ಸೀರೆ ಧರಿಸುವ ಶೈಲಿಯನ್ನೇ ಬದಲಿಸಿದ ಟ್ಯಾಗೋರ್ ಕುಟುಂಬದ ಧೀಮಂತೆ ಜ್ಞಾನದಾನಂದಿನಿ ದೇವಿ
ಇಂದು ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಎಂದರೆ ನಮ್ಮ ಕಣ್ಣೆದುರು ಮೂಡುವ ಚಿತ್ರವೇ ಸುಂದರವಾದ ಸೀರೆ, ಅದಕ್ಕೆ ಹೊಂದುವ ರವಿಕೆ (ಬ್ಲೌಸ್) ಮತ್ತು ಒಳಲಂಗ (ಪೆಟಿಕೋಟ್). ಮದುವೆ, ಹಬ್ಬ-ಹರಿದಿನ, ಧಾರ್ಮಿಕ ಆಚರಣೆ ಅಥವಾ ಅಧಿಕೃತ ಸಮಾರಂಭ—ಎಲ್ಲೆಡೆ ಈ ಉಡುಗೆಯೇ ಭಾರತೀಯ ಮಹಿಳೆಯರ ಸೊಬಗನ್ನು ಹೆಚ್ಚಿಸುತ್ತದೆ. ಆದಕ್ಕೇ ಏನೋ? ರನ್ನ ಚಿತ್ರದಲ್ಲಿ ಯೋಗರಾಜ್ ಭಟ್ಟರು ಸೀರೆಲಿ ಹುಡುಗಿರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರ್ರು ಅಂತಾ ಹಾಡನ್ನೇ ಬರೆದು ಬಿಟ್ಟರು. ಆದರೆ ಒಂದು ಆಶ್ಚರ್ಯದ ಸಂಗತಿ ಏನೆಂದರೆ, ಇಂದು ಸೀರೆಗೆ ಅವಿಭಾಜ್ಯ ಅಂಗವೆಂದು ಪರಿಗಣಿಸುವ ಹೊಲಿದ ರವಿಕೆಗೆ ಕೇವಲ ಸುಮಾರು 150 ವರ್ಷಗಳ ಇತಿಹಾಸವಿದೆ! ಸಾವಿರಾರು ವರ್ಷಗಳಿಂದ ಭಾರತೀಯ ಮಹಿಳೆಯರು ಸೀರೆ ಧರಿಸುತ್ತಿದ್ದರೂ, ಇಂದಿನ ಮಾದರಿಯ ಬ್ಲೌಸ್ ಮತ್ತು ಪೆಟಿಕೋಟ್ ಆಗಿನ ಕಾಲದಲ್ಲಿ ಇರಲಿಲ್ಲ. ಈ ಮಹತ್ತರ ಬದಲಾವಣೆಯ ಹಿಂದೆ ಭಾರತದ ಸಾಮಾಜಿಕ ಇತಿಹಾಸವನ್ನೇ ಬದಲಿಸಿದ ಒಬ್ಬ ಮಹಿಳೆಯ ಸಾಹಸ ಮತ್ತು ದೂರದೃಷ್ಟಿಯ ಕಥೆಯಿದೆ.
ಸಾವಿರಾರು ವರ್ಷಗಳ ಕಾಲ ರವಿಕೆ ಇಲ್ಲದೆಯೇ ಸೀರೆ ಧರಿಸುತ್ತಿದ್ದರು

ಭಾರತದ ಪ್ರಾಚೀನ ನಾಗರಿಕತೆಯಲ್ಲಿ ಮಹಿಳೆಯರ ಉಡುಗೆ ಸಂಪೂರ್ಣವಾಗಿ ಹೊಲಿಗೆಯಿಲ್ಲದ ಬಟ್ಟೆಗಳನ್ನು ಆಧರಿಸಿತ್ತು. ಸಾಂಚಿ, ಭಾರ್ಹುತ್ ಮತ್ತು ಅಮರಾವತಿಯ ಪ್ರಾಚೀನ ಶಿಲ್ಪಗಳನ್ನು ಗಮನಿಸಿದರೆ, ಮಹಿಳೆಯರು ವಿವಿಧ ರೀತಿಯಲ್ಲಿ ಸೀರೆಯಂತಹ ಉದ್ದನೆಯ ಬಟ್ಟೆಯನ್ನು ಸುತ್ತಿಕೊಳ್ಳುತ್ತಿದ್ದರೂ, ಇಂದಿನ ರೀತಿಯ ಹೊಲಿದ ರವಿಕೆ ಅಥವಾ ಪೆಟಿಕೋಟ್ ಬಳಸುತ್ತಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಆ ಕಾಲದಲ್ಲಿ ಉಡುಗೆಯ ಶೈಲಿ ಮುಖ್ಯವಾಗಿ, ಸ್ಥಳೀಯ ಸಂಪ್ರದಾಯ, ಹವಾಮಾನ, ಸಾಮಾಜಿಕ ಪರಿಸ್ಥಿತಿ, ವೈಯಕ್ತಿಕ ಅನುಕೂಲತೆ ಇವುಗಳನ್ನು ಆಧರಿಸಿಯೇ ರೂಪುಗೊಂಡಿತ್ತು. ಭಾರತದೆಲ್ಲೆಡೆ ಒಂದೇ ರೀತಿಯ ಉಡುಗೆ ಎಂಬ ಪರಿಕಲ್ಪನೆಯೇ ಇರಲಿಲ್ಲ.
ಬ್ರಿಟಿಷರ ಆಗಮನದ ನಂತರ ಬದಲಾದ ಉಡುಗೆಯ ಕಲ್ಪನೆ

18 ಮತ್ತು 19ನೇ ಶತಮಾನದಲ್ಲಿ ಬ್ರಿಟಿಷರ ಆಡಳಿತ ಭಾರತದಲ್ಲಿ ಬಲವಾಗುತ್ತಿದ್ದಂತೆ, ವಿಕ್ಟೋರಿಯನ್ ಸಂಸ್ಕೃತಿಯ ಪ್ರಭಾವವೂ ಹೆಚ್ಚಾಯಿತು. ಅಂದಿನ ಬ್ರಿಟಿಷ್ ಅಧಿಕಾರಿಗಳು ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನು ತಮ್ಮ ದೃಷ್ಟಿಕೋನದಿಂದ “ಸಭ್ಯವಲ್ಲ” ಎಂದು ಟೀಕಿಸಲು ಆರಂಭಿಸಿದರು. ವಿಶೇಷವಾಗಿ ಬಂಗಾಳದ ಮೇಲ್ವರ್ಗದ ಮಹಿಳೆಯರ ಉಡುಗೆ ಕುರಿತು ಸಾಕಷ್ಟು ಟೀಕೆಗಳು ಕೇಳಿಬಂದವು. ಈ ಸಾಮಾಜಿಕ ಒತ್ತಡದ ನಡುವೆ ಭಾರತೀಯ ಮಹಿಳೆಯರ ಉಡುಗೆಯಲ್ಲಿ ಐತಿಹಾಸಿಕ ತಿರುವು ಸಂಭವಿಸಿತು.
ಜ್ಞಾನದಾನಂದಿನಿ ದೇವಿ – ಭಾರತೀಯ ಮಹಿಳೆಯರ ಉಡುಗೆಯಲ್ಲಿ ಕ್ರಾಂತಿ ತಂದ ಮಹಿಳೆ

ಈ ಬದಲಾವಣೆಯ ಕೇಂದ್ರಬಿಂದುವಾಗಿದ್ದವರು ಜ್ಞಾನದಾ
ಪಾರ್ಸಿ ಮಹಿಳೆಯರಿಂದ ಬಂದ ಪ್ರೇರಣೆ

ಆ ಸಮಯದಲ್ಲಿ ಜ್ಞಾನದಾನಂದಿನಿ ದೇವಿ ಕೆಲಕಾಲ ಬಾಂಬೆ (ಇಂದಿನ ಮುಂಬೈ) ಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಪಾರ್ಸಿ ಮಹಿಳೆಯರು ಧರಿಸುತ್ತಿದ್ದ ವಿಶಿಷ್ಟ ಶೈಲಿಯ ಸೀರೆಯನ್ನು ಗಮನಿಸಿದರು. ಆ ಶೈಲಿಯ ಪ್ರಮುಖ ಲಕ್ಷಣಗಳು, ಹೊಲಿದ ಬ್ಲೌಸ್, ಒಳಲಂಗ (ಪೆಟಿಕೋಟ್), ಹೆಗಲ ಮೇಲೆ ಚೆನ್ನಾಗಿ ಹಾಕಿದ ಸೆರಗು, ಚಲನವಲನಕ್ಕೆ ಅನುಕೂಲವಾಗುವ ಸೀರೆ ಕಟ್ಟುವ ವಿಧಾನ ಈ ಶೈಲಿಯಿಂದ ಪ್ರೇರಿತರಾದ ಜ್ಞಾನದಾನಂದಿನಿ ದೇವಿ, ಅದನ್ನು ಬಂಗಾಳಿ ಸಂಪ್ರದಾಯಕ್ಕೆ ಹೊಂದುವಂತೆ ಸ್ವಲ್ಪ ಬದಲಾಯಿಸಿ ಹೊಸ ಮಾದರಿಯನ್ನು ರೂಪಿಸಿದರು.
ಬ್ರಾಹ್ಮಿಕಾ ಸೀರೆ – ಹೊಸ ಯುಗದ ಆರಂಭ

ಜ್ಞಾನದಾನಂದಿನಿ ದೇವಿಯವರ ಹೊಸ ಶೈಲಿಗೆ ಮುಂದೆ “ಬ್ರಾಹ್ಮಿಕಾ ಸೀರೆ” ಎಂದು ಹೆಸರು ಬಂತು. ಈ ಹೊಸ ವಿಧಾನದಲ್ಲಿ: ಬ್ಲೌಸ್, ಪೆಟಿಕೋಟ್, ಸುರಕ್ಷಿತವಾಗಿ ಪಿನ್ ಮಾಡಲಾದ ಸೆರಗು ಇವು ಪ್ರಮುಖ ಭಾಗಗಳಾದವು. ಇದು ಕೇವಲ ಫ್ಯಾಷನ್ ಬದಲಾವಣೆಯಾಗಿರಲಿಲ್ಲ. ಇದು ಭಾರತೀಯ ಮಹಿಳೆಯರ ಸಾಮಾಜಿಕ ಜೀವನದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿತು.
ಮಹಿಳೆಯರಿಗೆ ದೊರೆತ ಹೊಸ ಸ್ವಾತಂತ್ರ್ಯ

ಈ ಹೊಸ ಸೀರೆ ಧರಿಸುವ ವಿಧಾನದಿಂದ ಮಹಿಳೆಯರಿಗೆ ಅನೇಕ ಅನುಕೂಲಗಳು ದೊರಕಿದವು. ಅವರು, ಶಿಕ್ಷಣ ಪಡೆಯಲು, ಉದ್ಯೋಗಕ್ಕೆ ತೆರಳಲು, ರೈಲುಗಳಲ್ಲಿ ಪ್ರಯಾಣಿಸಲು, ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಲು ಹೆಚ್ಚು ಸುಲಭವಾಯಿತು. ಸೀರೆಯನ್ನು ಪದೇಪದೇ ಸರಿಪಡಿಸಿಕೊಳ್ಳುವ ತೊಂದರೆ ಕಡಿಮೆಯಾಯಿತು. ಇದು ಭಾರತೀಯ ಮಹಿಳೆಯರ ಸಾರ್ವಜನಿಕ ಬದುಕಿನ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಯಿತು.
ಸಂಪ್ರದಾಯದಿಂದ ಫ್ಯಾಷನ್ ಐಕಾನ್‌ವರೆಗೆ
ಬಂಗಾಳದಲ್ಲಿ ಆರಂಭವಾದ ಈ ಶೈಲಿ ನಿಧಾನವಾಗಿ ಭಾರತದ ವಿವಿಧ ಭಾಗಗಳಿಗೆ ಹರಡಿತು. ಕಾಲಕ್ರಮೇಣ: ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಉತ್ತರ ಭಾರತದ ಅನೇಕ ರಾಜ್ಯಗಳು ತಮ್ಮ ತಮ್ಮ ಸಂಸ್ಕೃತಿಗೆ ಅನುಗುಣವಾಗಿ ಬ್ಲೌಸ್ ವಿನ್ಯಾಸಗಳನ್ನು ರೂಪಿಸಿಕೊಂಡವು.
ಇಂದು, ಕೈಮಗ್ಗದ ಸಾಂಪ್ರದಾಯಿಕ ರವಿಕೆ, ಕಸೂತಿ ಬ್ಲೌಸ್, ಮಿರರ್ ವರ್ಕ್, ಜರ್ದೋಸಿ, ಡಿಸೈನರ್ ಬ್ಲೌಸ್, ಬ್ಯಾಕ್‌ಲೆಸ್, ಹೈ ನೆಕ್, ಎಲ್ಬೋ ಸ್ಲೀವ್, ಟೆಂಪಲ್ ಜ್ಯುವೆಲರಿ ಶೈಲಿ ಹೀಗೆ ನೂರಾರು ವಿನ್ಯಾಸಗಳಲ್ಲಿ ಬ್ಲೌಸ್ ಭಾರತೀಯ ಫ್ಯಾಷನ್ ಲೋಕದ ಪ್ರಮುಖ ಭಾಗವಾಗಿದೆ.
ಭಾರತೀಯ ಮಹಿಳೆಯರ ಉಡುಗೆಯಲ್ಲಿ ಒಂದು ಮೌನ ಕ್ರಾಂತಿ

ಒಮ್ಮೆ ಬ್ರಿಟಿಷರ ಸಮಾಜದಲ್ಲಿ ಪ್ರವೇಶ ಪಡೆಯಲು ಆರಂಭವಾದ ಈ ಸಣ್ಣ ಬದಲಾವಣೆ, ಮುಂದೆ ಭಾರತೀಯ ಮಹಿಳೆಯರ ಉಡುಗೆಯನ್ನೇ ಶಾಶ್ವತವಾಗಿ ಬದಲಿಸಿತು. ಇಂದು ಸೀರೆ ಮತ್ತು ರವಿಕೆಯನ್ನು ಬೇರ್ಪಡಿಸಿ ಕಲ್ಪಿಸಿಕೊಳ್ಳುವುದೇ ಕಷ್ಟ. ಆದರೆ ಅದರ ಹಿಂದೆ ಜ್ಞಾನದಾನಂದಿನಿ ದೇವಿ ಅವರ ದೂರದೃಷ್ಟಿ, ಧೈರ್ಯ ಮತ್ತು ಹೊಸತನವನ್ನು ಸ್ವೀಕರಿಸುವ ಮನೋಭಾವವೇ ಕೆಲಸ ಮಾಡಿತ್ತು. ಅವರು ಸೀರೆಯನ್ನು ಬದಲಿಸಲಿಲ್ಲ—ಸೀರೆ ಧರಿಸುವ ರೀತಿಯನ್ನೇ ಆಧುನೀಕರಿಸಿದರು.
ಇಂದು ಭಾರತೀಯ ಮಹಿಳೆಯರ ಉಡುಗೆಯ ಅವಿಭಾಜ್ಯ ಅಂಗವಾಗಿರುವ ರವಿಕೆ, ವಾಸ್ತವವಾಗಿ ಸುಮಾರು 150 ವರ್ಷಗಳ ಹಿಂದೆ ಆರಂಭವಾದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯ ಫಲ ಎಂಬುದು ಭಾರತೀಯ ಉಡುಗೆ ಇತಿಹಾಸದ ಅತ್ಯಂತ ಆಸಕ್ತಿದಾಯಕ ಸಂಗತಿಗಳಲ್ಲೊಂದಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





