ಕಥೆ – ಜಗದೀಶ ಬ. ಹಾದಿಮನಿ
ಗಿರೆಪ್ಪಾ ಸಿದ್ದವ್ವ ಒಂದಾದ ಮೇಲೆ ಒಂದರಂತೆ ಐದೂ ಹೆಣ್ಣುಮಕ್ಕಳೇ ಹುಟ್ಟಿದಾಗ ಗಂಡು ಮಗುವಿಗಾಗಿ ತೀರದ ದುರಾಸೆಯ ಷಡ್ಯಂತ್ರ ಹೂಡಿದರು. ನಡೆದದ್ದಾದರೂ ಏನು….?
“ರೀ ಮಗಳಿಗ್ಯಾ ಐದ್ ವರುಸ್ಯಾನ ಆಗಾಕಬಂದ್ವು. ಇನಾ ಅದೇಟು ದಿನ ಮನ್ಯಾಗಿಟುಗೊಂದು ಕುಂದ್ರುತೀರಿ?”
“ಹೊಕ್ಕಿನಾಳ ಮಾರಾಯ್ತಿ, ಯಾಕಾಟು ಅಸ್ರು ಮಾಡ್ತಿ?”
“ಯಾಕಂದ್ರೆ, ಅಚಗೊಂಡ್ರ ಆಮ್ಯಾಗೇನ್ಮಾಡ್ತಿ? ಮೂರು ವರುಸುದ್ದಿನಾತು ಈಟಾ ಹೇಳಾಕತಿನಿ, ನೀಯೇನು ಕಿವ್ಯಾಗರ ಹಾಕ್ಕೊಂತಿಯೇನು?”
“ನೀನಾ ನೋಡ್ತಿಯಲ್ಲ, ನಾವೇನು ಕಾಲಿ ಅದಿವೇನು? ಹೊಟ್ಟಿ ತುಂಬಿಸಿಗಳ್ಳಾಕ ಯಾಸ್ಯಾಗಾರಂಗ ಊರೂರು ಸುತ್ತಾಡಕತಿವಿಲ್ಲ?”
“ನನಗು ಎಲ್ಲ ಅರ್ತವಾಗುತ್ತ ಮಾರಾಯ. ಆಮ್ಯಾಕ ಮನುಸೊಪ್ಪುದಾ ಹೋದೀತಂತಾ ಸಂಗ್ಟ, ಮತ್ತೇನಿಲ್ಲ.”
“ಅವ್ದು, ನೀ ಹೇಳಾದು ಖರೆ ಐತಿ. ಈಗ ಅದೇಟ ಅಚ್ಕೊಂಬಿಟ್ಟಾಳ. ಬಿಡಾದುಬಿಟ್ಟು ಬರಾ ಸುಕ್ರುವಾರ ಹೋಗ್ಯಾಬಿಡ್ತಿನಾಳ.”
“ಏನೊಕ್ಕೂವೆ, ಈಟ ಹೇಳ್ಕೊಂತಾ ಹೊಕ್ಕೂವೆ, ನಿನಗ ಬಿಟ್ಟಿದ್ದು ನೋಡು.”
“ಇಲ್ಲ ಮಾರಾಯ್ತಿ, ಅದೆಂದಿದ್ರು ತಪ್ಪುದು ಕರ್ಮ. ಈ ಸಲ ಮಾತ್ ತಪ್ಪ್ಲಾತಾ?”
“ಆತ್ಬರ್ರಿ ಉಣ್ಣಾಮ,” ಅನ್ಕೋತನ ಸಿದ್ದವ್ವ ಬಾಗ್ಲುಕ ಬಂದು, “ಚಂದ್ರಿ, ತಂಗಿನೂ ಕರ್ಕಂಬಾರಮ್ಮ ಉಣ್ಣಾಕಂತ್ರಿ,” ಅಂತ ಅಂಗಳದಾಗ ಆಡ್ತಿದ್ದ ಮಕ್ಳಿಗ್ಯಾ ಕೂಗಿ, ಮನ್ಯಾಕ ಹೋದ್ಲು.
ಅಣ್ತಮ್ರುಗೂಡ ಜಗಳ ಮಾಡ್ಕೊಂಡ ಗಿರೆಪ್ಪ ಹಾರಿ, ಗುದ್ಲಿ, ಪಿಕಾಸಿ, ಪುಟ್ಟಿ, ಹೆಗಲಿಗೇರಿಸ್ಕೊಂಡು, ಹೆಂಡ್ತಿ ಜೊತಿ ಊರ್ಬಿಟ್ಟು ಐದು ವರುಸ್ಯಾನ ಆಗಾಕಬಂತು. ಆಗ ಚಂದ್ರಿ ಹೆಚ್ಚುಕಡಿಮಿ ಮೂರು ವರುಸದಾಕಿದ್ಲು, ಭೂಮಿ ಇವನ ಹೊಟ್ಟ್ಯಾಗಿದ್ಲು. ಅಲ್ಲಿ ಇಲ್ಲಿ ಚಾರುಚೂರು ಕೆಲಸ ಮಾಡ್ಕೊಂತಾ ಬದುಕಿನ ಬಂಡಿ ಕಟಗೊಂಡ್ರೂ ರೋಡು, ಗಟಾರ ಮಾಡಾಗ, ಟೆಲಿಫೋನ್ ಲೈನ್ ಹಾಕಾಗ, ಸ್ವರ್ಗಕ್ಕ ಮೂರ ಗೇಣನ್ನುಂಗ ಗಂಡಹೆಂಡ್ತಿ ಕಟಿ ದುಡಿತಿದ್ರು. ತೆಗ್ಗು ಕಡಿಯೋದಂದ್ರ ಇಬ್ರಿಗೂ ಅದೇನೋ ಹುರುಪು ಹುಮ್ಮಸ್ಸು. ಗಂಡ ಹಾರೆಯಿಂದನೋ ಪಿಕಾಸಿಯಿಂದನೋ ನೆಲ ಅಗುದ್ರು, ಹೆಣ್ತಾದಾಕಿ ಸಲಕಿಲ್ಯಾ ಯಾ ಎಳುದು ಪುಟ್ಟ್ಯಾಗ ತುಂಬಿ ಮ್ಯಾಗ ಒಗಿತಿದ್ಲು. ಇಲ್ಲಿ ಸ್ವಲ್ಪ ಕೆಲಸ ಕಡಿಮ್ಯಾದ್ವು ಅಂದಕೊಡ್ಯಾ ಮಂಗಳೂರಿಗೂ ಹೋಗಿ ಟೆಂಗಿನಬುಡ ಬಿಡಿಸ್ತಿದ್ರು. ಆ ಕೆಲಸನೂ ಸಿಗದಾಗ, ಎಲ್ಲಿಂದನೋ ಬಂದು ನಿಂದ್ರ ಬೋಟಿಗೆ ಗೊಬ್ರ ಹೇರಾಕ ಇಳಸಾಕ ಗಂಡ ಹೊಕ್ಕಿದ್ರ, ಹೆಂಡ್ತಿ ಕೂಲಿನಾಲಿಗ್ಯಾರ, ಇಲ್ಲ ಯಾರಾದ್ರೂ ಗೌಂಡಿ ಕೈಯಾಗ ಇಟ್ಟಂಗಿ ಕೊಡಕಾರ, ಗಾರೆ ಕೆಲಸಕ್ಕಾರ ಹೊಕ್ಕಿದ್ಲು. ದುಡಿಯ ಉಮೇದಿದ್ರೂ ಕೆಲಸ ನಿಶ್ಚಿತಾಗಿರ್ಲಿಲ್ಲ. ಹಿಂಗಾಗಿ, ಊರಲ್ದ ಊರು ಕೆಲಸ ಹುಡುಕ್ಕೊಂಡು ತಿರುಗಾಡ್ತಿದ್ರು. ಐದು ವರ್ಷದಾಗನಾ ಐವತ್ತೂರರ ನೋಡಿದ್ರು.
ಕೆಲಸಕ್ಕೇನು ಬರ ಇರ್ಲಿಲ್ಲ. ಹೊಲ ಮನ್ಯಾಗ ದುಡುದ್ರ ಕೂಲಿ ಗಿಟ್ಟಲ್ಲಂತ ಒಜ್ಜ್ಯಾ ಕೆಲಸಾನ ಹುಡುಕ್ತಿದ್ರು, ಅದರಾಗ ತೆಗ್ಗು ಕಡ್ಯಾವಿದ್ರಂತೂ ನೀರು ಕುಡಿದಷ್ಟು ಸಲೀಸಾಗಿತ್ತು. ಇತ್ತಿತ್ಲಾಗಿ ಮನಿತರ ತೋಡಾ ಸಿಕ್ಕಾ ಸಿಗ್ತಿದ್ವು. ಅ ಬಿಟ್ರ ಕಂಪೌಂಡು, ನೀರಿನ ಪೈಪ್ ಲೈನು, ಇಂಗ್ಬಚ್ಲಾ ತೆಗ್ಗು ತಗ್ಯಾ, ಹಳೆಮನಿ ಕೆಡಾ, ಹೊಲದಾಗ ಕಟ್ಟೆ ಕಡ್ಯಾ ಇದ್ದ ಇರ್ತಿದ್ವು. ಹಗ್ಯಾದೋ ರಾತ್ರ್ಯಾದೋ ಹಿಂಗ ದುಡುದುಡುದು ಆಟೋ ಈಟೋ ಕೈಯಾಗ ನಾಕ್ ದುಡ್ಡು ಮಾಡ್ಕೊಂಡಿದ್ರು, ಆಪತ್ಕಾಲದಾಗ ಬರ್ತಾಂತ ಚೂರ್ ಗಂಟ್ ಮಾಡ್ಕೊಂಡು ಪೆಟಿಗಿನೂ ತುಂಬ್ಕೊಂಡಿದ್ರು.
ಸಿಕ್ರ ಬಾಡಿಗಿಮನಿ, ಸಿಗದಿದ್ರ ಎಲ್ಲೆರ ಹಳ್ಳದ್ದಂಡ್ಯಾಗನೋ ಖಾಲಿ ಜಾಗದಾಗನೋ ಜೋಪಡಿ ಹಾಕ್ಕೊಂಡು ಬದುಕು ಕಳಿತಿದ್ರು. ಎಂಥ ಪ್ರಸಂಗರ ಬರ್ಲಿ, ಯಾವುದುನೂ ಮನಸಿಗ್ಯಾ ಹಚಿಗೊಳ್ದ ಎಲ್ಲೋ ಒಂದ್ಕಡೆ ಉಳಿತಿದ್ರು. ಇತ್ತೀಚಿನ ಎರಡು ವರ್ಷ ಬರಗಾಲ ಬಿದ್ದಿದ್ದಕ್ಕ ಕೆಲಸ ಕಮ್ಮಿಯಾಗಿದ್ದು ಬಿಟ್ರ, ಯಾವ ಹಾರೆ, ಗುದ್ಲಿ, ಪಿಕಾಸಿ ನಂಬಿ ಹೆಗೀರಿಸಿಕೊಂಡು ಬಂದಿದ್ರೋ ಅವು ಕೆಳಗಿಳಿದ ದಿನಗಳು ಇರಲಿಲ್ಲ.
ಬಿಡುವಿಲ್ಲದ ಹತ್ತಾರು ಕೆಲಸಗಳ ಮಧ್ಯೆ, ಹತ್ತು ದಿನಗಳು ಹೆಂಗುರುಳಿದುವೇನೋ ಗೊತ್ತಿಲ್ಲ. ಹಾದಿ ಕಾದುಕೊಂಡಿದ್ದ ಶುಕ್ರವಾರ ಬಂದಬಿಟ್ತು. ಹಿಂದಿನ ದಿನ, ಪ್ರಭಣ್ಣ ದೇಸಾಯರ ಹೊಸಮನಿ ಮುಂದ ಇಂಗ್ಬಚ್ಚಲದ ಗುಂಡಿ ತೋಡಿ ಬರಾದ್ರಾಗನ ಹೆಚ್ಚುಕಮ್ಮಿ ನಡುರಾತ್ರಿನ ಆಗಿತ್ತು. ಆಟತ್ತಿಗ್ಯಾ ದೇಸಾಯರು ಕೂಡ, “ಲೇ ಹುಚುಗುಳ, ಉಳುದ್ ಕೆಲಸ ನಾಳಿ ಮಾಡುವಂತ್ರಿ ಹೋಗ್ರಿ, ಯಾಕ್ ಬಡದಾಡಿ ಸಾಯಿತ್ರಿ” ಅಂತಾ, ನಾಕಾರ್ ಬಾರಿ ಬೈದುನೂ ಬೈದಿದ್ರು.
ಆಗೆಲ್ಲಾ, “ನಾಳೊಂದು ಮುಕ್ಯ ಕೆಲಸೈತೆಪ್ಪ, ಬರಕಾಗಲ್ಲ, ಅದಕ ಎಟತ್ತರ ಆದ್ಲಿ, ಮುಗಿಸ್ಗೊಂದು ಓಗ್ಬುಡ್ತಿವಿ,” ಅಂದಿದ್ರು.
“ಹೆ ಹುಚ್ಚಪ್ಗುಳ, ನಾಳೆಂದ್ರ ನಾಳೆನಯೇನು? ಇನ್ನೊಂದಿನ ಬಂದ್ ಮಾಡುವಂತ್ರಿ ಹೋಗಿ, ಏನ್ರಸ್ರಿಲ್ಲ,” ಅಂದ್ರ, “ಇತ್ತೀರಾಗಿದ್ರ ನಾಳ್ಯಾರಾಗಿರ್ತಿನೆಪ್ಪ? ಮಾಡಕೈಲಿ ಮಾಡ್ಯಾ ಹೋಗ್ಬುಡ್ತಿವಿ,” ಅಂತಾ, ಬಿಟ್ಟುಬಿಡದಾ ದುಡುದುಡುದು ದಣಿದ ಬಂದಿದ್ರು.
ಹಿಂಗಾಗಿ, ಮುಂಜಾನ್ಯಾ ಏಳದ್ರಾಗನ ಹೊತ್ತು ಬಾಳ ಆಗಿತ್ತು. ಅರ್ಧ ತಾಸು ತಾಸ್ನ್ಯಾಹನ ಸಜ್ಜಾದ ಗಿರೆಪ್ಪ, ಉಂಡು ಕಟ್ ಬೀಡಿ ಬಕ್ಣದಾಗಿಟ್ಟಗೊಂಡು, ಪುಟ್ಟಿ, ಹಾರಿ, ಸಿಲಿಕಿ, ತತ್ರಾಣಿ ಹೆಗೀರಿಸ್ಕೊಂಡ. ಅಸ್ರುಬಸ್ರ ಬುತ್ತಿ ಕಟಿಗೊಂಡು ಓಡಿತಂದ ಹೇಣ್ತಿತಗ್ಯಾ, “ಬುತ್ತೇನು ಬ್ಯಾಡ್ಯಾಳ, ಉಣ್ಣ ಒತ್ತನ್ನದ್ರಾಗನ ಬರ್ತಿನಾಳ,” ಅಂತ ಹೇಳಿ, ಮಗಳ ಕರಕೊಂಡು ಬೀಡುಬೀಸಾಗಿ ಹೊಂಟ.
ಬಿಸುಲು ಆಗ್ಯಾ ತನ್ನ ಪ್ರಖರತೆನ ತೋರುಸ್ತಿತ್ತು. ಮೊದಲಾ ಹಂಡ್ ಬ್ಯಾಸಿಗಿ, ಹಿಂಡ್ ಬಿಸಿಲು, ಕಣ್ಣೆತ್ತಿದ್ರ ಸುಡ್ತಿನಂತಿತ್ತು. ಅದನ್ನೊಂಡಿ ಗಿರೆಪ್ಪುಗ, ಸ್ವಲ್ಪ ಲಗುನಾ ಹಾದಿ ಬೆಳಸ್ಬೇಕಾಗಿತ್ತೆನಿಸಿದ್ದು ನಿಜ. ತಲಿ, ಕಾಲು ಸಣ್ಣಗೆ ರಂಗೇರುತ್ತಿದ್ದವು. ಅಡಿಯಿಟ್ಟಿಲ್ಲ ಧೂಳಿನ ಹುಡಿ ಏಳುತ್ತಿತ್ತು. ಪೌಡರನಂಗ ಪಾದದ ಮ್ಯಾಲ್ಬಂದು ಬೀಳುತ್ತಿತ್ತು. ಕಿರುಬೆರಳು ಹಿಡಿದು ಓಡಿಬರುತ್ತಿದ್ದ ಮಗಳಿಂದಾಗಿ, ಮಣ್ಣು ಮತ್ತಷ್ಟು ಹುಡಿ ಹಾರಿ, ಗಡಿ ಮೀರಿ ಮುಗಿಲಿಗೇಳುತ್ತಿತ್ತು.
ಮೊದಾ ಹೊಲದ ಮಣ್ಣಿನ ಸಣ್ಣ ಹಾದಿ, ಕರಲು ಎರಿಭೂಮಿ ಬ್ಯಾರೆ. ಆಗೀ ನೆಲ ಕಾದು ಹಂಚಾಗತೊಡಗಿತ್ತು. ಹಿಗ್ಗಿನಿಂದ ಹೆಜ್ಜಿಗ್ಯಾ ಸರಿಜೋಡಿ ಹೆಜ್ಜಿನ ಪೋಣುಸ್ತಿದ್ದ ಮಗಳಿಗೆ, “ಅಮ್ಮು, ಕಾಲು ನೂಸ್ತಾ?” ಕೇಳಿದ.
ಅಪ್ಪನ ಮುಖನ ನೋಡ್ತಾ, “ಇಲ್ಲಪ್ಪ,” ಅಂದಳು.
“ಬಾ ಸೊಲ್ಪ ಎತಗೊಂತಿನಿ,” ಅಂತ ಅನಾಮತ್ತಾಗಿ, ಉಕ್ಕುಡದ ಕೊಡಕ್ಕ ಇನ್ನೊಂದು ಕೊಡ ಜೋಡಿಸುನಂಗ ಒಂದ ಕೈಯಾಗ ಹೆಗೀರಿಸ್ಕೊಂಡ. ಎಡ ಹೆಗಲಿನ್ಯಾಗ ಹಾರೆ, ಸಲಕೆ ವಿರಾಜಮಾನವಾಗಿ ಅಶ್ವಿನಿ ದೇವತೆಗಳ ಹಾಗೆ ರಾರಾಜಿಸುತ್ತಿದ್ದವು. ಅದರ ಮ್ಯಾಲಾ ಮೊಣಕೈಯೂರಿ ಮುಂಚಾಚಿ, ಮುಂಗೈನ್ಯಾಗ ಬುಟ್ಟಿನ ಗಟ್ಟಿ ಹಿಡಿದಿತ್ತು. ಅದುವೋ ಹೆಜ್ಜೆ ಇಟ್ಟಂತೆಲ್ಲಾ ಮರದಾಗ ನೇತಾಡ್ತಿದ್ದ ಕಾಯಂಗ ಗೆಜ್ಜೆ ಕಟಿಗೊಂಡು ಕುಣಿದಾಡ್ತಿತ್ತು.
ಬಲ ಹೆಗಲಿಗ್ಯಾ ಏರಿದ್ದ ಮಗಳ ಒಂದು ಕಾಲು ಎದಿಗ್ಯಾ, ಇನ್ನಾಂದು ಕಾಲು ದುಬ್ಬುಕ್ಕ ಬಳಿಲುಗಳಂಗ ಜೋತಾಡ್ತಿದ್ದು. ಎಳೆಗೈಗಳು ಬಿಗಿಮುಷ್ಟಿಯಲ್ಲಿ ಕೂದಲನ್ನು ಹಿಡಿದಿದ್ದವು.
ತತ್ರಾಣಿ ಗಟ್ಟಿಯಾಗಿ ಅಚಿಕೊಂಡಿತ್ತು. ಬಲಗೈ ಬೀಸುತ್ತಾ, ಆಗಾಗ ಕೈಯೆತ್ತಿ ಮಗಳ ಬೆನ್ನುಮುಟ್ಟಿ ಕಟ್ಟಾಗಿ ಕೂಡೆನ್ನುತ್ತಿದ್ದವನ ಹಾದಿ ಸವೆಯತ್ತಿತ್ತು. ಸುಡುಬಿಸಿಲಿನ ಸೆಕೆಗೆ, ತಲೆ ಮೇಲೆ ಸೆಲೊಡೆದು, ದಬೆದಬೆಗಳಾಗಿ, ಮರದಿಂದ ಇಳಿದ ಹಾವಂತೆ ಕೆಳಗಿಳಿದು, ಮಳೆಹನಿಗಳೆಂಬಂತೆ ಧರೆಗುರುಳುತ್ತಿದ್ದವು. ತೊಟ್ಟ ಅಂಗಿ, ಆಗ ತಾನೇ ಅದ್ದಿ ತೆಗೆದ ಒದ್ದೆ ಅರಿವೆಯಂತಾಗುತ್ತಿತ್ತು.
ಬಿಸಿಲ ಜಳಕ್ಕೆ ಅಂಜಿ, ತಲೆಮೇಲೆ ಹೊದ್ದ ವಲ್ಲಿಯೂ ಒದ್ದೆಯಾಗಿ ಕೊರಳ ಸುತ್ತಿದ್ದ ನಾಗರಹಾವಂತೆ ಇಳಿಬಿದ್ದು ಹೆತ್ತಪ್ಪನ ಕೊಳ್ಳ ಸುತ್ತಿದ್ದ ಗೋಧಿಬಣ್ಣದ ವಲ್ಲಿಯನ್ನೆಳೆದ ಮಗಳು, ತನ್ನ ಎಳೆಯ ಮೈದು ಕೈಗಳಿಂದ ತಲೆ, ಕುತ್ತಿಗೆ, ಹಣೆ ಮತ್ತು ಮುಖವನ್ನೊರೆಸಿದಳು. ಬೆವರು ಮಾಯಾದಂತೆ ಗಿರೆಪ್ಪಗೆ, ಒರತೆ ನೀರೊಳು ಮಿಂದಂತೆ, ಬೇವಿನಮರದ ನೆಳಲೇ ಸಿಕ್ಕಂತೆ ತಂಪಾಗಿ ಹಿತವೆನಿಸುತ್ತಿತ್ತು.
ಊರಿಂದ ಮೈಲು ಬಂದಿರಬೇಕು. ಕುದುರೆ ಏರಿದ ಮಗಳು, “ಅಪ್ಪ ಕೆಳಗಿಳುಸು, ನಡ್ಕೊಂಬತ್ತಿನಿ,” ಅಂದಳು.
“ಇನ್ನೊಂಚೂರು ಕೂಡಮ, ಇಳುಸ್ತಿನಿ,” ಎಂದು ಸರಬರ ಹೆಜ್ಜೆ ಹಾಕತೊಡಗಿದ.

ಬೆವರಸೆಲೆಯಂತೂ ಜಲಪಾತದಂತೆ ಧುಮ್ಮಿಕ್ಕಿ ಹೊಳೆಯಾಗಿ ಹರಿಯುತ್ತಿತ್ತು. ತಮಗೆ ಸಂಬಂಧವಿಲ್ಲವೇನೋ ಎಂಬಂತೆ ಯಾವ ಗಿಡಮರಗಳು ಕೂಡ, ಇನಿತು ಗಾಳಿಯನ್ನು ಸುತ್ತಿರಲಿಲ್ಲ. ಅವೇ ಮುಕ್ಕಾಲು ಪಾಲು ಎಲೆಯೂದುರಿಕೊಂಡು ಮುದುರಿ ಮುಪ್ಪಡರಿಕೊಂಡಿದ್ದ. ಕಳಿಕಂಟಿ, ಖಾರಿ, ಬಾರಿ ಬರೀಮುಳ್ಳನ್ನೇ ಹೊತ್ತು ನಿಂತಿದ್ದ. ಅಲ್ಲೊಂದು ಇಲ್ಲೊಂದು ಅಮೃತಬಳ್ಳಿಯನ್ನು ಅಪ್ಪಿಕೊಂಡ ಮರಗಳು ಹಚ್ಚಹಸಿರಾಗಿ ಕಾಣುತ್ತಿದ್ದವು.
ಬೇವನಿಮರಗಳಂಥ ಮರಗಳೇ ಸೊರಗಿ ಮರಗುತ್ತಿದ್ದವು. ನೆರಳು ಬೇಕೆನ್ನುವವರು ಬೊಡ್ಡೆಯನ್ನೇ ತಬ್ಬಿ ನಿಲ್ಲಬೇಕಿತ್ತು. ಅಷ್ಟು ಬಿಟ್ಟರೆ ಸೂರ್ಯನಿಗೆ ತೂರಲೇನು ಕೊರತೆಯಿರಲಿಲ್ಲ. ಬಿಸಿಲಿಗೆ ನಿಂತು ನೆಳಲೀಯುವ ಮರಗಳನ್ನು ನೋಡುತ್ತಿದ್ದರೆ, ತಾವೇ ಉರಿಬಿಸಿಲಿಗೆ ಬೆದರಿ, ತಂಪ ಹುಡುಕುವ ಇರಾದೆಯಲ್ಲಿ ಇದ್ದಂತೆನಿಸುತ್ತಿತ್ತು. ಹಕ್ಕಿಗಳು ಚಿಂವ್ ಗಟ್ಟುತ ಜಲತಾಣ ಕಣಗಳ ಹುಡುಕಿ ಯಾಣ ಕೈಗೊಂಡಂತಿತ್ತು. ಅಂಥದರಲ್ಲಿ ಕುರಿ, ಮೇಕೆ, ದನಗಳು ನಿಲುಕಿದ ಎಲೆಗಳನ್ನು ಎಳೆದೆಳೆದು ಹಸಿವನ್ನು ತುಸು ಹಿಂಗಿಸಿಕೊಳ್ಳುತ್ತಿದ್ದ.
ಏದುಸಿರು ಬಿಡುತ್ತಾ ಹರಿಯುತ್ತಿದ್ದವನ ಬೆವರಸೆಲೆಯ ನೆಲೆಗಳನ್ನು ಹುಡುಹುಡುಕಿ ಒರಸುತ್ತಿದ್ದ ಮಗಳಿಗೆ, “ಅಮ್ಮು, ಇಳಿತಿಯಾ ಅಮ್ಮ,” ಅಂತಾ ಕೇಳುತ್ತಲೇ ಕೆಳಗಿಳಿಸಿ, ಬದುವಿಗಿದ್ದ ಕರಿಕಲ್ಲಿಗೆ ಕುಂತ. ಮರಿಮಂಗ ತಾಯಿನ ಅಪ್ಪಿಕೊಂಡಂತಿದ್ದ ತತ್ರಾಣಿನ ತೊಡೆಮ್ಯಾಗಿಟ್ಟುಕೊಂಡು ಗುಟುಗುಟು ಗುಟುಕಾಗಿ ಗುಟುಕರಿಸಿ, “ಅಮ್ಮು, ಬಾ ಇಲ್ಲಿ,” ಅಂತ ಮಗಳನ್ನು ಕರೆದು ಅವಳಿಗೂ ಕುಡಿಸಿ, ಆಕಾಶದೆಡೆ ಮುಖ ಮಾಡಿ, ತುಸು ತಡೆದು ಸುಮ್ಮನೆ ಆಚೀಚೆ ದೃಷ್ಟಿ ಹಾಯಿಸಿದ.
ಯಾವ ಗಿಡಮರಗಳೂ ಒಂದೆಲೆಯನ್ನೂ ಅಲುಗಿಸುತ್ತಿರಲಿಲ್ಲ. ಇದ್ದರೆ ತಾನೇ ಎಲೆಗಳೆನ್ನುವಂತೆ, ಕಂಡಷ್ಟು ಹಾಳೊಡೆ ಬೋಳುಮರ. ಎರಡು ವರ್ಷದಿಂದ ಹೆಚ್ಚುಕಮ್ಮಿ ಬರಗಾಲವೇ ಬಿದ್ದಿದ್ದರಿಂದ ಖಾಲಿಹೊಲ, ಬಿಟ್ಟರೆ ಜಾಲಿಹೊಲವೇ ಕಾಣುತ್ತಿತ್ತು. ಕುಂತ ಕಲ್ಲಿನ ಝಳವೇನು ಕಡಿಮೆಯಿರಲಿಲ್ಲ. ಹೀಗೆ ಮತ್ತೆ ಮೇಲೆದ್ದು ನಿಂತ, ಸೂರ್ಯ ನೆತ್ತಿಯ ಕುಕ್ಕುದರೊಳಗೇ ಮುಟ್ಟ ತಾಣ ಮೆಚ್ಚಲೇಬೇಕೆಂದುಕೊಂಡ.
ತತ್ರಾಣಿಯನ್ನು ಪುನಃ ಮಗ್ಗಲಿಗೆ ಸರಿಸಿ, ಹೆಗಲಿಗೆ ಹಾರೆ ಏರಿಸಿಕೊಂಡು, ಸಲಕೆಯನ್ನು ಅದರ ಮುಂಭಾಗಕ್ಕೆ ತೂಗುಹಾಕಿ, ಪುಟ್ಟಿಯನ್ನು ಕೈಯಲ್ಲಿಡಿದ.
“ಅಪ್ಪ, ಪುಟ್ಟಿ ತಾ ಇಡ್ಕೊಂತಿನಿ,” ಅಂತ, ಮಗಳು ಬುಟ್ಟಿನ ಹಿಡುದ್ಳು.
“ಒಜ್ಜೈತಿ ಬಿಡಮ್ಮ ಬ್ಯಾಡ,” ಅಂತ ಇಸ್ಕೊಳ್ಳಾಕ ಪ್ರಯತ್ನಿಸಿದರೂ ಕೊಡದೆ ಮುಂದೋಡಿ, ಬರುತ್ತಿದ್ದ ಅಪ್ಪನನ್ನು ಹಿಂದಿರುದಿರುಗಿ ನೋಡುತ್ತಿದ್ದಳು.
“ಬಿದ್ದಿಯಮ್ಮ, ಮೆಲ್ಕೋಗು,” ಅಂತ ಕೂಗಿ ಎಚ್ಚರಿಸಿದ.
“ಇಲ್ಲಪ್ಪ ಬೀಳಲ್ಲ,” ಅಂತಾ ಧೂಳೆಬ್ಬಿಸಿಕೊಂಡು ಜಿಂಕೆಯಂತೆ ನೂರೆಜ್ಜೆ ಮುಂದೋಡಿ, ಅಲ್ಲಿ ಪುಟ್ಟಿಯನ್ನಿಟ್ಟು ಮತ್ತೆ ಎದುರಾಗಿ ಬರಹತ್ತಿದಳು.
“ಮತ್ತ್ಯಾಕ ಬರ್ತಿಯಮ್ಮ, ಅಲ್ಲ್ಯಾ ಕೂಡು,” ಅಂತ ಕೂಗಿದ.
“ನಾ ಒಲ್ಲೆ,” ಎಂದು ಎದುರಾದಳು. ಹೀಗೆ, ಅಪ್ಪನಿಗೆ ಇದಿರಾಗಿ ಬರಲಾರದು, ಮುಂದೋಡಾದು ಮಾಡ್ತಾ ನಡೆಯುತ್ತಲೇ ಇದ್ದಳು. ಅವಳು ಸಾಗಿದ ದೂರ ಕ್ರಮಿಸುವುದಕ್ಕೆ ಅವನಿಗೆ ಅದೇಟೊತ್ತು? ಉಸಿರು ಬಿಟ್ಟು ತಗೊಳ್ಳೋದರೊಳಗೇ ಪುಟ್ಟಿಯಿಟ್ಟಿದ್ದ ಪಾಜ್ಯಾ ದಾಟ್ಯಾಬಿಡ್ತಿದ್ದ. ಇವಳು ಮತ್ತೆ ಬುಟ್ಟಿ ತಂಗೊಂಡಳಾ ಚಿರತೆ ವೇಗದಲ್ಲಿ ಮುನ್ನುಗ್ಗುತ್ತಿದ್ದಳು. ಅವಳಿಗದು, ಒಂದು ಬಗೆ ಆಟವಾಗಿತ್ತು. ಪುಟ್ಟ ಕಾಲ್ಗಳು, ಮೊಲದ ಮುಂದೆ ಆಮೆಯಂತೆ ಅದೇನು ಓಡಿತು? ಅಪ್ಪನಿಗೆ ಎಲ್ಲವೂ ಅರ್ಥವಾಗುತ್ತಿತ್ತು. ತುಸು ನಿಂತು, ಮುಕ್ಕು ನೀರು ಕುಡಿದು, ಅವಳಿಗೂ ಕುಡಿಸಿ, ಮತ್ತೆ ಮಗಳನ್ನು ಹೆಗಲ ಮೇಲೆ ಹೊತ್ತ.
“ಅಪ್ಪಾ, ಇನ ಎಲ್ಲೈತಿ….?” ಕೇಳಿದಳು.
“ಇನ್ನೇನು ಇಲ್ಲ್ಯ ಬಂತಮ್ಮ……” ಅಂತ ರಮಿಸುತ್ತಾ, ಅದಾಗಲೇ ನಾಲ್ಕು ಮೈಲು ನಡಿದಿದ್ದ.
ಹಾವಂತೆ ಬುಸುಗುಡುತ್ತಿದ್ದ ಉಸಿರು, ಕಾಲಿಟ್ಟಿಲ್ಲ ಧೂಳೆಬ್ಬಿಸಿ ಹುಡಿ ಹಾರಿಸುತ್ತಿದ್ದ ಚಪ್ಪಲಿಯ ಚರಕ್ ಪರಕ್ ಸದ್ದಷ್ಟೇ ಕೇಳಿಬರುತ್ತಿತ್ತು. ದೂರದಲ್ಲಿ ಬಿಸಿಲು, ತನ್ನ ಬಂಧುಬಾಂಧವರನ್ನು ಕಟ್ಟಿಕೊಂಡು ‘
ದಿಮಿತೆ ತಕಿಟ ದಿಮಿತಾ….’ ಎಂದು ಶಿವತಾಂಡವ ನೃತ್ಯ ಮಾಡುತ್ತಿತ್ತು.
ಬ್ಯಾಸಿಗೆ ದಿವಸಕ್ಕ ನಾನಾ ತಂಪೆಂದು ಹಾರಾಡ್ತಿದ್ದ ಬೇವಿನಮರಕ್ಕೂ ಹಿಡಿಮಣ್ಣು ತಗೊಂಡು ನೆತ್ತಿಮ್ಯಾಗಿನ ಸೂರ್ಯಂಗ ತೂರಂಗಾಗಿತ್ತು, ಇನ್ನ ಉಳುವುದ ಗಿಡಮರಗಳ ಸ್ಥಿತಿಯಂತೂ ಹೇಳಂಗ ಇರಲಿಲ್ಲ.
“ಅಪ್ಪಾ, ಇನ ಎಲ್ಲೈತಿ…?” ಮತ್ತೆ ಕೇಳಿದಳು.
ಕೈಚಾಚಿ ತೋರಿ, “ಅಮ್ಮ, ಅಲ್ಲಿ ದೊಡ್ಡ ಬನ್ನಿಗಿಡ ಕಾಣುತ್ತಲ್ಲ, ಅದಾ ನೋಡು,” ಅಂತ ಹೇಳಿದ.
ತಾವು ಹೊಂಟಿರುವ ಜಾಗ ಬಂತನ್ನಾದು ಕೇಳಿದ ಕೂಡ್ಲ್ಯಾನ ಮಗಳಿಗ್ಯಾ ಖುಷಿ ಇಮ್ಮಡಿಸಿ, “ಅಪ್ಪಾ, ಇಳುಸು ನನ್ನ, ನಡ್ಕೊಂಬತ್ತಿನಿ,” ಅಂತ ಮಿಸುಕಾಡಿ ಇಳಿದು ಮುಂದೋಡೋಡಿ ತೇಕುತ್ತಿದ್ದರೂ ಅದರ ಅವಳಿಗಿರಲಿಲ್ಲ.
ತುಸು ಹೊತ್ತಲ್ಲಿ, ಹೆಜ್ಜೆಗಳು ತಾಣದ ನಿಲ್ದಾಣಕ್ಕೆ ಬಂದ. ದಣಿವಾರಿಸಿಕೊಳ್ಳಲು ಮರದ ಕೆಳಗೆ ಅಂಗಿ ಕಳೆದು ಕುಳಿತ. ಮಗಳು ತೊಡೆಯೇರಿ ಮಲಗಿದಳು. ಬನ್ನಿಮರದೊಂದಿಗೆ ನಾಲ್ಕಾರು ವರ್ಷದ ಬೇವಿನಗಿಡವೊಂದು ಹೊಂದಿಕೊಂಡು ಬೆಳೆದಿತ್ತು. ಅದರೊಂದಿಷ್ಟು ನೆರಳು ಬಿಟ್ಟರೆ ಬನ್ನಿಮರದ್ದೆಂದು ಹೇಳಿಕೊಳ್ಳಲು ನಾಕಾಣೆಯ ಕಾಲುಪಾಲೂ ಅಲ್ಲಿರಲಿಲ್ಲ. ಅಲ್ಲಲ್ಲಿ ಕಡಿದ್ದ ಹಸಿರನ್ನೆಲ್ಲಾ ಕುರಿಗಾರರು ಕಡಿಮೆಗೊಳಿಸಿದ್ದರು. ಎದುರಿಗಿದ್ದ ತುಗ್ಗಲಿ, ಗೊನರಿ, ಬಾರಿ, ಅಂಬ್ರಿ, ಬೆಟ್ಲ, ಜಾಲಿ ತಮ್ಮ ರೆಂಬೆಕೊಂಬೆಗಳನ್ನು ಕತ್ತರಿಸಿಕೊಂಡು, ಹಾಳು ದೇಗುಲದಂತೆ ಬೋಳಾಗಿ ನಿಂತಿದ್ದವು. ದೂರದಲ್ಲಿ ಕಾಣುತ್ತಿದ್ದ ಗುಡ್ಡ, ಕಲ್ಲನ್ನಷ್ಟೇ ಹೊತ್ತಿತ್ತು. ಅಲ್ಲೇ ಹಿಂಬದಿಯಲ್ಲಿ ಹರಿಯುತ್ತಿದ್ದ ಹಳ್ಳನೂ ಗುರುತಿರದಂತೆ ಬತ್ತಿ ಯಾವುದೋ ಕಾಲವಾಗಿತ್ತು. ಬಿಳಿಮೋಡದಲ್ಲಿ ರವರವ ಕುಣಿಯುತ್ತಿದ್ದ ಬಿಸಿಲ್ಗುದುರೆ ಬಿಟ್ಟರೆ ಮತ್ತೇನೂ ಇರಲಿಲ್ಲ.
ಗೀರಿದ ಕಡ್ಡಿ, ಕಚ್ಚಿದ ಬೀಡಿಯ ತುದಿಯ ಹೊತ್ತಿ, ಜುರಿ ಎಳೆದಂತೆ ಪಕಪಕನೆ ಹೊಳೆದು ಮುಕ್ಕಾಗುತ್ತಿತ್ತು. ಒಲೆಯಿಂದೋಡಿದಂತೆ ಹೊಗೆ ಎತ್ತೆತ್ತಲೋ ಓಡುತ್ತಿತ್ತು. ಮಗಳು, ಒಮ್ಮೆ ಅಪ್ಪನ ಕುರುಚಲು ಗಡ್ಡನೆಳೆದರೆ ಮತ್ತೊಮ್ಮೆ ಎದೆಗೂದಲನ್ನಿಡಿದು ಜಗ್ಗುತ್ತಿದ್ದಳು. ಅವನಿಗೆ, ಆಯೆಡೆಗೆ ಯಾವ ಗಮನವಿರದೆ ಎಲ್ಲೋ ದೃಷ್ಟಿಯ ನೆಟ್ಟು ಕುಳಿತಿದ್ದವನು. ಆಗ, “ಅಪ್ಪಾ… ನಿಧಿಯಂದ್ರೇನು….?” ಅಂತ ಕೇಳಿ, ತಂದೆಯನ್ನು ಜಗತ್ತಿಗೆ ಕರೆತಂದಳು. ಆ ಮಾತಿಗೆ, ಮಗಳ ಮುಖನೋಡಿ ಮುಗುಳ್ನಕ್ಕು, “ನಿಧಿಯಂದ್ರ ಬಂಗಾರಮ್ಮ…..” ಅಂದ.
“ಬಂಗಾರಂದ್ರ….?” ಕೇಳಿದಳು.
ಏನೇಳಬೇಕೆಂದು ತೋಚದೆ, “ಬಂಗಾರಂದ್ರ ರೊಕ್ಕಮ್ಮ,” ಅಂದ.
“ಇಲ್ಲಿ ರೊಕ್ಕ ಎಲ್ಲೆದಪ್ಪ….?” ಕೇಳಿದಳು.
“ಇಲ್ಲ್ಯಾ ಅದಾ, ಸದ್ಯ ಹುಡುಕಾನ್ತಡೆಮ್ಮ” ಅಂತ ಹೇಳಿದ.
“ಅಸ್ಸ ಹೇಳಿದ್ಲು, ನಿಮ್ಮಪ್ಪ ಗಂಟೊತಗೊಂಡು ಬರ್ತಾನ. ಒಬ್ಬಾತುಗ ಒಜ್ಜಿ ಆಗುತ್ತಾ, ನೀನಿ ಸೊಲ್ಪ ಒತಗೊಂಡು ಬಾ ಅಂದಾಳ,” ಅಂತ, ತಾಯಿ ಮಾತು ನೆನಪಿಸಿದ್ಲು ಅದಕ, “ನೀವು ನಡ್ಕೊಂಬರಾದ ಜ್ಜೈತಿ. ನೀಯೇನೊತಗೊಂಡು ಬರ್ತಿಯ್ವ?” ಅಂತ ಸ್ವಾಟಿ ತಿವುದು ನಕ್ಕ.
“ಅದುಕ ಅಕ್ಕುನ್ನು ಕಳುಸಂದ್ಯ ಆಕಿ ಒಗ್ಯಾನ, ಮುಸುರಿ ತಿಕ್ಕಾವಿರ್ತಾ, ನೀನಾಟ ಓಗಿ ಬಾ ಅಂದ್ಲು,” ಅಂತ ಬ್ಯಾಸರದಿಂದ ಹೇಳಿದ್ಲು. ಆ ತೊದಲ್ನುಡಿಗೆ ನಕ್ಕು, “ದೊಡ್ಡಕ್ಯಾಗಿಂದ ತಲಿಮ್ಯಾಲಾ ಓರುಸ್ತಿನಿ, ಒತಗೊಂಡೋಗಂತಿ,” ಅಂತಾ ಬಲತೊಡೆ ಮಡುಚಿ, ಮುಖದ ಹತ್ತಿರ ಬಂದವಳ ಹಣೆಗೆ ಮುತ್ತು ಕೊಟ್ಟ.
“ಅವ್ವಗೊರಿಸ್ತೆಲ್ಲ ಹಂಗೋರುಸ್ತೇನು? ಒಲ್ಲೆಪ್ಪ, ಒಜ್ಜೆ ಇರುತ್ತ,” ಅಂದ್ಳು.
“ಒಲ್ಲಂದ್ರ, ನಾಳಿ ನಿನಗಂಡ ಬಿಡ್ತಾನನು? ಒದ್ದು ಒರುಸ್ತಾನ,” ಅಂತ ನಗೆಚಾಟಿಗಿ ಮಾಡಿದ.
“ಒಲ್ಲೆಪ್ಪ, ಒರುಸಾಕ ಬಂದರ ಓಡೋಗ್ಬುಡ್ತಿನಿ,” ಅಂದ್ಳು.
“ಓಡೊಕ್ಕಾಳಂತಾ ಓಡಿ, ಅವು ನಿನ್ನ ಬುಡ್ತಾನನು? ಹಿಡಕ್ಕೊಂಬಂದು ನಾಕಟುದು ಒರುಸ್ತಾನ,” ಅಂತಾ ಕಾಡಿಸಿ, ಎದಿಮ್ಯಾಲ ಕಚಗುಳಿಟ್ಟು ನಗಿಸಿದ.
ಕೊಕ್ಕಾಸಿ ನಗ್ತಿದ್ದ ಮಗಳಿಗೆ “ಕೆಳಗಿಳೆಮ್ಮ” ಅಂತ ಎಬ್ಬಿಸಿ, ತಾನೂ ಮೇಲೆದ್ದ. ನಂತ್ರ, ಕಚ್ಚಿದ ಬೀಡಿ ಒಗೆದು, ಸುತ್ತಮುತ್ತ ನೋಡುತ್ತ ಅರೆಗಳಿಗೆ ಅಲ್ಲೇ ನಿಂತ.
ಯಾಡ್ ನಿಮಿಷ ತಡುದು, “ಅಮ್ಮು, ನೀನ ಇಲ್ಲೇ ಕೂಡು,” ಅಂತ ಮಗಳಿಗೆ ಹೇಳಿದ.
“ನೀನೆಲೊಕ್ಕಿ? ನಾನು ನಿನ್ಜೊತಿ ಬರ್ತಿನಿ,” ಅಂತ, ಜನ್ಮ ಕೊಟ್ಟನ ಎರಡೂ ಕಾಲ್ಗಳನ್ನ ತನ್ನ ಪುಟ್ಟ ಕೈಗಳಿಂದ ಬಳಸಿಕೊಂಡು ಗಟ್ಟ್ಯಾಗಿ ಹಿಡಿದು ನಿಂತ್ಲು.
“ನಿನ್ಬುಟ್ಟು ನಾನೆಲ್ಲಿ ಹೋಗಲ್ಲಮ್ಮ, ಇಲ್ಲೇ ಕೆಲಸ ಮಾಡ್ತೀನಿ. ಅಲ್ಲಿ ಬಿಸುಲು ಬಾಳೈತಿ, ನೀನಿಲ್ಯಾ ನೆಳ್ಳಿಗ್ಯಾ ಕೂಡು,” ಅಂತ, ಬಿಗಿದಪ್ಪಿದ ಕರಗಳನ್ನು ಬಿಡಿಸಿ, ರಮಿಸಿ ಕೂರಿಸಿದ. ಮತ್ತೊಮ್ಮೆ ಗುಟುಕು ನೀರು ಕುಡುದು, ಮಗಳಿಗೂ ಕುಡಿಸಿ, ಹಾರೆ, ಸಲಿಕೆ, ಪುಟ್ಟಿನ ತಗೊಂಡು, ನೂರಿನ್ನೂರಡಿ ನಡೆದು ನಿಂತು, ಹಾರೆಯನ್ನು ನೆಲಕ್ಕೆ ಬಲವಾಗಿ ಚುಚ್ಚಿ ನಿಲ್ಲಿಸಿ, ಸಲಕೆ, ಬುಟ್ಟಿಯನ್ನು ಕೆಳಗಿಟ್ಟ. ತಂದೆ ಆ ಕಡೆ ನಡೆದೊಡನೆ, ಮಗಳು ಆ ಕಡೊಮ್ಮೆ ಈ ಕಡೆಗೊಮ್ಮೆ ಕಪ್ಪೆಯಂತೆ ಜಿಗಿಜಿಗಿದು, ಅಲ್ಲೊಂದು ಇಲ್ಲೊಂದು ಬಿದ್ದಿದ್ದ ಬನ್ನಿಗಿಡದ ಕಾಯಿಗಳನ್ನು ಆರಿಸಿ ತಿನ್ನುವುದ್ರಲ್ಲಿ ಮೈಮರೆತಳು.
ಬಿಸಿಯಾರ್ಭಟದ ನರ್ತನ ಜೋರಾಗಿನೇ ಇತ್ತು. ಅದರ ಆವೇಶಕ್ಕೆ ಗಿಡಮರಗಳು ನಿಂತಲ್ಲಿಯೇ ಸೆಟೆಯುತ್ತಿದ್ದ. ಗುಡ್ಡಬೆಟ್ಟಗಳು ಕುಂತಲ್ಲಿಯೇ ಹಲ್ಕಟಿಯುತಿದ್ದ. ಹಳ್ಳದ ಗುರುತು ಪೊಳ್ಳಾಗಿತ್ತು, ಹಸಿರೆನ್ನುವುದು ಜೊಳ್ಳಾಗಿತ್ತು. ಹೀಗಿರುವಾಗ, ಹೊತ್ತು ನೆತ್ತಿಗೆ ಬಂದು, ಕಾಲಿಗೆ ಕೆಡನೇ ತಾಗಿಸುತ್ತಿತ್ತು. ಅಚ್ಚಹಸಿರ ಹೊದ್ದು ಕತ್ತಾರಿಸಬೇಕಿದ್ದ ಕಾಡಿಗೆ ಕಾಡೇ ಬೆತ್ತಲಾಗಿ ಜೀಂಗುಡುತ್ತಿತ್ತು. ಮಳೆಯೆನ್ನುವುದು ಈ ಭೂಮಿಯ ಮೇಲೆ ಎಂದಾದರೂ ಸುರಿದಿತ್ತೆ ಎಂಬುದರ ಸಣ್ಣ ಕುರುಹು ಕೂಡ ಸಿಗದಂತೆ ಸಿರಿಧರೆ ಬರಡುಬಂಜರಾಗಿತ್ತು. ಅಂಥ ಬಿರುಬಿಸಿಲ್ಲೀ ಗಿರೆಪ್ಪ, ಹಾರೆಯಿಂದ ಕಚ್ಚಿಟ್ಟ ಕಿರುಜಾಗದಲ್ಲೇ ಅಗೆಯತೊಡಗಿದ. ನೆಲ ಅಷ್ಟೇನೂ ಬಿಗಿಯಾಗಿರಲಿಲ್ಲ. ಪಕ್ಕದಲ್ಲಿ ಹಳ್ಳ ಹರಿದ ಚಿಹ್ನೆಯ ಜಾಡಿಗೇನೋ ಉಸುಕಿನ ಪಡೆಯಂತೆ ಕಂಡುಬರುತ್ತಿತ್ತು. ಮೇಲೆದ್ದ ಮಣ್ಣನು ಸಳಸಳನೆ ಸಲಕೆಯಿಂದ ಎಳೆದೊಗೆಯುವಾಗಲೇ ಮಗಳು ಅಲ್ಲಿಗೇನೆ ಓಡಿಬಂದಳು.
ಅವಳಿಗೆ, “ಕಾಲು ಸುಡುತಾಮ್ಮ, ಅಲ್ಲಿನ ಕೂಡ್ಬಾರದಾ?” ಅಂತ ಅಕ್ಕರೆಯಿಂದ ಹೇಳಿದ.
“ಒಬ್ಬಾಕಿಗ್ಯಾ ಅಂಜಿಕ್ಬರುತ್ತಾ,” ಅಂದಳು.
“ಇಲ್ಲೇನೈತೆಮ್ಮ ಅಂಜಿಕಿ ಬರಾಕ, ನಾನಿದ್ದೀನಿಲ್ಲ…?” ಅಂತ ದುಮ್ಮಾರಿಸಿಕೊಳ್ಳಲು ಕೂತ.
ತಂದೆ, ತಲೆಗೆ ಸುತ್ತಿದ್ದ ವಲ್ಲಿಯನ್ನು ತೆಗೆದು ಮುಖ, ತಲೆ, ಎದೆ, ಬೆನ್ನು ಒರೆಸಿದಳು. ಧೂಳಿನಲ್ಲಿ ಎದ್ದು ಗಡ್ಡಕ್ಕೆ ಎದೆಗೂದಲಿಗೆ ಜಿಡ್ಡಾಗಿ ಅಂಟಿದ್ದ ಉಗುರೆಳೆ ಗಾತ್ರದ ಅಸಂಖ್ಯಾತ ರದಿಗಳನ್ನು ಎಳೆದೆಳೆದೊಗೆದು, ತಂದೆ ತೋಡುತ್ತಿದ್ದ ತೆಗ್ಗಿನಲ್ಲಿಳಿದು, ಸಂತಸದಿಂದ ನಲಿದು ನವಿಲಂತೆ ಕುಣಿದಾಡಿದಳು.
ಆಮೇಲೆ, ತಂದೆ ತೋಡಿದ ತೆಗ್ಗಿನ ಒಂದು ಬದಿಗೆ ಆತು ನಿಂತು ಅಳತೆ ಮಾಡತೊಡಗಿದಳು. ಅದು ತನ್ನ ಸೊಂಟಕ್ಕೂ ಕಿರಿದಿದ್ದುದ್ದನ್ನು ಕಂಡು, “ಅಪ್ಪಾ, ನಾನು ಎತ್ರದಿನಿ,” ಅಂದ್ಲು.
“ಹೌದಮ್ಮ, ನಿನ ಎತ್ರದಿದಿ,” ಅಂತ ನಕ್ಕ.
ಮೋಡ ನೋಡ್ತಾ, “ಅಪ್ಪಾ…. ನಾ ಆ ಮುಗುಗೋಟು ಎತ್ರಕ್ಕಿನಿ,” ಅಂದ್ಲು.
ಅದಕ “ಮುಗುಗೋಟು ಎತ್ರಾಗಿ ಏನ್ಮಾಡ್ತಿಯ್ವ….?” ಕೇಳಿದ.
“ಮುಗುಗೋಟು ಎತ್ರಾಗಿ, ಚಿಕ್ಕಿನ ಆರಿಸ್ಗೊಂಡು ಸಹ ಮಾಡ್ತೀನಿ,” ಅಂದ್ಲು.
ಮಗಳ ತುಂಟ ಮಾತಿಗ್ಯಾ ನಕ್ಕು, ಅವ್ಳ ತಲಿಗ್ಯಾ ಪಟ್ಟಂತ ಒಂದೇಟು ಬಡಿದ. ಬಾಯ್ತುಂಬ ನಗುತ, ತನ್ನ ಚಿಕ್ಕ ಬೊಗಸೆಯಲ್ಲಿ ಮಣ್ಣನ್ನು ತುಂಬಿ ಹೊರಚೆಲ್ಲುತ್ತಾ, “ಅಪ್ಪಾ…. ನೀ ತೋಡು, ನಾ ತುಂಬಿ ಚಲ್ತೀನಿ,” ಅಂದ್ಳು.
ಅವಳ ಮುದ್ದು ಮಾತಿಗೆ, “ತುಂಬಿ ಚೆಲ್ಲಾಳಂತ ತುಂಬಿ, ಸಾಕು ಮ್ಯಾಲೆ ಬಾ, ಬಾಳ ಶಾಣ್ಯಾಕದಿ. ನಾಳ್ಯಾ ತುಂಬಾ ಗೆಲ್ಲಿರ್ತಿಯೇನು….?” ಅಂದ. ಅದಕ್ಕೆ ತಟ್ಟನೇ, ಮ್ಯಾಲೇರಿ ಬಂದ್ಳು.
“ದೂರ ಸರೆಮ್ಮ, ಆರಿ ಬಡಿತ್ತೆ,” ಎಂದು ಹಿಂದಕ್ಕೆ ಸರಿಸಿದ.
ಮಾರು ದೂರದ ಸುಡುನೆಲದಲ್ಲಿ ನಿಂತವಳಿಗೆ, “ಹೋಗಮ್ಮ ಬಿಸಿಲಿದೆ, ಗಿಡದ ಕೆಳಗೆ ಕೂಡೋಗು,” ಅಂತಾ, ಪಕ್ಕದಾಗಿದ್ದ ಹಾರಿ ತಗೊಂಡು ಮತ್ತೆ ಕಡಿಯತೊಡಗಿದ.
“ನಾ ಒಲ್ಲ, ಇಲ್ಲೇ ಇರ್ತೀನಿ,” ಅಂತ, ಹಾರಿ ಸಿಕ್ಕಿಸಿ ಮಣ್ಣು ಎಬ್ಬುತಿದ್ದುದನ್ನು ಕುತೂಹಲದಿಂದ ನೋಡುತ್ತಾ ನಿಂತಳು. ಕಡಿದು ಎಂಟತ್ತು ಪುಟ್ಟಿ ತುಂಬಿಚೆಲ್ಲಿ, “ಅಮ್ಮು, ಕುಡ್ಯಾಕ ನೀರು ತೊಗೊಂಬಾ,” ಅಂತ. ಆ ಮಾತು ಕಿವಿದೆರೆಗೆ ಬೀಳೋದ ತಡ, ಬೆಸ್ಸಂತಾ ಓಡಿದ್ಳಾ ತಂದಿ ಇವು ಬೀಡಿ ಹಚ್ಚಿ ದಮ್ಮೆಳಿದಿರ್ಲಿಲ್ಲ, ತಗೊಂಬಂದು ಕೊಟ್ಲು.
ಮಗಳಿಗೆ ಕುಡಿಸಿ, ತಾನೂ ಕುಡುದ. ಕೆಲವು ಹೊತ್ತು ದಣಿವಾರಿಸಿಕೊಂಡು, “ಅಲ್ಲೇ ಗಿಡದ ಕೆಳಗ ಇಟ್ಬುಡಮ್ಮ, ಬಿಸಿಲಿಗ್ಯಾ ಕಾಯ್ತಾ,” ಅಂದ.
ಹ್ಞೂಂ ಅಂತ ಗೋಣಾಕಿದ್ಯಾಕಿನ ತಗೊಂಡ್ಹೋಗಿ ಗಿಡದ ಕೆಳಗಿಟ್ಟು ಬಂದಳು. ಈಗ, ನೆಲ ಬಿರುಸತ್ತತೊಡಗಿತ್ತು ಅನಿಸುತ್ತ, `ಹ್ಞಾಂ…! ಹ್ಞಾಂ…!’ ಎಂದು ಶಕ್ತಿಯನ್ನೆಲ್ಲ ಸೋಸಿ ತಂದು ಕಡಿಯುತ್ತಿದ್ದ. ಪ್ರತಿ ಹೊಡೆತಕ್ಕೂ ಭೂಮಿ ಕಂಪಿಸಿ ನಡುಗುತ್ತಿತ್ತು. ಅಲ್ಲೇ ನಿಂತಿದ್ದ ಮಗಳಿಗೂ ನೆಲ ನಲುಗಿ, ಅಲುಗಿ ಹೆದರಿ ಅದುರುತ್ತಿದ್ದ ಅನುಭವವಾಗುತ್ತಿತ್ತು. ಹಾರೆ ಮೇಲೆತ್ತೆತ್ತಿ ಕುಕ್ಕು ಪ್ರತಿ ಹೊಡೆತದ ರಭಸಕ್ಕೂ ಭೂಮ್ತಾಯಿ ಥರಗುಟ್ಟಿ, ಇಂಚಿಂಚು ಜಾಗ ಬಿಟ್ಟುಕೊಡುತ್ತಿದ್ದಳು. ಮತ್ತೆ ಮತ್ತೆ ಜಜ್ಜಿದಂತೆಲ್ಲ ನಜ್ಜುಗುಜ್ಜಾಗುತ್ತಿದ್ದಳು.
ಇಂಥ ಸಾವಿರಾ ಸಾವಿರ ಎದೆಬಗೆದಗೆ ಇದೇನೇ ದೊಡ್ಡದಾಗಿರಲಿಲ್ಲ, ಆದರೂ ಬಲ ಸಾಕಾಗುತ್ತಿರಲಿಲ್ಲ. ಕಟಿಚೋಟು ನಿಂತು ಕಡಿದಗೆ ಯಾಕೋ ಕೈಸೋತಂತಾಗುತ್ತಿತ್ತು. ಹಿಂದೆ, ಯಾವತ್ತೂ ಹೀಗಾಗಿರಲಿಲ್ಲ. ಆದರೂ ಹಿಡದಪಟ್ಟು ಬಿಡದೆ, ಮತ್ತೆ ನಾಕೇಟು ಕಡಿದು, ಪುಟ್ಟಿ ತುಂಬಿ ಚೆಲ್ಲಹೋದ.
“ತಾ ಅಪ್ಪಾ…..” ಅಂತ ಮಗಳು ಬುಟ್ಟಿಗೆ ಕೈಚಾಚಿದಳು.
“ಬ್ಯಾಡ ಸರೆಮ್ಮ…..” ಅಂತ ದೂರ ಸರಿಸಿ, ಸಲಕಿ ಬಳಬಳ ಬಳುವುದು, ತುಂಬಿ ಚಿಲ್ಲಿ ಕುಳಿತ. ಕೂಡಲೇ ಮಗಳು ಆ ಕುಣ್ಯಾಕ ಠಣ್ಣನೆ ಜಿಗಿದು ಕುಣಿದಾಡತೊಡಗಿದಲು. ಅವಳಷ್ಟೇ ಕುಣಿಯಾಗಿತ್ತು. ಕೆಳಕ್ಕೆ ಕುಂತ, “ಅಪ್ಪಾ…..” ಅಂತ ಕೂಗಿ ಮೇಲೇಳುತ್ತಿದ್ದಳು. ಮಗಳು ಕೂಗಿದಾಗೆಲ್ಲ ಮುಗುಳ್ನಕ್ಕರೂ ಅವನ ಲಕ್ಷ್ಯ ಅದೆಲ್ಲಿಯೋ ನಾಟುತ್ತಿತ್ತು, ಎದೆಯೊಳಗೆನೇ ಸಾವಿರ ತರಂಗಗಳನ್ನು ಮೀಟುತ್ತಿತ್ತು. ಹನಿಯೊಡೆದಿದ್ದ ಬೆವರು, ಕುಳಿಯೊಳಗಿದ್ದ ಮಗಳ ನೆತ್ತಿ, ಮುಖ, ಕೈಕಾಲುಗಳ ಮೇಲೆ ತಟತಟ ಬೀಳುತ್ತಿದ್ದವು. ಮಗಳಿಗೆ ಅದೆಲ್ಲನ್ನು ಒರೆಸಬೇಕೆನಿಸಿ, ಮೇಲತ್ತಲು ಯತ್ನಿಸಿದಳು. ಆಗ, ಮಣ್ಣಿನ ಕೆಲ ಹೆಂಟಿಗಳು ಕೇಳಬಿದ್ದಿತು.
“ಮಣ್ಣು ಜರಸ್ತಿಯಮ್ಮ ತಡಿ….” ಅಂತ, ತಾನಾ ಅವಳನ್ನು ಅನಾಮತ್ತು ಮೇಲೆತ್ತಿ ಇಳಿಸಿದ. ಜನ್ಮದಾತನ ಹೆಗಲ ಮೇಲಿದ್ದ ಪಾವುಡದಿಂದ ಮುಖ, ಕುತ್ತಿಗೆ, ಎದೆ, ಬೆನ್ನನ್ನು ಒರೆಸಿ, ರೊಟ್ಟಿ ಲಟ್ಟಿಸುವಂತೆ ಬೆನ್ನ ಮೇಲೆ ತನ್ನ ಮೃದು ಕೈಗಳಿಂದ ಟಪಟಪ ಬಡಿದಳು.
ಮತ್ತೆ ಕೆಳಗಿಳಿದು ತೋಡತೊಡಗಿದ. ಕಡುಬೇಸಿಗೆಯಲ್ಲೂ ಪ್ರತಿ ಕಚ್ಚಿಗೂ ಭೂಮಿ ಪತರ್ ಗುಟ್ಟಿ ನಾಕೆಂಟು ಇಂಚು ಬಿರಿಯುತ್ತಿತ್ತು. ಅಗೆದು ಮೇಲತ್ತಿದಾಗ ಹಳ್ಳದಗುಣಿ ಐದಡಿಗೂ ಸಮೀಪಿಸುತ್ತಿತ್ತು. ತಂದೆ ಕೇಳುವ ಮೊದಲೇ ಒಂದೇ ನೆಗೆತಕ್ಕೆ ಹಾರಿ, ನೀರು ತಂದುಕೊಟ್ಟಳು. ಅವ ಕುಡಿದ ಬಳಿಕ ತಾನೂ ಕುಡಿದು, ಓಡಿ ಅದರ ಜಾಗದಲ್ಲೇ ಇಟ್ಟು, ತಿರುಗಿ ಬಂದು, ತಂದೆಯ ಮೈತುಂಬಿದ್ದ ಬೆವರ ಒರೆಸಿ, ಗುಂಡಿಗೆ ಜಿಗಿದಳು. ತೆಗ್ಗು ಆಳವಾಗಿದ್ದರಿಂದ, ಪ್ರತಿಸಲ ಕುಣಿದಾಡಿ ಸಂಭ್ರಮಿಸಿದ ಹುಮ್ಮಸ್ಸು ಈ ಸಲ ಬರದೇ ಭಯವಾಗಿ, “ಅಪ್ಪಾ ಅಂಜಿಕಿ ಬರ್ತೈತಿ, ಮ್ಯಾಲೆಳಕೋ,” ಅಂದಳು.
ಮಗಳೆಡೆಗೆ ನೋಡಿ ಮುಗುಳ್ನಕ್ಕು, ಕುಳಿತಲ್ಲಿಂದಲೇ ಸಲಕಿ ತಗೊಂಡು, ಮಣ್ಣೆಳೆದು ಅವಳ ಮ್ಯಾಲೆ ಒಂದು ಬಾರಿ ಸುರಿದ. ಅವಳಿಗೆ ಮತ್ತಷ್ಟು ಭಯವೆನಿಸಿ, “ಅಪ್ಪಾ…. ನನ್ನ ಮ್ಯಾಲ ಕರಕೊ,” ಅಂತ ಅಳತೊಡಗಿದಳು. ಎದ್ದು ಮತ್ತೊಮ್ಮೆ ಎಳೆದ.
“ಅಪ್ಪಾ…. ನನ್ನ ಸಾಯಿಸಬ್ಯಾಡ, ನಾನೇನು ಕೇಳಲ್ಲ, ನನಗ ಹೊಸ ಬಟ್ಟಿಗಿಟ್ಟಿ ಏನು ಕೊಡುಸ್ಬ್ಯಾಡ, ಮ್ಯಾಲ ಕರಕೋ ಅಪ್ಪಾ….” ಅಂತ, ಮತ್ತೆ ಅಳು ಜೋರು ಮಾಡಿ, ನಡುಗತೊಡಗಿದಳು. ಅಪ್ಪ ಈಗ ಬಾಯಿಗೇನೇ ಮಣ್ಣೆಳೆದ.
“ಅಪ್ಪಾ…. ಬ್ಯಾಡಪ್ಪ,” ಅಂತ, ಕೈ ಮುಗಿದ ಮಗಳ ತಲೆಮ್ಯಾಲೆ ಗಟ್ಟಿಯಾಗಿ ಕಾಲಿಟ್ಟು, ನೆಲಕ್ಕೆ ತಳ್ಳಿ, ಸರಸರನೆ ಮಣ್ಣೆಳೆದು ಮುಚ್ಚಿದ. ಬಳಿಕ ಹಾರಿ, ಸಲಕಿ, ಪುಟ್ಟಿ, ತತ್ರಾಣಿಯನ್ನು ಹೆಗೀರಿಸಿಕೊಂಡು, ಹಚ್ಚಿದ ಕೊರೆಬೀಡಿಯನ್ನು ಕಚ್ಚಿಕೊಂಡು ಹೊರಟ.
ಅದೊಂದು ದಿನ, ಇಳಿಹೊತ್ತಾಗಿತ್ತು. ಮಳೆಯಾಗಿ, ಹೊಳೆಹಳ್ಳ ಹರಿದು, ಭೂತಾಯಿಗೆ ಸಮೃದ್ಧ ಹಸಿರು ಹೊದಿಸಿದ್ದ ಕೊಯ್ಲುಗಳೆಲ್ಲ ಮುಗಿದು, ಹೊಲಗಳೆಲ್ಲ ಬರಿದಾಗಿ, ಬೇಸಿಗೆ ಕಾಲಿಡುತಲಿತ್ತು. ಆಸ್ಪತ್ರೆಯಿಂದ ಹೊರಬಿದ್ದಿದ್ದ ಗಂಡಹೆಂಡರಿಬ್ಬರೂ ಯಾವ ಮಾತನ್ನೂ ಆಡದೆ ನಡೆಯುತ್ತಿದ್ದರು. ಆಗಲೇ ಸರಿಸುಮಾರು ಒಂದು ಮೈಲೇ ನಡೆದಾಗಿತ್ತು. ಇನ್ನೂ ಕಡಿಕಡಿಮೆ ಎಂದರೂ ಮೂರು ಮೈಲುದಾರಿಯನ್ನು ತುಳಿದು ಸವೆಸಬೇಕಿತ್ತು. ಆಗ ಸಿದ್ದವ್ವ, “ರೀ, ಭೂಮಿನ ಮುಚ್ಬಂದು ನಾಳಿಲ್ದ ನಾಡಿದ್ಕ ಎಂಟೊರಸ ಆತು. ಅದಾದ್ಮ್ಯಾಕ, ನಾಕೊರುಸದ ಹಿಂದೊಬ್ಬ ಮಗಳ್ನ ಕೈಕಾಲು ಕಟ್ಟಿ, ಬಾಯಿಗೆ ಅರಿಬಿ ತುರಿಕಿ, ಕಡಿದೊಟ್ಟಿದ ಕಟ್ಟಿಗ್ಯಾಗ ಒಗುದು ಕಡ್ಡಿ ಗೀರಿದ್ವಿ, ಯಾಡು ವರುಸುದ ಹಿಂದ ಮತ್ತೊಬ್ಬ ಮಗಳ್ನ ತಲಿಮ್ಯಾಲ ಕಲ್ಲೆತ್ತಾಕಿ ಕತಿ ಮುಗಿಸಿದ್ವಿ, ಹ್ವಾದ ವರುಸ ಇನ್ನೊಬ್ಬ ಮಗಳ್ನ ಮಲಿ ತೊಟ್ಟಿಗ್ಯಾ ಇಸ ಬೆರಿಸಿ ಸಾಯಿಸಿದ್ವಿ, ಈಗ ನೋಡಿದ್ರ, ಹೊಟ್ಟ್ಯಾನ ಮಗಳ್ನ ತೆಗೆಸಿದ್ವಿ, ಮುಂದರ ಗಂಡುಟ್ಟುತ್ತಂತ ಬರಾಸೇನೈತಿ?” ಅಂತ, ಮಾತಿಗೆಳುದ್ಳು.
ಅದರ ಗಿರೆಪ್ಪ, “ಹೆಂಗರ ಗಂಡಹೆಣ್ಣ ಅಂತ ಹೇಳ ಮಿಸೆನ್ನೆ ಬಂದೈತೆಲ್ಲ ಬಿಡು, ಅದಕ್ಯಾಕ ಚಿಂತಿ ಮಾಡ್ತಿ. ಸುಮ್ನೆ ಬಾ,” ಅಂತ, ಬೀಸುಬೀಸಾಗಿ ಕೈಬೀಸಿ ಬರಬರ ಹೊಂಟ.
ಮತ್ತೇನೊಂದೂ ಕೇಳದ ಸಿದ್ದವ್ವಳೂ ಕೂಡ ಮೌನವಾಗಿ ಅವನನ್ನೇ ಹಿಂಬಾಲಿಸಿದಳು.





