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಆ ನೋವು ಮತ್ತು ಅಂಗವೈಕಲ್ಯವನ್ನು ದಿಟ್ಟತನದಿಂದ ಮೆಟ್ಟಿ ನಿಂತ ಅವರು, ತಮ್ಮ ಧೃಡ ಸಂಕಲ್ಪದೊಂದಿಗೆ ಇಡೀ ರಾಷ್ಟ್ರವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ. ಮತ್ತೊಮ್ಮೆ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.





