ಸ್ಯಾಂಡಲ್ವುಡ್ ಹಾಸ್ಯ ನಟ ಚಿಕ್ಕಣ್ಣ ಭಾನುವಾರ (ಆ.30) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯ ಮೂಲದ ಪಾವನಾ ಅವರನ್ನು ಕೈಹಿಡಿದಿದ್ದಾರೆ. ಮೈಸೂರಿನ ಪ್ರಸಿದ್ಧ ‘ಸ್ಪೆಕ್ಟ್ರಮ್ ಹಾಲ್’ ಎಂದೇ ಕರೆಯುವ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹ ಅದ್ಧೂರಿಯಾಗಿ ನೆರವೇರಿದೆ.
ಇಂದು ಬೆಳಗ್ಗೆ 10.45 ರಿಂದ 11.25ರ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದ್ದು, ಚಿಕ್ಕಣ್ಣ–ಪಾವನಾ ಜೋಡಿಗೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭ ಹಾರೈಸಿದ್ದಾರೆ.
ಮದುವೆಗೂ ಮುನ್ನ ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಸಮಾರಂಭದಲ್ಲಿ ಡಾಲಿ ಧನಂಜಯ್, ಉಪೇಂದ್ರ, ತಾರಾ ಅನುರಾಧ, ಶ್ರೀಮುರಳಿ, ಅರಣ್ ಸಾಗರ್, ರಂಗಾಯಣ ರಘು, ಅದಿತಿ ಪ್ರಭುದೇವ್, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು.
ಯಶ್ ಅಭಿನಯದ “ಕಿರಾತಕ” ಚಿತ್ರದ ಮೂಲಕ ಸಿನಿಮೋದ್ಯಮಕ್ಕೆ ಅಡಿಯಿಟ್ಟ ಚಿಕ್ಕಣ್ಣ ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ, ಚಿತ್ರರಂಗದ ಪ್ರಮುಖ ಹಾಸ್ಯ ನಟರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರು. ಚಿತ್ರರಂಗದಲ್ಲಿ ಹಾಸ್ಯನಟನಾಗಿ ವಿಶಿಷ್ಟ ಛಾಪು ಮೂಡಿಸಿರುವ ಚಿಕ್ಕಣ್ಣ, ಹಲವು ವರ್ಷಗಳಿಂದ ತಮ್ಮ ವಿಭಿನ್ನ ಹಾಸ್ಯ ಶೈಲಿಯ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದವರು.
ಚಿಕ್ಕಣ್ಣ ಅವರನ್ನು ಕೈಹಿಡಿದ ಪಾವನಾ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. ಪಾವನಾ ಗೌಡ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪರಿಸರ ಸ್ನೇಹಿ ಉದ್ಯಮವನ್ನೂ ನಡೆಸುತ್ತಿದ್ದಾರೆ. ವಿವಾಹಪೂರ್ವ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಸ್ಟೈಲಿಶ್ ಉಡುಗೆ ಧರಿಸಿ ಎಲ್ಲರ ಗಮನ ಸೆಳೆದಿದ್ದರು.





