ಜೀ ಕನ್ನಡ, ಜನಪ್ರಿಯ ಕನ್ನಡ ಸಿನಿಮಾಗಳ ಮೂಲಕ ತನ್ನ ವಾರಾಂತ್ಯದ ಸಿನಿಮಾ ಮನರಂಜನೆಯನ್ನು ಮತ್ತಷ್ಟು ರಂಗೇರಿಸುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಚ್ಚಹೊಸ ಸೂಪರ್ ಹಿಟ್ ಚಲನಚಿತ್ರ 'ದಿ ಡೆವಿಲ್' ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ 30ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.
‘ದಿ ಡೆವಿಲ್’ ಒಂದು ಕುತೂಹಲ ಮೂಡಿಸುವ ರಾಜಕೀಯ ಕಥೆಯಾಗಿದ್ದು, ಅಧಿಕಾರ, ಮಹತ್ವಾಕಾಂಕ್ಷೆ, ಜವಾಬ್ದಾರಿ, ನಂಬಿಕೆ ಮತ್ತು ನಾಯಕತ್ವದ ಸುತ್ತ ಕಥೆ ಸಾಗುತ್ತದೆ. ಒಂದೇ ರೀತಿ ಕಾಣುವ, ಆದರೆ ವಿಭಿನ್ನ ಹಿನ್ನೆಲೆಯಿಂದ ಬಂದಿರುವ ಇಬ್ಬರು ವ್ಯಕ್ತಿಗಳ ಜೀವನದಲ್ಲಿ ನಡೆಯುವ ಘಟನೆಗಳು ಚಿತ್ರದ ಪ್ರಮುಖ ಕಥಾಹಂದರ. ಅಧಿಕಾರದ ಜೊತೆ ಬರುವ ಜವಾಬ್ದಾರಿ, ನಾಯಕತ್ವದ ಸವಾಲುಗಳು ಹಾಗೂ ನಮ್ಮ ನಿರ್ಧಾರಗಳು ಸುತ್ತಮುತ್ತಲಿನವರ ಮೇಲೆ ಬೀರುವ ಪರಿಣಾಮವನ್ನು ಸಿನಿಮಾ ತೆರೆದಿಡುತ್ತದೆ.
ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಧನುಷ್ ರಾಜಶೇಖರ್ ಮತ್ತು ಕೃಷ್ಣ ಎಂಬ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ರಾಜಶೇಖರ್ (ಮಹೇಶ್ ಮಂಜ್ರೇಕರ್) ಅವರ ಮಗ ಧನುಷ್ ರಾಜಶೇಖರ್ (ದರ್ಶನ್) ಲಂಡನ್‌ನಿಂದ ರಾಜಕೀಯಕ್ಕೆ ಬರಲು ಬೆಂಗಳೂರಿಗೆ ವಾಪಸ್ಸಾಗುತ್ತಾನೆ. ಆದರೆ, ರಾಜಕೀಯದಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಆತನಿಗೆ ಆಸಕ್ತಿ ಇರುವುದಿಲ್ಲ. ಇದೇ ವೇಳೆ, ಗಾಂಧೀನಗರದಲ್ಲಿ ಸಣ್ಣ ಹೋಟೆಲ್ ನಡೆಸುತ್ತಾ ನಟನಾಗುವ ಕನಸು ಕಾಣುವ ಕೃಷ್ಣ (ದರ್ಶನ್), ಧನುಷ್‌ನಂತೆಯೇ ಕಾಣುತ್ತಾನೆ. ಇದೇ ಕಾರಣಕ್ಕೆ ಕೃಷ್ಣನನ್ನು ಧನುಷ್‌ನ ಜಾಗದಲ್ಲಿ ನಿಲ್ಲಿಸಿ, ಆತನ ಪಾತ್ರವನ್ನು ನಿರ್ವಹಿಸುವಂತೆ ಮಾಡಲಾಗುತ್ತದೆ. ಕೃಷ್ಣ ನಿಧಾನವಾಗಿ ಜನರ ವಿಶ್ವಾಸ ಗಳಿಸುತ್ತಾನೆ. ಇದೇ ವೇಳೆ ರುಕ್ಮಿಣಿ (ರಚನಾ ರೈ) ಅವರಿಗೂ ಹತ್ತಿರವಾಗುತ್ತಾನೆ. ಆದರೆ, ಅಸಲಿ ಧನುಷ್ ಅನಿರೀಕ್ಷಿತವಾಗಿ ವಾಪಸ್ಸಾದಾಗ ಕಥೆಗೆ ಹೊಸ ತಿರುವು ಸಿಗುತ್ತದೆ. ಇದರಿಂದ ಗೊಂದಲ, ಸಂಘರ್ಷ ಮತ್ತು ಅಪಾಯಗಳು ಎದುರಾಗುತ್ತವೆ. ಕೃಷ್ಣ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ತಾನು ಕಾಳಜಿವಹಿಸುವವರನ್ನು ರಕ್ಷಿಸಲು ಆತ ಯಾವ ಹಾದಿಯನ್ನು ಆಯ್ಕೆ ಮಾಡುತ್ತಾನೆ ಎಂಬುದು ಚಿತ್ರದ ಕುತೂಹಲಕಾರಿ ಅಂಶವಾಗಿದೆ.





