ಕನ್ನಂಬಾಡಿ ಕಟ್ಟೆಯಿಂದ ಮೈಸೂರು ಮೀಸಲಾತಿಯವರೆಗೆ — ಸರ್. ಎಂ. ವಿಶ್ವೇಶ್ವರಯ್ಯನವರ ನಿಜವಾದ ಪಾತ್ರವೇನು?
“ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ… ಅವರು ಮೈಸೂರು ಅರಸರ ಬಳಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಸಾಮಾನ್ಯ ಇಂಜಿನಿಯರ್ ಅಷ್ಟೇ… ಮೀಸಲಾತಿಯನ್ನು ಮೊದಲು ಬ್ರಾಹ್ಮಣರಿಗಾಗಿಯೇ ತರಲಾಗಿತ್ತು… ಮೀಸಲಾತಿಯ ಮೊತ್ತಮೊದಲ ಫಲಾನುಭವಿಗಳು ಸರ್. ಎಂ. ವಿಶ್ವೇಶ್ವರಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಾಹ್ಮಣರಿಗೆಂದೇ 25% ಮೀಸಲಾತಿ ತಂದಿದ್ದರು” ಇಂತಹ ಹಸೀ ಸುಳ್ಳುಗಳನ್ನು ಎಸ್.ಡಿ.ಪಿ.ಐ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ಪ್ರಸಾದ್ ಮತ್ತು ಮೊಹಿಯುದ್ದೀನ್ ರೌಫ್ (‘ರಾ ಚಿಂತನ್’ ಎಂಬ ಹೆಸರಿನಲ್ಲಿ ಹಿಂದೂಗಳನ್ನು ಮರಳು ಮಾಡುತ್ತಿರುವ ವ್ಯಕ್ತಿ) ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿರುವ ಕಾಲದಲ್ಲಿ ಕನ್ನಂಬಾಡಿ ಮತ್ತು ವೀಸಲಾತಿಯ ಕುರಿತಾಗಿ ವಿಶ್ವೇಶ್ವರಯ್ಯನವರ ಪಾತ್ರದ ವಾಸ್ತವತೆ ಇದೋ ನಿಮಗಾಗಿ
“ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ” ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಕನ್ನಂಬಾಡಿ ಅಣೆಕಟ್ಟಿನ ಇತಿಹಾಸದ ಪುಟಗಳನ್ನು ಒಂದೊಂದಾಗಿ ತಿರುವಿ ನೋಡಿದಾಗ, ವಿಶ್ವೇಶ್ವರಯ್ಯನವರ ಪಾತ್ರವನ್ನು ಸಂಪೂರ್ಣವಾಗಿ ನಿರಾಕರಿಸುವುದು ಎಷ್ಟು ಸರಿಯಾಗಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ಇದು ಕೇವಲ ಒಂದು ಅಣೆಕಟ್ಟಿನ ಕಥೆಯಲ್ಲ. ಇದು ಮೈಸೂರು ಸಂಸ್ಥಾನದ ದೂರದೃಷ್ಟಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ ಆಡಳಿತ, ಸರ್. ಎಂ. ವಿಶ್ವೇಶ್ವರಯ್ಯನವರ ತಾಂತ್ರಿಕ ಪ್ರತಿಭೆ, ಸಾವಿರಾರು ಕಾರ್ಮಿಕರ ಬೆವರು ಮತ್ತು ಜನರ ಶ್ರಮದಾನದ ಕಥೆ. ಮತ್ತೊಂದೆಡೆ, ಇದೇ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನದಲ್ಲಿ ನಡೆದ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಚರ್ಚೆಯೂ ಅತ್ಯಂತ ಕುತೂಹಲಕಾರಿ ಅಧ್ಯಾಯವಾಗಿದೆ. ಹಾಗಾದರೆ ಮೊದಲು ಕನ್ನಂಬಾಡಿ ಕಟ್ಟೆಯ ಕಥೆಯನ್ನು ತಿಳಿಯೋಣ.
ಕಾವೇರಿ ಇದ್ದರೂ ನೀರಿಗಾಗಿ ಪರದಾಡುತ್ತಿದ್ದ ಮೈಸೂರು–ಮಂಡ್ಯ
ಇಂದು ಕಾವೇರಿ ಎಂದರೆ ಮಂಡ್ಯ, ಮೈಸೂರು, ಕೃಷಿ, ಹಸಿರು ಹೊಲಗಳು, KRS ಮತ್ತು ನೀರಾವರಿ ಎಂಬ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿದ್ದರೂ, ಮಳೆಗಾಲ ಮುಗಿದ ನಂತರ ಮೈಸೂರು ಮತ್ತು ಮಂಡ್ಯ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಜನರು ಪರದಾಡುವಂತಹ ಪರಿಸ್ಥಿತಿ ಇತ್ತು. 1875–76ರಲ್ಲಿ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಸಂಭವಿಸಿದ ತೀವ್ರ ಬರಗಾಲ ಮೈಸೂರು ಸಂಸ್ಥಾನವನ್ನು ತತ್ತರಿಸಿಸಿತ್ತು. ಆ ಬರಗಾಲದಲ್ಲಿ ಮೈಸೂರು ಸಾಮ್ರಾಜ್ಯದ ಜನಸಂಖ್ಯೆಯ ಐದನೇ ಒಂದು ಭಾಗ ನಾಶವಾಯಿತು ಎಂಬ ಉಲ್ಲೇಖಗಳು ದೊರೆಯುತ್ತವೆ. ಇಂತಹ ಭೀಕರ ಅನುಭವದ ನಂತರ ಮೈಸೂರು ಸಂಸ್ಥಾನಕ್ಕೆ ಒಂದು ವಿಷಯ ಸ್ಪಷ್ಟವಾಯಿತು. ಮಳೆ ಬಂದಾಗ ಮಾತ್ರ ನೀರು ಸಿಗುವ ವ್ಯವಸ್ಥೆಯಿಂದ ಜನರನ್ನು ಶಾಶ್ವತವಾಗಿ ರಕ್ಷಿಸಲು ಸಾಧ್ಯವಿಲ್ಲ. ನೀರನ್ನು ಸಂಗ್ರಹಿಸಬೇಕು. ಅದನ್ನು ವರ್ಷಪೂರ್ತಿ ಕೃಷಿಗೆ ಬಳಸಬೇಕು. ಕುಡಿಯುವ ನೀರಿಗೂ ಬಳಸಬೇಕು. ಅಗತ್ಯವಿದ್ದರೆ ವಿದ್ಯುತ್ ಉತ್ಪಾದನೆಗೂ ಬಳಸಬೇಕು. ಈ ದೂರದೃಷ್ಟಿಯ ಚಿಂತನೆಯೇ ಮುಂದೆ ಕನ್ನಂಬಾಡಿ ಅಣೆಕಟ್ಟಿನ ರೂಪ ಪಡೆಯಿತು.
ಕನ್ನಂಬಾಡಿ ಯೋಜನೆಯ ಕನಸು ಮೊದಲು ಯಾರದ್ದು?
1890ರಲ್ಲಿಯೇ ಮೈಸೂರು ಮಹಾರಾಜರು ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಜಲಾಶಯ ನಿರ್ಮಿಸುವ ಬಗ್ಗೆ ಆಸಕ್ತಿ ತೋರಿದ್ದರು. ಅದಕ್ಕಾಗಿ ಕ್ಯಾಪ್ಟನ್ ಡೇವ್ಸ್ ಅವರ ನೇತೃತ್ವದಲ್ಲಿ ಇಂಜಿನಿಯರ್‌ಗಳ ತಂಡವನ್ನು ರಚಿಸಲಾಯಿತು. ಅಂದಿನ ಯೋಜನೆಯ ಪ್ರಕಾರ ಅಣೆಕಟ್ಟಿನ ಆರಂಭಿಕ ಎತ್ತರವನ್ನು ಸುಮಾರು 70 ಅಡಿ ಇಟ್ಟು, ನಂತರದ ಹಂತದಲ್ಲಿ ಅದನ್ನು 115 ಅಡಿಗಳಿಗೆ ವಿಸ್ತರಿಸುವ ಸಾಧ್ಯತೆಯನ್ನು ಪರಿಗಣಿಸಲಾಗಿತ್ತು. ವಿಸ್ತೃತ ಸಮೀಕ್ಷೆ ಮತ್ತು ಪರಿಶೀಲನೆಯ ನಂತರ ಯೋಜನೆಗೆ 1905ರ ಏಪ್ರಿಲ್ 25ರಂದು ಅನುಮೋದನೆ ದೊರೆಯಿತು.
ನಂತರ ಕಾವೇರಿ ನದಿಯ ಉಪನದಿಗಳಾದ ಹೇಮಾವತಿ ಮತ್ತು ಲಕ್ಷ್ಮಣತೀರ್ಥಗಳ ಸಂಗಮದ ಬಳಿಯ ಬೆಳಗೊಳದ ಸಮೀಪ ಅಣೆಕಟ್ಟಿಗೆ ಸೂಕ್ತ ಸ್ಥಳವನ್ನು ಗುರುತಿಸಲಾಯಿತು. ಭೂವಿಜ್ಞಾನಿಗಳ ಸಲಹೆ, ಸಮೀಕ್ಷೆ ಮತ್ತು ಪರಿಶೀಲನೆಗಳ ನಂತರ ಹಲವು ವರ್ಷಗಳ ಕಾಲ ಸಿದ್ಧತೆ ನಡೆಯಿತು. ಅಂತಿಮವಾಗಿ ಅಣೆಕಟ್ಟಿನ ತಳಪಾಯದ ಕಾಮಗಾರಿಗೆ ಚಾಲನೆ ದೊರೆಯಿತು.
ಕೆಲಸದ ನಡುವೆ ನಡೆದ ದುರಂತ
ಕನ್ನಂಬಾಡಿ ಯೋಜನೆಗೆ ಆರಂಭದಲ್ಲೇ ಒಂದು ಭೀಕರ ಆಘಾತ ಎದುರಾಯಿತು. 1909ರ ಜುಲೈ 30ರಂದು ಕಾವೇರಿ ನದಿಯಲ್ಲಿ ಭಾರೀ ಪ್ರವಾಹ ಉಂಟಾಯಿತು. ಪ್ರವಾಹದ ನೀರಿನಲ್ಲಿ ಹಲವು ಕಾರ್ಮಿಕರು ಕೊಚ್ಚಿಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಕಾರ್ಮಿಕರನ್ನು ರಕ್ಷಿಸಲು ಸ್ವತಃ ಮುಂದಾದ ಕ್ಯಾಪ್ಟನ್ ಡೇವ್ಸ್ ದುರದೃಷ್ಟವಶಾತ್ ಆಯತಪ್ಪಿ ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಒಬ್ಬ ಇಂಜಿನಿಯರ್ ಯೋಜನೆಯ ಕೆಲಸದಲ್ಲೇ ತನ್ನ ಜೀವವನ್ನು ಕಳೆದುಕೊಂಡ ಘಟನೆ ಅದು.
ಅವರ ಸೇವೆ ಮತ್ತು ಬಲಿದಾನವನ್ನು ಸ್ಮರಿಸಲು ಕನ್ನಂಬಾಡಿ ಸುತ್ತಮುತ್ತಲಿನ ಜನರು ತಮ್ಮ ಕೈಲಾದಷ್ಟು ಹಣವನ್ನು ಸಂಗ್ರಹಿಸಿದರು. 5, 10, 25, 50 ನಯಾಪೈಸೆ ಹಾಗೂ 1 ರೂಪಾಯಿ ಹೀಗೆ ಜನರು ನೀಡಿದ ಕೊಡುಗೆಗಳಿಂದ ಸುಮಾರು 600 ರೂಪಾಯಿಗಳನ್ನು ಸಂಗ್ರಹಿಸಲಾಯಿತು. ಆ ಹಣವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಠೇವಣಿಯಾಗಿ ಇಟ್ಟು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ವ್ಯವಸ್ಥೆ ಮಾಡಲಾಯಿತು. ಇದು ಕೇವಲ ಹಣದ ಕೊಡುಗೆಯಾಗಿರಲಿಲ್ಲ. ಒಬ್ಬ ಅಧಿಕಾರಿಯ ಸೇವೆಗೆ ಸಾಮಾನ್ಯ ಜನರು ಸಲ್ಲಿಸಿದ ಹೃದಯಪೂರ್ವಕ ಗೌರವವಾಗಿತ್ತು.
ಆಗ ಬಂದರು ಸರ್. ಎಂ. ವಿಶ್ವೇಶ್ವರಯ್ಯ
ಕ್ಯಾಪ್ಟನ್ ಡೇವ್ಸ್ ಅವರ ನಿಧನದಿಂದ ಯೋಜನೆಗೆ ದೊಡ್ಡ ಹೊಡೆತ ಬಿದ್ದಿತು. ಯೋಜನೆಯನ್ನು ಮುಂದುವರಿಸಲು ಸಮರ್ಥ ಇಂಜಿನಿಯರ್ ಒಬ್ಬರ ಅಗತ್ಯವಿತ್ತು. ಅದೇ ಸಂದರ್ಭದಲ್ಲಿ ಕರ್ನಾಟಕದ ಮೂಲದ ಪ್ರತಿಭಾವಂತ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ ಅವರ ಹೆಸರು ಮೈಸೂರು ಸಂಸ್ಥಾನದ ಗಮನಕ್ಕೆ ಬಂತು. 1908ರಲ್ಲಿ ಬಾಂಬೆಯ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದ ವಿಶ್ವೇಶ್ವರಯ್ಯನವರು ವಿದೇಶ ಪ್ರವಾಸದಲ್ಲಿದ್ದರು. ಅದೇ ಸಂದರ್ಭದಲ್ಲಿ ಹೈದರಾಬಾದ್‌ನ ನಿಜಾಮರು ಮೂಸಿ ನದಿಯ ಪ್ರವಾಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರ ಸಹಾಯ ಕೋರಿದರು. ವಿಶ್ವೇಶ್ವರಯ್ಯನವರು ತಮ್ಮ ವಿದೇಶ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೈದರಾಬಾದ್‌ಗೆ ಮರಳಿದರು. 1909ರಲ್ಲಿ ಅವರು ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು. ತಮ್ಮ ಪ್ರಸಿದ್ಧ ಸೈಫನ್ ಸಿದ್ಧಾಂತದ ಆಧಾರದ ಮೇಲೆ ಕ್ರೆಸ್ಟ್ ಗೇಟ್ ವ್ಯವಸ್ಥೆ ರೂಪಿಸಿ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರು. ಈ ಸಾಧನೆಯಿಂದ ಅವರ ಖ್ಯಾತಿ ದೇಶ-ವಿದೇಶಗಳಲ್ಲಿ ಹರಡಿತು.
ಮೈಸೂರು ಸಂಸ್ಥಾನದ ದಿವಾನ್ ಮಾಧವರಾವ್ ಅವರು ವಿಶ್ವೇಶ್
“ಸಾಮಾನ್ಯ ಕೆಲಸಕ್ಕಾಗಿ ನಾನು ಬರುವುದಿಲ್ಲ…”
ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಆಹ್ವಾನವನ್ನು ಸ್ವೀಕರಿಸುವ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸಿದರು. ತಮಗೆ ಸಾಮಾನ್ಯ ಆಡಳಿತಾತ್ಮಕ ಕೆಲಸಗಳಲ್ಲಿ ಆಸಕ್ತಿ ಇಲ್ಲ. ತಾಂತ್ರಿಕ ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಮತ್ತು ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಅವಕಾಶವಿದ್ದರೆ ಮಾತ್ರ ತಾವು ಮೈಸೂರು ಸಂಸ್ಥಾನಕ್ಕೆ ಬರಲು ಸಿದ್ಧ ಎಂದು ತಿಳಿಸಿದರು. ಇದಕ್ಕಾಗಿಯೇ ಮೈಸೂರು ಸಂಸ್ಥಾನ ಅವರಿಗೆ ಕನ್ನಂಬಾಡಿ ಯೋಜನೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಅವಕಾಶ ನೀಡಿತು. ಹೀಗೆ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ಸೇರಿದರು.
ವಿಶ್ವೇಶ್ವರಯ್ಯನವರರನ್ನು ಮೈಸೂರು ಆರಸರೇ ಹುಡುಕೊಂಡು ಕನ್ನಂಬಾಡಿ ಕಟ್ಟಿಕೊಡಲು ಕೇಳಿರುವಾಗ, ಭಾಸ್ಕರ್ ಪ್ರಸಾದ್ ಹೇಳಿದಂತೆ ವಿಶ್ವೇಶ್ವರಯ್ಯನವರು ಅರಸ ಬಳಿ ಕೆಲಸ ಕೇಳಿ ಕೊಂಡುಬರಲಿಲ್ಲ ಎಂದಾದಲ್ಲಿ ಮೀಸಲಾತಿಯ ಮೊತ್ತಮೊದಲ ಫಲಾನುಭವಿ ಸರ್. ಎಂ. ವಿಶ್ವೇಶ್ವರಯ್ಯ ಹೇಗಾಗುತ್ತಾರೆ?
ಇಂಜೀನಿಯರ್ ಆಗಿ ಅವರ ಮಾಡುತ್ತಿದ್ದ ಕೆಲಸ ಮತ್ತು ಅವರ ಬುದ್ದಿಶಕ್ತಿಯನ್ನು ಗುರುತಿಸಿದ ಮಹಾರಾಜರು 1912 ಅವರನ್ನು ಮುಖ್ಯ ಇಂಜಿನಿಯರ್ ನಿಂದ ಮೈಸೂರು ಸಂಸ್ಥಾನದ ದಿವಾನರಾಗಿ ಭಢ್ತಿ ನೀಡುತ್ತಾರೆ. 1912ರಿಂದ 1918ರವರೆಗೆ ಆರು ವರ್ಷಗಳ ಕಾಲ ಮೈಸೂರಿನ ದಿವಾನರಾಗಿಯೂ ಸೇವೆ ಸಲ್ಲಿಸಿದರು.
ವಿಶ್ವೇಶ್ವರಯ್ಯನವರು ಕನ್ನಂಬಾಡಿಗೆ ಏನು ಮಾಡಿದರು?
“ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ” ಎನ್ನುವುದು ಸರಿಯೇ? ವಿಶ್ವೇಶ್ವರಯ್ಯನವರು 1909ರ ನವೆಂಬರ್‌ನಲ್ಲಿ ಕನ್ನಂಬಾಡಿ ಅಣೆಕಟ್ಟು ಯೋಜನೆಯ ಮುಖ್ಯ ಎಂಜಿನಿಯರ್ ಆಗಿ ನೇಮಕಗೊಂಡ ನಂತರ, ಯೋಜನೆಯನ್ನು ಮತ್ತೊಮ್ಮೆ ಸಂಪೂರ್ಣವಾಗಿ ಪರಿಶೀಲಿಸಿದರು. ಮೊದಲ ಹಂತದಲ್ಲಿ ಅಣೆಕಟ್ಟಿನ ಎತ್ತರವನ್ನು 80 ಅಡಿ ಮತ್ತು ಎರಡನೇ ಹಂತದಲ್ಲಿ 124 ಅಡಿ ಎತ್ತರಕ್ಕೆ ನಿರ್ಮಿಸುವಂತೆ ಅವರು ಸಲಹೆ ನೀಡಿದರು. ಅದಕ್ಕಾಗಿ ಹೊಸ ವಿನ್ಯಾಸ ಮತ್ತು ನೀಲನಕ್ಷೆಯನ್ನು ಸಿದ್ಧಪಡಿಸಿದರು. ಆದರೆ ಸಮಸ್ಯೆ ಇನ್ನೂ ಇತ್ತು. ಹಣ.
81 ಲಕ್ಷ ರೂಪಾಯಿಗಳ ಯೋಜನೆಗೆ ವಿರೋಧ
ಅಂದಿನ ಮೈಸೂರು ಸಂಸ್ಥಾನದ ಹಣಕಾಸು ಪರಿಸ್ಥಿತಿ ಅತ್ಯುತ್ತಮವಾಗಿರಲಿಲ್ಲ. ಸುಮಾರು 81 ಲಕ್ಷ ರೂಪಾಯಿಗಳ ವೆಚ್ಚದ ಈ ಯೋಜನೆಯ ಕುರಿತು ಹಣಕಾಸು ಸಚಿವರಿಂದ ವಿರೋಧ ವ್ಯಕ್ತವಾಯಿತು. “ಈ ಯೋಜನೆಯಿಂದ ಸದ್ಯಕ್ಕೆ ಏನು ಪ್ರಯೋಜನ? ವಿದ್ಯುತ್‌ಗೆ ನಮಗೆ ಈಗಲೇ ಅಷ್ಟೊಂದು ಬೇಡಿಕೆ ಇಲ್ಲ” ಎಂಬ ವಾದವೂ ಕೇಳಿಬಂತು. ವಿಶ್ವೇಶ್ವರಯ್ಯನವರು ಹಿಂಜರಿಯಲಿಲ್ಲ. ಅವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಯೋಜನೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಅಂತಿಮವಾಗಿ 1911ರ ಅಕ್ಟೋಬರ್ 11ರಂದು ಮಹಾರಾಜರು ಯೋಜನೆಗೆ ಒಪ್ಪಿಗೆ ನೀಡಿದರು.
ಮದ್ರಾಸ್ ಪ್ರೆಸಿಡೆನ್ಸಿಯೂ ವಿರೋಧಿಸಿತು!
ಕನ್ನಂಬಾಡಿ ಯೋಜನೆಗೆ ಮತ್ತೊಂದು ದೊಡ್ಡ ಅಡೆತಡೆ ಎದುರಾಯಿತು. ಯೋಜನೆಯ ಅಂತಿಮ ಅನುಮೋದನೆಗಾಗಿ ಅದನ್ನು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಗೆ ಕಳುಹಿಸಲಾಯಿತು. ಅಲ್ಲಿಯೂ ಯೋಜನೆಯ ಭಾರೀ ವೆಚ್ಚದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಆದರೆ ವಿಶ್ವೇಶ್ವರಯ್ಯನವರು ಹಿಂದೆ ಸರಿಯಲಿಲ್ಲ. ಸ್ವತಃ ಮದ್ರಾಸ್ ಪ್ರೆಸಿಡೆನ್ಸಿಯ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಯ ಮಹತ್ವವನ್ನು ವಿವರಿಸಿದರು. ಈ ಯೋಜನೆಯ ಪ್ರಯೋಜನ ಕೇವಲ ಮೈಸೂರು ಅಥವಾ ಮಂಡ್ಯಕ್ಕೆ ಸೀಮಿತವಾಗುವುದಿಲ್ಲ. ಕಾವೇರಿ ಜಲಾನಯನ ಪ್ರದೇಶದ ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ರೈತರಿಗೆ ಇದರ ಪ್ರಯೋಜನವಾಗಲಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಸಂಗ್ರಹಿಸಿ:
- ಕೃಷಿಗೆ,
- ಕುಡಿಯುವ ನೀರಿಗೆ,
- ವಿದ್ಯುತ್ ಉತ್ಪಾದನೆಗೆ
ಬಳಸಬಹುದು ಎಂದು ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಅನುಮೋದನೆ ದೊರೆಯಿತು.
ಮಹಾರಾಜರು ರಾಣಿಯವರ ಆಭರಣವನ್ನೇ ಮಾರಿದರೇ?
ಈ ಯೋಜನೆಯ ಹಣಕಾಸಿನ ಕುರಿತು ಅತ್ಯಂತ ಜನಪ್ರಿಯವಾಗಿರುವ ಒಂದು ಪ್ರಸಂಗವಿದೆ.
ಯೋಜನೆಗೆ ಬೇಕಾದಷ್ಟು ಹಣವನ್ನು ಹೊಂದಿಸಲು ಮೈಸೂರು ಸಂಸ್ಥಾನಕ್ಕೆ ತೊಂದರೆ ಎದುರಾದಾಗ, ಮಹಾರಾಜರು ತಮ್ಮ ರಾಣಿಯವರ ಚಿನ್ನಾಭರಣಗಳು ಮತ್ತು ಖಜಾನೆಯಲ್ಲಿದ್ದ ಬೆಳ್ಳಿ ನಾಣ್ಯಗಳು, ಮುತ್ತು, ವಜ್ರ ವೈಡೂರ್ಯಗಳನ್ನು ಮಾರಾಟ ಮಾಡಿ ಹಣ ಹೊಂದಿಸಿದರು ಎನ್ನುವ ಪ್ರಸಂಗವನ್ನು ಇಂದಿಗೂ ಕನ್ನಂಬಾಡಿಯ ಇತಿಹಾಸದಲ್ಲಿ ಹೇಳಲಾಗುತ್ತದೆ. ಸುಮಾರು ನಾಲ್ಕು ಮೂಟೆ ಆಭರಣ ಮತ್ತು ಅಮೂಲ್ಯ ವಸ್ತುಗಳನ್ನು ದೂರದ ಬಾಂಬೆಯ ಮಾರುಕಟ್ಟೆಗೆ ಕೊಂಡೊಯ್ದು, ಸ್ಥಳೀಯ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ಪಡೆಯುವ ಉದ್ದೇಶದಿಂದ ಮಾರಾಟ ಮಾಡಿ ಸುಮಾರು 80 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಯಿತು ಎನ್ನಲಾಗಿದೆ. ನಂತರ 1911ರ ಅಕ್ಟೋಬರ್ 12ರಂದು ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆಯಿತು.
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ—
ಒಂದು ಅಣೆಕಟ್ಟು ಕಟ್ಟಲು ಕೇವಲ ಕಲ್ಲು, ಸುಣ್ಣ ಮತ್ತು ಕಬ್ಬಿಣ ಸಾಕಾಗುವುದಿಲ್ಲ. ಅದರ ಹಿಂದೆ ಆಡಳಿತದ ಇಚ್ಛಾಶಕ್ತಿ ಮತ್ತು ಜನರ ಮೇಲಿನ ನಂಬಿಕೆಯೂ ಬೇಕು.
ಸಿಮೆಂಟ್ ಇರಲಿಲ್ಲ… ಹಾಗಾದರೆ ಏನು ಮಾಡಿದರು?
ಇಂದಿನ ಕಾಲದಲ್ಲಿ ಅಣೆಕಟ್ಟು ಎಂದರೆ ಸಿಮೆಂಟ್, ಕಾಂಕ್ರೀಟ್, ಸ್ಟೀಲ್ ಮತ್ತು ಆಧುನಿಕ ಯಂತ್ರೋಪಕರಣಗಳು ನೆನಪಿಗೆ ಬರುತ್ತವೆ. ಆದರೆ 1911ರ ಕಾಲದಲ್ಲಿ ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಗತ್ಯವಿದ್ದ ಸಿಮೆಂಟ್ ಲಭ್ಯವಿರಲಿಲ್ಲ. ವಿದೇಶದಿಂದ ಸಿಮೆಂಟ್ ತರಿಸುವುದು ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ಕೆಲಸ. ಆದ್ದರಿಂದ ವಿಶ್ವೇಶ್ವರಯ್ಯನವರು ಸ್ಥಳೀಯವಾಗಿ ಲಭ್ಯವಿದ್ದ ವಸ್ತುಗಳನ್ನು ಬಳಸುವ ಮಾರ್ಗವನ್ನು ಅನುಸರಿಸಿದರು.
ಸುಣ್ಣ + ಮರಳು + ಜೇಡಿಮಣ್ಣು + ಇಟ್ಟಿಗೆ/ಕಲ್ಲಿನ ಧೂಳು ಇವುಗಳ ಮಿಶ್ರಣದಿಂದ ತಯಾರಾಗುತ್ತಿದ್ದ ಸುರ್ಕಿ/ಚುರ್ಕಿ ಗಾರೆಯನ್ನು ಬಳಸಲಾಯಿತು. ಇದು ಪರಿಣಾಮಕಾರಿ ಉಷ್ಣ ನಿರೋಧಕವಾಗಿದ್ದು, ನೀರಿನ ಸೋರಿಕೆಯನ್ನು ತಡೆಯಲು ಸಹಾಯಕವಾಗಿತ್ತು. ಇದು ಆ ಕಾಲದ ಪರಿಸ್ಥಿತಿಗೆ ತಕ್ಕಂತಹ ಸ್ಥಳೀಯ ಸಂಪನ್ಮೂಲ ಆಧಾರಿತ ಇಂಜಿನಿಯರಿಂಗ್ ಪರಿಹಾರವಾಗಿತ್ತು.
ಕಲ್ಲು ಎಲ್ಲಿಂದ ಬಂತು?
ಅಣೆಕಟ್ಟಿಗೆ ಬೇಕಾಗುವ ಕಲ್ಲನ್ನು ಆರಂಭದಲ್ಲಿ ಮಾಗಡಿಯಿಂದ ತರಲು ಯೋಜಿಸಲಾಗಿತ್ತು. ಆದರೆ ದೂರದಿಂದ ಕಲ್ಲು ಸಾಗಿಸುವ ವೆಚ್ಚ ಬಹಳ ಹೆಚ್ಚಾಗುತ್ತಿತ್ತು. ವಿಶ್ವೇಶ್ವರಯ್ಯನವರು ಪರ್ಯಾಯವನ್ನು ಹುಡುಕಿದರು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲೇ ಲಭ್ಯವಿದ್ದ ಕಲ್ಲನ್ನು ಬಳಸೋಣ ಎಂಬ ಸಲಹೆ ನೀಡಿದರು. ಅದೇ ರೀತಿ ಸಾವಿರಾರು ಕಾರ್ಮಿಕರ ಅಗತ್ಯವಿತ್ತು.
ಶ್ರೀ ಧರ್ಮವಾರಪಲ್ಲಿ ವೆಂಕಟರಾಮಣ್ಣ ಅವರ ನೇತೃತ್ವದಲ್ಲಿ ಕೋಲಾರ ಜಿಲ್ಲೆಯಿಂದ ಸುಮಾರು 4,500 ಕಾರ್ಮಿಕರನ್ನು ಕರೆತರಲಾಯಿತು. ಎತ್ತಿನ ಗಾಡಿ ಮತ್ತು ಕೋಣದ ಮೂರು ಚಕ್ರದ ಗಾಡಿಗಳ ಮೂಲಕ ಕಲ್ಲುಗಳನ್ನು ಸಾಗಿಸುವ ವ್ಯವಸ್ಥೆ ಮಾಡಲಾಯಿತು. ಲಿಂಗಾಬುಧಿ ಕೆರೆಯ ಪ್ರದೇಶವನ್ನು ಮೂರು ಭಾಗಗಳಾಗಿ ಬಳಸಿಕೊಂಡು:
- ಒಂದು ಕಡೆ ಕಲ್ಲುಗಳನ್ನು ಸಮಾನಾಂತರವಾಗಿ ಕೆತ್ತಲಾಗುತ್ತಿತ್ತು,
- ಮತ್ತೊಂದು ಕಡೆ ಕತ್ತಾಳಿಯಿಂದ ನಾರು ತೆಗೆದು ಹಗ್ಗ ತಯಾರಿಸಲಾಗುತ್ತಿತ್ತು,
- ಆ ಹಗ್ಗಗಳನ್ನು ಬಳಸಿ ಕಬ್ಬಿಣದ ಮೂರು ಚಕ್ರದ ಗಾಡಿಗಳಿಗೆ ಕೋಣಗಳನ್ನು ಕಟ್ಟಿ ಕಲ್ಲು ಸಾಗಿಸಲಾಗುತ್ತಿತ್ತು.
ಅಂದರೆ ಕನ್ನಂಬಾಡಿ ಅಣೆಕಟ್ಟಿನ ಹಿಂದೆ ಕೇವಲ ಇಂಜಿನಿಯರ್‌ಗಳ ಬುದ್ಧಿವಂತಿಕೆಯಷ್ಟೇ ಇರಲಿಲ್ಲ. ಸಾವಿರಾರು ಕಾರ್ಮಿಕರ ಬೆವರು ಕೂಡ ಇತ್ತು.
48 ಸ್ವಯಂಚಾಲಿತ ಗೇಟ್‌ಗಳ ಅದ್ಭುತ
ಕನ್ನಂಬಾಡಿ ಅಣೆಕಟ್ಟಿನ ಅತ್ಯಂತ ಗಮನಾರ್ಹ ತಾಂತ್ರಿಕ ವೈಶಿಷ್ಟ್ಯಗಳಲ್ಲಿ ಒಂದು ಅದರ 48 ಸ್ವಯಂಚಾಲಿತ ಗೇಟ್‌ಗಳು. ಸಾಂಪ್ರದಾಯಿಕ ಸ್ಪಿಲ್‌ವೇ ವ್ಯವಸ್ಥೆಯ ಬದಲಿಗೆ, ಜಲಾಶಯದ ನೀರಿನ ಮಟ್ಟ ಏರಿದಾಗ ಮತ್ತು ಕುಸಿದಾಗ ಸ್ವಯಂಚಾಲಿತವಾಗಿ ತೆರೆಯುವ ಮತ್ತು ಮುಚ್ಚುವ ವ್ಯವಸ್ಥೆಯನ್ನು ರೂಪಿಸಲಾಯಿತು. ಈ 48 ಗೇಟ್‌ಗಳನ್ನು ಆರು ಸೆಟ್‌ಗಳಲ್ಲಿ, ಪ್ರತಿಯೊಂದು ಸೆಟ್‌ನಲ್ಲಿ ಎಂಟು ಗೇಟ್‌ಗಳಂತೆ ಅಳವಡಿಸಲಾಯಿತು. ಪ್ರತಿ ಗೇಟ್‌ನಲ್ಲಿ ಸಿಲ್, ಲಿಂಟೆಲ್, ಅಡ್ಡ ಚಡಿಗಳು, ಫಲಕಗಳು, ಸಮತೋಲನ ತೂಕ, ಫ್ಲೋಟ್, ಸರಪಳಿಗಳು ಮತ್ತು ಪುಲ್ಲಿಗಳಂತಹ ವ್ಯವಸ್ಥೆಗಳಿದ್ದವು. ಗೇಟ್‌ಗಳನ್ನು ಎರಕಹೊಯ್ದ ಕಬ್ಬಿಣದಿಂದ ತಯಾರಿಸಲಾಯಿತು. ಇದರಲ್ಲಿಯೂ ಮತ್ತೊಂದು ವಿಶೇಷತೆ ಇದೆ.
ಈ ಗೇಟ್‌ಗಳ ತಯಾರಿಕೆಗೆ ಸಂಬಂಧಿಸಿದ ಕೆಲಸವನ್ನು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿಯೇ ಮಾಡಲಾಯಿತು ಎನ್ನುವುದು ಗಮನಾರ್ಹ. ಅಂದರೆ ಒಂದು ಅಭಿವೃದ್ಧಿ ಯೋಜನೆಯೊಳಗೆ ಮತ್ತೊಂದು ಕೈಗಾರಿಕಾ ಅಭಿವೃದ್ಧಿಯ ಬೀಜವೂ ಅಡಗಿತ್ತು.
ಅಣೆಕಟ್ಟು ಕಟ್ಟಲು ಮನೆ ಕಳೆದುಕೊಂಡವರ ಕಥೆ
ದೊಡ್ಡ ಜಲಾಶಯ ನಿರ್ಮಾಣ ಎಂದರೆ ಅದರ ಸುತ್ತಮುತ್ತಲಿನ ಪ್ರದೇಶಗಳು ನೀರಿನಲ್ಲಿ ಮುಳುಗುವುದು ಸಹಜ. ಕನ್ನಂಬಾಡಿ ಯೋಜನೆಯಿಂದಾಗಿ ಸುಮಾರು 5,000ರಿಂದ 10,000 ಜನರು ತಮ್ಮ ಮನೆ ಮತ್ತು ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಆದರೆ ಅವರನ್ನು ಹಾಗೆಯೇ ಬಿಟ್ಟುಬಿಡಲಿಲ್ಲ. ಮೈಸೂರು ಸಂಸ್ಥಾನದ ವತಿಯಿಂದ ಅವರಿಗೆ ಪಕ್ಕದ ಪ್ರದೇಶಗಳಲ್ಲಿ ಕೃಷಿ ಭೂಮಿಯೊಂದಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನ ನಡೆಯಿತು. ಇದೊಂದು ಅಭಿವೃದ್ಧಿಯ ಮತ್ತೊಂದು ಮುಖ. ಒಂದು ಕಡೆ ಲಕ್ಷಾಂತರ ಜನರಿಗೆ ನೀರು ಸಿಗಬೇಕು. ಮತ್ತೊಂದು ಕಡೆ ಅದಕ್ಕಾಗಿ ತಮ್ಮ ಮನೆ-ಮಠ ಕಳೆದುಕೊಂಡವರ ಬದುಕಿಗೂ ನ್ಯಾಯ ದೊರೆಯಬೇಕು.
ಜನರ ಶ್ರಮದಾನ — ಕನ್ನಂಬಾಡಿಯ ಮರೆಯಲಾಗದ ಅಧ್ಯಾಯ
ಕನ್ನಂಬಾಡಿ ಯೋಜನೆಗೆ ಹಣದ ಕೊರತೆ ಎದುರಾದ ಸಂದರ್ಭದಲ್ಲಿ ಮತ್ತೊಂದು ಆಸಕ್ತಿದಾಯಕ ಘಟನೆ ನಡೆಯಿತು.
ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರು ಅಣೆಕಟ್ಟಿನ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಜನರೊಂದಿಗೆ ಮಾತನಾಡಲು ನಿರ್ಧರಿಸಿದರು. ಸಂಜೆಯ ವೇಳೆಗೆ ಅವರು ಗ್ರಾಮಕ್ಕೆ ಹೋದಾಗ ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಸೇರಿದ್ದರು. ಜನರಿಂದ ಅಣೆಕಟ್ಟಿನ ನಿರ್ಮಾಣಕ್ಕೆ ಉಚಿತ ಶ್ರಮದಾನ ಮಾಡುವಂತೆ ಮಹಾರಾಜರು ಮನವಿ ಮಾಡಿದರು. ಆ ಕ್ಷಣದಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಮಹಾರಾಜರು ಬೇಸರದಿಂದ ಅರಮನೆಗೆ ಹಿಂದಿರುಗಿದರು.
ಆದರೆ ಮರುದಿನ ಬೆಳಿಗ್ಗೆ ಕಂಡ ದೃಶ್ಯವೇ ಬೇರೆ!
ಮರುದಿನ ವಿಶ್ವೇಶ್ವರಯ್ಯನವರು ಮಹಾರಾಜರನ್ನು ಭೇಟಿಯಾಗಿ ಮಾತನಾಡುತ್ತಿದ್ದರು. ಮಹಾರಾಜರು ಹಿಂದಿನ ದಿನದ ಘಟನೆ ನೆನಪಿಸಿಕೊಂಡು,
“ನಿಮ್ಮ ಮಾತಿನ ಮೇರೆಗೆ ನಾನು ಜನರ ಬಳಿ ಹಾಗೆ ಕೇಳಬಾರದಿತ್ತೇನೋ. ಅವರ ಪ್ರತಿಕ್ರಿಯೆ ಆಶಾದಾಯಕವಾಗಿರಲಿಲ್ಲ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು. ವಿಶ್ವೇಶ್ವರಯ್ಯನವರು ನಸು ನಕ್ಕರು. ಮಹಾರಾಜರನ್ನು ಅರಮನೆಯ ಹೊರಗೆ ಕರೆದುಕೊಂಡು ಬಂದರು. ಅಲ್ಲಿ ಕಂಡ ದೃಶ್ಯ ಮಹಾರಾಜರನ್ನೇ ಆಶ್ಚರ್ಯಚಕಿತರನ್ನಾಗಿಸಿತು.
ಹಾರೆ, ಪಿಕಾಸಿ, ಗುದ್ದಲಿ, ಮಂಕರಿಗಳನ್ನು ಹಿಡಿದು ಸಾವಿರಾರು ಜನರು ಅರಮನೆಯ ಮುಂದೆ ನಿಂತಿದ್ದರು!
ಹೆಣ್ಣು-ಗಂಡು, ಹಿರಿಯರು-ಕಿರಿಯರು ಎಂಬ ಬೇಧವಿಲ್ಲದೆ ಜನರು ಕೆಲಸಕ್ಕೆ ಸಿದ್ಧರಾಗಿದ್ದರು. ಹಿಂದಿನ ರಾತ್ರಿ ನಡೆದ ಸಭೆಯ ವಿಷಯವನ್ನು ಜನರು ತಮ್ಮ ಸುತ್ತಮುತ್ತಲಿನ ಹಳ್ಳಿಗಳಿಗೆ ತಿಳಿಸಿದ್ದರು. “ಮಹಾರಾಜರೇ ಸ್ವತಃ ನಮ್ಮ ಬಳಿ ಬಂದು ಕೇಳಿದ್ದಾರೆ. ನಾವು ಕೈಜೋಡಿಸಬೇಕು” ಎಂಬ ಭಾವನೆಯೊಂದಿಗೆ ಜನರು ರಾತ್ರೋರಾತ್ರಿ ಒಗ್ಗೂಡಿದ್ದರು. ಅದು ಕೇವಲ ಶ್ರಮದಾನವಲ್ಲ. ಅದು ಮೈಸೂರು ಅರಸರು ಮತ್ತು ಪ್ರಜೆಗಳ ನಡುವಿನ ನಂಬಿಕೆಯ ಪ್ರತೀಕ.
ಆದರೆ ವಿಶ್ವೇಶ್ವರಯ್ಯನವರು ನಂತರ ಮೈಸೂರಿನಿಂದ ಹೊರಬಂದದ್ದು ಏಕೆ?
ಇಲ್ಲಿ ಮತ್ತೊಂದು ಪ್ರಮುಖ ಅಧ್ಯಾಯ ಆರಂಭವಾಗುತ್ತದೆ.
ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ನಂತರ 1912ರಿಂದ 1918ರವರೆಗೆ ದಿವಾನರಾಗಿದ್ದರು. ಆದರೆ ಈ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯ ಮತ್ತು ಮೀಸಲಾತಿಯ ಕುರಿತು ತೀವ್ರ ಚರ್ಚೆ ಆರಂಭವಾಯಿತು.
ಮೈಸೂರು ಆಡಳಿತ ಮಂಡಳಿಯಲ್ಲಿ ಬ್ರಾಹ್ಮಣರ ಪ್ರಾಬಲ್ಯವಿದೆ ಎಂಬ ಆರೋಪ ಕೇಳಿಬಂತು. ಒಕ್ಕಲಿಗರು ಮತ್ತು ಲಿಂಗಾಯತ ನಾಯಕರ ನೇತೃತ್ವದಲ್ಲಿ ಬ್ರಾಹ್ಮಣರ ಹೊರತಾದ ಸಮುದಾಯಗಳಿಗೂ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಅವಕಾಶ ನೀಡಬೇಕು ಎಂಬ ಒತ್ತಾಯ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ಪ್ರಜಾ ಮಿತ್ರ ಮಂಡಳಿ ಎಂಬ ವೇದಿಕೆಯ ಅಡಿಯಲ್ಲಿ ಹಿಂದುಳಿದ ಸಮುದಾಯಗಳ ನೇತೃತ್ವದಲ್ಲಿ ಚಳುವಳಿ ಆರಂಭವಾಗಿ, ಸರ್ಕಾರಿ ನೇಮಕಾತಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ ಮೈಸೂರು ಮಹಾರಾಜರ ಮೇಲೆ ಒತ್ತಡ ಹೆಚ್ಚಾಯಿತು.
ಮಿಲ್ಲರ್ ಸಮಿತಿ ಏನು ಹೇಳಿತು?
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಮಿಲ್ಲರ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದರು. ಸಮಿತಿಯು 1919ರಲ್ಲಿ
- ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿವೇತನ,
- ಸಾರ್ವಜನಿಕ ಸೇವಾ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ,
- ಮೆರಿಟ್ ಆಧಾರಿತ ಪರೀಕ್ಷೆಗಳಲ್ಲಿ ಬದಲಾವಣೆ
- ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಸರ್ಕಾರಿ ವಲಯಗಳಲ್ಲಿ ಕನಿಷ್ಠ 50% ಹುದ್ದೆಗಳನ್ನು ಬ್ರಾಹ್ಮಣೇತರರಿಗೆ ನೇಮಕಾತಿ
ಮುಂತಾದ ಶಿಫಾರಸುಗಳೂ ಇದ್ದವು.
ಭಾಸ್ಕರ್ ಪ್ರಸಾದ್ ಹೇಳಿದಂತೆ ತಮಿಳು ಬ್ರಾಹ್ಮಣರ ವಿರುದ್ಧವಾಗಿ, ಮೈಸೂರು ಬ್ರಾಹ್ಮಣರಿಗೆ 25% ಮೀಸಲಾತಿ ಇರಲಿಲ್ಲ. ಬ್ರಾಹ್ಮಣರ ಬದಲಾಗಿ ಉಳಿದ ಜಾತಿಯವರಿಗೆ ಮೀಸಲಾತಿ ಕೊಡಬೇಕು ಎಂದು ತಿಳಿಸಲಾಗಿತ್ತು
ವಿಶ್ವೇಶ್ವರಯ್ಯನವರ ನಿಲುವೇನು?
ಮಹಾರಾಜರು ಮಿಲ್ಲರ್ ಸಮಿತಿಯ ವರದಿಯನ್ನು ಅಂದಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರಿಗೆ ನೀಡಿ, ಅದರ ಸಾಧಕ-ಬಾಧಕಗಳನ್ನು ತಿಳಿಸುವಂತೆ ಕೇಳಿದರು.
ವಿಶ್ವೇಶ್ವರಯ್ಯನವರ ಅಭಿಪ್ರಾಯ ಹೀಗಿತ್ತು:
ಜಾತಿಯ ಆಧಾರದ ಮೇಲೆ ಏಕಾಏಕಿ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ನೀಡುವುದಕ್ಕಿಂತ, ಹಿಂದುಳಿದ ಸಮುದಾಯಗಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸಿ, ಅವರನ್ನು ಸಮರ್ಥರನ್ನಾಗಿ ಮಾಡಿ, ನಂತರ ಅರ್ಹತೆಯ ಆಧಾರದ ಮೇಲೆ ಉನ್ನತ ಹುದ್ದೆಗಳಿಗೆ ನೇಮಿಸುವುದು ಸೂಕ್ತ.
ಇದನ್ನು ಬ್ರಾಹ್ಮಣೇತರರ ವಿರೋಧವೆಂದು ವ್ಯಾಖ್ಯಾನಿಸುವುದು ಸರಿಯೇ? ಇದು ಇತಿಹಾಸಕಾರರು ಮತ್ತು ಸಂಶೋಧಕರು ಪರಿಶೀಲಿಸಬೇಕಾದ ಪ್ರಶ್ನೆ. ಆದರೆ ಒಂದು ವಿಷಯ ಸ್ಪಷ್ಟ.
ಅವರು ಮೀಸಲಾತಿಯ ವಿಧಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರೆಂದು ಹೇಳುವುದು ಮತ್ತು ಅವರು ಬ್ರಾಹ್ಮಣೇತರರ ವಿರೋಧಿಯಾಗಿದ್ದರು ಎಂದು ಹೇಳುವುದು — ಈ ಎರಡೂ ಒಂದೇ ಅರ್ಥ ಕೊಡುವುದಿಲ್ಲ.
ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರ ನಡುವೆ ಭಿನ್ನಾಭಿಪ್ರಾಯ
ಮೀಸಲಾತಿಯ ವಿಷಯದಲ್ಲಿ ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರ ನಡುವೆ ಹಲವು ಪತ್ರ ವ್ಯವಹಾರಗಳು ನಡೆದವು. ಆದರೆ ವಿಶ್ವೇಶ್ವರಯ್ಯನವರ ನಿಲುವು ಮಹಾರಾಜರಿಗೆ ಸಂಪೂರ್ಣವಾಗಿ ಮನವರಿಕೆಯಾಗಲಿಲ್ಲ. ಇದೇ ವಿಚಾರವನ್ನು ಆಧಾರ ಮಾಡಿಕೊಂಡು ಕೆಲವರು ವಿಶ್ವೇಶ್ವರಯ್ಯನವರನ್ನು ಬ್ರಾಹ್ಮಣೇತರ ವಿರೋಧಿ ಎಂದು ಬಿಂಬಿಸಿದರು. ಇದರಿಂದ ಮನನೊಂದ ವಿಶ್ವೇಶ್ವರಯ್ಯನವರು ದಿವಾನ್ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದರು. ಮಹಾರಾಜರು ಅವರನ್ನು ಉಳಿಸಿಕೊಳ್ಳಲು ಹಲವು ಬಾರಿ ಮನವಿ ಮಾಡಿದರು. ಅಂತಿಮವಾಗಿ ವಿಶ್ವೇಶ್ವರಯ್ಯನವರು ಯಾವುದೇ ಆಡಳಿತಾತ್ಮಕ ಹುದ್ದೆಯಲ್ಲಿ ಮುಂದುವರಿಯದೇ, ಅಗತ್ಯವಿದ್ದಾಗ ಆಡಳಿತಾತ್ಮಕ ಸಲಹೆ ಮತ್ತು ಸೂಚನೆಗಳನ್ನು ನೀಡುವುದಾಗಿ ಒಪ್ಪಿಕೊಂಡರು.
ಹಾಗಾದರೆ “ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ” ಎನ್ನುವುದೇ?
1911 ರ ನವೆಂಬರ್ 11 ರಂದು ಅಡಿಪಾಯ ಹಾಕಿ ಅಧಿಕೃತವಾಗಿ ಆರಂಭವಾದ ಕನ್ನಂಬಾಡಿ ಕಟ್ಟೆಯ ಕೆಲಸ ನಂತರ ವಿವಿಧ ಕಾರಣಗಳಿಂದ ಕುಂಟುತ್ತಾ ತೆವೆಳುತ್ತಾ, 1931-32ರ ಅವಧಿಯಲ್ಲಿ ಇದರ ಅಧಿಕೃತ ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿತು. ಮೀಸಲಾತಿ ವಿಷಯದಲ್ಲಿ ಮಹಾರಾಜರೊಂದಿಗೆ ಆದ ವೈಮನಸ್ಯದಿಂದಾಗಿ 1918ರಲ್ಲಿ ದಿವಾನಗಿರಿಯಿಂದ ನಿವೃತ್ತರಾದರೂ, ಮಹಾರಾಜರ ಮಹತ್ವಾಕಾಂಕ್ಷೆಯ ಕನ್ನಂಬಾಡಿ ಕಟ್ಟೆ ಸಂಪೂರ್ಣ ಆಗುವವರೆಗೂ ಮೈಸೂರು ಸಂಸ್ಥಾನದಿಮ್ದ ಯಾವುದೇ ಬಿಡಿ ಗಾಸು ಪಡೆಯದೇ ತಮ್ಮ ಸೇವೆಯನ್ನು ಸಲ್ಲಿಸುವುದಾಗಿ ವಿಶ್ವೇಶ್ವರಯ್ಯನವರು ಮಹಾರಾಜರಿಗೆ ಕೊಟ್ಟ ಮಾತಿನಂತೆ ಅಷ್ಟೂ ವರ್ಷಗಳ ಕಾಲ ಕನ್ನಂಬಾಡಿ ಕಟ್ಟೆ ನಿರ್ಮಾಣವಾಗುತ್ತಿದ್ದ ಪ್ರದೇಶಕ್ಕೆ ಬಂದು ಅಲ್ಲಿ ನಡೆಯುತ್ತಿದ್ದ ಕೆಲಸಕಾರ್ಯಗಳನ್ನು ವೀಕ್ಷಿಸಿ ಮುಂದಿನ ಕಾರ್ಯಾಚರಣೆಯ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಾ, ತಮ್ಮದೇ ಪೇಟೆಂಟ್ ಪಡೆದ ಸೈಫನ್ ಸಿಸ್ಟಂ ಸ್ವಯಂಚಾಲಿತ ಗೇಟ್ ತಂತ್ರಜ್ಞಾನವನ್ನು ಉಚಿತವಾಗಿ ನೀಡಿದ್ದಲ್ಲದೇ, ಆ ಎಲ್ಲಾ ಗೇಟ್ ಗಳನ್ನೂ ತಾವೇ ಆರಂಭಿಸಿದ್ದ ಭಧ್ರಾವತಿಯ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕೇಂದ್ರದಲ್ಲಿ ತಯಾರಿಸಿ ಅಳವಡಿಸುವ ಮೂಲಕ ತಮ್ಮದೇ ಮೇಲುಸ್ತುವಾರಿಯಲ್ಲಿ 1931 / 1932, ಹಿಂದೂಪುರ ಪಾಂಡುರಂಗ ರಾವ್ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅವರದ್ದೇ ಹೆಸರಿನಲ್ಲಿ ಕೃಷ್ಣರಾಜ ಸಾಗರ (KRS) ಅಣೆಕಟ್ಟನ್ನು ಈ ಲೋಕಕ್ಕೆ ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾದರು
ಹಾಗಾಗಿ ಕನ್ನಂಬಾಡಿ ಅಣೆಕಟ್ಟು ಒಬ್ಬ ವ್ಯಕ್ತಿಯ ಏಕೈಕ ಕೃತಿ ಎಂದು ಹೇಳುವುದು ಸರಿಯಲ್ಲ.
- ಮೈಸೂರು ಅರಸರ ದೂರದೃಷ್ಟಿ ಇತ್ತು.
- ಕ್ಯಾಪ್ಟನ್ ಡೇವ್ಸ್ ಮತ್ತು ಅವರ ತಂಡದ ಆರಂಭಿಕ ಪ್ರಯತ್ನವಿತ್ತು.
- ನಂತರ ವಿಶ್ವೇಶ್ವರಯ್ಯನವರ ಪುನರ್ ವಿನ್ಯಾಸ, ತಾಂತ್ರಿಕ ನಾಯಕತ್ವ ಮತ್ತು ನಿರಂತರ ಮೇಲ್ವಿಚಾರಣೆ ಇತ್ತು.
- ಸಾವಿರಾರು ಕಾರ್ಮಿಕರ ಪರಿಶ್ರಮವಿತ್ತು.
- ಜನರ ಶ್ರಮದಾನವಿತ್ತು.
- ಮೈಸೂರು ಸಂಸ್ಥಾನದ ಆರ್ಥಿಕ ಬೆಂಬಲವಿತ್ತು.
- ಮಹಾರಾಜರ ರಾಜಕೀಯ ಇಚ್ಛಾಶಕ್ತಿ ಇತ್ತು.
ಹೀಗಾಗಿ “ಕನ್ನಂಬಾಡಿಯನ್ನು ವಿಶ್ವೇಶ್ವರಯ್ಯನವರು ಒಬ್ಬರೇ ಕಟ್ಟಿದರು” ಎನ್ನುವುದು ಹೇಗೆ ಅತಿಸರಳೀಕರಣವೋ, “ವಿಶ್ವೇಶ್ವರಯ್ಯನವರಿಗೆ ಕನ್ನಂಬಾಡಿಯಲ್ಲಿ ಯಾವುದೇ ಪಾತ್ರವಿಲ್ಲ” ಎನ್ನುವುದೂ ಅಷ್ಟೇ ತಪ್ಪಾದ ಸರಳೀಕರಣ.
ಆದರೆ ಯೋಜನೆಯ ಪುನರ್ ಪರಿಶೀಲನೆ, ವಿನ್ಯಾಸ, ತಾಂತ್ರಿಕ ಪರಿಹಾರಗಳು, ಅನುಮೋದನೆಗಾಗಿ ನಡೆಸಿದ ಹೋರಾಟ, ನಿರ್ಮಾಣದ ಮೇಲ್ವಿಚಾರಣೆ ಮತ್ತು ಯೋಜನೆ ಪೂರ್ಣಗೊಳ್ಳುವವರೆಗಿನ ಅವರ ಪಾತ್ರವನ್ನು ನಿರಾಕರಿಸುವುದು ಇತಿಹಾಸದ ದಾಖಲೆಗಳೊಂದಿಗೆ ಹೊಂದಿಕೆಯಾಗುವುದಿಲ್ಲ.
ಇನ್ನೊಂದು ದೊಡ್ಡ ಪ್ರಶ್ನೆ — ವಿಶ್ವೇಶ್ವರಯ್ಯನವರು ಸಂಬಳಕ್ಕಾಗಿ ಮಾತ್ರ ಕೆಲಸ ಮಾಡಿದ್ದರೇ?
ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದಿಂದ ಹೊರಬಂದ ನಂತರವೂ ಕನ್ನಂಬಾಡಿ ಯೋಜನೆಯೊಂದಿಗಿನ ತಮ್ಮ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿರಲಿಲ್ಲ. ಅಣೆಕಟ್ಟು ಸಂಪೂರ್ಣಗೊಳ್ಳುವವರೆಗೂ ಅದರ ಮೇಲ್ವಿಚಾರಣೆಯಲ್ಲಿ ಅವರು ತೊಡಗಿಸಿಕೊಂಡಿದ್ದರು ಎಂಬುದು ಅವರ ಯೋಜನೆಯ ಮೇಲಿನ ಬದ್ಧತೆಯನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿಯನ್ನು ಅವರ ಜಾತಿ, ಸಿದ್ಧಾಂತ ಅಥವಾ ರಾಜಕೀಯ ಅಭಿಪ್ರಾಯದ ಆಧಾರದ ಮೇಲೆ ಇತಿಹಾಸದಿಂದ ಅಳಿಸಿಹಾಕಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಕೆಲವು ಅಭಿಪ್ರಾಯಗಳನ್ನು ನಾವು ಒಪ್ಪದೇ ಇರಬಹುದು. ಅವರ ಆಡಳಿತಾತ್ಮಕ ನಿರ್ಧಾರಗಳನ್ನು ಟೀಕಿಸಬಹುದು. ಆದರೆ ಅದಕ್ಕಾಗಿ ಅವರ ತಾಂತ್ರಿಕ ಸಾಧನೆಗಳನ್ನು ನಿರಾಕರಿಸುವುದು ಇತಿಹಾಸಕ್ಕೆ ನ್ಯಾಯ ಮಾಡುವುದಲ್ಲ.
ಸೆಪ್ಟೆಂಬರ್ 15 — ಇಂಜಿನಿಯರ್ಸ್ ಡೇ
ನೀರಾವರಿ, ಅಣೆಕಟ್ಟು, ಪ್ರವಾಹ ನಿಯಂತ್ರಣ, ಕೈಗಾರಿಕೆ, ತಾಂತ್ರಿಕ ಶಿಕ್ಷಣ ಮತ್ತು ಆಡಳಿತ ಹೀಗೆ ಹಲವು ಕ್ಷೇತ್ರಗಳಲ್ಲಿ ಭಾರತದ ಅಭಿವೃದ್ಧಿಯಲ್ಲಿ ಅವರು ನೀಡಿದ ಕೊಡುಗೆಗಳ ಗೌರವಾರ್ಥವಾಗಿ ಭಾರತದ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟೆಂಬರ್ 15ರನ್ನು ದೇಶಾದ್ಯಂತ ಇಂಜಿನಿಯರ್ಸ್ ಡೇ ಆಗಿ ಆಚರಿಸಲಾಗುತ್ತದೆ.
ಕೊನೆಯ ಮಾತು
ಇತಿಹಾಸ ಎಂದರೆ ಕೇವಲ ರಾಜಕೀಯ ವಾದಕ್ಕೆ ಬೇಕಾದ ಆಯುಧವಲ್ಲ. ಅದು ನಮ್ಮ ಹಿಂದಿನ ಪೀಳಿಗೆಯ ಪರಿಶ್ರಮ, ತಪ್ಪು, ತ್ಯಾಗ, ದೂರದೃಷ್ಟಿ ಮತ್ತು ಸಾಧನೆಗಳ ದಾಖಲೆಯಾಗಿದೆ. ಕನ್ನಂಬಾಡಿ ಅಣೆಕಟ್ಟು ಇಂದು ಕೇವಲ
- ಒಂದು ಕಲ್ಲಿನ ಕಟ್ಟಡವಲ್ಲ. ಅದು ಮೈಸೂರು ಸಂಸ್ಥಾನದ ಕನಸು.
- ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ ಆಡಳಿತದ ಪ್ರತೀಕ.
- ಕ್ಯಾಪ್ಟನ್ ಡೇವ್ಸ್ ಅವರ ಬಲಿದಾನದ ನೆನಪು.
- ಸಾವಿರಾರು ಕಾರ್ಮಿಕರ ಬೆವರಿನ ಫಲ.
- ಜನರ ಶ್ರಮದಾನದ ಸಂಕೇತ.
- ಮತ್ತು ಸರ್. ಎಂ. ವಿಶ್ವೇಶ್ವರಯ್ಯನವರ ಇಂಜಿನಿಯರಿಂಗ್ ಪ್ರತಿಭೆ, ಹಠ ಮತ್ತು ಕಾರ್ಯತತ್ಪರತೆಯ ಜೀವಂತ ಸಾಕ್ಷಿ.
ಅದೇ ರೀತಿ ಮೈಸೂರು ಸಂಸ್ಥಾನದ ಮೀಸಲಾತಿ ಇತಿಹಾಸವೂ ಒಂದೇ ವ್ಯಕ್ತಿಯ ಕಥೆಯಲ್ಲ. ಅದು ಸಾಮಾಜಿಕ ಬದಲಾವಣೆ, ವಿವಿಧ ಸಮುದಾಯಗಳ ಹೋರಾಟ, ಮಿಲ್ಲರ್ ಸಮಿತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿರ್ಧಾರಗಳು ಮತ್ತು ವಿಶ್ವೇಶ್ವರಯ್ಯನವರ ವಿಭಿನ್ನ ಆಡಳಿತಾತ್ಮಕ ದೃಷ್ಟಿಕೋನಗಳ ಸಂಕೀರ್ಣ ಅಧ್ಯಾಯ. ಆದ್ದರಿಂದ ಯಾರನ್ನಾದರೂ ಹೊಗಳಲು ಅಥವಾ ಟೀಕಿಸಲು ಇತಿಹಾಸವನ್ನು ತುಂಡರಿಸುವ ಬದಲು, ಸಂಪೂರ್ಣ ಇತಿಹಾಸವನ್ನು ಓದಿ, ಅರ್ಥಮಾಡಿಕೊಂಡು ನಂತರ ಅಭಿಪ್ರಾಯ ರೂಪಿಸೋಣ.
ಏಕೆಂದರೆ—
ಕನ್ನಂಬಾಡಿಯ ನೀರು ಇಂದಿಗೂ ಹರಿಯುತ್ತಿದೆ. ಆದರೆ ಅದರ ಹಿಂದೆ ಹರಿದ ಬೆವರು, ಬುದ್ಧಿ, ಹಣ, ರಾಜಕೀಯ ಇಚ್ಛಾಶಕ್ತಿ ಮತ್ತು ಜನರ ತ್ಯಾಗವನ್ನು ನಾವು ಮರೆಯಬಾರದು.
- ಸರ್. ಎಂ. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಒಪ್ಪಿಕೊಳ್ಳುವುದೆಂದರೆ ಇತರರ ಕೊಡುಗೆಯನ್ನು ನಿರಾಕರಿಸುವುದಲ್ಲ.
- ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಗೌರವಿಸುವುದೆಂದರೆ ವಿಶ್ವೇಶ್ವರಯ್ಯನವರ ಪಾತ್ರವನ್ನು ಕಡಿಮೆ ಮಾಡುವುದಲ್ಲ.
- ಮತ್ತು ಸಾಮಾಜಿಕ ನ್ಯಾಯದ ಇತಿಹಾಸವನ್ನು ಒಪ್ಪಿಕೊಳ್ಳುವುದೆಂದರೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಾಧನೆಗಳನ್ನು ಅಳಿಸುವುದಲ್ಲ.
ಇತಿಹಾಸಕ್ಕೆ ಬೇಕಾಗಿರುವುದು ಪಕ್ಷಪಾತವಲ್ಲ. ಸತ್ಯದ ಸಂಪೂರ್ಣ ಚಿತ್ರ. ಅಂತಹ ಸಂಪೂರ್ಣ ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಲ್ಲವೇ?
ಕನಸನ್ನು ಕಾಣುವುದು ಮತ್ತು ಅದಕ್ಕೆ ಅಡಿಪಾಯ ಹಾಕುವುದು ಸುಲಭ. ಅದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಆ ಕಾರ್ಯವನ್ನು ನೆನೆಗುದಿಗೆ ಬಿಡದೆ, ಛಲದಿಂದ ಸಾಧಿಸುವವನೇ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ. ಹಾಗಾಗಿ ಕನ್ನಂಬಾಡಿ ಕಟ್ಟೆಯ ಸಂಪೂರ್ಣ ಶ್ರೇಯ ಮೈಸೂರಿನ ಹೆಮ್ಮೆಯ ಅರಸರಾದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಆರಂಭದಲ್ಲಿ ಮುಖ್ಯ ಇಂಜಿನೀಯರ್ ಆಗಿ ನಂತರ ಅಲ್ಪ ಕಾಲ ದಿವಾನರಾಗಿ ನಂತರ ಯಾವುದೇ ಹಣವನ್ನು ತೆಗೆದುಕೊಳ್ಳದೇ ಇಡೀ ಕಾರ್ಯಯೋಜನೆಯ ಮೇಲುಸ್ತುವಾರಿ ಮಾಡಿದ ಸರ್. ಎಂ. ವಿಶ್ವೇಶ್ವರಯ್ಯನವರಿಗೇ ಸಲ್ಲುತ್ತದೆ ಮತ್ತು ಸಲ್ಲಲೇ ಬೇಕು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣಕಟ್ಟೆಯ ರೂವಾರಿಗಳಾಗದೇ ಹೋಗಿದ್ದಲ್ಲಿ, ಒಣಭೂಮಿಯಾಗಿದ್ದ ಮಂಡ್ಯವನ್ನು ಹಸಿರು ಕ್ರಾಂತಿಯ ನಾಡಾಗಿ ಪರಿವರ್ತಿಸಿ ಅವರ ಆರ್ಥಿಕ ಅಭಿವೃದ್ಧಿಗೆ ಕಾರಣರಾದ ಅನ್ನದಾತರು ಎಂದು ಮಂಡ್ಯ ಜಿಲ್ಲೆಯ ರೈತರು ಇಂದಿಗೂ ತಮ್ಮ ದೇವರು ಮನೆಯಲ್ಲಿ ಅ ಮಹನೀಯರಿಬ್ಬರ ಪೋಟೋಗಳನ್ನಿಟ್ಟುಕೊಂದು ಪೂಜಿಸುತ್ತಿರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಇದನ್ನು ಹೊರತು ಪಡಿಸಿ ಅನಗತ್ಯವಾಗಿ ತಮ್ಮ ತೆವಲುಗಳನ್ನು ತೀರಿಸಿಕೊಳ್ಳಲೋ ಅಥವಾ ಯಾರನ್ನೋ ಓಲೈಸಿಕೊಳ್ಳು ಇತಿಹಾಸವನ್ನು ತಿರುವುವುದು, ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವಂತಹ ಅನಗತ್ಯ ವಿವಾದಗಳಿಗೆ ತಕ್ಕ ಶಿಕ್ಷೆಯನ್ನು ಕೊಡಲು ಕನ್ನಡಿಗರು ಹಿಂದು ಮುಂದು ನೋಡುವುದಿಲ್ಲಾ ಅಲ್ವೇ?





