Sj*
ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ|| ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಸಿರುವ, ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ನಿರ್ದೇಶನದ ಮತ್ತು ಶ್ರೀನಗರ ಕಿಟ್ಟಿ – ಮೇಘನಾರಾಜ್ ನಾಯಕ- ನಾಯಕಿಯಾಗಿ ನಟಿಸಿರುವ “ಅಮರ್ಥ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಹೆಸರಾಂತ ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ಖ್ಯಾತ ನಟ ಡಾರ್ಲಿಂಗ್ ಕೃಷ್ಣ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ ಶುಭಾಶಯ ಕೋರಿದರು. ನಟ ಶಿವಧ್ವಜ್ ಸಹ ಅತಿಥಿಗಳಾಗಿ ಆಗಮಿಸಿದ್ದರು. ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ, ನಿರ್ದೇಶಕರಾದ ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್, ನಾಯಕ ಶ್ರೀನಗರ ಕಿಟ್ಟಿ, ನಾಯಕಿ ಮೇಘನರಾಜ್, ಕಲಾವಿದರಾದ ಉಷಾ ಭಂಡಾರಿ, ಅಶ್ವ, ಅನುರಾಧ ಭಟ್, ಸಂಗೀತ ನಿರ್ದೇಶಕ ಪಂಚಮ್ ಜೀವ, ಹಿನ್ನೆಲೆ ಸಂಗೀತ ನೀಡಿರುವ ಶ್ರೀಧರ್ ವಿ ಸಂಭ್ರಮ್ ಹಾಗೂ ವಿತರಕ ರಮೇಶ್ ಬಾಬು ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನ್ನ ಸ್ನೇಹಿತರಾದ ಪ್ರಕಾಶ್ ಶೆಟ್ಟಿ ಹಾಗೂ ಡಾರ್ಲಿಂಗ್ ಕೃಷ್ಣ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ. ಕುಟುಂಬ ಸಮೇತ ನೋಡಬಹುದಾದ ಒಂದೊಳ್ಳೆ ಸಿನಿಮಾ ಇದೇ ಸೆಪ್ಟೆಂಬರ್ 18ರಂದು ನಿಮ್ಮ ಮುಂದೆ ಬರಲಿದೆ. ಎಲ್ಲರು ದಯವಿಟ್ಟು ಚಿತ್ರಮಂದಿರಗಳಲ್ಲೆ ನೋಡಿ ಎಂದು ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು.
ಕಳೆದ 25 ವರ್ಷಗಳಿಂದ ನನಗೆ ಚಿತ್ರರಂಗದ ಜೊತೆಗೆ ನಂಟು. ನಿರ್ಮಾಪಕ ಹಾಗು ನಿರ್ದೇಶಕನಾಗಿ ಇದು ಮೊದಲ ಚಿತ್ರ. ನಿರ್ಮಾಣಕ್ಕೆ ಕನ್ಯಾನ ಸದಾಶಿವ ಶೆಟ್ಟಿ ಅವರ ಸಹಕಾರ ಅಪಾರ. ಉತ್ತಮವಾದ ಚಿತ್ರ ಮಾಡಿದ್ದೇವೆ. ಸೆಪ್ಟೆಂಬರ್ 18 ರಂದು ಬಿಡುಗಡೆ ಮಾಡುತ್ತಿದ್ದೇವೆ. ಹೆಚ್ಚಿನ ಜನರು ನಮ್ಮ ಚಿತ್ರವನ್ನು ನೋಡಿ. ನೀವು ಇನ್ನಷ್ಟು ಜನರಿಗೆ ನಮ್ಮ ಸಿನಿಮಾ ನೋಡಲು ಹೇಳಿ. ಏಕೆಂದರೆ ಜನರ ಬಾಯಿಂದ ಚಿತ್ರ ಚೆನ್ನಾಗಿದೆ ಅಂತ ಬಂದು ಅವರು ಇನ್ನೊಬ್ಬರಿಗೆ ನೋಡಿ ಅಂತ ಹೇಳಿದರೆ ನಾವು ಗೆದ್ದ ಹಾಗೆ. ನಿಮ್ಮೆಲ್ಲರ ಸಹಕಾರದಿಂದ “ಅಮರ್ಥ” ಚಿತ್ರವನ್ನು ಸಮರ್ಥವಾಗಿಸಿ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಗುರು ಹೆಗ್ಡೆ.

ಆಗಮಿಸಿದ ಅತಿಥಿಗಳಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಾಯಕ ಶ್ರೀನಗರ ಕಿಟ್ಟಿ, “ಅಮರ್ಥ” ಒಂದು ಉತ್ತಮ ಚಿತ್ರ. ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ಸೇರಿ ಕುಟುಂಬ ಸಮೇತ ನೋಡಬಹುದಾದ ಒಂದೊಳ್ಳೆ ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ನೋಡಿದವರಿಗೆ ತಮ್ಮ ಎಸ್ ಎಸ್ ಎಲ್ ಸಿ ದಿನಗಳು ನೆನಪಾಗುತ್ತದೆ. ನಾನು ಹಾಗೂ ಮೇಘನಾರಾಜ್ ಒಟ್ಟಾಗಿ ನಟಿಸಿರುವ ಮೂರನೇ ಚಿತ್ರವಿದು. 28 ಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೆಪ್ಟಂಬರ್ 18 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಶಿವಮೊಗ್ಗ, ಮಂಗಳೂರು, ಚಿಕ್ಕ ಮಗಳೂರು ಮುಂತಾದ ಊರುಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಲಿದ್ದೇವೆ ಎಂದು ನಾಯಕ ಶ್ರೀನಗರ ಕಿಟ್ಟಿ ಹೇಳಿದರು.
“ಅಮರ್ಥ” ಚಿತ್ರಕ್ಕೆ ಆಯ್ಕೆಯಾದ ಮೊದಲ ಕಲಾವಿದೆ ನಾನು. ಈ ಚಿತ್ರ ಇಷ್ಟರ ಮಟ್ಟಿಗೆ ಬರಲು ಗುರು ಹೆಗ್ಡೆ ಅವರ ಪ್ರಮುಖ ಕಾರಣ. ಶ್ರೀನಗರ ಕಿಟ್ಟಿ ಅವರು ಹೇಳಿದಂತೆ, “ಬಹು ಪರಾಕ್”, ” ಬುದ್ದಿವಂತ ೨” ಚಿತ್ರಗಳ ನಂತರ ನಾನು ಅವರ ಜೊತೆಗೆ ನಟಿಸಿರುವ ಮೂರನೇ ಚಿತ್ರವಿದು. ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯಿರುವ ಅನೇಕ ಜನರು ನಟಿಸಿದ್ದಾರೆ. ಅವರ ಜೊತೆಗೆ ಅಭಿನಯಿಸಿದ್ದು ಬಹಳ ಖುಷಿಯಾಗಿದೆ ಎಂದರು ನಟಿ ಮೇಘನಾರಾಜ್.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಮತ್ತೊಬ್ಬ ನಿರ್ದೇಶಕ ವಿನಯ್ ಪ್ರೀತಮ್ ಧನ್ಯವಾದ ಹೇಳಿದರು.





