ಪತಿ : ಡಾರ್ಲಿಂಗ್, ನಾನು ನಿನ್ನನ್ನು ಎಷ್ಟು ಲವ್ ಮಾಡ್ತೀನಿ ಗೊತ್ತಾ? ನಿನಗಾಗಿ ಏನು ಬೇಕಾದರೂ ಮಾಡಬಲ್ಲೆ!
ಪತ್ನಿ : ಹೌದೇ? ಎಲ್ಲಿ….. ಹಾಗಾದರೆ ಭುಜಂಗಾಸನದಿಂದ ಶೀರ್ಷಾಸನದವರೆಗೂ ಎಲ್ಲಾ ಆಸನ ಮಾಡಿ ತೋರಿಸಿ!
ಗಿರೀಶ : ಕಳೆದ ಸಲದ ಒಲಿಂಪಿಕ್ಸ್ ನಲ್ಲಿ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಎನಿಸಿರುವ ಮೀರಾಬಾಯಿ ಚಾನೂ 49 ಕಿಲೋ ವರ್ಗದಲ್ಲಿ, ಸುಲಭವಾಗಿ 205 ಕಿಲೋ ತೂಕ ಎತ್ತಿಳಿಸಿ ತಮ್ಮ ದೇಶಕ್ಕೆ ಚಿನ್ನ ತಂದಿದ್ದಾರೆ! ಎಂಥ ಗ್ರೇಟ್ ಅಲ್ಲವೇ…?
ಸುರೇಶ : ಅದು ಸರಿ ಮಾರಾಯ, ನನ್ನ ಹೆಂಡತಿ 60 ಕಿಲೋ ತೂಗುತ್ತಾಳೆ. ಆದರೆ ಮಾರ್ಕೆಟ್ ಗೆ ಹೋದಾಗ ತರಕಾರಿ ಚೀಲ 1 ಕಿಲೋ ತೂಕಕ್ಕಿಂತ ಭಾರ ಎನಿಸಿದರೆ, ತಕ್ಷಣ ಆ ಚೀಲವನ್ನು ನನ್ನ ಕೈಗೆ ರವಾನಿಸುತ್ತಾಳೆ….. ಈ ಲಕ್ಷಣಕ್ಕೆ ಇವಳಿಗೂ ಆಗಾಗ ಚಿನ್ನ ಬೇರೆ ಕೊಡಿಸಬೇಕಂತೆ!
ಗಿರೀಶ : ಅಯ್ಯೋ ಪಾಪ! ಗಂಡಂದಿರ ಗೋಳು ಕೇಳುವವರಾರು?
ವಿದೇಶಿ : ನಿಮ್ಮ ದೇಶದಲ್ಲಿ ನೀವು ಕಾರನ್ನು ರಸ್ತೆಯ ಎಡಬದಿಗೆ ಚಲಿಸುತ್ತೀರೋ ಬಲ ಬದಿಗೋ?
ಸ್ವದೇಶಿ : ನಮ್ಮ ದೇಶದ ರಸ್ತೆಗಳಲ್ಲಿ ಗುಂಡಿ, ಹಳ್ಳ ಬಿಟ್ಟು ಯಾವ ಭಾಗ ಅಳಿದುಳಿದಿರುತ್ತದೋ ಆ ಭಾಗದಲ್ಲಿ ನಾವು ಗಾಡಿ ಚಲಾಯಿಸುತ್ತೇವೆ!
ಗೀತಾ : ಬೆಂಗಳೂರಿನಲ್ಲಿ ಎಲ್ಲೆಲ್ಲೂ ಈ ಪಾಟಿ ಟ್ರಾಫಿಕ್ ತುಂಬಿರುತ್ತದೆ. ಗಾಡಿ ಓಡಿಸಿಕೊಂಡು ಹೋಗೋದೇ ಕಷ್ಟ. ಆದರೂ ಆ್ಯಕ್ಸಿಡೆಂಟ್ ಗಳಿಗೇನೂ ಕೊರತೆ ಇಲ್ಲವಲ್ಲ….? ಇದು ಹೇಗೆ?
ಸುಧಾ : ಶಿಸ್ತಾಗಿ ಟ್ರಾಫಿಕ್ ರೂಲ್ಸ್ ಪಾಲಿಸಿದರೆ ಇದೇ ಗತಿ, ಮನಸ್ಸು ಬಂದಂತೆ ಗಾಡಿ ಓಡಿಸಿದರೆ ಯಾವ ತಂಟೆ ತಕರಾರೂ ಇರೋದಿಲ್ಲ!
ಯಾರೋ ಒಬ್ಬ ಆಧುನಿಕ ತರುಣ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಬಾಡಿಗೆ ಮನೆಗಾಗಿ ಹುಡುಕಾಡುತ್ತಾ ಬೆಂಗಳೂರೆಲ್ಲಾ ಅಲೆದಾಡಿಬಿಟ್ಟ.
ಅಂತೂ ಒಬ್ಬ ಮನೆಯಾಕೆ ದೊಡ್ಡ ಮನಸ್ಸು ಮಾಡಿ ಇವನಿಗೆ ಬಾಡಿಗೆಗೆ ಮನೆ ನೀಡಲು ನಿರ್ಧರಿಸಿದಳು.
ವಿಶಾಲಮ್ಮ : ಅದು ಸರಿ ಕಣ್ರೀ, ನೀವು ಕೆಲಸ ಮಾಡೋದು ಯಾ ಕಂಪನಿ?
ತರುಣ : ನಾನು ಇನ್ ಫೋಸಿಸ್ ಗಾಗಿ ವರ್ಕ್ ಮಾಡ್ತೀನಿ ಮೇಡಂ!
ವಿಶಾಲಮ್ಮ : ಓಹ್…. ಆ ಬಸ್ ಕಂಪನಿಯಾ? ಸಾರಿ ಕಣ್ರೀ, ನಾವು ಉತ್ತಮ ಕಂಪನಿಯ ಸಿಬ್ಬಂದಿಗೆ ಮಾತ್ರ ಬಾಡಿಗೆಗೆ ಮನೆ ಕೊಡೋದು!
ತರುಣ : ಅಯ್ಯೋ! ನಮ್ಮ ಕಂಪನಿ ಅತ್ಯುತ್ತಮ! ಹಾಗಲ್ಲ ಅಂತ ನಿಮಗೆ ಹೇಳಿದವರು ಯಾರು?
ವಿಶಾಲಮ್ಮ : ಕಂಡಿದ್ದೀನಿ ಬಿಡ್ರಿ, ನಮ್ಮ ನಗರ ಸಾರಿಗೆ ಬಸ್ಸುಗಳಿಗಿಂತ ನಿಮ್ಮ ಕಂಪನಿಯದೇ ಬಸ್ಸುಗಳು ಹೆಚ್ಚಾಗಿ ಓಡಾಡುತ್ತವೆ. ನಿಮ್ಮಿಂದ ತಾನೇ ಇಡೀ ಬೆಂಗಳೂರು ಟ್ರಾಫಿಕ್ ಮಯ ಆಗಿರೋದು…..!
ರಾಮಣ್ಣ : ಅಂತೂ ನಮ್ಮ ಬೆಂಗಳೂರಿನಲ್ಲಿ ಬಿಸ್ ನೆಸ್ ಜೋರಾಗಿ ನಡೀತಿದೆ ಅಂತ ಆಯ್ತು.
ಶ್ಯಾಮಣ್ಣ : ಹಾಗಂತ ಯಾರು ನಿಮಗೆ ಹೇಳಿದ್ದು? ಅದಕ್ಕಿಂತಲೂ ಪೇಯಿಂಗ್ ಗೆಸ್ಟ್ ಬಿಸ್ ನೆಸ್ ಬಲು ಹೈಕ್ಲಾಸಾಗಿ ನಡೀತಿದೆ ಅಂತೀನಿ!
ಮೋಹನ್ (ಬೆಂಗಳೂರಿನಿಂದ) : ಅಮ್ಮ….. ಮೊಬೈಲ್ ನಲ್ಲಿ ಸ್ವಲ್ಪ ಜೋರಾಗಿ ಮಾತನಾಡಿ. ಇಲ್ಲಿ ಬೆಂಗಳೂರಿನಲ್ಲಿ ಒಂದೇ ಸಮ ಜೋರಾಗಿ ಮಳೆ ಸುರಿಯುತ್ತಿದೆ ಏನೂ ಕೇಳಿಸುತ್ತಿಲ್ಲ….
ತಾಯಿ (ಹುಬ್ಬಳ್ಳಿಯಿಂದ) : ಅಯ್ಯೋ ಹೋಗೋ ಮಾರಾಯ! ಈಗ ತಾನೇ ಅದೇ ಬೆಂಗಳೂರಿನಲ್ಲಿ ಇವರು ನನ್ನ ತಂಗಿ ಜೊತೆ ಮಾತನಾಡಿದ್ದೀನಿ…. ಅವರ ಏರಿಯಾಗೆ ಮಳೆ ಬಂದು 3 ದಿನ ಆಯ್ತು ಅನ್ಲಿಕ್ ಹತ್ಯಾಳ!
ಮೋಹನ್ : ಬೆಂಗಳೂರಿನ ಎಲ್ಲಾ ಏರಿಯಾ, ಬೀದಿ, ರಸ್ತೆ ತಿರುವುಗಳಲ್ಲೂ ಒಂದೇ ತರಹ ಮಳೆ ಆಗುತ್ತೆ ಅಂತ ನಿನಗೆ ಹೇಳಿದರು ಯಾರು? ಬಸ್ಸಿನಲ್ಲಿ ಕುಳಿತು 4-5 ರಸ್ತೆ ದಾಟಿ ಅದರ ಮುಂದಿನ ತಿರುವಿನ ಏರಿಯಾಗೆ ಹೋದರೆ… ಅಲ್ಲಿ ಮಳೆ ಬರುತ್ತಿದ್ದರೆ ಕೇಳು….?!
ರಮೇಶ : ನಿಮಗೆ ಗೊತ್ತೇ? ಗಾಡಿ ಓಡಿಸುವಾಗ ಯಾರೋ ಒಬ್ಬರು ನಮ್ಮ ಬೆಂಗಳೂರಿನಲ್ಲಿ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿದರು ಅಂತಿಟ್ಕೋ, ಆಗ ಹಿಂದಿರುವ ಎಲ್ಲರೂ ಸಾಲಾಗಿ ಅಲ್ಲೇ ನಿಂತುಬಿಡ್ತಾರೆ ಕಣಪ್ಪ….
ಮಹೇಶ : ಏ…. ಬಹುಶಃ ಅದು ಯಾರೋ ಟ್ರಾಫಿಕ್ ಪೋಲೀಸ್ ಚೆಕ್ಕಿಂಗ್ ಗೋಸ್ಕರ ಬಂದಿದ್ದಾನೆ ಅಂತ ಕಾಣಿಸುತ್ತದೆ, ಹಾಗೇಂತ ಅವರೆಲ್ಲ ಭಾವಿಸಿರಬೇಕು. ತಮ್ಮ ಕಣ್ಣಿಗೆ ಬೀಳದವನು ಇವನ ಕಣ್ಣಿಗೆ ಹೇಗೆ ಬಿದ್ದ ಅಂತ ಯೋಚಿಸುತ್ತಿರಬಹುದು!
ಲೀಲಾ : ನೀನೇನೇ ಹೇಳು, ನಮ್ಮ ಬೆಂಗಳೂರಿನ 100 ಮಂದಿ ಸಾಫ್ಟ್ ವೇರ್ ಎಂಜಿನಿಯರ್ ಗಳಲ್ಲಿ 90 ಮಂದಿಯಾದರೂ ಲೈಫ್ ನಲ್ಲಿ ಫ್ರೆಸ್ಟ್ರೇಟೆಡ್ ಆಗಿಹೋಗಿರುತ್ತಾರೆ!
ಶೀಲಾ : ಉಳಿದವರು FB/ಇನ್ ಸ್ಟಾ ಹೊಂದಿರುತ್ತಾರೆ, ಪಾಪದ ಇನ್ನೂ ಕೆಲಕ್ಕೆ ಮದುವೆ ಆಗಿಹೋಗಿರುತ್ತದೆ!
ರಾಜೇಶ್ : ಇದೇನಪ್ಪ…. 1 ಕಿಲೋ ಆಲೂಗಡ್ಡೆ ಕೇಳಿದರೆ 150/ ರೂ. ಅಂತೀಯಲ್ಲ… ಇದು ಸರಿಯಾ?
ತರಕಾರಿ ಗಾಡಿಯವನು : ನೀವು ಲ್ಯಾಪ್ ಟಾಪ್ ನೇತು ಹಾಕಿಕೊಂಡು ತರಕಾರಿ ಕೊಳ್ಳಲು ಬಂದಾಗಲೇ ನೀವು ಪ್ರಸಿದ್ಧ ಉದ್ಯೋಗಿ ಅಂತ ನಮಗೆ ಗೊತ್ತಾಗೋಲ್ವಾ….?
ರಾಜೇಶ್ : ಉದ್ಯೋಗಿ ಆದ ಮಾತ್ರಕ್ಕೆ…?
ತರಕಾರಿ ಗಾಡಿಯವನು : ಅಂದ ಮೇಲೆ ನಿಮ್ಮಂಥವರಿಗೆ ತಿಂಗಳಿಗೆ ಕನಿಷ್ಠ 1.5 ಅಥವಾ 2 ಲಕ್ಷದಷ್ಟು ಸಂಬಳ ಗ್ಯಾರಂಟಿ ಬಿಡಿ. ಜುಜುಬಿ 150/ ರೂ.ಗಳಿಗೆ ಹೋಗಿ ಲೆಕ್ಕ ಹಾಕ್ತೀರಾ….?
ರಾಜೇಶ್ : ನಿನ್ನಂತೆಯೇ ಆ ಆಟೋದವನು, ಕಿರಾಣಿ ಅಂಗಡಿಯವನು, ಬಾಡಿಗೆ ಕೊಡುವವರು, ಹಾಲು ಮಾರುವವನು ಎಲ್ಲರೂ ಹೀಗೇ ಅಂದುಕೊಳ್ತೀರಿ. ನಿಮ್ಮ ಕನಸು ಬೇಗ ನನಸಾಗಬಾರದೇ?
ರಾಗಿಣಿ : ಈ ನಮ್ಮ ಮಹಾನಗರಿಯಲ್ಲಿ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಇರುವ ಅಂತವರನ್ನು ಯಾವುದರಲ್ಲಿ ಅಳೆಯುತ್ತಾರೆ ಅಂತೀಯಾ?
ಶಾಲಿನಿ : ಕಿ.ಮೀ.ಗಳಲ್ಲಿ….. ಸರಿ ತಾನೇ?
ರಾಗಿಣಿ : ಅದೆಲ್ಲ ಬೇರೆ ಊರುಗಳಿಗೆ ಮಾತ್ರ. ಟ್ರಾಫಿಕ್ ಮಧ್ಯೆ ಈ ರಸ್ತೆಯಿಂದ ಆ ರಸ್ತೆಗೆ ಬರಬೇಕಾದರೆ ಎಷ್ಟು ಗಂಟೆ ಕಾಲ ಆಯ್ತು ಅಂತ ಇಲ್ಲಿ ಅಳೆಯುತ್ತಾರೆ, ನೆನಪಿಟ್ಟುಕೋ!
ವಿನೋದ್ : ನಮ್ಮೂರಿನ ಟ್ರಾಫಿಕ್ ನಲ್ಲಿ ಇಷ್ಟೊಂದು ಸದ್ದು ಗದ್ದಲ…. ಯಾಕೋ ಹೀಗೆ ಮಾರಾಯ?
ಮಹೇಶ್ : ಬಸ್ಸಿನ ಡೈವರ್ ಗಳು ಬ್ರೇಕ್ ಬಳಸುವುದಕ್ಕಿಂತ ಹೆಚ್ಚಾಗಿ ಹಾರ್ನ್ ಬಳಸುತ್ತಿದ್ದರೆ ಹೀಗಾಗದೆ ಮತ್ತೆ ಇನ್ನೇನಾಗುತ್ತೆ ಅಂತೀಯಾ?





