ಯಾಮಿ ಗೌತಮ್

ನಟಿ

ಆರತಿ ಸಕ್ಸೇನಾ

ತನ್ನ ಅತ್ಯಮೋಘ ಅಭಿನಯದಿಂದ ವೀಕ್ಷಕರ ಮನಗೆದ್ದ ಯಾಮಿ, ಕೇವಲ ಒಬ್ಬ ಯಶಸ್ವೀ ನಟಿ ಮಾತ್ರವಲ್ಲ, ಮಹಿಳಾ ಹಕ್ಕುಗಳಿಗಾಗಿ ಸದಾ ಹೋರಾಡುವ ಛಲಗಾತಿ! ಇತ್ತೀಚೆಗೆ ಆಕೆ ಗೃಹಶೋಭಾ ಜೊತೆ ಹಂಚಿಕೊಂಡ ಮಾತುಕಥೆಯ ಸಾರಾಂಶ……

ಹಿಮಾಚಲ ಪ್ರದೇಶದ ಬಿಲಾಸಪುರದಲ್ಲಿ 1988ರ ನವೆಂಬರ್‌ 28ರಂದು ಹುಟ್ಟಿದ ಯಾಮಿ ಗೌತಮ್, ಇಂದು ಬಾಲಿವುಡ್ ಇಂಡಸ್ಟ್ರಿಯ ಒಬ್ಬ ಸುಪ್ರಸಿದ್ಧ ನಟಿ. ಪಂಜಾಬಿ ಚಿತ್ರಗಳ ನಿರ್ದೇಶಕ ಮುಕೇಶ್‌ ಗೌತಮ್ ರ ಮಗಳು ಯಾಮಿನಿ, ತನ್ನ ಅಭಿನಯದ ಆರಂಭವನ್ನು ಮಾಡೆಲಿಂಗ್‌ ನಿಂದ ಶುರು ಹಚ್ಚಿಕೊಂಡಳು. ಈಕೆಯ ಮೊಟ್ಟ ಮೊದಲ ಜಾಹೀರಾತು ಅಂದ್ರೆ ಫೇರ್‌& ಲವ್ಲಿ ಕ್ರೀಮಿನದ್ದು. ಇದಾದ ನಂತರ ಯಾಮಿ ಹಲವು ಉತ್ಪನ್ನಗಳಿಗಾಗಿ ಮಾಡೆಲ್ ಆದಳು. ಶವರ್ ವೆಟ್‌, ಕಾರ್ನೆಟೋ ಇತ್ಯಾದಿ ಹಲವು ಬ್ರಾಂಡ್‌ ಗಳಲ್ಲಿ ಈಕೆ ಎಂಡೋರ್ಸ್‌ ಮಾಡಿದ್ದಾಳೆ.

ತನ್ನ ಆರಂಭದ ದಿನಗಳಲ್ಲಿ ಮಾಡೆಲಿಂಗ್‌ ನಂತರ ಯಾಮಿ ಕಿರುತೆರೆಯಲ್ಲಿ ಕಾಣಿಸಿದ್ದುಂಟು. `ಚಾಂದ್‌ ಕೇ ಪಾರ್‌ ಚೋ’ ಈಕೆಯ ಧಾರಾವಾಹಿ. ಇದಾದ ನಂತರ ಈಕೆ ನಟಿಸಿದ ಮತ್ತೊಂದು ಧಾರಾವಾಹಿ `ಪ್ಯಾರ್‌ ನಾ ಹೋಗಾ ಕಮ್.’ ಅಸಲಿಗೆ ಈಕೆ ನಟನೆಗಿಂತ ಹೆಚ್ಚಾಗಿ ತಾನೊಬ್ಬ ಆಫೀಸರ್‌ ಆಗಬೇಕೆಂಬ ಕನಸು ಕಾಣುತ್ತಿದ್ದಳು. ಅದು ಈಡೇರದಾಗ, ವಕೀಲೆಯಾಗಲು LLB  ಕಲಿಯತೊಡಗಿದಳು. ಆದರೆ ಅದೂ ಸಹ ಅಪೂರ್ಣವಾಯಿತು. ಅಷ್ಟರಲ್ಲಿ ಕಿರು ತೆರೆಯಿಂದ ಆಫರ್ಸ್‌ ಬರತೊಡಗಿತು.

ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಯಾಮಿನಿ ಕನ್ನಡದ `ಉಲ್ಲಾಸ ಉತ್ಸಾಹ’ ಚಿತ್ರದಲ್ಲಿ (ಗಣೇಶ್‌ ಜೊತೆ) ನಟಿಸಿದ್ದುಂಟು. ಇದು ತೆಲುಗಿನ `ಉಲ್ಲಾಸಂಗಾ ಉತ್ಸಾಹಂಗಾ’ ಚಿತ್ರದ ರೀಮೇಕ್‌. ನಂತರ ಈಕೆ ಎಂದೂ ಕನ್ನಡ ಚಿತ್ರಗಳತ್ತ ತಿರುಗಲೇ ಇಲ್ಲ, ಬಾಲಿವುಡ್‌ ನಲ್ಲಿ ಪ್ರವೇಶ ಪಡೆದ ನಂತರ, ತನ್ನ ಮೊದಲ ಚಿತ್ರ ಕನ್ನಡದ್ದು ಎಂದು ಹೇಳಿದಳೂ ಅಲ್ಲ. (ಬಾಲಿವುಡ್‌ ಪ್ರವೇಶಿಸುವ ನಟಿಯರು ಹೀಗೆ ಮಾಡುವುದು ಮಾಮೂಲೇ ಆಗಿದೆ). ಆ ನಂತರ ಈಕೆ ಕೆಲವು ತೆಲುಗಿನ ಚಿತ್ರಗಳಲ್ಲಿ ನಟಿಸಿದಳು. ಅವುಗಳಲ್ಲಿ ಕೊರಿಯರ್‌ ಬಾಯ್‌ ಕಲ್ಯಾಣ್‌, ಯುದ್ಧಂ, ಗೌರವಂ ಮುಂತಾದ ಚಿತ್ರಗಳು ಪ್ರಮುಖ. 2012ರಲ್ಲಿ ಈಕೆ ಆಯುಷ್ಮಾನ್‌ ಖುರಾನಾ ಜೊತೆ, ಜಾನ್‌ ಅಬ್ರಹಾಂ ನಿರ್ಮಿಸಿದ `ವಿಕ್ಕಿ ಡೋನರ್‌’ ಮೂಲಕ ಬಾಲಿವುಡ್‌ ಗೆ ಎಂಟ್ರಿ ನೀಡಿದಳು. `ವಿಕ್ಕಿ ಡೋನರ್‌’ ಸೂಪರ್‌ ಹಿಟ್‌ ಎನಿಸಿತು! ಇದರ ನಂತರ ಈಕೆ ಹೃತಿಕ್‌ ರೋಶನ್‌ ಜೊತೆ  `ಕಾಬಿಲ್‌’ ಚಿತ್ರದಲ್ಲಿ ಕಾಣಿಸಿಕೊಂಡಳು. ಆ ಚಿತ್ರ ಸಹ ಈಕೆಗೆ ಉತ್ತಮ ಹೆಸರು ತಂದುಕೊಟ್ಟಿತು.

ಈಕೆಯ ಕೌಟುಂಬಿಕ ವಾತಾವರಣ ಅಂದ್ರೆ, ತಂದೆ ಪಂಜಾಬಿ ಚಿತ್ರಗಳ ನಿರ್ದೇಶಕರು. ತಂಗಿ ಸುರೀಲಿ ಗೌತಮ್ ಸಹ `ಪವರ್‌ ಕಟ್‌’ ಎಂಬ ಪಂಜಾಬಿ ಚಿತ್ರದಲ್ಲಿ ನಟಿಸಿದ್ದಾಳೆ. ಈಕೆಯ ತಮ್ಮ ಓಜಸ್‌ ಗೌತಮ್. ತಾಯಿ ಅಪ್ಪಟ ಗೃಹಿಣಿ, ಗಂಡ ಮನೆ ಮಕ್ಕಳು ಆಕೆಯ ಸರ್ವಸ್ವ. ಮುಂದೆ ಯಾಮಿ ಮದುವೆಯಾಗಿ ತಾಯಿಯಾದ ಮೇಲೂ, ತನ್ನ ಸಿನಿ ಕೆರಿಯರ್‌ ಮುಂದುವರಿಸಿದಾಗ, ತಾಯಿಯ ಬಳಿಯೇ ಮಗನನ್ನು ಬಿಟ್ಟು, ಮತ್ತೆ ಮುಂಬೈಗೆ ಹೊರಟಳು.

ಇತ್ತೀಚೆಗೆ ಯಾಮಿ ಮುಸ್ಲಿಂ ಹೆಂಗಸರ ಹಕ್ಕುಗಳ ಕುರಿತಾಗಿ ಹೋರಾಡುವ ನಾಯಕಿ ಪಾತ್ರದಲ್ಲಿ `ಹಕ್‌’ ಚಿತ್ರದಲ್ಲಿ ನಟಿಸಿ, ಭಾರಿ ಹೆಸರು ಗಳಿಸಿದಳು. ಇದು ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರ. ಈ ಚಿತ್ರದಲ್ಲಿ ತಲಾಕ್‌ ಕುರಿತಾಗಿ, ತನ್ನ ಶಹಬಾನೋ ಪಾತ್ರದಿಂದ ಅಪಾರ ಮೆಚ್ಚುಗೆ ಗಳಿಸಿದಳು. ಮುಂಬೈ ನಿವಾಸಿ ಶಹಬಾನೋ ಕುರಿತಾದ ಸತ್ಯ ಕಥೆ ಇದು. ಮುಸ್ಲಿಂ ಹೆಂಗಸರನ್ನು ತಲಾಕ್‌ ಹೆಸರಲ್ಲಿ ಹೇಗೆ ಶೋಷಿಸಲಾಗುತ್ತದೆ ಎಂಬ ನೈಜ ಕಥೆ ಇದಾಗಿದ್ದು, ಅವರ ಮೂಲಭೂತ ಹಕ್ಕುಗಳಿಗಾಗಿ ನಾಯಕಿ ಹೋರಾಡುವುದೇ ಇದರ ಮೂಲಕಥೆ. ಚಿತ್ರದುದ್ದಕ್ಕೂ ಕಂದಾಚಾರದ ಸಮಾಜದ ವಿರುದ್ಧ ನಾಯಕಿಯ ಹೋರಾಟವೇ ಪ್ರಧಾನ.

ಈ ಪಾತ್ರವನ್ನು ಬಲು ಮನೋಜ್ಞವಾಗಿ ನಿಭಾಯಿಸಿರುವ ಯಾಮಿ, ವಿಮರ್ಶಕರ ಅಪಾರ ಪ್ರಶಂಸೆ ಗಳಿಸಿದ್ದಾಳೆ. ತಾನು ಚಿತ್ರಗಳ ಕ್ವಾಂಟಿಟಿಗಿಂತಲೂ ಕ್ವಾಲಿಟಿಗೇ ಹೆಚ್ಚು ಮಹತ್ವ ನೀಡುವವಳು ಎಂದು ಒತ್ತುವ ನೀಡುವ ಯಾಮಿ, ತನ್ನ ಫಿಲ್ಮಿ ಕೆರಿಯರ್‌ ನಲ್ಲಿ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾಳೆ. ಇತ್ತೀಚೆಗೆ ಯಾಮಿ ಗೃಹಶೋಭಾ ಜೊತೆ ನೀಡಿದ ಸಂದರ್ಶನದಲ್ಲಿ ತನ್ನ ಪ್ರೊಫೆಶನಲ್ ಹಾಗೂ ಪರ್ಸನಲ್ ಲೈಫ್‌ ಬಗ್ಗೆ ಹೇಳಿಕೊಂಡಿದ್ದಾಳೆ. ಆ ಕುರಿತಾದ ಮುಖ್ಯಾಂಶ ಹೀಗಿದೆ :

ಮುಸ್ಲಿಂ ಹೆಂಗಸರ ಹಕ್ಕು, ಅಧಿಕಾರದ ಕುರಿತಾದ ಸಾಲುಗಳ ಬಗ್ಗೆ ವ್ಯಂಗ್ಯವಾಗಿ ಸಮಾಜವನ್ನು ಕುಟುಕಿ ಕೇಳುವ ಕಥಾಹಂದರದ ಚಿತ್ರ `ಹಕ್‌!’

ಚಿತ್ರವನ್ನು ನೀನು ಒಪ್ಪಿಕೊಳ್ಳಲು ಮುಖ್ಯ ಕಾರಣ……

ಹೆಂಗಸರ ಹಕ್ಕು, ಅಧಿಕಾರ ಕುರಿತಾದ ಹೋರಾಟದ ಕಥೆ ಎಂದರೆ ಯಾರಿಗೆ ತಾನೇ ರೋಮಾಂಚನ ಆಗುವುದಿಲ್ಲ? ತಮ್ಮ ಹಕ್ಕುಗಳಿಗಾಗಿ ಹೆಂಗಸರು ಈ ಸಮಾಜದ ವಿರುದ್ಧ ಸಿಡಿದೇಳುವುದು ಬಲು ಅಪರೂಪ. ಈ `ಹಕ್‌’ ಚಿತ್ರದಲ್ಲಿ ಶಹಬಾನೋಳ ಪಾತ್ರ ಮಾಡುವಾಗ, ಇದು ಎಷ್ಟು ಮುಖ್ಯ ಎಂಬುದು ನನಗೆ ಅರಿವಾಯಿತು. ಇಲ್ಲಿ ಶಹಬಾನೋಳ ಪಾತ್ರ ಅತ್ಯಂತ ಕರುಣಾಜನಕ. ಅವಳ ಗಂಡ ತನ್ನ ಸ್ವಾರ್ಥಕ್ಕಾಗಿ ಅವಳನ್ನು ತಲಾಕ್‌ ಹೆಸರಲ್ಲಿ ಮನೆಯಿಂದ ಓಡಿಸುತ್ತಾನೆ, ಮಕ್ಕಳ ಜವಾಬ್ದಾರಿಯೂ ಹೊರುವುದಿಲ್ಲ. ಅಶಿಕ್ಷಿತಳಾದ ಅವಳು ಆ ಮಕ್ಕಳನ್ನು ಕಟ್ಟಿಕೊಂಡು ಹೇಗೆ ಮುಂದಿನ ಜೀವನ ನಡೆಸಬೇಕು? ಆ ಮಕ್ಕಳ ಭವಿಷ್ಯವೇನು? ಈ ಕಥೆಯ ಮೂಲಕ ಆ ಸಮುದಾಯದ ಎಷ್ಟೋ ಶೋಷಿತ ಹೆಂಗಸರ ಕಥೆಗಳು ಹೊರಬರತೊಡಗಿದ. ಇಲ್ಲಿ ಪ್ರತಿಯೊಬ್ಬರ ಕಥೆಯೂ ಹೆಚ್ಚುಕಡಿಮೆ ಒಂದೇ ತರಹ ಇರುತ್ತದೆ. ಶಿಕ್ಷಣದ ಕೊರತೆ, ಆರ್ಥಿಕ ನಿಸ್ಸಹಾಯಕತೆ, ಮಕ್ಕಳ ಜವಾಬ್ದಾರಿ, ಅವರ ಭವಿಷ್ಯ, ನಯಾಪೈಸೆ ಸಂಪಾದನೆ ಇಲ್ಲದೆ, ಇದ್ದಕ್ಕಿದ್ದಂತೆ ತಲಾಕ್‌ ಹೆಸರಲ್ಲಿ ಇವರನ್ನು ಮಕ್ಕಳ ಸಹಿತ ಮನೆಯಿಂದ ಹೊರಗೆ ದೂಡಿದರೆ, ಅವರು ಎಲ್ಲಿಗೆ ಹೋಗಬೇಕು?

ಆದರೆ ಶಹಬಾನೋ ಎಲ್ಲರಂತೆ ಕಣ್ಣೀರು ಸುರಿಸುತ್ತಾ ಸುಮ್ಮನೆ ಕೂರಲಿಲ್ಲ. ಅವಳು ತನ್ನ ಹಕ್ಕು, ಅಧಿಕಾರಕ್ಕಾಗಿ ಘೋರ ಹೋರಾಟಕ್ಕೆ ಸಜ್ಜಾಗುತ್ತಾಳೆ. ಕೊನೆಗೆ ಅವಳಿಗೆ ಗೆಲುವು ಸಿಗುತ್ತದೆ. ಅವಳ ಈ ಕಥೆ ನಿಜಕ್ಕೂ ನೊಂದ ಹೆಣ್ಣುಮಕ್ಕಳಿಗೆ ಎಷ್ಟೋ ಪ್ರೇರಣೆ ಆಗಿದೆ. ಪರಿಸ್ಥಿತಿ ಕೈ ಮೀರಿದಾಗ, ಇಂತಹವರು ಸೋತು ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂಥವರು ಬಾಳಿ ಬದುಕುವುದು ಬೇಡವೇ? ಈ ಪಾತ್ರ ನಿಭಾಯಿಸುವುದು ನನಗೆ ನಿಜಕ್ಕೂ ಚಾಲೆಂಜಿಂಗ್‌ ಆಗಿತ್ತು. ಹೆಂಗಸರ ಸಶಕ್ತೀಕರಣಕ್ಕೆ ಈ ಪಾತ್ರ ಒಂದು ಸ್ಪಷ್ಟ ಉದಾ. ಈ ಪಾತ್ರ ಚೆನ್ನಾಗಿ ಮೂಡಿಬರಲಿ ಎಂದೇ ನಾನು ಉರ್ದು ಭಾಷೆ ಕಲಿತೆ. ಈ ಪಾತ್ರದ ಪರಕಾಯ ಪ್ರವೇಶಕ್ಕಾಗಿ ನಾನು ಅನೇಕ ಬಡ ಮುಸ್ಲಿಂ ಕುಟುಂಬಗಳನ್ನು ಭೇಟಿಯಾಗಿ, ಅವರ ಕಥೆಗಳನ್ನು ಕೇಳಿ ತಿಳಿದುಕೊಂಡೆ.

Yami

ನಿನ್ನ ಚಿತ್ರಗಳಿಗೆ ಪ್ರಶಸ್ತಿ ಸಿಗಲಿಲ್ಲ ಅಂತ ಏನಾದರೂ ನಿರಾಸಿ ಇದೆಯೇ…..?

ನನ್ನ ನಟನೆಯ ಕೆರಿಯರ್‌ನಲ್ಲಿ ಕೆಲ ಚಿತ್ರಗಳ ಕುರಿತಾಗಿ ನಾನು ಖಂಡಿತಾ ಪ್ರಶಸ್ತಿ ಬರಬಹುದು ಎಂಬ ಆಸೆ ಇರಿಸಿಕೊಂಡಿದ್ದೆ. ಉದಾ: `ಆರ್ಟಿಕಲ್’ ಈ ಚಿತ್ರದ ಕುರಿತಾಗಿ ಕಟು ವಿಮರ್ಶಕರು ಸಹ ನನ್ನ ಪಾತ್ರ, ಅಭಿನಯ ಕುರಿತು ತೆರೆದ ಮನದ ಪ್ರಶಂಸೆ ವ್ಯಕ್ತಪಡಿಸಿದ್ದರು. ನನ್ನ ಹೆಸರು ನಾಮಿನೇಶನ್‌ ನಲ್ಲಿ ಅಂಕಿತ ಸಹಿ ಆಗಿತ್ತು. ಆ ದೃಷ್ಟಿಯಿಂದ ಈ ಚಿತ್ರಕ್ಕೆ ನನಗೆ ಖಂಡಿತಾ ಅವಾರ್ಡ್‌ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಹಾಗೇನೂ ಆಗಲಿಲ್ಲ, ಅಪಾರ ನಿರಾಸೆಗೆ ಒಳಗಾದೆ. ಅಸಲಿಗೆ ನನ್ನ ಮೊದಲ ಚಿತ್ರ `ವಿಕ್ಕಿ ಡೋನರ್‌’ಗೆ ಬೆಸ್ಟ್ ಡೆಬ್ಯು ಅವಾರ್ಡ್‌ ಸಿಕ್ಕಿದ್ದೇನೋ ನಿಜ, ಆದರೆ ಆ ಚಿತ್ರದ ನಂತರ ಹಲವಾರು ಉತ್ತಮ ಚಿತ್ರಗಳು ಬಂದಿದ್ದರೂ, ನಾಮಿನೇಶನ್‌ ಆಗಿದ್ದರೂ, ಪ್ರಶಸ್ತಿ ಏನೂ ಬರಲೇ ಇಲ್ಲ.

ಒಬ್ಬ ಕಲಾವಿದನಿಗೆ ಅವಾರ್ಡ್‌ ಸಿಗುವುದು ಅಂದ್ರೆ, ಅದು ಅವರ ಸ್ವಯಂಪ್ರತಿಭೆಗೆ ಸಾಕ್ಷಿ! ಇದು ಆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ, ಉತ್ಸಾಹ ನೀಡುತ್ತದೆ. ಹೀಗಾಗಿ ಪ್ರತಿ ಕಲಾವಿದರೂ ತಮ್ಮ ಅತ್ಯುತ್ತಮ ಪ್ರದರ್ಶನದ ಚಿತ್ರಗಳಿಗೆ ಪ್ರಶಸ್ತಿ ಬಯಸುವುದು ಸಹಜ. ಆದರೆ ಅದಕ್ಕಿಂತಲೂ ಮುಖ್ಯವಾದುದು ಎಂದರೆ, ಪಬ್ಲಿಕ್‌ ನೀಡುವ ರಿವಾರ್ಡ್‌! ಏಕೆಂದರೆ ಸಾರ್ವಜನಿಕ ಪ್ರೇಕ್ಷಕ ಪ್ರಭು ನೀಡುವ ರಿವಾರ್ಡ್‌, ಕಲಾವಿದ ಈ ಇಂಡಸ್ಟ್ರಿಯಲ್ಲಿ ಬಹುಕಾಲ ಉಳಿಯಲು ಊರುಗೋಲಾಗುತ್ತದೆ. ಇಂದು ಪಬ್ಲಿಕ್ ಕಾರಣದಿಂದಲೇ ನಾನು 12 ವರ್ಷಗಳಿಂದಲೂ ದಕ್ಷಿಣದ ಹಾಗೂ ಬಾಲಿವುಡ್‌ ಚಿತ್ರಗಳಲ್ಲಿ ಸಕ್ರಿಯಾಗಿ ಉಳಿದಿದ್ದೇನೆ. ಉತ್ತಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲು ನನಗೆ ಹೆಚ್ಚಿನ ಸದವಕಾಶ ಸಿಗುತ್ತಿದೆ. ಇದು ನಿಜಕ್ಕೂ ಪ್ರೇಕ್ಷಕರ ಆಶೀರ್ವಾದ ಎಂದೇ ಭಾವಿಸುತ್ತೇನೆ.

ಪ್ರೊಡಕ್ಷನ್ಹೌಸ್ಹಾಗೂ ಡೈರೆಕ್ಷನ್ಕುರಿತು ಏನಾದರೂ ಕನಸುಗಳಿವೆಯೇ….?

ಸದ್ಯಕ್ಕಂತೂ ನನಗೆ ಡೈರೆಕ್ಷನ್‌ ಕುರಿತಾಗಿ ಯಾ ಆಸೆಯೂ ಇಲ್ಲ. ಏಕೆಂದರೆ ಈ ಪ್ರೊಫೆಶನ್‌ ಕೆರಿಯರ್‌ ಜೊತೆಗೆ ನಾನು ನನ್ನ ಕುಟುಂಬ, ಆದಿತ್ಯ , ಸಮಾನಾಂತರಾಗಿ ನಟನೆಯತ್ತಲೂ 100% ಮನಸ್ಸು ಕೇಂದ್ರೀಕರಿಸಬೇಕಿದೆ. ಆದರೆ ನಾನು ನನ್ನ ಪತಿ ಆದಿತ್ಯರ ಪ್ರೊಡಕ್ಷನ್‌ ಹೌಸ್ ‌ಸ್ಟುಡಿಯೋದಲ್ಲಿ ಈಗಾಗಲೇ ಸಕ್ರಿಯವಾಗಿ ತೊಡಗಿಕೊಂಡಿದ್ದೇನೆ. ನಮ್ಮ ಈ ಸ್ಟುಡಿಯೋದಲ್ಲಿ ನಿರಂತರ ಚಿತ್ರ ನಿರ್ಮಾಣ ಆಗುತ್ತಿರುತ್ತದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ `ಧುರಂಧರ್‌’ ಯಶಸ್ವೀ ಶೂಟಿಂಗ್‌, ಇನ್ನಿತರ ಟೆಕ್ನಿಕ್ ಕೆಲಸ ಮುಗಿಸಿಕೊಂಡ ನಂತರ, ಇದೀಗ `ಧೂಮ್ ಧಾಮ್’ ಚಿತ್ರಕ್ಕಾಗಿ ಬಿರುಸಿನ ಕೆಲಸ ನಡೆಯುತ್ತಿದೆ. ನಾನು ಈ ‌ಪ್ರೊಡಕ್ಷನ್ ಹೌಸ್‌ ನಲ್ಲಿ ಕೇವಲ ನಟಿ ಮಾತ್ರ ಆಗಿರದೆ, ಪತಿಗೆ ಅಗತ್ಯವಿರುವ ಇನ್ನಿತರ ಎಲ್ಲ ಕೆಲಸಗಳಿಗೂ ಸಹಕರಿಸುತ್ತೇನೆ.

ನೀನು ಚಿತ್ರಗಳ ಆಯ್ಕೆ ಹೇಗೆ ಮಾಡಿಕೊಳ್ತೀಯಾ? ಡೈರೆಕ್ಟರ್ಯಾ ಹೀರೋ ಮುಖ್ಯ ಆಗ್ತಾರಾ ಅಥವಾ ಕಥೆ ನಿನ್ನ ಪಾತ್ರ ಮುಖ್ಯ  ಅನಿಸುತ್ತದಾ…..?

ನಾನು ನನ್ನ ಕೆರಿಯರ್‌ ನಲ್ಲಿ  ಬಹಳ ಜಾಸ್ತಿ ಎನಿಸುವಷ್ಟು ಚಿತ್ರಗಳಲ್ಲೇನೂ ನಟಿಸಿಲ್ಲ. ಆದರೆ ಎಷ್ಟೇ ಚಿತ್ರದಲ್ಲಿ ನಟಿಸಿರಲಿ, ವೀಕ್ಷಕರು ಆಯಾ ಚಿತ್ರಗಳಲ್ಲಿನ ನನ್ನ ಪಾತ್ರವನ್ನು ಮೆಚ್ಚಿದ್ದಾರೆ, ಈಗಲೂ ಸ್ಮರಿಸುತ್ತಾರೆ. ನನ್ನ ಚಿತ್ರದಲ್ಲಿನ ಕಥಾಹಂದರ ಗಟ್ಟಿ ವಸ್ತು ಹೊಂದಿರುವುದರಿಂದ, ವೀಕ್ಷಕರು ಎಂದೂ ನನ್ನ ಕೈ ಬಿಟ್ಟಿಲ್ಲ. ಅವರ ಮೆಚ್ಚುಗೆ, ಸಪೋರ್ಟ್‌ ಇಲ್ಲದೆ ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಅದು ನನ್ನ ಮೊದಲ `ವಿಕ್ಕಿ ಡೋನರ್‌’ ಚಿತ್ರ ಇರಬಹುದು ಅಥವಾ ಇತ್ತೀಚೆಗೆ ಬಿಡುಗಡೆಗೊಂಡ `ಹಕ್‌’ ಚಿತ್ರವೇ ಆಗಿರಬಹುದು…. ನನ್ನ ಎಲ್ಲಾ ಚಿತ್ರಗಳಿಗೂ ವೀಕ್ಷಕರ ಸಪೋರ್ಟ್‌, ಪ್ರೀತಿ ಇದ್ದೇ ಇರುತ್ತದೆ. ಇದರ ಹಿಂದಿನ ಸ್ಪೆಷಲ್ ಕಾರಣ ಅಂದ್ರೆ, ನಾನು ಯಾವಾಗ ಯಾ ಸಿನಿಮಾಗೆ ಸಹಿ ಹಾಕಿದರೂ, ನನ್ನ ಗಮನ ಪೂರ್ತಿ ಆ ಚಿತ್ರದ ಕಥಾವಸ್ತು ಹಾಗೂ ನನ್ನ ಪಾತ್ರದತ್ತ ಕೇಂದ್ರಿಕೃತ ಆಗಿರುತ್ತದೆ. ಈ ದೃಷ್ಟಿಯಿಂದ ನಾನು ಎಷ್ಟೋ ಮರ ಸುತ್ತುತ್ತಾ ಹಾಡುವ ಹೇಳುವಂಥ ಗ್ಲಾಮರಸ್ ಪಾತ್ರಗಳನ್ನು ಬೇಕಾದಷ್ಟು ತಿರಸ್ಕರಿಸಿದ್ದೇನೆ. ಇಂಥ ಚಿತ್ರಗಳಲ್ಲಿ ಕಥೆ ನಗಣ್ಯವಾಗಿದ್ದು ಹೀರೋ ಆ್ಯಕ್ಷನ್‌, ಗ್ಲಾಮರ್‌, ಸೆಕ್ಸೀ ದೃಶ್ಯಗಳಿಗಷ್ಟೇ ಪ್ರಾಮುಖ್ಯತೆ ಇದ್ದ. ನನಗೆ ಆಫರ್‌ ಮಾಡಿದ ಪಾತ್ರದಲ್ಲಿ ಯಾ ಜೀವ ಇರಲಿಲ್ಲ. ಅಂಥ ಎಷ್ಟೇ ಹಣ ತಂದುಕೊಟ್ಟರೂ ನನಗೆ ಬೇಡ!

ಆದರೆ ಯಾವುದೇ ಚಿತ್ರದಲ್ಲಿ ನನ್ನ ಪಾತ್ರ ಅತಿ ಚಿಕ್ಕದಾಗಿದ್ದರೂ, ಪವರ್‌ ಫುಲ್ ಆಗಿರಬೇಕು. ಅಂಥವನ್ನು ಮಾತ್ರ ನಾನು ಒಪ್ಪುತ್ತೇನೆ. ರಾಮ್ ಗೋಪಾಲ್ ‌ವರ್ಮಾರ `ಸರ್ಕಾರ್‌’ ಚಿತ್ರದಲ್ಲಿ ನನ್ನ ಪಾತ್ರ ದೊಡ್ಡದೇನೂ ಆಗಿರಲಿಲ್ಲ, ಆದರೆ ಅಷ್ಟೇ ಗಮನಾರ್ಹವಾಗಿತ್ತು. ಹಾಗಾಗಿ `ಸರ್ಕಾರ್‌’ ಚಿತ್ರದಲ್ಲಿ ಸಣ್ಣ ಪಾತ್ರವಿದ್ದರೂ ಅದನ್ನು ನಾನು ಸ್ವೀಕರಿಸಿದೆ. ಹೀಗೆಯೇ ಇನ್ನೂ ಹಲವಾರು ಚಿತ್ರಗಳಲ್ಲಿ ನಾನು ನಾಯಕಿ ಅಲ್ಲದಿದ್ದರೂ, ನನ್ನ ಚಿಕ್ಕ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದುದರಿಂದ, ನಾನು ಅಂಥ ಚಿತ್ರಗಳಲ್ಲಿ ನಟಿಸುವಂತಾಯಿತು.

ನಿನ್ನ ಮೆಚ್ಚಿನ ಚಿತ್ರಗಳ ಕುರಿತಾಗಿ ಹೇಳ್ತೀಯಾ…..?

ತಾಯಿಗೆ ತನ್ನ ಎಲ್ಲಾ ಮಕ್ಕಳೂ ಇಷ್ಟ ಆಗುವ ಹಾಗೆ ನಾನು ನಟಿಸಿದ ನನ್ನೆಲ್ಲ ಚಿತ್ರಗಳೂ ನನಗೆ ಇಷ್ಟ! ಆದರೆ ಮುಖ್ಯವಾಗಿ ಆಯುಷ್ಮಾನ್‌ ಜೊತೆ ನಟಿಸಿದ ಮೊದಲ ಚಿತ್ರ `ವಿಕ್ಕಿ ಡೋನರ್‌’ ನನ್ನ ಆಲ್ ಟೈಂ ಫೇವರಿಟ್‌ ಚಿತ್ರ. ಏಕೆಂದರೆ ಇದೇ ನನ್ನ ಮೊದಲ ಹಿಂದಿ ಚಿತ್ರ ಹಾಗೂ ಈ ಚಿತ್ರದ ನಂತರ ನನ್ನ ಕೆರಿಯರ್‌ ಗ್ರಾಫ್‌ ಚೆನ್ನಾಗಿ ಅಭಿವೃದ್ಧಿಗೊಂಡಿತು. ಈ ಚಿತ್ರದ ನಂತರ  ಚಿತ್ರದಲ್ಲಿ ಮೊದಲ ಸಲ ನಾನು ಲಾಯರ್‌ ಆಗಿ ನಟಿಸಿದ್ದೆ, ಅದೇ ತರಹ `ಹಕ್‌’ ಚಿತ್ರದಲ್ಲಿ ಮುಸ್ಲಿಂ ಹೆಣ್ಣಾಗಿ ಆ ಸಮುದಾಯದ ವಿರುದ್ದ ಸಿಡಿದೇಳುವ ಪಾತ್ರವನ್ನು ತೀಕ್ಷ್ಣವಾಗಿ ನಿಭಾಯಿಸಿದ್ದೆ. ಇವೆರಡೂ ಚಿತ್ರಗಳೂ ಎಂದೆಂದೂ ನನ್ನ ಪೆಟ್‌ ಆಗಿರುತ್ತವೆ. ಇವೆರಡೂ ಚಿತ್ರಗಳು ಸಿನಿಮಾ ಮೂಲಕ ಸಮಾಜಕ್ಕೆ ಒಂದು ಮೆಸೇಜ್‌ ನೀಡುತ್ತವೆ. ಹೀಗಾಗಿ ಈ ಚಿತ್ರಗಳಲ್ಲಿ ಕೆಲಸ ಮಾಡಿದ್ದು, ನನಗೆ ಹೆಚ್ಚಿನ ತೃಪ್ತಿ ತಂದುಕೊಟ್ಟಿದೆ.

ಈ ಚಿತ್ರಗಳನ್ನು ಹೊರತುಪಡಿಸಿ ಹೃತಿಕ್‌ ರೋಶನ್‌ ಜೊತೆ ನಟಿಸಿದ್ದ `ಕಾಬಿಲ್‌,’ ನನ್ನ ಪತಿ ಆದಿತ್ಯ ನಿರ್ಮಿಸಿದ್ದ `ಉರಿ : ದಿ ಸರ್ಜಿಕಲ್ ಸ್ಟ್ರೈಕ್‌’ ದೇಶಭಕ್ತಿಯ ಕಥಾಹಂದರ ಹೊಂದಿರುವುದರಿಂದ, `ಬದಲಾಪುರ್‌’ ಚಿತ್ರ ದ್ವೇಷದ ದಳ್ಳುರಿಯ ದಮನ ಮಾಡುವ ಚಿತ್ರವಾದ್ದರಿಂದ, ಅದೂ ಸಹ ನನಗೆ ಭಾರಿ ಇಷ್ಟ. ಒಬ್ಬ ನಟಿಯಾಗಿ ಈ ಚಿತ್ರಗಳಿಂದ ನಾನು ಸಾಕಷ್ಟು ಕಲಿತಿದ್ದೕನೆ ಎನ್ನಬಹುದು.

ಬಾಲಿವುಡ್ನಾಯಕಿಯರು ಕೇವಲ 8 ಘಂಟೆ ಕಾಲ ಮಾತ್ರ ದುಡಿಯಬೇಕು ಎಂಬ ದೀಪಿಕಾ ಪಡುಕೋಣೆ ಮಾತನ್ನು ನೀನು ಬಹಿರಂಗವಾಗಿ ಸಮರ್ಥಿಸಿದ್ದಿ. ಕುರಿತು ಏನು ಹೇಳಬಯಸುವೆ….?

ಇತ್ತೀಚೆಗೆ ದೀಪಿಕಾ ಹಲವಾರು ಬಾಲಿವುಡ್‌ ಚಿತ್ರಗಳನ್ನು ತಿರಸ್ಕರಿಸಿದಳು. ಇದಕ್ಕೆ ಕಾರಣ ಚಿತ್ರದ ನಿರ್ಮಾಣದ ಕುರಿತಾಗಿ ಆಕೆಯ ಷರತ್ತೆಂದರೆ, ತನ್ನ ಹಸುಗೂಸಿನ ಪಾಲನೆ, ಕೌಟುಂಬಿಕ ಕರ್ತವ್ಯಗಳು ಆಕೆಗೆ ಮುಖ್ಯವಾಗಿದ್ದ. ಹೀಗಾಗಿ ಯಾವ ಚಿತ್ರವೇ ಇರಲಿ, ಅದರಲ್ಲಿ ನಾನು 8 ಘಂಟೆಗಳ ಕಾಲಕ್ಕಿಂತ ಹೆಚ್ಚು ದುಡಿಯಲಾರೆ ಎಂದು ಮೊದಲೇ ಕರಾರು ಹಾಕತೊಡಗಿದಳು. ತನ್ನ ಈ ವೈಯಕ್ತಿಕ ಕಾರಣದಿಂದ ದೀಪಿಕಾ ಎಷ್ಟೋ ಉತ್ತಮ ಚಿತ್ರಗಳನ್ನು ಕೈಬಿಟ್ಟಳು. ಇದರ ಕುರಿತಾಗಿ ಟಿವಿಯ ಸಂದರ್ಶನ ಒಂದರಲ್ಲಿ ನನ್ನನ್ನು ಇದೇ ಪ್ರಶ್ನೆ ಕೇಳಿದಾಗ, ಒಬ್ಬ ಹಸುಗೂಸಿನ ತಾಯಿಯಾಗಿ, ತುಂಬು ಕುಟುಂಬದ ಜವಾಬ್ದಾರಿಯುತ ಸೊಸೆಯಾಗಿ, ನಾನು ದೀಪಿಕಾಳ ಮಾತುಗಳನ್ನೇ ಅನುಮೋದಿಸಿದೆ. ಅದು ನನ್ನ ಜವಾಬ್ದಾರಿಯುತ ಸಹನಟ, ನಿರ್ಮಾಪಕ, ನಿರ್ದೇಶಕರಿಗೆ ಖಂಡಿತಾ ಅರ್ಥವಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆದ್ಯತೆಗೆ ತಕ್ಕಂತೆ ಕೆಲಸ ಮಾಡಲು ಸ್ವತಂತ್ರ ಹೊಂದಿರುತ್ತಾರೆ. ಇದನ್ನು ಒಬ್ಬ ನಾಯಕಿ ಹೇಳಿದಳು, ಅವಳಿಂದ ಇಡೀ ಚಿತ್ರ ಗೆಲಲ್ಲು ಸಾಧ್ಯವಿಲ್ಲ ಎಂದು ಅವಳನ್ನು ನಿರ್ಲಕ್ಷಿಸುವುದು ಎಷ್ಟರಮಟ್ಟಿಗೆ ಸರಿ? ಏಕೆಂದರೆ ಆ ನಾಯಕಿ ಸಹ ನಿಜ ಜೀವನದಲ್ಲಿ ಒಬ್ಬ ಸೊಸೆ, ಪತ್ನಿ, ತಾಯಿ ಆಗಿರುತ್ತಾಳೆ. ಹೀಗಾಗಿ ಇದು ಅವಳ ವ್ಯಕ್ತಿಗತ ಸ್ವಾತಂತ್ರ್ಯದ ಪ್ರಶ್ನೆಯಾಗುತ್ತದೆ. ಅವಳಿಗೆ ತನ್ನ ಕೌಟುಂಬಿಕ ಜವಾಬ್ದಾರಿಗಳೂ ಅಷ್ಟೇ ಮುಖ್ಯ. ಹೀಗಾಗಿ ಅವಳು ತನ್ನ ಕೆಲಸಮನೆ ಕುರಿತಾಗಿ ಬ್ಯಾಲೆನ್ಸ್ ಮಾಡಲೇಬೇಕಾಗುತ್ತದೆ. ಆದ್ದರಿಂದಲೇ ಗಂಡಸಿಗಿಂತ ಹೆಚ್ಚು ಜವಾಬ್ದಾರಿ ನಿರ್ವಹಿಸುವ ಹೆಂಗಸರು ಇಂಥ ಬೇಡಿಕೆ ಮುಂದಿಡುತ್ತಾರೆ. ಆದರೆ ಈ ಸಿನಿಮಾ ಇಂಡಸ್ಟ್ರಿಯಲ್ಲಿ ಲೋಕೇಶನ್‌, ಪರ್ಮಿಶನ್‌, ಇನ್ನಿತರ ಟೆಕ್ನಿಕ್‌ ಕಾರಣಗಳಿಂದಾಗಿ, ನಿಗದಿತ ಸಮಯಕ್ಕೆ ಇಂತಿಷ್ಟೇ ಘಂಟೆ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತದೆ, ಹಾಗೇಂತ ಇದು ಅಸಂಭವ ಏನಲ್ಲ!

ಬಾಲಿವುಡ್ನಲ್ಲಿ ಪಕ್ಷಪಾತ ಬಹಳ ನಡೆಯುತ್ತದೆ. ಕುರಿತಾಗಿ ನಿನ್ನ ಆರಂಭಿಕ ದಿನಗಳ ಸಂಘರ್ಷದ ಬಗ್ಗೆ ಏನು ಹೇಳ್ತೀಯಾ…..?

ಇಂಥ ಒಂದು ಕಾಂಪ್ಲಿಕೇಶನ್‌ ಎಲ್ಲಿಲ್ಲ ಹೇಳಿ? ಸದಾ ಪೈಪೋಟಿ ತುಂಬಿರುವ ಬಾಲಿವುಡ್‌ ನಲ್ಲಂತೂ ಇದು ಇನ್ನೂ ಹೆಚ್ಚಾಗಿ ಧಗಧಗ ಅಂತ ಉರಿಯುತ್ತಲೇ ಇರುತ್ತದೆ. ನನ್ನ ಕೆರಿಯರ್‌ ನ ಪ್ರಾರಂಭದಲ್ಲಿ ಇಂಥ ಸಮಸ್ಯೆಗಳನ್ನು ನಾನು ಬಹಳ ಎದುರಿಸಿದ್ದೇನೆ. ಬಾಲಿವುಡ್‌ ಇಂಡಸ್ಟ್ರಿಗೆ ಸಂಬಂಧಿಸಿದ ಕಲಾವಿದರಲ್ಲಿ ಈ ಪೈಪೋಟಿ ಸಾಮಾನ್ಯ. ಮುಂಬೈ ಮೂಲದ ಕಲಾವಿದರಿಗಿಂತ, ಅನ್ಯ ಪ್ರದೇಶದವರು, ಅನ್ಯ ಭಾಷಿಕರಿಗೆ ಈ ಹಿಂಸೆ ಜಾಸ್ತಿ. ಇಂಥ ಸಂಘರ್ಷಕ್ಕೆ ಸಾಮಾನ್ಯವಾಗಿ ಹೊಸಬರು ಎಲ್ಲರೂ ಸಿಕ್ಕಿಬೀಳುತ್ತಾರೆ. ನನ್ನ ಮೊದಲ ಚಿತ್ರ `ವಿಕ್ಕಿ ಡೋನರ್‌’ನ ಯಶಸ್ಸಿನ ನಂತರ, ನಾನು ಮುಂದಿನ ಎಷ್ಟೋ ಚಿತ್ರಗಳಿಗೆ ಮತ್ತೆ ಮತ್ತೆ ಆಡಿಶನ್‌ ತೆಗೆದುಕೊಳ್ಳಬೇಕಾಯಿತು. ಆದರೆ ಇತರ ಗ್ಲಾಮರಸ್‌ ಹೀರೋಯಿನ್ಸ್ ಗೆ ಈ ಕಾರಣವಿರಲಿಲ್ಲ. ಆ ನಿಟ್ಟಿನಲ್ಲೂ ನಾನು ಸೋಲು ಒಪ್ಪಲಿಲ್ಲ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತಾ ಬಂದಿದ್ದೇನೆ.

ಕೊನೆಗೆ ನಾನು ಹೃತಿಕ್‌ ರೋಶನ್‌ ಜೊತೆ `ಕಾಬಿಲ್‌’ ಚಿತ್ರದಲ್ಲಿ ನಟಿಸುವಾಗ ಈ ಸಮಸ್ಯೆ ಎಷ್ಟೋ ತಗ್ಗಿತ್ತು. ನನ್ನ ಇಷ್ಟು ದಿನಗಳ ಪರಿಶ್ರಮಕ್ಕೆ ಉತ್ತಮ ಫಲ ಸಿಕ್ಕಿತು ಎಂದೇ ಹೆಮ್ಮೆಪಟ್ಟೆ. ಹೀಗೆ ಬಲು ನಿಧಾನವಾಗಿ ಅಂತೂ ಇಂತೂ ನಾನು ಯಶಸ್ಸಿನ ಮೆಟ್ಟಿಲೇರುವಂತಾಯಿತು. ನಮ್ಮ ಕೆಲಸ ಪರ್ಫೆಕ್ಟ್ ಆಗಿದ್ದರೆ, ಅದು 100% ಪ್ರಾಮಾಣಿಕತೆಯಿಂದ ಕೂಡಿದ್ದರೆ, ನಾವು ಯಶಸ್ಸು ಕಾಣುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಪಾಠವನ್ನು ಇದರಿಂದ ನಾನು ಕಲಿಯುವಂತಾಯಿತು.

ಅದು ಸರಿ, ಪ್ರಸಿದ್ಧ ನಿರ್ಮಾಪಕ ನಿರ್ದೇಶಕ ಆದಿತ್ಯ ಜೊತೆ ಹೇಗೆ ಲವ್, ನಂತರ ಮದುವೆ…. ಇದೆಲ್ಲ ಹೇಗೆ ಸಾಧ್ಯಾಯಿತು?

`ಉರಿ : ದಿ ಸರ್ಜಿಕಲ್ ಸ್ಟ್ರೈಕ್‌’ ಚಿತ್ರದಿಂದ ನಾನು ಆದಿತ್ಯಾರನ್ನು ಭೇಟಿ ಆಗುವಂತಾಯಿತು. ಈ ಚಿತ್ರದಲ್ಲಿ ಅವರ ದಕ್ಷ ನಿರ್ದೇಶನದಲ್ಲಿ ನಾನು ಸೈ ಎನಿಸಿಕೊಂಡೆ. ಈ ಚಿತ್ರದ ಪ್ರಮೋಶನ್‌ ಗಾಗಿ ಸತತ ಕೆಲಸ ಮಾಡುತ್ತಿದ್ದಾಗ, ನಾವಿಬ್ಬರೂ ಬಹಳ ನಿಕಟವರ್ತಿಗಳಾದೆವು. ಇಲ್ಲಿಂದಲೇ ನಮ್ಮ ಗಾಢ ಸ್ನೇಹ ಪ್ರೇಮಕ್ಕೆ ತಿರುಗಿತು. ಹೀಗೇ ಇದು 2 ವರ್ಷ ಮುಂದುವರಿಯಿತು. ಇನ್ನು ನಾವು ಮನೆಯವರಿಗೆ ವಿಷಯ ತಿಳಿಸಿ ಮದುವೆಯ ತಯಾರಿಗೆ ಸಿದ್ಧರಾಗಬೇಕು ಎಂದು ನಿಶ್ಚಯಿಸಿದೆ. ಇಬ್ಬರೂ ಈ ಕುರಿತಾಗಿ ಮನೆಯಲ್ಲಿ ಮಾತನಾಡಿದೆ. ಎರಡೂ ಕುಟುಂಬದವರೂ ಸಂತೋಷದಿಂದ ಮದುವೆಗೆ ಒಪ್ಪಿಕೊಂಡರು. ನನ್ನ ಆಯ್ಕೆ ಕುರಿತು ನಮ್ಮ ಮನೆಯವರಿಗೆ ಬಹಳ ಹೆಮ್ಮೆ ಎನಿಸಿತು. ಆಗ ಬೇಗ ಎಂಗೇಜ್‌ ಮೆಂಟ್‌ ಮುಗಿಸಿ, 6 ತಿಂಗಳಲ್ಲಿ ಮದುವೆ ಫಿಕ್ಸ್ ಮಾಡಿಕೊಳ್ಳುವ ಪ್ಲಾನಿಂಗ್‌ ಮಾಡಿದೆ. ಅವರ ಮನೆಯಲ್ಲಿ ಎಂಗೇಜ್‌ ಮೆಂಟ್‌ ಗೆ ತಕ್ಷಣ ಒಪ್ಪಿದರು.

ಆದರೆ ನಮ್ಮ ಮನೆಯಲ್ಲಿ ನನ್ನ ಅಜ್ಜಿ ಹಿಮಾಚಲ ಪ್ರದೇಶದ ನಮ್ಮ ಸಂಪ್ರದಾಯದಲ್ಲಿ ಲಗ್ನಪತ್ರಿಕೆಯ ಗೋಜಿಲ್ಲ, ಹುಡುಗಿ ಕಡೆಯವರು ಎಲ್ಲವನ್ನೂ ಪಕ್ಕಾ ನಿಶ್ಚಯಿಸಿಕೊಂಡು ಡೈರೆಕ್ಟ್ ಮದುವೆಗೆ ರೆಡಿಯಾಗುತ್ತಾರೆ ಎಂದರು. ನಾನು ಸಿನಿಮಾ ಶೆಡ್ಯೂಲ್ ‌ಗಳ ಬಿಝಿ ಮಧ್ಯೆ ಮದುವೆಗೆ ಈಗಲೇ ರೆಡೀನಾ ಎಂದು ಆದಿತ್ಯ ಕೇಳಿದರು. ನಾನು ಹ್ಞೂಂ ಎಂದು ಒಪ್ಪಿದೆ. ಹೀಗೆ ಯಾವ ಪೂರ್ವ ತಯಾರಿಯೂ ಇಲ್ಲದೆ ನಾವು 2021ರ ಜೂನ್‌ 4ರಂದು ಮದುವೆಯಾದೆವು. ಎಷ್ಟು ಬೇಗ ಬೇಗ ಮದುವೆಯ ತಯಾರಿ ನಡೆದಿತ್ತು ಎಂದರೆ, ನಮ್ಮ ಮನೆಯವರೇ ಶಾಪಿಂಗ್‌ ಇತ್ಯಾದಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು. ನನಗೆ ಬೇಗ ಕೈಲಿದ್ದ ಚಿತ್ರದ ಶೂಟಿಂಗ್‌ ಮುಗಿಸಬೇಕಿತ್ತು. ಹೀಗಾಗಿ ಮದುವೆ ಆಗಿ 1 ತಿಂಗಳಾದರೂ, ಮದುವೆ ಮುಗಿದು ನಾನು ಅತ್ತೆಮನೆಗೆ ಬಂದಿದ್ದೀನಾ ಎಂಬುದೇ ನನಗೆ ಗೊತ್ತಾಗಲಿಲ್ಲ!

ಮದುವೆಯ ಗಡಿಬಿಡಿ ಎಷ್ಟಿತ್ತು ಎಂದರೆ, ಪಾರ್ಲರ್‌ ನವರನ್ನು ಕರೆಸಲಿಕ್ಕೂ ಪುರಸತ್ತಿಲ್ಲದೆ, ನಾನೇ ನನ್ನ ಬ್ರೈಡಲ್ ಮೇಕಪ್ ಮಾಡಿಕೊಂಡೆ. ನನ್ನ ಅಜ್ಜಿ ನೀಡಿದ ಹಿ.ಪ್ರ.ದ ಒಡವೆಗಳನ್ನೇ ನಾನು ಧರಿಸಿದ್ದೆ, ಬೇರೆ ಆಧುನಿಕ ಒಡವೆಗಳ ಗೊಡವೆಗೂ ಹೋಗಲಿಲ್ಲ. ನನ್ನ ಮದುವೆಗೆ ಬಾಲಿವುಡ್‌ ನ ಅನೇಕ ಗಣ್ಯರನ್ನು ಕರೆಯಲು ಆಗಲಿಲ್ಲ. ಹೀಗಾಗಿ ಎರಡೂ ಕಡೆಯ ಕೆಲವೇ ನೆಂಟರಿಷ್ಟರ ಸಮ್ಮುಖದಲ್ಲಿ ನಮ್ಮ ಮದುವೆ ಬಲು ಸರಳವಾಗಿ, ಆದರೆ ಶಾಸ್ತ್ರೋಕ್ತವಾಗಿ ನಮ್ಮ ಹಿ.ಪ್ರ.ದ ಬಿಲಾಸ್‌ ಪುರದಲ್ಲಿ ಮದುವೆ ನೆರವೇರಿತು.

ಇತ್ತೀಚೆಗೆ ಬಿಡುಗಡೆಯಾದ `ಧುರಂಧರ್‌’ 1  2 ಚಿತ್ರಗಳಿಂದ ಯಾಮಿನಿಯ ಪತಿ ಆದಿತ್ಯ ಬಾಲಿವುಡ್‌ ನ ಯಶಸ್ಸಿನ ಶಿಖರವೇರಿದ್ದಾರೆ. `ಉರಿ’ ಚಿತ್ರದಿಂದ ಈ ಜೋಡಿ ಸ್ನೇಹ ಮುಂದುವರಿಸಿತ್ತು. ಆಕೆ ಪ್ರಕಾರ ಅವರ ಸ್ನೇಹ ಅತಿ ಸರಳವಾಗಿದ್ದು, ಕ್ಲೀಷೆಗಳಲ್ಲದೆ ಮುಂದುವರಿಯಿತು. ಆದಿತ್ಯ ಒಬ್ಬ ಶಾಂತ ಸ್ವಭಾವದ, ಧೈರ್ಯವಂತ, ಸಮ್ಮಾನಿತ ನಿರ್ದೇಶಕರಾಗಿ ಯಾಮಿಗೆ ಬಲು ಪ್ರಿಯವಾಗುತ್ತಾರೆ. ಇದನ್ನು ಆಕೆ ಒಬ್ಬ ಪತ್ನಿಯಾಗಿ ಹೇಳದೆ, ಒಬ್ಬ ನಟಿಯಾಗಿ ಹೇಳುತ್ತಿದ್ದಾಳೆ. ಆದಿತ್ಯ ನಿರ್ದೇಶಕ ಎಂಬ ಹೆಗ್ಗಳಿಕೆಯಿಂದಲ್ಲ, ಒಬ್ಬ ನಿಷ್ಠಾವಂತ ಪರಿಶ್ರಮಿಯಾಗಿ ಸಮ್ಮಾನಿತರಾಗುತ್ತಾರೆ. ಅಷ್ಟಲ್ಲದೆ ಅವರ ಧುರಂಧರ್‌ 2025ರ ಭಾರತೀಯ ಚಿತ್ರಗಳಲ್ಲೇ ಗಳಿಕೆಯಲ್ಲಿ ನಂ.1 ಎನಿಸಿಲ್ಲ! ಈ ಚಿತ್ರದ ಅತಿ ಕಠಿಣಕರ ಸಂದರ್ಭಗಳಲ್ಲಿಯೂ ಅವರು ಅತಿ ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸಿದರು. ಈ ಕಾರಣದಿಂದಲೇ ಮದುವೆಯ ತಯಾರಿಯಲ್ಲೂ ಇಬ್ಬರ ಕಡೆಯಿಂದ ಯಾವ ಅಡ್ಡಿ ಆತಂಕಗಳಿಲ್ಲದೆ ಸರಾಗವಾಗಿ ನಡೆಯುವಂತಾಯಿತು.

ಮದುವೆಯ ನಂತರ ಪ್ರೊಫೆಶನಲ್ ಪರ್ಸನಲ್ ಲೈಫ್ನಲ್ಲಿ ನೀನು ಹೇಗೆ ಬ್ಯಾಲೆನ್ಸ್ ಉಳಿಸಿಕೊಂಡೆ…..?

ನಟನೆ ಮೊದಲಿನಿಂದಲೂ ನನ್ನ ಪ್ಯಾಶನ್‌. ಹೀಗಾಗಿ ಎಂದಿಗೂ ನಟನೆಯಿಂದ ನಾನು ವಿಮುಖ ಆಗಲಾರೆ. ಮದುವೆಯ ನಂತರ ನಾನು ನನ್ನ ನಟನೆಯ ಕೆರಿಯರ್‌ ನ್ನು ಸೀರಿಯಸ್‌ ಆಗಿ ಮುಂದುವರಿಸಿದೆ. ನಟನೆಯನ್ನು ಬಿಟ್ಟು ಉಳಿಯುವ ಪ್ರಶ್ನೆಯೇ ಇರಲಿಲ್ಲ. ಒಬ್ಬ ಹೆಣ್ಣು ಮದುವೆಯಾದ ನಂತರ ತಾಯಿ ಆದಾಗ, ಅವಳಿಗೆ ಜವಾಬ್ದಾರಿ 2 ಪಟ್ಟು ಹೆಚ್ಚುತ್ತದೆ. ಏಕೆಂದರೆ ಮದುವೆಯ ನಂತರ ನಟಿಗೆ ತನ್ನ ಪತಿ, ಕುಟುಂಬ, ಮನೆಯವರೆಲ್ಲ ಬಹಳ ಮುಖ್ಯವಾಗುತ್ತಾರೆ. ಆದರೆ ವೈಯಕ್ತಿಕವಾಗಿ ನನ್ನನ್ನು ಕೇಳಿದರೆ, ಈ ವಿಷಯದಲ್ಲಿ ನಾನು ಬಹಳ ಲಕ್ಕಿ. ಆದಿತ್ಯ ಎಷ್ಟು ಸಪೋರ್ಟಿವ್ ‌ಅಂದ್ರೆ, ನಾನು ವಿವಾಹಿತೆ, ಒಂದು ಮಗುವಿನ ತಾಯಿ ಎಂಬ ಯಾವ ಟೆನ್ಶನ್ಸ್ ಇಲ್ಲದೆ ಅವರು ನನಗೆ ಸಪೋರ್ಟ್‌ ಮಾಡುತ್ತಾರೆ. ಹೀಗಾಗಿ ಆ ನಿಟ್ಟಿನಲ್ಲಿ ಯಾವ ಕಷ್ಟ ಇಲ್ಲದೆ ಎರಡನ್ನೂ ನಾನು ಸುಲಭವಾಗಿ ನಿಭಾಯಿಸುತ್ತಿದ್ದೇನೆ.

ಇದರ ಹಿಂದಿನ ವಿಶೇಷ ಕಾರಣ ಅಂದ್ರೆ, ನನ್ನ ಅತ್ತೆ ಮನೆಯವರು ಹಾಗೂ ತವರಿನ ಕಡೆಯಿಂದಲೂ ನನಗೆ 100% ಕೌಟುಂಬಿಕ ಸಹಕಾರ ಇದೆ. ಶೂಟಿಂಗ್‌ ಗೆ ಹೊರಡುವಾಗ, ಅನಿವಾರ್ಯವಾಗಿ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದಾಗ ನನಗೆ ಎಳ್ಳಷ್ಟೂ ಯೋಚನೆ ಇಲ್ಲ. ನಾನಿಲ್ಲದೆ ಮಗು ಏನು ಕಷ್ಟಪಡುತ್ತದೊ ಎಂಬ ಟೆನ್ಶನ್ಸ್ ಇಲ್ಲ. ಮಗುವನ್ನು ನೋಡಿಕೊಳ್ಳಲು ಇಬ್ಬಿಬ್ಬರು ಅಜ್ಜಿಯರ ಸಪೋರ್ಟ್‌ ಯಾವಾಗಲೂ ಇರುತ್ತದೆ. ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತೆ! ನನ್ನ ಮಗ ಯಾವಾಗ ಬೆಳೆದು ದೊಡ್ಡವನಾದ ಎಂದೇ ಗೊತ್ತಾಗಲಿಲ್ಲ.

ನನ್ನ ಮಗನ ಹುಟ್ಟು, ನಮ್ಮ ಎರಡೂ ಪರಿವಾರಗಳನ್ನೂ ಬಲು ಗಟ್ಟಿಯಾಗಿ ಬೆಸೆದಿದೆ. ನನ್ನ ಕೆಲಸ ಹಾಗೂ ಮಾತೃತ್ವದ ಜವಾಬ್ದಾರಿ ಈ ರೀತಿ ಸುಸೂತ್ರವಾಗಿ ನಡೆಯುತ್ತಿದೆ. ಹೀಗಾಗಿಯೇ ನಾನು ಎರಡೂ ಕಡೆ ಯಶಸ್ವೀ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಮುಂದೆಯೂ ಬಾಲಿವುಡ್‌ ಗಾಗಿ ನಾನು ನನ್ನ 100% ನೀಡಲು ಸಾಧ್ಯ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ