ಕೇವಲ ಪುರುಷರ ವಾದನ ಮಾತ್ರ ಎಂದು ಹೆಸರಾಗಿದ್ದ ರುದ್ರವೀಣೆಯನ್ನು ತಮ್ಮದಾಗಿಸಿಕೊಂಡು, ಅದರಲ್ಲಿ ಅಪಾರ ಸಾಧನೆಗೈದು ಹೆಚ್ಚಿನ ಕೀರ್ತಿ ಸಾಧಿಸಿರುವ ರುದ್ರವೀಣಾ ಪ್ರವೀಣೆ ಜ್ಯೋತಿ ಹೆಗಡೆಯವರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ….?

ಅದು ಹುಬ್ಬಳಿಯ ರಾಮಕೃಷ್ಣ ಆಶ್ರಮದ ದಸರಾ ಉತ್ಸವದ ಒಂದು ಸುಂದರ ಸಂಜೆ. ಭವತಾರಿಣಿ, ದುರ್ಗೆಯ ಭವ್ಯ ಮೂರ್ತಿ ಕೋಲ್ಕತಾ ದೇವಿಯ ರೂಪದಲ್ಲಿ ಅಲಂಕೃತಗೊಂಡು ಭಕ್ತಿಭಾವ ಮೂಡಿಸಿತ್ತು. ಕರ್ನಾಟಕದ ಭಾಗಗಳಲ್ಲಿ ಕೋಲ್ಕತಾ ದೇವಿಯ ರೂಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಿರಳ. ಮೂರ್ತಿಯ ಮುಖ್ಯ ಆಕರ್ಷಣೆಯ ಜೊತೆಗೆ ಒಂಬತ್ತೂ ದಿನಗಳು ಸಹೃದಯ ಕಲಾಸಕ್ತರಿಗೆ ವೈವಿಧ್ಯಮಯ ಕಾರ್ಯಕ್ರಮಗಳಿಗಷ್ಟೇ ಮೀಸಲಾದ ರಾಮಕೃಷ್ಣ ಆಶ್ರಮದಲ್ಲಿ ಜನಜಂಗುಳಿ ಅಷ್ಟಾಗಿ ಇರಲಿಲ್ಲ, ಯಾವುದೇ ಗದ್ದಲವಿರದೇ ಶಾಂತಚಿತ್ತರಾಗಿ ದೇವಿಯ ರೂಪ ಕಣ್ತುಂಬಿಕೊಂಡು ಆಲಿಸಬಹುದಾಗಿತ್ತು. ಅಂದು ಶಿರಸಿಯ ಬಿಸಲುಕೊಪ್ಪ ಗ್ರಾಮದ ಜ್ಯೋತಿ ಹೆಗಡೆಯರಿಂದ ರುದ್ರವೀಣಾ ವಾದನ ಎಂಬುದು ಮುಖ್ಯ ಆಕರ್ಷಣೆಯಾಗಿತ್ತು. ಅದುವರೆಗೂ ರುದ್ರವೀಣೆಯ ಹೆಸರು ಕೇಳಿ ತಿಳಿದಿದ್ದೆನೇ ಹೊರತು ವಾದನದ ಗತಿ ತಿಳಿದಿರಲಿಲ್ಲ.

ರುದ್ರವೀಣಾ ವಾದನ

ಆಶ್ರಮದ ನಿಯಮಕ್ಕೆ ತಕ್ಕಂತೆ ಸಂಜೆ 6 ಗಂಟೆಗೆ ಕರಾರುವಾಕ್ಕಾಗಿ ಯಾವುದೇ ವೈಭವೀಕರಣವಿಲ್ಲದೆ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆ ಪ್ರವೇಶಿಸಿದ ಜ್ಯೋತಿ ಮಧ್ಯಭಾಗದ ಮೆತ್ತನೆಯ ಹಾಸಿಗೆ ಮೇಲೆ ಕುಳಿತು ರುದ್ರವೀಣೆಯನ್ನು ನಾಜೂಕಾಗಿ ಎತ್ತಿಕೊಂಡು ಶೃತಿ, ವಾದ್ಯ ಸಹಕಾರ, ಧ್ವನಿವರ್ಧಕಗಳನ್ನು ಪರಿಶೀಲಿಸಿದರು. ಸುಖಾಸನದಲ್ಲಿ ಕುಳಿತು ಎಡ ಭುಜದ ಮೇಲೊಂದು ಬುರುಡೆ ಮತ್ತು ಬಲಭಾಗದ ಸೊಂಟವನ್ನಾಧರಿಸಿ ಇನ್ನೊಂದು ಬುರುಡೆ ಬರುವಂತೆ ಇಟ್ಟುಕೊಂಡು ನುಡಿಸಲು ಸಜ್ಜಾದದ್ದು ಕೌತುಕ ಮೂಡಿಸಿತ್ತು.

ಅದನ್ನವರು ಹೊತ್ತ ರೀತಿ, ವಿನ್ಯಾಸ ಕುತೂಹಲ ಕೆರಳಿಸಿತ್ತು. ವೀಣೆ, ಸಿತಾರ್‌ ವಾದ್ಯಗಳ ಸಂಗಮದಂತಿದ್ದು ಎರಡು ದೊಡ್ಡ ಬುರುಡೆಗಳ ವಿಶಿಷ್ಟ ಅಳವಡಿಕೆ ಅವೆರಡರಿಂದ ಬೇರ್ಪಡಿಸಿತ್ತು. ಗಮನಿಸಿದ ಮತ್ತೊಂದು ಕೌತುಕವೆಂದರೆ ವಾದ್ಯ ಒಂದಿನಿತೂ ನೆಲದ ಮೇಲಿರದೆ ಪೂರ್ತಿಯಾಗಿ ದೇಹವನ್ನಾಶ್ರಯಿಸಿತ್ತು!

ತಂತಿ ಮೀಟಿದಾಗ ಹೊಮ್ಮಿದ ನಾದ ಗಾಂಭೀರ್ಯಕ್ಕೆ ರೋಮಾಂಚನದ ಅನುಭವ! ವೀಣೆ, ಸಿತಾರ್‌ ವಾದನಗಳ ನಾದ ಚಾಂಚಲ್ಯತೆ ರುದ್ರವೀಣೆಯಲ್ಲಿರದೇ ಮಂದ್ರಸ್ವರದ ಗಂಭೀರತೆಯಿತ್ತು. ಎಡಕಿವಿಯನ್ನು ಬುರುಡೆಗಾನಿಸಿ ಯಮನ್‌ ಕಲ್ಯಾಣ್‌ ರಾಗ ನುಡಿಸುವಿಕೆಯಲ್ಲಿ ಆಕೆ ಮಗ್ನರಾಗಿದ್ದರೆ, ಶ್ರೋತೃಗಳೂ ಸಹ ಮೋಡಿಗೊಳಗಾದಂತೆ ಕಣ್ಮುಚ್ಚಿ ತಲೆದೂಗಿದ್ದರು. ಧ್ರುಪದ್‌ ಶೈಲಿಯ ನುಡಿ ಝೇಂಕಾರ ನಾದಲೋಕದ ದೈವೀಕತೆಯೇ ಭುವಿಗಿಳಿದಂತಿತ್ತು. ಸುಮಾರು ಒಂದೂವರೆ ಗಂಟೆಯ ಆ ಅನುಭವ ಅವರ್ಣನೀಯ!

ಜ್ಯೋತಿಯವರ ಕುರಿತು ಉತ್ತರ ಕನ್ನಡ ಜಿಲ್ಲೆಯವರಾದ ಜ್ಯೋತಿ ಹೆಗಡೆ ಹುಟ್ಟಿದ್ದು ಸಂಗೀತ, ಸಾಹಿತ್ಯಕ್ಕೆ ಹೆಸರಾದ ಧಾರವಾಡದಲ್ಲಿ. ಬೆಳೆದದ್ದು ಬೆಳಗಾವಿ ಮತ್ತು ಶಿರಸಿಯಲ್ಲಿ. ಬಾಲ್ಯದಲ್ಲಿ ಸಿತಾರ್‌ ಕಲಿಕೆಯಲ್ಲಿದ್ದಾಗ ಅದೊಂದು ಸಂದರ್ಭದಲ್ಲಿ ಗುರುಗಳಾದ ವಿದ್ವಾನ್‌ ಬಿಂದು ಮಾಧವ್ ಪಾಠಕರು ನುಡಿಸಿದ ರುದ್ರಾವೀಣಾ ವಾದನದ ಸ್ವರ ಗಾಂಭೀರ್ಯ, ಜ್ಯೋತಿಯ ಮನ ಸೆಳೆದು ಬಹುವಾಗಿ ಕಾಡಿತ್ತು. ಗುರುಗಳಲ್ಲಿ ರುದ್ರವೀಣೆ ಕಲಿಯುವ ಹಂಬಲ ಹೇಳಿಕೊಂಡಾಗ, `ಹೆಣ್ಣುಮಕ್ಕಳು ನಡಿಸುವ ವಾದ್ಯವಲ್ಲ,’ ಎಂದು ಕಟುವಾಗಿ ನಿರಾಕರಿಸಿದ್ದರು.

ಕಲಿಕೆಯ ಉತ್ಸಾಹ

ಕಲಿಕೆಯ ಹುಮ್ಮಸ್ಸು ಹೆಚ್ಚಿಸಿತ್ತು. ಅಪ್ಪನನ್ನೂ ಕರೆದುಕೊಂಡು ಗುರುಗಳ ಬಳಿ ಹೋಗಿ ದಂಬಾಲು ಬಿದ್ದದ್ದಕ್ಕೆ `ಅಟ್ಟದ ಮೇಲೊಂದು ಹಳೆಯ ರುದ್ರವೀಣೆಯಿದೆ, ಅದನ್ನು ನುಡಿಸಲು ಯತ್ನಿಸುವ ನೋಡೋಣ….’ ಆಕೆ ನುಡಿಸಲು ಅಸಾಧ್ಯವೆಂದು ಮನಗಂಡೇ ಹೇಳಿದ್ದರಂತೆ.

ಜೀರ್ಣಾವಸ್ಥೆಯಲ್ಲಿದ್ದ ವಾದ್ಯವನ್ನು ಕಲಿತು ಎರಡೇ ದಿನದಲ್ಲಿ ನಾದ ಹೊಮ್ಮಿಸಿದಾಗ, ಆಕೆಯಲ್ಲಿ ಅಡಗಿದ್ದ ಪ್ರತಿಭೆ ಗುರುತಿಸಿದ ಗುರುಗಳು ಕಲಿಸಲು ಒಪ್ಪಿದರಂತೆ.

`ಹೊಸ ರುದ್ರವೀಣೆ ದೊರೆತು ಕಲಿಕೆ ಶುರು ಮಾಡಿದಾಗ, ನನಗೆ ಹದಿನಾರು ವರ್ಷ. ಕಳೆದ 46 ವರ್ಷಗಳಿಂದಲೂ ರುದ್ರವೀಣೆ ನುಡಿಸುತ್ತಿದ್ದೇನೆ,’ ಎನ್ನುವಾಗ ಜ್ಯೋತಿಯವರ ಮುಖದಲ್ಲಿ ಸಂತಸದ ಮಿಂಚು! ಹೆಚ್ಚಿನ ಸಮಯ ಕಾಲೇಜಿಗೆ ಗೈರಾಗಿ ದಿನಪೂರ್ತಿ ಅಭ್ಯಾಸದಲ್ಲಿ ತೊಡಗಿ ಎರಡೇ ವರ್ಷಕ್ಕೆ `ಅಖಿಲ ಭಾರತೀಯ ಆಕಾಶವಾಣಿ ಸಂಗೀತ ಸ್ಪರ್ಧೆ’ಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನೂ ಪಡೆದದ್ದಲ್ಲದೆ, ಆಲ್ ಇಂಡಿಯಾ ರೇಡಿಯೊ ವಾದಕಿಯೂ ಆದಾಗ ಗುರುಗಳು ಮನಃಪೂರ್ವಕ ಹಾರೈಸಿದ್ದನ್ನು ಜ್ಯೋತಿ ನಮ್ರವಾಗಿ ಸ್ಮರಿಸಿಕೊಳ್ಳುತ್ತಾರೆ.

1000005879

ಆರಂಭದ ಕಲಿಕೆ

ಗುರುಗಳಾದ ಬಿಂದು ಮಾಧವ ಪಾಠಕರು ರುದ್ರವೀಣೆಯನ್ನು ಖಯಾಲ್ ಪ್ರಕಾರದಲ್ಲಿ ನುಡಿಸುತ್ತಿದ್ದರು. ರುದ್ರವೀಣೆಯ ಮೂಲ ಮತ್ತು ಸಾಂಪ್ರದಾಯಿಕ ಪ್ರಕಾರವಾದ ಧ್ರುಪದ್‌ ಶೈಲಿಯಲ್ಲೇ ನುಡಿಸುವ ತುಡಿತದಿಂದಾಗಿ, ಮೈಸೂರಿನ ಇಂದೂಧರ ನಿರೋಡಿಯವರಲ್ಲಿ ಜ್ಯೋತಿಯವರ ಕಲಿಕೆ ಮುಂದುವರಿಯಿತು.

ನಂತರದಲ್ಲಿ ದಿಲ್ಲಿಯ ಉಸ್ತಾದ್‌ ಅಸದ್‌ ಅಲಿ ಖಾನ್‌ ರಲ್ಲಿ ಖಂಡರಬಾನಿ ಧ್ರುಪದ್‌ ಶೈಲಿಯಲ್ಲಿ ಕಲಿಕೆ ಮುಂದುವರಿಸಿದ್ದನ್ನು ಸ್ಮರಿಸಿಕೊಂಡರು. ಮೊದಲ ಗುರುಗಳದ್ದು ಕಿರಾನಾ ಘರಾನಾ, ಎರಡನೇ ಗುರುಗಳದ್ದು ಆಗ್ರಾ ಘರಾನಾ ಹಾಗೂ ಮೂರನೇ ಗುರುಗಳದ್ದು ಜೈಪುರ್‌ ಘರಾನಾ ಶೈಲಿಯಾದ್ದರಿಂದ ಮೂರು ಶೈಲಿಗಳೂ ತನ್ನ ನುಡಿಸುವಿಕೆಯಲ್ಲಿ ಮಿಳಿತವಾಗಿವೆ ಎನ್ನುವ ಜ್ಯೋತಿಯವರ ಮುಖದಲ್ಲಿದ್ದದ್ದು ಸಂತಸ, ಹೆಮ್ಮೆಯ ಮಿಶ್ರಭಾವ.

ರುದ್ರವೀಣೆಯ ಕುರಿತು ಮಾಹಿತಿ ವಾದ್ಯಗಳ ರಾಜನೆಂದು ಗುರುತಿಸಲ್ಪಟ್ಟಿರುವ ರುದ್ರವೀಣೆ ಶಿವನ ವಾದ್ಯವೆಂದೇ ಪ್ರಚಲಿತದಲ್ಲಿದೆ. ದೇವಿ ಪಾರ್ವತಿ ಮಲಗಿದ ಭಂಗಿಯನ್ನನುಸರಿಸಿ ರುದ್ರವೀಣೆಯನ್ನು ಮಹಾದೇವನೇ ಸ್ವತಃ ರಚಿಸಿ ಪಾರ್ವತಿಗೆ ಉಡುಗೊರೆಯಾಗಿ ನೀಡಿ ನುಡಿಸುವುದನ್ನು ಕಲಿಸಿದನಂತೆ. ನಂತರದಲ್ಲಿ ದೇವಿ ಪಾರ್ವತಿ ಸರಸ್ವತಿ ದೇವಿಗೆ ನುಡಿಸಲು ಕಲಿಸಿದ್ದೆಂದು ತ್ರಿಲೋಕ ಸಂಚಾರಿ ನಾರದರು ಮಾತೆ ಸರಸ್ವತಿಯಿಂದ ನುಡಿಸುವುದನ್ನು ಕಲಿತು ಆ ವಾದ್ಯವನ್ನು ಭೂಲೋಕಕ್ಕೆ ಪರಿಚಯಿಸಿದರೆಂಬ ಪ್ರತೀತಿಯಿದೆ.

ಕ್ರಿ.ಪೂ. ಹನ್ನೆರಡನೇ ಶತಮಾನ ಸಾಮವೇದ ಕಾಲದಲ್ಲಿ ಯಜ್ಞ, ಯಾಗಾದಿಗಳಲ್ಲಿ ಋಷಿಮುನಿಗಳಷ್ಟೇ ನುಡಿಸುತ್ತಿದ್ದು ಧ್ಯಾನದ ಸಲುವಾಗಿಯೇ ಬಳಸಲಾದ ಸಾಧನವಿದು ಎಂಬುದು ಉಲ್ಲೇಖನೀಯ. ಉಳಿದ ತಂತಿ ವಾದ್ಯಗಳ ಕೋಮಲತೆ, ಚಾಂಚಲ್ಯ ರುದ್ರವೀಣೆಯಲಿಲ್ಲ. ಆಳವಾದ ನಾದ ಗಾಂಭೀರ್ಯ ಇದ್ದು ಮನರಂಜನೆಗಾಗಿ ನುಡಿಸುವ ವಾದ್ಯವಲ್ಲವೆಂದು ಪರಿಗಣಿಸಲಾಗಿದೆ. ನಂತರದಲ್ಲಿ ಈ ವಾದ್ಯ ವೇದಿಕೆಯೇರಲು ಮೊಘಲರು ಕಾರಣರಾದರಂತೆ.

ಸಾಂಪ್ರದಾಯಿಕ ರುದ್ರವೀಣೆ ಸುಮಾರು ಐದರಿಂದ ಏಳು ಕೆ.ಜಿಯವರೆಗೆ ತೂಕವಿದ್ದು ಎರಡು ಸಮತೂಕದ ಬುರುಡೆಗಳು ಅಳವಡಿಸಲ್ಪಟ್ಟಿರುತ್ತವೆ. ಆಳವಾದ ಮಂದ್ರ ಸ್ವರ ಹೊರಡಿಸಲು ಸಹಕಾರಿಯಾಗುವಂತೆ ತಂತಿಯ ಗೇಜು ದಪ್ಪವಿರುತ್ತದೆ. ವಜ್ರಾಸನದಲ್ಲಿ ಕುಳಿತು ನುಡಿಸುವ ಈ ವಾದ್ಯ ಹಿಡಿದುಕೊಳ್ಳುವ ರೀತಿಯೇ ವಿಶಿಷ್ಟ. ಎಡಭಾಗ ಮೇಲ್ಮುಖವಾಗಿ ಹಿಡಿಯಲ್ಪಟ್ಟು ಒಂದು ಬುರುಡೆ ಎಡಭುಜವನ್ನೂ ಮತ್ತೊಂದು ಬುರುಡೆ ಬಲಸೊಂಟ ಭಾಗದಲ್ಲೂ ಮತ್ತು ವಾದಕರ ಎಡಗಿವಿ ಬುರುಡೆಗಾನಿಸಲ್ಪಟ್ಟಿರುತ್ತದೆ. ಸುಖಾಸನದಲ್ಲಿ ಕುಳಿತು ನುಡಿಸುವ ಪದ್ಧತಿಯೂ ಚಾಲ್ತಿಯಲ್ಲಿದೆ. ಹಿಂದೂಸ್ಥಾನಿ ಪ್ರಕಾರದಲ್ಲಿ ನುಡಿಸುವ ವಾದ್ಯವಿದು.

ಆಕಾಶಾಣಿ ಕಲಾವಿದೆ

ಅಕಾಶಾಣಿಯ ಟಾಪ್‌ ಎ ಕಲಾವಿದೆಯಾದ ಜ್ಯೋತಿಗೆ ದೇಶಾದ್ಯಂತಷ್ಟೇ ಅಲ್ಲದೆ, ವಿದೇಶಗಳಲ್ಲೂ ರುದ್ರವೀಣೆಯ ಝೇಂಕಾರ ಅನುರಣಿಸುವಂತೆ ಮಾಡಿದೆ ಕೀರ್ತಿ ಸಲ್ಲುತ್ತದೆ. ಇದು ಗಂಡು ವಾದ್ಯವಾದ್ದರಿಂದ ಸ್ತ್ರೀಯರು ನುಡಿಸಬಾರದೆಂದು ಹಾಗೊಂದು ವೇಳೆ ನುಡಿಸಿದ್ದೇ ಆದಲ್ಲಿ ಮಕ್ಕಳಾಗದೆಂಬ ಅಭಿಪ್ರಾಯ ಇದ್ದುದರಿಂದ, ಸ್ತ್ರೀಯರು ಕಲಿಯಲು ಹಿಂಜರಿದಿರಬಹುದು.

ಆದರೆ ಇದು ಮಿಥ್ಯೆ ಎಂಬುದಕ್ಕೆ ಸ್ವತಃ ಜ್ಯೋತಿ ಜ್ವಲಂತ ಉದಾಹರಣೆ. ಎಳವೆಯಲ್ಲೇ ಕಲಿಕಿ ಶುರು ಮಾಡಿ ಮುಂದೆ ಸಂಸಾರಸ್ಥರೂ ಆಗಿ ಆರೋಗ್ಯವಂತ ಗಂಡುಮಗುವಿನ ತಾಯಿಯೂ ಆಗಿದ್ದು, ಮತ್ತೀಗ ಎರಡು ಮೊಮ್ಮಕ್ಕಳನ್ನೂ ಹೊಂದಿರುವುದು ರುದ್ರವೀಣೆಯ ಕುರಿತಾಗಿ ಇದ್ದ ಅಭಿಪ್ರಾಯ ತಪ್ಪು ಕಲ್ಪನೆ ಎಂಬುದನ್ನು ನಿಚ್ಚಲಗೊಳಿಸಿದೆ.

ಪ್ರಶಸ್ತಿ ಪುರಸ್ಕಾರಗಳು

ಇವರ ಪ್ರತಿಭೆಗೆ ಅನೇಕ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾದಗಳು ಹೀಗಿವೆ :

ಧ್ರುಪದಮಣಿ ಪ್ರಶಸ್ತಿ

ನಾದನಿಧಿ ಪುರಸ್ಕಾರ

ಸರ್ದಾರ್‌ ಪಟೇಲ್ ‌ನ್ಯಾಶನಲ್

ಇಂಟಗ್ರಿಟಿ ಪ್ರಶಸ್ತಿ

ಮಧುನ್‌ ರತ್ನ ಪ್ರಶಸ್ತಿ

ಕನಕಶ್ರೀ ಪ್ರಶಸ್ತಿ

ಕೆರೆಮನೆ ಶಂಭು

ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿ

ಒರಿಸ್ಸಾ ಧ್ರುಪದ್‌ ರತ್ನಜ್ಯೋತಿ ಪ್ರಶಸ್ತಿ

ನಾರೀಶಕ್ತಿ ಪ್ರಶಸ್ತಿ

ಪ್ರಣತಿ ಆಚಾರ್ಯ ಪುರಸ್ಕಾರ

ನಾದಮಾಧವ ಪ್ರಶಸ್ತಿ

ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಜ್ಯೋತಿ ಹೆಗಡೆ, ಕಳೆದ ಎಂಟು ವರ್ಷಗಳಿಂದಲೂ ಶಿರಸಿಯ ಬಿಸಲುಕೊಪ್ಪ ಗ್ರಾಮದ ತಮ್ಮ ಮನೆಯನ್ನು ವೀಣಾಗ್ರಾಮವಾಗಿಸಿ ಗುರುಕುಲ ಪದ್ಧತಿಯಲ್ಲಿ ನಾದೋಪಾಸನೆ ನಿರಂತರವಾಗಿರಿಸಿದ್ದಾರೆ. ಅನೇಕರಿಗೆ ಕಲಿಸುವುದರ ಜೊತೆಗೆ ವರ್ಷಕ್ಕೊಮ್ಮೆ `ಹಿಮಾಲಯನ್‌ ಯೂನಿವರ್ಸ ಟ್ರಸ್ಟ್’ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಾವಿದರನ್ನು ಆಹ್ವಾನಿಸಿ, ಗೌರವಿಸಲಾಗುತ್ತದೆ. ವಿದೇಶೀ ವಿದ್ಯಾರ್ಥಿಗಳೂ ಇವರ ಮನೆಯಲ್ಲಿ ತಂಗಿ ರುದ್ರವೀಣೆ ಕಲಿಕೆಯಲ್ಲಿದ್ದಾರೆ.

ಪತಿ ಜಿ.ಎಸ್‌ ಹೆಗಡೆ ಇವರ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ಆಧುನಿಕ ತಂತ್ರಜ್ಞಾನಗಳ ಅರಿವು ಮೂಡಿಸುವ ಮೂಲಕ ಮಗಸೊಸೆಯ ಬೆಂಬಲ ಇದೆ.

ದಿನಚರಿಯ ಪಕ್ಷಿನೋಟ ಕಾರ್ಯಕ್ರಮಗಳ ನಡುವೆಯೂ ಇವರ ಶಿಸ್ತುಬದ್ಧ ಜೀವನಶೈಲಿ, ಚಟುವಟಿಕೆಯುಕ್ತ ದಿನಚರಿ ಬೆರಗು ಮೂಡಿಸುತ್ತದೆ. ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಒಂದು ತಾಸು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನದಲ್ಲಿ ತೊಡಗುವಿಕೆಯನ್ನು ಸುಮಾರು ಮೂರು ದಶಕಗಳಿಂದಲೂ ನಿರಂತರವಾಗಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳೊಡನೆ ವಾರ್ತಾ ಲಾಪವೆಲ್ಲ ರುದ್ರವೀಣಾ ವಾದನದ ಕುರಿತವಾಗಿಯೇ ಇದ್ದು, ರಾತ್ರಿ ಎರಡು ಗಂಟೆಯವರೆಗೂ ಅಭ್ಯಾಸ ಮಾಡುತ್ತೇನೆಂದು ಹೇಳಿದಾಗ ಮೂಕವಿಸ್ಮಿತಳಾಗಿದ್ದೆ. ಇವನ್ನು ಇವರಿಗೆ ತೋಟಗಾರಿಕೆ, ಪ್ರಾಣಿಪಕ್ಷಿ ಸಾಕುವಿಕೆಯಷ್ಟೇ ಅಲ್ಲದೆ, ಚಿತ್ರಕಲೆಯಲ್ಲೂ ಹಿಡಿತ ಸಾಧಿಸಿರುವ ಜ್ಯೋತಿ, ರುಚಿಕರ ಖಾದ್ಯ ತಯಾರಿಯಲ್ಲೂ ಎತ್ತಿದ ಕೈ! ಸದ್ಯಕ್ಕೆ 7 ನಾಯಿ, 12 ಬೆಕ್ಕು, 2 ಆಕಳುಗಳು ಇವರ ಮನೆಯನ್ನು ಆಶ್ರಯಿಸಿ ಜ್ಯೋತಿಯವರ ಪ್ರೀತಿ ವಾತ್ಸಲ್ಯದ ಆರೈಕೆಯಲ್ಲಿವೆ.

ಸ್ವಲ್ಪ ವರ್ಷಗಳ ಹಿಂದೆ ಸುಮಾರು 50 ಹಸುಗಳಿದ್ದು, ಹಾಲು ಹಿಂಡು ಕಾರ್ಯ ಇವರದೇ ಆಗಿತ್ತೆಂದು ಹೇಳಿದಾಗ ಅದ್ಭುತ ಮಹಿಳೆಯೇ ಸೈ ಎಂದು ಉದ್ಗರಿಸುವಂತಾಗಿತ್ತು. ಹಿರಿಯ ನಾಗರಿಕ ಪಟ್ಟವನ್ನು ಅಲಂಕರಿಸಿದ ಜ್ಯೋತಿಯರಲ್ಲಿ ಏರು ಯದ ಜೊತೆಗೆ ಉತ್ಸಾಹ ಏರಮುಖದಲ್ಲಿರುವುದು ವಿಸ್ಮಯ ತರಿಸಿತು. ಜೊತೆಗೆ ಅವರೊಡನೆ ಒಡನಾಡುವವರಲ್ಲೂ ಜೀವನೋತ್ಸಾಹ ಪಸರಿಸುವಂತಾಗಿ ಭೇಟಿ ಮಾತ್ರಕ್ಕೆ ಧನ್ಯೋಸ್ಮಿ ಎನಿಸಿತ್ತು.

ಲತಾ ಹೆಗಡೆ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ