– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಎ ಡೇಟ್
ನಿರ್ದೇಶಕ: ವಿಮಲ್ ರಾಜ್ ನಾಗರಾಜ್
ತಾರಾಗಣ: ಸುಜನಿತ್ ಶೆಟ್ಟಿ, ಅಶ್ವಿನಿ ಶೆಣೈ.
ರೇಟಿಂಗ್: 3/5
ಕಾರ್ಪೊರೇಟ್ ಜಗತ್ತಿನ ಯುವಕ ಮತ್ತು ಯುವತಿಯ ನಡುವೆ ಒಂದೇ ದಿನದಲ್ಲಿ ನಡೆಯುವ ಕಥೆ. ಡೇಟಿಂಗ್ ನೆಪದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಜೊತೆಯಾಗಿ ಸುತ್ತಾಡುವ ಆ ಜೋಡಿಯ ಮಧ್ಯೆ ಏನೆಲ್ಲ ನಡೆಯುತ್ತದೆ ಎನ್ನುವುದು” ಎ ಡೇಟ್” ಚಿತ್ರದ ಕಥೆ. ಟೆಕ್ಕಿ ಕಾರ್ತಿಕ್‌ಗೆ (ಸುಜನಿತ್) ತನ್ನದೇ ಕಚೇರಿಗೆ ಹೊಸದಾಗಿ ಸೇರಿಕೊಂಡಿರುವ ಮೊನಿಷಾಳನ್ನು (ಅಶ್ವಿನಿ) ಕಂಡರೆ ಇಷ್ಟ. ಆಕೆಯೋ ಪಕ್ಕಾ ಕನ್ನಡತಿಯೇನಲ್ಲ; ದೆಹಲಿ ಮೂಲದವಳು. ಅಪ್ಪ ಪಂಜಾಬಿ, ಅಮ್ಮ ಕನ್ನಡತಿ. ಹೀಗಾಗಿ ಮೊನಿಷಾಗೆ ಕನ್ನಡ ಗೊತ್ತಿದ್ದರೂ, ದಕ್ಷಿಣ ಭಾರತೀಯರನ್ನು ಕಂಡರೆ ಅಷ್ಟಕ್ಕಷ್ಟೇ. ಇಂತಹ ಇಬ್ಬರು ಜೊತೆಯಾಗಿ ಒಂದು ದಿನ ಬೆಂಗಳೂರಿನಲ್ಲಿ ಡೇಟಿಂಗ್ ಮಾಡಿದಾಗ ಏನಾಗುತ್ತದೆ ಎಂಬುದನ್ನು ನಿರ್ದೇಶಕರು ಚಿತ್ರದ ಮೂಲಕ ತೋರಿಸಲು ಪ್ರಯತ್ನಿಸಿದ್ದಾರೆ
2 ಗಂಟೆ 13 ನಿಮಿಷಗಳ ಅವಧಿಯ ಸಿನಿಮಾದಲ್ಲಿ ಯಾವುದೇ ಅವಸರವಿಲ್ಲದೆ ಕಥೆ ಸಾಗುತ್ತದೆ. ಬೆಳಗಿನಿಂದ ರಾತ್ರಿಯವರೆಗೆ ಒಂದು ದಿನದಲ್ಲಿ ನಡೆಯುವ ಕಥೆ ಇದು. ಇಡೀ ಚಿತ್ರದಲ್ಲಿ ಎರಡೇ ಪಾತ್ರಗಳು ಇರುತ್ತದೆಯಾದರೂ ಎಲ್ಲೂ ಬೇಸರವಾಗದಂತೆ ನಿರ್ದೇಶಕ ಸಿನಿಮಾ ನಿರೂಪಣೆ ಮಾಡಿದ್ದಾರೆ. ಪ್ರೀತಿಯಲ್ಲಿ ಮೋಸ ಹೋದವರಿಗೆ ಇಲ್ಲಿ ಸಾಂತ್ವನ ಇದೆ. ಇಂದಿನ ಯುವಪೀಳಿಗೆ ಇಷ್ಟ ಪಡುವ ಕಥೆ ಇಲ್ಲಿದೆ. ಜೊತೆಗೆ ರ್ಯಾಪ್ ಶೈಲಿಯ ಹಿನ್ನೆಲೆ ಸಂಗೀತವಿದ್ದು ಬೆಗಳೂರಿನ ಸೌಂದರ್ಯವನ್ನು ಅಷ್ಟೇ ಸುಂದರ ಆಗಿ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ.
ಒಟ್ಟಿನಲ್ಲಿ ಎಲ್ಲರೂ ನೋಡಬಹುದಾದ ಚಿತ್ರ ಇದಾಗಿದೆ.





