ಈ ವಾರದ ಅನೇಕ ಸುದ್ದಿಗಳಲ್ಲಿ ಎರಡು ಸುದ್ದಿಗಳು ರಾಜ್ಯ ಮತ್ತು ರಾಷ್ಟ್ರಾದ್ಯಂತ ಒಂದು ರೀತಿಯ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತಿವೆ. ಮೊದಲನೆಯದು ತನ್ನ ವಯಕ್ತಿಕ ತೆವಲಿಗೋ ಇಲ್ಲವೇ ಮತ್ತಾರದ್ದೋ ರಾಜಕೀಯ ತೆವಲಿಗೆ ದಾಳವಾಗಿ ಪ್ರಪಂಚಾದ್ಯಂತ ಬಟ್ಟ ಬಯಲಾದ ಮಹ್ಲಿಳೆಯೊಬ್ಬಳದ್ದಾದರೇ, ಮತ್ತೊಂದು ಮಹಿಳೆಯರ ಉಡುಪಿನ ಬಗ್ಗೆ ಕಾಳಜಿಯುಕ್ತ ಮಾತನಾಡಿದ ಉತ್ತರಾಖಂಡ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರನ್ನು ಪ್ರಿಯಾಂಕ ವಾದ್ರಾಳೂ ಸೇರಿದಂತೆ ತಮ್ಮನ್ನು ತಾವು ಪ್ರಗತಿಪರ ಎಂದು ತೋರಿಸಿಕೊಳ್ಳುಲು ಹಪಾಹಪಿ ಪಡುವ ಕೆಲ ಮಹಿಳೆಯರು ಹಿಗ್ಗಾ ಮುಗ್ಗಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನೊಳಗೊಂಡಂತೆ ಅನೇಕ ಸಂಘದ ಹಿರಿಯ ಸ್ವಯಂ ಸೇವಕರ ಅವರ ಫೋಟೋಗಳನ್ನು ಹಾಕಿ ಲೇವಡಿ ಮಾಡುವ ಮುಖಾಂತರ ಲೇವಡಿ ಮಾಡುತ್ತಿರುವುದು ನಿಜಕ್ಕೂ ಆ ಮಹಿಳೆಯರ ಬೌದ್ಧಿಕ ದೀವಾಳಿತನಕ್ಕೆ ದ್ಯೋತಕವಾಗಿದೆ.

ಇಡೀ ಪ್ರಪಂಚಾದ್ಯಂತ ಹೆಣ್ಣುಮಕ್ಕಳನ್ನು ಭೋಗದ ವಸ್ತು ಎಂದು ಭಾವಿಸಿರುವಾಗ ನಮ್ಮ ಸನಾತ ಪರಂಪರೆ ಮಾತ್ರವೇ, ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎಂದು ಬೋಧಿಸಿತ್ತು. ದೇವರುಗಳ ನಂತರ ನಮ್ಮಲ್ಲಿ ಮೊತ್ತ ಮೊದಲಿಗೆ ಗೌರವ ಕೊಡುವುದೇ, ತಾಯಿಗೆ ಹಾಗಾಗಿಯೇ ಮಾತೃ ದೇವೋ ಭವ ಎಂದ ನಂತರ ಪಿತೃ ದೇವೋ ಭವ ಎಂದು ಸಂಬೋಧಿಸುತ್ತೇವೆ.

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ | ಪಂಚಕಂ ನಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್ || ಎಂಬ ಶ್ಲೋಕವನ್ನು ನಮ್ಮ ಹೆಣ್ಣು ಮಕ್ಕಳಿಗೆ ಹೇಳಿಕೊಡುವ ಮೂಲಕ ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರಿಯಂತಹ ಪತಿವ್ರತೆಯರಾಗಿ ನೀವು ಬಾಳಿ ಬೆಳಗಿ ಎಂದು ಹೇಳಿಕೊಡುತ್ತೇವೆ. ಇಂದಿಗೂ ನಮ್ಮ ದೇಶದಲ್ಲಿ ಪರ ಪುರುಷರೊಂದಿಗೆ ಸಂಭಾಷಿಸುವಾಗ ತಲೆ ತಗ್ಗಿಸಿಯೋ ಇಲ್ಲವೇ, ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ಮಾತನಾಡಿಸುವ ಸಂಸ್ಕೃತಿ ನಮ್ಮ ದೇಶಾಂದ್ಯಂತ ರೂಢಿಯಲ್ಲಿದೆ. ಸ್ವಂತ ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ ಗೋಳಾಡಿದ ಸತ್ಯ ಹರಿಶ್ಚಂದ್ರನ ಪತ್ನಿ ಚಂದ್ರಮತಿಯ ಉಲ್ಲೇಖ ನಮ್ಮ ಪುರಾಣದಲ್ಲಿದೆ. ಅಲ್ಲಾಹುದ್ದೀನ್ ಖಿಲ್ಚಿಯು ಮೋಸದಿಂದ ತನ್ನ ಗಂಡನನ್ನು ಸೋಲಿಸಿ ರಾಣಿ ಪದ್ಮಾವತಿಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಪರ ಪುರುಷನಿಗೆ ಸೆರೆ ಸಿಗಬಾರದೆಂದು ತನ್ನನ್ನೇ ಆತ್ಮಾಹುತಿ ಮಾಡಿಕೊಂಡ ಇತಿಹಾಸ ನಮ್ಮ ನಾಡಿನದ್ದಾಗಿದೆ.

ಯಾವ ಹೆಣ್ಣಿನ ಮಾನವನ್ನು ಕಾಪಾಡಲೆಂದೇ ನಮ್ಮ ರಾಮಾಯಣ ಮತ್ತು ಮಹಾಭಾರತದಲ್ಲಿ ಘನಘೋರ ಯುದ್ದಗಳು ನಡೆದಿದ್ದವೋ ಅಂತಹ ದೇಶದಲ್ಲಿ ಹೆಣ್ಣೇ ತಾನು ಪೂಜ್ಯಳು ಎಂಬ ಭಾವನೆಯಿಂದ ಹೊರಬಂದು ತಾನೊಂದು ಆಕರ್ಷಣೀಯವಾದ ಕೇಂದ್ರ ಬಿಂದುವಾಗ ಬಯಸಿದ್ದಾಳೆ. ಪುರುಷರಿಗಿಂತ ತಾನೂ ಯಾವುದರಲ್ಲೂ ಕಮ್ಮಿ ಇಲ್ಲಾ ಎಂದು ತೋರಿಸುವ ಹಪಾಹಪಿಯಲ್ಲಿ ನಮ್ಮ ಶಾಸ್ತ್ರ ಸಂಪ್ರದಾಯದಲ್ಲಿ ಸ್ತ್ರೀ ಎಂದರೆ ಮೂಡಿಬರುವ ಕಲ್ಪನೆಗಳೆಲ್ಲವೂ ಮಾಯವಾಗಿದೆ. ಮೈತಂಬ ಮುಚ್ಚುವ ವಿವಿಧ ರೀತಿಯ ಸೀರೆ ಮತ್ತು ಕುಪ್ಪಸದ ಉಡಿಗೆ, ಉದ್ದವಾದ ಕೂದಲುಗಳನ್ನು ಒಪ್ಪ ಓರಣವಾಗಿ ಬೈತೆಲೆ ತೆಗೆದು ಬಾಚಿ ಆ ತುರುಬಿಗೊಂದು ಚೆಂದದ ಹೂವನ್ನು ಮುಡಿದು, ಹಣೆಯ ಮಧ್ಯದಲ್ಲಿ ಅಗಲವಾದ ಚೆಂದನೆಯ ಕುಂಕುಮ, ಕೈಗಳಿಗೆ ಘಲ್ ಘಲ್ ಎನ್ನುವ ಬಳೆ ಮತ್ತು ಕಾಲ್ಗಳಿಗೆ ಝಲ್ ಝಲ್ ಎನ್ನುವ ಕಾಲಂದಿಗೆ ಹಾಕಿಕೊಂಡ ಭಾರತೀಯರ ಮಹಿಳೆಯರ ಮುಂದೆ ಪ್ರಪಂಚದ ಯಾವುದೇ ದೇಶದ ಹೆಣ್ಣುಗಳನ್ನು ನೀವಾಳಿಸಿ ಹಾಕ ಬೇಕು.





