ಕಥೆ ಭೋಜರಾಜ ಸೊಪ್ಪಿಮಠ

ಅಪ್ಪನ ಕಠಿಣ ಪರಿಶ್ರಮದ ಮಧ್ಯೆ ಹೇಗೋ ನಾನು ವಿದ್ಯಾವಂತನಾಗಿ ಬೆಳೆದೆ. ನವನಾಗರಿಕತೆ ನಡುವೆ ಸಂಸ್ಕಾರ ಮರೆತಂತಾಯಿತು. ಮುಂದೆ ಅಪ್ಪನ ಅಗತ್ಯಗಳಿಗೆ ನನ್ನಿಂದ ಸ್ಪಂದಿಸಲು ಸಾಧ್ಯವಾಯಿತೇ……?

ಸಮಯ ಬೆಳಗ್ಗೆ ಒಂಬತ್ತು ಗಂಟೆಯ ಸಮೀಪ ಆಗುತ್ತಿತ್ತು. ಅವಸರವಾಗಿ ಆಫೀಸಿಗೆ ಹೋಗಲೆಂದು ತಯಾರಾಗುತ್ತಿದ್ದೆ. ಅಷ್ಟರಲ್ಲಾಗಲೇ ಮೊಬೈಲ್ ‌ರಿಂಗಣಿಸಿತು. ಅವಸರದ ಸಮಯದಲ್ಲಿ ಇದೊಂದು ಕಡಿಮೆಯಾಗಿತ್ತು ಎಂದುಕೊಳ್ಳುತ್ತಲೇ ಹೋಗಿ ಮೊಬೈಲ್‌ ಎತ್ತಿಕೊಂಡೆ. ನೋಡಿದರೆ ಅಣ್ಣ ಫೋನ್‌ ಮಾಡಿದ್ದ. ಈ ಸಮಯದಲ್ಲಿ ಬೇರೆ ಯಾರೋ ಫೋನ್‌ ಮಾಡಿದ್ದರೆ, ಆಫೀಸಿಗೆ ಹೋದ ಮೇಲೆ ನಿಧಾನವಾಗಿ ಮಾತನಾಡುತ್ತಿದ್ದೆ. ಆದರೆ ಫೋನ್‌ ಕರೆ ಬಂದಿದ್ದು ಅಣ್ಣನಿಂದ. ಹಾಗಾಗಿ ಕರೆ ಸ್ವೀಕರಿಸಿ, “ಹಲೋ….” ಎಂದೆ. ಅತ್ತ ಕಡೆಯಿಂದ ಅಣ್ಣ ಅಳುತ್ತಲೇ ಮಾತನಾಡಿದ, “ಶ್ರೀಕಾಂತ್‌….. ಅಪ್ಪ…. ಅಪ್ಪ…. ತೀರಿ ಹೋದ್ರು,” ಎಂದು ಅಳುತ್ತಲೇ ಹೇಳಿದ.

“ಯಾವಾಗ…..?” ನಾನು ಪ್ರಶ್ನಿಸಿದೆ. ಹಾಗೆ ಪ್ರಶ್ನಿಸುವಾಗ ನನ್ನ ಮಾತಿನಲ್ಲಿ ಉದ್ವೇಗವಾಗಲಿ, ನೋವಾಗಲಿ, ಅಳುವಾಗಲಿ, ಆತಂಕವಾಗಲಿ ಹೀಗೆ ಯಾವುದೂ ಇರಲಿಲ್ಲ.

“ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ. ನಿನ್ನೆಯಿಂದಲೇ ಆತನ ಸ್ಥಿತಿ ಬದಲಾಗಿತ್ತು. ಒಂದಿಷ್ಟು ಎಳನೀರು ಕೂಡ ಕುಡಿಯಲಿಲ್ಲ. ಮನೆಯಲ್ಲಿಯೇ ಸೈನ್‌ ಹಚ್ಚು ಏರ್ಪಾಡು ಮಾಡಿಸಿದ್ದೆ, ಡಾಕ್ಟರ್‌ ಅಗತ್ಯವಿಲ್ಲವೆಂದರು. ಈಗ ಸ್ವಲ್ಪ ಹೊತ್ತಿನ ಮುಂಚೆ…..” ಅಣ್ಣನಿಗೆ ಮುಂದೆ ಮಾತನಾಡಲು ಆಗಲಿಲ್ಲ.

“ಸರಿ ನಾನೀಗಲೇ ಬರ್ತಿದ್ದೇನೆ,” ಎಂದಷ್ಟೇ ಹೇಳಿದೆ.

“ಆಯ್ತು ಬಾ, ನೀನು ಬಂದ ಮೇಲೇನೇ ಅಂತ್ಯಕ್ರಿಯೆ ಯಾವಾಗಾ ಏನು ಎಂದು ಎಲ್ಲಾ ವಿಚಾರ ಮಾಡೋಣ,” ಎಂದ ಅಣ್ಣ.

“ಆಯ್ತು…..” ಎಂದು ಹೇಳಿದವನೇ ಆಫೀಸ್‌ ಗೆ ರಜೆ ಹೇಳಿ, ಹೆಂಡತಿಗೂ ವಿಷಯ ತಿಳಿಸಿ ಊರಿನತ್ತ ಹೋಗಲು ಒಂದು ಕಾರಿಗೆ  ವ್ಯವಸ್ಥೆ ಮಾಡಿದೆ. ಕಾರಿನಲ್ಲಿ ಹೋಗುವಾಗಲೇ ದಾರಿಗುಂಟ ಯಾರ್ಯಾರು ಸಂಬಂಧಿಕರಿಗೆ ತಿಳಿಸಬೇಕೋ ಅವರಿಗೆಲ್ಲ ತಿಳಿಸತೊಡಗಿದೆ.

ಅಮ್ಮ ಅಪ್ಪರಿಗೆ ನಾನು, ಅಣ್ಣ ಇಬ್ಬರು ಗಂಡು ಮಕ್ಕಳು, ಜೊತೆಗೆ ಇಬ್ಬರು ಹೆಣ್ಣುಮಕ್ಕಳು. ಅಕ್ಕತಂಗಿಯರಿಬ್ಬರೂ ಗಂಡನ ಮನೆಯಲ್ಲಿ ಚೆನ್ನಾಗಿಯೇ ಇದ್ದರು. ನಮ್ಮದು ಆರ್ಥಿಕವಾಗಿ ಅಷ್ಟೊಂದು ಸುಸ್ಥಿತಿಯಲ್ಲಿ ಇಲ್ಲದ ಮಧ್ಯಮ ವರ್ಗದ ಜೀವನ. ಅಪ್ಪನ ದುಡಿಮೆ ಒಂದರಲ್ಲಿಯೇ ನಾಲ್ಕು ಜನ ಮಕ್ಕಳ ಜೀವನ ನಡೆಯುತ್ತಿದ್ದುದರಿಂದ ಹೆಚ್ಚಿನ ಆಡಂಬರವೇನೂ ನಮ್ಮಲ್ಲಿ ಇರಲಿಲ್ಲ.

ಏಕೆಂದರೆ ದುಡಿದದ್ದು ಹೊಟ್ಟೆ ಬಟ್ಟೆಗೆ ಸಾಕಾಗುತ್ತಿತ್ತು. ಅಣ್ಣ ಎಲ್ಲರಿಗಿಂತ ಹಿರಿಯನಾಗಿದ್ದರಿಂದ ಊರಲ್ಲಿನ ಪ್ರಾಥಮಿಕ ಶಾಲೆ ಮತ್ತು ಪಕ್ಕದೂರಿನಲ್ಲಿನ ಪ್ರೌಡಶಾಲೆ ಶಿಕ್ಷಣ ಮುಗಿಸಿ ಅಪ್ಪನ ಜೊತೆಯಲ್ಲಿ ಕೃಷಿ ಚಟುವಟಿಕೆಗೆ ಸಹಾಯಕನಾಗಿ ನಿಂತ. ಹೆಣ್ಣುಮಕ್ಕಳಿಗೂ ಪ್ರಾಥಮಿಕ ಶಿಕ್ಷಣ ಮುಗಿಸುತ್ತಲೇ ಅಮ್ಮ ಹೊಲದ ಮತ್ತು ಮನೆಯ ಎಲ್ಲಾ ಕೆಲಸಗಳನ್ನು ಕಲಿಸತೊಡಗಿದಳು. ಒಳ್ಳೆಯ ಸಂಬಂಧ ಕಂಡ ಕೂಡಲೇ ಮದುವೆ ಕೂಡ ಮಾಡಿಬಿಟ್ಟರು.

ನಾನು ಕಿರಿಯ ಮಗನೆಂಬ ಮಮಕಾರವೇ, ಮುಂದುವರಿದು ಓದುತ್ತಿರುವ ಈ ಜಗದ ಬದಲಾವಣೆಯನ್ನು ಅಪ್ಪ ಅರ್ಥ ಮಾಡಿಕೊಂಡನೋ ಅಥವಾ ಮುಂದೆ ನಾನಿನ್ನೂ ಓದಬೇಕು ಎಂದು ಹಠ ಮಾಡಿದ ನನ್ನ ಮಾತಿಗೆ ಕಟ್ಟುಬಿದ್ದನೋ ಒಟ್ಟಿನಲ್ಲಿ ನನ್ನನ್ನು ಮುಂದೆ ಓದಲು ಕಾಲೇಜಿಗೆ ಕಳಿಸಿದ. ಆ ಸಮಯದಲ್ಲಿ ನನಗೂ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಚೆನ್ನಾಗಿ ಓದಿದೆ. ಡಿಗ್ರಿ ಮುಗಿಯಿತು. ಸರ್ಕಾರದಿಂದ ನಡೆಸುವ ಪರೀಕ್ಷೆ ಬರೆದೆ. ಕಂದಾಯ ಇಲಾಖೆಯಲ್ಲಿ ಮ್ಯಾನೇಜರ್‌ ಹುದ್ದೆ ಸಿಕ್ಕಿತು. ಮನೆಗೆ ಬಂದು ಹೇಳಿದಾಗ ಅಪ್ಪನ ಕಂಗಳಲ್ಲಿ ಹೊಳಪು ಮೂಡಿತು.

`ನೀನೊಬ್ಬನಾದರೂ ಅದೇ ಕೃಷಿ ನೆಚ್ಚಿಕೊಳ್ಳದೆ ಸರ್ಕಾರಿ ನೌಕರಿ ಪಡೆದೆಯಲ್ಲ ಅಷ್ಟು ಸಾಕು ಬಿಡು,’ ಎಂದು ನನ್ನ ಸಾಧನೆ ನೆನಪಿಸಿಕೊಂಡಾಗ ಒಮ್ಮೊಮ್ಮೆ ಹೇಳುತ್ತಿದ್ದ. ನನಗಿಂತಲೂ ಅಪ್ಪನೇ ಹೆಚ್ಚು ಸಂತಸಪಡುತ್ತಿದ್ದ.

ಮನೆ ಹಾಗೂ ಹೊಲದ ಕೆಲಸಗಳಲ್ಲಿ ಅಮ್ಮನಿಗೆ ನೆರವಾಗುತ್ತಿದ್ದ ಅಕ್ಕ ತಂಗಿಯರು ಯಾವಾಗ ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದರೋ ಅಂದಿನಿಂದ ಅಮ್ಮನಿಗೆ ಕೆಲಸದ ಹೊರೆ ಜಾಸ್ತಿಯಾಯಿತು. ವಯಸ್ಸಾಗುತ್ತಿದ್ದಂತೆ ಮೊದಲಿನ ಹಾಗೆ ಕೆಲಸ ನಿಭಾಯಿಸಲು ಆಗುತ್ತಿರಲಿಲ್ಲ. ಕೆಲಸದ ಒತ್ತಡದಲ್ಲಿ ಸರಿಯಾಗಿ ಊಟ ಮಾಡದೆ ಆರೋಗ್ಯದ ಕಡೆಗೂ ಗಮನ ಕೊಡದೆ ಆಗಾಗ ಅನಾರೋಗ್ಯದಿಂದ ಮಲಗಿ ಬಿಡುತ್ತಿದ್ದಳು.

ಇದನ್ನೆಲ್ಲಾ ಮನಗಂಡ ಅಪ್ಪ, ಹಿರಿಯನ ಮದುವೆ ಮಾಡಿಬಿಟ್ಟರೆ ಬರುವ ಸೊಸೆ ಮನೆತನದ ಎಲ್ಲಾ ಜವಾಬ್ದಾರಿ ತೆಗೆದುಕೊಂಡು  ಅಮ್ಮ ತುಸು ನೆಮ್ಮದಿಯಿಂದ ಇರಬಹುದು ಎಂದು ಭಾವಿಸಿ ಅಣ್ಣನಿಗಾಗಿ ವಧು ಹುಡುಕಲು ಪ್ರಾರಂಭಿಸಿದರು.

`ಹಿರೀಮಗ ಮತ್ತು ಕಿರೀಮಗ ಹೀಗೆ ಪ್ರತ್ಯೇಕವಾಗಿ ಎರಡು ಬಾರಿ ಮದುವೆ ಮಾಡುವುದಕ್ಕಿಂತ ಇಬ್ಬರದೂ ಒಟ್ಟಿಗೆ ಮದುವೆ ಮಾಡಿಬಿಟ್ಟರೆ ಒಂದೇ ಖರ್ಚಿನಲ್ಲಿಯೇ ಇಬ್ಬರ ಮದುವೆ ನಡೆದು ಹೋಗುತ್ತದೆ. ಅಲ್ಲದೇ ಕಿರಿಯ ಮಗನನ್ನು ಬಿಟ್ಟು ಮದುವೆ ಮಾಡಬಾರದೆಂಬ ಪದ್ಧತಿ ಪಾಲಿಸಿದಂತಾಗುತ್ತದೆ. ಜೊತೆಗೆ ಕಿರಿಯನೂ ಈಗ ತೀರಾ ಚಿಕ್ಕವನಲ್ಲ. ಹೇಗೂ ಮದುವೆಯ ವಯಸ್ಸಿಗೆ ಬಂದಿದ್ದಾನೆ. ಇಬ್ಬರಿಗೂ ಮದುವೆ ಮಾಡೋಣ,’ ಎಂದಳು ಅಮ್ಮ.

ಅಮ್ಮನ ಮಾತು ಅಪ್ಪನಿಗೆ ಆ ಸಮಯದಲ್ಲಿ ಸರಿಯೆನಿಸಿತು. ಅವರಿಬ್ಬರೂ ಸೇರಿ ನಮ್ಮಿಬ್ಬರ ಮದುವೆಗೆ ಒಪ್ಪಿಕೊಂಡರು.

ಅಂದುಕೊಂಡಂತೆ ಅಣ್ಣನ ಜೊತೆ ಜೊತೆಗೆ ನನ್ನ ಮದುವೆಯೂ ನಡೆದುಹೋಯಿತು. ಸೊಸೆಯಾಗಿ ಬಂದ ಇಬ್ಬರೂ ಹೆಣ್ಣುಮಕ್ಕಳು ಅಪ್ಪ ಅಮ್ಮರಿಗೆ ವಿಧೇಯರಾಗಿ, ಅವರು ಹೇಳಿದಂತೆ ಕೇಳುತ್ತಾ, ತಮಗೆ ಗೊತ್ತಾಗದಿದ್ದಾಗ ಅಮ್ಮನ ಸಲಹೆ ಪಡೆದುಕೊಂಡು ಮನೆತನವನ್ನು ನಿಭಾಯಿಸಿಕೊಂಡು ಹೋಗಲು ಪ್ರಾರಂಭಿಸಿದರು.

ಆಗ ಅಮ್ಮನಿಗೆ ಒಂದಷ್ಟು ಕೆಲಸ ಹುಗರವಾಯಿತಾದರೂ, ಮೊದಲಿನಿಂದ ಚಟುವಟಿಕೆಯಲ್ಲಿದ್ದಳು ತನಗೆ ಸಾಧ್ಯವಾದ ಕೆಲಸಗಳನ್ನು ಮಾಡುತ್ತಾ ಸೊಸೆಯರಿಗೆ ಸಹಾಯ ಮಾಡುತ್ತಿದ್ದಳು.

ನಾನು ಕೆಲಸ ಮಾಡುವ ಆಫೀಸು ನಮ್ಮೂರಿನಿಂದ ತುಂಬಾ ದೂರದಲ್ಲಿ ಇದ್ದುದರಿಂದ ದಿನಾಲೂ ಊರಿಗೆ ಬಂದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅಲ್ಲಿಯೇ ಇದ್ದುಕೊಂಡು ವಾರಕ್ಕೊಂದು ಬಾರಿ, ರಜಾ ದಿನಗಳಲ್ಲಿ ಹೀಗೆ ಊರಿಗೆ ಬಂದು ಹೋಗುತ್ತಿದ್ದೆ. ಹೀಗೆ 3-4 ತಿಂಗಳುಗಳು ಕಳೆದವು.

ಒಂದು ಬಾರಿ ಅಮ್ಮ, “ನೋಡಪ್ಪ, ಹೆಂಡತಿ ಇದ್ದರೂ ಇಲ್ಲದಂಗೆ ಅಲ್ಲಿ ಹೊರಗೆಲ್ಲೋ ಊಟ ಮಾಡುವುದು, ಓಡಾಡುವುದು ಇವೆಲ್ಲ ಏನೂ ಬೇಡ. ಅಲ್ಲಿಯೇ ಒಂದು ಮನೆ ನೋಡಿಕೋ. ಹೆಂಡತಿಯನ್ನು ಜೊತೆಗೆ ಕರೆದುಕೊಂಡು ಹೋಗು. ಅಗತ್ಯದ ಸಂದರ್ಭಗಳಲ್ಲಿ ಊರಿಗೆ ಬರುವಿರಂತೆ. ಹೆಂಡತಿನಾ ಇಲ್ಲಿ ಬಿಟ್ಟು, ನೀನು ಅಲ್ಲಿರುವುದರಲ್ಲಿ ಏನಿದೆ ಸುಖ? ಇಲ್ಲಿ ನಾವು ಹೇಗೋ ನೋಡಿಕೊಂಡು ಹೋಗ್ತೀವಿ,” ಎಂದಳು.

ಈ ವಿಷಯವನ್ನು ನಾನೇ ಅಪ್ಪ ಅಮ್ಮನಲ್ಲಿ ಪ್ರಸ್ತಾಪಿಸಬೇಕು ಎಂದುಕೊಂಡಿದ್ದ ನನಗೆ ಅಮ್ಮನೇ ಈ ರೀತಿಯ ಸಲಹೆ ಕೊಟ್ಟಿದ್ದು ಒಳಗೊಳಗೇ ಖುಷಿ ಕೊಟ್ಟಿತು. ಒಂದು ವಾರದಲ್ಲಿ ಬಾಡಿಗೆ ಮನೆ ಹುಡುಕಿದೆ. ಮನೆಯಲ್ಲಿ ತಿಳಿಸಿ ಮುಂದಿನ ಎರಡು ವಾರಗಳಲ್ಲಿ ಹೆಂಡತಿಯೊಂದಿಗೆ ಸಿಟಿಗೆ ಬಂದೆ.

ನಾನು ಸಿಟಿಯಲ್ಲಿದ್ದರೂ ರಜಾ ದಿನಗಳಲ್ಲಿ ಬೆಳಗ್ಗೆ ಊರಿಗೆ ಬಂದರೆ, ಹೆಂಡತಿ ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಎಂದು ಹೇಳಿ ಸಾಯಂಕಾಲವೇ ಹೊರಟುಬಿಡುತ್ತಿದ್ದೆ.

ಹೀಗೆ ಒಂದಾರು ತಿಂಗಳು ಕಳೆಯಿತು. ತಿಂಗಳಲ್ಲಿ ಪ್ರತಿವಾರ ಹೋಗುವುದರಲ್ಲಿ ಏನು ಅರ್ಥವಿದೆ. ಅಗತ್ಯವಿದ್ದರೆ ಹೋದರಾಯಿತು ಎಂದುಕೊಂಡು ಒಂದೊಂದು ವಾರ ತಪ್ಪಿಸತೊಡಗಿದೆ. ಬರದಿರುವುದಕ್ಕೆ ಕಾರಣ ಕೊಡುತ್ತಿದ್ದೆ. ಕೆಲವೊಮ್ಮೆ ಕಾರಣಗಳನ್ನು ನಾನೇ ಸೃಷ್ಟಿಸುತ್ತಿದ್ದೆವು. ಇಷ್ಟರಲ್ಲಾಗಲೇ ಅಪ್ಪ, ಅಣ್ಣ, ಅಮ್ಮ, ಅತ್ತಿಗೆ ಎಲ್ಲರೂ ಒಂದೆರಡು ಬಾರಿ ಸಿಟಿಗೆ ಬಂದು ಮನೆಯಲ್ಲಿ ಒಂದೆರಡು ದಿನ ಇದ್ದು ಹೋಗಿದ್ದರು.

ಅಮ್ಮನಿಗೆ ಕೆಲಸ ಹಗುರವೇನೋ ಆಯಿತು. ಆದರೂ ಆರೋಗ್ಯ ಸುಧಾರಿಸಲಿಲ್ಲ. ದಿನದಿಂದ ದಿನಕ್ಕೆ ಕೃಶಕಾಯಳಾಗತೊಡಗಿದಳು. ಡಾಕ್ಟರರಿಗೆ ತೋರಿಸಿದರೆ ಆಗಿನ ಸಂದರ್ಭದಲ್ಲಿ ಉಪಚಾರ ಮಾಡಿ ಕಳಿಸುತ್ತಿದ್ದರು. ನಾನು ಆಗಾಗ ವಿಚಾರಿಸುವುದು, ಆಸ್ಪತ್ರೆಯ ಖರ್ಚಿಗಾಗಿ ಹಣ ಕೊಟ್ಟು ಬರುವುದು ಮಾಡುತ್ತಿದ್ದೆ. ಮುಂದಿನ ಎರಡು ತಿಂಗಳು ಅಷ್ಟೇ. ಅಮ್ಮ ತನ್ನ ಜೀವನವನ್ನು ಮುಗಿಸಿಬಿಟ್ಟಳು.

dobara-story

ಯಾವಾಗ ಅಪ್ಪನ ಸಂಧ್ಯಾ ಸಮಯದಲ್ಲಿ ಅಮ್ಮ ನಿಲ್ಲಲಾಯಿತೋ ಆಗಿನಿಂದ ಅಪ್ಪನ ದಿನಚರಿಯಲ್ಲಿಯೂ ಬದಲಾವಣೆ ಆಗತೊಡಗಿತು. ಬಹುತೇಕ ಅಪ್ಪ ಅಂತರ್ಮುಖಿಯಾದ. ತನಗೆ ಸಾಧ್ಯವಾಗದಿದ್ದರೂ ಹೆಚ್ಚು ಹೊತ್ತು ಹೊಲದ ಕೆಲಸಗಳಲ್ಲಿ ತೊಡಗಿಸಿಕೊಳ್ಳತೊಡಗಿದ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮನದಲ್ಲಿ ಖಿನ್ನತೆ ಮೂಡತೊಡಗಿತ್ತು. ಒಂಟಿ ಜೀವನ ಕಾಡತೊಡಗಿತ್ತು. ಆಸ್ಪತ್ರೆಗೆ ಕರೆದೊಯ್ದರೆ ದೇಹಕ್ಕೆ ಔಷಧಿ ಕೊಡುತ್ತಿದ್ದರು.

ಮನಸ್ಸಿಗೆ ಆದ ಕಾಯಿಲೆಗೆ ಔಷಧಿಯೇ ಇಲ್ಲವಾಗಿತ್ತು. ಅಣ್ಣನ ಜೊತೆ ಮಾತನಾಡುತ್ತಾ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆ. ಔಷಧೀಯ ಖರ್ಚಿಗೆ ಬೇಕಾದರೆ ಕೇಳು ಹಣ ಕಳಿಸುತ್ತೇನೆ ಎಂದು ಹೇಳುತ್ತಿದ್ದೆ. ಯಾವಾಗಲಾದರೂ ಊರಿಗೆ ಹೋದರೆ, ನನ್ನನ್ನು ಕಂಡ ಕೂಡಲೇ ಅಪ್ಪ ಗೆಲುವಾಗುತ್ತಿದ್ದ. ನನ್ನ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದ. ಹೆಂಡತಿ ಮಕ್ಕಳ ಆರೋಗ್ಯದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದ.

`ಹುಡುಗರನ್ನು ಕರೆದುಕೊಂಡು ಬರಬೇಕಲ್ಲ, ಬಹಳ ದಿನಗಳಾಯಿತು ನೋಡದೇ….’ ಎಂದು ಹುಸಿ ಬೇಜಾರನ್ನು ತೋರಿಸುತ್ತಿದ್ದ.

ಏನಾದರೂ ನೆಪ ಹೇಳಿ ಹೊಲದ ಕಡೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಮುಗ್ಧ ಮಗುವಿನಂತೆ ಏನೇನೋ ಮಾತನಾಡುತ್ತಿದ್ದ. ನನಗೆ ನೋವಾಗುತ್ತದೆ ಅಂತಲೋ ಅಥವಾ ಉದ್ದೇಶಪೂರ್ವಕವಾಗಿಯೋ ಅಮ್ಮನ ಸಾವಿನ ಬಗ್ಗೆಯಾಗಲಿ, ಜೀವಂತವಾಗಿದ್ದಾಗಿನ ಆಕೆಯ ಒಳ್ಳೆಯ ಗುಣಗಳನ್ನಾಗಲಿ ಮಾತನಾಡುವ ಪ್ರಯತ್ನ ಮಾಡುತ್ತಿರಲಿಲ್ಲ. ಆದರೆ ಅಮ್ಮನಿಲ್ಲದ್ದಕ್ಕೆ ಆತ ಖಿನ್ನತೆಗೆ ಹೋಗಿರುವುದು ಸಹಜವಾಗಿಯೇ ಎಲ್ಲರಿಗೂ ಗೊತ್ತಿತ್ತು.

ನಮ್ಮ ಮುಂದಿನ ಜೀವನ ವಿಧಾನ, ಮಕ್ಕಳನ್ನು ಬೆಳೆಸುವ ಪರಿ, ಗಂಡ ಹೆಂಡತಿ ಜಗಳ ಕಾಯದೆ ಅನ್ಯೋನ್ಯವಾಗಿರುವ ರೀತಿ ಎಲ್ಲವನ್ನೂ ತಿಳಿಸಿ ಹೇಳುತ್ತಿದ್ದ. ತುಂಬಾ ಹೊತ್ತು ಏನಾದರೂ ಹರಟುತ್ತಲೇ ಇರುತ್ತಿದ್ದ.

ಅಪ್ಪ ಈ ರೀತಿ ಕ್ರಿಯಾಶೀಲನಾಗಿರುವುದನ್ನು ಕಂಡು ಅನೇಕರು, `ಕಿರಿಯ ಮಗನ ಮೇಲೆ ಪ್ರೀತಿ ಜಾಸ್ತಿ. ಹಾಗಾಗಿ ಆತ ಬಂದಾಗ ಚಿಕ್ಕಮಕ್ಕಳಂತೆ ಗೆಲುವಾಗಿ ಬಿಡ್ತಾನೆ. ಹಿರಿಮಗನ ಸಂಗಡ ಇದ್ದಾಗಂತೂ ಯಾರ ಜೊತೆಗೂ ಮಾತನಾಡುವುದಿಲ್ಲ. ಹೆಂಡತಿ ಅಗಲಿಕೆಯ ನೋವನ್ನು ಮರೆಯಬೇಕು ಅಂದ್ರೆ ಒಂದು ತಿಂಗಳು ಅಪ್ಪನನ್ನು ಜೊತೆಗೆ ಕರೆದುಕೊಂಡು ಹೋಗು. ಹೊಸ ಪರಿಸರದಿಂದಾಗಿ ಯಥಾಸ್ಥಿತಿಗೆ ಬಂದರೂ ಬರಬಹುದು,’ ಎಂದು ಹೇಳುತ್ತಿದ್ದರು.

ಅವರುಗಳೇನೋ ತಮಗೆ ತೋಚಿದ್ದನ್ನು ಹೇಳಿಬಿಡುತ್ತಿದ್ದರು. ಆದರೆ ಅದು ನನಗೆ ಇರುಸುಮುರುಸನ್ನು ಉಂಟು ಮಾಡುತ್ತಿತ್ತು. ನಾನು ಬೆಳಗ್ಗೆ ಆಫೀಸಿಗೆ ಎಂದು ಹೊರಟು ಹೋದರೆ ಮತ್ತೆ ಬರುವುದು ಸಾಯಂಕಾಲವೇ, ಮಕ್ಕಳು ಕೂಡ ಬೆಳಗ್ಗೆ ಸ್ಕೂಲಿಗೆ ಹೋಗ್ತಾರೆ. ಇನ್ನು ಹೆಂಡತಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಬೆಳೆದು ಬಂದವಳು. ಆಗಾಗ್ಗೆ ಅವಳ ಸ್ನೇಹಿತರು ಮನೆಗೆ ಬರುವುದುಂಟು. ಅವರೆಲ್ಲ ಸಮಾಜದಲ್ಲಿ ತುಂಬಾ ಮುಂದುವರಿದರು. ಅಂತಹ ಸಂದರ್ಭದಲ್ಲಿ ಅಪ್ಪ ಅಲ್ಲಿದ್ದರೆ ಹೆಂಡತಿಗೆ ಮುಜುಗರಾಗಬಹುದು. ಅಪ್ಪನ ಜೀವನ ಕ್ರಮ, ಆಹಾರ ಪದ್ಧತಿ, ದಿನಚರಿ, ಉಡುಗೆ, ಕುತೂಹಲಕಾರಿ ಮನೋಭಾವನೆ ಮುಂತಾದವುಗಳು ಮನೆಗೆ ಬಂದವರ ಸ್ಥಿತಿಗತಿಗಳಿಗೆ ಸರಿ ಹೊಂದಲಾರನೇನೋ….?

ಅಮ್ಮ ತೀರಿಕೊಂಡ ಕೆಲವೇ ದಿನಗಳಲ್ಲಿ ಹೆಂಡತಿ ಬಳಿ, `ವಾತಾವರಣ ಬದಲಿಯಾದಂತಾಗಿ ಕೆಲವು ದಿನಗಳು ಹೊಂದಿಕೊಳ್ಳುವವರೆಗೆ ಅಪ್ಪನನ್ನು ಸ್ವಲ್ಪ ದಿನಗಳ ಮಟ್ಟಿಗೆ ಕರೆದುಕೊಂಡು ಬರೋಣವೇನು?’ ಎಂದು ಕೇಳಿದ್ದೆ.

ಅದಕ್ಕವಳು, `ನೀವು ಹಾಗೇನಾದರೂ ಮಾಡಿಬಿಟ್ಟೀರಿ ಮತ್ತೆ. ಅವರು ಹೊಲ ಮನೆಯಲ್ಲಿ ಕೆಲಸ ಮಾಡಿದವರು. ಅವರಿಗೆ ಹೊತ್ತು ಕಳೆಯುವುದು ಕಷ್ಟವಾಗುತ್ತೆ. ಇಲ್ಲಿ ಅವರಿಗೆ ಪರಿಚಯದವರು ಯಾರಿದ್ದಾರೆ? ಎಲ್ಲಿಗೆ ಹೋಗ್ತಾರೆ? ಅವರಿಗೆ ಸರಿ ಹೊಂದುವ ಜಾಗದಲ್ಲಿಯೇ ಅವರು ಇರಬೇಕು,’ ಎಂದು ಹೆಂಡತಿ ನನಗೆ ಬೇರೊಂದು ರೀತಿಯಲ್ಲಿ ಬೇಡವೆಂದು ಹೇಳಿದಳು.

ಆದರೆ ಅಂದು ಅವಳ ಮಾತು ಸರಿ ಎನಿಸತೊಡಗಿತ್ತು. ಹಾಗಾಗಿ ಊರಲ್ಲಿ ಯಾರಾದರೂ ನನ್ನ ಎದುರಿನಲ್ಲಿ, `ಸಣ್ಣ ಮಗನ ಹತ್ತಿರ ಒಂದೆರಡು ದಿನ ಹೋಗಿದ್ದು ಬಾ, ಮೊಮ್ಮಕ್ಕಳ ಜೊತೆ ಕಾಲ ಕಳೆದರೆ ಮನಸ್ಸು ಕೂಡ ಹಗುರವಾಗುತ್ತೆ. ನೀನು ಬಂದಿರೋದು ನೋಡಿ ಮಗ, ಸೊಸೆಗೂ ಖುಷಿಯಾಗುತ್ತೆ,’ ಎಂದು ಅಪ್ಪನ ಎದುರಿನಲ್ಲಿ ಹೇಳಿದಾಗ ಅಪ್ಪ ನನ್ನ ಮುಖ ನೋಡುತ್ತಿದ್ದ.

ನಾನು ಕೂಡಲೇ ಮಾತಿನ ಮಧ್ಯೆ, `ಬರ್ತಿಯೇನಪ್ಪ, ಬರಬಹುದಾಗಿತ್ತೇನೋ. ಆದರೆ ಅಲ್ಲಿಗೆ ಬಂದರೆ ನಿನಗೆ ಸಮಯ ಕಳೆಯುವುದು ಕಷ್ಟ. ಹೊಸ ಊರು, ಹೊಸ ಜನ, ಹೊಸ ಪರಿಚಯ, ಹೊಸ ಪರಿಸರ ಅಪ್ಪನಿಗೆ ಸರಿ ಹೊಂದಬೇಕಲ್ಲ,’ ಎಂದು ಆತನಿಗಿಂತ ಮೊದಲೇ ನಾನು ಉತ್ತರಿಸಿಬಿಡುತ್ತಿದ್ದೆ.

ಇದನ್ನು ಕೇಳಿದ ಅಪ್ಪ, `ಇರಲಿ ಬಿಡಪ್ಪ ನಾನು ಇಲ್ಲಿಯೇ ಚೆನ್ನಾಗಿದ್ದೀನಿ,’ ಎನ್ನುತ್ತಿದ್ದ.

ಅಲ್ಲಿದ್ದವರು, `ನೀವು ಹೊಸದಾಗಿ ಆ ಊರಿಗೆ ಹೋದಾಗ ನಿಮಗೆ ಎಲ್ಲಾ ಸರಿಹೋಗಿತ್ತಾ…..? ಇಲ್ಲವಲ್ಲ, ಕೆಲವು ದಿನಗಳಲ್ಲಿ ನೀವು ಆ ವಾತಾವರಣಕ್ಕೆ ಹೊಂದಿಕೊಂಡಂತೆ ನಿಮ್ಮ ತಂದೆಯೂ ಹೊಂದಿಕೊಳ್ಳುತ್ತಾರೆ ಬಿಡಿ,’ ಎಂದು ಸಲಹೆ ಕೊಡುತ್ತಿದ್ದರು.

ಮುಂದೆ ನಾನು ಮಾತು ಮುಂದುವರಿಸುತ್ತಿರಲಿಲ್ಲ. ಅಪ್ಪನೂ ಮೌನ, ನಡುವೆ ಇದ್ದವರೂ ಮೌನ ವಹಿಸಿ ಮಾತು ಮುಗಿದು ಹೋಗುತ್ತಿತ್ತು.

`ಸಣ್ಣ ಮಗನ ಹತ್ತಿರ ಹೋಗಿ ನಾಲ್ಕಾರು ದಿನ ಇದ್ದು ಬಾ,’ ಎಂದು ಯಾರಾದರೂ ಹೇಳಿದಾಗ ಅಪ್ಪ ಆಸೆಯಿಂದ ನನ್ನನ್ನು ನೋಡುತ್ತಿದ್ದ. ನನಗೇನೋ ಕರೆದುಕೊಂಡು ಹೋಗಬೇಕೆಂಬ ಆಸೆ ಇತ್ತು. ಮಕ್ಕಳು ಕೂಡ ತಾತನ ಸಂಗಡ ಸಮಯ ಕಳೆಯಲು ಇಷ್ಟಪಡುತ್ತಿದ್ದರು. ಆದರೆ ಹೆಂಡತಿ ಏನಾದರೂ ಒಂದು ಹೇಳುತ್ತ ಕಿರಿಕಿರಿ ಮಾಡುತ್ತಿದ್ದಳು. ಆ ಸಮಯದಲ್ಲಿ ಅವಳು ಹೇಳುವ ಮಾತುಗಳು ಅವಳ ಮಟ್ಟಿಗೆ ಸರಿ ಎನಿಸುತ್ತಿದ್ದವು. ಅಲ್ಲಿ ನಿನಗೆ ಸಮಯ ಕಳೆಯಲು ಕಷ್ಟವಾಗುತ್ತೇನೋ ಎಂದರೆ ಅಪ್ಪ ಸುಮ್ಮನಿದ್ದುಬಿಡುತ್ತಿದ್ದ. ಆದರೆ ಹೆಂಡತಿ ತಾನು ನಿರ್ಧರಿಸಿದ ವಿಷಯಕ್ಕೆ ಬೇಡವೆಂದು ನಾನೇನಾದರೂ ವಿರೋಧಿಸಿದರೆ ಕುಂತರೂ ನಿಂತರೂ ಆ ಮಾತನ್ನು ಹೇಳುತ್ತಾ ಮನಸ್ಸಿಗೆ ಕಿರಿಕಿರಿ ಮಾಡುತ್ತಿದ್ದಳು. ಅವಳಾಡುವ ಮಾತನ್ನು ಕೇಳುತ್ತಿದ್ದರೆ ಏಕಾದರೂ ವಿರೋಧಿಸಿದೆನೋ ಎನ್ನುವ ಹಾಗೆ ಮಾತನಾಡುತ್ತಿದ್ದುದರಿಂದ ಅವಳಂತೆಯೇ ನಡೆದುಬಿಡುತ್ತಿದ್ದೆ. ಈ ನನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಅಲ್ಲಿ ಸಮಯ ಕಳೆಯುವುದು ನಿನಗೆ ಕಷ್ಟ ಆಗುತ್ತೆ ಅಂತ ಇಲ್ಲದ ಸಬೂಬು ಹೇಳುತ್ತಾ ಬರದಂತೆ ತಡೆದಿದ್ದೆ. ಅಪ್ಪನನ್ನು ನಾನು ಕರೆದುಕೊಂಡು ಬರಬೇಕು. ಕೆಲವು ದಿನಗಳ ಕಾಲ ಅಲ್ಲಿ ಇಟ್ಟುಕೊಳ್ಳಬೇಕು. ಸಾಧ್ಯವಾದರೆ ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿ ಉಪಚರಿಸಿ ಕಳಿಸಬೇಕು. ಅಲ್ಲಿರುವ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ಅಪ್ಪನಿಗೆ ತೋರಿಸಬೇಕು ಎಂದೆಲ್ಲಾ ಆಸೆಗಳೂ ನನ್ನ ಮನದಲ್ಲಿ ಮೂಡುತ್ತಿದ್ದವು. ಆದರೆ ಸಾಕಾರಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ನಾನು ಓದಿದವನು ಮತ್ತು ನೌಕರಿ ಮಾಡುತ್ತಿದ್ದೇನೆ ಎಂಬ ಕಾರಣಕ್ಕೋ, ಮನೆಗೆ ಹಣಕಾಸಿನ ನೆರವನ್ನು ನೀಡಿ ಅವರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದೇನೆ ಎಂಬ ಅಭಿಮಾನಕ್ಕೋ ಅಥವಾ ನಿಜವಾದ ಗೌರಕ್ಕೋ ಅಣ್ಣನೂ ನನ್ನೊಂದಿಗೆ ತುಸು ಭಯದಿಂದಲೇ ಮಾತನಾಡುತ್ತಿದ್ದ. ಹಿರಿಯನಾದರೂ ಅಧಿಕಾರ ಚಲಾಯಿಸಿ ಎಂದೂ ಮಾತನಾಡಿದವನಲ್ಲ. ನಾನೇನಾದರೂ ಹೇಳಿಬಿಟ್ಟರೆ ಅದೇ ಅಂತಿಮ ತೀರ್ಪು.

ಅಪ್ಪನನ್ನು ಕೆಲವು ದಿನಗಳ ಮಟ್ಟಿಗಾದರೂ ಜೊತೆಗೆ ಕರೆದುಕೊಂಡು ಹೋಗು ಎಂದು ನನ್ನ ಬಳಿ ಹೇಳಲು ಹೆದರುತ್ತಿದ್ದ. ಅಪ್ಪ ನನಗೆ ಭಾರವಾದನಲ್ಲ ಎಂಬ ಕಿಂಚಿತ್‌ ಬೇಜಾರು ಅವನಲ್ಲಿ ಇರಲಿಲ್ಲ. ಹಿರಿಯ ಮಗನಾಗಿ ಅಪ್ಪನನ್ನು ನೋಡಿಕೊಳ್ಳಬೇಕಾದದ್ದು ತನ್ನ ಕರ್ತವ್ಯ ಎಂದು ಭಾವಿಸಿದ್ದನೇ ವಿನಾ ನಾನೊಬ್ಬನೇ ಏಕೆ ನೋಡಿಕೊಳ್ಳಬೇಕು ಎಂದು ನನ್ನ ಬಳಿ ಪ್ರಶ್ನಿಸಿರಲಿಲ್ಲ. ಬದಲಾಗಿ ಅಪ್ಪ ಸಿಟಿಯಲ್ಲಿ ಕೆಲವು ದಿನಗಳು ಇದ್ದರೆ ಚೇತರಿಸಿಕೊಳ್ಳಬಹುದೇನೋ ಎಂಬ ಆಸೆಯಿಂದ ನಿರೀಕ್ಷಿಸುತ್ತಿದ್ದ. ನಾನು ಕೊಡುತ್ತಿದ್ದ ಹಣಕಾಸಿನ ನೆರವನ್ನು ತುಂಬಾ ಅಳುಕಿನಿಂದಲೇ ಪಡೆದುಕೊಳ್ಳುತ್ತಿದ್ದ.

ಹಾಗೆ ನೋಡಿದರೆ ನನ್ನ ಸಹಾಯವಿಲ್ಲದೆ ಅಪ್ಪನನ್ನು ನೋಡಿಕೊಳ್ಳುವ ಸಾಮರ್ಥ್ಯ ಅಣ್ಣನಿಗಿತ್ತು. ನಾನು ಕೊಡುತ್ತಿದ್ದ ಹಣದಿಂದ ಅಪ್ಪನಿಗೆ ಹೆಚ್ಚಿ ಆರೈಕೆ ಮಾಡಬಹುದೇನೋ ಎಂಬ ಮುಂದಾಲೋಚನೆಯಿಂದ ಪಡೆದುಕೊಳ್ಳುತ್ತಿದ್ದ.

ಇವುಗಳನ್ನೆಲ್ಲಾ ಯೋಚಿಸುವಾಗ, `ಅಪ್ಪನ ಆಸೆಯನ್ನು ನೆರವೇರಿಸಲಾರದಷ್ಟು ಮತಿಹೀನ ಮಗ ನಾನಾದೆನಾ….? ಹೆಂಡತಿ ಏನಾದರೂ ಅಂದುಕೊಳ್ಳುತ್ತಾಳೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕೆಲವು ದಿನಗಳ ಮಟ್ಟಿಗಾದರೂ ಆತನಿಗೆ ಕನಿಷ್ಠ ನೆಮ್ಮದಿ ಸಿಗುವಂತೆ ಮಾಡಲಾರದೆ ಹೋದೆನೇ…..? ಅಣ್ಣ ಅತ್ತಿಗೆಯ ಅಸಹಾಯಕತೆಯನ್ನು ನಾನು ದುರುಪಯೋಗ ಪಡಿಸಿಕೊಂಡೆನೇ…? ಹಣಕಾಸಿನ ನೆರವನ್ನು ನೀಡಿ ಅಹಂಕಾರವನ್ನು ತೋರಿದೆನೇ….? ಅಪ್ಪನನ್ನು ನೋಡಿಕೊಳ್ಳಬೇಕಾದ ನನ್ನ ಕರ್ತವ್ಯವನ್ನು ಹಣದಲ್ಲಿ ಅಳೆದು ಬಿಟ್ಟೆನೇ….? ಓದಿಕೊಂಡ ನಾನು ಇಂದಿನ ನಾಲ್ಕಾರು ಜನರ ಮುಂದೆ ಹಳೆಯ ತಲೆಮಾರಿನ ನನ್ನಪ್ಪನನ್ನು `ಅಪ್ಪಾ’ ಎಂದು ಹೇಳಿಕೊಳ್ಳಲು ಹಿಂಜರಿದು ಬಿಟ್ಟೆನೇ….?

`ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಸಾಯಲೇಬೇಕು. ಇದು ಬದುಕಿನ ಅಲಿಖಿತ ಶಾಸನ. ಹಾಗಂತ ಇರುವಷ್ಟು ಸ್ವಲ್ಪ ದಿನಗಳ ಕಾಲ ಅಪ್ಪನನ್ನು ಖುಷಿಯಾಗಿ ಇರುವಂತೆ ನೋಡಿಕೊಳ್ಳದ ನಾನೆಂಥಾ ಮಗ….? ಯಾರಾದರೂ ನಿನ್ನಪ್ಪನನ್ನು ಜೊತೆಗೆ ಕರೆದುಕೊಂಡು ಹೋಗ್ತೀಯಾ ಎಂದು ಕೇಳಿದಾಗ, ಆಸೆ ತುಂಬಿದ ಕಂಗಳಿಂದ ದೈನ್ಯತೆಯಿಂದ ನೋಡುತ್ತಿದ್ದ ಅಪ್ಪನ ಮುಖದ ಹಿಂದಿದ್ದ ಆ ನೋವನ್ನು ಅರ್ಥ ಮಾಡಿಕೊಳ್ಳಲಾರದೆ ಹೋದೆನೇ….?

`ಈಗ ಹಳಹಳಿಸಿದರೆ, ಬಡಬಡಿಸಿದರೆ ಕಳೆದು ಹೋದ ಸಂದರ್ಭವಾಗಲಿ, ಸಮಯವಾಗಲಿ ಮರಳಿ ವಾಪಸ್ಸು ಬರುವುದೇ? ಇದ್ದಾಗ ಪ್ರೀತಿ, ಕಾಳಜಿ ತೋರದೆ ತೀರಿಹೋದ ಮೇಲೆ ಹಾಡಿ ಅತ್ತರೆ ಏನು ಪ್ರಯೋಜನ…? ದೊಡ್ಡದೊಂದು ಹಾರವನ್ನು ಅಪ್ಪನ ಶವಕ್ಕೆ ಹಾಕಿ ಅಲ್ಲಿ ದೊಡ್ಡಸ್ತಿಕೆಯನ್ನು ತೋರಿಸುತ್ತೇನೆಯೇ ಹೊರತು ಪ್ರೀತಿಯಲ್ಲ. ನನಗೆ ವಿದ್ಯೆ ಬಂತು, ಉದ್ಯೋಗ ಬಂತು, ಹಣ ಬಂತು ಆದರೆ ಬಹುಮುಖ್ಯವಾಗಿ ಇವೆಲ್ಲವುಗಳಿಗೆ ಕಿರೀಟಪ್ರಾಯವಾದಂಥ ವಿನಯ, ಸಂಸ್ಕಾರ ಬರಲೇ ಇಲ್ಲ. ಅದಿಲ್ಲದೇ ಇರುವ ಪರಿಣಾಮವೇ ಇದು.

`ಹಾಗೆ ನೋಡಿದರೆ ನನಗಿಂತ ನಿಶ್ಕಲ್ಮಷ ಮನದ ಅಣ್ಣನೇ ಗ್ರೇಟ್‌! ಅಪ್ಪನಿಗಾಗಿ ತನಗೇನು ಸಾಧ್ಯವಿತ್ತೋ ಅದೆಲ್ಲಾ ಕರ್ತವ್ಯವನ್ನೂ ಮಾಡಿ ಮುಗಿಸಿದ…..ಊರು ಬಂದುದರ ಸಂಕೇತವೆಂಬಂತೆ ಕಾರು ದೊಡ್ಡದಾದ ಹಂಪ್‌ ನ್ನು ಹಾರಿ ನನ್ನನ್ನು ವಾಸ್ತವಕ್ಕೆ ತಂದಿತು. ಊರ ಪ್ರಾರಂಭಕ್ಕೆ ಸ್ವಲ್ಪ ದೂರದಲ್ಲಿಯೇ ನಮ್ಮ ಮನೆ ಇತ್ತು. ಮನೆ ಬರುತ್ತಲೇ ಎಲ್ಲರೂ ನನ್ನನ್ನು ಗುರುತಿಸಿ  ತಮ್ಮ ತಮ್ಮಲ್ಲಿ ಏನೇನೋ ಗುಸುಗುಸು ಎಂದು ಮಾತನಾಡತೊಡಗಿದರು. ಅಪ್ಪನ ಶವದ ಎದುರು ನಿಲ್ಲುವುದಕ್ಕೂ ಮನದಲ್ಲಿ ಅಳುಕು ಮೂಡಿತು. ಆದರೂ ಧೈರ್ಯದಿಂದ ಆತನ ಪಾರ್ಥಿವ ಶರೀರದತ್ತ ಹೊರಟೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ