ಕೇವಲ ಪುರುಷರ ವಾದನ ಮಾತ್ರ ಎಂದು ಹೆಸರಾಗಿದ್ದ ರುದ್ರವೀಣೆಯನ್ನು ತಮ್ಮದಾಗಿಸಿಕೊಂಡು, ಅದರಲ್ಲಿ ಅಪಾರ ಸಾಧನೆಗೈದು ಹೆಚ್ಚಿನ ಕೀರ್ತಿ ಸಾಧಿಸಿರುವ ರುದ್ರವೀಣಾ ಪ್ರವೀಣೆ ಜ್ಯೋತಿ ಹೆಗಡೆಯವರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ....?
ಅದು ಹುಬ್ಬಳಿಯ ರಾಮಕೃಷ್ಣ ಆಶ್ರಮದ ದಸರಾ ಉತ್ಸವದ ಒಂದು ಸುಂದರ ಸಂಜೆ. ಭವತಾರಿಣಿ, ದುರ್ಗೆಯ ಭವ್ಯ ಮೂರ್ತಿ ಕೋಲ್ಕತಾ ದೇವಿಯ ರೂಪದಲ್ಲಿ ಅಲಂಕೃತಗೊಂಡು ಭಕ್ತಿಭಾವ ಮೂಡಿಸಿತ್ತು. ಕರ್ನಾಟಕದ ಭಾಗಗಳಲ್ಲಿ ಕೋಲ್ಕತಾ ದೇವಿಯ ರೂಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಿರಳ. ಮೂರ್ತಿಯ ಮುಖ್ಯ ಆಕರ್ಷಣೆಯ ಜೊತೆಗೆ ಒಂಬತ್ತೂ ದಿನಗಳು ಸಹೃದಯ ಕಲಾಸಕ್ತರಿಗೆ ವೈವಿಧ್ಯಮಯ ಕಾರ್ಯಕ್ರಮಗಳಿಗಷ್ಟೇ ಮೀಸಲಾದ ರಾಮಕೃಷ್ಣ ಆಶ್ರಮದಲ್ಲಿ ಜನಜಂಗುಳಿ ಅಷ್ಟಾಗಿ ಇರಲಿಲ್ಲ, ಯಾವುದೇ ಗದ್ದಲವಿರದೇ ಶಾಂತಚಿತ್ತರಾಗಿ ದೇವಿಯ ರೂಪ ಕಣ್ತುಂಬಿಕೊಂಡು ಆಲಿಸಬಹುದಾಗಿತ್ತು. ಅಂದು ಶಿರಸಿಯ ಬಿಸಲುಕೊಪ್ಪ ಗ್ರಾಮದ ಜ್ಯೋತಿ ಹೆಗಡೆಯರಿಂದ ರುದ್ರವೀಣಾ ವಾದನ ಎಂಬುದು ಮುಖ್ಯ ಆಕರ್ಷಣೆಯಾಗಿತ್ತು. ಅದುವರೆಗೂ ರುದ್ರವೀಣೆಯ ಹೆಸರು ಕೇಳಿ ತಿಳಿದಿದ್ದೆನೇ ಹೊರತು ವಾದನದ ಗತಿ ತಿಳಿದಿರಲಿಲ್ಲ.
ರುದ್ರವೀಣಾ ವಾದನ
ಆಶ್ರಮದ ನಿಯಮಕ್ಕೆ ತಕ್ಕಂತೆ ಸಂಜೆ 6 ಗಂಟೆಗೆ ಕರಾರುವಾಕ್ಕಾಗಿ ಯಾವುದೇ ವೈಭವೀಕರಣವಿಲ್ಲದೆ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆ ಪ್ರವೇಶಿಸಿದ ಜ್ಯೋತಿ ಮಧ್ಯಭಾಗದ ಮೆತ್ತನೆಯ ಹಾಸಿಗೆ ಮೇಲೆ ಕುಳಿತು ರುದ್ರವೀಣೆಯನ್ನು ನಾಜೂಕಾಗಿ ಎತ್ತಿಕೊಂಡು ಶೃತಿ, ವಾದ್ಯ ಸಹಕಾರ, ಧ್ವನಿವರ್ಧಕಗಳನ್ನು ಪರಿಶೀಲಿಸಿದರು. ಸುಖಾಸನದಲ್ಲಿ ಕುಳಿತು ಎಡ ಭುಜದ ಮೇಲೊಂದು ಬುರುಡೆ ಮತ್ತು ಬಲಭಾಗದ ಸೊಂಟವನ್ನಾಧರಿಸಿ ಇನ್ನೊಂದು ಬುರುಡೆ ಬರುವಂತೆ ಇಟ್ಟುಕೊಂಡು ನುಡಿಸಲು ಸಜ್ಜಾದದ್ದು ಕೌತುಕ ಮೂಡಿಸಿತ್ತು.
ಅದನ್ನವರು ಹೊತ್ತ ರೀತಿ, ವಿನ್ಯಾಸ ಕುತೂಹಲ ಕೆರಳಿಸಿತ್ತು. ವೀಣೆ, ಸಿತಾರ್ ವಾದ್ಯಗಳ ಸಂಗಮದಂತಿದ್ದು ಎರಡು ದೊಡ್ಡ ಬುರುಡೆಗಳ ವಿಶಿಷ್ಟ ಅಳವಡಿಕೆ ಅವೆರಡರಿಂದ ಬೇರ್ಪಡಿಸಿತ್ತು. ಗಮನಿಸಿದ ಮತ್ತೊಂದು ಕೌತುಕವೆಂದರೆ ವಾದ್ಯ ಒಂದಿನಿತೂ ನೆಲದ ಮೇಲಿರದೆ ಪೂರ್ತಿಯಾಗಿ ದೇಹವನ್ನಾಶ್ರಯಿಸಿತ್ತು!
ತಂತಿ ಮೀಟಿದಾಗ ಹೊಮ್ಮಿದ ನಾದ ಗಾಂಭೀರ್ಯಕ್ಕೆ ರೋಮಾಂಚನದ ಅನುಭವ! ವೀಣೆ, ಸಿತಾರ್ ವಾದನಗಳ ನಾದ ಚಾಂಚಲ್ಯತೆ ರುದ್ರವೀಣೆಯಲ್ಲಿರದೇ ಮಂದ್ರಸ್ವರದ ಗಂಭೀರತೆಯಿತ್ತು. ಎಡಕಿವಿಯನ್ನು ಬುರುಡೆಗಾನಿಸಿ ಯಮನ್ ಕಲ್ಯಾಣ್ ರಾಗ ನುಡಿಸುವಿಕೆಯಲ್ಲಿ ಆಕೆ ಮಗ್ನರಾಗಿದ್ದರೆ, ಶ್ರೋತೃಗಳೂ ಸಹ ಮೋಡಿಗೊಳಗಾದಂತೆ ಕಣ್ಮುಚ್ಚಿ ತಲೆದೂಗಿದ್ದರು. ಧ್ರುಪದ್ ಶೈಲಿಯ ನುಡಿ ಝೇಂಕಾರ ನಾದಲೋಕದ ದೈವೀಕತೆಯೇ ಭುವಿಗಿಳಿದಂತಿತ್ತು. ಸುಮಾರು ಒಂದೂವರೆ ಗಂಟೆಯ ಆ ಅನುಭವ ಅವರ್ಣನೀಯ!
ಜ್ಯೋತಿಯವರ ಕುರಿತು ಉತ್ತರ ಕನ್ನಡ ಜಿಲ್ಲೆಯವರಾದ ಜ್ಯೋತಿ ಹೆಗಡೆ ಹುಟ್ಟಿದ್ದು ಸಂಗೀತ, ಸಾಹಿತ್ಯಕ್ಕೆ ಹೆಸರಾದ ಧಾರವಾಡದಲ್ಲಿ. ಬೆಳೆದದ್ದು ಬೆಳಗಾವಿ ಮತ್ತು ಶಿರಸಿಯಲ್ಲಿ. ಬಾಲ್ಯದಲ್ಲಿ ಸಿತಾರ್ ಕಲಿಕೆಯಲ್ಲಿದ್ದಾಗ ಅದೊಂದು ಸಂದರ್ಭದಲ್ಲಿ ಗುರುಗಳಾದ ವಿದ್ವಾನ್ ಬಿಂದು ಮಾಧವ್ ಪಾಠಕರು ನುಡಿಸಿದ ರುದ್ರಾವೀಣಾ ವಾದನದ ಸ್ವರ ಗಾಂಭೀರ್ಯ, ಜ್ಯೋತಿಯ ಮನ ಸೆಳೆದು ಬಹುವಾಗಿ ಕಾಡಿತ್ತು. ಗುರುಗಳಲ್ಲಿ ರುದ್ರವೀಣೆ ಕಲಿಯುವ ಹಂಬಲ ಹೇಳಿಕೊಂಡಾಗ, `ಹೆಣ್ಣುಮಕ್ಕಳು ನಡಿಸುವ ವಾದ್ಯವಲ್ಲ,' ಎಂದು ಕಟುವಾಗಿ ನಿರಾಕರಿಸಿದ್ದರು.
ಕಲಿಕೆಯ ಉತ್ಸಾಹ
ಕಲಿಕೆಯ ಹುಮ್ಮಸ್ಸು ಹೆಚ್ಚಿಸಿತ್ತು. ಅಪ್ಪನನ್ನೂ ಕರೆದುಕೊಂಡು ಗುರುಗಳ ಬಳಿ ಹೋಗಿ ದಂಬಾಲು ಬಿದ್ದದ್ದಕ್ಕೆ `ಅಟ್ಟದ ಮೇಲೊಂದು ಹಳೆಯ ರುದ್ರವೀಣೆಯಿದೆ, ಅದನ್ನು ನುಡಿಸಲು ಯತ್ನಿಸುವ ನೋಡೋಣ....' ಆಕೆ ನುಡಿಸಲು ಅಸಾಧ್ಯವೆಂದು ಮನಗಂಡೇ ಹೇಳಿದ್ದರಂತೆ.





