ಬೆಂಗಾಳಿ ಬೆಡಗಿಯನ್ನು ಮನಸಾರೆ ಪ್ರೀತಿಸಿದ ದೂದ್ ಪೇಡ
ಸ್ಯಾಂಡಲ್ ವುಡ್ ನಲ್ಲಿ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲೂ ಕ್ಯೂಟಿ ಜೋಡಿ ಎನಿಸಿಕೊಂಡವರು ದಿಗಂತ್ ಮತ್ತು ಐಂದ್ರಿತಾ ರೇ. `ಮನಸಾರೆ’ ಸಿನಿಮಾಗೂ ಮುನ್ನವೇ ಬೆಂಗಾಳಿ ಬೆಡಗಿ ಐಂದ್ರಿತಾ ಮೇಲೆ ದೂದ್ ಪೇಡ ದಿಗಂತ್ ಗೆ ಲವ್ ಆಗಿತ್ತಂತೆ. ಟಿವಿಯಲ್ಲಿ ಪ್ರಸಾರವಾದ ಐಂದ್ರಿತಾ ಸಂದರ್ಶನ ನೋಡಿ ತುಂಬಾ ಮುದ್ದಾಗಿದ್ದಾಳೆ ಎಂದುಕೊಂಡಿದ್ದರಂತೆ. ಈ ಘಟನೆ ಆಗಿ ಕೆಲವೇ ದಿನಗಳಲ್ಲಿ ದಿಗಂತ್ ಗೆ `ಮನಸಾರೆ’ ಸಿನಿಮಾದಲ್ಲಿ ಐಂದ್ರಿತಾ ಜೊತೆ ನಟಿಸುವ ಅವಕಾಶ ಸಿಕ್ಕಿತು. `ಮನಸಾರೆ’ ಚಿತ್ರದ ಸೆಟ್ ನಲ್ಲಿ ಪ್ರೀತಿಯಲ್ಲಿ ಬಿದ್ದು, ಮದುವೆಯಾದರು. `ಪಾರಿಜಾತ’ ಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದಾರೆ.

ಪ್ರೀತ್ಸೇ ಪ್ರೀತ್ಸೆ ಅಂತ ಪ್ರೀತಿಯಲ್ಲಿ ಬಿದ್ದ ಉಪ್ಪಿ
ಸ್ಯಾಂಡಲ್ ವುಡ್ ನ ಮಾದರಿ ಜೋಡಿ ರಿಯಲ್ ಸ್ಟಾರ್ ಉಪೇಂದ್ರ ಮಿಸ್ ಕೋಲ್ಕತಾ ಪ್ರಿಯಾಂಕಾ. ತೆರೆ ಮೇಲೆ ರೀಲ್ ನಲ್ಲಿ `ಈ ಪ್ರೀತಿ ಪ್ರೇಮಾ ಎಲ್ಲಾ ಪುಸ್ತಕದ ಬದನೆಕಾಯಿ,’ ಎಂದಿದ್ದ ರಿಯಲ್ ಸ್ಟಾರ್ ಉಪ್ಪಿ, ರಿಯಲ್ ಲೈಫ್ ನಲ್ಲಿ ಪ್ರಿಯಾಂಕಾರನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾಂಕಾ ಉಪೇಂದ್ರ ದಂಪತಿ ವಿವಾಹ ಬಂಧನಕ್ಕೆ ಒಳಗಾಗಿ ಇದೀಗ ಬರೋಬ್ಬರಿ 25 ವರ್ಷ. ತೆಲುಗು ಸಿನಿಮಾ `ರಾ’ ವೇಳೆ ಮೊದಲ ಬಾರಿ ಉಪ್ಪಿ, ಪ್ರಿಯಾಂಕಾರನ್ನು ಭೇಟಿಯಾಗಿದ್ದರು. ನಂತರ `2ಶಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಈ ಸಿನಿಮಾ ವೇಳೆ ಉಪೇಂದ್ರ ಹಾಗೂ ಪ್ರಿಯಾಂಕಾ ನಡುವೆ ಪ್ರೇಮಾಂಕುರವಾಯ್ತು. 2003ರಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಯ್ತು. `ಶ್ರೀಮತಿ, ಉಪ್ಪಿ 2′ ಸಿನಿಮಾಗಳಲ್ಲೂ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಶಾಸ್ತ್ರ ಸಂಪ್ರದಾಯ ಬಿಟ್ಟುಕೊಡದ ಈ ಜೋಡಿ, ಎಲ್ಲಾ ಹಬ್ಬಗಳನ್ನೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಗಿಟಾರ್ ನುಡಿಸಿ ಇಂಪ್ರೆಸ್ ಮಾಡಿದ ಕಿಚ್ಚ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪ್ರಿಯಾರದ್ದು ಲವ್ ಮ್ಯಾರೇಜ್. ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲೂ ಸದಾ ಸುದ್ದಿಯಲ್ಲಿರುವ ಹೆಸರು ಕಿಚ್ಚ ಸುದೀಪ್. ಸಿನಿಮಾ ಬೇರೆ, ಪರ್ಸನಲ್ ಲೈಫ್ ಬೇರೆ ಅಂತಲೇ ಕಿಚ್ಚ 2001ರಲ್ಲಿ ಪ್ರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಪ್ರಿಯಾ ಮತ್ತು ಸುದೀಪ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಆಗಲೇ ಪ್ರಿಯಾರನ್ನು ಇಂಪ್ರೆಸ್ ಮಾಡಲು ಸುದೀಪ್ ಗಿಟಾರ್ ನುಡಿಸುತ್ತಿದ್ದರಂತೆ. ಅದನ್ನು ಕೇಳಿಯೇ ಪ್ರಿಯಾ, ಕಿಚ್ಚನ ಪ್ರೀತಿಯಲ್ಲಿ ಬಿದ್ದವರು ಎನ್ನಲಾಗುತ್ತೆ. ಪ್ರಿಯಾ ಸುದೀಪ್ ಬ್ಯಾಂಕ್ ನಲ್ಲೂ ಕೆಲಸ ಮಾಡಿದ್ದಾರೆ. ಏರ್ ಲೈನ್ಸ್ನಲ್ಲೂ ಜಾಬ್ ಮಾಡಿದ್ದಾರೆ. ಇದೇ ವೇಳೆ 2000ದಲ್ಲಿಯೇ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸ್ನೇಹ ಬೆಳೆದಿತ್ತು. ಒಂದು ವರ್ಷದಲ್ಲಿಯೇ ಈ ಜೋಡಿ ಮದುವೆ ಕೂಡ ಆದರು.

ಪ್ರೇಮಾಂಕುರಕ್ಕೆ ಕಾರಣ `ಕ್ರಿಸ್ಟಲ್‘ ಎಂದ ಉಗ್ರಂ ನಟಿ
ಸ್ಯಾಂಡಲ್ ವುಡ್ ಕ್ಯೂಟ್ ಕಪ್ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ. ಇವರ ನಡುವೆ ಪ್ರೀತಿ ಶುರುವಾಗಲು ಕಾರಣವಾಗಿದ್ದು ಒಂದು ನಾಯಿಮರಿಯಂತೆ. ವಸಿಷ್ಠ ಸಿಂಹ ನೀಡಿದ ನಾಯಿಮರಿ (ಕ್ರಿಸ್ಟಲ್)ಯಿಂದ ತಮ್ಮ ಪ್ರೇಮ್ ಕಹಾನಿ ಶುರುವಾಯಿತು ಎಂದು ಹೇಳಿಕೊಂಡಿದ್ದಾರೆ ಉಗ್ರಂ ನಟಿ ಹರಿಪ್ರಿಯಾ. ವಸಿಷ್ಠ ನಾಯಿಮರಿ ಗಿಫ್ಟ್ ಮಾಡಿದಾಗ ಅದರ ಹೊಟ್ಟೆಯಲ್ಲಿ ಹಾರ್ಟ್ ಶೇಪ್ ನ ಒಂದು ಬರ್ತ್ ಮಾರ್ಕ್ ಇತ್ತು. ಅದು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಗಾಢವಾಯಿತು. ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದ ಎಂದಿದ್ದಾರೆ ಹರಿಪ್ರಿಯಾ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ತೆಲುಗಿನ `ಎವರು’ ರಿಮೇಕ್ ಸಿನಿಮಾದಲ್ಲಿ ನಟಿಸಿದ್ದರು. ಆರು ವರ್ಷಗಳ ಕಾಲ ಗೆಳೆತನದಲ್ಲಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿದ ನಂತರವಷ್ಟೇ ಮದುವೆ ನಿರ್ಧಾರ ತೆಗೆದುಕೊಂಡರಂತೆ.

ಹಳ್ಳಿ ಹೈದನಿಗೆ ಮನಸೋತ ಸಿಟಿ ಕ್ವೀನ್ ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್
ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರದ್ದು ತದ್ವಿರುದ್ಧ ಗುಣಗಳಿದ್ದರೂ, ಪ್ರೀತಿಸಿ ಮದುವೆಯಾದರು. ಪ್ರೇಮ್ ರಲ್ಲಿ ತಂದೆಯ ಗುಣಗಳನ್ನು ಕಂಡ ರಕ್ಷಿತಾ, ಪ್ರೇಮ್ ರನ್ನು ಮದುವೆಯಾಗಲು ನಿರ್ಧರಿಸಿದ್ದರಂತೆ. ರಕ್ಷಿತಾ ತಾಯಿ ಮದುವೆ ದಿನ, `ನಿಜವಾಗಿಯೂ ನಿನಗೆ ಈತ ಇಷ್ಟವೇ….? ಈಗಾದರೂ ಹೇಳು. ಇಷ್ಟ ಇಲ್ಲ ಅಂದ್ರೆ ಓಡಿಹೋಗು,’ ಎಂದು ಹೇಳಿದ್ದರಂತೆ. `ಅಪ್ಪು’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಕ್ಷಿತಾ, ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. 2003-06ರವರೆಗೆ ವರ್ಷಕ್ಕೆ ಆರು ಸಿನಿಮಾಗಳಲ್ಲಿ ನಟಿಸುತ್ತಿದ್ದ ರಕ್ಷಿತಾ, ಸುಮಾರು 30 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 2007ರಲ್ಲಿ ಹಳ್ಳಿ ಹೈದ ಪ್ರೇಮ್ ಜೊತೆ ಮದುವೆಯಾದ ರಕ್ಷಿತಾ, ನಟನೆಯಿಂದ ದೂರ ಉಳಿದರು. ನಿರ್ಮಾಪಕಿಯಾಗಿ, ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದಾರೆ.

ಒಟ್ಟಿಗೆ ನಟಿಸುತ್ತಲೇ ಪ್ರೀತಿಗೆ ಜಾರಿದ ಜೋಡಿ
`ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಾ ಪ್ರೀತಿಗೆ ಬಿದ್ದ ಜೋಡಿ ರಾಘವೇಂದ್ರ ಮತ್ತು ಅಮೃತಾ ರಾಮಮೂರ್ತಿ. ನಿಜ ಜೀವನದಲ್ಲೂ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸಿಕೊಂಡು ಹೋಗುತ್ತಿದ್ದಾರೆ. 2019, ಮೇ 13ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಆಗಾಗ ಲವ್ ಲಾಗ್ ಗಳನ್ನು ಅಪ್ ಲೋಡ್ ಮಾಡಿ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಪತ್ನಿ ಅಮೃತಾ ನನ್ನ ಪಾಲಿಗೆ ಜೀವ ಹಾಗೂ ಜೀವದ ಗೆಳತಿ ಎನ್ನುತ್ತಾರೆ ರಘು.

`ಮಜಾಭಾರತ‘ ರಿಯಾಲಿಟಿ ಶೋ ಮಾಡಿದ ರಿಯಲ್ ದಂಪತಿ
ಪಂಚ್ ಡೈಲಾಗ್, ಪಟಪಟ ಮಾತಿನ ಮೂಲಕ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಜಗಪ್ಪ ಸುಶ್ಮಿತಾ ಜೋಡಿ `ಮಜಾ ಭಾರತ, ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರ ಮನ ಗೆದ್ದರು. ತಮ್ಮ ಕಾಮಿಡಿ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಸುಶ್ಮಿತಾ ಹಾಗೂ ಜಗ್ಗಪ್ಪ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗದಲ್ಲೂ ಸಕ್ರಿಯರಾಗಿರುವ ಇವರು ಆಗಾಗ ಇನ್ ಸ್ಟಾದಲ್ಲಿ ತಮ್ಮ ಫೋಟೋ, ವಿಡಿಯೋ ಶೇರ್ ಮಾಡುತ್ತಾ ತಮ್ಮ ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ. ಸುಶ್ಮಿತಾ ನನಗೆ ಹೆಂಡತಿ ಮಾತ್ರವಲ್ಲ, ನನ್ನ ಎರಡನೇ ತಾಯಿ ಎನ್ನುವ ಜಗ್ಗಪ್ಪ, ಲವ್ ಯು ಸುಶ್ಮಿತಾ ಫಾರ್ ಎವರ್ ಎನ್ನುತ್ತಾರೆ.

`ಸುಬ್ಬಲಕ್ಷ್ಮಿ‘ ಪತಿಗೆ ನಿಜವಾದ ಮದುವೆ
ಕನ್ನಡ ಕಿರುತೆರೆಯ `ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ನಟಿಸುತ್ತಾ ಪ್ರೀತಿಯಲ್ಲಿ ಬಿದ್ದವರು ಭವಾನಿ ಸಿಂಗ್ ಹಾಗೂ ಪಂಕಜಾ ಶಿವಣ್ಣ. `ರಕ್ಷಾ ಬಂಧನ’ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಇವರ ಫ್ರೆಂಡ್ ಶಿಪ್ ಪ್ರೀತಿಗೆ ತಿರುಗಿತು. ಕುಟುಂಬದವರ ಸಮ್ಮತಿ ಪಡೆದು, ಮದುವೆ ಮುದ್ರೆ ಹಾಕಿಸಿಕೊಂಡವರು. ರಾಜಸ್ಥಾನ ಮೂಲದ ಭವಾನಿ ಸಿಂಗ್, ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಾರೆ. `ಚರಣದಾಸಿ, ಸುಬ್ಬಲಕ್ಷ್ಮಿ ಸಂಸಾರ, ರಕ್ಷಾಬಂಧನ’ ಧಾರಾವಾಹಿ ಮೂಲಕ ಮನೆ ಮಾತಾದರು. ಮದುವೆ ನಂತರ ಪ್ರೇಮಿಗಳಂತೆಯೇ ರೊಮ್ಯಾಂಟಿಕ್ ಫೋಟೋಗಳನ್ನು ಅಪ್ ಲೋಡ್ ಮಾಡುವ ಇವರ ವಿಡಿಯೋಗಳು ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡುತ್ತವೆ.





