“ನಾನು ಹುಟ್ಟಿದ್ದು ಇಲ್ಲೇ, ವಿದ್ಯಾಭ್ಯಾಸ ಮಾಡಿದ್ದು ಇಲ್ಲೇ, ರಂಗಭೂಮಿಯಲ್ಲಿ ಬೆಳೆದಿದ್ದು ಇಲ್ಲೇ… ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದೇನೆ. ಹಾಗಿದ್ದರೂ ನನ್ನ ಹೆಸರು ಮತದಾರರ ಪಟ್ಟಿಯಿಂದ ಏಕೆ ಕಾಣೆಯಾಗಿದೆ?” ನಟ ಪ್ರಕಾಶ್ ರಾಜ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ವಿಡಿಯೋ ಮತ್ತು ಹೇಳಿಕೆಗಳು ಕರ್ನಾಟಕದ Special Intensive Revision (SIR) ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಿವೆ.

ಆದರೆ ಈ ವಿಚಾರದಲ್ಲಿ ಒಂದು ಪ್ರಮುಖ ಸಂಗತಿಯನ್ನು ಮೊದಲು ಸ್ಪಷ್ಟಪಡಿಸಬೇಕು. ಪ್ರಕಾಶ್ ರಾಜ್ ಅವರ ಹೆಸರನ್ನು “ಅಂತಿಮವಾಗಿ ಮತದಾರರ ಪಟ್ಟಿಯಿಂದ ಅಳಿಸಲಾಗಿದೆ” ಎಂದು ಹೇಳುವುದು ಈ ಹಂತದಲ್ಲಿ ಸರಿಯಾಗುವುದಿಲ್ಲ. ಲಭ್ಯವಿರುವ ವರದಿಗಳ ಪ್ರಕಾರ, ಅವರ ಹೆಸರು SIR ಪರಿಶೀಲನೆಯ ಸಂದರ್ಭದಲ್ಲಿ ASDDO — Absent, Shifted, Dead, Duplicate and Others ವರ್ಗದಲ್ಲಿ ಗುರುತಿಸಲ್ಪಟ್ಟಿದೆ. ಅವರ ಹಳೆಯ ಮತದಾರರ ದಾಖಲೆಯಲ್ಲಿದ್ದ ವಿಳಾಸದಲ್ಲಿ ಅವರು ವಾಸಿಸುತ್ತಿಲ್ಲ ಎಂಬುದು ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ.
ಹಾಗಾದರೆ SIR ಎಂದರೇನು? ಪ್ರಕಾಶ್ ರಾಜ್ ಅವರ ಹೆಸರು ಈ ಪಟ್ಟಿಗೆ ಹೇಗೆ ಬಂತು? “65 ಲಕ್ಷ ಮತದಾರರ ಹಕ್ಕು ಕಳೆದುಹೋಗಿದೆ” ಎಂಬ ಹೇಳಿಕೆಯ ಅರ್ಥವೇನು? ಮತದಾರರು ತಮ್ಮ ಹೆಸರು ಉಳಿಸಿಕೊಳ್ಳಲು ಅಥವಾ ಸರಿಪಡಿಸಿಕೊಳ್ಳಲು ಏನು ಮಾಡಬೇಕು? ಈ ಲೇಖನದಲ್ಲಿ ನೋಡೋಣ.
SIR ಎಂದರೇನು?
SIR ಎಂದರೆ Special Intensive Revision — ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ.
ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಸರಿಯಾಗಿ ಇರುವಂತೆ ಮಾಡುವುದು ಹಾಗೂ ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಅಥವಾ ದ್ವಂದ್ವ ನೋಂದಣಿಗಳು ಮತ್ತು ಇತರ ಅನರ್ಹ ದಾಖಲೆಗಳನ್ನು ಗುರುತಿಸುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ 2026ರ SIR ಪ್ರಕ್ರಿಯೆ ಜೂನ್ 30ರಂದು ಆರಂಭವಾಯಿತು. ರಾಜ್ಯದ ಸುಮಾರು 5.54 ಕೋಟಿ ಮತದಾರರನ್ನು ಪರಿಶೀಲಿಸುವ ಈ ಬೃಹತ್ ಅಭಿಯಾನವು 24 ವರ್ಷಗಳ ನಂತರ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆಯಾಗಿದೆ; ಹಿಂದಿನ SIR 2002ರಲ್ಲಿ ನಡೆದಿತ್ತು. ಅಂದರೆ ಇದು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ನಡೆಸುವ ಪ್ರಕ್ರಿಯೆ ಎಂದು ಮಾತ್ರ ನೋಡುವುದಕ್ಕಿಂತ, ರಾಜ್ಯದಾದ್ಯಂತ ನಡೆಯುತ್ತಿರುವ ದೊಡ್ಡ ಪ್ರಮಾಣದ ಮತದಾರರ ದಾಖಲೆ ಪರಿಶೀಲನೆಯಾಗಿ ಅರ್ಥಮಾಡಿಕೊಳ್ಳಬೇಕು.
ಪ್ರಕಾಶ್ ರಾಜ್ ಅವರ ಹೆಸರು ಏನಾಯಿತು?

ಪ್ರಕಾಶ್ ರಾಜ್ ಅವರು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ, SIR ಸಂದರ್ಭದಲ್ಲಿ ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕಾಣೆಯಾಗಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ವ್ಯಂಗ್ಯಭರಿತವಾಗಿ, “Nice joke… game on” ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿ, ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಮುಂದಿನ ಪ್ರಕ್ರಿಯೆ ಏನು ಎಂದು ಪ್ರಶ್ನಿಸಿದ್ದಾರೆ. ತಮ್ಮ ಜನ್ಮಸ್ಥಳ, ವಿದ್ಯಾಭ್ಯಾಸ, ರಂಗಭೂಮಿ ಮತ್ತು ಹಿಂದಿನ ಚುನಾವಣಾ ಸ್ಪರ್ಧೆಯನ್ನೂ ಅವರು ಉಲ್ಲೇಖಿಸಿದ್ದಾರೆ.
ಆದರೆ ಇಲ್ಲಿಯೇ ಒಂದು ಮುಖ್ಯ ವ್ಯತ್ಯಾಸವಿದೆ:
ಮತದಾರರ ಪಟ್ಟಿಯಲ್ಲಿ ಒಂದು ನಿರ್ದಿಷ್ಟ ವಿಳಾಸದ ದಾಖಲೆಯನ್ನು ಪರಿಶೀಲಿಸುವುದು ಮತ್ತು ವ್ಯಕ್ತಿಯ ನಾಗರಿಕತ್ವವನ್ನು ನಿರಾಕರಿಸುವುದು ಒಂದೇ ವಿಷಯವಲ್ಲ. ಲಭ್ಯವಿರುವ ವರದಿಗಳ ಪ್ರಕಾರ, ಅವರ ಹಳೆಯ ದಾಖಲೆಯಲ್ಲಿದ್ದ ವಿಳಾಸದಲ್ಲಿ ಅವರು ಈಗ ವಾಸಿಸುತ್ತಿಲ್ಲ ಎಂಬ ಕಾರಣದಿಂದ ಅವರ ದಾಖಲೆಯನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ. ಅಂತಿಮವಾಗಿ ಸರಿಯಾದ ಪ್ರಸ್ತುತ ವಿಳಾಸದ ಆಧಾರದ ಮೇಲೆ ಮತದಾರರ ನೋಂದಣಿಯನ್ನು ಸರಿಪಡಿಸಿಕೊಳ್ಳಲು ಕಾನೂನುಬದ್ಧ ಪ್ರಕ್ರಿಯೆ ಲಭ್ಯವಿದೆ.
65 ಲಕ್ಷ ಮತದಾರರಲ್ಲಿ ನಾನೂ ಒಬ್ಬ, ಈ ಸಂಖ್ಯೆಯ ಅರ್ಥವೇನು?
ಪ್ರಕಾಶ್ ರಾಜ್ ತಮ್ಮ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಸುಮಾರು 65 ಲಕ್ಷ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಇಲ್ಲಿ ಸಂಖ್ಯೆಗಳ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕರ್ನಾಟಕದ SIR ಕುರಿತ ಇತ್ತೀಚಿನ ವರದಿಗಳಲ್ಲಿ ರಾಜ್ಯಾದ್ಯಂತ ಸುಮಾರು 84 ಲಕ್ಷ ಮತದಾರರ ಹೆಸರುಗಳು draft roll ಹಂತದಲ್ಲಿ ತೆಗೆದುಹಾಕುವ ಸಾಧ್ಯತೆಯ ವರ್ಗದಲ್ಲಿ ಗುರುತಿಸಲ್ಪಟ್ಟಿವೆ ಎಂದು ವರದಿಯಾಗಿದೆ. ಇದು ರಾಜ್ಯದ mapped votersನ ಸುಮಾರು 15% ಎಂದು ಹೇಳಲಾಗಿದೆ. ಆದರೆ ಇವರನ್ನೆಲ್ಲ “ಅಂತಿಮವಾಗಿ ಮತದಾನದ ಹಕ್ಕು ಕಳೆದುಕೊಂಡವರು” ಎಂದು ಕರೆಯುವುದು ತಪ್ಪು. ಪರಿಶೀಲನೆ, claims ಮತ್ತು objections ನಂತರವೇ ಅಂತಿಮ ಮತದಾರರ ಪಟ್ಟಿ ರೂಪುಗೊಳ್ಳುತ್ತದೆ. ಬೆಂಗಳೂರಿನಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ASDDO ವರ್ಗದಲ್ಲಿ ಗುರುತಿಸಿರುವ ಬಗ್ಗೆ ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ, ಬೆಂಗಳೂರಿನ ಸುಮಾರು ಅರ್ಧದಷ್ಟು registered voters ಈ ಪರಿಶೀಲನಾ ವರ್ಗದಲ್ಲಿ ಗುರುತಿಸಲ್ಪಟ್ಟಿದ್ದರು ಮತ್ತು ಅವರಿಗೆ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಹೀಗಾಗಿ “ಪಟ್ಟಿಯಿಂದ ಹೊರಬಿದ್ದವರು” ಮತ್ತು “ಪರಿಶೀಲನೆಗೆ ಒಳಪಟ್ಟವರು” ಎಂಬ ಎರಡು ಪದಗಳ ನಡುವಿನ ವ್ಯತ್ಯಾಸ ಬಹಳ ಮುಖ್ಯ.
ಪ್ರಕಾಶ್ ರಾಜ್ ಪ್ರಕರಣದ ಮತ್ತೊಂದು ಹಿನ್ನೆಲೆ
ಈ ವಿವಾದಕ್ಕೆ ಮತ್ತೊಂದು ಕಾನೂನು ಸಂಬಂಧಿತ ಹಿನ್ನೆಲೆಯೂ ಇದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು Central ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಅವರ ವಿರುದ್ಧ ಬಹು ರಾಜ್ಯಗಳಲ್ಲಿ ಮತದಾರರ ನೋಂದಣಿ ಮತ್ತು ಚುನಾವಣಾ affidavitನಲ್ಲಿ ವಿವರಗಳನ್ನು ಮರೆಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿದೆ. 2026ರ ಜುಲೈನಲ್ಲಿ ಅವರಿಗೆ ಈ ಪ್ರಕರಣದಲ್ಲಿ bail ನೀಡಲಾಗಿತ್ತು. ಈ ಪ್ರಕರಣದ ಆರೋಪಗಳು ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಆರೋಪ ಸಾಬೀತಾಗಿದೆ ಎಂದು ಹೇಳಲು ಸಾಧ್ಯವಿಲ್ಲ.
ವ್ಯಕ್ತಿ ಸ್ಥಳೀಯ ಎಂದಾಕ್ಷಣ ಕಾನೂನುಬದ್ಧ ಪರಿಶೀಲನೆಯಿಂದ ವಿನಾಯಿತಿ ಸಿಗುವುದಿಲ್ಲ

ಪ್ರಕಾಶ್ ರಾಜ್ ಅವರು ಬೆಂಗಳೂರಿನಲ್ಲಿ ಹುಟ್ಟಿರಬಹುದು, ಇಲ್ಲಿಯೇ ವಿದ್ಯಾಭ್ಯಾಸ ಮಾಡಿರಬಹುದು ಮತ್ತು ಇದೇ ನಗರದಿಂದ ಚುನಾವಣೆಯಲ್ಲೂ ಸ್ಪರ್ಧಿಸಿರಬಹುದು. ಆದರೆ ಈ ಕಾರಣಗಳಿಂದ ಮಾತ್ರ ಅವರಿಗೆ ಮತದಾರರ ಪಟ್ಟಿಯ ಕಾನೂನುಬದ್ಧ ಪರಿಶೀಲನೆಯಿಂದ ಯಾವುದೇ ವಿಶೇಷ ವಿನಾಯಿತಿ ಸಿಗುವುದಿಲ್ಲ. ಮತದಾರರ ಪಟ್ಟಿ ಪರಿಶೀಲನೆಯ ಸಂದರ್ಭದಲ್ಲಿ, ಅವರು ನೀಡಿದ್ದ ವಿಳಾಸಕ್ಕೆ BLOಗಳು ಭೇಟಿ ನೀಡಿದಾಗ ಪ್ರಕಾಶ್ ರಾಜ್ ಅವರು ಆ ವಿಳಾಸದಲ್ಲಿ ಪ್ರಸ್ತುತ ವಾಸಿಸುತ್ತಿಲ್ಲ ಎಂಬುದು ಕಂಡುಬಂದಿದ್ದರೆ, ನಿಯಮಾನುಸಾರ ಅವರ ಹೆಸರನ್ನು ASDDO ವರ್ಗಕ್ಕೆ ಸೇರಿಸಿ ಸಾರ್ವಜನಿಕವಾಗಿ ಪ್ರಕಟಿಸುವ ಪ್ರಕ್ರಿಯೆ ನಡೆದಿರಬಹುದು. ಆದರೆ ಅವರು ಇನ್ನೂ ಅದೇ ವಿಳಾಸದಲ್ಲಿ ವಾಸಿಸುತ್ತಿದ್ದರೆ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೆಸರನ್ನು ಮತ್ತೆ ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಕಾನೂನುಬದ್ಧ ಅವಕಾಶವಿದೆ. ಹೀಗಿರುವಾಗ, ಈ ಪ್ರಕ್ರಿಯೆಯನ್ನು ರಾಜಕೀಯ ಸಂಚು ಎಂದು ಬಿಂಬಿಸುವ ಮೊದಲು, ವಾಸ್ತವಾಂಶಗಳನ್ನು ಪರಿಶೀಲಿಸುವುದು ಹೆಚ್ಚು ಸೂಕ್ತವಲ್ಲವೇ?
ತನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸದೆ, ಎದುರಾಳಿಯ ಮೇಲೆ ಮಾತ್ರ ಪ್ರಶ್ನೆಗಳನ್ನು ಎತ್ತುವುದು ಸರಿಯೇ?
‘ತಾನು ಕಳ್ಳ, ಪರರನ್ನು ನಂಬ’ ಎಂಬ ಗಾದೆಯಂತೆ, ಮೊದಲು ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಮತ್ತು ಮತದಾರರ ನೋಂದಣಿ ಕುರಿತ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುವುದು ಹೆಚ್ಚು ಜವಾಬ್ದಾರಿಯುತ ನಡೆ ಅಲ್ಲವೇ? ಮತದಾರರ ಪಟ್ಟಿಯಂತಹ ಅತ್ಯಂತ ಸೂಕ್ಷ್ಮ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಿಗೆ ಸಂಬಂಧಿಸಿದ ವಿಚಾರದಲ್ಲಿ, ಯಾವುದೇ ವ್ಯಕ್ತಿಯ ಹೇಳಿಕೆ—ಅವರು ನಟರಾಗಿರಲಿ, ರಾಜಕಾರಣಿಯಾಗಿರಲಿ ಅಥವಾ ಸಾಮಾನ್ಯ ನಾಗರಿಕರಾಗಿರಲಿ—ಸಂಪೂರ್ಣ ದಾಖಲೆಗಳು ಮತ್ತು ವಾಸ್ತವಾಂಶಗಳ ಆಧಾರದ ಮೇಲೆಯೇ ಚರ್ಚೆಯಾಗಬೇಕು.
ಇನ್ನೊಂದು ಪ್ರಮುಖ ಪ್ರಶ್ನೆಯೂ ಇದೆ. ಭಾರತದ ಚುನಾವಣಾ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಚುನಾವಣಾ ಕ್ಷೇತ್ರಗಳಲ್ಲಿ ಮತದಾರನಾಗಿ ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ, ಪ್ರಕಾಶ್ ರಾಜ್ ಅವರು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂಬ ಆರೋಪಗಳು ಅಥವಾ ಈ ಕುರಿತು ಯಾವುದೇ ಪರಿಶೀಲನೆ ನಡೆಯುತ್ತಿದ್ದರೆ, ಅದರ ಸತ್ಯಾಸತ್ಯತೆಯನ್ನೂ ಸಾರ್ವಜನಿಕವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ.
ಈ ಹಿನ್ನೆಲೆಯಲ್ಲೇ, ತಮ್ಮ ಮತದಾನದ ಹಕ್ಕಿನ ಕುರಿತು ಪ್ರಧಾನಿಗಳನ್ನೇ ಪರೋಕ್ಷವಾಗಿ ಗುರಿಯಾಗಿಸಿ ವಂಗ್ಯವಾಗಿ ಫ್ರೆಂಡ್ ಎನ್ನುತ್ತಲೇ ಪ್ರಶ್ನೆ ಎತ್ತುತ್ತಾ,
“ನನ್ನನ್ನು ಮತದಾನದಿಂದ ದೂರ ಇಡಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ”
ಎಂಬ ರೀತಿಯಲ್ಲಿ ರಾಜಕೀಯ ಸಂದೇಶ ನೀಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದೇ ಸಮಯದಲ್ಲಿ, ಯಾವುದೇ ತಪ್ಪು ಮಾಹಿತಿ ಅಥವಾ ಗೊಂದಲ ಸೃಷ್ಟಿಸುವ ಹೇಳಿಕೆ ಕಾನೂನುಬಾಹಿರವಾಗಿದೆ ಎಂದು ತೀರ್ಮಾನಿಸುವ ಮೊದಲು, ಸಂಬಂಧಪಟ್ಟ ಅಧಿಕಾರಿಗಳು ಅದರ ಸತ್ಯಾಸತ್ಯತೆ ಪರಿಶೀಲಿಸಿ, ಕಾನೂನು ಉಲ್ಲಂಘನೆಯಾಗಿದ್ದರೆ ಮಾತ್ರ ಸೂಕ್ತ ಕ್ರಮ ಕೈಗೊಳ್ಳಬೇಕು.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಸ್ಪಷ್ಟನೆ

ಪ್ರಕಾಶ್ ರಾಜ್ ಅವರ ಮತದಾರರ ಪಟ್ಟಿಗೆ ಸಂಬಂಧಿಸಿದ ಆರೋಪದ ಕುರಿತು ಬೆಂಗಳೂರು ಕೇಂದ್ರ ನಗರ ಪಾಲಿಕೆ ಸ್ಪಷ್ಟನೆ ನೀಡಿದೆ.
ಪಾಲಿಕೆಯ ಪ್ರಕಾರ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 1, ಕ್ರಮ ಸಂಖ್ಯೆ 970ರಲ್ಲಿ ನೋಂದಾಯಿತರಾಗಿದ್ದ ಪ್ರಕಾಶ್ ರಾಜ್ ಅವರ ವಿಳಾಸವಾದ ಫ್ಲ್ಯಾಟ್ ನಂ. 266, ಗಾರ್ಡನ್ ಅಪಾರ್ಟ್‌ಮೆಂಟ್ಸ್, ವಿಠಲ್ ಮಲ್ಯ ರಸ್ತೆಗೆ 16-06-2026ರಂದು BLO ಮನೆ-ಮನೆ ಪರಿಶೀಲನೆ ನಡೆಸಿದಾಗ, ಫ್ಲ್ಯಾಟ್ ಖಾಲಿಯಾಗಿರುವುದು ಕಂಡುಬಂದಿದೆ. ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ಪ್ರಾಪರ್ಟಿ ಮ್ಯಾನೇಜರ್ ನೀಡಿದ ಮಾಹಿತಿಯಂತೆ, ಪ್ರಕಾಶ್ ರಾಜ್ ಅವರು ಸುಮಾರು ನಾಲ್ಕು ವರ್ಷಗಳಿಂದ ಅಲ್ಲಿ ವಾಸಿಸುತ್ತಿಲ್ಲ ಮತ್ತು ಬೇರೊಬ್ಬರು ಅಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಈ ಆಧಾರದ ಮೇಲೆ ನಿಯಮಾನುಸಾರ ಅವರ ಹೆಸರನ್ನು ‘Shifted’ ಎಂದು ಗುರುತಿಸಲಾಗಿದೆ.
ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಟ್ಟಿದ್ದಲ್ಲ (Deletion), ‘ಸ್ಥಳಾಂತರ’ (Shifted)
11-08-2026ರಂದು ಪಾಲಿಕೆ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಯಾದ ಜಗದೀಶ್ ಜಿ. ಅವರು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ತಾವು ಅದೇ ಕಟ್ಟಡದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದರೂ ನಿಖರವಾದ ಫ್ಲ್ಯಾಟ್ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ನಂತರ, ತಾವು ಹಳೆಯ ವಿಳಾಸದಲ್ಲಿಲ್ಲದೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಮತ್ತೊಂದು ವಿಳಾಸದಲ್ಲಿ ನೆಲೆಸಿರುವುದಾಗಿ ನಟ ಸ್ವತಃ ದೃಢಪಡಿಸಿದ್ದಾರೆ. ಅಲ್ಲದೆ, Form-6 ದಾಖಲೆಗಳ ಪರಿಶೀಲನೆಯಲ್ಲಿ ಅವರು ಮತ್ತೊಂದು ವಿಳಾಸದಲ್ಲಿ ಮತದಾರರಾಗಿ ನೋಂದಾಯಿತರಾಗಿರುವುದು ಕಂಡುಬಂದಿದೆ ಎಂದು ಪಾಲಿಕೆ ತಿಳಿಸಿದೆ. ಹಾಗಾಗಿ ಇದು ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಟ್ಟಿದ್ದಲ್ಲ (Deletion), ಬದಲಾಗಿ ವಿಳಾಸ ಬದಲಾವಣೆ ಕಾರಣದಿಂದ ‘ಸ್ಥಳಾಂತರ’ (Shifted) ಎಂದು ನಮೂದಿಸಲಾಗಿದೆ
ಹೀಗಾಗಿ, ಪ್ರಕಾಶ್ ರಾಜ್ ವಿರುದ್ಧ ನಡೆದ ಕ್ರಮವು ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಕಾರಣದಿಂದಲ್ಲ. ಮನೆ-ಮನೆ ಪರಿಶೀಲನೆಯ ಸಂದರ್ಭದಲ್ಲಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಚುನಾವಣಾ ನಿಯಮಾನುಸಾರ ಕೈಗೊಂಡ ಆಡಳಿತಾತ್ಮಕ ಕ್ರಮ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ಕೊನೆಯ ಮಾತು
ಪಾಲಿಕೆಯ ಈ ಸ್ಪಷ್ಟನೆಯ ಬಳಿಕ, ಪ್ರಕಾಶ್ ರಾಜ್ ಅವರು ಮಾಡಿದ ಆರೋಪಗಳ ಕೇವಲ ಪೂರ್ವಾಗ್ರಹ ಪೀಡಿತ ರಾಜಕೀಯ ಸಂಚು ಮತ್ತು ಸಿನಿಮಾದಲ್ಲಿ ಮಾಡುವ ನಟನೆಯನ್ನೇ ವೀಡಿಯೋ ಮುಖಾಂತರ ಮಡುವ ಮೂಲಕ ಭಾವನಾತ್ಮಕವಾಗಿ ಜನರನ್ನು ದಿಕ್ಕು ತಪ್ಪಿಸುವ ಮಹಾ ನಾಟಕ ಎಂದು ಎಲ್ಲರಿಗೂ ಅರ್ಥವಾಗಿದೆ. ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ದೇಶದಲ್ಲಿ ಆಗುವ ಬಹುತೇಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಪ್ರಕಾಶ್ ರಾಜ್ ಅವರ ಮನಸ್ಥಿತಿ ಎಂತಹದ್ದು ಎಂದು ಈಗ ಎಲ್ಲಾ ಭಾರತೀಯರಿಗೂ ಅರ್ಥವಾಗಿದ್ದು, ಪ್ರತೀ ಬಾರಿಯೂ ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಾ ಈ ರೀತಿಯಾಗಿ ಸಿಕ್ಕಿಬಿದ್ದು ನಗೆಪಾಟಾಗುವ ಮೂಲಕ ಮುಂದೆ ಆತ ನಿಜ ಹೇಳಿದರೂ, ತೋಳ ಬಂತು ತೋಳ ಎಂಬ ಕಥೆಯಂತಾಗಿ ಮುಂದೆ ಆದ ನಿಜವನ್ನೇ ಹೇಳಿದರೂ, ಯಾರೂ ಆತನನ್ನು ಸಹಾ ನಂಬುವ ಪರಿಸ್ಥಿತಿಯಲ್ಲಿ ಇರುವುದಿಲ್ಲಾ ಎಂದು ಸಾರ್ವಜನಿಕ ವಲಯದಲ್ಲಿ ಸಹಜವಾಗಿಯೇ ಮೂಡಿದ್ದು, ಅವರೆಲ್ಲರೂ ಪ್ರಕಾಶ್ ರಾಜ್ ಇದೆಲ್ಲಾ ಬೇಕಿತ್ತೇ?” Just asking! ಎನ್ನುತ್ತಿರುವುದು ಸರಿ ಎನಿಸುತ್ತಿದೆ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





